ಮೈ ಹೀರೋ ಸಿನಿಮಾ‌ ಮೂಲಕ ಭಾರತದ ನೋಟವೇ ಬದಲಾಗಲಿದೆ! ಹೀಗಂತಾರೆ ಹೊಸ ನಿರ್ದೇಶಕರು…

ಕನ್ನಡದಲ್ಲಿ ಈಗ ಉತ್ತಮ ಕಂಟೆಂಟ್ ವುಳ್ಳ ಸಿನಿಮಾಗಳು ಹೆಚ್ಚು ಬರುತ್ತಿದೆ. ಅದೇ ಸಾಲಿಗೆ ಸೇರುವ ಮತ್ತೊಂದು ಒಳ್ಳೆಯ ಕಂಟೆಂಟ್ ಓರಿಯಂಟೆಡ್ ಸಿನಿಮಾ ” ಮೈ ಹೀರೋ “. ಇತ್ತೀಚಿಗೆ ಚಿತ್ರದ ಮುಹೂರ್ತ ನಡೆದಿದೆ. ಮೊದಲ ಸನ್ನಿವೇಶಕ್ಕೆ ಮಹಾಲಕ್ಷ್ಮಿ ಆರಂಭ ಫಲಕ ತೋರಿದರೆ ಹಿರಿಯ ನಟ ದತ್ತಣ್ಣ ಕ್ಯಾಮೆರಾ ಚಾಲನೆ ಮಾಡಿದರು.

ನಿರ್ದೇಶಕ ಕಮ್ ನಿರ್ಮಾಪಕ ಅವಿನಾಶ್ ವಿಜಯಕುಮಾರ್, ತಮ್ಮ ಸಿನಿಮಾ ಕುರಿತು ಹೇಳಿದ್ದು ಹೀಗೆ. ‘ನಾನು ಮೂಲತಃ ರಂಗಭೂಮಿ ಕಲಾವಿದ . ಸ್ಯಾನ್ ಫ್ರಾನ್ಸಿಸ್ಕೊ ಫಿಲಂ ಸ್ಕೂಲ್ ನಲ್ಲಿ ನಿರ್ದೇಶನದ ಕುರಿತು ಹಾಗೂ ಬಾಂಬೆ ಅನುಪಮ್ ಖೇರ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ತರಬೇತಿ ಪಡೆದಿದ್ದೇನೆ. ನಮ್ಮದೇ ಆದ ಎ ವಿ ಸ್ಟುಡಿಯೋಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಇದು ಬರೀ ಕರ್ನಾಟಕ, ಭಾರತ ಮಾತ್ರವಲ್ಲ. ಇಡೀ ಪ್ರಪಂಚದಲ್ಲಿರುವ ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದಿರುವ ಕಥೆ.

ಅಮೇರಿಕಾದ ಅಧಿಕಾರಿಯೊಬ್ಬರು ಭಾರತಕ್ಕೆ ಬಂದಾಗ ಹುಡುಗನೊಬ್ಬನ ಪರಿಚಯವಾಗುತ್ತದೆ. ಇವರಿಬ್ಬರ ನಡುವೆ ಕಥೆ ಸಾಗುತ್ತದೆ. ಕೆಲವು ಚಿತ್ರದಲ್ಲಿ ಭಾರತವನ್ನು ಬಡ ರಾಷ್ಟ್ರ ಎಂದು ಬಿಂಬಿಸಿ ತೋರಿಸಲಾಗುತ್ತದೆ. ಆದರೆ ನಮ್ಮ ಚಿತ್ರದಲ್ಲಿ ಭಾರತವನ್ನು ಬೇರೆಯದೇ ರೀತಿಯಲ್ಲಿ ತೋರಿಸುತ್ತಿದ್ದೇವೆ‌. ಚಿತ್ರ ನೋಡಿದ ಮೇಲೆ ಭಾರತವನ್ನು ನೋಡುವ ರೀತಿ ಬದಲಾಗಬಹುದು ಎಂಬುದು ನನ್ನ ಅನಿಸಿಕೆ‌. ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಕಾಶ್ ಬೆಳವಾಡಿ ಅವರು ಜಿಲ್ಲಾಧಿಕಾರಿಯಾಗಿ, ದತ್ತಣ್ಣ ಪುರೋಹಿತರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಿರಂಜನ್ ದೇಶಪಾಂಡೆ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಆರಂಭವಾಗುತ್ತದೆ. ಮಧ್ಯಪ್ರದೇಶ ಹಾಗೂ ಯು ಎಸ್ ಎ ನಲ್ಲೂ ಚಿತ್ರೀಕರಣ ನಡೆಯುತ್ತದೆ. ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಈ ಚಿತ್ರ ಬರಲಿದೆ‌ ಎಂದರು.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಗಗನ್ ಬಧಾರಿಯಾ ಸಂಗೀತ ನೀಡುತ್ತಿದ್ದಾರೆ. ಎರಡು ಕನ್ನಡ ಹಾಗೂ ಒಂದು ಇಂಗ್ಲಿಷ್ ಹಾಡು ಚಿತ್ರದಲ್ಲಿದೆ. ಕುಮಾರಗೌಡ ಈ ಚಿತ್ರದ ಛಾಯಾಗ್ರಾಹಕರು. ಚಿತ್ರಕಥೆಯನ್ನು ನಾನು ಮುತ್ತುರಾಜ್ ಬರೆದಿದ್ದೇವೆ. ಜೆಮ್ ಶಿವು ಸಂಭಾಷಣೆ ಬರೆದಿದ್ದಾರೆ. ಇದು ಇಲ್ಲಿನ ತಂತ್ರಜ್ಞರ ಮಾಹಿತಿ. ಹಾಲಿವುಡ್ ನ ತಂತ್ರಜ್ಞರು ಸಹ ನಮ್ಮ ಚಿತ್ರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನಿರ್ದೇಶಕ ಅವಿನಾಶ್ ವಿಜಯಕುಮಾರ್ “ಮೈ ಹೀರೋ” ಬಗ್ಗೆ ಮಾಹಿತಿ ನೀಡಿದರು.

ನಾನು ಕೂಡ ರಂಗಭೂಮಿ ಕಲಾವಿದ. ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಕೆಲವು ವೆಬ್ ಸೀರೀಸ್ ಗಳಲ್ಲಿ ನಟಿಸಿದ್ದೇನೆ‌. ಈ ಚಿತ್ರದ ಕಥೆ ಇಷ್ಟವಾಯಿತು ಎಂದು ಹಾಲಿವುಡ್ ನಟ ಜಿಲಾಲಿ ಹೇಳಿದರು.

ಕಲಾವಿದರಾದ ಪ್ರಕಾಶ್ ಬೆಳವಾಡಿ, ದತ್ತಣ್ಣ, ನಿರಂಜನ್ ದೇಶಪಾಂಡೆ ಹಾಗೂ ಸಂಗೀತ ನಿರ್ದೇಶಕ ಗಗನ್ ಬಧಾರಿಯಾ ಪತ್ರಿಕಾಗೋಷ್ಠಿಯಲ್ಲಿ “ಮೈ ಹೀರೋ” ಚಿತ್ರದ ಬಗ್ಗೆ ಮಾತನಾಡಿದರು.

Related Posts

error: Content is protected !!