ಚಿತ್ರೀಕರಣ ಮುಗಿಸಿ, ಎಡಿಟಿಂಗ್ ನಡೆಸುತ್ತಿದ್ದ ಸುಧೀರ್ ಅತ್ತಾವರ್ ನಿರ್ದೇಶನದ “ಕೊರಗಜ್ಜ” ಚಿತ್ರಕ್ಕೆ ಮೂರನೆಯ ಬಾರಿಗೆ ಕ್ಲೈಮ್ಯಾಕ್ಸ್ ಚಿತ್ರಿಸಿಕೊಳ್ಳಲಾಗಿದೆ. ಗಗನ ಚುಕ್ಕಿ ಜಲಪಾತದ ಮೇಲಿನಿಂದ ನೀರು ಧುಮುಕುವ ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಚಿತ್ರದ ಕ್ಲೈಮ್ಯಾಕ್ಸನ್ನು ಮರು ಚಿತ್ರೀಕರಿಸಿ ಕೊಳ್ಳಲಾಯಿತು.
ಈ ಸಮಯದಲ್ಲಿ ಆಂಟ್ ಮ್ಯಾನ್, ಟ್ರೂ ಸ್ಪಿರಿಟ್, ಅಕ್ವ ಮ್ಯಾನ್ ಮೊದಲಾದ ಹಾಲಿವುಡ್ ಚಿತ್ರಗಳ VFX ಮತ್ತು ಗ್ರಾಫಿಕ್ಸ್ ತಂತ್ರಜ್ಞರು ಭಾಗಿಯಾಗಿದ್ದರು. ನಂತರ ಯಲಹಂಕದ ಬಳಿ ಇರುವ ಸ್ಟುಡಿಯೋ 9 ರಲ್ಲಿ ಸತತ ಐದು ದಿನಗಳ ಕಾಲ ಹಿರಿಯ ನಟಿ ಶ್ರುತಿ, ನಾಯಕ ನಟ ಭರತ್ ಸೂರ್ಯ ಮತ್ತು ರಂಗಭೂಮಿ ಕಲಾವಿದ ಡುಂಡ್ಸಿ ಮೊದಲಾದವರು ಗ್ರೀನ್ ಮ್ಯಾಟ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು.
ನಟಿ ಶ್ರುತಿಯವರು ನಿರ್ವಹಿಸುತ್ತಿರುವ ಕೊರಗಜ್ಜನ ಸಾಕು ತಾಯಿ ಬೈರಕ್ಕೆ ಬೈಕಡ್ತಿ ಯ ದೇವಸ್ಥಾನ ವು ಉಡುಪಿ ಬಳಿ ಇದ್ದು, ಕೊರಗಜ್ಜ ಮತ್ತು ಸಾಕುತಾಯಿ ಬೈಕಡ್ತಿಯ ಸಂಬಂಧದ ಕುತೂಹಲಕಾರಿ ಅಂಶ ಕ್ಲೈಮ್ಯಾಕ್ಸ್ ನಲ್ಲಿ ಮೂಡಿಬರಲಿದೆ
ಬಹುಕೋಟಿ ರುಪಾಯಿಗಳನ್ನು ಹೂಡಿ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ರವರು ಧೃತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿ
ಕನ್ನಡ, ಮಲಯಾಳಂ ಹಾಗೂ ತುಳು ಭಾಷೆಗಳಲ್ಲಿ ನಿರ್ಮಿಸುತ್ತಿರುವ ಈ ಚಿತ್ರದ ಸಂಕಲನ ಕಾರ್ಯವನ್ನು ಸುರೇಶ್ ಅರಸ್ ಮತ್ತು ವಿದ್ಯಾಧರ್ ಶೆಟ್ಟಿ ಮುಗಿಸಿದ್ದಾರೆ.
ಸಂಗೀತ ಸುಧೀರ್ – ಕೃಷ್ಣ ಅವರದು. ಡಿಓಪಿ ಯಾಗಿ ಪವನ್ ಕುಮಾರ್ ಕಾರ್ಯ ನಿರ್ವಹಿಸಿದ್ದಾರೆ. ಕಬೀರ್ ಬೇಡಿ, ಭವ್ಯ, ಸಂದೀಪ್ ಸೊಪರ್ಕರ್, ನವೀನ್ ಪಡಿಲ್ ಹೀಗೆ ಅನೇಕ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
“ಜಯಭೇರಿ”, ” ರಣಚಂಡಿ” ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳ ನಿರ್ದೇಶಕ ಜಿ.ಕೆ.ಮುದ್ದುರಾಜ್ ಹಲವು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿ ಬಂದಿದ್ದಾರೆ. “ಎಜುಕೇಟೆಡ್ ಬುಲ್ಸ್” ಎಂಬ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ .ಮುಹೂರ್ತ ನೆರವೇರಿದೆ. ಭಾ.ಮ.ಗಿರೀಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಡಾ.ವಿ.ನಾಗೇಂದ್ರಪ್ರಸಾದ್ ಕ್ಯಾಮೆರಾ ಚಾಲನೆ ಮಾಡಿದರು.
ಒಡೆಯರ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಜಗದೀಶ್ ಅವರದು. ಬೆಂಗಳೂರು ಒಂದೇ ಹಂತದಲ್ಲಿ ಸುತ್ತಮುತ್ತ ಸುಮಾರು ನಲವತ್ತು ದಿನಗಳ ಚಿತ್ರೀಕರಣ ನಡೆಯಲಿದೆ.
