ಹೀಗೊಂದು ಸಾರ್ಥ’ಕಥೆ’ ! ಒಂದೊಳ್ಳೆಯ ನರೇಶ ‘ನ್’ ಸಿನಿಮಾ…

ಚಿತ್ರ ವಿಮರ್ಶೆ

ವಿಜಯ್ ಭರಮಸಾಗರ

ಚಿತ್ರ: ಸೌತ್ ಇಂಡಿಯನ್ ಹೀರೋ
ನಿರ್ದೇಶಕ: ನರೇಶ್ ಕುಮಾರ್
ನಿರ್ಮಾಣ: ಶಿಲ್ಪಾ
ತಾರಾಗಣ: ಸಾರ್ಥಕ್, ಕಾಶಿಮಾ, ಊರ್ವಶಿ, ವಿಜಯ್ ಚೆಂಡೂರ್, ಅಮೀತ್, ಅಶ್ವಿನ್ ಇತರರು.

ಫಸ್ಟ್ ಟೈಮ್ ಲೈಫಲ್ಲಿ ತಪ್ ಮಾಡಿಬಿಟ್ಟೆ ಅನ್ಸುತ್ತೆ…’

ಆ ನಾಯಕ ಹೀಗೆ ಹೇಳುವ ಹೊತ್ತಿಗೆ, ಸಿನಿಮಾ ಆತನಿಗೆ ದೊಡ್ಡ ಅನುಭವ ಆಗಿರುತ್ತೆ. ಇದು ಸಿನಿಮಾದೊಳಗೊಂದು ಸಿನಿಮಾ ಹೀರೋ ಒಬ್ಬನ‌ ಕಥೆ ಇರುವ ಚಿತ್ರ. ಈಗಾಗಲೇ ಸಿನಿಮಾದೊಳಗೆ ಸಿನಿಮಾ ಕಥೆ ಇರುವ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಆದರೆ, ಅಂತಹ ಸಿನಿಮಾಗಳ ಸಾಲಿಗೆ ಸೇರದ ಸಿನಿಮಾ ಇದು ಅನ್ನೋದು ವಿಶೇಷ. ಇಲ್ಲಿ ಕಥೆ ಗಟ್ಟಿಯಾಗಿದೆ. ನಿರೂಪಣೆಯೇ ಸಿನಿಮಾದ ತಾಕತ್ತು. ಎಲ್ಲೂ ಅನಗತ್ಯ ಎನಿಸುವ ಸನ್ನಿವೇಶಗಳಿಲ್ಲ. ಕೆಲವೆಡೆ ಅದು ಬೇಕಿತ್ತಾ ಎನಿಸಿದರೂ, ಒಂದೊಳ್ಳೆಯ ಕಂಟೆಂಟ್ ಸಿನಿಮಾ ಅಂತ ವಮುಲಾಜಿಲ್ಲದೆ ಹೇಳಬಹುದು.

ಇಲ್ಲಿ ಕಥೆ ಇದೆ, ಒಂದಷ್ಟು ಮಜಾ ಇದೆ, ಹಿಡಿಯಷ್ಟು ಎಮೋಷನ್ಸ್ ಇದೆ, ಸ್ಟಾರ್ ವಾರ್ ಇದೆ, ಫ್ಯಾನ್ಸ್ ವಾರ್ ಇದೆ, ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾ ಎಂಬ ಬದುಕಿನ ಪ್ರೀತಿ ಇದೆ. ಇಡೀ ಸಿನಿಮಾ ನೋಡಿ ಹೊರ ಬಂದವರಿಗೆ ‘ಸ್ಟಾರ್ ಲೈಫ್’ ಅಂದರೆ ಹೀಗಿರಬೇಕು ಅಂತೆನಿಸುವುದು ದಿಟ. ಅಷ್ಟರಮಟ್ಟಿಗೆ ನಿರ್ದೇಶಕರ ಶ್ರಮ ಇಲ್ಲಿ ಎದ್ದು ಕಾಣುತ್ತೆ.

