ಮೆಡಿಷನ್ ಮಾಫಿಯಾದ ‘ವೀರಪುತ್ರ’

ಹೊಸಬರ ಮಹಿಷಾಸುರ ತೆರೆಗೆ ಬರಲು ರೆಡಿಯಾಗಿದ್ದಾನೆ. ಅಂದ ಹಾಗೆ ,ಇದು ಮೆಳೆಕೋಟೆ ಮತ್ತು ಮೈತ್ರಿ ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಾಣವಾದ ಮಹಿಷಾಸುರ ಚಿತ್ರದ ಸದ್ಯದ ವಿಚಾರ. ಸದ್ಯಕ್ಕೆ ಈ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಆಗಿಲ್ಲ. ಆದರೆ ಸದ್ಯದಲ್ಲಿಯೇ ಚಿತ್ರವನ್ನು ಚಿತ್ರಮಂದಿರಕ್ಕೆ ತರಲು ಚಿತ್ರ ತಂಡ ಸಜ್ಜಾಗಿದೆ.
ಈಗಾಗಲೇ ಚಿತ್ರದ ಟ್ರೇಲರ್ ಕೂಡ ಹೊರಬಂದಿದೆ. ಜತೆಗೆ ಸೆನ್ಸಾರ್ ಮುಗಿದು , ಅಲ್ಲಿಂದ ಯು /ಎ ಪ್ರಮಾಣ ಪತ್ರ ಸಿಕ್ಕಿದೆ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಮೆಚ್ಚುಗೆಯ ಮಾತು ಹೇಳಿದ್ದು, ಚಿತ್ರತಂಡಕ್ಕೂ ಖುಷಿ ಕೊಟ್ಟಿದೆ. ಇನ್ನು ಚಿತ್ರದ ಕತೆ ಮತ್ತು ತಾರಾಗಣ ಎಲ್ಲವೂ ಹೊಸತು. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಸೇಡಿನ ಕತೆ. ಅದು ಪ್ರೇಮದ ಸುತ್ತಲ ಸಮರ. ಅದಕ್ಕೆತ್ರಿಕೋನ ಪ್ರೇಮಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.ನಿರ್ದೇಶಕರು.

ಅವರ ಪ್ರಕಾರ ಇದು ನಿಜ ಜೀವನದಲ್ಲಿ ನಡೆದ ಘಟನೆ. ಅದರ ಸುತ್ತ ಸಿನಿಮಾ ಅಂಶಗಳನ್ನು ಸೇರಿಸಿದ್ದಾರಂತೆ. ನಿರ್ದೇಶಕ ಉದಯ ಪ್ರಸನ್ನ ಅವರೇ ಚಿತ್ರಕ್ಕೆ ಕಥೆ ಚಿತ್ರಕಥೆಬರೆದು, ನಿರ್ದೇಶನ ಮಾಡಿದ್ದಾರಂತೆ. ಲೀಲಾವತಿ ಸುರೇಶ್ ಕುಮಾರ್, ಪ್ರೇಮಾ ಚಂದ್ರಯ್ಯ ನಾಗಸಂದ್ರ, ಮೈತ್ರಿ ಮಂಜುನಾಥ್ ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ಅರ್ಜುನ್, ಬಿಂದುಶ್ರೀ, ಮಂಜು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ಅವರೊಂದಿಗೆ ರಘು ಪಾಂಡೇಶ್ವರ, ರಾಕ್ ಲೈನ್ ಸುಧಾಕರ್, ಮಾಸ್ಟರ್ ತುಷಾರ್, ಮಾಸ್ಟರ್ ಸುಜಿತ್, ರವಿಚಂದ್ರ ಮುಂತಾದವರ ತಾರಾಬಳಗವಿದೆ.

ಚಿತ್ರಕ್ಕೆ ಸುನಿಲ್ ಕೌಶಿಕ್, ಸಾಯಿಕಿರಣ್ ಸಂಗೀತ, ಕೃಷ್ಣ ಛಾಯಾಗ್ರಹಣ, ರಾಘವೇಂದ್ರ ವಿ. ಹಿನ್ನೆಲೆ ಸಂಗೀತ, ವೆಂಕಿ ಡಿವಿಡಿ ಸಂಕಲನ, ರಾಕಿ ರಮೇಶ್ ಸಾಹಸ, ಸುಜಿತ್ ಕಿಶೋರ್ ನೃತ್ಯ ನಿರ್ದೇಶನ, ವಿರಾಟ್ ರಾಜು ಸಂಭಾಷಣೆ ಚಿತ್ರಕ್ಕಿದೆ.ಎಲ್ಲವೂ ಅಂದುಕೊಂಡಂತಾದರೆ ಈ ಚಿತ್ರವು ನವೆಂಬರ್ ಕೊನೆ ವಾರ, ಇಲ್ಲವೇ ಡಿಸೆಂಬರ್ ಮೊದಲವಾರದಲ್ಲೇ ತೆರೆಗೆ ಬರಲಿದೆಯಂತೆ.

