ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸ ಪ್ರಯೋಗದ ಚಿತ್ರಗಳು ನಿರ್ಮಾಣವಾಗಿ ತೆರೆಗೆ ಬರುತ್ತಿವೆ. ಅಂತಹ ಮತ್ತೊಂದು ಚಿತ್ರವೇ ಕಾಶಿಕಾ. ಕನ್ನಡದಲ್ಲಿ ಮೊದಲ ಬಾರಿಗೆ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿಕೊಂಡು ತಯಾರಾಗಿರುವ ಸಾರಿ (ಕರ್ಮ ರಿಟರ್ನ್ಸ್) ಚಿತ್ರದ ನಿರ್ಮಾಪಕ ನವೀನ್ ಕುಮಾರ್ ಅವರ ಮತ್ತೊಂದು ಅದ್ದೂರಿ ವೆಚ್ಚದ ಹಾಗೂ ಬಹುಭಾಷೆಯಲ್ಲಿ ನಿರ್ಮಾಣವಾಗುತ್ತಿರುವ, ಬಿಗ್ ಸ್ಟಾರ್ ಕಾಸ್ಟ್ ಒಳಗೊಂಡ ಚಿತ್ರ ಇದಾಗಲಿದೆ. ಸಾರಿ ನಂತರ ಕಿಸ್ ಇಂಟರ್ ನ್ಯಾಷನಲ್ (ಕೆನಡಾ) ಸಂಸ್ಥೆಯಿಂದ ಹೊರಬರುತ್ತಿರುವ ಮೂರನೆಯ ಚಿತ್ರವಿದು. ಸಾರಿ ಚಿತ್ರವಿನ್ನೂ ಬಿಡುಗಡೆಯ ಹಂತದಲ್ಲಿರುವಾಗಲೇ ಮತ್ತೊಂದು ಚಿತ್ರವನ್ನು ಅನೌನ್ಸ್ ಮಾಡಿದೆ. ಈ ಹಿಂದೆ ಸಿದ್ದಿಸೀರೆ ಮತ್ತು ಸಾರಿ ಯಂಥ ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿದ ಬ್ರಹ್ಮ ಆವರ ನಿರ್ದೇಶನದ ಮೂರನೇ ಚಿತ್ರ ಇದಾಗಿದೆ.
ಇದೊಂದು ಮಹಿಳಾ ಪ್ರದಾನ ಆಕ್ಷನ್ ಚಿತ್ರವಾಗಿದ್ದು, ನಾಯಕಿ ಕಾಶಿಯಿಂದ ಕರ್ನಾಟಕಕ್ಕೆ ಬರುತ್ತಾಳೆ. ಆಕೆ ಇಲ್ಲಿಗೆ ಏಕೆ ಬಂದಳು, ಯಾರನ್ನು ಹುಡುಕಿಕೊಂಡು ಬಂದಳು ಅನ್ನೋದೇ ಚಿತ್ರದ ಕಾನ್ಸೆಪ್ಟ್. ನಾಯಕಿಯ ಪಾತ್ರಕ್ಕೆ ಹೆಸರಾಂತ ನಟಿಯನ್ನು ಸಂಪರ್ಕಿಸಲಾಗಿದ್ದು ಮುಂದಿನ ದಿನಗಳಲ್ಲಿ ಅವರ ಹೆಸರನ್ನು ರಿವೀಲ್ ಮಾಡಲಾಗುವುದು.
ಇನ್ನು ಈ ಚಿತ್ರದ ಸಹ ನಿರ್ಮಾಪಕರಾಗಿ ಶ್ರೀವಿಜಯ್ ಹಾಗೂ ಜೈ ಕ್ರಿಪ್ಲಾನಿ ಕೈಜೋಡಿಸಿದ್ದಾರೆ. ರಾಜೀವ್ ಗಣೇಸನ್ ಅವರು ಚಿತ್ರದ ಕ್ಯಾಮೆರಾ ವರ್ಕ್ ನಿಭಾಯಿಸಲಿದ್ದಾರೆ. ಸದ್ಯ ಚಿತ್ರದ ಶೀರ್ಷಿಕೆಯನ್ನಷ್ಟೇ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ನಿರ್ದೇಶಕ ಬ್ರಹ್ಮ ಅವರ ಎಲ್ಲಾ ಚಿತ್ರಗಳು ಮಹಿಳಾ ಪ್ರಧಾನ ಚಿತ್ರಗಳೇ. ಅವರ ಮೊದಲ ಸಿನಿಮಾ ಸಿದ್ದಿಸೀರೆ ಹಾಲಿವುಡ್ ನಲ್ಲಿ 9ನೇ ಸ್ಥಾನ ಹಾಗೂ ಜಪಾನ್ ಫಿಲಂ ಫೆಸ್ಟಿವಲ್ ನಲ್ಲಿ 3 ನೇ ಸ್ಥಾನದ ಪ್ರಶಸ್ತಿ ಪಡೆದಿತ್ತು.
ಸಾರಿ ಚಿತ್ರವೂ ಕೂಡ ತಾಂತ್ರಿಕತೆಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ. ಇನ್ನು ಕಾಶಿಕಾ ಚಿತ್ರದ ತಾರಾಬಳಗದಲ್ಲಿ ಎಲ್ಲಾ ಭಾಷೆಯ ಖ್ಯಾತ ನಟನಟಿಯರೇ ಇರಲಿದ್ದಾರೆ, ಹಂತ ಹಂತವಾಗಿ ಚಿತ್ರದ ಬಗ್ಗೆ, ತಾರಾಗಣದ ಹಾಗೂ ಇತರ ತಂತ್ರಜ್ಞರ ಬಗ್ಗೆ ಮಾಹಿತಿ ತಿಳಿಸಲಾಗುವುದು ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕರಾದ ಅಫ್ಜಲ್ ಅವರು ತಿಳಿಸಿದ್ದಾರೆ.