ವಿಲನ್ ಹೀರೋನೂ ಆಗಬಹುದು.. ಹೀರೋ ಸಿಂಗರ್ ಆಗಬಹುದು ಅನ್ನೋದು ಸಾಬೀತು ಮಾಡಿದವರು ಕಂಚಿನ ಕಂಠದ ಗಾಯಕ, ಖಡಕ್ ಖಳನಟ, ಹ್ಯಾಂಡ್ಸಮ್ ಹೀರೋ ವಸಿಷ್ಠ ಸಿಂಹ. ಇಂದು ವಸಿಷ್ಠ ಸಿಂಹ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಮತ್ತು ಗಾಯಕ ಕೂಡ. ಟಾಲಿವುಡ್ ನಲ್ಲಿಯೂ ಮಿಂಚುತ್ತಿರುವ ಪ್ರತಿಭಾನ್ವಿತ ನಾಯಕ ನಟ ಅನ್ನೋದು ವಿಶೇಷ. ಗಾಯಕನಾಗಿ ಸಾಧನೆ ಮಾಡಬೇಕೆಂಬ ಕನಸು ಹೊತ್ತು ಬಂದ ವಸಿಷ್ಠ ಅವರಿಗೆ ನಾಯಕನಟ, ಖಳನಟನಾಗಿಯೂ ಕಮಾಲ್ ಮಾಡುವ ಅವಕಾಶ ಸಿಕ್ತು. ಈ ಅವಕಾಶ ಸದುಪಯೋಗಪಡಸಿಕೊಂಡು ಸಕ್ಸಸ್ ಕಾಣುತ್ತಲೇ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ತಮ್ಮದೇ ಆಡಿಯೋ ಸಂಸ್ಥೆಯನ್ನು ಅನಾವರಣ ಮಾಡಿದ್ದಾರೆ….
ಸಿಂಹಾ ಆಡಿಯೋ ಲೋಗೋ ಲಾಂಚ್
ಅಪ್ಪನ ಮುದ್ದಿನ ಮಗನಾಗಿರುವ ವಸಿಷ್ಠ ತಂದೆಯ ಹೆಸರಿನಡಿ, ತನ್ನ ನೆಚ್ಚಿನ ಆರಾಧ್ಯ ತಾಯಿ ಚಾಮುಂಡೇಶ್ವರಿ ನೆನೆಪಿನಾರ್ಥವಾಗಿ ಸಿಂಹಾ ಎಂಬ ಹೆಸರಿನಡಿ ಆಡಿಯೋ ಕಂಪನಿ ಶುರು ಮಾಡಿದ್ದಾರೆ. ನೆಚ್ಚಿನ ಗೆಳೆಯನ ಹಾಗೂ ಅಚ್ಚುಮೆಚ್ಚಿನ ಗುರು ಸ್ವರಬ್ರಹ್ಮ ಹಂಸಲೇಖ ಸಾಥ್ ನಲ್ಲಿ ಆಡಿಯೋ ಲೋಗೋ ಅನಾವರಣಗೊಂಡಿದೆ.
ಕಾಲಚಕ್ರ ಹಾಡು ಬಿಡುಗಡೆ
ಸುಮನ್ ಕ್ರಾಂತಿ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬಂದಿರುವ, ವಿಭಿನ್ನ ಗೆಟಪ್ ನಲ್ಲಿ ವಸಿಷ್ಠ ಬಣ್ಣ ಹಚ್ಚಿರುವ ಕಾಲಚಕ್ರ ಸಿನಿಮಾದ ನೀನೇ ಬೇಕು ಎಂಬ ಹಾಡು ವಸಿಷ್ಠ ಸಿಂಹ ಸಾರಥ್ಯದ ಸಿಂಹಾ ಆಡಿಯೋ ಕಂಪನಿಯಲ್ಲಿ ಬಿಡುಗಡೆಯಾಗಿದೆ. ತಮ್ಮದೆ ಸಿನಿಮಾದ ಮೊದಲ ಹಾಡು ತಮ್ಮದೇ ಆಡಿಯೋ ಕಂಪನಿ ಪಾಲಾಗಿರೋದು ವಸಿಷ್ಠಗೆ ಡಬ್ಬಲ್ ಖುಷಿಕೊಟ್ಟಿದೆ.
ಅಂದಹಾಗೆ ವಸಿಷ್ಠ ಸಿಂಹ ಕಿರಿಕ್ ಪಾರ್ಟಿ’ ಸಿನಿಮಾದ ‘ನೀಚ ಸುಳ್ಳು ಸುತ್ತೋ ನಾಲಿಗೆ..’, ‘ದಯವಿಟ್ಟು ಗಮನಿಸಿ..’ ಸಿನಿಮಾದ ‘ಮರೆತೇ ಹೋದೆನು..’ ಸೇರಿ ಹಲವು ಹಾಡುಗಳನ್ನು ಅವರು ಹಾಡಿದ್ದಾರೆ. ಅವರಿಗೆ ಸಂಗೀತದ ಮೇಲೂ ಆಸಕ್ತಿ ಹಾಗೂ ಹೊಸ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಿಂಹಾ ಆಡಿಯೋ ಸಂಸ್ಥೆ ಕಣ್ತೆರೆದಿದ್ದು, ದೊಡ್ಡ ಎತ್ತರಕ್ಕೆ ಬೆಳೆಯಲಿ ಅನ್ನೋದು ಅಭಿಮಾನಿಗಳ ಹಾರೈಕೆ.