ಸಾಮಾನ್ಯವಾಗಿ ಫಸ್ಟ್ ಲುಕ್ ಪೋಸ್ಟರ್ ರಾಜಕಾರಣಿಗಳು, ಹೀರೋಗಳಿಂದ ಬಿಡುಗಡೆ ಮಾಡಿಸೋದು ಕಾಮನ್. ಆದರೆ ಜೂಮ್ ಕಾಲ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ವಿಭಿನ್ನವಾಗಿ ಬಿಡುಗಡೆ ಮಾಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಫಸ್ಟ್ ಲುಕ್ ಪೋಸ್ಟರ್ ಮೊದಲ ಬಾರಿಗೆ ವಿಮಾನದಲ್ಲಿ ಬಿಡುಗಡೆ ಮಾಡಿರುವ ಖ್ಯಾತಿ ಜೂಮ್ ಕಾಲ್ ಚಿತ್ರಕ್ಕೆ ಸೇರುತ್ತದೆ.

ಭೂಮಿಯಿಂದ 37000 ಅಡಿ ಎತ್ತರದಲ್ಲಿ ಮೋಡದ ಮೇಲೆ ನೀಲಿ ಆಕಾಶದಲ್ಲಿ ಚಲಿಸುತ್ತಿರುವ ವಿಮಾನದಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಕ್ಷಣ ಅದ್ಭುತವಾಗಿತ್ತು ಎಂದು ಅನುಭವ ಹಂಚಿಕೊಂಡರು ನಿರ್ದೇಶಕ ಮಹೇಶ್.
ಜೂಮ್ ಕಾಲ್ ಚಿತ್ರ ಕನ್ನಡದ ಮೊದಲ ಕಂಪ್ಯೂಟರ್ ಸ್ಕ್ರೀನ್ ಹಾರರ್ ಸಿನಿಮಾ ಎಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಿದೆ.
ಕಂಪ್ಯೂಟರ್ ಸ್ಕ್ರೀನ್ ಹಾರರ್ ಜಾನರ್ ಸಿನಿಮಾಗಳು ಹಾಲಿವುಡ್ನಲ್ಲಿ ಬಂದಿದೆ. ಆದರೆ ಕನ್ನಡದಲ್ಲಿ ಜೂಮ್ ಕಾಲ್ ಮೊದಲ ಸಿನಿಮಾವಾಗಲಿದೆ.

ಹೊಸ ಫಾರ್ಮೆಟ್ನಲ್ಲಿ ಸಿನಿಮಾ ನೋಡಲಿರುವ ಪ್ರೇಕ್ಷಕರಿಗೆ ಖಂಡಿತವಾಗಿಯೂ ವಿಭಿನ್ನ ಅನುಭವ ಸಿಗಲಿದೆ ಎಂದು ಮಾಹಿತಿ ನೀಡಿದರು ನಿರ್ದೇಶಕ ಮಹೇಶ್.
ಜೂಮ್ ಕಾಲ್ ಚಿತ್ರವು ಮೇಕಿಂಗ್
ಮತ್ತೆ ವಿಭಿನ್ನ ಪ್ರಚಾರದಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಸದ್ಯಕ್ಕೆ ಜೂಮ್ ಕಾಲ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿದೆ.
ಜೂಮ್ ಕಾಲ್ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಜೊತೆಗೆ ಶ್ರೀವಾರಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣವನ್ನು ಸಹ ಮಹೇಶ್ ಹೆಚ್.ಎಂ ಮಾಡಿದ್ದಾರೆ.
ಎಸ್. ಮಂಜು ಕೊಪ್ಪಳ್ ಛಾಯಾಗ್ರಹಣ ಹಾಗೂ ಸಂಕಲನವಿರುವ ಈ ಚಿತ್ರಕ್ಕೆ ವಿಜಯರಾಜ್ ಸಂಗೀತ ನೀಡಿದ್ದಾರೆ. ರೇಣುಕಾ, ಲಕ್ಷ್ಮೀ ಅರಸ್, ರೂಪ ಮನಕೂರ್, ಅರ್ಜುನ್, ಮಹೇಂದ್ರ, ಪರಮ್ ಮುಂತಾದವರು ಜೂಮ್ ಕಾಲ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.