Categories
ಸಿನಿ ಸುದ್ದಿ

ರಿಚ್ಚಿ ಮೆಚ್ಚಿದ ಕುನಾಲ್ : ಗೌಸ್ ಪೀರ್ ಬರೆದ ಹಾಡು ಹೊರಬಂತು

ರಿಚ್ಚಿ ನಾಯಕನಾಗಿ ನಟಿಸಿ, ನಿರ್ದೇಶಿಸಿ ಹಾಗೂ ನಿರ್ಮಾಣ ಮಾಡಿರುವ “ರಿಚ್ಚಿ” ಚಿತ್ರಕ್ಕಾಗಿ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಹಾಡಿರುವ “ಕಳೆದು ಹೋಗಿರುವೆ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಕುನಾಲ್ ಗಾಂಜಾವಾಲ ಸ್ವತಃ ಹಾಡು ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು.

ಸಾಮಾನ್ಯವಾಗಿ ನಾನು ನನ್ನ ಹಾಡುಗಳ ಬಿಡುಗಡೆ ಸಮಯದಲ್ಲಿ ಹೆಚ್ಚು ಕಾಣಿಸುವುದಿಲ್ಲ. ಆದರೆ, ಇಲ್ಲಿ ಸಂಗೀತ ನಿರ್ದೇಶಕ ಅಗಸ್ತ್ಯ ಸಂತೋಷ್ ಹಾಗೂ”ರಿಚ್ಚಿ” ಅವರಿಗಾಗಿ ಬಂದಿದ್ದೇನೆ. ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದ್ದೇನೆ. ಒಂದು ಮೆಲೋಡಿ, ಮತ್ತೊಂದು ಪ್ಯಾಥೋ ಸಾಂಗ್ ಇಂದು ಮೆಲೋಡಿ ಸಾಂಗ್ ಬಿಡುಗಡೆಯಾಗಿದೆ. ಅಗಸ್ತ್ಯ ಅವರ ಸಂಗೀತ ಸಂಯೋಜನೆ ಚೆನ್ನಾಗಿದೆ. ಚಿನ್ನಿಪ್ರಕಾಶ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಗೌಸ್ ಫೀರ್ ಹಾಡು ಬರೆದಿದ್ದಾರೆ. “ರಿಚ್ಚಿ” ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಕುನಾಲ್ ಗಾಂಜಾವಾಲ ಹಾರೈಸಿದರು.


2005 ನೇ ಇಸವಿಯಲ್ಲಿ “ಆಕಾಶ್” ಚಿತ್ರದ ಹಾಡು ಹಾಡಲು ಬಂದಾಗ ಡಾ.ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಅವರು ನನ್ನ ಕೈಗೊಂದು ಮುತ್ತು ಕೊಟ್ಟಿದ್ದರು. ಅದು ನನ್ನ ಜೀವನದಲ್ಲಿ ಮರೆಯಲಾಗದ ಘಟನೆ ಎಂದ ಕುನಾಲ್ ಗಾಂಜಾವಾಲ, ಪುನೀತ್ ರಾಜಕುಮಾರ್ ಅವರೊಟ್ಟಿಗಿನ ಒಡನಾಟವನ್ನು ನೆನಪಿಸಿಕೊಂಡರು.

“ರಿಚ್ಚಿ” ಒಂದು ಪ್ರೇಮಕಥೆಯ ಚಿತ್ರ. ನಾನು ಚಿಕ್ಕಂದಿನಿಂದಲೇ ಕುನಾಲ್ ಗಾಂಜಾವಾಲ ಅವರ ಅಭಿಮಾನಿ. ನನ್ನ ಚಿತ್ರಕ್ಕೆ ಅವರು ಹಾಡಬೇಕೆಂಬುದು ನನ್ನ ಆಸೆ. ಅದು ಈಡೇರಿದೆ. ಎರಡು ಹಾಡುಗಳನ್ನು ಅವರು ಹಾಡಿದ್ದಾರೆ. ಒಂದು ಈಗ ಬಿಡುಗಡೆಯಾಗಿದೆ. ಕನ್ನಡ ಹಾಗೂ ಹಿಂದಿಯಲ್ಲಿ ಈ ಚಿತ್ರ ಬರಲಿದೆ. ಆಗಸ್ಟ್ ನಲ್ಲಿ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಾಯಕ, ನಿರ್ಮಾಪಕ ಹಾಗೂ ನಿರ್ದೇಶಕ “ರಿಚ್ಚಿ” ಹೇಳಿದರು.