ತನುಷ್, ಯಶಸ್ ಅಭಿ, ರಾಕೇಶ್ ಚಂದ್ರ, ಹರ್ಷಿಣಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ರಾಘವೇಂದ್ರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಬಾಬುಖಾನ್ ಅವರ ಕಲಾ ನಿರ್ದೇಶನ “ಎಜುಕೇಟೆಡ್ ಬುಲ್ಸ್” ಚಿತ್ರಕ್ಕಿದೆ.
ಕೊರೋನ ನಂತರ ಇಂಟರ್ ನೆಟ್ ಬಳಕೆ ಬಹಳ ಹೆಚ್ಚಾಗಿದೆ. ಈಗ ಹೆಚ್ಚಾಗಿ ಎಲ್ಲಾ ಆನಲೈನ್ ನಲ್ಲೇ ನಡೆಯುತ್ತಿದೆ. ಆದರೆ ಕೊರೋನ ಪೂರ್ವದಲೇ ಹಾಲಿವುಡ್ ನಿರ್ದೇಶಕ ರಾಂಡಿ ಕೆಂಟ್ ” ರೋಡ್ ಕಿಂಗ್” ಚಿತ್ರವನ್ನು ಸ್ಕೈಪ್ ಮೂಲಕ ನಿರ್ದೇಶಿಸಿದ್ದಾರೆ. ಆಗಿನ ಪ್ರಕಾರ ಈ ರೀತಿ ಸ್ಕೈಪ್ ಮೂಲಕ ನಿರ್ದೇಶನ ಮಾಡಿರುವುದು ಇದೇ ಮೊದಲು. ಈ ಚಿತ್ರ ಇದೇ 23 ರಂದು ಬಿಡುಗಡೆಯಾಗುತ್ತಿದೆ.
ಹಾಲಿವುಡ್ ನ ರಾಂಡಿ ಕೆಂಟ್ ಅವರ ಬಳಿ ಈ ಚಿತ್ರವನ್ನು ನಿರ್ದೇಶನ ಮಾಡಿಸಬೇಕೆಂದುಕೊಂಡು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ವೀಸಾ ಸಮಸ್ಯೆಯಿಂದ ರಾಂಡಿ ಅವರು ಭಾರತಕ್ಕೆ ಬರಲಾಗಲಿಲ್ಲ. ಆಗ ಏನು ಮಾಡಬೇಕೆಂದು ಹೊಳೆಯಲಿಲ್ಲ. ಹೀಗೆ ಯೋಚಿಸುತ್ತಿದ್ದಾಗ ಸ್ಕೈಪ್ ಮೂಲಕ ನಿರ್ದೇಶನ ಮಾಡಿಸಿದರೆ ಹೇಗೆ? ಎಂದು ನನ್ನ ಮಿತ್ರ ಭುವನ್ ಬಳಿ ಹೇಳಿದೆ. ಆನಂತರ ಸ್ಕೈಪ್ ಮೂಲಕವೇ ರಾಂಡಿ ಅವರು ಅಮೇರಿಕಾದಿಂದ ಈ ಚಿತ್ರ ನಿರ್ದೇಶನ ಮಾಡಿದರು. ಹಲವು ಕಾರಣಾಂತರದಿಂದ ಚಿತ್ರ ತೆರೆಗೆ ಬರುವುದು ತಡವಾಯಿತು. ಜೂನ್ 23 ಚಿತ್ರ ಬಿಡುಗಡೆಯಾಗಲಿದೆ. ನಾನೇ ಚಿತ್ರಕ್ಕೆ ಕಥೆ ಬರೆದಿದ್ದೇನೆ. ನಾಯಕನಾಗಿಯೂ ನಟಿಸಿದ್ದೇನೆ ಎಂದರು ಮತೀನ್ ಹುಸೇನ್.
ನಾನು ಹಾಲಿವುಡ್ ನಲ್ಲಿ ಹದಿಮೂರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಸ್ಕೈಪ್ ಮೂಲಕ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಿದ್ದು ನನಗೆ ಖಷಿಯಾಗಿದೆ ಎಂದರು ನಿರ್ದೇಶಕ ರಾಂಡಿ ಕೆಂಟ್. . “ರೋಡ್ ಕಿಂಗ್ ” ಚಿತ್ರದ ಕಥೆ ಚೆನ್ನಾಗಿದೆ. ಸದ್ಯದಲ್ಲೇ “ರೋಡ್ ಕಿಂಗ್ 2” ಚಿತ್ರವನ್ನು ಆರಂಭಿಸುವುದಾಗಿ ನಿರ್ಮಾಪಕ ದಿಲೀಪ್ ಕುಮಾರ್ ತಿಳಿಸಿದರು.
ರಾಂಡಿ ಕೆಂಟ್ ಅವರು ನಿರ್ದೇಶನ ಮಾಡಿದ ಪರಿಯನ್ನು ವಿಸ್ತಾರವಾಗಿ ಸಂಕಲನಕಾರ ಶ್ರೀ ಕ್ರೇಜಿ ಮೈಂಡ್ಸ್ ವಿವರಿಸಿದರು.
ಚಿತ್ರದಲ್ಲಿ ನಟಿಸಿರುವ ಲೀಲಾ ಮೋಹನ್, ಹರೀಶ್ ಕುಮಾರ್ ಹಾಗೂ ಭುವನ್ ರಾಜ್ ಚಿತ್ರದ ಕುರಿತು ಮಾತನಾಡಿದರು. ಚಿತ್ರದ ಹಾಡೊಂದನ್ನು ಹಾಡಿರುವ ಖ್ಯಾತ ಗಾಯಕ ಚಂದನ್ ಶೆಟ್ಟಿ ಸಹ ಚಿತ್ರತಂಡಕ್ಕೆ ಶುಭ ಕೋರಿದರು. “ರನ್ ಆಂಟೋನಿ” ಖ್ಯಾತಿಯ ರುಕ್ಷಾರ್ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ.
