Categories
ಸಿನಿ ಸುದ್ದಿ

ಹೀಗೊಂದು ಸಾರ್ಥ’ಕಥೆ’ ! ಒಂದೊಳ್ಳೆಯ ನರೇಶ ‘ನ್’ ಸಿನಿಮಾ…

ಚಿತ್ರ ವಿಮರ್ಶೆ

ವಿಜಯ್ ಭರಮಸಾಗರ

ಚಿತ್ರ: ಸೌತ್ ಇಂಡಿಯನ್ ಹೀರೋ
ನಿರ್ದೇಶಕ: ನರೇಶ್ ಕುಮಾರ್
ನಿರ್ಮಾಣ: ಶಿಲ್ಪಾ
ತಾರಾಗಣ: ಸಾರ್ಥಕ್, ಕಾಶಿಮಾ, ಊರ್ವಶಿ, ವಿಜಯ್ ಚೆಂಡೂರ್, ಅಮೀತ್, ಅಶ್ವಿನ್ ಇತರರು.

ಫಸ್ಟ್ ಟೈಮ್ ಲೈಫಲ್ಲಿ ತಪ್ ಮಾಡಿಬಿಟ್ಟೆ ಅನ್ಸುತ್ತೆ…’

ಆ ನಾಯಕ ಹೀಗೆ ಹೇಳುವ ಹೊತ್ತಿಗೆ, ಸಿನಿಮಾ ಆತನಿಗೆ ದೊಡ್ಡ ಅನುಭವ ಆಗಿರುತ್ತೆ. ಇದು ಸಿನಿಮಾದೊಳಗೊಂದು ಸಿನಿಮಾ ಹೀರೋ ಒಬ್ಬನ‌ ಕಥೆ ಇರುವ ಚಿತ್ರ. ಈಗಾಗಲೇ ಸಿನಿಮಾದೊಳಗೆ ಸಿನಿಮಾ ಕಥೆ ಇರುವ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಆದರೆ, ಅಂತಹ ಸಿನಿಮಾಗಳ ಸಾಲಿಗೆ ಸೇರದ ಸಿನಿಮಾ ಇದು ಅನ್ನೋದು ವಿಶೇಷ. ಇಲ್ಲಿ ಕಥೆ ಗಟ್ಟಿಯಾಗಿದೆ. ನಿರೂಪಣೆಯೇ ಸಿನಿಮಾದ ತಾಕತ್ತು. ಎಲ್ಲೂ ಅನಗತ್ಯ ಎನಿಸುವ ಸನ್ನಿವೇಶಗಳಿಲ್ಲ. ಕೆಲವೆಡೆ ಅದು ಬೇಕಿತ್ತಾ ಎನಿಸಿದರೂ, ಒಂದೊಳ್ಳೆಯ ಕಂಟೆಂಟ್ ಸಿನಿಮಾ ಅಂತ ವಮುಲಾಜಿಲ್ಲದೆ ಹೇಳಬಹುದು.

ಇಲ್ಲಿ ಕಥೆ ಇದೆ, ಒಂದಷ್ಟು ಮಜಾ ಇದೆ, ಹಿಡಿಯಷ್ಟು ಎಮೋಷನ್ಸ್ ಇದೆ, ಸ್ಟಾರ್ ವಾರ್ ಇದೆ, ಫ್ಯಾನ್ಸ್ ವಾರ್ ಇದೆ, ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾ ಎಂಬ ಬದುಕಿನ ಪ್ರೀತಿ ಇದೆ. ಇಡೀ ಸಿನಿಮಾ ನೋಡಿ ಹೊರ ಬಂದವರಿಗೆ ‘ಸ್ಟಾರ್ ಲೈಫ್’ ಅಂದರೆ ಹೀಗಿರಬೇಕು ಅಂತೆನಿಸುವುದು ದಿಟ. ಅಷ್ಟರಮಟ್ಟಿಗೆ ನಿರ್ದೇಶಕರ ಶ್ರಮ ಇಲ್ಲಿ ಎದ್ದು ಕಾಣುತ್ತೆ.

ನಿರ್ದೇಶಕರು ಕಥೆ ಕಟ್ಟಿರುವ ರೀತಿ, ಅದನ್ನು ನಿರೂಪಿಸಿರುವ ವಿಧಾನ ಎಲ್ಲವೂ ಹಿಡಿಸುತ್ತಾ ಹೋಗುತ್ತೆ. ಕಥೆ ಕೊಂಚ ಸ್ಪೆಷಲ್. ನೋಡುಗರನ್ನು ಕೊನೆಯವರೆಗೆ ಕೂರಿಸುವ ಜಾಣತನ ಚಿತ್ರಕಥೆಯಲ್ಲಿದೆ. ಕೊಟ್ಟ ಕಾಸಿಗೆ ಈ ಹೀರೋ ಮೋಸ ಮಾಡಲ್ಲ ಎಂಬ ಗ್ಯಾರಂಟಿ ಕೊಡಬಹುದು.

ಮೊದಲರ್ಧ ಸಿನಿಮಾ ಯಾವುದೇ ಅಡೆತಡೆಗಳಿಲ್ಲದೆ ಸಲೀಸಾಗಿ ಸಾಗುತ್ತದೆ. ಇನ್ನು ದ್ವಿತಿಯಾರ್ಧ ಕೂಡ ಇದಕ್ಕೆ ಹೊರತಲ್ಲ. ಅಲ್ಲಲ್ಲಿ ಅನಗತ್ಯ ಎನಿಸುವ ದೃಶ್ಯಗಳು ಇಣುಕುತ್ತವೆಯಾದರೂ, ಚುರುಕಾದ ನಿರೂಪಣೆ, ಸೊಗಸಾದ ಚಿತ್ರಕಥೆ, ಆಗಾಗ ಕೊಂಚ ನಗು ತರಿಸೋ ಮಾತುಗಳು ಸುಮ್ಮನೆ ನೋಡಿಸಿಕೊಂಡು ಹೋಗುತ್ತದೆ.

ಹೀರೋ ಕಥೆ ಏನು?

