Categories
ಸಿನಿ ಸುದ್ದಿ

ಹೊಸಬರ ಕನ್ನಡ ಮಾಧ್ಯಮಕ್ಕೆ ದೊಡ್ಡ ರಂಗೇಗೌಡರ ಸಾಥ್: ರಿಲೀಸ್ ಆಯ್ತು ಮೋಷನ್ ಪೋಸ್ಟರ್

ಕಲ್ಕಿ ಪ್ರೊಡಕ್ಷನ್ ನಡಿ ವೆಂಕಟೇಶ್.ಎಸ್ ನಿರ್ಮಾಣ ಮಾಡುತ್ತಿರುವ ಕನ್ನಡ ಮಾಧ್ಯಮ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಿನ್ನೆ ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಕೋರಿದರು.

ಹಿರಿಯ ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ, ಎಲ್ಲಿ ಕನ್ನಡ ಅಲ್ಲಿ ದೊಡ್ಡ ರಂಗೇಗೌಡರು. ಆದ್ದರಿಂದ ಕನ್ನಡದ ಯಾವುದೇ ಕಾರ್ಯವಿರಲಿ, ಸಮಾರಂಭವಿರಲಿ. ಗೀತೆ ಪ್ರಸ್ತುತಿ ಅಲ್ಲಿ ನಾನು ಪಾಲ್ಗೊಳ್ಳಲು ಮುಖ್ಯ ಕಾರಣ ಕನ್ನಡವೇ ನನ್ನ ಉಸಿರು, ಕನ್ನಡವೇ ನನ್ನ ಬದುಕು, ಕನ್ನಡವೇ ನನ್ನ ಹೆಸರು, ಕನ್ನಡವೇ ನನ್ನ ಬೆಳಕು ಕೂಡ. ವಿಧಾನಸೌಧದಲ್ಲಿ ಮೊದಲ ಕನ್ನಡ ಬಳಕೆ ಪ್ರಾರಂಭವಾಗಬೇಕು. ಎಷ್ಟೋ ಅಧಿಕಾರಿಗಳು ಕನ್ನಡವನ್ನು ಬಳಸುವುದಿಲ್ಲ. ನಾನು ಆಶಾವಾದಿ. ನನ್ನಲ್ಲಿ ಆಶಾ ಕಿರಣವಿದೆ. ಕನ್ನಡ ಇಂದಲ್ಲ ನಾಳೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ ಎಂಬ ನಂಬಿಕೆ ಇದೆ. ಕನ್ನಡ ನಮ್ಮೆಲ್ಲರ ಚೈತ್ಯನವಾಗಲಿ. ಉಸಿರಾಗಲಿ.. ಕನ್ನಡ ಮಾಧ್ಯಮ ಸಿನಿಮಾದಲ್ಲಿ ಈ ಎಲ್ಲಾ ಅಂಶಗಳನ್ನು ಅಳವಡಿಸುವಂತಾಗಲಿ. ಸಮಗ್ರವಾದ ಕನ್ನಡ ಸಮಸ್ಯೆಗಳ ಕೈಪಿಡಿ ತರ ಚಿತ್ರ ಇರಲಿ ಎಂದು ಹೇಳಿದರು.

ನಿರ್ದೇಶಕ ಅಖಿಲ್ ಪುತ್ತೂರು ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಥೆ ಸಾಗುತ್ತದೆ. ಸಿನಿಮಾದಲ್ಲಿ ಎರಡು ಹಾಡುಗಳಿವೆ. ಜನಗಳಿಗೆ ಗೊತ್ತಿಲ್ಲದ ಒಂದಷ್ಟು ವಿಷಯಗಳನ್ನು ಕನ್ನಡ ಮಾಧ್ಯಮ ಚಿತ್ರದಲ್ಲಿ ತಿಳಿಸುತ್ತೇವೆ. ಪ್ರಸ್ತುತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತೇನೆ. ನಾನು ಯೋಧನಾಗಿ ಪಾತ್ರ ಮಾಡುತ್ತಿದ್ದೇನೆ ಎಂದರು.

ಕನ್ನಡ ಮಾಧ್ಯಮ ಸಿನಿಮಾಗೆ ಅಖಿಲ್ ಪುತ್ತೂರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದಹಾಗೇ ಅಖಿಲ್ ಅವರಿಗಿದು ನಿರ್ದೇಶಕನಾಗಿ ಮೊದಲ ಪ್ರಯತ್ನ. ಸವಾದ್ ಮಂಗಳೂರು ಕಥೆ ಚಿತ್ರಕಥೆ ಹಾಗೂ ಸಂಭಾಷಣೆ –ಬರೆಯುವುದರ ಜೊತೆ ಛಾಯಾಗ್ರಹಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಟೈಟಲ್ ಹೇಳುವಂತೆ ಕನ್ನಡ ಮಾಧ್ಯಮಗಳು ಪ್ರಾಮುಖ್ಯತೆಯನ್ನು ತಿಳಿಸುವ ಈ ಚಿತ್ರದಲ್ಲಿ ದೊಡ್ಡರಂಗೇಗೌಡ, ನಾಗೇಂದ್ರ ಅರಸ್ , ವಾಣಿ, ಅಖಿಲ್ , ಜಾಹ್ನವಿ , ಚಿನ್ಮಯ್ , ಶಿವಮೊಗ್ಗ ರಾಮಣ್ಣ , ಪ್ರದೀಪ್ ಕುಮಾರ್ ನಟಿಸುತ್ತಿದ್ದಾರೆ.

ಸಿ.ವಿಶಾಲ್ ಕೃಷ್ಣ ಕನ್ನಡ ಮಾಧ್ಯಮ ಸಿನಿಮಾಗೆ ಸಂಗೀತ ಒದಗಿಸುತ್ತಿದ್ದು, ಕೃಷ್ಣ ಸಂಕಲನ ಚಿತ್ರಕ್ಕೆ ಇರಲಿದೆ. ಮುಂದಿನ ತಿಂಗಳ 7ರಿಂದ ಶೂಟಿಂಗ್ ಶುರುವಾಗ್ತಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಧೀರೇನ್ ರಾಮ್ ಕುಮಾರ್ ಇನ್ನುಂದೆ ಧೀರೇನ್ ಆರ್ ರಾಜ್ ಕುಮಾರ್

ಧೀರೇನ್ ರಾಮ್ ಕುಮಾರ್ ಅವರನ್ನು ಧೀರೇನ್ ಆರ್ ರಾಜ್ ಕುಮಾರ್ ಆಗಿ ಕೆ.ಆರ್.ಜಿ.ಸ್ಟುಡಿಯೋಸ್ ಮರುಪರಿಚಯಿಸಿದೆ. ಧೀರೇನ್ ಅವರ ಹುಟ್ಟುಹಬ್ಬದ ಅಂಗವಾಗಿ ಒಂದು ಹೊಸ ಚಿತ್ರವನ್ನೂ ಕೂಡ ಕೆ.ಆರ್.ಜಿ ಘೋಷಿಸಿದೆ. ಚಿತ್ರದ ಕುರಿತು ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಿದೆ.

ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಹೊಂದಿರುವ ಕೆ.ಆರ್.ಜಿ ಸಂಸ್ಥೆ, ಇದೀಗ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. “ರತ್ನನ್ ಪ್ರಪಂಚ” ಮೂಲಕ ರೋಹಿತ್ ಪದಕಿ, “ಪೌಡರ್” ಚಿತ್ರದ ಮೂಲಕ ಜನಾರ್ದನ್ ಚಿಕ್ಕಣ್ಣ, “ಗುರುದೇವ್ ಹೊಯ್ಸಳ” ಚಿತ್ರದ ಮೂಲಕ ವಿಜಯ್ ನಾಗೇಂದ್ರ ಮುಂತಾದ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕೆ.ಆರ್.ಜಿ.ಗೆ ಇದ್ದು, ಈ‌ ರೀತಿ ಹೊಸ ಪ್ರತಿಭೆಗಳನ್ನು ಪರಿಚಯಿಸಿ, ಕನ್ನಡ ಚಿತ್ರರಂಗವನ್ನು ಬಹು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಸಂಸ್ಥೆ ಹೊಂದಿದೆ.