ಇದು ಸಿನಿಲಹರಿ ವಿಶೇಷ..
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ಡಾ.ವಿಷ್ಣುವರ್ಧನ್ ಅವರ ನಡುವಿನ ಗೆಳೆತನಕ್ಕೆ ನಾಲ್ಕು ದಶಕಗಳು ಕಳೆದಿವೆ. ಇವರಿಬ್ಬರ ಗೆಳೆತನಕ್ಕೆ ಒಂದು ಕಲರ್ ಫುಲ್ ಇತಿಹಾಸವೇ ಇದೆ. ಇಬ್ಬರೂ ಬಾಲನಟರಾಗಿ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡವರು. ಅದಕ್ಕಿಂತ ಹೆಚ್ಚಾಗಿ ಇಬ್ಬರ ನಡುವೆ ಅತಿಯಾದ ಸ್ನೇಹವಿತ್ತು. ಆಗಾಗ ಮುನಿಸು ಬರುತ್ತಿತ್ತು. ಆದರೆ, ಅದು ಕೇವಲ ಆ ಕ್ಷಣಕ್ಕೆ ಮಾತ್ರ. ಅಷ್ಟೇ ಸಲುಗೆಯಿಂದಿದ್ದ ಈ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಜೋಡಿ ಎನಿಸಿಕೊಂಡವರು. ಅಷ್ಟೇ ಅಲ್ಲ, ಹಲವಾರು ಸಕ್ಸಸ್ ಸಿನಿಮಾಗಳನ್ನು ಕೊಟ್ಟವರು. ವಿಷ್ಣುವರ್ಧನ್ ವ್ಯಕ್ತಿತ್ವ. ಅವರೊಂದಿಗಿನ ಒಡನಾಟ ಮತ್ತು ಅವರೊಳಗಿನ ಕಲಾವಿದನ ಕುರಿತು ರಾಜೇಂದ್ರ ಸಿಂಗ್ ಬಾಬು ಆಪ್ತ ಮಾತು.
ನಾನೂ ವಿಷ್ಣು ಬಾಲನಟರಾಗಿ ನಟಿಸಿದ್ದೆವು…
*ನಮ್ಮ ಫ್ಯಾಮಿಲಿಗೂ ಡಾ.ವಿಷ್ಣುವರ್ಧನ್ ಫ್ಯಾಮಿಲಿಗೂ ಅವಿನಾಭಾವ ಸಂಬಂಧವಿದೆ. ಕಾರಣ, ವಿಷ್ಣುವರ್ಧನ್ ಅವರ ತಂದೆ ಮತ್ತು ನಮ್ಮ ತಂದೆ ಇಬ್ಬರ ನಡುವೆ ಸ್ನೇಹವಿತ್ತು. ಸ್ನೇಹ ಅಷ್ಟೇ ಅಲ್ಲ, ನಮ್ಮ ಕಂಪೆನಿಗಳಲ್ಲಿ ವಿಷ್ಣುವರ್ಧನ್ ಅವರ ತಂದೆ ಕೆಲಸ ಮಾಡಿದ್ದರು. ಅವರ ತಂದೆ ಒಬ್ಬ ಒಳ್ಳೆಯ ಬರಹಗಾರರು ಮತ್ತು ಕಲಾವಿದರಾಗಿದ್ದರು. ಅವರಷ್ಟೇ ಅಲ್ಲ, ವಿಷ್ಣು ಸಹೋದರಿ ರಮಾ ಕೂಡ ನಮ್ಮ ಬ್ಯಾನರ್‌ನಲ್ಲಿ ತಯಾರಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. “ಶಿವಶರಣೆ ನಂಬೆಕಾʼ ಚಿತ್ರದಲ್ಲಿ ಅವರು ಅನಂತಸ್ವಾಮಿ ಹಾಡಿದ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದರು. ವಿಷ್ಣುವರ್ಧನ್ ಮತ್ತು ನಾನು ಚಿತ್ರವೊಂದರಲ್ಲಿ ಬಾಲನಟರಾಗಿಯೂ ನಟಿಸಿದ್ದೆವು. ಅಲ್ಲಿಂದ ನಮ್ಮ ಗೆಳೆತನ ಶುರುವಾಯ್ತು. ನಮ್ಮಿಬ್ಬರ ಫ್ಯಾಮಿಲಿಯ ಸಂಬಂಧ ಕೂಡ ಗಟ್ಟಿಯಾಗುತ್ತಾ ಹೋಯ್ತು. ವಿಷ್ಣುವರ್ಧನ್ ಬೆಂಗಳೂರಲ್ಲಿ ಇರುತ್ತಿದ್ದರು. ನಾನು ಮೈಸೂರಲ್ಲಿ ಇರುತ್ತಿದ್ದೆ. ಅವರ ತಂದೆ ಆಗಾಗ ವಿಷ್ಣುನಾ ಕರೆದುಕೊಂಡು