ಅವನೊಬ್ಬ ಭೌತಶಾಸ್ತ್ರ ಪಾಠ ಹೇಳುವ ಹಳ್ಳಿ ಮೇಷ್ಟ್ರು. ಹೆಸರು ಲಾಜಿಕ್ ಲಕ್ಷ್ಮಣರಾವ್. ಎಲ್ಲದ್ದಕ್ಕೂ ಲಾಜಿಕ್ ಹುಡುಕುವ ಆಸಾಮಿ. ಇಂಥಾ ಮೇಷ್ಟ್ರಗೊಬ್ಬ ಅದೇ ಶಾಲೆಯ ಟೀಚರಮ್ಮನ ಮಧ್ಯೆ ಗ್ರಾಮೀಣ ಪ್ರೀತಿ ಶುರುವಾಗುತ್ತೆ. ಅವರಿಬ್ಬರ ನಿಷ್ಕಲ್ಮಷ ಪ್ರೀತಿ ಸಾಗುವಾಗಲೇ, ಆ ಲಾಜಿಕ್ ಮೇಷ್ಟ್ರುಗೆ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಗುತ್ತೆ. ತನ್ನ ಪ್ರೇಯಸಿ ಕೊಡುವ ಧೈರ್ಯ ಅವನನ್ನು ಸಿನಿಮಾ ಹೀರೋನನ್ನಾಗಿಸುತ್ತೆ. ಮೊದಲ ಬಾಲ್ ಗೆ ಸಿಕ್ಸರ್ ಬಾರಿಸಿದಂತೆ, ಅವನ ಮೊದಲ ಸಿನಿಮಾವೇ ಹಿಟ್ ಆಗುತ್ತೆ. ಅಲ್ಲಿಂದ ಶುರುವಾಗೋದೇ ಸ್ಟಾರ್ ವಾರ್!

ವರ್ಕ್ ಮಾಡೋ ಜಾಗದಲ್ಲಿ ಹುಡುಗಿಯನ್ನು ವರ್ಕೌಟ್ ಮಾಡಿಕೊಂಡ ಮೇಷ್ಟ್ರು, ನೋಡ ನೋಡುತ್ತಲೇ ಸೌತ್ ಇಂಡಿಯನ್ ಹೀರೋ ಆದಾಗ ಪಡುವ ಪರಿಪಾಟಿಲು ಅಷ್ಟಿಷ್ಟಲ್ಲ. ಬಿಝಿ ಶೆಡ್ಯುಲ್ ನಡುವೆ ಪ್ರೇಮಿ ಜೊತೆ ಮಾತಿಗೂ ಸಿಗದ ಲಾಜಿಕ್ ಲಕ್ಷ್ಮಣ್ ರಾವ್ ಅಲಿಯಾಸ್ ಲಕ್ಕಿ , ಫ್ಯಾನ್ಸ್ ನ ಅತಿಯಾದ ಪ್ರೀತಿ, ಇತರೆ ಸ್ಟಾರ್ಸ್ ಕೊಡುವ ಟಾರ್ಚರ್ ಗೆ ರೋಸಿ ಹೋಗುತ್ತಾನೆ. ಈ ಮಧ್ಯೆ ಒಂದಷ್ಟು ಡ್ರಾಮಾ ನಡೆಯುತ್ತೆ. ಒಬ್ಬ ಸೂಪರ್ ಸ್ಟಾರ್ ಲೈಫಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನುವ ಕುತೂಹಲ ಇದ್ದರೆ, ಒಮ್ಮೆ ಸಿನಿಮಾ ನೋಡಲು ಅಡ್ಡಿ ಇಲ್ಲ.

ಸಿನಿಮಾದಲ್ಲಿ ಉತ್ತರ ಕರ್ನಾಟಕ ಭಾಷೆ ಒಂದಷ್ಟು ಕೇಳೋಕೆ ಮತ್ತು ನೋಡೋಕೆ‌ ಮಜವೆನಿಸುತ್ತೆ. ಸಿನಿಮಾ ವೇಗಕ್ಕೆ ಸಂಕಲನ ಹೆಗಲು ಕೊಟ್ಟರೆ, ಸಂಗೀತ ನಿರ್ದೇಶಕ ಹರ್ಷವರ್ಧನ್ ಅವರ ಹಿನ್ನೆಲೆ ಸಂಗೀತ ಕೂಡ ಸಾಥ್ ನೀಡಿದೆ. ಹಾಡುಗಳು ಗುನುಗುವಂತೇನಿಲ್ಲ. ರಾಜಶೇಖರ್, ಪ್ರವೀಣ್ ಅವರ ಕ್ಯಾಮೆರಾ ಕೈ ಚಳಕ ಹೀರೋನ ಅಂದ ಹೆಚ್ಚಿಸಿದೆ.

ಯಾರು ಹೇಗೆ?
ಉಳಿದಂತೆ ಹೀರೋ ಸಾರ್ಥಕ್ ಇಡೀ ಸಿನಿಮಾದ ಆಕರ್ಷಣೆ. ಪಾತ್ರದ ನಿರ್ವಹಣೆ ಬಗ್ಗೆ ಮಾತಾಡುವಂತಿಲ್ಲ. ಡೈಲಾಗ್ ಹೇಳುವ ರೀತಿ, ಬಾಡಿಲಾಂಗ್ವೇಜ್ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಹಾಡು-ಕುಣಿತ ಫೈಟು, ಹೈಟು ಮಸ್ತ್ ಮಸ್ತ್. ಕನ್ನಡಕ್ಕೆ ಮತ್ತೊಬ್ಬ ಹೀರೋ‌ ಆಗಿ ನಿಲ್ಲುವ ಲಕ್ಷಣಗಳಿವೆ.

ನಾಯಕಿ ಕಾಶಿಮಾ ಕೂಡ ನಟನೆಯಲ್ಲಿ ಹಿಂದುಳಿದಿಲ್ಲ. ಮತ್ತೊಬ್ಬ ನಾಯಕಿ ಊರ್ವಶಿ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ವಿಜಯ್ ಚೆಂಡೂರ್ ಸಿನಿಮಾದೊಳಗಿನ ನಿರ್ದೇಶಕರಾಗಿ ಯಶಸ್ವಿ. ಉಳಿದಂತೆ ಅಶ್ವಿನ್ ಕೋಡಂಗಿ, ಅಮಿತ್, ಅಶ್ವಿನ್ ರಾವ್ ಪಲ್ಲಕ್ಕಿ ಇತರರು ಗಮನ ಸೆಳೆಯುತ್ತಾರೆ.

ಕೊನೆ ಮಾತು: ಕಥೆ ಇಲ್ಲ ಅನ್ನೋರಿಗೆ ಈ ಹೀರೋನೊಮ್ಮೆ ನೋಡಲ್ಲಡ್ಡಿಯಿಲ್ಲ.

Categories
ಸಿನಿ ಸುದ್ದಿ

ಮಾನ್ವಿತ ಲವ್ಲಿ ಜೋಡಿ! ನೆನಪಿರಲಿ ಟಗರು ಪುಟ್ಟಿ ಪ್ರೇಮ್ ಗೆ ನಾಯಕಿ…

‘ಟಗರು’ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿಕೊಂಡಿರುವ ಮಾನ್ವಿತ ಕಾಮತ್, ಒಂದಿಷ್ಟು ಗ್ಯಾಪ್ ಬಳಿಕ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ವಿದ್ಯಾಭ್ಯಾಸದಿಂದಾಗಿ ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಟಗರು ಪುಟ್ಟಿ, ಅಥರ್ವ ಆರ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ಗೆರೇಮ್ ಅವರಿಗೆ ಜೋಡಿಯಾಗಿ ಮಾನ್ವಿತ ಕಾಮತ್ ಕಾಣಿಸಿಕೊಳ್ಳುತ್ತಿದ್ದಾರೆ.