ಪ್ರಸ್ತುತವಾಗಿ ಬಹು ನಿರೀಕ್ಷಿತ “ಉತ್ತರಕಾಂಡ” ಚಿತ್ರ ಸೆಟ್ಟೇರಿದ್ದು, “ಪೌಡರ್” ಚಿತ್ರದ ಡಬ್ಬಿಂಗ್ ಕಾರ್ಯ ಬಿರುಸಿನಿಂದ ಸಾಗುತ್ತಿದೆ.

Categories
ಸಿನಿ ಸುದ್ದಿ

ನನ್ನ ಹಾಗು ಚಂದ್ರು ಬಗ್ಗೆ ಯಾವ ಮೀಡಿಯಾ ಏನೂ ಮಾಡಕ್ಕಾಗಲ್ಲ: ಸೋಶಿಯಲ್ ಮೀಡಿಯಾ ವಿರುದ್ಧ ಶಿವಣ್ಣ ಗರಂ

ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಶಿವರಾಜಕುಮಾರ್ ಅವರು ನಿರ್ದೇಶಕ ಆರ್. ಚಂದ್ರು ಕುರಿತು ನೆಗೆಟಿವ್ ಆಗಿ ಮಾತಾಡಿದ್ದಾರೆ ಎಂದು ಎಡಿಟ್ ಮಾಡಿದ ವೀಡಿಯೋವೊಂದು ಹರಿದಾಡಿತ್ತು. ಅಷ್ಟೇ ಅಲ್ಲದೆ, ಆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆ ಬಗ್ಗೆ ಈಗ ಸ್ವತಃ ಶಿವರಾಜಕುಮಾರ್ ಅವರೇ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ

ಹೌದು, ಹಾಗೆ ಮಾತಾಡಿದ್ದ ವೀಡಿಯೋವೊಂದರ ಕುರಿತು ಎಲ್ಕೆಡೆ ಮಾತುಗಳು ಕೇಳಿಬಂದಿದ್ದವು. ಆದರೆ ಆರ್.ಚಂದ್ರು ಮತ್ತು ಶಿವರಾಜಕುಮಾರ್ ಅವರ ಸಂಬಂಧ ಹೇಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಇತ್ತೀಚೆಗೆ ನಡೆದ ಫಾದರ್ ಚಿತ್ರದ ಮುಹೂರ್ತ ವೇಳೆ ಶಿವರಾಜಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಬಿಸಿ ಮುಟ್ಟಿಸಿದ್ದಾರೆ.

‘ಸೋಷಿಯಲ್‍ ಮೀಡಿಯಾ ಎನ್ನುವುದು ಆಟ ಸಾಮಾನಿನಂತಾಗಿದೆ. ಆ ಸಮಯದಲ್ಲಿ ನಾವಿದ್ದ ಕಾಲಘಟ್ಟ ಚೆನ್ನಾಗಿತ್ತು. ನಾವೆಲ್ಲರೂ ಆಗ ಪುಣ್ಯ ಮಾಡಿದ್ದೆವು. ಏನೇ ಇರಲಿ ಒಳ್ಳೆಯದಕ್ಕೆ ಸೋಷಿಯಲ್‍ ಮೀಡಿಯಾ ಬಳಸಿಕೊಳ್ಳವೇಕೆ ಹೊರತು ಕೆಟ್ಟದ್ದಕ್ಕಲ್ಲ.
ಏನಾದರೂ ಮಾತಾಡಿದರೆ ನಿಮಗೇನು ಸಮಸ್ಯೆ? ಸುಮ್ಮನೆ ಸೀನ್‍ ಕ್ರಿಯೇಟ್‍ ಮಾಡಬಾರದು. ಅದು ತಪ್ಪು. ಒಂದು ದಿನ ಖಂಡಿತಾ ಕಾಲ ಬರುತ್ತೆ. ದೇವರು ಬಿಡಲ್ಲ. ಆಗ ನಿಜಕ್ಕೂ ಕಷ್ಟ ಆಗತ್ತೆ. ಏನಾದರೂ ಮಾತಾಡಿದರೆ ಆ ಮಾತನ್ನು ತಿರುಚುವ ವೀಡಿಯೋಗಳು ವೈರಲ್ ಆಗುತ್ತವೆ. ಇದು ಸರಿಯಲ್ಲ ಎಂದು ಶಿವಣ್ಣ ಬೇಸರ ಹೊರಹಾಕಿದ್ದಾರೆ.

‘’ಕಬ್ಜ’ ಚಿತ್ರದ ಬಳಿಕ ಒಂದು ವೀಡಿಯೋ ವೈರಲ್‍ ಆಯ್ತು. ಸೋಷಿಯಲ್‍ ಮೀಡಿಯಾ ಮಂದಿ ಒಳ್ಳೆಯದನ್ನು ಮಾಡಿ. ಯಾವುದನ್ನೂ ಕೆಟ್ಟದ್ದು ಮಾಡಬೇಡಿ. ನೀವೇನೇ ಮಾಡಿದರೂ, ನಮ್ಮ ಸಂಬಂಧ ಹಾಳಾಗಲ್ಲ. ನನ್ನ ಮತ್ತು ಚಂದ್ರು ಅವರ ಬಾಂಧವ್ಯ ಯಾವಾಗಲೂ ಚೆನ್ನಾಗಿರುತ್ತದೆ. ನಾನೇನೇ ಹೇಳಿದರೂ ಚಂದ್ರು ಅವರನ್ನು ಕೇಳುತ್ತೇನೆ. ನಿಮಗ್ಯಾಕೆ ಕೇಳಲಿ? ದಯವಿಟ್ಟು ಆ ತರಹ ಕೆಲಸ ಮಾಡಬೇಡಿ. ಒಳ್ಳೆಯ ಕೆಲಸ ಮಾಡಿ. ಎಥಿಕ್ಸ್ ಇಟ್ಟುಕೊಳ್ಳಿ.

ಇಷ್ಟ ಬಂದ ಹಾಗೆ ಏನು ಬೇಕಾದರೂ ಹಾಕಿಕೊಳ್ಳಬಹುದು ಎನ್ನುವುದು ತಪ್ಪು ಎಂದ ಅವರು, ‘ನಿಮಗೆ ತಮಾಷೆ ಎನಿಸಬಹುದು. ನಿಮ್ಮನೆ ಒಲೆ ಉರಿಯೋಕೆ ಇನ್ನೊಬ್ಬರ ಮನೆಯ ಒಲೆ ಆರಿಸುವ ಕೆಲಸ ಮಾಡಬೇಡಿ. ಮೀಡಿಯಾ ನಮ್ಮನ್ನು ಏನೂ ಮಾಡಕ್ಕಾಗಲ್ಲ ಎಂದರು.