ಬರೋರು. ಇಬ್ಬರು ಜತೆಗೂಡಿ ಒಂದಷ್ಟು ಹರಟುತ್ತಿದ್ದೆವು. “ನಾಗರಹಾವು” ಚಿತ್ರ ಶುರುವಾಗುವ ಹೊತ್ತಿಗೆ ವಿಷ್ಣು ನನ್ನ ಆತ್ಮೀಯ ಗೆಳೆಯನಲ್ಲೊಬ್ಬನಾಗಿದ್ದ. ಕಾರಣ, ಆ ಚಿತ್ರಕ್ಕೆ ವೀರಸ್ವಾಮಿ ನಿರ್ಮಾಪಕರಾಗಿದ್ದರು. ನನಗೇ ಅವರು ಪ್ರೊಡಕ್ಷನ್ ನೋಡಿಕೊಳ್ಳುವಂತೆ ಹೇಳಿದ್ದರು. ಹಾಗಾಗಿ ನಾನು “ನಾಗರಹಾವುʼ ಚಿತ್ರದ ಪ್ರೊಡಕ್ಷನ್ ನೋಡಿಕೊಳ್ಳುತ್ತಿದ್ದೆ. ಆ ಸಿನಿಮಾದಿಂದಲೂ ನಮ್ಮ ಗೆಳೆತನ ಮತ್ತಷ್ಟು ಗಟ್ಟಿಯಾಯ್ತು. ನಾನು ನಿರ್ದೇಶಿಸಿದ ಮೊದಲ ಚಿತ್ರ “ನಾಗಕನ್ಯೆʼ. ಆ ಚಿತ್ರದಲ್ಲಿ ವಿಷ್ಣುವರ್ಧನ್ ಅಭಿನಯಿಸಿದ್ದ. ನನ್ನ ಮೊದಲ ನಿರ್ದೇಶನದಲ್ಲಿ ವಿಷ್ಣು ಇರಬೇಕು ಎಂದು ಬಯಸಿದ್ದೆ. ಅವನು ಕೂಡ ನಟಿಸಲು ಬಯಸಿದ್ದ. ಆ ಬಳಿಕ ಒಂದಷ್ಟು ಚಿತ್ರಗಳನ್ನು ಜತೆಯಾಗಿ ಮಾಡಿದೆವು. ಇಬ್ಬರ ನಡುವೆ ಕೇವಲ ಸ್ನೇಹ ಮಾತ್ರ ಇರಲಿಲ್ಲ. ಕಷ್ಟ–ಸುಖ ಬಗ್ಗೆಯೂ ಮಾತಾಡುತ್ತಿದ್ದೆವು. ಅವರ ಫ್ಯಾಮಿಲಿ ನಮ್ಮ ಮನೆಗೆ ಬರೋದು, ನಾವು ಅವರ ಮನೆಗೆ ಹೋಗೋದು, ಹೀಗೆ ಒಳ್ಳೆಯ ವಾತಾವರಣ ನಮ್ಮ ನಡುವೆ ಬೆಳೆದಿತ್ತು.
ವಿಷ್ಣು ಸದಾ ಪಾಸಿಟಿವ್ ಥಿಂಕ್ ಮ್ಯಾನ್
*ವಿಷ್ಣುವಿನ ವ್ಯಕ್ತಿತ್ವ ಬಗ್ಗೆ ಹೇಳುವುದಾದರೆ, ಅವನೊಬ್ಬ ತುಂಬಾ ಒಳ್ಳೆಯ ಮನುಷ್ಯ. ಅಷ್ಟೇ ಅದ್ಭುತ ನಟ. ಎಲ್ಲರ ಕಷ್ಟವನ್ನು ಆಲಿಸುತ್ತಿದ್ದ. ಕೈಲಾದ ಸಹಾಯವನ್ನೂ ಮಾಡುತ್ತಿದ್ದ. ಆದರೆ, ಯಾವುದನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಅವನೊಂದಿಗೆ ನಾನು ದಶಕಗಳ ಕಾಲ ಸ್ನೇಹ ಇಟ್ಟುಕೊಂಡಿದ್ದೆ ಅನ್ನೋದೇ ದೊಡ್ಡ ಖುಷಿಯ ಅನುಭವ. ತುಂಬಾ ಬುದ್ಧಿವಂತ ಮನುಷ್ಯನಾಗಿದ್ದ. ವಿಷ್ಣು ಎಲ್ಲರ ಜೊತೆಯಲ್ಲೂ ಒಳ್ಳೆಯ ಗೆಳೆತನ ಇಟ್ಟುಕೊಂಡಿದ್ದ. ಅದರಲ್ಲೂ ನನ್ನ ಜತೆಯಲ್ಲಂತೂ ಸದಾ ಮಾತಾಡುತ್ತಿರಬೇಕು, ಮಿಸ್ ಮಾಡದೆ ದಿನಾಲೂ ಮೀಟ್ ಮಾಡುತ್ತಿರಬೇಕು. ಹರಟುತ್ತಿರಬೇಕು. ಅಷ್ಟರಮಟ್ಟಿಗೆ ನಾವಿದ್ದೆವು. ಅವನಲ್ಲಿ ನಾನು ಮೈನಸ್ ಅಂಶಗಳನ್ನು ನೋಡಿಯೇ ಇಲ್ಲ. ಯಾವಾಗಲೂ ಪಾಸಿಟಿವ್ ಆಗಿಯೇ ಥಿಂಕ್ ಮಾಡೋನು. ನಮಗೂ ಅದನ್ನೇ ಹೇಳೋನು. ಎಲ್ಲರ ಹೃದಯಕ್ಕೆ ಹತ್ತಿರವಾಗಿರುತ್ತಿದ್ದ ಹೃದಯವಂತ ನಟ ಅವನು.