ತಂದೆ ಮಗನ ಸೆಂಟಿಮೆಂಟ್ ಕಥಾಹಂದರ ಒಳಗೊಂಡ ಕಂಟೆಂಟ್ ಬೇಸ್ಡ್ ಚಿತ್ರದಲ್ಲಿ ಲವ್ ಲಿ ಸ್ಟಾರ್ ಪ್ರೇಮ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಪ್ರೇಮ್ ಜೋಡಿಯಾಗಿ ಮಾನ್ವಿತಾ ಕಾಮತ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲಿ ಮಾನ್ವಿತಾ ಭಾಗಿಯಾಗಿದ್ದು, ಇದೇ ಮೊದಲ ಬಾರಿಗೆ ಈ ಇಬ್ಬರ ಕಾಂಬಿನೇಶನ್ ತೆರೆ ಮೇಲೆ ಬರುತ್ತಿದೆ.

‘ಕೆ ಆರ್ ಎಸ್ ಪ್ರೊಡಕ್ಷನ್ಸ್’ ನಿರ್ಮಾಣದಲ್ಲಿ ಬರುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಸದ್ಯದಲ್ಲೇ ಸಿನಿಮಾ ಟೈಟಲ್ ಚಿತ್ರತಂಡ ಅನೌನ್ಸ್ ಮಾಡಲಿದೆ. ‘ಜೂಟಾಟ’, ‘ಗುಬ್ಬಚ್ಚಿ’ ಸಿನಿಮಾ ನಿರ್ದೇಶಿಸಿರುವ ಅಥರ್ವ ಆರ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೂರನೇ ಚಿತ್ರವಿದು.

ತಂದೆಯ ಮಹತ್ವ ಸಾರುವ ಸಿನಿಮಾ. ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ಆತ ಕಡೆಗಣನೆಗೆ ಒಳಗಾದಾಗ ಯಾವ ರೀತಿ ನೋವು ಅನುಭವಿಸುತ್ತಾನೆ ಅನ್ನೋದು ಚಿತ್ರದ ಒನ್ ಲೈನ್ ಕಹಾನಿ. ಚಿತ್ರದಲ್ಲಿ ತಬಲ ನಾಣಿ ತಂದೆ ಪಾತ್ರವನ್ನು ನಿರ್ವಹಿಸುತ್ತಿದ್ದು, ಈ ಚಿತ್ರದ ಮೂಲಕ ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

ಚಿತ್ರಕ್ಕೆ ನಾಗಾರ್ಜುನ ಆರ್ .ಡಿ ಕ್ಯಾಮೆರಾ ವರ್ಕ್, ಆಕಾಶ್ ಪರ್ವ ಸಂಗೀತ ನಿರ್ದೇಶನ, ವೇದಿಕ್ ವೀರ ಸಂಕಲನವಿದೆ. ಬಾಲ ರಾಜ್ವಾಡಿ, ಗಿರೀಶ್ ಜತ್ತಿ, ವಿಜಯ್ ಚೆಂಡೂರ್, ಅರುಣ ಬಾಲರಾಜ್ ಒಳಗೊಂಡ ತಾರಾಬಳಗವಿದೆ.

Categories
ಸಿನಿ ಸುದ್ದಿ

ಹೈನ ಎಂಬ ವಿಭಿನ್ನ‌ ಚಿತ್ರ: ಇದು ಭಾರತ ಮಣ್ಣಿನ‌ ಸೊಗಡಿರುವ ಸಿನಿಮಾ…

ನಿರ್ದೇಶಕ ವೆಂಕಟ್ ಭಾರಧ್ವಾಜ್ ಹೊಸದೊಂದು ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಹೈನ ಎಂದು ಶೀರ್ಷಿಕೆ ಇಡಲಾಗಿದ್ದು, ‘ಹೈನ’ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಇತ್ತೀಚೆಗೆ ಸೆಟ್ಟೇರಿರುವ ಹೈನ ಚಿತ್ರ ಕಂಟೆಂಟ್ ಬೇಸ್ಡ್ ಚಿತ್ರವಾಗಿದ್ದು, ಸಂಪೂರ್ಣ ಹೊಸ ಕಲಾವಿದರಿದ್ದಾರೆ.

ಚೆನೈನ ಕಪಾಲೇಶ್ವರ ದೇವಸ್ಥಾನದಲ್ಲಿ ‘ಹೈನ’ ಚಿತ್ರ ಮುಹೂರ್ತ ನೆರವೇರಿದ್ದು, ಚಿತ್ರೀಕರಣ ಕೂಡ ಆರಂಭವಾಗಿದೆ. ಡೆಡ್ಲಿ ಸ್ಕ್ವಾಡ್ ಅಡಿ ಬರಹವಿರುವ ಈ ಚಿತ್ರದಲ್ಲಿ ಭಾರತದ ಮಣ್ಣಿನ ಸೊಗಡನ್ನು ವಿಶೇಷವಾಗಿ ಛಲ, ವಿಶ್ವದಲ್ಲಿ ಭಾರತದ ಪ್ರಾಬಲ್ಯ ಸೇರಿದಂತೆ ಹಲವು ಕುತೂಹಲ ಭರಿತ ವಿಷಯಗಳನ್ನು ತೆರೆ ಮೇಲೆ ತರಲು ಹೊರಟಿದ್ದಾರೆ ವೆಂಕಟ್ ಭಾರಧ್ವಾಜ್. ಈ ಪ್ರಯೋಗಕ್ಕೆ ನವ ಹಾಗೂ ನುರಿತ ಕಲಾವಿದರು ಜೊತೆಯಾಗಲಿದ್ದಾರೆ.

ಏಕಕಾಲದಲ್ಲಿ ಕನ್ನಡ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ‘ಹೈನ’ ಸಿನಿಮಾ ನಿರ್ಮಾಣವಾಗುತ್ತಿದೆ. ಬೆಂಗಳೂರು, ಹೈದ್ರಾಬಾದ್, ಚೆನೈ, ಕರಾವಳಿ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ. ರಾಜ್ ಕಮಲ್, ಲಕ್ಷ್ಮಣ್ ಶಿವಶಂಕರ್, ಪ್ರಮೋದ್ ಮರವಂತೆ, ಶಾಂತಕುಮಾರ್ ಚಿತ್ರದ ತಾಂತ್ರಿಕ ಬಳಗದಲ್ಲಿದ್ದು, ಕೆ.ಕೆ ಕಂಬೈನ್ಸ್ ಹಾಗೂ ಅಮೃತ ಫಿಲಂ ಸೆಂಟರ್ ಜಂಟಿಯಾಗಿ ಈ ಚಿತ್ರವನ್ನು
ನಿರ್ಮಾಣ ಮಾಡುತ್ತಿದೆ.
ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಸದ್ಯದಲ್ಲೇ ಹಂಚಿಕೊಳ್ಳಲಿದೆ.

