ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳ ಟೈಟಲ್ ಮರುಬಳಕೆ ಆಗುವುದು ಹೊಸತೆನಲ್ಲ. ಈಗ ಡೈನಾಮಿಕ್ ಸ್ಟಾರ್ ದೇವರಾಜ್ ನಟನೆಯ ‘ಹುಲಿಯಾ’ ಶೀರ್ಷಿಕೆ ಮರುಬಳಕೆ ಮಾಡಿಕೊಂಡು ಹೊಸ ಚಿತ್ರವೊಂದು ತಯಾರಾಗುತ್ತಿದೆ. ತೂತುಮಡಿಕೆ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ಯುವ ನಿರ್ದೇಶಕ ಕಂ ನಟ ಚಂದ್ರಕೀರ್ತಿ ಎರಡನೇ ಹೆಜ್ಜೆಗೆ ‘ಹುಲಿಯಾ’ ಎಂಬ ಟೈಟಲ್ ಇಡಲಾಗಿದೆ. ದೇವರಾಜ್ ಅವರ ಆಶೀರ್ವಾದೊಂದಿಗೆ ಶುರುವಾಗುತ್ತಿರುವ ಈ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ಪೋಸ್ಟರ್ 50ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಂದ ಏಕಕಾಲಕ್ಕೆ ಬಿಡುಗಡೆಯಾಗಿದೆ.
ಸಿಲಿಕಾನ್ ಸಿಟಿ, ಕಿಸ್, ಮೂಕವಿಸ್ಮಿತ, ಬೆಂಕಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಚಂದ್ರಕೀರ್ತಿ ತೂತುಮಡಿಕೆ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. ಮೊದಲ ಚಿತ್ರದಲ್ಲಿಯೇ ಗಮನಸೆಳೆದಿದ್ದ ಅವರಿಗೆ ಹುಲಿಯಾ ಮೂಲಕ ಲವ್ ಹಾಗೂ ಆಕ್ಷನ್ ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರನ್ನು ರಂಜಿಸಲು ಅಣಿಯಾಗುತ್ತಿದ್ದಾರೆ.
ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಚಂದ್ರಕೀರ್ತಿ ನಾಯಕನಾಗಿಯೂ ನಟಿಸುತ್ತಿದ್ದಾರೆ. ಹುಲಿಯಾ ಪೋಸ್ಟರ್ ನಲ್ಲಿ ಅವರು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ತೂತುಮಡಿಕೆ ಸಿನಿಮಾ ನಿರ್ಮಾಣ ಮಾಡಿದ್ದ ಸರ್ವತಾ ಸಿನಿ ಗ್ಯಾರೇಜ್, ಮಧು ರಾವ್ ಹಾಗೂ ವಸಂತ್ ವಲ್ಲಭ್ ಈ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ.
ಸ್ವಾಮಿನಾಥನ್ ಆರ್ ಕೆ ಸಂಗೀತ, ಭಜರಂಗಿ, ವೇದ ಹಾಗೂ ಬೆಲ್ ಬಾಟಂ ಸಂಭಾಷಣೆಗಾರ ರಘು ನಿಡುವಳ್ಳಿ ಮಾತು ಚಿತ್ರಕ್ಕಿದೆ. ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿರುವ ಹುಲಿಯಾ ಚಿತ್ರತಂಡ ಶೀಘ್ರದಲ್ಲಿ ಉಳಿದ ತಾಂತ್ರಿಕ ಹಾಗೂ ತಾರಾಬಳಗ ಬಗ್ಗೆ ಮಾಹಿತಿ ನೀಡಲಿದೆ.
ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ನಿರ್ದೇಶಕ ವಿನು ಬಳಂಜ “ಬೇರ” ಚಿತ್ರ ನಿರ್ದೇಶಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ ದಿವಾಕರ ದಾಸ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಯಿತು. ಚಿತ್ರತಂಡದ ಸದಸ್ಯರು “ಬೇರ” ಚಿತ್ರದ ಕುರಿತು ಮಾತನಾಡಿದರು.
ಕಳೆದ ನಾಲ್ಕೈದು ವರ್ಷ ನಾನು ವೈಯಕ್ತಿಕ ಕಾರಣದಿಂದ ಕಿರುತೆರೆ ಹಾಗೂ ಹಿರಿತೆರೆಯಿಂದ ದೂರವಿದ್ದೆ. ಆನಂತರ ಒಂದು ಮ್ಯೂಸಿಯಂ ಗೆ ಹೋದೆ. ಅಲ್ಲೇ ಈ ಕಥೆ ಹುಟ್ಟಿದ್ದು. ಆನಂತರ ಮತ್ತೆ ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿದ್ದು ನಿರ್ಮಾಪಕ ದಿವಾಕರ್. ತುಳುವಿನಲ್ಲಿ “ಬೇರ” ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದು ಅರ್ಥ.
ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಹಾಗೂ “ಯಾವ ತಾಯಂದ್ರ ಮಕ್ಕಳೂ ಇನ್ನೊಬ್ರಿಂದಾಗಿ ಸಾಯ್ಬಾರ್ದು” ಎಂಬುದೇ ಕಥಾಹಂದರ. ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತದೆ. ಸದ್ಯ ಟೀಸರ್ ಬಿಡುಗಡೆ ಮಾಡಿದ್ದೇವೆ. ಮೇ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ ಎಂದು ನಿರ್ದೇಶಕ ವಿನು ಬಳಂಜ ತಿಳಿಸಿದರು.
ಕೇವಲ ಮೂರು ಜನ ಕೆಲಸಗಾರರಿಂದ ಶುರುವಾದ ಎಸ್ ಎಲ್ ವಿ ಸಂಸ್ಥೆಯಲ್ಲಿ ಇಂದು ನೂರೈವತ್ತು ಜನ ಕೆಲಸಗಾರರಿದ್ದಾರೆ. ಈಗ ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ “ಬೇರ” ಎಂಬ ಮೊದಲ ಚಿತ್ರ ನಿರ್ಮಾಣ ಮಾಡಿದ್ದೇವೆ. ಈ ಚಿತ್ರಕ್ಕೆ ನಿಮ್ಮ ಹಾರೈಕೆ ಇರಲಿ ಎಂದರು ನಿರ್ಮಾಪಕ ದಿವಾಕರ ದಾಸ.