Categories
ಸಿನಿ ಸುದ್ದಿ

ಫಾದರ್ ಸಿನಿಮಾಗೆ ಚಾಲನೆ ಕೊಟ್ಟ ಶಿವಣ್ಣ ದಂಪತಿ: ಇದು ಆರ್ ಸಿ ಸ್ಟುಡಿಯೋಸ್ ಪ್ಯಾನ್ ಇಂಡಿಯಾ ಚಿತ್ರ

ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕೆಲವು ದಿನಗಳ ಹಿಂದೆ ಆರ್ ಸಿ ಸ್ಟುಡಿಯೋಸ್ ಎಂಬ ನಿರ್ಮಾಣ‌ ಸಂಸ್ಥೆ ಆರಂಭಿಸುವುದರ ಮೂಲಕ ಐದು ಸಿನಿಮಾಗಳನ್ನು ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಆ ಪೈಕಿ ಮೊದಲ ಚಿತ್ರವಾಗಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ “ಫಾದರ್” ಚಿತ್ರ ನಿರ್ಮಾಣವಾಗುತ್ತಿದೆ. ಇತ್ತೀಚಿಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರು ಆರಂಭ ಫಲಕ ತೋರುವುದರ ಮೂಲಕ “ಫಾದರ್ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದರು.ರಾಜಕೀಯ ಮುಖಂಡ ಎಚ್.ಎಂ.ರೇವಣ್ಣ, ಶಾಸಕ ಪ್ರದೀಪ್ ಈಶ್ವರ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಬಹದ್ದೂರ್ ಚೇತನ್ ಕುಮಾರ್, ಮಂಜುನಾಥ್, ಮಮತ ದೇವರಾಜ್, ಮಂಜುನಾಥ್ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಆರ್ ಚಂದ್ರು ನನ್ನ ಆತ್ಮೀಯರು. ಸಿನಿಮಾವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಆರ್ ಸಿ ಸ್ಟುಡಿಯೋಸ್ ಮೂಲಕ ಮೊದಲ ಚಿತ್ರವಾಗಿ ” ಫಾದರ್” ಚಿತ್ರ ಆರಂಭಿಸಿದ್ದಾರೆ. ಚಂದ್ರು ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭವಾಗಲಿ ಎಂದು ಶಿವರಾಜಕುಮಾರ್ ಹಾರೈಸಿದರು.

ನನ್ನ “ಚಾರ್ ಮಿನಾರ್” ಚಿತ್ರ ಆರಂಭವಾದಗಿನಿಂದ ಹಿಡಿದು ಈವರೆಗೂ ನನಗೆ ಶಿವಣ್ಣ ಹಾಗೂ ಗೀತಾ ಶಿವರಾಜಕುಮಾರ್ ಅವರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಚುನಾವಣೆ ಸಮಯ. ಆದರೂ ಇಂದು ಇಲ್ಲಿಗೆ ಆಗಮಿಸಿ, ನಮ್ಮ “ಫಾದರ್” ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಅವರಿಗೆ ಹಾಗೂ ಆಗಮಿಸಿರುವ ಎಲ್ಲಾ ಗಣ್ಯರಿಗೂ ಧನ್ಯವಾದ ತಿಳಿಸುತ್ತೇನೆ. ಕೆಲವು ದಿನಗಳ ಮುಂಚೆ ನಮ್ಮ ಆರ್ ಸಿ ಸ್ಟುಡಿಯೋಸ್ ಸಂಸ್ಥೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು.

ಈ ಸಂಸ್ಥೆಯಿಂದ ಒಂದು ವರ್ಷದಲ್ಲಿ ಐದು ಸಿನಿಮಾಗಳನ್ನು ನಿರ್ಮಿಸುವುದಾಗಿ ಹೇಳಿದ್ದೆ. ಅದರ ಮೊದಲ ಹೆಜ್ಜೆಯಾಗಿ ಇಂದು “ಫಾದರ್” ಚಿತ್ರ ಆರಂಭವಾಗಿದೆ. ಶಿವಣ್ಣ ಅವರ “ಭೈರಾಗಿ” ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ರಾಜ್ ಮೋಹನ್ ಈ ಚಿತ್ರದ ನಿರ್ದೇಶಕರು. ಡಾರ್ಲಿಂಗ್ ಕೃಷ್ಣ ನಾಯಕರಾಗಿ, ಅಮೃತ ಅಯ್ಯಂಗಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಪ್ರಕಾಶ್ ರೈ, ಸುನೀಲ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮುಂಬೈನ ಆನಂದ್ ಪಂಡಿತ್ ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. “ಹನುಮಾನ್” ಚಿತ್ರದ ಖ್ಯಾತಿಯ ಹರಿ ಸಂಗೀತ ನೀಡುತ್ತಿದ್ದಾರೆ. ನಮ್ಮ “ಫಾದರ್” ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಆರ್ ಚಂದ್ರು ತಿಳಿಸಿದರು.

ಇದೊಂದು ತಂದೆ – ಮಗನ ಬಾಂಧವ್ಯದ ಚಿತ್ರ. ಕಥೆ ತುಂಬಾ ಚೆನ್ನಾಗಿದೆ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು “ಫಾದರ್” ಚಿತ್ರದಲ್ಲಿದೆ ಎಂದರು ನಿರ್ದೇಶಕ ರಾಜ್ ಮೋಹನ್.

ನಿರ್ದೇಶಕರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ಆರ್ ಚಂದ್ರು ಅವರ ಜೊತೆಗೆ ಇದು ನನ್ನ ಮೊದಲ ಚಿತ್ರ ಎಂದು ನಾಯಕ ಡಾರ್ಲಿಂಗ್ ಕೃಷ್ಣ ತಿಳಿಸಿದರು.

ಕಥೆ ಹಾಗೂ ನನ್ನ ಪಾತ್ರ ಎರಡು ತುಂಬಾ ಚೆನ್ನಾಗಿದೆ ಎಂದರು ನಾಯಕಿ ಅಮೃತ ಅಯ್ಯಂಗಾರ್. ಸಂಗೀತ ನಿರ್ದೇಶಕ ಹರಿ ಸೇರಿದಂತೆ ಅನೇಕರು ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ದಿ ಜಡ್ಜ್ ಮೆಂಟ್ ಶೂಟಿಂಗ್ ಮುಕ್ತಾಯ: ಇದು ಕ್ರೇಜಿ ಸ್ಟಾರ್ ಚಿತ್ರ

ಜಿ9 ಕಮ್ಯುನಿಕೇಷನ್ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಹಾಗೂ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಪ್ರಮುಖಪಾತ್ರದಲ್ಲಿ ನಟಿಸಿರುವ “ದಿ ಜಡ್ಜ್ ಮೆಂಟ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ), ನಮ್ಮ ಚಿತ್ರದ ಚಿತ್ರೀಕರಣ ಇಂದಿಗೆ ಪೂರ್ಣವಾಗಿದೆ. ಕಾಕತಾಳೀಯ ಎಂದರೆ ನಮ್ಮ ಚಿತ್ರದ ಚಿತ್ರೀಕರಣ ಕಳೆದವರ್ಷ ಡಾ|| ರಾಜಕುಮಾರ್ ಅವರ ಹುಟ್ಟುಹಬ್ಬದಂದು ಆರಂಭವಾಗಿತ್ತು. ಈ ವರ್ಷ ಅವರ ಹುಟ್ಟುಹಬ್ಬದ ದಿನ ಮುಕ್ತಾಯವಾಗಿದೆ. ಚಿತ್ರ ಇಷ್ಟು ಸರಾಗವಾಗಿ ಮುಕ್ತಾಯವಾಗಲು ರವಿಚಂದ್ರನ್ ಅವರು ಸೇರಿದಂತೆ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರವೇ ಕಾರಣ.

ಈ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಈ ಚಿತ್ರವನ್ನು ನಾನು ಸೇರಿದಂತೆ ಐವರು ನಿರ್ಮಾಪಕರು ನಿರ್ಮಿಸಿದ್ದೇವೆ. ಕೋರ್ಟ್ ರೂಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ “ದ ಜಡ್ಜ್ ಮೆಂಟ್” ಚಿತ್ರವನ್ನು ಮೇ ನಲ್ಲಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ನಮ್ಮ ಚಿತ್ರ ಕಳೆದವರ್ಷ ಯಾವ ದಿನ‌ ಆರಂಭವಾಗಿತ್ತೊ, ಈ ವರ್ಷ ಅದೇ ದಿನ ಮುಕ್ತಾಯವಾಗಿದೆ. ಇಂತಹ ಅದ್ದೂರಿ ತಾರಾಬಳಗ ಹಾಗೂ ತಾಂತ್ರಿಕವರ್ಗ ಹೊಂದಿರುವ ಈ ಚಿತ್ರ ಯಾವುದೇ ತೊಂದರೆಯಿಲ್ಲದೆ ಪೂರ್ಣವಾಗಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ನಮ್ಮ ಧನ್ಯವಾದ ಎಂದರು ನಿರ್ಮಾಪಕರಾದ ಶರದ್ ನಾಡಗೌಡ ಹಾಗೂ ರಾಮು ರಾಯಚೂರು. ನಿರ್ಮಾಪಕರಾದ ವಿಶ್ವನಾಥ್ ಗುಪ್ತ ಹಾಗು ರಾಜಶೇಖರ ಪಾಟೀಲ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

“ದ ಜಡ್ಜ್ ಮೆಂಟ್” ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ‌. ಈ ತಂಡದವರು ಕಲಾವಿದರನ್ನು ನೋಡಿಕೊಂಡ ರೀತಿ ನಿಜಕ್ಕೂ ಶ್ಲಾಘನೀಯ ಎಂದು ಧನ್ಯಾ ರಾಮಕುಮಾರ್ ತಿಳಿಸಿದರು.

