ಫೈರ್ ಫ್ಲೈ ಇದು ಶಿವಣ್ಣ ಪುತ್ರಿಯ ನಿರ್ಮಾಣದ ಚಿತ್ರ: ಮಗಳ ಸಿನಿಮಾಗೆ ಶಿವಣ್ಣ ದಂಪತಿ ಶುಭ ಹಾರೈಕೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ
ಸಿನಿಮಾಕ್ಕಿಳಿದಿರುವುದು ಗೊತ್ತೇ ಇದೆ. ಶ್ರೀ ಮುತ್ತು ಸಿನಿ ಸರ್ವೀಸ್ ನಡಿ ಹೊಸಪ್ರತಿಭೆಗಳಿಗೆ ಅವಕಾಶ ನೀಡಲೆಂದು ಆರಂಭಿಸಿರುವ ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾ ಇಂದು ಸೆಟ್ಟೇರಿದೆ. ಬೆಂಗಳೂರಿನ ಕಾಡು ಮಲ್ಲೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ಶಿವರಾಜ್ ಕುಮಾರ್ ದಂಪತಿ ಮಗಳ ಚೊಚ್ಚಲ ನಿರ್ಮಾಣ ಸಿನಿಮಾಗೆ ಶುಭ ಹಾರೈಸಿದರು.

ನಿವೇದಿತಾ ನಿರ್ಮಾಣದ ಚಿತ್ರಕ್ಕೆ ಫೈರ್ ಫ್ಲೈ ಟೈಟಲ್ ಫಿಕ್ಸ್

ನವಿರಾಗಿ ಶುರುವಾದ ಕಥೆಗೆ ಹೆಸರೊಂದು ಮೂಡಿದೆ. ಹೆಸರ ಜೊತೆಗೆ ಬರುವೆವು ಎಂದು ಚಿತ್ರತಂಡ ಶೀರ್ಷಿಕೆ ಅನಾವರಣ ಮಾಡುವುದಾಗಿ ತಿಳಿಸಿತ್ತು. ಅದರಂತೆ ಇಂದು ಟೈಟಲ್ ರಿವೀಲ್ ಮಾಡಲಾಗಿದೆ. ನಿವೇದಿತಾ ಮೊದಲ ಹೆಜ್ಜೆಗೆ ಫೈರ್ ಫ್ಲೈ ಎಂಬ ಕ್ಯಾಚಿ ಟೈಟಲ್ ಹೆಸರಿಡಲಾಗಿದೆ.

ಅಂದಹಾಗೆ ಈ ಚಿತ್ರಕ್ಕೆ ವಂಶಿ ಹೀರೋ. ನಿರ್ದೇಶನ ಕೂಡ ಅವರದ್ದೇ. ‘ಪಿಆರ್ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಮಾಯಾಬಜಾರ್’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅವರು, ಇತ್ತೀಚೆಗೆ ಬಂದ ‘ಪೆಂಟಗನ್’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು.

ಈಗ ನಿವೇದಿತಾ ಬಂಡವಾಳ ಹೂಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಹೊಸ ಜರ್ನಿ ಆರಂಭಿಸುತ್ತಿದ್ದಾರೆ. ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ನಿರ್ದೇಶನ ಹಾಗೂ ರಘು ನಿಡುವಳ್ಳಿ ಅವರು ಸಂಭಾಷಣೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಶಿವಣ್ಣ ಯಾವಾಗಲೂ ಹೊಸಬರಿಗೆ ಪ್ರೋತ್ಸಾಹ ನೀಡುತ್ತಾರೆ. ಅದೇ ರೀತಿ ನಿವೇದಿತಾ ಶಿವರಾಜ್ಕುಮಾರ್ ಕೂಡ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ.

‘ಶ್ರೀ ಮುತ್ತು ಸಿನಿ ಸರ್ವೀಸ್’ ಸಂಸ್ಥೆಯು ಅವರ ಕನಸಿನ ಕೂಸು. ಯುವ ಪ್ರತಿಭೆಗಳಿಗೆ ಮತ್ತು ಹೊಸ ಆಲೋಚನೆಗಳಿಗೆ ಅವಕಾಶ ನೀಡಲು ಈ ಸಂಸ್ಥೆ ಮುಡಿಪಾಗಿದೆ.

Related Posts

error: Content is protected !!