ಟರ್ನಿಂಗ್ ಪಾಯಿಂಟ್ ಕೊಟ್ಟ ಬಂಧನ
* ವಿಷ್ಣುವರ್ಧನ್‌ಗೆ ನನ್ನ ನಿರ್ದೇಶನದ “ಬಂಧನ” ಚಿತ್ರ ಟರ್ನಿಂಗ್ ಪಾಯಿಂಟ್ ಆಯ್ತು. ಆ ಸಿನಿಮಾದಿಂದ ವಿಷ್ಣುವರ್ಧನ್‌ಗೆ ಬೇರೆಯದ್ದೇ ಇಮೇಜ್ ಸಿಕ್ತು. ಆ ಸಿನಿಮಾ ನೋಡಿದವರೆಲ್ಲರೂ ವಿಷ್ಣು ಅವರನ್ನು ಕಂಡಾಗ “ಬಂಧನʼದ ನಟನೆ ಬಗ್ಗೆಯೇ ಮಾತಾಡುತ್ತಿದ್ದರು. ಆ ಚಿತ್ರ ನನಗೂ ಮತ್ತು ವಿಷ್ಣು ಇಬ್ಬರಿಗೂ ಅತ್ಯಂತ ಜನಪ್ರಿಯತೆ ತಂದುಕೊಟ್ಟಿತು. ಇನ್ನೊಂದು ವಿಷಯ ಹೇಳಲೇಬೇಕು. “ಬಂಧನʼ ಬಳಿಕ ವಿಷ್ಣುವರ್ಧನ್‌ಗೆ ಲೇಡಿಸ್ ಆಡಿಯನ್ಸ್ ಹೆಚ್ಚಾದರು. ಆ ಸಿನಿಮಾ ಬಳಿಕ “ಕರ್ಣʼ, “ಹಿಮಪಾತʼ, ʼಮುತ್ತಿನಹಾರʼ, ʼಮಹಾಕ್ಷತ್ರಿಯʼ ಚಿತ್ರಗಳಿಗೆ ಹೆಚ್ಚಾಗಿ ಲೇಡಿಸ್ ಆಡಿಯನ್ಸ್ ನಿಂದಲೇ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು.