ಸಾಕಷ್ಟು ಹೊಸ ಪ್ರಯೋಗಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗಿದೆ. ಅಂತಹ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ “ದೇವರ ಆಟ ಬಲವರಾರು” ಚಿತ್ರತಂಡ. ಈ ಹಿಂದೆ ಸಂಚಾರಿ ವಿಜಯ್ ಅವರ “ಫಿರಂಗಿ ಪುರ” ಚಿತ್ರವನ್ನು ಕೈಗೆತ್ತಿಕೊಂಡಿದ್ದ ಜನಾರ್ದನ್ ಪಿ ಜಾನಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೂವತ್ತು ದಿನಗಳಲ್ಲಿ ಚಿತ್ರದ ಎಲ್ಲಾ ಪ್ರಕ್ರಿಯೆ ಮುಗಿಸಿ ಬಿಡುಗಡೆ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಲು ಹೊರಟಿದ್ದಾರೆ.
ನಾನು ಈ ಹಿಂದೆ “ಫಿರಂಗಿ ಪುರ” ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತಮ್ಮನ್ನು ಭೇಟಿ ಮಾಡಿದ್ದೆ. ಈಗ “ದೇವರ ಆಟ ಬಲವರಾರು” ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಇದು 1975 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಎಲ್ಲಾ ಕೆಲಸಗಳನ್ನು ಒಂದು ತಿಂಗಳೊಳಗೆ ಮುಗಿಸಿ, ಸರಿಯಾಗಿ ಒಂದು ತಿಂಗಳಿಗೆ ಚಿತ್ರವನ್ನು ತೆರೆಗೆ ತರಬೇಕು. ನಮ್ಮ ಚಿತ್ರ ಗಿನ್ನಿಸ್ ರೆಕಾರ್ಡ್ ಆಗಬೇಕು ಎಂಬುದು ನನ್ನ ಅಸೆ.
ಈ ಕುರಿತು ನಾನು, ನನ್ನ ತಂಡ ಸುಮಾರು ಆರು ತಿಂಗಳಿನಿಂದ ಶ್ರಮ ಪಡುತ್ತಿದ್ದೇವೆ. ಇಡೀ ಚಿತ್ರದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯಲಿದೆ. ಅಲ್ಲಿನ ವಿಶಾಲವಾದ ಜಾಗದಲ್ಲಿ ಸೆಟ್ ಗಳನ್ನು ನಿರ್ಮಿಸಿ ಅದೇ ಸ್ಥಳದಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ದಿನ ಸುಮಾರು 160 ಕ್ಕೂ ಹೆಚ್ಚು ಜನ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಜೂನ್ 16 ರಿಂದ ಐದು ದಿನಗಳ ಕಾಲ ಚಿತ್ರೀಕರಣ ನಡೆಯುವ ಸ್ಥಳದಲ್ಲಿಯೇ ತಾಲೀಮು ನಡೆಸಲಿದ್ದೇವೆ. ಆನಂತರ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಹದಿನಾರು ದಿನದೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ.
ಚಿತ್ರೀಕರಣವಾದ ನಂತರ ಎಲ್ಲಾ ಕಾರ್ಯಗಳನ್ನು ಪೂರೈಸಿ ಜುಲೈ 20ರಂದು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ನಮ್ಮ ಕಾರ್ಯವೈಖರಿ ವೀಕ್ಷಿಸಲು ಆರು ಜನ ತೀರ್ಪುಗಾರರು ಆ ಸ್ಥಳದಲ್ಲೇ ಇರುತ್ತಾರೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಅರ್ಜುನ್ ರಮೇಶ್, ಸಿಂಧೂ ಲೋಕನಾಥ್, ವರ್ಷ ವಿಶ್ವನಾಥ್, ಸಂಪತ್ ರಾಮ್, ಅರ್ಜುನ್, ಮೇದಿನಿ ಕೇಳಮನೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ನಿರ್ದೇಶಕ ಜನಾರ್ದನ್ ಪಿ ಜಾನಿ ತಿಳಿಸಿದರು.
ನಾನು ಈ ಹಿಂದೆ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಈ ಚಿತ್ರದ ನಿರ್ದೇಶಕರ ಕಾರ್ಯವೈಖರಿ ಕಂಡು ಆಶ್ಚರ್ಯವಾಯಿತು. ಈ ಚಿತ್ರಕ್ಕಾಗಿ ಎರಡು ತಿಂಗಳಲ್ಲಿ ಹದಿನಾಲ್ಕು ಕೆಜಿ ತೂಕ ಇಳಿಸಿದ್ದೇನೆ. ನೋಡಿದವರು ಕಂಡು ಹಿಡಿಯದಷ್ಟು ಸಣ್ಣ ಆಗಿದ್ದೇನೆ. ನಿರ್ದೇಶಕರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಸೂರಿ ನನ್ನ ಪಾತ್ರದ ಹೆಸರು ಎಂದರು ನಾಯಕ ಅರ್ಜುನ್ ರಮೇಶ್.
ಮೂರು ವರ್ಷಗಳ ನಂತರ ನಾನು ನಟಿಸುತ್ತಿರುವ ಚಿತ್ರವಿದು. ರಚನ ನನ್ನ ಪಾತ್ರದ ಹೆಸರು. ನಾನು ಈವರೆಗೂ ಮಾಡಿರದ ಪಾತ್ರ ಈ ಚಿತ್ರದಲ್ಲಿ ಮಾಡುತ್ತಿದ್ದೇನೆ ಎಂದರು ನಾಯಕಿ ಸಿಂಧು ಲೋಕನಾಥ್.
