ಲಹರಿ ವೇಲು ಗಾಯನ ಮಾಡಿದ್ದು ಗೊತ್ತೇ ಇದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರೀಗ ಹಾಡೊಂದಕ್ಕೆ ಸಾಹಿತ್ಯ ಬರೆದು, ಅವರೇ ಹಾಡಿದ್ದಾರೆ. ಅಭಿಮನ್ ರಾಯ್ ಆ ಹಾಡಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಜೂನ್ 11ರಂದು ವೇಲು ಅವರ ಹುಟ್ಟು ಹಬ್ಬ. ಅಂದು ‘ಹುಟ್ಗುಣ ಸುಟ್ರು ಹೋಗಲ್ಲ’ ಶೀರ್ಷಿಕೆಯ ಹಾಡು ಲಹರಿ ಮ್ಯೂಸಿಕ್ ನಲ್ಲಿ ರಿಲೀಸ್ ಆಗಲಿದೆ…
ಕನ್ನಡ ಚಿತ್ರರಂಗದಲ್ಲಿ ಲಹರಿ ಸಂಸ್ಥೆ ದೊಡ್ಡ ಛಾಪು ಮೂಡಿಸಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇಂದು ಪ್ಯಾನ್ ಇಂಡಿಯಾ ಮ್ಯೂಸಿಕ್ ಸಂಸ್ಥೆಯಾಗಿ ಬೆಳೆದಿರುವ ಲಹರಿ ಮ್ಯೂಸಿಕ್ ಸಂಸ್ಥೆ, ಯುಟ್ಯೂಬ್ ಕೊಡ ಮಾಡುವ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಅಷ್ಟೇ ಅಲ್ಲ, ಲಹರಿ ಮ್ಯೂಸಿಕ್ ಸಂಸ್ಥೆ ನಿರ್ಮಿಸಿದ ಆಲ್ಬಂ ಸಾಂಗ್ ಗೆ ಗ್ರ್ಯಾಮಿ ಅವಾರ್ಡ್ ಕೂಡ ಲಭಿಸಿರುವುದು ಕನ್ನಡಕ್ಕೆ ಮತ್ತು ಭಾರತೀಯ ಚಿತ್ರರಂಗಕ್ಕೆ ಸಂತಸದ ವಿಷಯ. ಹಲವು ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸಿರುವ ಲಹರಿ ಸಂಸ್ಥೆ, ನಿರಂತರವಾಗಿ ಸಿನಿಮಾ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿದೆ. ಈಗ ಲಹರಿ ಸಂಸ್ಥೆ ಕುರಿತು ಇಷ್ಟೊಂದು ಪೀಠಿಕೆ ಯಾಕೆ ಗೊತ್ತಾ?
ಲಹರಿ ಮ್ಯೂಸಿಕ್ ಅಂದಾಕ್ಷಣ, ಥಟ್ಟನೆ ನೆನಪಾಗೋದೇ ಲಹರಿ ವೇಲು ಮತ್ತು ಅವರ ಪ್ರೀತಿಯ ಸಹೋದರ ಮನೋಹರ ನಾಯ್ಡು. ಸರಿಸುಮಾರು ನಾಲ್ಕು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಂಸ್ಥಗೆ ಈ ಇಬ್ಬರು ಸಹೋದರರು ಭದ್ರ ಬುನಾದಿ ಹಾಕಿದ್ದಾರೆ. ಲಹರಿ ವೇಲು ಅದ್ಬುತ ಮಾತುಗಾರರು. ಯಾವುದೇ ವಿಷಯವಿರಲಿ, ಅದನ್ನು ನಿರರ್ಗಳವಾಗಿ ಗಂಟೆಗಟ್ಟಲೆ ಮಾತಾಡುವ ವಾಕ್ಚಾತುರ್ಯ ಅವರಲ್ಲಿದೆ. ಬಹಳಷ್ಟು ಮಂದಿಗೆ ವೇಲು ಒಬ್ಬ ಒಳ್ಳೆಯ ವ್ಯಕ್ತಿ, ಎಲ್ಲರನ್ನೂ ಆತ್ಮೀಯವಾಗಿ ಮಾತಾಡಿಸುವ ವ್ಯಕ್ತಿತ್ವ ಅವರದು ಅನ್ನುವುದಷ್ಟೇ ಗೊತ್ತು. ಅದರಾಚೆಗೆ ಅವರೊಬ್ಬ ಗಾಯಕರು ಅನ್ನೋದು ಗೊತ್ತಿಲ್ಲ. ಬರೀ ಗಾಯಕರಷ್ಟೇ ಅಲ್ಲ, ಅವರೊಬ್ಬ ಗೀತರಚನೆಕಾರರೂ ಹೌದು.