ನಿರ್ದೇಶಕರು ಕಥೆ ಕಟ್ಟಿರುವ ರೀತಿ, ಅದನ್ನು ನಿರೂಪಿಸಿರುವ ವಿಧಾನ ಎಲ್ಲವೂ ಹಿಡಿಸುತ್ತಾ ಹೋಗುತ್ತೆ. ಕಥೆ ಕೊಂಚ ಸ್ಪೆಷಲ್. ನೋಡುಗರನ್ನು ಕೊನೆಯವರೆಗೆ ಕೂರಿಸುವ ಜಾಣತನ ಚಿತ್ರಕಥೆಯಲ್ಲಿದೆ. ಕೊಟ್ಟ ಕಾಸಿಗೆ ಈ ಹೀರೋ ಮೋಸ ಮಾಡಲ್ಲ ಎಂಬ ಗ್ಯಾರಂಟಿ ಕೊಡಬಹುದು.

ಮೊದಲರ್ಧ ಸಿನಿಮಾ ಯಾವುದೇ ಅಡೆತಡೆಗಳಿಲ್ಲದೆ ಸಲೀಸಾಗಿ ಸಾಗುತ್ತದೆ. ಇನ್ನು ದ್ವಿತಿಯಾರ್ಧ ಕೂಡ ಇದಕ್ಕೆ ಹೊರತಲ್ಲ. ಅಲ್ಲಲ್ಲಿ ಅನಗತ್ಯ ಎನಿಸುವ ದೃಶ್ಯಗಳು ಇಣುಕುತ್ತವೆಯಾದರೂ, ಚುರುಕಾದ ನಿರೂಪಣೆ, ಸೊಗಸಾದ ಚಿತ್ರಕಥೆ, ಆಗಾಗ ಕೊಂಚ ನಗು ತರಿಸೋ ಮಾತುಗಳು ಸುಮ್ಮನೆ ನೋಡಿಸಿಕೊಂಡು ಹೋಗುತ್ತದೆ.

ಹೀರೋ ಕಥೆ ಏನು?

ಅವನೊಬ್ಬ ಭೌತಶಾಸ್ತ್ರ ಪಾಠ ಹೇಳುವ ಹಳ್ಳಿ ಮೇಷ್ಟ್ರು. ಹೆಸರು ಲಾಜಿಕ್ ಲಕ್ಷ್ಮಣರಾವ್. ಎಲ್ಲದ್ದಕ್ಕೂ ಲಾಜಿಕ್ ಹುಡುಕುವ ಆಸಾಮಿ. ಇಂಥಾ ಮೇಷ್ಟ್ರಗೊಬ್ಬ ಅದೇ ಶಾಲೆಯ ಟೀಚರಮ್ಮನ ಮಧ್ಯೆ ಗ್ರಾಮೀಣ ಪ್ರೀತಿ ಶುರುವಾಗುತ್ತೆ. ಅವರಿಬ್ಬರ ನಿಷ್ಕಲ್ಮಷ ಪ್ರೀತಿ ಸಾಗುವಾಗಲೇ, ಆ ಲಾಜಿಕ್ ಮೇಷ್ಟ್ರುಗೆ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಗುತ್ತೆ. ತನ್ನ ಪ್ರೇಯಸಿ ಕೊಡುವ ಧೈರ್ಯ ಅವನನ್ನು ಸಿನಿಮಾ ಹೀರೋನನ್ನಾಗಿಸುತ್ತೆ. ಮೊದಲ ಬಾಲ್ ಗೆ ಸಿಕ್ಸರ್ ಬಾರಿಸಿದಂತೆ, ಅವನ ಮೊದಲ ಸಿನಿಮಾವೇ ಹಿಟ್ ಆಗುತ್ತೆ. ಅಲ್ಲಿಂದ ಶುರುವಾಗೋದೇ ಸ್ಟಾರ್ ವಾರ್!