ವೆಂಕಟ್ ಭಾರದ್ವಾಜ್ ನಿರ್ದೇಶನದ ‘ಆಹತ’ ಮತ್ತು ‘ನಗುವಿನ ಹೂಗಳ ಮೇಲೆ’ ತೆರೆಗೆ ಬರಲು ಸಿದ್ದವಾಗಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಲಿದೆ.

Categories
ಸಿನಿ ಸುದ್ದಿ

ಮೈ ಹೀರೋ ಸಿನಿಮಾ‌ ಮೂಲಕ ಭಾರತದ ನೋಟವೇ ಬದಲಾಗಲಿದೆ! ಹೀಗಂತಾರೆ ಹೊಸ ನಿರ್ದೇಶಕರು…

ಕನ್ನಡದಲ್ಲಿ ಈಗ ಉತ್ತಮ ಕಂಟೆಂಟ್ ವುಳ್ಳ ಸಿನಿಮಾಗಳು ಹೆಚ್ಚು ಬರುತ್ತಿದೆ. ಅದೇ ಸಾಲಿಗೆ ಸೇರುವ ಮತ್ತೊಂದು ಒಳ್ಳೆಯ ಕಂಟೆಂಟ್ ಓರಿಯಂಟೆಡ್ ಸಿನಿಮಾ ” ಮೈ ಹೀರೋ “. ಇತ್ತೀಚಿಗೆ ಚಿತ್ರದ ಮುಹೂರ್ತ ನಡೆದಿದೆ. ಮೊದಲ ಸನ್ನಿವೇಶಕ್ಕೆ ಮಹಾಲಕ್ಷ್ಮಿ ಆರಂಭ ಫಲಕ ತೋರಿದರೆ ಹಿರಿಯ ನಟ ದತ್ತಣ್ಣ ಕ್ಯಾಮೆರಾ ಚಾಲನೆ ಮಾಡಿದರು.

ನಿರ್ದೇಶಕ ಕಮ್ ನಿರ್ಮಾಪಕ ಅವಿನಾಶ್ ವಿಜಯಕುಮಾರ್, ತಮ್ಮ ಸಿನಿಮಾ ಕುರಿತು ಹೇಳಿದ್ದು ಹೀಗೆ. ‘ನಾನು ಮೂಲತಃ ರಂಗಭೂಮಿ ಕಲಾವಿದ . ಸ್ಯಾನ್ ಫ್ರಾನ್ಸಿಸ್ಕೊ ಫಿಲಂ ಸ್ಕೂಲ್ ನಲ್ಲಿ ನಿರ್ದೇಶನದ ಕುರಿತು ಹಾಗೂ ಬಾಂಬೆ ಅನುಪಮ್ ಖೇರ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ತರಬೇತಿ ಪಡೆದಿದ್ದೇನೆ. ನಮ್ಮದೇ ಆದ ಎ ವಿ ಸ್ಟುಡಿಯೋಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಇದು ಬರೀ ಕರ್ನಾಟಕ, ಭಾರತ ಮಾತ್ರವಲ್ಲ. ಇಡೀ ಪ್ರಪಂಚದಲ್ಲಿರುವ ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದಿರುವ ಕಥೆ.

ಅಮೇರಿಕಾದ ಅಧಿಕಾರಿಯೊಬ್ಬರು ಭಾರತಕ್ಕೆ ಬಂದಾಗ ಹುಡುಗನೊಬ್ಬನ ಪರಿಚಯವಾಗುತ್ತದೆ. ಇವರಿಬ್ಬರ ನಡುವೆ ಕಥೆ ಸಾಗುತ್ತದೆ. ಕೆಲವು ಚಿತ್ರದಲ್ಲಿ ಭಾರತವನ್ನು ಬಡ ರಾಷ್ಟ್ರ ಎಂದು ಬಿಂಬಿಸಿ ತೋರಿಸಲಾಗುತ್ತದೆ. ಆದರೆ ನಮ್ಮ ಚಿತ್ರದಲ್ಲಿ ಭಾರತವನ್ನು ಬೇರೆಯದೇ ರೀತಿಯಲ್ಲಿ ತೋರಿಸುತ್ತಿದ್ದೇವೆ‌. ಚಿತ್ರ ನೋಡಿದ ಮೇಲೆ ಭಾರತವನ್ನು ನೋಡುವ ರೀತಿ ಬದಲಾಗಬಹುದು ಎಂಬುದು ನನ್ನ ಅನಿಸಿಕೆ‌. ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಕಾಶ್ ಬೆಳವಾಡಿ ಅವರು ಜಿಲ್ಲಾಧಿಕಾರಿಯಾಗಿ, ದತ್ತಣ್ಣ ಪುರೋಹಿತರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಿರಂಜನ್ ದೇಶಪಾಂಡೆ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಆರಂಭವಾಗುತ್ತದೆ. ಮಧ್ಯಪ್ರದೇಶ ಹಾಗೂ ಯು ಎಸ್ ಎ ನಲ್ಲೂ ಚಿತ್ರೀಕರಣ ನಡೆಯುತ್ತದೆ. ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಈ ಚಿತ್ರ ಬರಲಿದೆ‌ ಎಂದರು.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಗಗನ್ ಬಧಾರಿಯಾ ಸಂಗೀತ ನೀಡುತ್ತಿದ್ದಾರೆ. ಎರಡು ಕನ್ನಡ ಹಾಗೂ ಒಂದು ಇಂಗ್ಲಿಷ್ ಹಾಡು ಚಿತ್ರದಲ್ಲಿದೆ. ಕುಮಾರಗೌಡ ಈ ಚಿತ್ರದ ಛಾಯಾಗ್ರಾಹಕರು. ಚಿತ್ರಕಥೆಯನ್ನು ನಾನು ಮುತ್ತುರಾಜ್ ಬರೆದಿದ್ದೇವೆ. ಜೆಮ್ ಶಿವು ಸಂಭಾಷಣೆ ಬರೆದಿದ್ದಾರೆ. ಇದು ಇಲ್ಲಿನ ತಂತ್ರಜ್ಞರ ಮಾಹಿತಿ. ಹಾಲಿವುಡ್ ನ ತಂತ್ರಜ್ಞರು ಸಹ ನಮ್ಮ ಚಿತ್ರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನಿರ್ದೇಶಕ ಅವಿನಾಶ್ ವಿಜಯಕುಮಾರ್ “ಮೈ ಹೀರೋ” ಬಗ್ಗೆ ಮಾಹಿತಿ ನೀಡಿದರು.

