ರಾಯರ ಹೆಸರಿನ ಸ್ಥಳವಿದು ರುಚಿ ಇದೆ ಶುಚಿಯೂ ಇದೆ: ಜಗ್ಗೇಶ್ ಸ್ಟೋರ್ಸ್ ನಲ್ಲಿ ಮನರಂಜನಾಭರಿತ ಭೋಜನ!

ಚಿತ್ರ ವಿಮರ್ಶೆ

ವಿಜಯ್ ಭರಮಸಾಗರ

ರೇಟಿಂಗ್: 3.5/5

ಚಿತ್ರ : ರಾಘವೇಂದ್ರ ಸ್ಟೋರ್ಸ್
ನಿರ್ದೇಶಕ : ಸಂತೋಷ್ ಆನಂದರಾಮ್
ನಿರ್ಮಾಣ: ಹೊಂಬಾಳೆ ಫಿಲಂಸ್
ತಾರಾಗಣ: ಜಗ್ಗೇಶ್, ಶ್ವೇತ ಶ್ರೀವಾಸ್ತವ್, ಹೆಚ್ ಜಿ ದತ್ತಾತ್ರೇಯ, ರವಿಶಂಕರ್ ಗೌಡ, ಮಿತ್ರ, ಅಚ್ಯುತ,ರಾಘು ಶಿವಮೊಗ್ಗ ಇತರರು.

ಜೀವನ ಅಂದ್ರೆ ಜೊತೆಗೊಂದು ಜಡೆ ಇರಬೇಕು’…

ಈ ಡೈಲಾಗ್ ಬರುವ ಹೊತ್ತಿಗೆ ಅರ್ಧ ವಯಸ್ಸು ಕಳೆದಿರೋ ಚಿತ್ರದ ನಾಯಕ ಹಯವದನ, ಶತಾಯ ಗತಾಯ ಮದುವೆ ಆಗಲೇಬೇಕೆಂಬ ಹಠಕ್ಕೆ ಬಿದ್ದಿರುತ್ತಾನೆ. ಅವನು ಮದುವೆ ಆಗಬೇಕೆಂದು ಓಡಾಡುವ ಪ್ರಸಂಗವೇ ನೋಡುಗರಲ್ಲಿ‌ ನಗೆ ಬುಗ್ಗೆ ಎಬ್ಬಿಸುವ ಮೂಲಕ ಆರಂಭದಿಂದ ಅಂತ್ಯದವರೆಗೂ ಅತ್ತಿತ್ತ ಅಲುಗಾಡದಂತೆ ನೋಡಿಸಿಕೊಂಡು ಹೋಗುತ್ತೆ. ಈ ಚಿತ್ರದ ವಿಶೇಷ ಅಂದರೆ ಗಟ್ಟಿ ಕಥೆ. ಅದಕ್ಕೆ ತಕ್ಕ ಚಿತ್ರಕಥೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಪಾತ್ರಗಳ ಜೋಡಣೆ ಮತ್ತು ನಿರೂಪಣೆ.

ಹೇಳಿ ಕೇಳಿ ಇದು ಜಗ್ಗೇಶ್ ಚಿತ್ರ. ಅವರ ಎಂದಿನ ಶೈಲಿಯ ಸಿನಿಮಾಗಳಿಗಿಂತಲೂ ಭಿನ್ನವಾಗಿದೆ. ಜಗ್ಗೇಶ್ ಅಂದರೇನೆ ನಗು. ಅದಕ್ಕಿಲ್ಲಿ ಯಾವುದೇ ಕೊರತೆ ಇಲ್ಲ. ಸಿನಿಮಾದುದ್ದಕ್ಕೂ ಅವರು ತಮ್ಮ ಪಾತ್ರವನ್ನು ನಿರ್ವಹಿಸಿರುವ ರೀತಿಯೇ ನೋಡುಗರನ್ನು ಗಟ್ಟಿಯಾಗಿ ಕೂರಿಸುತ್ತೆ.

ಶುರುವಿನಿಂದಲೇ ಕಚಗುಳಿ ಇಡುವ ಚಿತ್ರದಲ್ಲಿ ಒಂದಷ್ಟು ಏರಿಳಿತಗಳಿವೆ. ಅಲ್ಲಲ್ಲಿ ಸಣ್ಣ ಸಣ್ಣ ತಗ್ಗುದಿನ್ನೆಗಳೂ ಇವೆ. ಕೆಲ ಕಡೆ‌ ಕಂಟಿನ್ಯುಟಿ ಮಿಸ್ ಆಗಿದೆ. ಅದರ ಹೊರತಾಗಿಯೂ ಸಿನಿಮಾ ನಗಾಡಿಸಿಕೊಂಡು ಹೋಗುತ್ತೆ.
ಉಪ್ಪು ಹುಳಿ ಖಾರ ಹದವಾಗಿ ಬೆರೆತ ಸ್ವಾದಿಷ್ಟ ಭೋಜನದಷ್ಟೇ ಇಲ್ಲಿ ಕಾಮಿಡಿ ವರ್ಕೌಟ್ ಆಗಿದೆ. ಜಗ್ಗೇಶ್ ಅವರ ಮಾತಿನ ಲಹರಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿರುವುದೇ ಚಿತ್ರದ ಪ್ಲಸ್.