ವಿನು ಬಳಂಜ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ್ದ ಖುಷಿಯಿದೆ. ನಮ್ಮ ಪಾತ್ರ ಕೂಡ ಚೆನ್ನಾಗಿದೆ ಎಂದರು ಚಿತ್ರದಲ್ಲಿ ನಟಿಸಿರುವ ದತ್ತಣ್ಣ, ಯಶ್ ಶೆಟ್ಟಿ, ಹರ್ಷಿಕಾ ಪೂಣಚ್ಛ, ಅಶ್ವಿನ್ ಹಾಸನ್, ಚಿತ್ಕಲ ಬಿರಾದಾರ್, ಮಂಜುನಾಥ್ ಹೆಗಡೆ, ಗುರು ಹೆಗಡೆ, ರಾಕೇಶ್ ಮಯ್ಯ, ಧವಳ್ ದೀಪಕ್ ಮುಂತಾದವರು. ಛಾಯಾಗ್ರಹಕ ರಾಜಶೇಖರ್ ಹಾಗೂ ಕಾರ್ಯಕಾರಿ ನಿರ್ಮಾಪಕ ರಾಮದಾಸ ಶೆಟ್ಟಿ ಕೂಡ “ಬೇರ” ಚಿತ್ರದ ಕುರಿತು ಮಾತನಾಡಿದರು.
ಜೀವನದಲ್ಲಿ ಯಾರಿಗೆ ಯಾವಾಗ “ಲಕ್” ಬರತ್ತೆ ಹೇಳಲಿಕ್ಕೆ ಆಗಲ್ಲ. ಕಳೆದ 9 ವರ್ಷಗಳಿಂದ ಕ್ಯಾರಾವ್ಯಾನ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಕ್ಯಾರಾವ್ಯಾನ್ ಸ್ಟಾರ್ ಸ್ಮೈಲ್ ಮಂಜು ಅವರು “ಲಕ್” ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ “90 ಕುಡಿ ಮಗ ಪಲ್ಟಿ ಹೊಡಿ” ಎಂಬ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಯಿತು. ಅಪ್ಪಿ ಹಾಗೂ ಹರೀಶ್ ಬರೆದಿರುವ ಈ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ. ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ.
ಚಿತ್ರಕ್ಕೆ ಮೊದಲೊಬ್ಬ ನಿರ್ದೇಶಕರಿದ್ದರು. ಹಾಗೆ ನಾಯಕರೂ ಬೇರೆಯೇ ಇದ್ದರು. ಅನಿವಾರ್ಯ ಕಾರಣದಿಂದ ಅವರು ಚಿತ್ರದಿಂದ ದೂರವಾದಾಗ ಈ ಚಿತ್ರಕ್ಕೆ ನಾನು ನಿರ್ದೇಶಕನಾದೆ. ಮಂಜು ನಾಯಕನಾದರು. ನನ್ನ ಜೀವದಲ್ಲೇ ನಡೆದಿರುವ ಘಟನೆಯನ್ನು ಸಿನಿಮಾ ರೂಪದಲ್ಲಿ ಆಚೆ ತರುತ್ತಿದ್ದೇನೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಡಾಲಿ ಧನಂಜಯ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ಒಂದು ದಿನ, ಅದರಲ್ಲೂ ಕೆಲವೇ ಗಂಟೆಗಳಲ್ಲಿ ನಡೆಯುವ ಕಥೆಯಾಗಿದೆ. ಪದ್ಮಜಾರಾವ್, ಕಡ್ಡಿಪುಡಿ ಚಂದ್ರು ಮುಂತಾದವರು ತಾರಾಬಳಗದಲ್ಲಿದ್ದಾರೆ. ಎಂದು ನಿರ್ದೇಶಕ ಹರೀಶ್ ಮಾಹಿತಿ ನೀಡಿದರು.
ನಾನು ಒಂಭತ್ತು ವರ್ಷಗಳಿಂದ ಕ್ಯಾರಾವ್ಯಾನ್ ಓಡಿಸುತ್ತಿದ್ದೇನೆ. ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಅವರ ಕ್ಯಾರಾವ್ಯಾನ್ ಗೆ ನಾನೇ ಚಾಲಕ. ಸಿನಿಮಾ ಮಾಡುವ ಆಸೆಯಿತ್ತು. ದುಡಿದ ಹಣ ಹಾಗೂ ಜಮೀನು ಮಾರಿದ ಹಣ ಎರಡೂ ಸೇರಿಸಿ ಈ ಚಿತ್ರ ನಿರ್ಮಾಣ ಮಾಡಿದ್ದೇನೆ ಜೊತೆಗೆ ನಾಯಕನಾಗೂ ಅಭಿನಯಿಸಿದ್ದೇನೆ.
ನನ್ನ ಮೇಲೆ ಪ್ರೀತಿಯಿಟ್ಟು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ಸೇರಿದಂತೆ ಚಿತ್ರರಂಗದ ಅನೇಕ ನಾಯಕರು ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಚಿತ್ರತಂಡದ ಸಹಕಾರಕ್ಕೆ ಧನ್ಯವಾದ ಎಂದರು ನಾಯಕ ಹಾಗೂ ನಿರ್ಮಾಪಕ ಕ್ಯಾರಾವ್ಯಾನ್ ಸ್ಟಾರ್ ಸ್ಮೈಲ್ ಮಂಜು.
ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿರುವ ರೇಣು ಹಾಡು ಬರೆದಿರು ಅಪ್ಪಿ ಹಾಗೂ ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಚಿತ್ರದ ಕುರಿತು ಮಾತನಾಡಿದರು.
ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದು ಗೊತ್ತೇ ಇದೆ. ಆದರೆ, ಅದೇಕೋ ಇದ್ದಕ್ಕಿದ್ದಂತೆ ಪ್ರಚಾರ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ ಸುದೀಪ್. ಬಿಜೆಪಿ ಕಿಚ್ಚನಿಗೆ ಕೊಟ್ಟ ಮಾತೇನಾದರೂ ತಪ್ಪಿತಾ? ಡಿಕೆ ಶಿವಕುಮಾರ್ ಹೇಳಿಕೆಗೂ ಈ ಸ್ಥಗಿತಕ್ಕೂ ಸಂಬಂಧವೇನು? ಹಾಗಾದರೆ, ಸುದೀಪ್ ಕಾಂಗ್ರೆಸ್ ಪರ ಪ್ರಚಾರ ಮಾಡ್ತಾರಾ?
ಅದೆಲ್ಲಾಸರಿ, ಸುದೀಪ್ ಸದಾ ಮಾತಿಗೆ ಬದದ್ದರಾದವರು. ಆದರೆ ದಿಢೀರನೆ ಪ್ರಚಾರ ನಿಲ್ಲಿಸಿದ್ದೇಕೆ. ಅದಕ್ಕೆ ಉತ್ತರವಿಲ್ಲ. ಆದರೆ ಸುದೀಪ್ ಮನಸ್ಸಿಗೆ ಬಿಜೆಪಿ ಏನಾದರೂ ನೋವುಂಟು ಮಾಡಿತಾ?
ದಿನಕ್ಕೆ ಐದಾರು ಕ್ಷೇತ್ರಗಳಲ್ಲಿ ಬಿಡುವಿಲ್ಲದೆಯೇ ಪ್ರಚಾರ ಮಾಡುತ್ತಿದ್ದ ಕಿಚ್ಚ ಸುದೀಪ್, ದಿಢೀರನೆ ಪ್ರಚಾರ ನಿಲ್ಲಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದು ಯಾಕೆ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಕಾಡುತ್ತಿದೆ.