ಸಂಗೀತ ನಿರ್ದೇಶಕ ಅಗಸ್ತ್ಯ ಸಂತೋಷ್ ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ಸಹ ನಿರ್ಮಾಪಕ ರಾಕೇಶ್ ರಾವ್, ಪ್ರಕೃತಿ ಬನವಾಸಿ, ನಿರ್ಮಾಪಕರಾದ ಅಣಜಿ ನಾಗರಾಜ್, ವೆಂಕಟೇಶ್ ಮುಂತಾದವರು ಹಾಡು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಕನ್ನಡ ಸಿನಿ ಪ್ರೇಮಿಗಳಿಗೆ ಪಿವಿಆರ್- ಐನಾಕ್ಸ್ ಬಂಪರ್ ಆಫರ್ ! ಮೇ 19ರಿಂದ 25ರವರೆಗೆ ಕನ್ನಡದ ಬ್ಲಾಕ್ ಬಸ್ಟರ್ಸ್ ಸಿನಿಮಾಗಳು ರೀ-ರಿಲೀಸ್

ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ನೋಡುವುದೇ ಒಂದು ಅದ್ಭುತ ಅನುಭವ. ಆದರೆ ಪಿವಿಆರ್ ಹಾಗೂ ಐನಾಕ್ಸ್​ ಗಳಂಥಹಾ ಮಲ್ಟಿಪ್ಲೆಕ್ಸ್​ಗಳು ಕೊಡುವ ಸೇವೆಗಿಂತಲೂ ಹೆಚ್ಚೇ ಶುಲ್ಕವನ್ನು ಪಡೆಯುತ್ತವೆ ಎಂಬುದು ಗ್ರಾಹಕರ ಅಪವಾದ. ಇದೀಗ ಪಿವಿಆರ್ ಹಾಗೂ ಐನಾಕ್ಸ್ ಜಂಟಿಯಾಗಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಬಂಪರ್ ಆಫರ್ ಕೊಟ್ಟಿದೆ.

ಪಿವಿಆರ್ ಹಾಗೂ ಐನಾಕ್ಸ್ ಕನ್ನಡ ಸಿನಿಮಾಗಳನ್ನು ಸಂಭ್ರಮಿಸುವ ಸುವರ್ಣ ಅವಕಾಶವನ್ನು ನೀಡಿದೆ. ಕನ್ನಡ ಸ್ಪೆಷಲ್ ಎಂಬ ವಿಶೇಷ ಆಫರ್ ನೀಡಿದೆ. ಅಂದರೆ ಕನ್ನಡ ಇಂಡಸ್ಟ್ರಿಯ ಬ್ಲಾಕ್ ಬಸ್ಟರ್ ಚಿತ್ರಗಳನ್ನು ರೀ ರಿಲೀಸ್ ಮಾಡುತ್ತಿದೆ. ಅದು ಕಡಿಮೆ ಬೆಲೆಯಲ್ಲಿ. ಕೇವಲ 99 ರೂಪಾಯಿಂದ ಟಿಕೆಟ್ ಶುರು ಮಾಡಿದೆ. ಹಾಗಿದ್ರೆ ಪಿವಿಆರ್ ಹಾಗೂ ಐನಾಕ್ಸ್ ಗಳಲ್ಲಿ ಮತ್ತೊಮ್ಮೆ ರಿಲೀಸ್ ಆಗಲಿರುವ ಬ್ಲಾಕ್ ಬಸ್ಟರ್ಸ್ ಚಿತ್ರಗಳಿವು.

  1. ರಾಜಕುಮಾರ
  2. ಯಜಮಾನ
  3. ಕೆಜಿಎಫ್-1
  4. ಮಫ್ತಿ
  5. ಮಾಸ್ಟರ್ ಪೀಸ್
  6. ಗಂಧದಗುಡಿ
  7. ಗರುಡ ಗಮನ ವೃಷಭ ವಾಹನ

ಯಾವಾಗ ಯಾವ ಚಿತ್ರ ರಿಲೀಸ್

ಪವರ್ ಸ್ಟಾರ್‌ ಪುನೀತ್ ರಾಜ್ ಕುಮಾರ್ ನಟನೆಯ ಫ್ಯಾಮಿಲಿ ಎಂಟರ್ ಟೈನರ್ ಸೂಪರ್ ಹಿಟ್ ಸಿನಿಮಾ ರಾಜಕುಮಾರ ಇದೇ ಶುಕ್ರವಾರದಂದು ರೀ ರಿಲೀಸ್ ಆಗ್ತಿದ್ರೆ, ಶನಿವಾರದಂದು ಯಜಮಾನ, ಭಾನುವಾರ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ -1, ಸೋಮವಾರ ಶಿವಣ್ಣ ಶ್ರೀಮುರಳಿ ನಟನೆಯ ಮಫ್ತಿ, ಮಂಗಳವಾರದಂದು ಯಶ್ ನಟನೆಯ ಮಾಸ್ಟರ್ ಪೀಸ್, ಬುಧವಾರ ಅಪ್ಪು ಕನಸಿನ ಕೂಸು ಗಂಧದಗುಡಿ ಸಿನಿಮಾ ರಿಲೀಸ್ ಆಗಲಿವೆ.