ನಾನು ಕೂಡ ರಂಗಭೂಮಿ ಕಲಾವಿದ. ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಕೆಲವು ವೆಬ್ ಸೀರೀಸ್ ಗಳಲ್ಲಿ ನಟಿಸಿದ್ದೇನೆ‌. ಈ ಚಿತ್ರದ ಕಥೆ ಇಷ್ಟವಾಯಿತು ಎಂದು ಹಾಲಿವುಡ್ ನಟ ಜಿಲಾಲಿ ಹೇಳಿದರು.

ಕಲಾವಿದರಾದ ಪ್ರಕಾಶ್ ಬೆಳವಾಡಿ, ದತ್ತಣ್ಣ, ನಿರಂಜನ್ ದೇಶಪಾಂಡೆ ಹಾಗೂ ಸಂಗೀತ ನಿರ್ದೇಶಕ ಗಗನ್ ಬಧಾರಿಯಾ ಪತ್ರಿಕಾಗೋಷ್ಠಿಯಲ್ಲಿ “ಮೈ ಹೀರೋ” ಚಿತ್ರದ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಆರ್. ಚಂದ್ರು ತವರೂರಲ್ಲಿ ಕಬ್ಜ ಕಲರವ ! ಶಿಡ್ಲಘಟ್ಟದಲ್ಲಿ ಫೆಬ್ರವರಿ 26ಕ್ಕೆ ಕಮರ್ಷಿಯಲ್ ಸಾಂಗ್ ರಿಲೀಸ್…

ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ, ಕಿಚ್ಚ ಸುದೀಪ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಕನ್ನಡದ ಹೆಮ್ಮೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯ ಸಿನಿಮಾ “ಕಬ್ಬ”. ಆರ್ ಚಂದ್ರು ನಿರ್ದೇಶಿಸಿರುವ “ಕಬ್ಜ” ಚಿತ್ರದ ಕಮರ್ಷಿಯಲ್ ಸಾಂಗ್
ಫೆಬ್ರವರಿ 26 ರಂದು ಶಿಡ್ಲಘಟ್ಟದಲ್ಲಿ ಬಿಡುಗಡೆಯಾಗಲಿದೆ

ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಈ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ಶಿಡ್ಲಘಟ್ಟ ಆರ್. ಚಂದ್ರು ಅವರ ತವರೂರು. ತಮ್ಮೂರಿನಲ್ಲಿ “ಕಬ್ಜ” ಚಿತ್ರದ ಅದ್ದೂರಿ ಸಮಾರಂಭ ಆಯೋಜಿಸಿರುವ ಆರ್ ಚಂದ್ರು, ಸಮಾರಂಭ ಯಶಸ್ವಿಯಾಗಿ ನಡೆಯಲು ಈಗಾಗಲೇ ತಯಾರಿ ಆರಂಭಿಸಿದ್ದಾರೆ.


ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ದುನಿಯಾ ವಿಜಯ್, ಪ್ರೇಮ್, ಶ್ರೇಯಾ ಶರಣ್ ಹಾಗೂ ಆಂದ್ರ, ತಮಿಳುನಾಡು, ಕೇರಳದಿಂದ ಸಹ ಪ್ರಮುಖ ಗಣ್ಯರು ಈ ವರ್ಣರಂಜಿತ ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ.
ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ “ಕಬ್ಜ” ಚಿತ್ರ ಮಾರ್ಚ್ 17 ರಂದು ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಪರಿಮಳ ಡಿಸೋಜಾಗಾಗಿ ಅಮ್ಮನ ಹಾಡು ಹಾಡಿದ ಜೋಗಿ ಪ್ರೇಮ್

ಪ್ರಪಂಚದಲ್ಲಿ ಅಮ್ಮನ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲ. ಅಂತಹ ಅಮ್ಮ ಜೊತೆಗಿದ್ದರೆ ಧೈರ್ಯವೂ ಕೂಡ. ಅದ್ಭುತ ವ್ಯಕ್ತಿತ್ವದ ಅಮ್ಮನ ಬಗ್ಗೆ “ಅಮ್ಮ ಎಂಬ ಹೆಸರೆ ಆತ್ಮ ಬಲ” ಎಂಬ ಹಾಡನ್ನು ಪ್ರೇಮಕವಿ ಕೆ.ಕಲ್ಯಾಣ್ ಬರೆದಿದ್ದಾರೆ. ಇದು”ಪರಿಮಳ ಡಿಸೋಜಾ” ಚಿತ್ರಕ್ಕಾಗಿ ಬರೆದ ಹಾಡು. ನಿರ್ದೇಶಕ ಜೋಗಿ ಪ್ರೇಮ್ ಈ ಗೀತೆಯನ್ನು ಹಾಡಿದ್ದಾರೆ. ಇತ್ತೀಚಿಗೆ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಕೆ.ಕಲ್ಯಾಣ್, ನಟಿ ಭವ್ಯ, ಜಂಕಾರ್ ಮ್ಯೂಸಿಕ್ ಭರತ್ ಮುಂತಾದವರು ಇದ್ದರು.

ನಮ್ಮ ಚಿತ್ರಕ್ಕಾಗಿ ಕೆ.ಕಲ್ಯಾಣ್ ಅಮ್ಮನ ಬಗ್ಗೆ ಒಳ್ಳೆಯ ಹಾಡು ಬರೆದಿದ್ದಾರೆ. ಅಷ್ಟೇ ಅದ್ಭುತವಾಗಿ ಜೋಗಿ ಪ್ರೇಮ್ ಹಾಡಿದ್ದಾರೆ. ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ. ಜೇಂಕಾರ್ ಮ್ಯೂಸಿಕ್ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಮರ್ಡರ್ ಮಿಸ್ಟರಿ ಜೊತೆಗೆ ಆಕ್ಷನ್, ಸೆಂಟಿಮೆಂಟ್ ಎಲ್ಲಾ ಅಂಶಗಳಿರುವ “ಪರಿಮಳ ಡಿಸೋಜಾ” ತೆರೆಗೆ ಬರಲು ಸಿದ್ದವಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಡಾ.ಗಿರಿಧರ್ ಹೆಚ್ ಟಿ.

ತಾಯಿ ಬಗ್ಗೆ ಹಾಡು ಬರೆಯಬೇಕೆಂದರೆ ಏನೋ ಒಂಥರ ಖುಷಿ. ಈ ಹಾಡನ್ನು ಶೀಘ್ರವಾಗಿ ಬರೆಯಬೇಕಿತ್ತು. ಆಗ ನಿರ್ಮಾಪಕರು ನನ್ನ ಅತ್ತಿಗೆಯ ಮೂಲಕ ಬೇಗ ಬರೆದುಕೊಡಲು ಹೇಳಿಸಿದರು. ಆಗ ನನಗೆ ತಿಳಿಯಿತು ನಿರ್ಮಾಪಕರು ನಮಗೆ ಬಳಗ ಎಂದು. ಅಮ್ಮನ ಹಾಡನ್ನು ಪ್ರೇಮ್ ಅವರು ಅಷ್ಟೇ ಅದ್ಭುತವಾಗಿ ಹಾಡಿದ್ದಾರೆ ಎಂದು ಪ್ರೇಮಕವಿ ಕಲ್ಯಾಣ್ ತಿಳಿಸಿದರು.

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಾನು ಈ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಹಾಡು ತುಂಬಾ ಚೆನ್ನಾಗಿದೆ. ಒಳ್ಳೆಯದಾಗಲಿ ಎಂದರು ಹಿರಿಯ ನಟಿ ಭವ್ಯ.

“ಪರಿಮಳ ಡಿಸೋಜಾ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇಂದು ಅಮ್ಮನ ಹಾಡು ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಹಾಡು‌ ಬರೆದ ಕಲ್ಯಾಣ್ ಅವರಿಗೆ, ಸುಮಧುರವಾಗಿ ಹಾಡಿದ್ದ ಪ್ರೇಮ್ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ನಿರ್ಮಾಪಕ ವಿನೋದ್ ಶೇಷಾದ್ರಿ, ತಾವು ಈ ಚಿತ್ರದಲ್ಲಿ ನಟಿಸಿರುವುದಾಗಿ ಹೇಳಿದರು.

ಸಂಗೀತ ನಿರ್ದೇಶಕ ಕ್ರಿಸ್ಟೋಫರ್ ಜೋಸನ್, ಛಾಯಾಗ್ರಾಹಕ ರಾಮು ಹಾಗೂ ಚಿತ್ರದಲ್ಲಿ ನಟಿಸಿರುವ ಕೋಮಲ ಬನವಾಸಿ ಸೇರಿದಂತೆ ಅನೇಕ ಕಲಾವಿದರು “ಪರಿಮಳ ಡಿಸೋಜಾ” ಚಿತ್ರದ ಬಗ್ಗೆ ಮಾತನಾಡಿದರು.
ತಾಯಿಯ ಬಗ್ಗೆಗಿನ ಹಾಡು ಬಿಡುಗಡೆ ಸಮಾರಂಭ ಆಗಿರುವುದರಿಂದ ವಿಶೇಷವಾಗಿ ಮೂರು ಜನ ತಾಯಂದಿರನ್ನು ಸನ್ಮಾನಿಸಲಾಯಿತು.

Categories
ಸಿನಿ ಸುದ್ದಿ

ಹಿರಿಯ ನಿರ್ದೇಶಕ ಭಗವಾನ್ ನಿಧನ: ರಾಜಕುಮಾರ್ ಗೆ ಹೆಚ್ಚು ಚಿತ್ರ ನಿರ್ದೇಶಿಸಿದ್ದ ಹೆಗ್ಗಳಿಕೆ…

ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (95) ಅವರು ಸೋಮವಾರ ಮುಂಜಾನೆ 6.15ಕ್ಕೆ ನಿಧನರಾಗಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ‌ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾರೆ.

ಇಬ್ಬರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧು ಬಳಗ ಹಾಗು ಅಭಿಮಾನಿಗಳನ್ನು ಬಿಟ್ಟು ಭಗವಾನ್ ಅಗಲಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ದೊರೈ – ಭಗವಾನ್‌ ಕನ್ನಡದ ಮಹತ್ವದ ಚಿತ್ರನಿರ್ದೇಶಕ ಜೋಡಿ. ದೊರೈ ಜೊತೆಗೂಡಿ ಭಗವಾನ್‌ ಅವರು ಎರಡು ತಮಿಳು ಚಿತ್ರಗಳು ಸೇರಿದಂತೆ 32 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ‘ಮಾಂಗಲ್ಯ ಬಂಧನ’ ಮತ್ತು ‘ಆಡುವ ಗೊಂಬೆ’ ಭಗವಾನ್‌ ಒಬ್ಬರೇ ನಿರ್ದೇಶಿಸಿದ ಸಿನಿಮಾಗಳು.

ಟೀವಿ ಧಾರಾವಾಹಿ ಹಾಗೂ ಸಾಕ್ಷ್ಯ ಚಿತ್ರಗಳ ನಿರ್ದೇಶನವನ್ನೂ ಮಾಡಿದ್ದಾರೆ. ‘ಮಂಗಳ ಸೂತ್ರ’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದ ಭಗವಾನ್‌ ‘ಬೆಂಗಳೂರು ಮೈಲ್‌’ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು.

Categories
ಸಿನಿ ಸುದ್ದಿ

ತತ್ಸಮ ತದ್ಭವ ಪೋಸ್ಟರ್ ಬಂತು: ನೂರಾರು ನಟ ನಟಿಯರು ಏಕಕಾಲಕ್ಕೆ ರಿಲೀಸ್ ಮಾಡಿದ ಪೋಸ್ಟರ್ ಇದು!

ನಟಿ ಮೇಘನಾ ರಾಜ್ ಸರ್ಜಾ ಬಹಳ ದಿನಗಳ ನಂತರ ಮತ್ತೆ ನಟನೆಗೆ ಮರಳಿರುವ ಚಿತ್ರ “ತತ್ಸಮ ತದ್ಭವ”ದ ಫಸ್ಟ್ ಲುಕ್ ಪೋಸ್ಟರ್ ಹೊರಬಂದಿದೆ

ನಿರ್ದೇಶಕ ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನೂತನ ಪ್ರತಿಭೆ ವಿಶಾಲ್ ಆತ್ರೇಯ ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ.

ವಿಶೇಷವೆಂದರೆ, ಫೆಬ್ರವರಿ 19 ರಂದು “ತತ್ಸಮ ತದ್ಭವ” ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ನೂರಕ್ಕೂ ಹೆಚ್ಚು ನಟನಟಿಯರು ತಮ್ಮ ಸಮಾಜಿಕ ಜಾಲತಾಣದಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ. ಪ್ರಪಂಚದಾದ್ಯಂತ 30 ಕ್ಕೂ ಹೆಚ್ಚಿನ ದೇಶಗಳಲ್ಲಿರುವ ಕನ್ನಡ ಹಾಗೂ ಇತರ ಸಂಘಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಪ್ರೋತ್ಸಾಹ ನೀಡಿರುವುದು ಹೆಮ್ಮೆಯ ವಿಷಯ.

ಚಿತ್ರದ ಸುಮಧುರ ಹಾಡುಗಳಿಗೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಸಂಕಲನ, ನಿಖಿತ ಪ್ರಿಯ ವಸ್ತ್ರವಿನ್ಯಾಸ ಹಾಗೂ ಸಂತೋಷ್ ಪಂಚಾಲ್ ಕಲಾ ನಿರ್ದೇಶನವಿರುವ “ತತ್ಸಮ ತದ್ಭವ” ಚಿತ್ರಕ್ಕಿದೆ.