ನಾನು ಬೊಮ್ಮಾಯಿ ಮಾಮನ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಘೋಷಣೆ ಮಾಡಿದಂತೆ ಸುದೀಪ್ ಬಿಜೆಪಿ ಪಕ್ಷದ ಪರ ಪ್ರಚಾರಕ್ಕೆ ನಿಂತರು. ಶಿಗ್ಗಾವಿ ಸೇರಿದಂತೆ 18 ಕ್ಷೇತ್ರ ಸುತ್ತಾಡಿ ಲಕ್ಷಾಂತರ ಅಭಿಮಾನಿಗಳ ನಡುವೆ ಹಗಲು ರಾತ್ರಿ ಪ್ರಚಾರ ಮಾಡಿದರು. ಆದರೆ ಬಿಜೆಪಿ ಪಕ್ಷ ಎಡವಿದ್ದು ಎಲ್ಲಿ? ಸುದೀಪ್ ಅವರ ಮನಸ್ಸನ್ನು ಬಿಜೆಪಿ ನೋಯಿಸಿತಾ?
ಖುದ್ದಾಗಿ ಕಾಂಗ್ರೆಸ್ ಅಭ್ಯರ್ಥಿ ಗಳೇ ನಮ್ಮ ಭಾಗಕ್ಕೆ ಬಂದು ಬಿಜೆಪಿ ಪರ ಪ್ರಚಾರ ಮಾಡಬೇಡಿ ಎಂದು ಕೇಳಿದ್ದುಂಟು. ಹಾಗಾಗಿಯೇ ಕಿಚ್ಚ ನವಲಗುಂದ, ಗದಗಕ್ಕೆ ಪ್ರಚಾರ ಮಾಡಲು ಹೋಗದೆ ಹಿಂದಿರುಗಿದರು ಯಾಕೆ ಎಂಬ ಪ್ರಶ್ನೆ ಎದ್ದಿದೆ. ಡಿ.ಕೆ.ಶಿವಕುಮಾರ್ ಪಕ್ಷ ಪರ ಕಿಚ್ಚ ಪ್ರಚಾರಕ್ಕೇನಾದರೂ ಇಳಿಯುತ್ತಾರಾ ಕಾದು ನೋಡಬೇಕು.
ತೆಲುಗು ನಟ ನರೇಶ್ ಹಾಗೂ ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ನಟನೆಯ ಮತ್ತೆ ಮದುವೆ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ಟೀಸರ್ ಮೂಲಕ ಸದ್ದು ಮಾಡಿದ್ದ ಈ ಚಿತ್ರದ ಉರುಳೋ ಕಾಲವೇ ಎಂಬ ಗಾನಲಹರಿ ಅನಾವರಣಗೊಂಡಿದೆ.
ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿರುವ ಹಾಡಿಗೆ ಸಂತೋಷ್ ವೆಂಕಿ ದನಿಯಾಗಿದ್ದಾರೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಉರುಳೋ ಕಾಲವೇ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ನಡಿ ನರೇಶ್ ನಿರ್ಮಾಣ ಮಾಡಿರುವ ಮತ್ತೆ ಮದುವೆ ಚಿತ್ರಕ್ಕೆ ಎಂ. ಎಸ್. ರಾಜು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ.
ಟೀಸರ್ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಮತ್ತೆ ಮದುವೆ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬರ್ತಿದ್ದು, ಮೇ ತಿಂಗಳಲ್ಲಿ ಥಿಯೇಟರ್ ಅಂಗಳ ಪ್ರವೇಶಿಸಲಿದೆ.
ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘45’ ಚಿತ್ರದ ಮುಹೂರ್ತ ಮೈಸೂರಿನಲ್ಲಿ ನೆರವೇರಿದೆ. ದೇವರ ಮೇಲೆ ಚಿತ್ರೀಕರಿಸಲಾದ ಮೊದಲ ದೃಶ್ಯಕ್ಕೆ ಗೀತಾ ಶಿವರಾಜಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು, ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು. ‘45’ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ. ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದು, ಕೆ. ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜಕುಮಾರ್, ‘ಇದೊಂದು ಫಿಲಾಸಫಿಕಲ್ ಎಂಟರ್ ಟೈನರ್ ಎಂದು ಚಿತ್ರವನ್ನು ಬಣ್ಣಿಸುತ್ತಾರೆ. ಕಳೆದ ಒಂದು ವರ್ಷದಿಂದ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅರ್ಜುನ್ ಜನ್ಯ ಕಥೆ ಹೇಳಿದಾಗ ತುಂಬಾ ಇಷ್ಟವಾಗಿತ್ತು. ಆ ನಂತರ ಅನಿಮೇಶನ್ ರೂಪದಲ್ಲಿ ಚಿತ್ರವನ್ನು ತೋರಿಸಿದ್ದಾರೆ. ಅವರೊಬ್ಬ ಪ್ರತಿಭಾವಂತ. ಈ ಸಿನಿಮಾದ ನಂತರ ಭಾರತದ ಟಾಪ್ ನಿರ್ದೇಶಕರ ಸಾಲಿನಲ್ಲಿ ಅರ್ಜುನ್ ಜನ್ಯ ಕೂಡ ಒಬ್ಬರಾಗುತ್ತಾರೆ ಎಂಬ ನಂಬಿಕೆಯಿದೆ. ತುಂಬಾ ಪ್ರಬುದ್ಧವಾಗಿರುವ ಪಾತ್ರ ಈ ಚಿತ್ರದಲ್ಲಿದೆ’ ಎಂದರು.
‘ಸಾಮಾನ್ಯವಾಗಿ ನಟರಿಗೆ ನಿರ್ದೇಶಕರು ಚಿತ್ರದ ಕಥೆ ಹೇಳಿದರೆ, ಅರ್ಜುನ್ ಜನ್ಯ ನನಗೆ ಚಿತ್ರವನ್ನೇ ತೋರಿಸಿದರು. ಒಂದು ಚಿತ್ರಕ್ಕೆ ನಾವು ಸಹ ಸಾಕಷ್ಟು ತಯಾರಿ ಮಾಡಿಕೊಳ್ಳುವುದರಿಂದ, ಮೊದಲು ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ ಅರ್ಜುನ್ ಜನ್ಯ ಮತ್ತು ಅವರ ತಂಡದ ಕೆಲಸ ನೋಡಿ ಆಶ್ಚರ್ಯವಾಯಿತು. ಅವರು ಈ ಚಿತ್ರಕ್ಕೆ ಮಾಡಿಕೊಂಡ ತಯಾರಿ ಅದ್ಭುತ. ಒಬ್ಬ ನಟನಾಗಿ, ಪ್ರೇಕ್ಷಕನಾಗಿ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯಿದೆ’ ಎಂದು ರಾಜ್ ಬಿ ಶೆಟ್ಟಿ ಹೇಳಿದರು.