ಗುರುವಾರ ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಗರುಡ ಗಮನ ವೃಷಭ ವಾಹನ ಬಿಡುಗಡೆಯಾಗಲಿವೆ. ಈ ಮೂಲಕ ಒಂದು ವಾರಗಳ ಕಾಲ ಪಿವಿಆರ್ ಹಾಗೂ ಐನಾಕ್ಸ್ ಕನ್ನಡ ಬ್ಲಾಕ್ ಬಸ್ಟರ್ಸ್ ಚಿತ್ರಗಳನ್ನು ಪ್ರೇಕ್ಷಕರಿಗೆ ಸಂಭ್ರಮಿಸುವ ಅವಕಾಶ ನೀಡಿದೆ.

ಹೆಚ್ಚಿನ ಮಾಹಿತಿಗಾಗಿ www.pvrcinemas.com ಭೇಟಿ ನೀಡಿ ಹಾಗೂ ಬುಕ್ ಮೈ ಶೋ ನಲ್ಲಿ ಟಿಕೇಟ್ಸ್ ಲಭ್ಯವಿದೆ.

Categories
ಸಿನಿ ಸುದ್ದಿ

ಮತ್ತೆ ಮದ್ವೆಯಾದ ಪವಿತ್ರಾ ನರೇಶ್ ಏನಂದ್ರು ಗೊತ್ತಾ?

ಟಾಲಿವುಡ್‌ ನಟ ನರೇಶ್‌ ಕೃಷ್ಣ ಹಾಗೂ ಪವಿತ್ರಾ ಲೋಕೇಶ್‌ ಅಭಿನಯದ ಮತ್ತೆ ಮದುವೆ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಚಿತ್ರ ರಿಲೀಸ್ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ
ಪವಿತ್ರಾ ಹಾಗೂ ನರೇಶ್‌ ಪ್ರಮೋಷನ್‌ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಜೋಡಿ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡರು.

ಇದು ನಿಮ್ಮ ಜೀವನದ ರಿಯಲ್‌ ಲೈಫ್‌ ಸ್ಟೋರಿನಾ? ಟೀಸರ್‌ ನೋಡಿದರೆ ಇದುವರೆಗೂ ನಡೆದ ಘಟನೆಗಳನ್ನೇ ಅಲ್ಲಿ ತೋರಿಸಲಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪವಿತ್ರಾ ಲೋಕೇಶ್, ”ಒಂದೆರಡು ನಿಮಿಷದ ಟೀಸರ್‌ ಟ್ರೇಲರ್‌ ನೋಡಿ ಯಾವ ನಿರ್ಧಾರಕ್ಕೂ ಬರಬೇಡಿ, ಸಿನಿಮಾ ನೋಡಿದರೆ ನಾವು ಏನು ಹೇಳಲು ಹೊರಟಿದ್ದೇವೆ ಎನ್ನುವುದು ಅರ್ಥವಾಗುತ್ತದೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಲು ಹೊರಟಿದ್ದೇವೆ. ಈಗಲೇ ಸಿನಿಮಾ ಕಥೆಯನ್ನು ಹೇಳಲು ಸಾಧ್ಯವಿಲ್ಲ. ನಮ್ಮ ಜೀವನಕ್ಕೂ ಸಿನಿಮಾಗೂ ಏನೂ ಸಂಬಂಧ ಇಲ್ಲ. ಸಿನಿಮಾ ಬೇರೆ, ವೈಯಕ್ತಿಕ ಜೀವನವೇ ಬೇರೆ.

ನನ್ನ‌ ವೃತ್ತಿಗೂ ವೈಯಕ್ತಿಕ ವಿಚಾರಕ್ಕೂ ಲಿಂಕ್‌ ಮಾಡುವುದು ನನಗೆ ಇಷ್ಟವಿಲ್ಲ. ನನ್ನನ್ನು ಒಬ್ಬ ನಟಿಯಾಗಿ ಮಾತ್ರ ನೋಡಿ, ಬೇಕಂತಲೇ ಯಾರೂ ಸುದ್ದಿಯಾಗುವುದಿಲ್ಲ. 1994ನಲ್ಲಿ ಅಂಬರೀಶ್‌ ಅವರು ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಅಲ್ಲಿಂದ ಇದುವರೆಗೂ ನಾನು ಯಾವುದೇ ವಿಚಾರವನ್ನು ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡಿರಲಿಲ್ಲ. ದುರುದ್ದೇಶಪೂರ್ವಕವಾಗಿ ನನ್ನ ಹೆಗಲ ಮೇಲೆ ಗನ್‌ ಇಟ್ಟು ನರೇಶ್‌ ಅವರನ್ನು ಶೂಟ್‌ ಮಾಡುವ ಪಿತೂರಿ ನಡೆದಿತ್ತು” ಎಂದು ಪವಿತ್ರಾ ಹೇಳಿದರು.