Categories
ಸಿನಿ ಸುದ್ದಿ

19.20.21 ಟ್ರೇಲರ್ ಗೆ ಭರಪೂರ ಮೆಚ್ಚುಗೆ: ಮಾರ್ಚ್ 3ಕ್ಕೆ ಮಂಸೋರೆ ಚಿತ್ರ ದರ್ಶನ…

ನಿರ್ದೇಶಕ ಮಂಸೋರೆ ‘19.20.21’ ಸಿನಿಮಾ ಮೂಲಕ ಹೊಸ ಕ್ರಾಂತಿ ಸೃಷ್ಟಿಸಲು ಸಜ್ಜಾಗಿದ್ದಾರೆ. ಟೀಸರ್ ಮೂಲಕ ಬಹಳ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರತಂಡ ಕುತೂಹಲ ಭರಿತ ಟ್ರೇಲರ್ ಬಿಡುಗಡೆ ಮಾಡಿದೆ. ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಹಾಗೂ ನಾದಬ್ರಹ್ಮ ಹಂಸಲೇಖ ಇತ್ತೀಚೆಗೆ ಚಿತ್ರದ ಬಹು ನಿರೀಕ್ಷಿತ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ನಿರ್ದೇಶಕ ಮಂಸೋರೆ ಮಾತನಾಡಿ, ನೈಜ ಘಟನೆ ಆಧರಿಸಿದ ಸಿನಿಮಾವಿದು. ಕರಾವಳಿಯಲ್ಲಿ ಎರಡು ದಶಕಗಳ ಕಾಲ ಒಂದು ಸಮುದಾಯ ಅನುಭವಿಸಿದ ನೋವು, ಆ ನೋವಿನ ವಿರುದ್ಧ ನಡೆಸಿದ ಹೋರಾಟ ಈ ಸಿನಿಮಾ ಮಾಡಲು ಸ್ಪೂರ್ತಿ. ಈ ಘಟನೆಗೆ ಸಂಬಂಧಿಸಿದಂತೆ ಕಳೆದ ಒಂಭತ್ತು ವರ್ಷದಿಂದ ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕಿದ್ದೇನೆ. 2021ರಲ್ಲಿ ಘಟನೆಗೆ ಸಂಬಂಧಿಸಿದ ತೀರ್ಪು ಬಂದ ಮೇಲೆ ಸಿನಿಮಾ ಮಾಡಲು ನಿರ್ಧರಿಸಿದ್ವಿ. ನಾನು, ವೀರೇಂದ್ರ ಮಲ್ಲಣ್ಣ ಮತ್ತು ಸಂತೋಷ್ ಮೂರು ಜನ ಈ ಘಟನೆಗೆ ಸಂಬಂಧಿಸಿದ ಮಾಹಿತ ಕಲೆ ಹಾಕಿ ಸ್ಕ್ರಿಪ್ಟ್ ಮಾಡಿದ್ದೇವೆ. ಸಮುದಾಯದ ಒಬ್ಬ ಹುಡುಗನ ಹೋರಾಟದ ಕಥೆ ಇದು. ನಿರ್ಮಾಪಕರಾದ ದೇವರಾಜ್ ಹಾಗೂ ಸಹ ನಿರ್ಮಾಪಕರಾದ ಸತ್ಯ ಹೆಗ್ಡೆ ಕಥೆ ಕೇಳಿ ಸಿನಿಮಾ ನಿರ್ಮಾಣಕ್ಕೆ ಒಪ್ಪಿಕೊಂಡ್ರು. ಮಾರ್ಚ್ 3ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಎಂದರು.

ಸಹ ನಿರ್ಮಾಪಕರಾದ ಸತ್ಯ ಹೆಗ್ಡೆ ಮಾತನಾಡಿ ಚಿತ್ರದ ಸ್ಕ್ರಿಪ್ಟ್ ತುಂಬಾ ಇಷ್ಟ ಆಯ್ತು. ರೆಗ್ಯೂಲರ್ ಸಿನಿಮಾ ಬಿಟ್ಟು ನೈಜ ಘಟನೆ ಆಧಾರಿತ ಹಾಗೂ ಪ್ರಯೋಗಾತ್ಮಕ ಸಿನಿಮಾ ಮಾಡೋಣ ಎಂದು ನಿರ್ಧರಿಸಿದ್ವಿ. ಒಂದೊಳ್ಳೆ ಕಥೆಗೆ, ಚಿತ್ರತಂಡಕ್ಕೆ ಸಪೋರ್ಟ್ ಆಗಿ ಇದ್ದೇನೆ ಎಂದು ತಿಳಿಸಿದರು.

ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮಾತನಾಡಿ, ಈ ಚಿತ್ರದ ಟ್ರೇಲರ್ ನೋಡಿದ ಮೇಲೆ ಸಮಾಜಕ್ಕೆ, ಸರ್ಕಾರಕ್ಕೆ, ವ್ಯವಸ್ಥೆಗೆ ಬೇಕಾಗಿರುವ ಸಿನಿಮಾವನ್ನು ಮಂಸೋರೆ ಹಾಗೂ ಅವರ ತಂಡ ನೀಡಿದೆ ಎನ್ನಿಸುತ್ತೆ. ಮಂಸೋರೆ ಅವರ ಬರವಣಿಗೆ, ಮಾಡುವ ಸಿನಿಮಾಗಳು ಸಮಾಜದಲ್ಲಿ ಬದಲಾವಣೆಗೆ ಸಾಕ್ಷಿಯಾಗಿವೆ. ಯುವ ಸಮೂಹಕ್ಕೆ, ಪ್ರಜ್ಞಾವಂತರಿಗೆ ಹಾಗೂ ಸಮಾಜದಲ್ಲಿ ಘಾತುಕ ಶಕ್ತಿಗಳಾಗಿ ಕೆಲಸ ಮಾಡಲು ಹೊರಡುತ್ತಿರುವವರು ಈ ಸಿನಿಮಾ ನೋಡಿದ ಮೇಲೆ ವಾಪಾಸ್ಸು ಸಾಮಾಜಿಕ ನ್ಯಾಯದ ಪರವಾಗಿ ಬರುದ ಸಾಧ್ಯತೆ ತುಂಬಾ ಇದೆ. ಎಲ್ಲರೂ ಸಿನಿಮಾ ನೋಡಿ ಚಿತ್ರತಂಡಕ್ಕೆ ಬೆಂಬಲ ನೀಡಿ ಎಂದರು.