ಇಂದಿಗೂ ಆ ಕಥೆ ಹಾಗೇ ಇದೆ…
*ವಿಷ್ಣು ಕಾದಂಬರಿ ಬೇಸ್ಡ್ ಸಿನಿಮಾಗಳಿಗೆ ಸರಿ ಹೊಂದುತ್ತಿದ್ದ. ಡಾ.ರಾಜಕುಮಾರ್ ಅವರನ್ನು ಬಿಟ್ಟರೆ, ಕಾದಂಬರಿ ಕುರಿತ ಚಿತ್ರಗಳಿಗೆ ವಿಷ್ಣು ಸೂಕ್ತ ನಟ ಎಂಬ ಮಾತು ಆಗ ಕೇಳಿಬರುತ್ತಿತ್ತು. “ಭಾಗ್ಯ ಜ್ಯೋತಿʼ, “ಹೊಂಬಿಸಲುʼ ಸೇರಿದಂತೆ ಹಲವು ಚಿತ್ರಗಳಲ್ಲಿ ವಿಷ್ಣು ಅಭಿನಯ ಜನ ಮೆಚ್ಚುಗೆ ಪಡೆದಿತ್ತು. “ಬಂಗಾರದ ಜಿಂಕೆʼ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ವಿಷ್ಣು ಅವರನ್ನು ಇಂದಿಗೂ ಮರೆಯುವಂತಿಲ್ಲ. ಅಷ್ಟರಮಟ್ಟಿಗೆ ಅಭಿನಯಿಸಿದ್ದಾನೆ. ನಾನು ವಿಷ್ಣುಗೆ ನಿರ್ದೇಶಿಸಿದ ಕೊನೆಯ ಚಿತ್ರ “ಮಹಾಕ್ಷತ್ರಿಯʼ ವಿಷ್ಣುಗೆ ಇನ್ನು, ಒಂದಷ್ಟು ಚಿತ್ರಗಳನ್ನು ಮಾಡುವ ಬಗ್ಗೆ ಸಾಕಷ್ಟು ಸ್ಕ್ರಿಪ್ಟ್‌ಗಳನ್ನು ಮಾಡಿಕೊಂಡಿದ್ದೆ. ಆ ಸಮಯದಲ್ಲಿ ವಿಷ್ಣುವರ್ಧನ್, ಒಂದು ದಿನವೂ ಬಿಡುವಿರದಂತೆ ಚಿತ್ರಗಳಲ್ಲಿ ನಟಿಸುತ್ತಿದ್ದರು. ಅತ್ತ, ನಾನು ಬೇರೆ ಚಿತ್ರಗಳನ್ನು ನಿರ್ದೇಶಿಸುತ್ತಿದ್ದೆ. ವಿಷ್ಣುಗಾಗಿಯೇ ನಾನು ಒಂದೊಳ್ಳೆಯ ಕಥೆ ರೆಡಿಮಾಡಿಕೊಂಡಿದ್ದೆ. ಅದನ್ನು ನೀನೇ ಮಾಡಬೇಕು ಕಥೆ ಹೇಳ್ತೀನಿ, ಕೇಳು ಅಂದಿದ್ದೆ. ಆಗ ವಿಷ್ಣು ಮೈಸೂರಲ್ಲಿದ್ದರು. ಹೊಸ ವರ್ಷ ಶುರುವಾಗುತ್ತೆ. ಒಂದನೇ ತಾರೀಖಿಗೆ ಬಂದು ಬಿಡು.
ಕಥೆ ಹೇಳು ಕೇಳ್ತೀನಿ ಅಂದಿದ್ದ. ಆದರೆ, ಅದು ಸಾಧ್ಯವಾಗಲೇ ಇಲ್ಲ. ಇವತ್ತಿಗೂ ಆ ಕಥೆ ಹಾಗೆಯೇ ಇದೆ. ಆ ಕಥೆಗೆ ವಿಷ್ಣುವರ್ಧನ್ ಹೊರತಾಗಿ ಬೇರೆ ಯಾರೂ ಸೂಟ್ ಆಗೋದಿಲ್ಲ.

‘ ರಾಬರ್ಟ್ ‘ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಭದ್ರಾವತಿಯ ಚೆಲುವೆ ಆಶಾಭಟ್. ಮೊದಲ ಚಿತ್ರದಲ್ಲೆ ಸ್ಟಾರ್ ನಟನ ಜತೆಗೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡ ಮಾಡೆಲ್. ಸಿನಿರಂಗಕ್ಕೆ ಕಾಲಿಡುವ ಮುನ್ನ ಮಾಡೆಲಿಂಗ್ ಜಗತ್ರಿನಲ್ಲಿ ದೊಡ್ಡ ಹೆಸರು ಮಾಡಿದ ಹೆಗ್ಗಳಿಕೆ ಇವರದು. ಸೂಪರ್ ನ್ಯಾಷನಲ್ ಹಾಗೂಮಿಸ್ ದಿವಾ ಕಿರೀಟ ಮುಡಿಗೇರಿಸಿಕೊಂಡ ಕನ್ನಡದ ಕುವರಿ. ಇಂದು( ಸೆ. 5) ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ರಾಬರ್ಟ್ ಚಿತ್ರ ತಂಡ ಅವರ ಹುಟ್ಟು ಹಬ್ಬಕ್ಕೆಚಿತ್ರದಲ್ಲಿನಅವರ ಪಾತ್ರದ ಫಸ್ಟ್ ಲಾಂಚ್ ಮಾಡಿದೆ.