ನರೇಶ್‌ ಮಾತನಾಡಿ, ”ಹಿಂದೆ ದೇವಾನುದೇವತೆಗಳೇ ಬಹುಪತ್ನಿತ್ವದಲ್ಲಿದ್ದರು. ರಾಜರೂ ಒಂದಕ್ಕಿಂತ ಹೆಚ್ಚು ಮದುವೆ ಆಗುತ್ತಿದ್ದರು. ಅದೆಲ್ಲವನ್ನೂ ನಾವು ಸ್ವೀಕರಿಸಿ, ಒಪ್ಪಿಕೊಂಡಿದ್ದೇವೆ. ಈಗಲೂ ಸುಪ್ರೀಂಕೋರ್ಟ್‌ ಲಿವ್‌ ಇನ್‌ ರಿಲೇಶನ್‌ಶಿಪ್‌ ತಪ್ಪಲ್ಲ ಎಂದು ತೀರ್ಪು ನೀಡಿದೆ. ಅಂತದ್ದರಲ್ಲಿ ನಮ್ಮಿಬ್ಬರ ತಪ್ಪು ಏನಿದೆ? ನಾನಂತೂ ಸಿಂಗಲ್‌ ಅಲ್ಲ, ಪವಿತ್ರಾ ಹಾಗೂ ನಾವಿಬ್ಬರೂ ಲಿವ್‌ ಇನ್‌ ರೀಲೇಶನ್‌ಶಿಪ್‌ನಲ್ಲಿದ್ದೇವೆ ಎಂದು ಬಹಿರಂಗವಾಗಿ ಒಪ್ಪಿಕೊಂಡರು.

ಮಳ್ಳಿ ಪೆಳ್ಳಿ ಸಿನಿಮಾವನ್ನು ನರೇಶ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್‌’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಇದೀಗ ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಮೂಲಕ ಮಳ್ಳಿ ಪೆಳ್ಳಿ’ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ.

ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.‌ ಮೇ 26ಕ್ಕೆ ಮಳ್ಳಿ ಪೆಳ್ಳಿ ಎಂಬ ಟೈಟಲ್ ನಡಿ ತೆಲುಗಿನಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಕನ್ನಡದಲ್ಲಿ ಇನ್ನೂ ರಿಲೀಸ್ ಡೇಟ್ ಫೈನಲ್ ಆಗಿಲ್ಲ.

Categories
ಸಿನಿ ಸುದ್ದಿ

ತುಪ್ಪದ ಹುಡುಗಿ ಹುಟ್ದಬ್ಬಕ್ಕೆ ಫ್ಯಾನ್ಸ್ ಬಿಗ್ ಪ್ಲಾನ್: ಮೇ.24ರಂದು ರಾಗಿಣಿ ಬರ್ತ್ ಡೇಗೆ ಸಾಮಾಜಿಕ ಕಾರ್ಯಕ್ರಮ

ಮೇ 24 ರಂದು ನಟಿ ರಾಗಿಣಿ ದ್ವಿವೇದಿ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.


ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಮೇ 24 ರಂದು ಬೆ.10 ರಿಂದ ಸಂಜೆ 5 ರವರೆಗೂ ಆರೋಗ್ಯ ತಪಾಸಣೆ,‌‌ ನೇತ್ರ ತಪಾಸಣೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ.

ಜನರಿಗೆ ಉಪಕಾರವಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಗಿಣಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.

Categories
ಸಿನಿ ಸುದ್ದಿ

ಆರ್ಯವರ್ಧನ್ ನಿರ್ದೇಶನದ ತುಂಟರು ಚಿತ್ರಕ್ಕೆ ಚಾಲನೆ: ಮಕ್ಕಳ ಸಿನಿಮಾ ಶುರು

ಅನುರಾಗ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ಆರ್ಯವರ್ಧನ್ ನಿರ್ದೇಶನದ “ತುಂಟರು” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕೆಂಗೇರಿಯ ನವದುರ್ಗಿ ಶ್ರೀ ಗಂಗಮ್ಮ ಹಾಗೂ ಶ್ರೀ ಸೊಲ್ಲಾಪುರದಮ್ಮನವರ ದೇವಸ್ಥಾನದಲ್ಲಿ ನೆರವೇರಿತು. ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

“ತುಂಟರು” ಇದು ನನ್ನ ನಿರ್ದೇಶನದ ಮೂರನೇ ಚಿತ್ರ. ಈ ಚಿತ್ರದಲ್ಲಿ ಸುಮಾರು 45 ರಿಂದ 50 ಮಕ್ಕಳು ಅಭಿನಯಿಸುತ್ತಿದ್ದಾರೆ. ಚಿತ್ರದ ನಾಯಕ, ನಾಯಕಿ, ಪೋಷಕಪಾತ್ರಗಳಲ್ಲಿ ಮಕ್ಕಳೆ ಕಾಣಿಸಿಕೊಳ್ಳುತ್ತಿದ್ದಾರೆ‌. “ತುಂಟರು” ಚಿತ್ರಕ್ಕೆ “ಪೋಲಿ ಹುಡುಗರು” ಎಂಬ ಅಡಿಬರಹವಿದೆ .