ನಾದಬ್ರಹ್ಮ ಹಂಸಲೇಖ ಮಾತನಾಡಿ ಸಂವಿಧಾನದ ಹಿನ್ನೆಲೆ ಇಟ್ಟುಕೊಂಡು ಟೈಟಲ್ ಇಟ್ಟಿರೋದು ಭಾರತೀಯ ಚಿತ್ರರಂಗದಲ್ಲಿ ಇದೆ ಮೊದಲು. ಇತ್ತೀಚೆಗೆ ಸಂವಿಧಾನವನ್ನು ರಕ್ಷಿಸಲು ಎಲ್ಲರೂ ಮುಂದೆ ನಿಂತಿದ್ದಾರೆ. ಇದೇ ಸಂದರ್ಭದಲ್ಲಿ ಸಿನಿಮಾ ಎಂಬ ಪ್ರಚಂಡ ಮಾಧ್ಯಮದ ಮೂಲಕ ಮಂಸೋರೆ ‘19.20.21’ ಚಿತ್ರದ ಮೂಲಕ ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತಿದ್ದಾರೆ. ಇದೇ ರೀತಿಯ ಇನ್ನಷ್ಟು ಉತ್ತಮ ಸಿನಿಮಾಗಳನ್ನು ಮಂಸೋರೆ ಮಾಡಲಿ ಎಂದು ನಿರ್ದೇಶಕರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಚಿತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ. ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ವಿಶ್ವಕರ್ಣ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್ ಆರ್ ‘19.20.21’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Categories
ಸಿನಿ ಸುದ್ದಿ

ಒಂದಂಕೆ ಕಾಡಲ್ಲಿ ಸಸ್ಪೆನ್ಸ್ ಕಥೆ! ಮಾರ್ಚ್ 3ಕ್ಕೆ ಥ್ರಿಲ್ಲರ್ ಸಿನಿಮಾ ರಿಲೀಸ್…

ರಾಮಚಂದ್ರ ವೈದ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಒಂದಂಕೆ ಕಾಡು’ ಚಿತ್ರ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ. ರಥರ್ವ, ಸೋನಿ, ಮಧು ಹೆಗ್ಡೆ, ಸುಮಂತ್ ಭಟ್, ಪ್ರೇರಣಾ ಕಂಬಂ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಟ್ರೇಲರ್, ಹಾಡುಗಳ ಮೂಲಕ ಗಮನ ಸೆಳೆದಿದೆ.

ನಿರ್ದೇಶಕ ರಾಮಚಂದ್ರ ವೈದ್ಯ ಮಾತನಾಡಿ, ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ತೆಲುಗಿನಲ್ಲಿ ‘ಅನಗನಗಾ ಒಕ ಅಡವಿ’ ಹೆಸರಲ್ಲಿ ಸಿನಿಮಾ ಮೂಡಿ ಬಂದಿದೆ. ಚಿತ್ರಕ್ಕೆ ‘ಒಂದಂಕೆ ಕಾಡು’ ಎಂದು ಟೈಟಲ್ ಇಡಲು ಕಾರಣವಿದೆ. ಉತ್ತರ ಕನ್ನಡದಲ್ಲಿ ವಿಶಿಷ್ಟ ಕಾಡಿದೆ. ಮರಗಳ ಬೇರು ನೆಲದ ಒಳಗೆ ಹೋಗುತ್ತದೆ ಆದ್ರೆ ಈ ಭಾಗದ ಕಾಡಲ್ಲಿ ಎಲ್ಲಾ ಮರದ ಬೇರುಗಳು ಕನ್ನಡದ ಒಂದಂಕೆ ಹಾಗೆ ಇರುತ್ತೆ ಅದಕ್ಕೆ ಒಂದಂಕೆ ಕಾಡು ಎಂದು ಇಡಲಾಗಿದೆ. ಕಾಡಿನ ಮಧ್ಯೆ ಚಿತ್ರೀಕರಣ ನಡೆಸಲಾಗಿದೆ. ಕಾರವಾರ, ದಾಂಡೇಲಿ, ಶಿರಸಿ, ಯಲ್ಲಾಪುರ, ಗೋವಾ ಬಾರ್ಡರ್ ನಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ ಎಂದರು.

ನಾಯಕ ನಟ ರಥರ್ವ ಮಾತನಾಡಿ, ಚಿತ್ರದಲ್ಲಿ ರಿಷಿ ಪಾತ್ರದಲ್ಲಿ ನಟಿಸಿದ್ದೇನೆ. ರಿಷಿ ಬೆಂಗಳೂರು ಹುಡುಗ. ಕೆಲಸ ಹಾಗೂ ಹೆಂಡ್ತಿ ಇಷ್ಟೇ ಅವನಿಗೆ ಜೀವನ. ಹೀಗಿರುವಾಗ ಇಬ್ಬರು ಒಂದಂಕೆ ಕಾಡಿಗೆ ವೆಕೇಶನ್ ಹೋಗುತ್ತಾರೆ. ಆ ಕಾಡಿನಲ್ಲಿ ಏನೇನು ಸಮಸ್ಯೆ ಎದುರಿಸುತ್ತಾರೆ, ಅದನ್ನೆಲ್ಲ ಹೇಗೆ ಫೇಸ್ ಮಾಡ್ತಾರೆ ಅನ್ನೋದೇ ಚಿತ್ರದ ಒನ್ ಲೈನ್ ಕಹಾನಿ. ಇದು ನನ್ನ ಮೊದಲ ಸಿನಿಮಾ. ಮಾರ್ಚ್ 3ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಸಿನಿಮಾ ನೋಡಿ ಪ್ರೋತ್ಸಾಹ ನೀಡಿ ಎಂದರು.

ನಾಯಕಿ ಸೋನಿ ಮಾತನಾಡಿ, ನಾನು ಮೂಲತಃ ಮೈಸೂರಿನವಳು. ರಂಗಭೂಮಿ ಕಲಾವಿದೆ. ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾವಿದು. ಚಿತ್ರದಲ್ಲಿ ನಂದಿನಿ ಪಾತ್ರ ಮಾಡಿದ್ದೇನೆ. ಒಂದೊಳ್ಳೆ ಅನುಭವ ಈ ಸಿನಿಮಾ ನೀಡಿದೆ. ನನಗೆ ಈ ಪಾತ್ರ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಂತಸ ಹಂಚಿಕೊಂಡರು.

ಗಣೇಶ್ ಹೆಗ್ಡೆ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಟಿ.ಜಿ. ನಂದೀಶ್ ಸಂಭಾಷಣೆ, ಮಧು ಹೆಗ್ಡೆ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಹೃದಯಶಿವ, ಡಾ. ಉಮೇಶ್ ಸಾಹಿತ್ಯದಲ್ಲಿ ಹಾಡುಗಳು ಮೂಡಿ ಬಂದಿದ್ದು, ಅನುರಾಧ ಭಟ್, ಕಪಿಲ್ ನಾಯರ್, ಕೀರ್ತನ್ ಹೊಳ್ಳ ಹಿನ್ನೆಲೆ ಗಾಯನ ಚಿತ್ರಕ್ಕಿದೆ.

error: Content is protected !!