ಇಂತಹ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಖುಷಿ ನಮ್ಮಗಿದೆ ಎಂದರು ನಿರ್ಮಾಪಕರಾದ ಹನುಮಂತರಾಜು, ಲತಾ ರಾಗ ಹಾಗೂ ಸಹ ನಿರ್ಮಾಪಕ ಅನಿಲ್ ಜೈನ್.
ಚಿತ್ರದಲ್ಲಿ ನಟಿಸುತ್ತಿರುವ ವರ್ಷ ವಿಶ್ವನಾಥ್, ಅರ್ಜುನ್, ಸಂಪತ್ ರಾಮ್, ಸಂಗೀತ ನಿರ್ದೇಶಕ ಶ್ಯಾನ್ ಎಲ್ ರಾಜ್, ಸಾಹಸ ನಿರ್ದೇಶಕ ಕುಂಗ್ಫು ಚಂದ್ರು ಹಾಗೂ ಕಾರ್ಯಕಾರಿ ನಿರ್ಮಾಪಕ ಶ್ರೀಪಾದ್ ಹೆಗಡೆ ಚಿತ್ರದ ಕುರಿತು ಮಾತನಾಡಿದರು.
“ದೇವರ ಆಟ ಬಲವರಾರು” ಚಿತ್ರಕ್ಕೆ ಪ್ರತಿಯೊಬ್ಬ ಮನುಷ್ಯನ ಒಳಗೆ ಒಂದು ಕ್ರೂರ ಮೃಗ ಇದ್ದೆ ಇರುತ್ತದೆ ಎಂಬ ಅಡಿಬರಹವಿದೆ.
ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಮೊದಲ ಭಾಗವಾದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ A” ಸೆಪ್ಟೆಂಬರ್ 01 ಮತ್ತು ಎರಡನೆಯ ಭಾಗವಾದ ‘ಸಪ್ತ ಸಾಗರದಾಚೆ ಎಲ್ಲೋin – ಸೈಡ್ B” ಅಕ್ಟೋಬರ್ 20ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಣ ಮತ್ತು ವಿತರಣೆ ಸಂಸ್ಥೆಯಾದ ಕೆ.ವಿ.ಎನ್. ಪ್ರೊಡಕ್ಷನ್ಸ್ ಈ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದೆ.
‘ಕವಲು ದಾರಿ’ ನಂತರ ಹೇಮಂತ್ ರಾವ್ ನಿರ್ದೇಶಿಸಿರುವ ಚಿತ್ರ “ಸಪ್ತ ಸಾಗರದಾಚೆ ಎಲ್ಲೋ”. ಈ ಚಿತ್ರದ ಚಿತ್ರೀಕರಣ ಕೆಲವು ತಿಂಗಳುಗಳ ಹಿಂದೆ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ. ಈಗ ಚಿತ್ರದ ಬಿಡುಗಡೆ ದಿನಾಂಕದ ಘೋಷಣೆಯಾಗಿದೆ. ಇಲ್ಲಿಂದ ಚಿತ್ರದ ಪ್ರಚಾರದ ಕೆಲಸಗಳು ಪ್ರಾರಂಭವಾಗಲಿವೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಪಾತ್ರ ಎರಡು ಶೇಡ್ ಗಳಲ್ಲಿರುತ್ತದೆ. ಎರಡು ಕಾಲಘಟ್ಟಗಳಲ್ಲಿ ಕಥೆ ನಡೆಯಲಿದೆ. ರಕ್ಷಿತ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಚೈತ್ರಾ ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಗೋಪಾಲಕೃಷ್ಣ ದೇಶಪಾಂಡೆ, ರಮೇಶ್ ಇಂದಿರಾ ಮುಂತಾದವರು ನಟಿಸಿದ್ದಾರೆ.
ನಟನೆಯ ಜೊತೆಗೆ ರಕ್ಷಿತ್ ಶೆಟ್ಟಿ “ಸಪ್ತ ಸಾಗರದಾಚೆ ಎಲ್ಲೋ” – ಸೈಡ್ A ಮತ್ತು B’ ಚಿತ್ರಗಳನ್ನು ಪರಂವಃ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಹೇಮಂತ್ ರಾವ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ, ಯೋಗರಾಜ್ ಭಟ್ ನಿರ್ದೇಶನದ “ಗರಡಿ” ಚಿತ್ರದ ಮೊದಲ ಹಾಡು “ಹೊಡಿರೆಲೆ ಹಲಗಿ” ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ವಿ.ಹರಿಕೃಷ್ಣ ಸಂಗೀತ ನೀಡಿರುವ, ಯೋಗರಾಜ್ ಭಟ್ ಬರೆದಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ.
ಜನಸಾಮಾನ್ಯವಾಗಿ ಮಾತನಾಡಬೇಕಾದರೆ ಇವರು, ಅವರ “ಗರಡಿ” ಯಲ್ಲಿ ಪಳಗಿದವರು ಅಂತ ಹೇಳುತ್ತಾರೆ. “ಗರಡಿ” ಎಂದರೆ ಅದೊಂದು ಸಮರ ಕಲೆ. ವ್ಯಾಯಾಮ ಶಾಲೆ. ಈ “ಗರಡಿ” ಮನೆಯ ಮುಖ್ಯಸ್ಥ ರಂಗಪ್ಪ. ಆ ಪಾತ್ರದಲ್ಲಿ ಬಿ.ಸಿ.ಪಾಟೀಲ್ ಅವರು ಕಾಣಿಸಿಕೊಂಡಿದ್ದಾರೆ. ಆ ಗುರುವಿಗೆ ಸಾಕಷ್ಟು ಶಿಷ್ಯರು. ಅದರಲ್ಲಿ ನಾಯಕ ಸೂರ್ಯ ಕೂಡ ಒಬ್ಬ. ಕಾರಣಾಂತರದಿಂದ ಗುರುವಿಗೆ ಶಿಷ್ಯ ಎದುರು ನಿಲ್ಲುವ ಪರಿಸ್ಥಿತಿ ಬರುತ್ತದೆ. ನಾಯಕನ ಅಣ್ಣನ ಪಾತ್ರದಲ್ಲಿ ದರ್ಶನ್ ಅಭಿನಯಿಸುತ್ತಿದ್ದಾರೆ.