‘ಮೊದಲ ಬಾರಿಗೆ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಬೋಲ್ಡ್ ಆಗಿರುವಂತ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕೌಸ್ತುಭ ಮಣಿ.
ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಅರ್ಜುನ್ ಜನ್ಯ ಹೇಳಿದ ಕಥೆ ಬಹಳ ಇಷ್ಟವಾಯಿತಂತೆ. ‘ಚಿತ್ರದ ಘೋಷಣೆಯಾಗಿ ಹಲವು ತಿಂಗಳಾದರೂ ನಿಧಾನಕ್ಕೆ ಸಾಗುತ್ತಿತ್ತು. ಈ ಬಗ್ಗೆ ಅರ್ಜುನ್ ಜನ್ಯ ಅವರನ್ನು ಕೇಳಿದಾಗ, ಅವರು ಅನಿಮೇಶನ್ ಮೂಲಕ ಸಿನಿಮಾ ತೋರಿಸಿದರು. ಚಿತ್ರೀಕರಣ ಶುರುವಾಗುವುದಕ್ಕಿಂತ ಮೊದಲೇ, ಚಿತ್ರ ತೋರಿಸಿದರು. ನಾವು ಅಂದುಕೊಂಡಿರುವುದಕ್ಕಿಂತ ಸಿನಿಮಾ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯಿದೆ’ ಎಂದರು ರಮೇಶ್ ರೆಡ್ಡಿ.
ಕೊನೆಗೆ ಮಾತನಾಡಿದ ಅರ್ಜುನ್ ಜನ್ಯ, ‘ಚಿತ್ರೀಕರಣ ಈಗ ಶುರುವಾಗುತ್ತಿದ್ದರೂ, ಸುಮಾರು 9 ತಿಂಗಳ ಕಾಲ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮಾಡಿ ಈಗ ಚಿತ್ರೀಕರಣಕ್ಕೆ ಹೊರಡುತ್ತಿದ್ದೇವೆ. ಮೊದಲು ಶಿವಣ್ಣ ಅವರಿಗೆ ಕಥೆ ಹೇಳಿದಾಗ, ನೀವೇ ಈ ಸಿನಿಮಾ ಮಾಡಿ ಎಂದು ಹುರುದಿಂಬಿಸಿದರು. ಈ ಚಿತ್ರದ ಮೂಲಕ ಒಂದು ದೊಡ್ಡ ಫಿಲಾಸಫಿಯನ್ನು ಸರಳ ರೀತಿಯಲ್ಲಿ, ಕ್ಲಾಸ್ ಮತ್ತು ಮಾಸ್ ಆಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
‘45’ ಚಿತ್ರಕ್ಕೆ 80 ದಿನಗಳ ಕಾಲ ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಕನ್ನಡವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಮೂಡಿಬರುತ್ತಿರುವ ಈ ಚಿತ್ರವನ್ನು 2024ರಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಎರಡನೆ ಚಿತ್ರಕ್ಕೆ ಮಧೋಳ್ ಎಂಬ ಶೀರ್ಷಿಕೆ ಇಡಲಾಗಿದೆ. ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ವಿಕ್ಕಿ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಟೈಟಲ್ ಟೀಸರ್ ಮೂಲಕ ಎಂಟ್ರಿ ಕೊಟ್ಟ ವಿಕ್ರಮ್ ರವಿಚಂದ್ರನ್, ಕಂಪ್ಲೀಟ್ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಕ್ರೇಜಿಸ್ಟಾರ್ ಪುತ್ರನ ಚಿತ್ರಕ್ಕೆ ಮುಧೋಳ್ ಎಂಬ ಟೈಟಲ್ ಕೊಟ್ಟಿದ್ದೇ ವಿ. ರವಿಚಂದ್ರನ್. ತ್ರಿವಿಕ್ರಮ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಅಡಿ ಇಟ್ಟಿದ ವಿಕ್ಕಿ ಈ ಬಾರಿ ರಾ ಹಾಗೂ ಗ್ಯಾಂಗ್ ಸ್ಟಾರ್ ಸಬ್ಜೆಕ್ಟ್ ಮೂಲಕ ಸಿನಿರಸಿಕರನ್ನು ರಂಜಿಸಲು ಬರ್ಉತ್ತಿದ್ದಾರೆ.
ಮುಧೋಳ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ವಿಕ್ರಮ್ ರವಿಚಂದ್ರನ್, ತ್ರಿವಿಕ್ರಮ ರಿಲೀಸ್ ಆಗಿದ್ದು ಜೂನ್ 24, ಅದು ಆದ್ಮೇಲೆ ಏಪ್ರಿಲ್ 26 ಅಂದ್ರೆ ಇವತ್ತು ನನ್ನ ಎರಡನೇ ಸಿನಿಮಾದ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ತುಂಬಾ ಜನ ವಿಕೆಆರ್ ಅಂದ್ರೇನು ಅಂತಾ ಕೇಳುತ್ತಿದ್ರು. ವಿಕೆಆರ್ ವಿಕ್ರಮ್ ರವಿಚಂದ್ರನ್ ಅನ್ನೋದು ತುಂಬಾ ಜನಕ್ಕೆ ಗೊತ್ತಿದೆ. ವಿಕೆಆರ್ ಕೆ ಬ್ರ್ಯಾಂಡ್ ಶುರು ಮಾಡೋಣಾ ಅಂತಾ. ವಿಕೆಆರ್ ವಿಕ್ರಮ್ ರವಿಚಂದ್ರನ್ ಬರುತ್ತದೆ. ವೀರಸ್ವಾಮಿ ರವಿಚಂದ್ರನ್ ಬರುತ್ತೆ. ನೆಕ್ಸ್ಟ್ ನಿಮ್ಮ ಫೇವರೇಟ್ ಡಾ. ವಿ ರವಿಚಂದ್ರನ್ ಹೆಸರು ಬರುತ್ತದೆ. ಇದರ ಮಧ್ಯೆ ಕನ್ನಡ ಬರುತ್ತದೆ. ಪ್ರಯತ್ನ ಅನ್ನೋದು ನಿರಂತರ. ಪ್ರಯತ್ನ ಮಾಡಿ ಜೀವನದಲ್ಲಿ ಗೆಲ್ಲುವುದು ಮುಖ್ಯವಲ್ಲ. ಜೀವನವನ್ನೇ ಗೆಲ್ಲಬಹುದು. ಆ ರೀತಿ ಒಂದು ತಂಡ ನಿಮ್ಮ ಮುಂದೆ. ನನ್ನ ಎರಡನೇ ಹೆಜ್ಜ. ನಿಮ್ಮ ಪ್ರೀತಿ ಹಾರೈಕೆ ಹೀಗೆ ಇರಲಿ ಎಂದರು.