ಇದೊಂದು ಲವ್ ಜಾನರ್ ನ ಸಿನಿಮಾ. ಮೇ ಹದಿನೈದರಿಂದ ಹದಿನೈದು ದಿನಗಳ ಕಾಲ ಕೆಂಗೇರಿಯ ಕಾಲೋನಿಯೊಂದರಲ್ಲಿ ಚಿತ್ರೀಕರಣ ನಡೆಯಲಿದೆ. ಜೂನ್ ನಲ್ಲಿ ಮಕ್ಕಳಿಗೆ ಶಾಲೆ ಆರಂಭವಾಗುವುದರಿಂದ ಶನಿವಾರ ಹಾಗೂ ಭಾನುವಾರ ಚಿತ್ರೀಕರಣ ಮಾಡುವುದಾಗಿ ನಿರ್ದೇಶಕ ಆರ್ಯವರ್ಧನ್ ತಿಳಿಸಿದ್ದಾರೆ.

ನಿರ್ಮಾಪಕರ ಪೈಕಿ ನಾಗರಾಜ್ ಹಾಗೂ ಕಲಾವಿದರ ಬಳಗದಿಂದ ಸ್ನೇಹ ಚಿತ್ರದ ಕುರಿತು ಮಾತನಾಡಿದರು. ಹರ್ಷ ಕಾಗೋಡ್ ಸಂಗೀತ ನಿರ್ದೇಶನ ಹಾಗೂ ಸೂರ್ಯ ಛಾಯಾಗ್ರಹಣ “ತುಂಟರು” ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ತೆಲುಗಿನ ಮಾಸ್ ಮಹಾರಾಜನಿಗೆ ಹ್ಯಾಟ್ರಿಕ್ ಹೀರೋ ಸಾಥ್ :ಟೈಗರ್ ನಾಗೇಶ್ವರ್ ರಾವ್ ಸಿನಿಮಾದ ಕನ್ನಡ ಫಸ್ಟ್ ಲುಕ್ ಗೆ ಶಿವಣ್ಣ ವಾಯ್ಸ್

ಟಾಲಿವುಡ್ ಮಾಸ್ ಮಹಾರಾಜ ರವಿತೇಜ ನಟಿಸುತ್ತಿರುವ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಟೈಗರ್ ನಾಗೇಶ್ವರ್ ರಾವ್ ಫಸ್ಟ್ ಲುಕ್ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ 24ರಂದು ಪಂಚ ಭಾಷೆಯಲ್ಲಿ ಅನಾವರಣಗೊಳ್ತಿರುವ ಫಸ್ಟ್ ಲುಕ್ ಕನ್ನಡ ಝಲಕ್ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಧ್ವನಿ ನೀಡಿದ್ದಾರೆ.

ಕರುನಾಡ ಚಕ್ರವರ್ತಿ ಶಿವಣ್ಣ ತಮ್ಮ ಮ್ಯಾಜಿಕಲ್ ವಾಯ್ಸ್ ಮೂಲಕ ಟೈಗರ್ ನಾಗೇಶ್ವರ್ ರಾವ್ ಪ್ರಪಂಚಕ್ಕೆ ನಿಮ್ಮನ್ನು ಕೊಂಡೊಯ್ಯಲಿದ್ದಾರೆ. ವಂಶಿ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಕಾಶ್ಮೀರಿ ಫೈಲ್ಸ್ ಹಾಗೂ ಕಾರ್ತಿಕೇಯ-2 ನಂತಹ ಎರಡು ಬ್ಲಾಕ್ ಬಸ್ಟರ್ ಹಿಟ್ ಚಿತ್ರ ನಿರ್ಮಿಸಿರುವ ಅಭಿಷೇಕ್ ಅರ್ಗವಾಲ್ ತಮ್ಮದೇ ಅಭಿಷೇಕ್ ಅಗವಾಲ್ ಆರ್ಟ್ಸ್ ನಡಿ ಅದ್ಧೂರಿಯಾಗಿ ನಿರ್ಮಿಸಿದ್ದಾರೆ.

70ರ ಕಾಲಘಟ್ಟದ ಹೈದ್ರಾಬಾದ್ ದ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ರವಿತೇಜ ಗೆಟಪ್, ಬಾಡಿ ಲಾಗ್ವೇಜ್ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ.