ಇನ್ನೂ ಈ ಹಾಡು ಹುಟ್ಟಲು ನಿರ್ಮಾಪಕರಾದ ಬಿ.ಸಿ.ಪಾಟೀಲ್ ಅವರು ಕಾರಣ. ಅವರು ನನಗೆ ಕರೆ ಮಾಡಿ ಉತ್ತರ ಕರ್ನಾಟಕದಲ್ಲಿ “ಹಲಗಿ” ಹೊಡಯಬೇಕಾದರೆ ಒಂದು ರಾಗ ಬರುತ್ತದೆ. ಅದರ ಮೇಲೆ ಹಾಡು ಮಾಡಿ ಎಂದರು. ಆಗ ಈ ಹಾಡು ಬರೆದೆ. ಮೇಘನಾ ಹಳಿಯಾಳ್ ಅದ್ಭುತವಾಗಿ ಹಾಡಿದ್ದಾರೆ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿಶ್ವಿಕಾ ನಾಯ್ಡು ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎಂದು ಯೋಗರಾಜ್ ಭಟ್ ತಿಳಿಸಿದರು.
“ಗರಡಿ” ಚಿತ್ರ ಆರಂಭವಾದ ಬಗ್ಗೆ ತಿಳಿಸಿದ ಬಿ.ಸಿ.ಪಾಟೀಲ್ ಅವರು, ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಹೇಳಿದರು. ಈಗ ಕೌರವ ಪ್ರೊಡಕ್ಷನ್ ಹೌಸ್ ಹಾಗೂ ಶಶಾಂಕ್ ಸಿನಿಮಾಸ್ ಜೊತೆ ಸೇರಿ “ಕೌಸಲ್ಯ ಸುಪ್ರಜಾ ರಾಮ” ನಿರ್ಮಿಸುತ್ತಿದ್ದೇವೆ. ಉತ್ತಮ ಕಥೆ ತರುವ ಯುವ ನಿರ್ದೇಶಕರಿಗೂ ನಮ್ಮ ಸಂಸ್ಥೆಯಿಂದ ಅವಕಾಶ ನೀಡಲಾಗುತ್ತದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದ್ದೆ. ಆ ಸ್ಪರ್ಧೆಗೆ ಬಿ.ಸಿ.ಪಾಟೀಲ್ ಸರ್ ಜಡ್ಜ್ ಆಗಿ ಆಗಮಿಸಿದ್ದರು. ಮುಂದೆ ಒಳ್ಳೆಯ ನಟಿ ಆಗುತ್ತೀಯಾ ಎಂದು ಆಶೀರ್ವದಿಸಿದರು. ಇಂದು ಅವರ ನಿರ್ಮಾಣದ ಈ ಚಿತ್ರದಲ್ಲಿ ನಾನು ಅಭಿನಯಿಸಿದ್ದೇನೆ. ನನಗೆ ನೃತ್ಯ ಎಂದರೆ ಇಷ್ಟ. ಇನ್ನು ಭಟ್ಟರು ಬರೆದಿರುವ ಈ “ಹಲಗಿ” ಹಾಡಿಗೆ ಹೆಜ್ಜೆ ಹಾಕಿದ್ದು ಮತ್ತಷ್ಟು ಖುಷಿಯಾಗಿದೆ ಎಂದು ನಿಶ್ವಿಕಾ ನಾಯ್ಡು ತಿಳಿಸಿದರು.
ನಾಯಕ ಸೂರ್ಯ, ನಾಯಕಿ ಸೋನಾಲ್ ಮಾಂಟೆರೊ, ಚಿತ್ರದಲ್ಲಿ ನಟಿಸಿರುವ ಸುಜಯ್, ರಾಘವೇಂದ್ರ, ಧರ್ಮಣ್ಣ, ನಿರ್ಮಾಪಕರಾದ ವನಜಾ ಪಾಟೀಲ್ “ಗರಡಿ” ಕುರಿತು ಮಾತನಾಡಿದರು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾಕ್ಕಿಳಿದಿರುವುದು ಗೊತ್ತೇ ಇದೆ. ಶ್ರೀ ಮುತ್ತು ಸಿನಿ ಸರ್ವೀಸ್ ನಡಿ ಹೊಸಪ್ರತಿಭೆಗಳಿಗೆ ಅವಕಾಶ ನೀಡಲೆಂದು ಆರಂಭಿಸಿರುವ ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾ ಇಂದು ಸೆಟ್ಟೇರಿದೆ. ಬೆಂಗಳೂರಿನ ಕಾಡು ಮಲ್ಲೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ಶಿವರಾಜ್ ಕುಮಾರ್ ದಂಪತಿ ಮಗಳ ಚೊಚ್ಚಲ ನಿರ್ಮಾಣ ಸಿನಿಮಾಗೆ ಶುಭ ಹಾರೈಸಿದರು.