ನಿರ್ದೇಶಕ ಕಾರ್ತಿಕ್ ರಾಜನ್ ಮಾತನಾಡಿ, ಮುಧೋಳ್ ಗಾಗಿ ತುಂಬಾ ಕಡೆ ಹುಡುಗಾಡಿದೆವು. ನಮ್ಮ ಮ್ಯಾನೇಜರ್ ಹತ್ತಿರ ಹೇಳಿದೆ. ತ್ಯಾಗರಾಜ್ ಎಂಬುವವರು ಆ ಶ್ವಾನ ಟ್ರೈನ್ ಮಾಡಿದ್ದಾರೆ. ಟೈಟಲ್ ಟೀಸರ್ ನಲ್ಲಿ ಶ್ವಾನ ಚಾಕು ಕಚ್ಚಿಕೊಂಡು ಬರುವ ದೃಶ್ಯಕ್ಕಾಗಿ 23 ಟೇಕ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಸಂಭಾಷಣೆಗಾರ ಮಾಸ್ತಿ ಮಾತನಾಡಿ, ಈಶ್ವರಿ ಕಂಬೈನ್ಸ್ ಅನ್ನೋದು ಲೆಗೆಸಿ. ಹೀರೋಯಿನ್ಸ್ ಗಳು ರವಿಚಂದ್ರನ್ ಸರ್ ಜೊತೆ ಕೆಲಸ ಮಾಡ್ಬೇಕು ಎಂದುಕೊಳ್ತಿದ್ರು. ಅದೇ ರೀತಿ ರೈಟರ್ಸ್ ಆ ಸಂಸ್ಥೆ ಜೊತೆ ಕೆಲಸ ಮಾಡಬೇಕು ಎಂದುಕೊಳ್ತಿದ್ರು. ಈಶ್ವರಿ ಕಂಬೈನ್ಸ್ ಅನ್ನೋದು ಪರಂಪರೆ. ಆ ಸಂಸ್ಥೆಯ ಜೊತೆ ವಿಕ್ರಮ್ ಸರ್ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಎಂದರು.
ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಮುಧೋಳ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಹೆಜ್ಜೆ. ಎಸ್.ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಂದ್ರನ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದು, ಟಗರು, ಸಲಗ ಸಿನಿಮಾ ಖ್ಯಾತಿ ಮಾಸ್ತಿ ಸಂಭಾಷಣೆ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಡಾ.ಕೆ.ರವಿವರ್ಮಾ ಆಕ್ಷನ್ ಚಿತ್ರಕ್ಕಿದೆ.
ತಂಡವ್ ಸ್ಟುಡಿಯೋಸ್ ಬ್ಯಾನರ್ ನಡಿ ರಕ್ಷಾ ವಿಜಯಕುಮಾರ್ ಹಾಗೂ ಸಿಲ್ಜು ಕಣ್ಣನ್ ನಿರ್ಮಾಣ ಮಾಡ್ತಿರುವ ಮಧೋಳ್ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿ ಅಭಿಲಾಶ್, ರಘು ಮ್ಯೂಟಂಟ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಈಗಾಗ್ಲೇ 30 ದಿನ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮತ್ತಷ್ಟು ಕಲಾವಿದರ ಬಗ್ಗೆ ಶೀರ್ಘದಲ್ಲಿಯೇ ಮಾಹಿತಿ ನೀಡಲಿದೆ.
ಚಿತ್ರ : ರಾಘವೇಂದ್ರ ಸ್ಟೋರ್ಸ್ ನಿರ್ದೇಶಕ : ಸಂತೋಷ್ ಆನಂದರಾಮ್ ನಿರ್ಮಾಣ: ಹೊಂಬಾಳೆ ಫಿಲಂಸ್ ತಾರಾಗಣ: ಜಗ್ಗೇಶ್, ಶ್ವೇತ ಶ್ರೀವಾಸ್ತವ್, ಹೆಚ್ ಜಿ ದತ್ತಾತ್ರೇಯ, ರವಿಶಂಕರ್ ಗೌಡ, ಮಿತ್ರ, ಅಚ್ಯುತ,ರಾಘು ಶಿವಮೊಗ್ಗ ಇತರರು.
‘ಜೀವನ ಅಂದ್ರೆ ಜೊತೆಗೊಂದು ಜಡೆ ಇರಬೇಕು’…
ಈ ಡೈಲಾಗ್ ಬರುವ ಹೊತ್ತಿಗೆ ಅರ್ಧ ವಯಸ್ಸು ಕಳೆದಿರೋ ಚಿತ್ರದ ನಾಯಕ ಹಯವದನ, ಶತಾಯ ಗತಾಯ ಮದುವೆ ಆಗಲೇಬೇಕೆಂಬ ಹಠಕ್ಕೆ ಬಿದ್ದಿರುತ್ತಾನೆ. ಅವನು ಮದುವೆ ಆಗಬೇಕೆಂದು ಓಡಾಡುವ ಪ್ರಸಂಗವೇ ನೋಡುಗರಲ್ಲಿ ನಗೆ ಬುಗ್ಗೆ ಎಬ್ಬಿಸುವ ಮೂಲಕ ಆರಂಭದಿಂದ ಅಂತ್ಯದವರೆಗೂ ಅತ್ತಿತ್ತ ಅಲುಗಾಡದಂತೆ ನೋಡಿಸಿಕೊಂಡು ಹೋಗುತ್ತೆ. ಈ ಚಿತ್ರದ ವಿಶೇಷ ಅಂದರೆ ಗಟ್ಟಿ ಕಥೆ. ಅದಕ್ಕೆ ತಕ್ಕ ಚಿತ್ರಕಥೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಪಾತ್ರಗಳ ಜೋಡಣೆ ಮತ್ತು ನಿರೂಪಣೆ.
ಹೇಳಿ ಕೇಳಿ ಇದು ಜಗ್ಗೇಶ್ ಚಿತ್ರ. ಅವರ ಎಂದಿನ ಶೈಲಿಯ ಸಿನಿಮಾಗಳಿಗಿಂತಲೂ ಭಿನ್ನವಾಗಿದೆ. ಜಗ್ಗೇಶ್ ಅಂದರೇನೆ ನಗು. ಅದಕ್ಕಿಲ್ಲಿ ಯಾವುದೇ ಕೊರತೆ ಇಲ್ಲ. ಸಿನಿಮಾದುದ್ದಕ್ಕೂ ಅವರು ತಮ್ಮ ಪಾತ್ರವನ್ನು ನಿರ್ವಹಿಸಿರುವ ರೀತಿಯೇ ನೋಡುಗರನ್ನು ಗಟ್ಟಿಯಾಗಿ ಕೂರಿಸುತ್ತೆ.