ದಸರಾ ಹಬ್ಬಕ್ಕೆ ಟೈಗರ್ ನಾಗೇಶ್ವರ್ ರಾವ್ ಬಾಕ್ಸಾಫೀಸ್ ಬೇಟೆಗಿಳಿಯಲಿದ್ದಾರೆ. ಅಂದರೆ ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಸಿನಿಮಾ ಬೆಳ್ಳಿತೆರೆಗಪ್ಪಳಿಸಲಿದೆ. ದಸರಾ ಹಬ್ಬದ ಸುಸಂದರ್ಭ ಹಾಗೂ ದಸರಾ ರಜೆ ಹಿನ್ನೆಲೆ ಪ್ಲಾನ್ ಮಾಡಿಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಮಾಡಲಾಗ್ತಿದೆ.

Categories
ಸಿನಿ ಸುದ್ದಿ

ಮೇ 26ಕ್ಕೆ ಗಂಧದಗುಡಿಯಲ್ಲಿ ಸೈರನ್ ಸೌಂಡು: ಟ್ರೇಲರ್ ಗೆ ಮೆಚ್ಚುಗೆ

ಈಗಾಗಲೇ ಟೀಸರ್ ಹಾಗೂ ಹಾಡುಗಳಿಂದ ಸದ್ದು ಮಾಡುತ್ತಿರುವ “ಸೈರನ್” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ‌ಡಾಲಿ ಧನಂಜಯ, ರಾಕ್ ಲೈನ್ ವೆಂಕಟೇಶ್, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಪತ್ರಕರ್ತ ರಂಗನಾಥ್ ಭಾರದ್ವಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟ್ರೇಲರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ‌. ಚಿತ್ರ ಮೇ 26ರಂದು ಕೆ.ಆರ್ ಜಿ ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ‌.

ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಮಗ ಪ್ರವೀರ್ ಶೆಟ್ಟಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಡೆಕ್ಕನ್ ಕಿಂಗ್ ಬ್ಯಾನರ್‌ನಲ್ಲಿ ಬಿಜು ಶಿವಾನಂದ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ರಾಜಾ ವೆಂಕಯ್ಯ ನಿರ್ದೇಶಿಸಿದ್ದಾರೆ. ಕಳೆದ 30 ವರ್ಷಗಳಿಂದ ನಿರ್ದೇಶಕ ಮುರುಗ ದಾಸ್ ಸೇರಿದಂತೆ ಹಲವರ ಬಳಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ರಾಜಾ ವೆಂಕಯ್ಯ ಕೆಲಸ ಮಾಡಿದ್ದಾರೆ. “ಸೈರನ್” ಅವರ ನಿರ್ದೇಶನದ ಮೊದಲ ಕನ್ನಡ ಸಿನಿಮಾ.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಡಾಲಿ ಧನಂಜಯ್, ‘ಪ್ರವೀರ್ ಶೆಟ್ಟಿ ಅವರನ್ನು ಮೊದಲು ನೋಡಿದಾಗ ಚಿಕ್ಕ ಹುಡುಗ. ಈಗ ಹೀರೋ ಆಗಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಹೆಚ್ಚಾಗಿ ಅವಕಾಶ ಸಿಗಲಿ’ ಎಂದು ಹಾರೈಸಿದರು.

‘ಕನ್ನಡ ಎಂದು ಬಂದಾಗ ಹೋರಾಟ ನೆನಪಾಗುತ್ತದೆ. ನಾನು ಹಲವಾರು ವರ್ಷಗಳಿಂದ ಪ್ರವೀಣ್ ಶೆಟ್ಟಿ ಅವರನ್ನು ನೋಡುತ್ತಾ ಬಂದಿದ್ದೇವೆ. ಅವರ ಮನೆಯಿಂದ ಚಿತ್ರರಂಗಕ್ಕೆ ಒಂದು ಉಡುಗೊರೆಯಾಗಿ ಮಗನನ್ನು ಕೊಡುತ್ತಿದ್ದಾರೆ. ಟ್ರೇಲರ್ ನೋಡಿದಾಗ ಹೊಸ ಹುಡುಗ ಅನಿಸಲಿಲ್ಲ. ಅಷ್ಟು ಚೆನ್ನಾಗಿ ನಟಿಸಿದ್ದಾರೆ ಪ್ರವೀರ್. ಹೊಸದಾಗಿ ಬರುವವರು ಗುರಿ ಇಟ್ಟುಕೊಂಡು ಬರಬೇಕು ಜೊತೆಗೆ ತಾಳ್ಮೆ ಇರಬೇಕು’ ಎಂದರು ರಾಕ್ ಲೈನ್ ವೆಂಕಟೇಶ್.