ಒಂದು ಚಿತ್ರಕ್ಕೆ ಬೇಕಿರೋದು ಕಥೆ ಅದಿಲ್ಲಿ‌ ಸರಾಗ. ಸ್ವಾದಿಷ್ಟ ಭರಿತ ಅಡುಗೆಯ ಘಮಲಿನಷ್ಟೇ ಪರದೆ ಮೇಲೆ ಕಾಣುವ ಪ್ರತಿ ಪಾತ್ರಗಳೂ ಸಹ ನಗುವಿನ ಅಲೆಗೆ ಕಾರಣವಾಗುತ್ತವೆ. ನಗುವಿನೊಂದಿಗೆ ಶುರುವಾಗುವ ಸಿನಿಮಾ ಮೊದಲರ್ಧ ಮುಗಿಯೋದೇ ಗೊತ್ತಾಗಲ್ಲ. ದ್ವಿತಿಯಾರ್ಧ ಮತ್ತೊಂದು ಮಜಲಿನತ್ತ ಸಾಗುವ ಸಿನಿಮಾ, ಗಂಭೀರವಾಗಿಸುತ್ತಲೇ ಅಂತ್ಯವಾಗುತ್ತೆ. ಇಲ್ಲೊಂದು ಸೂಕ್ಷ್ಮ ಅಂಶ ನೋಡುಗರನ್ನ ಕೊಂಚ ಕಾಡದೇ ಇರದು. ಆ ಕಾಡುವ ಕಥೆ ಏನೆಂಬ ಕುತೂಹಲ ಇದ್ದರೆ, ಒಂದೊಮ್ಮೆ ರಾಘವೇಂದ್ರ ಸ್ಟೋರ್ಸ್ ರುಚಿ ಸವಿಯಬಹುದು.

ಸ್ಟೋರ್ಸ್ ಒಳಗಿನ ಪ್ಲಸ್‌

ಒಳ್ಳೆಯ ಕಥಾಹಂದರ, ನಿರೂಪಣೆ, ಪಾತ್ರ ಪೋಷಣೆ, ಸಂಗೀತ, ಸಾಹಿತ್ಯ, ಛಾಯಾಗ್ರಹಣ, ಸಂಕಲನ, ಕಾಸ್ಟ್ಯೂಮ್ಸ್, ಕಚಗುಳಿ ಇಡುವ ಪಂಚ್ ಡೈಲಾಗ್ಸ್.

ಸ್ಟೋರ್ಸ್ ಒಳಗಿನ ಮೈನಸ್

ಅಲ್ಲಲ್ಲಿ ಮಿಸ್ಸಾದ ಕಂಟಿನ್ಯುಟಿ, ಕೆಲವು ಕಡೆ ಬೇಡದ ದೃಶ್ಯ, ಅನಗತ್ಯ ಮಾತು, ಆಗಾಗ ಜಾಳೆನಿಸೋ ಹಿನ್ನೆಲೆ ಸಂಗೀತ.

ಸ್ಟೋರ್ಸ್ ಕಥೆ ಏನು?
ನಲವತ್ತರ ಆಸುಪಾಸಿನ ನಾಯಕ ಹಯವದನನ ಮದುವೆಯ ಒದ್ದಾಟ. ತನ್ನ ತಮ್ಮನಿಗೆ ಮದ್ವೆ ಮಾಡೋ ಅಪ್ಪ ಹಿರಿಯ ಮಗ ಹಯವದನಿಗೊಂದು ಹೆಣ್ಣು ನೋಡಲಾಗದ ನಿರುತ್ಸಾಹಿ. ಹೀಗಿರುವಾಗ ಒಂದು ಹೆಣ್ಣು ಹುಡುಕಿ ಮದ್ವೆ ಮಾಡಬೇಕೆಂಬ ಹಯವದನ ಅಪ್ಪ ಹತ್ತಾರು ಹುಡುಗಿಯನ್ನು ನೋಡಿತ್ತಾನೆ. ಒಂದಲ್ಲ ಒಂದು ಕಾರಣಕ್ಕೆ ಅವೆಲ್ಲವೂ ಕ್ಯಾನ್ಸಲ್. ಆ ಹೆಣ್ಣು ನೋಡುವ ಸನ್ನಿವೇಶಗಳೇ ಸಿನಿಮಾದ ಹೈಲೆಟ್.