ಶುರುವಿನಿಂದಲೇ ಕಚಗುಳಿ ಇಡುವ ಚಿತ್ರದಲ್ಲಿ ಒಂದಷ್ಟು ಏರಿಳಿತಗಳಿವೆ. ಅಲ್ಲಲ್ಲಿ ಸಣ್ಣ ಸಣ್ಣ ತಗ್ಗುದಿನ್ನೆಗಳೂ ಇವೆ. ಕೆಲ ಕಡೆ ಕಂಟಿನ್ಯುಟಿ ಮಿಸ್ ಆಗಿದೆ. ಅದರ ಹೊರತಾಗಿಯೂ ಸಿನಿಮಾ ನಗಾಡಿಸಿಕೊಂಡು ಹೋಗುತ್ತೆ. ಉಪ್ಪು ಹುಳಿ ಖಾರ ಹದವಾಗಿ ಬೆರೆತ ಸ್ವಾದಿಷ್ಟ ಭೋಜನದಷ್ಟೇ ಇಲ್ಲಿ ಕಾಮಿಡಿ ವರ್ಕೌಟ್ ಆಗಿದೆ. ಜಗ್ಗೇಶ್ ಅವರ ಮಾತಿನ ಲಹರಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿರುವುದೇ ಚಿತ್ರದ ಪ್ಲಸ್.
L
ಒಂದು ಚಿತ್ರಕ್ಕೆ ಬೇಕಿರೋದು ಕಥೆ ಅದಿಲ್ಲಿ ಸರಾಗ. ಸ್ವಾದಿಷ್ಟ ಭರಿತ ಅಡುಗೆಯ ಘಮಲಿನಷ್ಟೇ ಪರದೆ ಮೇಲೆ ಕಾಣುವ ಪ್ರತಿ ಪಾತ್ರಗಳೂ ಸಹ ನಗುವಿನ ಅಲೆಗೆ ಕಾರಣವಾಗುತ್ತವೆ. ನಗುವಿನೊಂದಿಗೆ ಶುರುವಾಗುವ ಸಿನಿಮಾ ಮೊದಲರ್ಧ ಮುಗಿಯೋದೇ ಗೊತ್ತಾಗಲ್ಲ. ದ್ವಿತಿಯಾರ್ಧ ಮತ್ತೊಂದು ಮಜಲಿನತ್ತ ಸಾಗುವ ಸಿನಿಮಾ, ಗಂಭೀರವಾಗಿಸುತ್ತಲೇ ಅಂತ್ಯವಾಗುತ್ತೆ. ಇಲ್ಲೊಂದು ಸೂಕ್ಷ್ಮ ಅಂಶ ನೋಡುಗರನ್ನ ಕೊಂಚ ಕಾಡದೇ ಇರದು. ಆ ಕಾಡುವ ಕಥೆ ಏನೆಂಬ ಕುತೂಹಲ ಇದ್ದರೆ, ಒಂದೊಮ್ಮೆ ರಾಘವೇಂದ್ರ ಸ್ಟೋರ್ಸ್ ರುಚಿ ಸವಿಯಬಹುದು.
ಸ್ಟೋರ್ಸ್ ಒಳಗಿನ ಪ್ಲಸ್
ಒಳ್ಳೆಯ ಕಥಾಹಂದರ, ನಿರೂಪಣೆ, ಪಾತ್ರ ಪೋಷಣೆ, ಸಂಗೀತ, ಸಾಹಿತ್ಯ, ಛಾಯಾಗ್ರಹಣ, ಸಂಕಲನ, ಕಾಸ್ಟ್ಯೂಮ್ಸ್, ಕಚಗುಳಿ ಇಡುವ ಪಂಚ್ ಡೈಲಾಗ್ಸ್.
ಸ್ಟೋರ್ಸ್ ಒಳಗಿನ ಮೈನಸ್
ಅಲ್ಲಲ್ಲಿ ಮಿಸ್ಸಾದ ಕಂಟಿನ್ಯುಟಿ, ಕೆಲವು ಕಡೆ ಬೇಡದ ದೃಶ್ಯ, ಅನಗತ್ಯ ಮಾತು, ಆಗಾಗ ಜಾಳೆನಿಸೋ ಹಿನ್ನೆಲೆ ಸಂಗೀತ.
ಸ್ಟೋರ್ಸ್ ಕಥೆ ಏನು? ನಲವತ್ತರ ಆಸುಪಾಸಿನ ನಾಯಕ ಹಯವದನನ ಮದುವೆಯ ಒದ್ದಾಟ. ತನ್ನ ತಮ್ಮನಿಗೆ ಮದ್ವೆ ಮಾಡೋ ಅಪ್ಪ ಹಿರಿಯ ಮಗ ಹಯವದನಿಗೊಂದು ಹೆಣ್ಣು ನೋಡಲಾಗದ ನಿರುತ್ಸಾಹಿ. ಹೀಗಿರುವಾಗ ಒಂದು ಹೆಣ್ಣು ಹುಡುಕಿ ಮದ್ವೆ ಮಾಡಬೇಕೆಂಬ ಹಯವದನ ಅಪ್ಪ ಹತ್ತಾರು ಹುಡುಗಿಯನ್ನು ನೋಡಿತ್ತಾನೆ. ಒಂದಲ್ಲ ಒಂದು ಕಾರಣಕ್ಕೆ ಅವೆಲ್ಲವೂ ಕ್ಯಾನ್ಸಲ್. ಆ ಹೆಣ್ಣು ನೋಡುವ ಸನ್ನಿವೇಶಗಳೇ ಸಿನಿಮಾದ ಹೈಲೆಟ್.
ತನ್ನ ಜೊತೆಗಿದ್ದವರಿಗೆಲ್ಲ ಮದ್ವೆ ಆಗುತ್ತೆ ತನಗೇಕೆ ಹೀಗೆ ಎಂಬ ಬೇಸರದಲ್ಲಿರುವಾಗಲೇ ಒಂದು ಹೆಣ್ಣು ಓಕೆ ಆಗುತ್ತೆ. ಅದಾದ ಮೇಲೆ ಅಲ್ಲೊಂದು ನಗೆಬುಗ್ಗೆ, ಲೈಸೆನ್ಸ್ ಸಿಕ್ಕರೂ ಓಡಿಸೋಕೆ ಗಾಡಿ ಸಿಗಲ್ಲ ಎಂಬ ಇಕ್ಕಟ್ಟಿನ ಪರಿಸ್ಥಿತಿಯ ಸನ್ನಿವೇಶವೇ ಹೈಲೆಟ್. ಆಮೇಲೊಂದು ಟ್ವಿಸ್ಟು ಮತ್ತು ಟೆಸ್ಟು. ಒಟ್ಟಾರೆ ಮದ್ವೆ ಪ್ರಸಂಗದೊಳು ಹತ್ತಾರು ಪರೀಕ್ಷೆಗಳು ಎದುರಾಗುತ್ತವೆ. ಕೊನೆಗೆ ಹಯವದನ ಪಾಸಾಗುತ್ತಾನೋ ಇಲ್ಲವೋ ಅನ್ನೋದು ಕಥೆ. ನಿರ್ದೇಶಕರ ಸಿನಿಮಾಗಳಲ್ಲಿ ಕಾಮನ್ ಸ್ಟೋರಿಲೈನ್ ಇದ್ದೇ ಇರುತ್ತೆ. ಅದು ಇಲ್ಲೂ ಮುಂದುವರೆದಿದೆ. ಏನು ಎಂಬುದಕ್ಕೆ ಒಮ್ಮೆ ಸಿನಿಮಾ ನೋಡಿ.