ಈ ತಂಡಕ್ಕೆ ತಡವಾಗಿ ಬಂದು ಸೇರಿಕೊಂಡವಳು ನಾನೇ ಎಂದು ಮಾತು ಆರಂಭಿಸಿದ ನಟಿ ಮೇಘನಾ ಗಾಂವ್ಕರ್, ರವಿಚಂದ್ರನ್ ಅವರ ಜೊತೆ ನಟಿಸಿದ್ದು ನನಗೆ ಸಂತೋಷವಾಗಿದೆ. ಡಾ|| ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಆರಂಭವಾಗಿ, ಈ ವರ್ಷದ ಅವರ ಹುಟ್ಟುಹಬ್ಬದ ದಿನವೇ ಚಿತ್ರೀಕರಣ ಮುಕ್ತಾಯವಾಗಿರುವುದು ನಿಜಕ್ಕೂ ಅಚ್ಚರಿಯಾಗಿದೆ. ಅಣ್ಣಾವ್ರ ಆಶೀರ್ವಾದ ನಮ್ಮ ತಂಡಕ್ಕೆ ಇದೆ ಎಂದರು.

ಡಾ|| ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದರು. ಗೀತರಚನೆಕಾರ ಪ್ರಮೋದ್ ಮರವಂತೆ ಹಾಗು ಚಿತ್ರದಲ್ಲಿ ನಟಿಸಿರುವ ರೇಖಾ ಕೂಡ್ಲಗಿ, ನವಿಲ ಚಿತ್ರದ ಕುರಿತು ಮಾತನಾಡಿದರು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಹಾಗೂ ಸಂಕಲನಕಾರ ಕೆಂಪರಾಜ್ ಸೇರಿದಂತೆ ಅನೇಕ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿದ್ದರು.

ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್ , ಧನ್ಯ ರಾಮಕುಮಾರ್, ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಸುಜಯ್ ಶಾಸ್ತ್ರಿ ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ನವಿಲ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ “ದ ಜಡ್ಜ್ ಮೆಂಟ್” ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Categories
ಸಿನಿ ಸುದ್ದಿ

ಕನ್ನಡಕ್ಕೆ ಬಂದ ದಕ್ಷಿಣ ಭಾರತ ನಟಿ‌ ಐಶ್ವರ್ಯ ರಾಜೇಶ್: ಉತ್ತರಕಾಂಡದಲ್ಲಿ ದುರ್ಗಿಯಾಗಿ ನಟನೆ

ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯ ರಾಜೇಶ್ ಉತ್ತರಕಾಂಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಉತ್ತರಕಾಂಡ ಒಂದು ಬಹು ನಿರೀಕ್ಷಿತ ಚಿತ್ರವಾಗಿದ್ದು, ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಮತ್ತು ನಟರಾಕ್ಷಸ ಡಾಲಿ‌ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಐಶ್ವರ್ಯ ಚಿತ್ರದಲ್ಲಿ ಧನಂಜಯ ಅವರ‌ ಜೋಡಿಯಾಗಿ “ದುರ್ಗಿ” ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


“ದಿ ಗ್ರೇಟ್ ಇಂಡಿಯನ್ ಕಿಚನ್”, “ದಿ ವರ್ಲ್ಡ್ ಫೇಮಸ್ ಲವರ್”, “ವಡಾ‌ ಚೆನ್ನೈ”, “ಕಾಕ ಮುತ್ತೈ” (ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ), ಜೋಮೋಂಟೇ ಸುವಿಶೇಷಂಗಳ್” ,”ಟಕ್ ಜಗದೀಶ್” , “ವಾನಂ ಕೊಟ್ಟಾಟುಂ” ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ಐಶ್ವರ್ಯ ತಮ್ಮ ಅಭಿನಯದ ಮೂಲಕ ಛಾಪನ್ನು ಮೂಡಿಸಿ,‌ಇದೀಗ ಉತ್ತರಕಾಂಡಕ್ಕೆ ಎಂಟ್ರಿ ನೀಡಿದ್ದಾರೆ.


ಪ್ರಸ್ತುತ ಚಿತ್ರದ ಪ್ರಥಮ ಶೆಡ್ಯೂಲ್ ಚಿತ್ರೀಕರಣ ವಿಜಯಪುರದಲ್ಲಿ ನಡೆಯುತ್ತಿದ್ದು, ಈ ಆಕ್ಷನ್ ಡ್ರಾಮಾಗೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದಾರೆ.ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಮಲಯಾಳಂ ನಟ ವಿಜಯ್ ಬಾಬು, ರಂಗಾಯಣ ರಘು, ಚೈತ್ರ ಜೆ ಆಚಾರ್, ಉಮಾಶ್ರೀ, ಯೋಗರಾಜ್ ಭಟ್, ದಿಗಂತ್ ಮಂಚಾಲೆ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಬಹು ದೊಡ್ಡ ತಾರಾಬಳಗವನ್ನು ಚಿತ್ರ ಹೊಂದಿದೆ. ಬಾಲಿವುಡ್ ಗಾಯಕ ಹಾಗೂ ಸಂಗೀತ ಸಂಯೋಜಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ ಹಾಗೂ ವಿಶ್ವಾಸ್‌ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿರುತ್ತಾರೆ.

Categories
ಸಿನಿ ಸುದ್ದಿ

’ಪ್ರತಿಷ್ಟಿತ BIFFF’ಗೆ ಆಯ್ಕೆಯಾದ ಮಲಯಾಳಂ ಸಿನಿಮಾ ‘ವಡಕ್ಕನ್’

ಬಹುಭಾಷಾ ನಟ ಕಿಶೋರ್ ಹಾಗೂ ಕಿಸ್ಮಾತ್ ಖ್ಯಾತಿಯ ಶೃತಿ ಮೆನನ್ ನಟಿಸಿರುವ ವಡಕ್ಕನ್ ಸಿನಿಮಾ ಬ್ರಸೆಲ್ಸ್ ಇಂಟರ್ ನ್ಯಾಷನಲ್ ಫೆಂಟಾಸ್ಟಿಕ್ ಫಿಲ್ಮ ಫೆಸ್ಟಿವಲ್-BIFFFಗೆ ಆಯ್ಕೆಯಾಗಿದೆ. ಪ್ರಾಚೀನ ಉತ್ತರ ಮಲಬಾರ್ ಜಾನಪದದ ಹಿನ್ನೆಲೆಯಲ್ಲಿಯುಳ್ಳ ಸೂಪರ್ ನ್ಯಾಚುರಲ್ ಥ್ರಿಲ್ಲರ್ ಕಥಾಹಂದರದ ಈ ಚಿತ್ರಕ್ಕೆ ಸಜೀದ್ ಎ ಆಕ್ಷನ್ ಕಟ್ ಹೇಳಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಮೊದಲ ಬಾರಿಗೆ BIFFFಗೆ ಆಯ್ಕೆಯಾದ ಸಿನಿಮಾ ಎಂಬ ಖ್ಯಾತಿಯೂ ವಡಕ್ಕನ್ ಗೆ ತೆಕ್ಕೆ ಸೇರ್ಪಡೆಯಾಗಿದೆ. ಮುನ್ನರಿಯಿಪ್ಪು ಸೇರಿದಂತೆ ಹಲವು ಚಿತ್ರಗಳಿಗೆ ಕಥೆ ಬರೆದಿರುವ ರಾಜ್ಯ ಪ್ರಶಸ್ತಿ ವಿಜೇತ ಕಥೆಗಾರ ಉನ್ನಿ ಆರ್ ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ.