ವರ್ಕ್ ಮಾಡೋ ಜಾಗದಲ್ಲಿ ಹುಡುಗಿಯನ್ನು ವರ್ಕೌಟ್ ಮಾಡಿಕೊಂಡ ಮೇಷ್ಟ್ರು, ನೋಡ ನೋಡುತ್ತಲೇ ಸೌತ್ ಇಂಡಿಯನ್ ಹೀರೋ ಆದಾಗ ಪಡುವ ಪರಿಪಾಟಿಲು ಅಷ್ಟಿಷ್ಟಲ್ಲ. ಬಿಝಿ ಶೆಡ್ಯುಲ್ ನಡುವೆ ಪ್ರೇಮಿ ಜೊತೆ ಮಾತಿಗೂ ಸಿಗದ ಲಾಜಿಕ್ ಲಕ್ಷ್ಮಣ್ ರಾವ್ ಅಲಿಯಾಸ್ ಲಕ್ಕಿ , ಫ್ಯಾನ್ಸ್ ನ ಅತಿಯಾದ ಪ್ರೀತಿ, ಇತರೆ ಸ್ಟಾರ್ಸ್ ಕೊಡುವ ಟಾರ್ಚರ್ ಗೆ ರೋಸಿ ಹೋಗುತ್ತಾನೆ. ಈ ಮಧ್ಯೆ ಒಂದಷ್ಟು ಡ್ರಾಮಾ ನಡೆಯುತ್ತೆ. ಒಬ್ಬ ಸೂಪರ್ ಸ್ಟಾರ್ ಲೈಫಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನುವ ಕುತೂಹಲ ಇದ್ದರೆ, ಒಮ್ಮೆ ಸಿನಿಮಾ ನೋಡಲು ಅಡ್ಡಿ ಇಲ್ಲ.

ಸಿನಿಮಾದಲ್ಲಿ ಉತ್ತರ ಕರ್ನಾಟಕ ಭಾಷೆ ಒಂದಷ್ಟು ಕೇಳೋಕೆ ಮತ್ತು ನೋಡೋಕೆ‌ ಮಜವೆನಿಸುತ್ತೆ. ಸಿನಿಮಾ ವೇಗಕ್ಕೆ ಸಂಕಲನ ಹೆಗಲು ಕೊಟ್ಟರೆ, ಸಂಗೀತ ನಿರ್ದೇಶಕ ಹರ್ಷವರ್ಧನ್ ಅವರ ಹಿನ್ನೆಲೆ ಸಂಗೀತ ಕೂಡ ಸಾಥ್ ನೀಡಿದೆ. ಹಾಡುಗಳು ಗುನುಗುವಂತೇನಿಲ್ಲ. ರಾಜಶೇಖರ್, ಪ್ರವೀಣ್ ಅವರ ಕ್ಯಾಮೆರಾ ಕೈ ಚಳಕ ಹೀರೋನ ಅಂದ ಹೆಚ್ಚಿಸಿದೆ.

ಯಾರು ಹೇಗೆ?
ಉಳಿದಂತೆ ಹೀರೋ ಸಾರ್ಥಕ್ ಇಡೀ ಸಿನಿಮಾದ ಆಕರ್ಷಣೆ. ಪಾತ್ರದ ನಿರ್ವಹಣೆ ಬಗ್ಗೆ ಮಾತಾಡುವಂತಿಲ್ಲ. ಡೈಲಾಗ್ ಹೇಳುವ ರೀತಿ, ಬಾಡಿಲಾಂಗ್ವೇಜ್ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಹಾಡು-ಕುಣಿತ ಫೈಟು, ಹೈಟು ಮಸ್ತ್ ಮಸ್ತ್. ಕನ್ನಡಕ್ಕೆ ಮತ್ತೊಬ್ಬ ಹೀರೋ‌ ಆಗಿ ನಿಲ್ಲುವ ಲಕ್ಷಣಗಳಿವೆ.

ನಾಯಕಿ ಕಾಶಿಮಾ ಕೂಡ ನಟನೆಯಲ್ಲಿ ಹಿಂದುಳಿದಿಲ್ಲ. ಮತ್ತೊಬ್ಬ ನಾಯಕಿ ಊರ್ವಶಿ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ವಿಜಯ್ ಚೆಂಡೂರ್ ಸಿನಿಮಾದೊಳಗಿನ ನಿರ್ದೇಶಕರಾಗಿ ಯಶಸ್ವಿ. ಉಳಿದಂತೆ ಅಶ್ವಿನ್ ಕೋಡಂಗಿ, ಅಮಿತ್, ಅಶ್ವಿನ್ ರಾವ್ ಪಲ್ಲಕ್ಕಿ ಇತರರು ಗಮನ ಸೆಳೆಯುತ್ತಾರೆ.

ಕೊನೆ ಮಾತು: ಕಥೆ ಇಲ್ಲ ಅನ್ನೋರಿಗೆ ಈ ಹೀರೋನೊಮ್ಮೆ ನೋಡಲ್ಲಡ್ಡಿಯಿಲ್ಲ.

Related Posts

error: Content is protected !!