ನಿವೇದಿತಾ ನಿರ್ಮಾಣದ ಚಿತ್ರಕ್ಕೆ ಫೈರ್ ಫ್ಲೈ ಟೈಟಲ್ ಫಿಕ್ಸ್
ನವಿರಾಗಿ ಶುರುವಾದ ಕಥೆಗೆ ಹೆಸರೊಂದು ಮೂಡಿದೆ. ಹೆಸರ ಜೊತೆಗೆ ಬರುವೆವು ಎಂದು ಚಿತ್ರತಂಡ ಶೀರ್ಷಿಕೆ ಅನಾವರಣ ಮಾಡುವುದಾಗಿ ತಿಳಿಸಿತ್ತು. ಅದರಂತೆ ಇಂದು ಟೈಟಲ್ ರಿವೀಲ್ ಮಾಡಲಾಗಿದೆ. ನಿವೇದಿತಾ ಮೊದಲ ಹೆಜ್ಜೆಗೆ ಫೈರ್ ಫ್ಲೈ ಎಂಬ ಕ್ಯಾಚಿ ಟೈಟಲ್ ಹೆಸರಿಡಲಾಗಿದೆ.
ಅಂದಹಾಗೆ ಈ ಚಿತ್ರಕ್ಕೆ ವಂಶಿ ಹೀರೋ. ನಿರ್ದೇಶನ ಕೂಡ ಅವರದ್ದೇ. ‘ಪಿಆರ್ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಮಾಯಾಬಜಾರ್’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅವರು, ಇತ್ತೀಚೆಗೆ ಬಂದ ‘ಪೆಂಟಗನ್’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು.
ಈಗ ನಿವೇದಿತಾ ಬಂಡವಾಳ ಹೂಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಹೊಸ ಜರ್ನಿ ಆರಂಭಿಸುತ್ತಿದ್ದಾರೆ. ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ನಿರ್ದೇಶನ ಹಾಗೂ ರಘು ನಿಡುವಳ್ಳಿ ಅವರು ಸಂಭಾಷಣೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಶಿವಣ್ಣ ಯಾವಾಗಲೂ ಹೊಸಬರಿಗೆ ಪ್ರೋತ್ಸಾಹ ನೀಡುತ್ತಾರೆ. ಅದೇ ರೀತಿ ನಿವೇದಿತಾ ಶಿವರಾಜ್ಕುಮಾರ್ ಕೂಡ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ.
‘ಶ್ರೀ ಮುತ್ತು ಸಿನಿ ಸರ್ವೀಸ್’ ಸಂಸ್ಥೆಯು ಅವರ ಕನಸಿನ ಕೂಸು. ಯುವ ಪ್ರತಿಭೆಗಳಿಗೆ ಮತ್ತು ಹೊಸ ಆಲೋಚನೆಗಳಿಗೆ ಅವಕಾಶ ನೀಡಲು ಈ ಸಂಸ್ಥೆ ಮುಡಿಪಾಗಿದೆ.
ಆಕ್ಷನ್ ಕ್ವೀನ್ ಮಾಲಾಶ್ರೀ ಪ್ರಮುಖಪಾತ್ರದಲ್ಲಿ ನಟಿಸಿರುವ “ಮಾರಕಾಸ್ತ್ರ” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಮಾಲಾಶ್ರೀ ಅವರೆ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.
ನನಗೆ ಧನಕುಮಾರ್ ಮಾಸ್ಟರ್ ಮೂಲಕ ಈ ತಂಡದ ಪರಿಚಯವಾಯಿತು. ನಿರ್ದೇಶಕ ಗುರುಮೂರ್ತಿ ಸುನಾಮಿ ಅವರು ಹೇಳಿದ ಕಥೆ ಇಷ್ಟವಾಯಿತು. ನಾನು ಈ ಚಿತ್ರ ಒಪ್ಪಕೊಳ್ಳಲು ನಿರ್ದೇಶಕರೆ ಕಾರಣ. ಏಕೆಂದರೆ ಅವರು ವಿಕಲ ಚೇತನರಾಗಿದ್ದರು ಕೂಡ, ಅವರಲ್ಲಿರುವ ಸಿನಿಮಾ ಪ್ರೀತಿ ಕಂಡು ಸಂತೋಷವಾಯಿತು. ಮೊದಲು ಹನ್ನೊಂದು ದಿನಗಳ ಕಾಲ ನನ್ನ ಚಿತ್ರೀಕರಣ ಎಂದು ನಿಗದಿಯಾಗಿತ್ತು. ಆನಂತರ ಒಟ್ಟು ಅರವತ್ತು ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ನಾಲ್ಕು ಸಾಹಸ ಸನ್ನಿವೇಶಗಳಿವೆ. ನಾನು ಆಕ್ಷನ್ ಕ್ವೀನ್ ಎಂದು ಕರೆಸಿಕೊಳ್ಳಲು ಥ್ರಿಲ್ಲರ್ ಮಂಜು ಮಾಸ್ಟರ್ ಪ್ರಮುಖ ಕಾರಣ.
ಅವರ ಜೊತೆಗೆ ಈ ಚಿತ್ರದಲ್ಲೂ ಕೆಲಸ ಮಾಡಿದ್ದು ಖುಷಿಯಾಗಿದೆ . “ಮಾರಕಾಸ್ತ್ರ” ಚಿತ್ರದ ಸಾಹಸ ಸನ್ನಿವೇಶಗಳು ನನ್ನ ಹಿಂದಿನ “ಚಾಮುಂಡಿ”, ” ಶಕ್ತಿ” ಮುಂತಾದ ಚಿತ್ರಗಳ ಸಾಹಸ ಸನ್ನಿವೇಶಗಳನ್ನು ನೆನಪಿಸಿತು. ಇದರಲ್ಲಿ ನನ್ನದು ಪೊಲೀಸ್ ಅಧಿಕಾರಿಯ ಪಾತ್ರ ಎಂದರು ನಟಿ ಮಾಲಾಶ್ರೀ.