ಯಾರು ಹೇಗೆ? ಜಗ್ಗೇಶ್ ತಮ್ಮ ಸಹಜ ಅಭಿನಯ ದ ಮೂಲಕ ನೋಡುಗರ ಮನ ತಟ್ಟುತ್ತಾರೆ, ನಗಿಸುತ್ತಾರೆ ಕೂಡ. ಅಲ್ಲಲ್ಲಿ ಭಾವುಕತೆಗೂ ಕಾರಣರಾಗುತ್ತಾರೆ. ಶ್ವೇತಾ ಶ್ರೀನಿವಾಸ್ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಕೋಗಿಲೆ ಪಾತ್ರದಲ್ಲಿ ಹಾಸ್ಯ ಮಿತ್ರ ಇಲ್ಲಿ ಭರಪೂರ ರಂಜನೆ ನೀಡಿದ್ದಾರೆ. ಮೂಗನಾಗಿ ನೋಡುಗರ ಗಮನ ಸೆಳೆಯುತ್ತಾರೆ. ಹೀರೋ ಜತೆಗಾರನಾಗಿ ಮಿತ್ರ ಇಲ್ಲಿ ಹೈಲೆಟ್. ಉಳಿದಂತೆ ಮ್ಯಾಟ್ರು ಮಧು ಪಾತ್ರದಲ್ಲಿ ರವಿಶಂಕರ್ ಗೌಡ ಕೂಡ ಕಥೆಯ ಸಾಗುವಿಕೆಗೆ ಸಾಕ್ಷಿಯಾಗುತ್ತಾರೆ. ದತ್ತಣ್ಣ ತಂದೆಯಾಗಿ ಅಐ ಎನಿಸಿಕೊಂಡಿದ್ದಾರೆ.
ಆಫ್ ಸ್ಕ್ರೀನ್ ಕೆಲ್ಸ ಹೇಗೆ?
ಅಜನೀಶ್ ಲೋಕನಾಥ್ ಸಂಗೀತಕ್ಕಿನ್ನೂ ಧಮ್ ಇರಬೇಕಿತ್ತು. ಸಂತೋಷ್ ಮತ್ತು ಗೌಸ್ ಪೀರ್ ಸಾಹಿತ್ಯ ಸನ್ನಿವೇಶಕ್ಕೆ ಪೂರಕವಾಗಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣದಲ್ಲಿ ಸ್ಟೋರ್ಸ್ ಅಂದ ಹೆಚ್ಚಿದೆ.
ಕೊನೆಮಾತು: ಇಲ್ಲಿ ಅಪ್ಪ ಮಗನ ಬಾಂಧವ್ಯ, ಗಂಡ ಹೆಂಡತಿಯ ಸಾಂಗತ್ಯ, ರಕ್ತ ಸಂಬಂಧದ ಆಚೆಗೂ ಇರಬೇಕಾದ ಆಪ್ತತೆ ಆಕರ್ಷಣೆ.
ಕನ್ನಡದಲ್ಲೀಗ ಹೊಸ ಬಗೆಯ ಶೀರ್ಷಿಕೆ ಸಿನಿಮಾಗಳು ಬಹಳಷ್ಟು ಸದ್ದು ಮಾಡುತ್ತಿವೆ. ಈ ಪಟ್ಟಿಗೀಗ ಹೊಸ ಸೇರ್ಪಡೆ ಕ್ಲಾಂತ. ಈ ಹಿಂದೆ ರಂಗನ್ ಸ್ಟೈಲ್, ದಗಲು ಬಾಜಿಲು ಸೇರಿದಂತೆ ಬೇರೆ ಬಗೆಯ ಜಾನರ್ ಚಿತ್ರ ನಿರ್ದೇಶಿರುವ ವೈಭವ್ ಪ್ರಶಾಂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇಂದು ಕ್ಲಾಂತ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಲಾಗಿತ್ತು. ಈ ಬಗ್ಗೆ ಚಿತ್ರತಂಡ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡಿತು.
ನಿರ್ದೇಶಕ ವೈಭವ್ ಪ್ರಶಾಂತ್ ಮಾತನಾಡಿ, ಇದು ನನ್ನ ನಾಲ್ಕನೇ ಸಿನಿಮಾ. ಯುವಜನತೆಗೆ ಒಳ್ಳೆ ಸಂದೇಶ ಕೊಡುವ ಚಿತ್ರವಾಗಿದ್ದು, ಅಪ್ಪ ಅಮ್ಮನಿಗೆ ಸುಳ್ಳು ಹೇಳಿ ತಪ್ಪು ದಾರಿ ಇಡಬೇಡಿ ಎಂಬ ಕಂಟೆಂಟ್ ಸುತ್ತ ಸಿನಿಮಾ ಮಾಡಲಾಗುತ್ತಿದೆ. ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದೆ ಎಂದು ತಿಳಿಸಿದರು.
ಸಂಗೀತ ಭಟ್, ನನಗೆ ಈ ಸಿನಿಮಾ ತುಂಬಾ ಸ್ಪೆಷಲ್. ತುಂಬಾ ವರ್ಷದಿಂದ ಸಿನಿಮಾದಿಂದ ದೂರ ಇದ್ದೆ. ನಾನು ಕಂಬ್ಯಾಕ್ ಮಾಡಿದಾಗ ಸೈನ್ ಮಾಡಿದ ಮೊದಲ ಚಿತ್ರವಿದು. ಟೀನೇಜ್ ಹುಡುಗಿ ದಾಟಿ ಈಗ ತಾನೇ ಕೆಲಸ ಮಾಡುವ ಪಾತ್ರ ನನ್ನದು. ಹೆಚ್ಚಾಗಿ ಕಾಡಿನಲ್ಲಿ ಶೂಟ್ ಮಾಡಲಾಗಿದ್ದು, ಒಂದೊಳ್ಳೆ ಅನುಭವ. ಇಲ್ಲಿ ನನ್ನ ಪಾತ್ರಕ್ಕೆ ಬೇಕಾದ ಫಿಟ್ನೆಸ್, ಎಕ್ಸ್ ಪ್ರೆಸ್ ಬದಲಾಯಿಸಿದ್ದೇನೆ. ಫೈಟ್ ಸೀಕ್ವೆನ್ಸ್ ಮಾಡಿದ್ದು, ಖುಷಿಕೊಟ್ಟಿದೆ ಎಂದರು.
ನಾಯಕ ವಿಘ್ನೇಶ್ ಮಾತನಾಡಿ ತುಂಬಾ ಖುಷಿಯಾಗುತ್ತಿದೆ. ಕನ್ನಡದಲ್ಲಿ ಇದು ಮೊದಲ ಸಿನೆಮಾ . ತುಳುವಿನಲ್ಲಿ ಪ್ರಶಾಂತ್ ಸರ್ ಜೊತೆ ಸಿನಿಮಾ ಮಾಡಿದ್ದೇನೆ. ಆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರಕ್ಕೂ ನಿಮ್ಮ ಬೆಂಬಲ ಇರಲಿ ಎಂದರು.