ಗಾಯಕ ಕಮ್ ಗೀತ ಸಾಹಿತಿ
ನಿಜ, ಲಹರಿ ವೇಲು ಅವರೊಳಗೊಬ್ಬ ಗಾಯಕ ಕಮ್ ಬರಹಗಾರನಿದ್ದಾನೆ. ಅದು ಈಗಾಗಲೇ ಸಾಬೀತಾಗಿದೆ ಕೂಡ. ಕಳೆದ ಕೊರೊನೊ ವೇಳೆ ಲಹರಿ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದವರನ್ನು ಗುರುತಿಸಿ ಆ ಮೂಲಕ ಒಂದಷ್ಟು ಸಹಾಯ ಹಸ್ತ ಚಾಚಿದ್ದು ಗೊತ್ತೇ ಇದೆ. ಅದೇ ಸಮಯದಲ್ಲಿ ಹಾಗೆ ಸುಮ್ಮನೆ ಹಾಡನ್ನು ಗುನುಗುವಾಗ ಸಂಗೀತ ನಿರ್ದೇಶಕ ಅಭಿಮನ್ ರಾಯ್ ಅವರು, ಲಹರಿ ವೇಲು ಅವರ ಹಾಡುವ ಧ್ವನಿ ಗಮನಿಸಿ, ನೀವೊಂದು ಹಾಡು ಹಾಡಬಾರದೇಕೆ ಎಂದು ಪ್ರಶ್ನಿಸಿದ್ದಾರೆ. ಅದರ ಬೆನ್ನಲ್ಲೇ ಲಹರಿ ವೇಲು ಕೂಡ ಪ್ರಯತ್ನಕ್ಕೆ ಮುಂದಾಗಿದ್ದಾರೆ. ‘ ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ’ ಗೀತೆ ಬರೆದ ನಮ್ ರಿಷಿ ಬರೆದ ‘ಇರುವುದೊಂದೆ ಜನ್ಮ ನೀ ಸಹಾಯ ಮಾಡು ತಮ್ಮ’ ಎಂಬ ಮಾನವೀಯ ಮೌಲ್ಯ ಸಾರುವ ಗೀತೆಗೆ ವೇಲು ಅವರು ಧ್ವನಿಯಾಗಿದ್ದಾರೆ. ಆ ಹಾಡು ಲಹರಿ ಮ್ಯೂಸಿಕ್ ನಲ್ಲಿ ರಿಲೀಸ್ ಆಗಿದ್ದೇ ತಡ ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಈಗ ಒಂದು ಮಿಲಿಯನ್ (ಹತ್ತು ಲಕ್ಷ) ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.
ಇದರ ಬೆನ್ನ ಹಿಂದೆಯೇ ಇದೀಗ ಲಹರಿ ವೇಲು ಅವರು ಮತ್ತೊಂದು ಅದ್ಭುತ ಗೀತೆಗೆ ಧ್ವನಿಯಾಗಿದ್ದಾರೆ. ಹಾಡುವುದರ ಜೊತೆಗೆ ಅವರು ತಾನೊಬ್ಬ ಗೀತ ಸಾಹಿತಿಯೂ ಆಗಿದ್ದಾರೆ. ಹೌದು, ಮತ್ತದೇ ಟೀಮ್ ಜೊತೆ ಸೇರಿಕೊಂಡು ಲಹರಿ ವೇಲು ಒಂದೊಳ್ಳೆಯ ಗೀತೆ ಬರೆದು ಹಾಡಿದ್ದಾರೆ. ‘ ಹುಟ್ಗುಣ ಸುಟ್ರು ಹೋಗಲ್ಲ’ ಎಂಬ ಹಾಡನ್ನು ಸ್ವತಃ ರಚಿಸಿದ ವೇಲು, ಅದನ್ನು ಸಂಗೀತ ನಿರ್ದೇಶಕ ಅಭಿಮನ್ ರಾಯ್ ಅವರ ಬಳಿ ಹೇಳಿದ್ದಾರೆ. ಆ ಸಾಲುಗಳನ್ನು ಗಮನಿಸಿದ ಅಭಿಮನ್ ರಾಯ್, ವೇಲು ಅವರಿಂದ ಆ ಹಾಡನ್ನು ಸಂಪೂರ್ಣ ಬರೆಸಿ, ಅರ್ಥಪೂರ್ಣವಾದ ಹಾಡಿಗೆ ರಾಗ ಸಂಯೋಜನೆ ಮಾಡಿದ್ದಾರೆ. ವೇಲು ಬರೆದ ಹಾಡಿಗೆ ಅವರಿಂದಲೇ ಹಾಡಿಸಿದ್ದಾರೆ. ವೇಲು ಅವರ ಜೊತೆ ಈ ಹಾಡಿಗೆ ವೇದಾ ವೆಂಕಟೇಶ್ ಭಟ್ ಕೂಡ ಧ್ವನಿಯಾಗಿದ್ದಾರೆ. ಆ ಹಾಡು ಜೂನ್ 11ರಂದು ಲಹರಿ ಮ್ಯೂಸಿಕ್ ನಲ್ಲಿ ರಿಲೀಸ್ ಆಗುತ್ತಿದೆ. ವಿಶೇಷವಾಗಿ ಈ ಹಾಡನ್ನು ಬಿಡುಗಡೆ ಮಾಡುತ್ತಿರುವ ಉದ್ದೇಶ, ಜೂನ್ 11 ಲಹರಿ ವೇಲು ಅವರ ಹುಟ್ಟು ಹಬ್ಬ. ತಮ್ಮ 57 ನೇ ವಸಂತಕ್ಕೆ ಕಾಲಿಡುತ್ತಿರುವ ವೇಲು ಅವರಿಗಾಗಿ ಅಭಿಮನ್ ರಾಯ್ ಈ ಹಾಡನ್ನು ಅಂದೇ ರಿಲೀಸ್ ಮಾಡುತ್ತಿದ್ದಾರೆ.
ಅದೇನೆ ಇರಲಿ, ತಮ್ಮ ಮತ್ತೊಂದು ಗೀತೆ ಕುರಿತು ಲಹರಿ ವೇಲು ಅವರು ಹೇಳುವುದಿಷ್ಟು. ‘ಅಭಿಮನ್ ರಾಯ್ ಅವರ ರಾಗ ಸಂಯೋಜನೆಯಲ್ಲಿ ಒಂದು ಹಾಡು ಹಾಡಿದ್ದೆ. ಅದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿತ್ತು. ಇತ್ತೀಚೆಗೆ ಅಭಿಮನ್ ರಾಯ್ ಲಹರಿ ಸಂಸ್ಥೆ ಕಚೇರಿಗೆ ಬಂದಾಗ, ನಾನು ಒಂದಷ್ಟು ಸ್ಪೂರ್ತಿದಾಯಕ ಎನಿಸುವ ಪದಗಳನ್ನು ಬರೆದಿದ್ದೆ. ಅದನ್ನು ಅಭಿಮನ್ ಗಮನಿಸಿ, ಪದಗಳಲ್ಲಿ ಸಾಕಷ್ಟು ಅರ್ಥವಿದೆ. ಇನ್ನಷ್ಟು ಬರೆದು ಪೂರ್ಣಗೊಳಿಸಿ ಇದಕ್ಕೆ ರಾಗ ಸಂಯೋಜಿಸುತ್ತೇನೆ ಅಂದರು. ನಾನು ಅನುಭವಿಸಿದ, ನೋಡಿದ ಸಂದರ್ಭ ನೆನೆದು ಒಂದಷ್ಟು ಸಾಲು ಬರೆದೆ. ಅದೀಗ ಹಾಡಿನ ರೂಪದಲ್ಲಿ ಹೊರ ಬರಲಿದೆ. ಎಲ್ಲರೂ ತೋರಿದ ಪ್ರೀತಿಯಿಂದ ಹಾಡು ಬರೆಯೋಕೆ ಸಾಧ್ಯವಾಗಿದೆ’ ಎನ್ನುತ್ತಾರೆ ವೇಲು.
ಅಂದಹಾಗೆ, ‘ಹುಟ್ಗುಣ ಸುಟ್ರು ಹೋಗಲ್ಲ’ ಗೀತೆ ಮತ್ತೊಂದು ಮೆಚ್ಚುಗೆಯ ಹಾಡಾಗಲಿ, ಎಲ್ಲರೂ ಗುನುಗುವಂತಾಗಲಿ ಎಂಬುದು ಆಶಯ.