ಆಫ್‌ಬೀಟ್ ಮೀಡಿಯಾ ಗ್ರೂಪ್‌ನ ಅಂಗಸಂಸ್ಥೆಯಾದ ಆಫ್‌ಬೀಟ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಲಾಗಿದೆ. ಚಿತ್ರಕ್ಕೆ ಬಿಜಿಬಾಲ್ ಅವರ ಸಂಗೀತ, ಕೀಕೊ ನಕಹರಾ ಅವರ ಛಾಯಾಗ್ರಹಣ ಮತ್ತು ಅಕಾಡೆಮಿ ಪ್ರಶಸ್ತಿ ವಿಜೇತ ರೆಸುಲ್ ಪೂಕುಟ್ಟಿ ಅವರ ಧ್ವನಿ ವಿನ್ಯಾಸವಿದೆ.

ವೈವಿಧ್ಯಮಯ ಪ್ರೇಕ್ಷಕರನ್ನು ತಲುಪುವ ಸಂಘಟಿತ ಪ್ರಯತ್ನದಲ್ಲಿ, ವಡಕ್ಕನ್ ಅನ್ನು ಈ ವರ್ಷದ ಕ್ಯಾನ್ಸ್‌ನಲ್ಲಿ ಮೇ ತಿಂಗಳಲ್ಲಿ ಮಾರ್ಚ್ ಡು ಫಿಲ್ಮ್‌ನಲ್ಲಿ ಪ್ರಸ್ತುತಪಡಿಸಲಾಗುತ್ತದೆ, ಇದು ವಾರ್ಷಿಕವಾಗಿ ನಡೆಯುವ ಫೆಸ್ಟಿವಲ್ ಡಿ ಕ್ಯಾನ್ಸ್‌ನ ಆಶ್ರಯದಲ್ಲಿ ನಡೆಯುವ ಚಲನಚಿತ್ರ ಮಾರುಕಟ್ಟೆಯಾಗಿದೆ. ವಡಕ್ಕನ್ ಸಿನಿಮಾವನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಡಬ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Categories
ಸಿನಿ ಸುದ್ದಿ

ಮಿರಾಯ್ ಇದು ತೇಜ್ ಸಜ್ಜಾ ಚಿತ್ರ: ಫಸ್ಟ್ ಲುಕ್ ಸಖತ್ ಮೆಚ್ಚುಗೆ

ಹನುಮಾನ್ ಸಿನಿಮಾ ಮೂಲಕ ಸೂಪರ್ ಸಕ್ಸಸ್ ಕಂಡಿರುವ ತೆಲುಗಿನ ಯುವ ನಟ ತೇಜ್ ಸಜ್ಜಾ ಹೊಸ ಸಿನಿಮಾ ಅನೌನ್ಸ್ ಆಗಿದೆ. ಕಾರ್ತಿಕೇಯ, ಕಾರ್ತಿಕೇಯ-2 , ಧಮಾಕ ಸೇರಿದಂತೆ ಹಲವು ಹಿಟ್ ಚಿತ್ರ ಕೊಟ್ಟಿರುವ ಕಾರ್ತಿಕ್ ಗಟ್ಟಮ್ನೇನಿ ತೇಜ್ ಸಜ್ಜಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಜೋಡಿಯ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಝಲಕ್ ಇಂದು ಅನಾವರಣಗೊಂಡಿದೆ.

ಹನುಮಾನ್ ನಲ್ಲಿ ಸೂಪರ್ ಹೀರೋ ಆಗಿದ್ದ ತೇಜ್ ಸಜ್ಜಾ ಈಗ ಸೂಪರ್ ಯೋಧನಾಗಿ ಪ್ರತ್ಯಕ್ಷರಾಗಿದ್ದಾರೆ. ಕೈಯಲ್ಲಿ ಸ್ಟಾಫ್ಟ್ ಸ್ಟಿಕ್ ಹಿಡಿದು ದುಷ್ಟರನ್ನು ಸಂಹರಿಸಲು ಪಣ ತೊಟ್ಟಿದ್ದಾರೆ. ಅದಕ್ಕಾಗಿ ತೇಜ್ ಸಜ್ಜಾ ಹೊಸ ಅವತಾರವನ್ನೇ ತಾಳಿದ್ದಾರೆ.

ಕಾರ್ತಿಕ್ ಗಟ್ಟಮ್ನೇನಿ ಹಾಗೂ ತೇಜ್ ಸಜ್ಜಾ ಹೊಸ ಸಿನಿಮಾ ಮಿರಾಯ್ ಎಂಬ ಟೈಟಲ್ ಇಡಲಾಗಿದೆ. ಮಿರಾಯ್ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಬಿಚ್ಚಿಡುವ ಮಿರಾಯ್ ವಿಷ್ಯುವಲ್ ಟ್ರೀಟ್ ನೋಡುಗರಿಗೆ ಹಬ್ಬದಂತಿದೆ.

ಮಿರಾಯ್ ಸಿನಿಮಾಗಾಗಿ ತೇಜ್ ಸಜ್ಜಾ ಕೋಲು ಕಾಳಗ ಕಲಿತಿದ್ದಾರೆ. ಪ್ರತಿ ಫ್ರೇಮ್ ನ್ನು ಕಾರ್ತಿಕ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗೌರ ಹರಿ ಸಂಗೀತ ತೂಕ ಹೆಚ್ಚಿಸಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿಜಿ ವಿಶ್ವಪ್ರಸಾದ್ ಮಿರಾಯ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಕಾರ್ತಿಕ್ ಗಟ್ಟಮ್ನೇನಿ ಮಿರಾಯ್ ಗೆ ಚಿತ್ರಕಥೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದು, ಮಣಿಬಾಬು ಕರಣಂ ಅವರು ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶಕನ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರಾಗಿದ್ದಾರೆ. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರ್ತಿರುವ ಮರೈ ಸಿನಿಮಾವನ್ನು ಏಪ್ರಿಲ್ 18 2025ರಂದು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.

Categories
ಸಿನಿ ಸುದ್ದಿ

ಇದು ಗುರು ಕೊಟ್ಟ ರಾಮರಸ! ರಾಮನವಮಿ ಮರುದಿನ ಗುರು ದೇಶಪಾಂಡೆ ಹೊಸ ಚಿತ್ರ ಅನೌನ್ಸ್

ರಾಮರಸ.... ಇದು ಹೊಸ ಸಿನಿಮಾದ ಶೀರ್ಷಿಕೆ. ಬಿ.ಎಂ ಗಿರಿರಾಜ್ ನಿರ್ದೇಶನದ ಈ ಚಿತ್ರದ ಶೀರ್ಷಿಕೆಯನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಅನಾವರಣಗೊಳಿಸಿದ್ದಾರೆ. ಇದು ಗುರುದೇಶಪಾಂಡೆ ನಿರ್ಮಾಣದ ಸಿನಿಮಾ...

ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ತಮ್ಮ ಜಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ “ಪ್ರೊಡಕ್ಷನ್ ನಂ 4” ಚಿತ್ರದ ಹಾಡುಗಳ ಧ್ವನಿಮುದ್ರಣ (ಸಾಂಗ್ ರೆಕಾರ್ಡಿಂಗ್) ಕೆಲವು ದಿನಗಳ ಹಿಂದೆ ನೆರವೇರಿತ್ತು. ಈಗ ಆ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಚಿತ್ರಕ್ಕೆ “ರಾಮರಸ” ಎಂದು ನಾಮಕರಣ ಮಾಡಲಾಗಿದೆ. “ಜಟ್ಟ”, ” ಮೈತ್ರಿ ಚಿತ್ರಗಳ ಖ್ಯಾತಿಯ ಬಿ.ಎಂ ಗಿರಿರಾಜ್ ನಿರ್ದೇಶಿಸುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿದರು.