ತನ್ನ ಜೊತೆಗಿದ್ದವರಿಗೆಲ್ಲ ಮದ್ವೆ ಆಗುತ್ತೆ ತನಗೇಕೆ ಹೀಗೆ ಎಂಬ ಬೇಸರದಲ್ಲಿರುವಾಗಲೇ ಒಂದು ಹೆಣ್ಣು ಓಕೆ ಆಗುತ್ತೆ. ಅದಾದ ಮೇಲೆ ಅಲ್ಲೊಂದು ನಗೆಬುಗ್ಗೆ, ಲೈಸೆನ್ಸ್ ಸಿಕ್ಕರೂ ಓಡಿಸೋಕೆ ಗಾಡಿ ಸಿಗಲ್ಲ ಎಂಬ ಇಕ್ಕಟ್ಟಿನ ಪರಿಸ್ಥಿತಿಯ ಸನ್ನಿವೇಶವೇ ಹೈಲೆಟ್. ಆಮೇಲೊಂದು ಟ್ವಿಸ್ಟು ಮತ್ತು ಟೆಸ್ಟು. ಒಟ್ಟಾರೆ ಮದ್ವೆ ಪ್ರಸಂಗದೊಳು ಹತ್ತಾರು ಪರೀಕ್ಷೆಗಳು ಎದುರಾಗುತ್ತವೆ. ಕೊನೆಗೆ ಹಯವದನ ಪಾಸಾಗುತ್ತಾನೋ ಇಲ್ಲವೋ ಅನ್ನೋದು ಕಥೆ. ನಿರ್ದೇಶಕರ ಸಿನಿಮಾಗಳಲ್ಲಿ ಕಾಮನ್ ಸ್ಟೋರಿಲೈನ್ ಇದ್ದೇ ಇರುತ್ತೆ. ಅದು ಇಲ್ಲೂ ಮುಂದುವರೆದಿದೆ. ಏನು ಎಂಬುದಕ್ಕೆ ಒಮ್ಮೆ ಸಿನಿಮಾ ನೋಡಿ.

ಯಾರು ಹೇಗೆ?
ಜಗ್ಗೇಶ್ ತಮ್ಮ ಸಹಜ ಅಭಿನಯ ದ ಮೂಲಕ ನೋಡುಗರ ಮನ ತಟ್ಟುತ್ತಾರೆ, ನಗಿಸುತ್ತಾರೆ ಕೂಡ. ಅಲ್ಲಲ್ಲಿ ಭಾವುಕತೆಗೂ ಕಾರಣರಾಗುತ್ತಾರೆ. ಶ್ವೇತಾ ಶ್ರೀನಿವಾಸ್ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಕೋಗಿಲೆ ಪಾತ್ರದಲ್ಲಿ ಹಾಸ್ಯ ಮಿತ್ರ ಇಲ್ಲಿ ಭರಪೂರ ರಂಜನೆ ನೀಡಿದ್ದಾರೆ.‌ ಮೂಗನಾಗಿ ನೋಡುಗರ ಗಮನ ಸೆಳೆಯುತ್ತಾರೆ. ಹೀರೋ ಜತೆಗಾರನಾಗಿ ಮಿತ್ರ ಇಲ್ಲಿ ಹೈಲೆಟ್. ಉಳಿದಂತೆ ಮ್ಯಾಟ್ರು ಮಧು ಪಾತ್ರದಲ್ಲಿ ರವಿಶಂಕರ್ ಗೌಡ ಕೂಡ ಕಥೆಯ ಸಾಗುವಿಕೆಗೆ ಸಾಕ್ಷಿಯಾಗುತ್ತಾರೆ. ದತ್ತಣ್ಣ ತಂದೆಯಾಗಿ ಅಐ ಎನಿಸಿಕೊಂಡಿದ್ದಾರೆ.

ಆಫ್ ಸ್ಕ್ರೀನ್ ಕೆಲ್ಸ ಹೇಗೆ?

ಅಜನೀಶ್ ಲೋಕನಾಥ್ ಸಂಗೀತಕ್ಕಿನ್ನೂ ಧಮ್ ಇರಬೇಕಿತ್ತು. ಸಂತೋಷ್ ಮತ್ತು ಗೌಸ್ ಪೀರ್ ಸಾಹಿತ್ಯ ಸನ್ನಿವೇಶಕ್ಕೆ ಪೂರಕವಾಗಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣದಲ್ಲಿ ಸ್ಟೋರ್ಸ್ ಅಂದ ಹೆಚ್ಚಿದೆ.

ಕೊನೆಮಾತು: ಇಲ್ಲಿ ಅಪ್ಪ ಮಗನ ಬಾಂಧವ್ಯ, ಗಂಡ ಹೆಂಡತಿಯ ಸಾಂಗತ್ಯ, ರಕ್ತ‌ ಸಂಬಂಧದ ಆಚೆಗೂ ಇರಬೇಕಾದ ಆಪ್ತತೆ ಆಕರ್ಷಣೆ.

Related Posts

error: Content is protected !!