ಇದು ಅವರಿಗೆ ಚಿತ್ರ ತಂಡದಿಂದ ಸಿಕ್ಕ ಬರ್ತ್ ಡೇ ಗಿಫ್ಟ್.ಇದುವರೆಗೂ ನೋಡಿದ ಆಶಾಭಟ್ ಇಲ್ಲಿ ಕಂಪ್ಲೀಟ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇವರೇನಾ ಆಶಾಭಟ್ ಎನ್ನುವಷ್ಟು ಲುಕ್ ಚೇಂಜ್ ಇದೆ.ವಿದೇಶದಿಂದ ಬಂದ ಹುಡುಗಿ ಅಮೃತ ಪಾತ್ರದಲ್ಲಿ ಆಶಾ ಭಟ್ ರಾಬರ್ಟ್ ನಲ್ಲಿ ನಟಿಸುತ್ತಿದ್ದಾರಂತೆ. ಸಹಜವಾಗಿಯೇ ರಾಬರ್ಟ್ ಚಿತ್ರದಲ್ಲಿ ಆಶಾಭಟ್ ಕೂಡ ನಿರೀಕ್ಷೆ ಹುಟ್ಟಿಸಿದ್ದಾರೆ. ಇನ್ನು ಆಶಾಭಟ್ ಮಾಡೆಲ್ ಆಗಿ ನಂತರ ಚಿತ್ರದ ನಾಯಕಿಯಾಗಿ ಹಿಂದಿಯ ‘ಜಂಗ್ಲಿ ‘ಮೂಲಕನಟನೆಗೆ ಪಾದಾರ್ಪಣೆ ಮಾಡಿದ್ದರು.ಅಲ್ಲಿಂದೀಗ ಕನ್ನಡಕ್ಕೂ ಕಾಲಿಟ್ಟಿದ್ದಾರೆ. ಮೂಲತಃ ಶಿವಮೊಗ್ಗದವರಾದ ಆಶಾ ಭಟ್ ಪ್ರಸ್ತುತ ಕಾರ್ಯನಿಮಿತ್ತ ಮುಂಬೈಯಲ್ಲಿ ನೆಲೆಸಿದ್ದಾರೆ.

ಈ ಬಾರಿಯ ಹುಟ್ಟು ಹಬ್ಬ ಮತ್ತು ಚಿತ್ರದಲ್ಲಿನ ತಮ್ನ ಪಾತ್ರದ ಫಸ್ಟ್ ಲುಕ್ ಗೆ ಆಶಾ ಭಟ್ ಪ್ರತಿಕ್ರಿಯೆನೀಡಿದ್ದು ಹೀಗೆ; ‘ ಇದೊಂದು ಸ್ಪೆಷಲ್ ಆಕೇಷನ್.ಯಾಕಂದ್ರೆ ಕಳೆದ ವರ್ಷ ನನ್ನ ಹುಟ್ಟುಹಬ್ಬದ ಸಮಯದಲ್ಲಿ ಚಿತ್ರದ ಶೂಟಿಂಗ್ ಶುರುವಾಯಿತು. ಈಗ ಶೂಟಿಂಗ್ ಮುಗಿದು ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಅದರ ಭಾಗವಾಗಿಯೇ ಈಗ ಫಸ್ಟ್ ಲುಕ್ ಗಿಫ್ಟ್ ಸಿಕ್ಕಿದೆ. ಚಿತ್ರಕ್ಕೆ ಸಾಕಷ್ಟು ಜನರು ಕಾಯುತ್ತಿದ್ದಾರೆ, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವುದು ಖುಷಿ ತರುತ್ತಿದೆ’ ಎನ್ನುತ್ತಾರೆ.

ಉಮಾಪತಿ ಬ್ಯಾನರ್ ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಟಾಲಿವುಡ್ ನಟ ಜಗಪತಿ ಬಾಬು, ದೇವರಾಜ್, ವಿನೋದ್ ಪ್ರಭಾಕರ್, ಸೋನಲ್ ಮೊಂಟೆರೊ, ರವಿ ಕಿಶನ್, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ ಮೊದಲಾದವರಿದ್ದಾರೆ. ಅಭಿನಯಿಸಿದ್ದಾರೆ


ಇದು ಲಹರಿ ವಿಶೇಷ…
ನಿರ್ದೇಶಕ ಎಸ್.ನಾರಾಯಣ್, ಡಾ.ವಿಷ್ಣುವರ್ಧನ್ ಮೇಲೆ ಸಿಕ್ಕಾಪಟ್ಟೆ ಗೌರವ ಇಟ್ಟುಕೊಂಡವರು. ವಿಷ್ಣುವರ್ಧನ್ ಅವರಿಗೂ ನಾರಾಯಣ್ ಮೇಲೆ ಅಷ್ಟೇ ಪ್ರೀತಿ ಇತ್ತು. ಇವರಿಬ್ಬರ ಕಾಂಬಿನೇಷನ್ನಲ್ಲಿ ಕನ್ನಡದ ಆರು ವಿಭಿನ್ನ ಚಿತ್ರಗಳು ಮೂಡಿಬಂದಿವೆ. ವಿಷ್ಣುವರ್ಧನ್ ಅವರನ್ನು ಹೊಸತರಹದ ಗೆಟಪಲ್ಲಿ ತೋರಿಸಿಕೊಟ್ಟ ನಿರ್ದೇಶಕ ಎಂಬ ಮಾತಿಗೆ ನಾರಾಯಣ್ ಸೇರ್ಪಡೆಯಾದವರು. ನಾರಾಯಣ್ ವಿಷ್ಣು ಬಗ್ಗೆ ಹೇಳಿದ ಮಾತುಗಳೇನು ಗೊತ್ತಾ?
ಮೂರು ಮುಖದ ಮುದ್ದಿನ ಸಿಂಹ
* ನಾನು ವಿಷ್ಣುವರ್ಧನ್ ಅವರ ಮೂರು ಮುಖಗಳನ್ನು ನೋಡಿದ್ದೇನೆ. ಮೊದಲನೆಯದು, ಅವರಲ್ಲಿ ತುಂಬಾ ಹುಡುಗಾಟದ ಸ್ವಭಾವವಿತ್ತು. ಸದಾ ತಮಾಷೆ ಮಾಡುತ್ತಿದ್ದರು. ಪ್ರೀತಿಯಿಂದಲೇ ಕೆಲವರನ್ನು ರೇಗಿಸುತ್ತಿದ್ದರು, ಕೆಲವೊಮ್ಮೆ ಅವರಿಗೆ ತುಂಬಾ ಇಷ್ಟವಾಗಿಬಿಟ್ಟರೆ, ಅಂತಹವರ ಹೆಗಲ ಮೇಲೆ ಕೈ ಹಾಕಿಕೊಂಡು ಮಾತಾಡೋರು. ಹಿಂದೆ ಮುಂದೆ ನೋಡದೆ, ಅವರೊಳಗಿನ ಮನಸ್ಸಿನ ಭಾವನೆ ಹೊರ ಹಾಕೋರು. ಎರಡನೆಯದು, ಆಗಾಗ ಗಂಭೀರವಾಗುತ್ತಿದ್ದರು. ಒಂಥರಾ ಮೂಡಿಯಾಗಿಬಿಡುತ್ತಿದ್ದರು. ಬಹುಶಃ ನಾನು ಅವರಷ್ಟು ಮೂಡಿ ಅಗಿರೋದನ್ನು ಬೇರೆ ನಟರಲ್ಲಿ ನೋಡಿಲ್ಲ. ಅವರಿಗೆ ಇಷ್ಟ ಅಗದೇ ಇರುವಂತಹ ಯಾವುದೇ ಚಟುವಟಿಕೆ ನಡೆದರೂ ಅವರು ಸೈಲೆಂಟ್ ಆಗಿಬಿಡುತ್ತಿದ್ದರು. ವಾತಾವರಣವಿರಲಿ, ಲೋಕೇಷನ್ ಇರಲಿ, ಅಥವಾ ಅವರ ಕಾಸ್ಟ್ಯೂಮ್ಸ್ ಆಗಲಿ, ಇಷ್ಟ ಆಗದಿದ್ದರೆ, ಹೇಳುತ್ತಿರಲಿಲ್ಲ. ನಾವೇ ಅವರ ಮುಖ ಭಾವ ನೋಡಿ ಅರ್ಥ ಮಾಡಿಕೊಳ್ಳುತ್ತಿದ್ದೆವು. ಇನ್ನು ಮೂರನೆಯದು, ಅವರಿಗೆ ಅಧ್ಯಾತ್ಮದ ಮೇಲೆ ಹೆಚ್ಚು ಒಲವಿತ್ತು. ಇದನ್ನು ನಿಜವಾಗಲೂ ನಂಬೋಕೆ ಸಾಧ್ಯವಿರಲಿಲ್ಲ. ಅವರಿಗೆ ಆಧ್ಯಾತ್ಮ ವಿಷಯದ ಬಗ್ಗೆ ಅಪಾರ ತಿಳಿವಳಿಕೆ ಇತ್ತು. ಒಬ್ಬ ನಟನಿಗೂ ಆಧ್ಯಾತ್ಮಕ್ಕೂ ಎಂಥಾ ಸಂಬಂಧ? ಆದರೂ ಅವರಿಗೆ ಆಧ್ಯಾತ್ಮವೆಂದರೆ ಬಲು ಇಷ್ಟ. ಅವರ ಜೊತೆ ಮಾತಿಗೆ ನಿಂತರೆ, ಸಾಧು, ಸಂತರ ಜತೆ ಮಾತಾಡಿದ ಭಾವನೆ ಬರುತ್ತಿತ್ತು. ಮನಸ್ಸಿಗೆ ಒಂಥರಾ ನೆಮ್ಮದಿ ತರುತ್ತಿತ್ತು. ಅವರ ಮೂರು ಮುಖಗಳನ್ನು ನಾನು ನೋಡಿದ್ದೇನೆ. ಅವರ ಈ ಮೂರು ಮುಖಗಳ ಜತೆಯಲ್ಲಿ ಮೂರು ಮುಖಗಳ ಸುಖಗಳನ್ನೂ ಅನುಭವಿಸಿದ್ದೇನೆ.
ಅಹಂ ಇರದ ನಟ
*ಅವರೊಬ್ಬ ಸೂಪರ್ ಸ್ಟಾರ್, ಕೋಟ್ಯಾಂತರ ಅಭಿಮಾನಿಗಳಿದ್ದಾರೆ ಅನ್ನುವ ಯಾವುದೇ ಅಹಂ ಇರಲಿಲ್ಲ ಯಾವಾಗಲೂ ಸಿಂಪಲ್ ಆಗಿಯೇ ಇರುತ್ತಿದ್ದರು. ಒಂದು ರೀತಿ ಮುಗ್ಧ ಮಕ್ಕಳ ಹಾಗೆ. ಅವರಿಗೆ ಹೆಣ್ಣುಮಕ್ಕಳ ಮೇಲೆ ಬಹಳ ಗೌರವ ಇತ್ತು. ಸೆಟ್ನಲ್ಲಾದರೂ ಸಹ ನಾಯಕಿಯಿರಲಿ, ಸಹಾಯಕರಿರಲಿ ತುಂಬಾ ಗೌರವದಿಂದಲೇ ಮಾತಾಡುತ್ತಿದ್ದರು. ಆಧ್ಯಾತ್ಮದಲ್ಲಿ ಪರಕಾಯ ಪ್ರವೇಶ ಮಾಡಿದ್ದರಿಂದಲೇ ಅವರಿಗೆ ಅಂತಹ ಸಹನೆ, ತಾಳ್ಮೆ ಇತ್ತು ಅನಿಸುತ್ತೆ. ಇನ್ನು, ಅವರ ಪಾತ್ರಗಳ ಬಗ್ಗೆ ಹೇಳೋದಾದರೆ, ಯಾವುದೇ ಪಾತ್ರವಿರಲಿ, ತುಂಬಾ ಸೂಕ್ಷ್ಮವಾಗಿ ಗಮನಿಸೋರು, ಬೇರೆ ಭಾಷೆಯಲ್ಲಿ ಯಾರಾದರೂ ಇಂತಹ ಪಾತ್ರ ಮಾಡಿದ್ದಾರಾ ಅಂತ ಒಮ್ಮೆ ಚರ್ಚಿಸೋರು, ಅವರೇ ಮಾಡಿದ ಅಷ್ಟೂ ಚಿತ್ರಗಳ ಪಾತ್ರಗಳನ್ನೊಮ್ಮೆ ಮೆಲುಕು ಹಾಕೋರು, ಈ ಚಿತ್ರದ ಪಾತ್ರದಲ್ಲಿ ನಾನೇನು ಹೊಸದಾಗಿ ಮಾಡಬಹುದು ಅಂತ ಕೇಳೋರು. ಅಷ್ಟೆಲ್ಲಾ ಆದರೂ, ಸೆಟ್ಗೆ ಬಂದಾಗ, ನಾರಾಯಣ್, ನೀವೊಮ್ಮೆ ನಟಿಸಿ ತೋರಿಸಿ, ಆಮೇಲೆ ನಾನು ಮಾಡ್ತೀನಿ ಅನ್ನೋರು. ಅದೇನೆ ಇದ್ದರೂ, ಆ ಪಾತ್ರಕ್ಕೆ ಒಳ್ಳೆಯ ರೂಪ ಕೊಡುತ್ತಿದ್ದರು. ತುಂಬಾ ಟೈಮ್ ತೆಗೆದುಕೊಂಡೇ ಅವರು ರೆಡಿಯಾಗಿ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದರು. ಅವರು ಕ್ಯಾಮೆರಾಮೆನ್ ಬಳಿ ಬಂದು ನೀನು ಮೊದಲ ಪ್ರೇಕ್ಷಕ. ಮೊದಲು ನಿನ್ನ ಅಭಿಪ್ರಾಯ ಹೇಳು ಅನ್ನೋರು.
ಮೊದಲ ಭೇಟಿ ಅಶೋಕ ಹೋಟೇಲ್ನಲ್ಲಿ…
* ನನ್ನ ಅವರ ಆವರ ಮೊಮೊದಲ ಭೇಟಿಯಾಗಿದ್ದು 1986 ರಲ್ಲಿ. ನಾನು ಆಗಷ್ಟೇ ಚಿತ್ರರಂಗದ ಪ್ರವೇಶ ಮಾಡಿದ್ದೆ. “ಕೃಷ್ಣ ನೀ ಬೇಗನೆ ಬಾರೋ” ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಅಶೋಕ ಹೋಟೆಲ್ ನಲ್ಲಿ ಚಿತ್ರದ ಮುಹೂರ್ತ ನಡೆದಿತ್ತು. ಆ ಚಿತ್ರಕ್ಕೆ ಅವರು ಹೀರೋ. ಆಗಲೇ ