ಫಾದರ್ ಸಿನಿಮಾಗೆ ಚಾಲನೆ ಕೊಟ್ಟ ಶಿವಣ್ಣ ದಂಪತಿ: ಇದು ಆರ್ ಸಿ ಸ್ಟುಡಿಯೋಸ್ ಪ್ಯಾನ್ ಇಂಡಿಯಾ ಚಿತ್ರ

ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕೆಲವು ದಿನಗಳ ಹಿಂದೆ ಆರ್ ಸಿ ಸ್ಟುಡಿಯೋಸ್ ಎಂಬ ನಿರ್ಮಾಣ‌ ಸಂಸ್ಥೆ ಆರಂಭಿಸುವುದರ ಮೂಲಕ ಐದು ಸಿನಿಮಾಗಳನ್ನು ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಆ ಪೈಕಿ ಮೊದಲ ಚಿತ್ರವಾಗಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ “ಫಾದರ್” ಚಿತ್ರ ನಿರ್ಮಾಣವಾಗುತ್ತಿದೆ. ಇತ್ತೀಚಿಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರು ಆರಂಭ ಫಲಕ ತೋರುವುದರ ಮೂಲಕ “ಫಾದರ್ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದರು.ರಾಜಕೀಯ ಮುಖಂಡ ಎಚ್.ಎಂ.ರೇವಣ್ಣ, ಶಾಸಕ ಪ್ರದೀಪ್ ಈಶ್ವರ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಬಹದ್ದೂರ್ ಚೇತನ್ ಕುಮಾರ್, ಮಂಜುನಾಥ್, ಮಮತ ದೇವರಾಜ್, ಮಂಜುನಾಥ್ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಆರ್ ಚಂದ್ರು ನನ್ನ ಆತ್ಮೀಯರು. ಸಿನಿಮಾವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಆರ್ ಸಿ ಸ್ಟುಡಿಯೋಸ್ ಮೂಲಕ ಮೊದಲ ಚಿತ್ರವಾಗಿ ” ಫಾದರ್” ಚಿತ್ರ ಆರಂಭಿಸಿದ್ದಾರೆ. ಚಂದ್ರು ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭವಾಗಲಿ ಎಂದು ಶಿವರಾಜಕುಮಾರ್ ಹಾರೈಸಿದರು.

ನನ್ನ “ಚಾರ್ ಮಿನಾರ್” ಚಿತ್ರ ಆರಂಭವಾದಗಿನಿಂದ ಹಿಡಿದು ಈವರೆಗೂ ನನಗೆ ಶಿವಣ್ಣ ಹಾಗೂ ಗೀತಾ ಶಿವರಾಜಕುಮಾರ್ ಅವರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಚುನಾವಣೆ ಸಮಯ. ಆದರೂ ಇಂದು ಇಲ್ಲಿಗೆ ಆಗಮಿಸಿ, ನಮ್ಮ “ಫಾದರ್” ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಅವರಿಗೆ ಹಾಗೂ ಆಗಮಿಸಿರುವ ಎಲ್ಲಾ ಗಣ್ಯರಿಗೂ ಧನ್ಯವಾದ ತಿಳಿಸುತ್ತೇನೆ. ಕೆಲವು ದಿನಗಳ ಮುಂಚೆ ನಮ್ಮ ಆರ್ ಸಿ ಸ್ಟುಡಿಯೋಸ್ ಸಂಸ್ಥೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು.

ಈ ಸಂಸ್ಥೆಯಿಂದ ಒಂದು ವರ್ಷದಲ್ಲಿ ಐದು ಸಿನಿಮಾಗಳನ್ನು ನಿರ್ಮಿಸುವುದಾಗಿ ಹೇಳಿದ್ದೆ. ಅದರ ಮೊದಲ ಹೆಜ್ಜೆಯಾಗಿ ಇಂದು “ಫಾದರ್” ಚಿತ್ರ ಆರಂಭವಾಗಿದೆ. ಶಿವಣ್ಣ ಅವರ “ಭೈರಾಗಿ” ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ರಾಜ್ ಮೋಹನ್ ಈ ಚಿತ್ರದ ನಿರ್ದೇಶಕರು. ಡಾರ್ಲಿಂಗ್ ಕೃಷ್ಣ ನಾಯಕರಾಗಿ, ಅಮೃತ ಅಯ್ಯಂಗಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಪ್ರಕಾಶ್ ರೈ, ಸುನೀಲ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮುಂಬೈನ ಆನಂದ್ ಪಂಡಿತ್ ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. “ಹನುಮಾನ್” ಚಿತ್ರದ ಖ್ಯಾತಿಯ ಹರಿ ಸಂಗೀತ ನೀಡುತ್ತಿದ್ದಾರೆ. ನಮ್ಮ “ಫಾದರ್” ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಆರ್ ಚಂದ್ರು ತಿಳಿಸಿದರು.

ಇದೊಂದು ತಂದೆ – ಮಗನ ಬಾಂಧವ್ಯದ ಚಿತ್ರ. ಕಥೆ ತುಂಬಾ ಚೆನ್ನಾಗಿದೆ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು “ಫಾದರ್” ಚಿತ್ರದಲ್ಲಿದೆ ಎಂದರು ನಿರ್ದೇಶಕ ರಾಜ್ ಮೋಹನ್.

ನಿರ್ದೇಶಕರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ಆರ್ ಚಂದ್ರು ಅವರ ಜೊತೆಗೆ ಇದು ನನ್ನ ಮೊದಲ ಚಿತ್ರ ಎಂದು ನಾಯಕ ಡಾರ್ಲಿಂಗ್ ಕೃಷ್ಣ ತಿಳಿಸಿದರು.

ಕಥೆ ಹಾಗೂ ನನ್ನ ಪಾತ್ರ ಎರಡು ತುಂಬಾ ಚೆನ್ನಾಗಿದೆ ಎಂದರು ನಾಯಕಿ ಅಮೃತ ಅಯ್ಯಂಗಾರ್. ಸಂಗೀತ ನಿರ್ದೇಶಕ ಹರಿ ಸೇರಿದಂತೆ ಅನೇಕರು ಚಿತ್ರದ ಕುರಿತು ಮಾತನಾಡಿದರು.

Related Posts

error: Content is protected !!