ಚಿತ್ರದ ನಾಯಕ ಪ್ರವೀರ್ ಶೆಟ್ಟಿ ಮಾತನಾಡಿ ‘ನಾನು ಈ ದಿನಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದೆ. ಶ್ರೀಮುರಳಿ ಅವರು ಟ್ರೇಲರ್‌ಗೆ ಧ್ವನಿ ಕೊಟ್ಟಿದ್ದು ಮತ್ತಷ್ಟು ಶಕ್ತಿ ಬಂದಿದೆ. ನಿರ್ದೇಶಕರು ಶ್ರಮವಹಿಸಿ ಸಿನಿಮಾ ಮಾಡಿದ್ದಾರೆ. ನಿಮ್ಮೆಲ್ಲರ ಸಹಕಾರ ಇರಲಿ’ ಎಂದರು.

‘ಮೂಲತಃ ನಾನು ಚೆನ್ನೈನವನು. “ಸೈರನ್” ಚಿತ್ರದ ಮೂಲಕ ಪ್ರವೀರ್ ಶೆಟ್ಟಿ ಲಾಂಚ್ ಆಗುತ್ತಿದ್ದಾರೆ. ಒಳ್ಳೆಯ ನಟನಾಗುವ ನಿರೀಕ್ಷೆ ಇದೆ’ ಎಂದರು.

ತಮಿಳು ನಟ ದೀನಾ, ಚಿತ್ರದ ನಾಯಕಿ ಲಾಸ್ಯ, ನಟಿ ಸ್ಪರ್ಶ ರೇಖಾ, ಸಂಗೀತ ನಿರ್ದೇಶಕ ಭಾರದ್ವಾಜ್, ಛಾಯಾಗ್ರಾಹಕ ನಾಗೇಶ್ ಆಚಾರ್ಯ ಮುಂತಾದವರು ಚಿತ್ರದ ಕುರಿತು ತಮ್ಮ ಅನುಭವ ಹಂಚಿಕೊಂಡರು.

Categories
ಸಿನಿ ಸುದ್ದಿ

ರಿಚ್ಚಿಗೆ ಕುನಾಲ್ ಗಾಂಜವಾಲ ದನಿ: ಗೀತ ಸಾಹಿತಿ ಗೌಸ್ ಪೀರ್ ಬರೆದ ಹಾಡು ಮೇ 18ಕ್ಕೆ ರಿಲೀಸ್

ನಾಯಕ ಕಮ್ ನಿರ್ದೇಶಕ ಹೇಮಂತ್ ಕುಮಾರ್ ಅವರು ರಿಚ್ಚಿ ಚಿತ್ರದ ಪ್ರಚಾರ ಕಾರ್ಯ ಆರಂಭವಾಗಿದೆ. ಚಿತ್ರದ ‘ಕಳೆದು ಹೋಗಿರುವೆ’ ಹಾಡು ಮೇ 18 ರಂದು ಬಿಡುಗಡೆಯಾಗಲಿದೆ. ಗೀತ ಸಾಹಿತಿ ಗೌಸ್ ಫೀರ್ ಬರೆದಿರುವ ಈ ರೊಮ್ಯಾಂಟಿಕ್ ಹಾಡನ್ನು ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಹಾಡಿದ್ದಾರೆ.

ಬಹಳ ವರ್ಷಗಳ ನಂತರ ಕುನಾಲ್ ಅವರು ಹಾಡಿರುವ ಕನ್ನಡ ಚಿತ್ರಗೀತೆಯಿದು. ಅಗಸ್ತ್ಯ ಸಂತೋಷ್ ಸಂಗೀತ ನೀಡಿರುವ ಈ ಹಾಡಿಗೆ ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಮಾಡಿದ್ದಾರೆ. ರಿಚ್ಚಿ ಹಾಗೂ ರಮೋಲಾ‌ ಹೆಜ್ಜೆ ಹಾಕಿದ್ದಾರೆ.

” ರಿಚ್ಚಿ” ಲವ್ ಕಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಚಿತ್ರದ ಹಾಡುಗಳಿಗೂ ಹೆಚ್ಚಿನ ಮಹತ್ವ ನೀಡಲಾಗಿದ್ದು, ಅಗಸ್ತ್ಯ ಸಂತೋಷ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಉತ್ತಮವಾಗಿ ಮೂಡಿಬಂದಿದೆ.

ಚಿತ್ರದ ಮೊದಲ ಹಾಡು ಮೇ ಹದಿನೆಂಟರಂದು ಬಿಡುಗಡೆಯಾಗಲಿದ್ದು, ಜೂನ್ ಅಥವಾ ಜುಲೈನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ರಿಚ್ಚಿ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಹೈದರಾಬಾದ್ ಸ್ಟುಡಿಯೋದಲ್ಲಿ ರಾಧಿಕಾ ಕುಮಾರಸ್ವಾಮಿ ಚಿತ್ರ ಶುರು: ಅಜಾಗ್ರತ ಸಿನಿಮಾಗೆ ಗಣ್ಯರ ಹಾರೈಕೆ

ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಿ ನಟಿಸುತ್ತಿರುವ “ಅಜಾಗ್ರತ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಹೈದರಾಬಾದ್ ನ ರಾಮನಾಯ್ಡು ಸ್ಟುಡಿಯೋದಲ್ಲಿ ನೆರವೇರಿತು. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎ.ಎಂ.ರತ್ನಂ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

ಹೆಸರಾಂತ ವಿತರಕ ಟ್ಯಾಗೋರ್ ಮಧು ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರರಂಗದ ವಿವಿಧ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಬಾಲಿವುಡ್ ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾವ್ ರಮೇಶ್‌, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ರವಿರಾಜ್ ನಿರ್ಮಿಸುತ್ತಿದ್ದಾರೆ. ಎಂ.ಶಶಿಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಏಳು ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ಡಬ್ ಮಾಡದೆ, ಆಯಾ ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣ ನಡೆಯಲಿರುವುದು ಈ ಚಿತ್ರದ ವಿಶೇಷ .

Categories
ಸಿನಿ ಸುದ್ದಿ

ಡಬಲ್ ಇಸ್ಮಾರ್ಟ್ ಮೂಲಕ ಮತ್ತೆ ಒಂದಾದ ಪುರಿ ಜಗನ್ನಾಥ್-ರಾಮ್ ಪೋತಿನೇನಿ….2024 ಮಾರ್ಚ್ 8ಕ್ಕೆ ಸಿನಿಮಾ ರಿಲೀಸ್

ಉಸ್ತಾದ್ ರಾಮ್ ಪೋತಿನೇನಿ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಮತ್ತೊಮ್ಮೆ ಒಂದಾಗಿದ್ದಾರೆ. ಇಸ್ಮಾರ್ಟ್ ಶಂಕರ್ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಡೆಡ್ಲಿ ಕಾಂಬಿನೇಷನ್ ನಾಲ್ಕು ವರ್ಷದ ಬಳಿಕ ಸೀಕ್ವೆಲ್ ಗೆ ಕೈ ಹಾಕಿದ್ದಾರೆ. ರಾಮ್ ಹುಟ್ಟುಹಬ್ಬದ ಪ್ರಯುಕ್ತ ಟೈಟಲ್ ಹಾಗೂ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ.

ನಾಳೆ ರಾಮ್ ಪೋತಿನೇನಿ ಜನ್ಮದಿನ. ಹುಟ್ಟುಹಬ್ಬದ ಒಂದು ದಿನ ಮುಂಚಿತವಾಗಿ ಟೈಟಲ್ ಹಾಗೂ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಡಬಲ್ ಮಾಸ್ ಹಾಗೂ ಡಬಲ್ ಮನರಂಜನೆ ನೀಡಲು ಸಜ್ಜಾಗಿರುವ ಪುರಿ ಜಗನ್ನಾಥ್ ಈ ಚಿತ್ರಕ್ಕೆ ಡಬಲ್ ಇಸ್ಮಾರ್ಟ್ ಎಂಬ ಶೀರ್ಷಿಕೆ ಫಿಕ್ಸ್ ಮಾಡಿದ್ದಾರೆ. ಮುಂದಿನ ವರ್ಷ ಅಂದ್ರೆ 2024‌ ಮಾರ್ಚ್ 8 ರಂದು ಶಿವರಾತ್ರಿ ಹಬ್ಬಕ್ಕೆ ಈ ಚಿತ್ರ ತೆರೆಗೆ ಬರಲಿದೆ.

ಪುರಿ ಜಗನ್ನಾಥ್ ಕಥೆ ಬರೆದು ನಿರ್ದೇಶಿಸುತ್ತಿರುವ ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ಸ್ ನಡಿ ಚಾರ್ಮಿ ಕೌರ್ ಹಾಗೂ ಪುರಿ ಜಗನ್ನಾಥ್ ನಿರ್ಮಿಸುತ್ತಿದ್ದಾರೆ. ಲೈಗರ್ ಸಿನಿಮಾದಲ್ಲಿ ಖಳನಾಯಕ ಘರ್ಜಿಸಿದ್ದ ವಿಷು ರೆಡ್ಡಿ ಪುರಿ ಕನೆಕ್ಟ್ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ.

ಭಾರೀ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರಲಿದೆ.

ಡಬಲ್ ಇಸ್ಮಾರ್ಟ್ ಪೋಸ್ಟರ್ ನಲ್ಲಿ ರಾಮ್ ಪೋತಿನೇನಿ ರಕ್ತದ ಗುರುತುಗಳ ತ್ರಿಶೂಲ್ ಹಿಡಿದು ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷದ ಶಿವರಾತ್ರಿ ಹಬ್ಬಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ‌ ಮಲಯಾಳಂ ಭಾಷೆಯಲ್ಲಿ ಮೂಡಿ ಬರಲಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಮಾಹಿತಿಯನ್ನು ಶೀಘ್ರದಲ್ಲೇ ಘೋಷಣೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

error: Content is protected !!