ಕ್ಲಾಂತ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು, ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಎಂ ವಿಘ್ನೇಶ್ ನಾಯಕನಾಗಿ, ಸಂಗೀತ ಭಟ್ ನಾಯಕಿಯಾಗಿ ನಟಿಸುತ್ತಿದ್ದು, ಉಳಿದಂತೆ ಶೋಭ್ ರಾಜ್, ವೀಣಾ ಸಂಗೀತ , ಕಾಮಿಡಿ ಕಿಲಾಡಿಯ ದೀಪಿಕಾ, ಪ್ರವೀಣ್ ಜೈನ್, ಯುವ ಹಾಗೂ ಸ್ವಪ್ನ, ತಿಮ್ಮಪ್ಪ ಕುಲಾಲ್ ನಟಿಸುತ್ತಿದ್ದಾರೆ. ಎಸ್ ಪಿ ಚಂದ್ರಕಾಂತ್ ಸಂಗೀತ, ಪಿಆರ್ ಸೌಂದರ್ ರಾಜ್ ಸಂಕಲನ, ಮೋಹನ್ ಲೋಕನಾಥ್ ಛಾಯಾಗ್ರಹಣ ಚಿತ್ರಕ್ಕಿದೆ.
ಸಂತೋಷ್ ನಾಯ್ಕ್, ವರಾಹ ರೂಪಂ ಖ್ಯಾತಿಯ ಶಶಿರಾಜ್ ಕಾವೂರ್, ವೈಭವ್ ಪ್ರಶಾಂತ್ ಸಾಹಿತ್ಯ ಹಾಡುಗಳಿಗಿದ್ದು, ವಿನೋದ್ ಸ್ಟಂಟ್, ಮಹೇಶ್ ದೇವ್ ಸಂಭಾಷಣೆ ಸಿನಿಮಾಕ್ಕಿದೆ. ಎರಡು ಹಾಡುಗಳಿಗೆ ರಘು ಅವರ ನೃತ್ಯ ಸಂಯೋಜನೆ ಇದೆ . ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ನಡಿ ಉದಯ್ ಅಮ್ಮಣ್ಣಾಯ ಬಂಡವಾಳ ಹೂಡಿದ್ದು, ಅರುಣ್ ಗೌಡ, ಪ್ರದೀಪ್ ಗೌಡ ಸಹ ನಿರ್ಮಾಪಕರಾಗಿ ಆಗಿ ಕೆಲಸ ನಿರ್ವಹಿಸಿದ್ದಾರೆ.
ಸಾಮಾನ್ಯವಾಗಿ ಫಸ್ಟ್ ಲುಕ್ ಪೋಸ್ಟರ್ ರಾಜಕಾರಣಿಗಳು, ಹೀರೋಗಳಿಂದ ಬಿಡುಗಡೆ ಮಾಡಿಸೋದು ಕಾಮನ್. ಆದರೆ ಜೂಮ್ ಕಾಲ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ವಿಭಿನ್ನವಾಗಿ ಬಿಡುಗಡೆ ಮಾಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಫಸ್ಟ್ ಲುಕ್ ಪೋಸ್ಟರ್ ಮೊದಲ ಬಾರಿಗೆ ವಿಮಾನದಲ್ಲಿ ಬಿಡುಗಡೆ ಮಾಡಿರುವ ಖ್ಯಾತಿ ಜೂಮ್ ಕಾಲ್ ಚಿತ್ರಕ್ಕೆ ಸೇರುತ್ತದೆ.
ಭೂಮಿಯಿಂದ 37000 ಅಡಿ ಎತ್ತರದಲ್ಲಿ ಮೋಡದ ಮೇಲೆ ನೀಲಿ ಆಕಾಶದಲ್ಲಿ ಚಲಿಸುತ್ತಿರುವ ವಿಮಾನದಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಕ್ಷಣ ಅದ್ಭುತವಾಗಿತ್ತು ಎಂದು ಅನುಭವ ಹಂಚಿಕೊಂಡರು ನಿರ್ದೇಶಕ ಮಹೇಶ್. ಜೂಮ್ ಕಾಲ್ ಚಿತ್ರ ಕನ್ನಡದ ಮೊದಲ ಕಂಪ್ಯೂಟರ್ ಸ್ಕ್ರೀನ್ ಹಾರರ್ ಸಿನಿಮಾ ಎಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಿದೆ. ಕಂಪ್ಯೂಟರ್ ಸ್ಕ್ರೀನ್ ಹಾರರ್ ಜಾನರ್ ಸಿನಿಮಾಗಳು ಹಾಲಿವುಡ್ನಲ್ಲಿ ಬಂದಿದೆ. ಆದರೆ ಕನ್ನಡದಲ್ಲಿ ಜೂಮ್ ಕಾಲ್ ಮೊದಲ ಸಿನಿಮಾವಾಗಲಿದೆ.
ಹೊಸ ಫಾರ್ಮೆಟ್ನಲ್ಲಿ ಸಿನಿಮಾ ನೋಡಲಿರುವ ಪ್ರೇಕ್ಷಕರಿಗೆ ಖಂಡಿತವಾಗಿಯೂ ವಿಭಿನ್ನ ಅನುಭವ ಸಿಗಲಿದೆ ಎಂದು ಮಾಹಿತಿ ನೀಡಿದರು ನಿರ್ದೇಶಕ ಮಹೇಶ್. ಜೂಮ್ ಕಾಲ್ ಚಿತ್ರವು ಮೇಕಿಂಗ್ ಮತ್ತೆ ವಿಭಿನ್ನ ಪ್ರಚಾರದಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸದ್ಯಕ್ಕೆ ಜೂಮ್ ಕಾಲ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿದೆ. ಜೂಮ್ ಕಾಲ್ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಜೊತೆಗೆ ಶ್ರೀವಾರಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣವನ್ನು ಸಹ ಮಹೇಶ್ ಹೆಚ್.ಎಂ ಮಾಡಿದ್ದಾರೆ. ಎಸ್. ಮಂಜು ಕೊಪ್ಪಳ್ ಛಾಯಾಗ್ರಹಣ ಹಾಗೂ ಸಂಕಲನವಿರುವ ಈ ಚಿತ್ರಕ್ಕೆ ವಿಜಯರಾಜ್ ಸಂಗೀತ ನೀಡಿದ್ದಾರೆ. ರೇಣುಕಾ, ಲಕ್ಷ್ಮೀ ಅರಸ್, ರೂಪ ಮನಕೂರ್, ಅರ್ಜುನ್, ಮಹೇಂದ್ರ, ಪರಮ್ ಮುಂತಾದವರು ಜೂಮ್ ಕಾಲ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.