ನಾನು ಮೂಲತಃ ಬಳ್ಳಾರಿಯವನು. ಇದು ನನ್ನ ಮೊದಲ ಚಿತ್ರ. ಪ್ರಥಮ ಚಿತ್ರದಲ್ಲೇ ಮಾಲಾಶ್ರೀ ಅವರಿಗೆ ಆಕ್ಷನ್ ಕಟ್ ಹೇಳುತ್ತೀನಿ ಅಂದುಕೊಂಡಿರಲಿಲ್ಲ. “ಮಾರಕಾಸ್ತ್ರ” ಒಂದು ಕೌಟುಂಬಿಕ ಚಿತ್ರ. ಇದರಲ್ಲಿ ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ . ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಗುರುಮೂರ್ತಿ ಸುನಾಮಿ ತಿಳಿಸಿದರು.
“ಮಾರಕಾಸ್ತ್ರ” ಚಿತ್ರದ ಕಥೆ ಚೆನ್ನಾಗಿದೆ. ಚಿತ್ರದ ಹಾಡು ಹೇಳುವುದಕ್ಕೆ ಹೋದ ನಾನು ನಿರ್ಮಾಪಕನಾದೆ. ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದೇನೆ. ನನಗೆ ನನ್ನ ದೇಶದ ಮೇಲೆ ಅಭಿಮಾನ ಹೆಚ್ಚು. ಹಾಗಾಗಿ ಈ ಚಿತ್ರದ ಹಾಡೊಂದರ ಚಿತ್ರೀಕರಣವನ್ನು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಸುಮಾರು ಮೂವತ್ತೆರಡು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಸದ್ಯದಲ್ಲೇ ಹಾಡನ್ನು ಬಿಡುಗಡೆ ಮಾಡುತ್ತೇವೆ ಎಂದರು ನಿರ್ಮಾಪಕ ನಟರಾಜ್.
ಈ ಚಿತ್ರದಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ತಮ್ಮ ಪಾತ್ರದ ಬಗ್ಗೆ ಹರ್ಷಿಕಾ ಪೂಣಚ್ಛ ಹೇಳಿದರು. ಚಿತ್ರದಲ್ಲಿ ನಟಿಸಿರುವ ಆನಂದ್ ಆರ್ಯ(ನಾಯಕ), ಭರತ್ ಸಿಂಗ್, ಉಗ್ರಂ ಮಂಜು, ನಿರ್ಮಾಪಕಿ ಕೋಮಲ ನಟರಾಜ್, ಕ್ರಿಯೇಟಿವ್ ಹೆಡ್ ಧನಕುಮಾರ್, ಕಾರ್ಯಕಾರಿ ನಿರ್ಮಾಪಕ ಮಂಜುನಾಥ್ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ಸತೀಶ್ ಬಾಬು ಮುಂತಾದವರು “ಮಾರಕಾಸ್ತ್ರ” ಚಿತ್ರದ ಕುರಿತು ಮಾತನಾಡಿದರು. ಮಂಜು ಕವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಮಾಡಿದ್ದಾರೆ.
ಇದೇ ಮೊದಲ ಸಲ ನಿರ್ದೇಶನದ ಜೊತೆಗೆ ಹೀರೋ ಆಗಿಯೂ ಕಾಣಿಸಿಕೊಂಡಿರುವ ಮಂಜುನಾಥ್ ಬಡಿಗೇರ್ ಚಿತ್ರವಿದು. ಶ್ರೀ ಕಾಳಿಕಾ ದೇವಿ ಪ್ರೊಡಕ್ಷನ್ಸ ಬ್ಯಾನರ್ ಅಡಿಯಲ್ಲಿ ಸಾಂಭಯ್ಯ ಆಚಾರ್ಯ ನಿರ್ಮಾಣ ಮಾಡಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ತಮ್ಮ ಸಿನಿಮಾ ಕುರಿತು ನಿರ್ತದೇಶಕರು ಹೇಳುವುದಿಷ್ಟು. ಕೆಲವು ಸಿನಿಮಾಗಳಲ್ಲಿ ನಿರ್ದೇಶನ ಹಾಗು ಛಾಯಾಗ್ರಾಹಣ ವಿಭಾಗದಲ್ಲಿ ಕೆಲಸ ಮಾಡಿ ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಇದು ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆ, ಪಕ್ಷಿಗಳ ರಕ್ಷಣೆಗಾಗಿ ಹೋರಾಡುತಿದ್ದ ಯುವತಿಯ ಮೇಲೆ ಅತ್ಯಾಚಾರ ಹಾಗೂ ಕೊಲೆಯಾಗುತ್ತದೆ. ಆ ಕೊಲೆಯ ಪ್ರತಿಕಾರಕ್ಕೆ ಇಬ್ಬರು ಯುವಕರು ಮುಂದಾಗುತ್ತಾರೆ. ಅವರ ಹೋರಾಟಕ್ಕೆ ಜಯ ಸಿಗುತ್ತಾ ಎಂಬುದರ ಸುತ್ತ ಚಿತ್ರದ ಕಥೆ ಸಾಗುತ್ತದೆ.
ಈ ಚಿತ್ರದಲ್ಲಿ ನಾಯಕಿಯಾಗಿ ನಿಶ್ಚಿತಾ ಶೆಟ್ಟಿ ನಟಿಸಿದ್ದು, ಅವರಿಗೆ ಜಗನ್ನಾಥ ದಾಸರು ಬಳಿಕ ನಟಿಸುತ್ತಿರುವ ಎರಡನೇ ಚಿತ್ರವಿದು. ಎರಡನೇ ನಾಯಕನಾಗಿ ಪೃಥ್ವಿರಾಜ್ ಅಭಿನಯಿಸಿದ್ದಾರೆ ಎಂಬುದು ನಿರ್ದೇಶಕರ ಮಾತು.
ಇನ್ನು ಇಲ್ಲಿ ಗಣೇಶ್ ರಾವ್ ಮಾತನಾಡಿ, ಇದುವರೆಗೆ 310 ಸಿನಿಮಾಗಳಲ್ಲಿ ನಟಿಸಿದ್ದೇನೆ ಅವುಗಳಲ್ಲಿ 150ಕ್ಕೂ ಅಧಿಕ ಚಿತ್ರಗಳಲ್ಲಿ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದೇನೆ, ಈ ಚಿತ್ರದಲ್ಲಿ ಮೊದಲು ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು, ನಂತರ ನಾಯಕರಿಗೆ ಸಹಾಯ ಮಾಡುವ ಪಾತ್ರ ನನ್ನದು ಎಂದರು.
ಕುಮಾರ್ ಬೋರಕನವರ್, ರಜತಾದ್ರಿ ಪ್ರಶಾಂತಂ, ಪ್ರಿಯಾಂಕಾ, ಕಾಳಚಾರಿ, ಪ್ರಭು ಹಿರೇಮಠ್ ಪ್ರಮುಖ ತಾರಾಗಣದಲ್ಲಿದ್ದಾರೆ.
ಈ ಚಿತ್ರದಲ್ಲಿ ಛಾಯಾಗ್ರಾಹಣ ಮುಂಜಾನೆ ಮಂಜು ಮಾಡಿದರೆ, ಅಲೆಕ್ಸ್ ಸಂಗೀತ ನೀಡಿದ್ದಾರೆ. ಸಂಕಲನ ಆಚಾರ್ಯ ಗುರು ಮಾಡಿದ್ದು ಚಿತ್ರವನ್ನು ಜುಲೈ ನಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ಮಾಡಿಕೊಳ್ಳುತ್ತಿದೆ.
ಕನ್ನಡದ ಸೂಪರ್ ಹಿಟ್ ಚಿತ್ರಗಳಿಗೆ ಸೂಪರ್ ಹಿಟ್ ಹಾಡುಗಳನ್ನು ಬರೆದಿರುವ ಹೃದಯ ಶಿವ ನಿರ್ದೇಶನದ “ಬಿಸಿಲು ಕುದುರೆ” ಚಿತ್ರ ಕಳೆದ ಏಪ್ರಿಲ್ 21ರಂದು ಬಿಡುಗಡೆಯಾಗಿತ್ತು. ಚಿತ್ರ ಈಗ ಐವತ್ತು ದಿನಗಳನ್ನು ಪೂರೈಸಿದೆ. ಈ ಸಂತಸವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು.
ಅರುಣ್ಯದಂಚಿನಲ್ಲಿ ತುಂಡುಭೂಮಿ ಹೊಂದಿರುವ ರೈತನ ಬವಣೆಯ ಕುರಿತಾದ ಈ ಚಿತ್ರವನ್ನು ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಚಿತ್ರ ಒಂದೇ ಚಿತ್ರಮಂದಿರದಲ್ಲಿ ಐವತ್ತು ದಿನ ಪೂರೈಸಿಲ್ಲ. ರಾಜ್ಯದ ವಿವಿಧ ಕಡೆ ಬಿಡುಗಡೆಯಾಗಿ ಪ್ರದರ್ಶನ ಕಂಡು ಈಗ ಐವತ್ತನೇ ದಿನ ಪೂರೈಸಿದೆ. ಸದ್ಯದಲ್ಲೇ “ಬಿಸಿಲು ಕುದುರೆ” ಓಟಿಟಿಯಲ್ಲೂ ಬರಲಿದೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ. ಸದ್ಯದಲ್ಲೇ ನನ್ನ ನಿರ್ದೇಶನದಲ್ಲಿ ಎರಡು ಹೊಸ ಚಿತ್ರಗಳು ಆರಂಭವಾಗಲಿದೆ. ಅದರಲ್ಲಿ ಒಂದು ಬಿಗ್ ಬಜೆಟ್ ನ ಚಿತ್ರವಾಗಿರಲಿದೆ ಎಂದರು ನಿರ್ದೇಶಕ ಹೃದಯ ಶಿವ.
ನಾನು ಚಿತ್ರದ ಕುರಿತು ಬಿಡುಗಡೆ ಪೂರ್ವದಲ್ಲೇ ಸಾಕಷ್ಟು ಮಾತನಾಡಿದ್ದೇನೆ. ಈಗ ಐವತ್ತನೇ ದಿನದ ಸಂತೋಷವನ್ನು ಸಂಭ್ರಮಿಸುತ್ತಿದ್ದೇನೆ ಎಂದು ನಟ ಸಂಪತ್ ಮೈತ್ರೇಯ ತಿಳಿಸಿದರು.
ಚಿತ್ರದಲ್ಲಿ ನಟಿಸಿರುವ ಸುನೀತಾ, ಕರಿಸುಬ್ಬು, ವಿಕ್ಚರಿ ವಾಸು, ಸಂಗೀತ ನಿರ್ದೇಶಕ ಇಮ್ತಿಯಾಜ್ ಸುಲ್ತಾನ್, ಛಾಯಾಗ್ರಾಹಕ ನಾಗಾರ್ಜುನ, ಸಂಕಲನಕಾರ ಕೆಂಪರಾಜ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು “ಬಿಸಿಲು ಕುದರೆ” ಯಶಸ್ಸಿನ ಬಗ್ಗೆ ಮಾತನಾಡಿದರು. ಹೃದಯ ಶಿವ ಚಿತ್ರತಂಡದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.