ಶ್ರೀರಾಮನವಮಿಯ ದಿವಸದಂದೆ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ನಡೆಯಬೇಕಿತ್ತು. ಆದರೆ ಕಾರಣಾಂತರದಿಂದ ಮಾರನೇ ದಿನ ಬಿಡುಗಡೆಯಾಗುತ್ತಿದೆ. “ರಾಮರಸ” ಟೈಟಲ್ ಚೆನ್ನಾಗಿದೆ. ಮೋಷನ್ ಪೋಸ್ಟರ್ ಕೂಡ ಅದ್ಭುತವಾಗಿದೆ. ಗುರು ದೇಶಪಾಂಡೆ ಅವರು ನಮ್ಮ ಅಣ್ಣನ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ನೂತನ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ‌ .ನನ್ನ ಸ್ನೇಹಿತ ಕೂಡ ಈ ಚಿತ್ರದಲ್ಲಿ ನಟಸುತ್ತಿದ್ದಾನೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಧ್ರುವ ಸರ್ಜಾ ಹಾರೈಸಿದರು.

“ರಾಮರಸ” , ಹಾರಾರ್ ಕಾಮಿಡಿ ಜಾನರ್ ನ ಚಿತ್ರ. ಜಿ ಅಕಾಡೆಮಿಯ ಹದಿನಾರು ಜನ ಹೊಸ ಪ್ರತಿಭೆಗಳಿಗೆ ತರಭೇತಿ ನೀಡಿ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ. ಗುರು ದೇಶಪಾಂಡೆ ಅವರು ಈ ಹಿಂದೆ ಸಾಂಗ್ ರೆಕಾರ್ಡಿಂಗ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದರು. ಇಂದು ಧ್ರುವ ಸರ್ಜಾ ಅವರಿಂದ ಶೀರ್ಷಿಕೆ ಅನಾವರಣವನ್ನು ಮಾಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಂಗ್ ರೆಕಾರ್ಡಿಂಗ್ ಪೂಜೆ ಮಾಡುವುದು ವಿರಳ. ಹಳೆಯ ಸಂಪ್ರದಾಯಗಳನ್ನು ಪುನಃ ಗುರು ದೇಶಪಾಂಡೆ ಅವರು ಚಿತ್ರರಂಗಕ್ಕೆ ತರುತ್ತಿದ್ದಾರೆ ಎಂದು ನಿರ್ದೇಶಕ ಬಿ.ಎಂ.ಗಿರಿರಾಜ್ ತಿಳಿಸಿದರು.

2008 ರಲ್ಲಿ ಮೊದಲ ನಿರ್ದೇಶನದೊಂದಿಗೆ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶಿಸಿದೆ. ಅಂದಿನಿಂದ ನನ್ನ ಹೆಚ್ಚು ಚಿತ್ರಗಳಲ್ಲಿ‌ ಹೊಸ ಕಲಾವಿದರಿಗೆ ಅವಕಾಶ ಕೊಡುತ್ತಾ ಬಂದಿದ್ದೇನೆ. ಇದು ನಮ್ಮ‌ ಜಿ ಸಿನಿಮಾಸ್ ಲಾಂಛನದಲ್ಲಿ ನಾನು ನಿರ್ಮಾಣ ಮಾಡುತ್ತಿರುವ ನಾಲ್ಕನೇ ಸಿನಿಮಾ.‌ ಈ ಚಿತ್ರದಲ್ಲೂ ಜಿ ಅಕಾಡೆಮಿಯ ಹದಿನಾರು ಜನ ನೂತನ ಪ್ರತಿಭೆಗಳು ಅಭಿನಯಿಸುತ್ತಿದ್ದಾರೆ. ಅವರಿಗೆ ಅಭಿನಯಕ್ಕೆ ಬೇಕಾದ ವರ್ಕ್ ಶಾಪ್ ನಡೆಸಲಾಗಿದೆ. ಇವರೊಂದಿಗೆ ಕನ್ನಡದ ಖ್ಯಾತ ನಟರೊಬ್ಬರು ನಟಿಸುತ್ತಿದ್ದು, .ಮಾತುಕತೆ ಅಂತಿಮ ಹಂತದಲ್ಲಿದೆ. ಮೇ ಎರಡನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಂ.ಗಿರಿರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅವರ ಹಿಂದಿನ ಚಿತ್ರಗಳು ನನಗೆ ಬಹಳ ಇಷ್ಟವಾಗಿದ್ದವು. ಕನ್ನಡದಲ್ಲಷ್ಟೇ ಕಮರ್ಷಿಯಲ್, ಆರ್ಟ್ ಅಂತ ವಿಭಾಗಗಳಿದೆ. ಆದರೆ ಬೇರೆ ಭಾಷೆಗಳಲ್ಲಿ ಆ ಚಿತ್ರ ಪ್ರಶಸ್ತಿ ಪಡೆದುಕೊಂಡಿರುತ್ತದೆ ಹಾಗೂ ಗಳಿಕೆಯಲ್ಲೂ ಮುಂದಿರುತ್ತದೆ. ಈ ಚಿತ್ರ ಕೂಡ ಅಂತಹ ಚಿತ್ರವಾಗಬೇಕೆಂದು ನನ್ನ ಆಸೆ. ಬಿ.ಜೆ.ಭರತ್ ಈಗಾಗಲೇ “ರಾಮರಸ” ದ ಎರಡು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಪುನೀತ್ ಆರ್ಯ ಹಾಡುಗಳನ್ನು ಬರೆದಿದ್ದಾರೆ. ಸುನೀಲ್ ಹೆಚ್ ಸಿ ಗೌಡ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ‌ ನಿರ್ವಹಿಸುತ್ತಿದ್ದಾರೆ‌. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ವಿಶೇಷ ಧನ್ಯವಾದ ಎಂದರು ನಿರ್ಮಾಪಕ ಗುರು ದೇಶಪಾಂಡೆ.

ಜಿ ಅಕಾಡೆಮಿಯಲ್ಲಿ ಅಭಿನಯ ಕಲಿತಿರುವ ಹದಿನಾರು ನೂತನ ಪ್ರತಿಭೆಗಳು ಹಾಗೂ ಸಹ ನಿರ್ದೇಶಕರಾಗಿ ಕಾರ್ಯ ನಿರವಹಿಸಲಿರುವ ಮೂವರು ನವ ಸಹ ನಿರ್ದೇಶಕರು ಹಾಗೂ ನೂತನ ಸಹ ನಿರ್ಮಾಪಕರೊಬ್ಬರು ತಮ್ಮ ಪರಿಚಯ ಮಾಡಿಕೊಂಡರು. ಸಂಗೀತ ನಿರ್ದೇಶಕ ಬಿ.ಜೆ.ಭರತ್. ಗೀತರಚನೆಕಾರ ಪುನೀತ್ ಆರ್ಯ, ಕಾರ್ಯಕಾರಿ ನಿರ್ಮಾಪಕ ಸುನೀಲ್ ಹೆಚ್ ಸಿ ಗೌಡ ಹಾಗೂ ವಿತರಕ ವೆಂಕಟ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ನಟಿ ಹರ್ಷಿಕಾ ದಂಪತಿ ಮೇಲೆ ಅಟ್ಯಾಕ್: ಅನ್ಯ ಕೋಮಿನ ಗುಂಪು ಗಲಾಟೆ, ಹಲ್ಲೆ

ನಟಿ ಹರ್ಷಿಕಾ ಪೊಣಚ್ಚ ಹಾಗು ಭುವನ್ ದಂಪತಿ ಮೇಲೆ ಅನ್ಯ ಕೋಮಿನ ಗುಂಪೊಂದು ಗದ್ದಲ ನಡೆಸಿ, ಹಲ್ಲೆ ಮಾಡಿರುವ ಘನೆ ನಡೆದಿದೆ. ಫ್ರೇಜರ್ ಟೌನ್ ನಲ್ಲಿ ಈ ಗಲಾಟೆ ನಡೆದಿದ್ದು ಹರ್ಷಿಕಾ ಹಾಗು ಅವರ ಪತಿ ಭುವನ್ ಮೇಲೆ ಹಲ್ಲೆ ನಡೆಸಲಾಗಿದೆ. ಈ ಕುರಿತು ಸ್ವತಃ ಹರ್ಷಿಕಾ ಅವರು ಅಂದು ನಡೆದ ಘಟನೆ ಕುರಿತು ವಿವರಣೆ ನೀಡಿದ್ದಾರೆ.

ಗೆಳೆಯರೇ,

ನಮ್ಮ ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ?
ನಮಸ್ಕಾರ..ಒಂದಷ್ಟು ಯೋಚಿಸಿ ಕೆಲವು ದಿನಗಳ ಹಿಂದೆ ನಮ್ಮ ಬೆಂಗಳೂರಿನಲ್ಲಿ ನನಗಾದ ಭಯಾನಕ ಅನುಭವವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಸ್ನೇಹಿತರು, ಕುಟುಂಬ ಮತ್ತು ಪೊಲೀಸ್ ಇಲಾಖೆಯಲ್ಲಿನ ಕೆಲವು ಪರಿಚಯಸ್ಥರೊಂದಿಗೆ ಮಾತನಾಡಿದ ನಂತರ ನಾನು ಈ ವಿಷಯವನ್ನು ಅಲ್ಲಿಗೇ ಬಿಟ್ಟು ಬಿಡುತ್ತೇನೆ ಎಂದು ಯೋಚಿಸಿದ್ದೆ. ಆದರೆ ನನ್ನ ಅನುಭವದಿಂದ ಮತ್ತಿರರಿಗೆ ಸಹಾಯ ವಾಗ ಬಹುದು ಎಂದು ಯೋಚಿಸಿ ನಾನು ಅದರ ಬಗ್ಗೆ ಪೋಸ್ಟ್ ಮಾಡಲು ನಿರ್ಧರಿಸಿದೆ.


ಒಂದೆರಡು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ಕರಾಮಾ ಎಂಬ ರೆಸ್ಟೊರೆಂಟ್‌ನಲ್ಲಿ ಸಂಜೆ ಕುಟುಂಬದೊಂದಿಗೆ ಊಟ ಮಾಡಲು ತೆರಳಿದ್ದೆ. ಭೋಜನವನ್ನು ಮುಗಿಸಿದ ನಂತರ ನಾವು ವಾಲೆಟ್ ಪಾರ್ಕಿಂಗ್‌ನಿಂದ ನಮ್ಮ ವಾಹನವನ್ನು ಸ್ವೀಕರಿಸಿ ಹೊರಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಡ್ರೈವರ್ ಸೀಟ್ ಕಿಟಕಿಯ ಬಳಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡು , ನಿಮ್ಮ ವಾಹನವು ತುಂಬಾ ದೊಡ್ಡದಾಗಿದೆ, ಇದ್ದಕ್ಕಿದ್ದಂತೆ ಚಲಿಸಿದಲ್ಲಿ ಅದು ನಮ್ಮನ್ನು ಮುಟ್ಟಬಹುದು ಎಂದು ವಾದಿಸಲು ಪ್ರಾರಂಭಿಸಿದರು.

ನನ್ನ ಪತಿ “ಇನ್ನು ವಾಹನ ಮೂವ್ ಮಾಡಿಲ್ವಲ್ಲ ಸೈಡು ಬಿಡಿ” ಎಂದು ಹೇಳಿದರು ಏಕೆಂದರೆ ಅವರು ಆ ಘಟನೆ ಬಗ್ಗೆ ಮಾತನಾಡುತ್ತಿದ್ದರು ಮತ್ತು ಅದರಲ್ಲಿ ಅರ್ಥವಿರಲಿಲ್ಲ. ನಾವು ವಾಹನವನ್ನು ಸ್ವಲ್ಪ ಮುಂದಕ್ಕೆ ಸರಿಸಿದೆವು, ಅಷ್ಟರೊಳಗೆ ಈ ಇಬ್ಬರು ವ್ಯಕ್ತಿಗಳು ನಮ್ಮನ್ನು ಅವರ ಭಾಷೆಯಲ್ಲಿ ನಿಂದಿಸಲು ಪ್ರಾರಂಭಿಸಿದರು, ಈ ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ಹೇಳಿ ನನ್ನ ಪತಿಯ ಮುಖದ ಮೇಲೆ ಹೊಡೆಯಲು ಸಹ ಪ್ರಯತ್ನಿಸಿದರು. ನನ್ನ ಪತಿ ತುಂಬಾ ತಾಳ್ಮೆಯಿಂದಿದ್ದರು ಮತ್ತು ಹೆಚ್ಚು ಪ್ರತಿಕ್ರಿಯಿಸಲಿಲ್ಲ. ನನಗೆ ಆಶ್ಚರ್ಯವಾಯಿತು ಏಕೆಂದರೆ ಅವರು ಸಾಮಾನ್ಯವಾಗಿ ತುಂಬಾ ಸಿಟ್ಟು ಸ್ವಭಾವದವರು. 2 – 3 ನಿಮಿಷಗಳಲ್ಲಿ ಅದೇ ಗ್ಯಾಂಗ್‌ನ 20 – 30 ಸದಸ್ಯರ ಗುಂಪು ಜಮಾಯಿಸಿತು ಮತ್ತು ಅವರಲ್ಲಿ 2 ಜನರು ನನ್ನ ಗಂಡನ ಚಿನ್ನದ ಸರವನ್ನು ಕಿತ್ತುಕೊಂಡು, ನಂತರ ಅವರು ಅದನ್ನು ಬಹಳ ಕೌಶಲ್ಯದಿಂದ ತಮ್ಮ ಕಡೆಗೆ ಎಳೆಯಲು ಪ್ರಯತ್ನಿಸಿದರು.

ನನ್ನ ಪತಿ ಇದನ್ನು ಸಮಯಕ್ಕೆ ಸರಿಯಾಗಿ ಅರಿತುಕೊಂಡರು ಮತ್ತು ಅದನ್ನು ಹಿಡಿದಿಟ್ಟುಕೊಂಡು ನನಗೆ ಕೊಟ್ಟರು. ಅಷ್ಟೊತ್ತಿಗಾಗಲೇ ಇಡೀ ತಂಡವು ಚಿನ್ನದ ಸರ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೈಗೆ ಸಿಗದಂತೆ ರೊಚ್ಚಿಗೆದ್ದು ವಾಹನಕ್ಕೆ ಹಾನಿ ಮಾಡಿ ನಮಗೆ ಅಥವಾ ಯಾರಿಗೂ ಅರ್ಥವಾಗದ ವಿಷಯಗಳನ್ನು ಹೇಳಿ ನಮ್ಮನ್ನು ದೈಹಿಕವಾಗಿ ನಿಂದಿಸಲು ಪ್ರಯತ್ನಿಸಿದರು. ನಮ್ಮ ವಾಹನದಲ್ಲಿ ಮಹಿಳೆಯರು ಮತ್ತು ಕುಟುಂಬದವರು ಇದ್ದ ಕಾರಣ ನನ್ನ ಪತಿ ಹೆಚ್ಚು ಪ್ರತಿಕ್ರಿಯಿಸಲಿಲ್ಲ. ಅಲ್ಲದೆ ನಾನು ಗಮನಿಸಿದ್ದು ಏನೆಂದರೆ ಇವರಿಗೆ ನಾವು ಕನ್ನಡದಲ್ಲಿ ಮಾತನಾಡುತ್ತಿದ್ದೇವೆ ಎಂಬುದು ಸಮಸ್ಯೆ ಆಗಿತ್ತು.

ಅವರು ನೀವು ನಮ್ಮ ಪ್ರದೇಶಕ್ಕೆ ಬಂದಂತೆ ಮತ್ತು ನಿಮಗೆ ಬೇಕಾದ ಭಾಷೆಗಳಲ್ಲಿ ಮಾತನಾಡುವುದನ್ನು ನಿಲ್ಲಿಸಿ. “ಯೇ ಲೋಕಲ್ ಕನ್ನಡ್ ವಾಲಾ ಹೇ” (ಈ ವ್ಯಕ್ತಿಗಳು ಸ್ಥಳೀಯ ಕನ್ನಡ ಜನರು) ನನ್ನ ಗಂಡ ಮತ್ತು ನಾನು ಕನ್ನಡದಲ್ಲಿ ಮಾತ್ರ ಮಾತನಾಡಿದಾಗ ಅದು ಅವರನ್ನು ಹೆಚ್ಚು ಕೆರಳಿಸಿತು. ನಿಮ್ಮ “ಕನ್ನಡ ಸ್ಟೈಲ್”ಯನ್ನು ನೀವೇ ಇಟ್ಟುಕೊಳ್ಳಿ ಎಂದರು.

ಅವರಲ್ಲಿ ಹೆಚ್ಚಿನವರು ಹಿಂದಿ, ಉರ್ದು ಅಥವಾ ಇಂಗ್ಲಿಷ್ ಮತ್ತು ಕೆಲವರು ಮುರಿದ ಕನ್ನಡದಲ್ಲಿ ಮಾತನಾಡುತ್ತಿದ್ದರು. ನಾನು ಇನ್ಸ್‌ಪೆಕ್ಟರ್‌ಗೆ ತುರ್ತು ಕರೆ ಮಾಡಿದಾಗ ಅವರೆಲ್ಲರೂ ಏನೂ ಆಗಿಲ್ಲ ಎಂಬಂತೆ ಕೆಲವೇ ಸೆಕೆಂಡುಗಳಲ್ಲಿ ಚದುರಿಹೋದರು. ನಾವು ಅವರನ್ನು ಹುಡುಕಲು ಪ್ರಯತ್ನಿಸಿದೆವು ಆದರೆ ಅವರು ಕೆಲವೇ ಸೆಕೆಂಡುಗಳಲ್ಲಿ ಗಾಳಿಯಲ್ಲಿ ಕಣ್ಮರೆಯಾದರು. ನಾವು ಸಮೀಪದಲ್ಲಿ ಗಸ್ತು ಪೊಲೀಸ್ ವಾಹನವನ್ನು ಕಂಡು ಘಟನೆಯನ್ನು ಹತ್ತಿರದ ಪೊಲೀಸ್ ಠಾಣೆಯ ASI ಶ್ರೀ ಉಮೇಶ್ ಅವರಿಗೆ ವಿವರಿಸಿದೆವು, ಅವರು ನಮಗೆ ಸಹಾಯ ಮಾಡಲು ಆಸಕ್ತಿ ತೋರಲಿಲ್ಲ.

ಇಲಾಖೆಯ ಮೇಲಧಿಕಾರಿಗಳ ಜತೆ ಮಾತನಾಡಬೇಕು ಎಂದ ಅವರು, ಬಂದು ಏನಾಯಿತು ಎಂದು ತಿಳಿದುಕೊಳ್ಳುವ ಸೌಜನ್ಯವೂ ಇಲ್ಲ. ಕೇವಲ 2 ಕಟ್ಟಡಗಳ ಮುಂದಿರುವ ರೆಸ್ಟೊರೆಂಟ್‌ನ ಮುಂದೆ ಮೂಸಂಬಿ ಜ್ಯೂಸ್ ಕುಡಿಯುತ್ತ ಕಾರ್ ನಲ್ಲಿ ಕುಳಿತಿದ್ದರು.
ಈ ಘಟನೆಯ ನಂತರ ನಾನು ಮಾನಸಿಕವಾಗಿ ಸಂಪೂರ್ಣ ಆಘಾತಕ್ಕೊಳಗಾಗಿದ್ದೇನೆ. ನಾನು ಹುಟ್ಟಿ ಬೆಳೆದ ನಗರದಲ್ಲಿ ಹೊರಗೆ ಹೋಗಲು ನನಗೆ ಇನ್ನೂ ಭಯವಾಗುತ್ತಿದೆ. ನನಗೆ ಜೀವನದಲ್ಲಿ ಎಲ್ಲವನ್ನು ಕೊಟ್ಟ ನಗರದಲ್ಲಿ ಇಂತಹ ಅನುಭವ ಆಗಿದ್ದು ಇದೇ ಮೊದಲು. ಇದನ್ನು ಪೊಲೀಸ್ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಗಮನಕ್ಕೆ ತರಲು ಮತ್ತು ಭವಿಷ್ಯದಲ್ಲಿ ಯಾವುದೇ ಮಹಿಳೆ ಅಥವಾ ಕುಟುಂಬವು ಬೆಂಗಳೂರಿನಲ್ಲಿ ಇಂತಹ ಅಗ್ನಿಪರೀಕ್ಷೆಗಳಿಗೆ ಒಳಗಾಗಬಾರದು ಎಂದು ನಾನು ಇದನ್ನು ಪೋಸ್ಟ್ ಮಾಡುತ್ತಿದ್ದೇನೆ. ಬೆಂಗಳೂರಿನಲ್ಲಿ ಶಾಂತಿಯುತವಾಗಿ ಜೀವನ ನಡೆಸುತ್ತಿರುವ ಜನರೊಂದಿಗೆ ಇಂತಹ ಗಲಾಟೆ ಸೃಷ್ಟಿಸುವ ಹಕ್ಕು ಯಾರಿಗೂ ಇಲ್ಲ! ಇದನ್ನು ಕಣ್ಣೆದುರು ನೋಡುತ್ತಿರುವಾಗ ನನ್ನ ಮನಸ್ಸಿನಲ್ಲಿ ಒಂದೆರಡು ಪ್ರಶ್ನೆಗಳು ಮೂಡಿದವು.

  1. ನಾವು ಪಾಕಿಸ್ತಾನದಲ್ಲಿ ಅಥವಾ ಅಫ್ಗಾನಿಸ್ತಾನದಲ್ಲಿ ವಾಸಿಸುತ್ತಿದ್ದೇವೆಯೇ ??
  2. ನಮ್ಮ ಊರು ಬೆಂಗಳೂರಿನಲ್ಲಿ ನನ್ನ ಭಾಷೆ ಕನ್ನಡವನ್ನು ಬಳಸುವುದು ತಪ್ಪಾ???
  3. ನಮ್ಮ ಸ್ವಂತ ನಗರದಲ್ಲಿ ನಾವು ಎಷ್ಟು ಸುರಕ್ಷಿತವಾಗಿರುತ್ತೇವೆ?
  4. ಇಲ್ಲಿಯೇ ನಮ್ಮ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಇಂತಹ ದೀರ್ಘಾವಧಿಯ ಮಾನಸಿಕ ಆಘಾತಕ್ಕೆ ಕಾರಣವಾಗುವ ಇಂತಹ ಘಟನೆಗಳನ್ನು ಮುಚ್ಚಿ ಹಾಕಬೇಕೆ ?
    ಈ ಇಡೀ ಘಟನೆಯ ನಡುವೆ ನನ್ನ ಕುಟುಂಬದ ಸದಸ್ಯರು ಚಿತ್ರೀಕರಿಸಿದ ವೀಡಿಯೊವನ್ನು ಪೋಸ್ಟ್ ಮಾಡುತ್ತಿದ್ದೇನೆ. ಅಷ್ಟು ಸ್ಪಷ್ಟವಾಗಿಲ್ಲ ಹಾಗು ಘಟನೆಯ ಮದ್ಯದಿಂದ ಅವರಿಗೆ ತಿಳಿದಷ್ಟು ಚಿತ್ರೀಕರಿಸಿದ್ದಾರೆ.
    ಈ ಇಡೀ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
    ಧನ್ಯವಾದಗಳು
    ಹರ್ಷಿಕಾ ಪೂಣಚ್ಚ , ನಟಿ
error: Content is protected !!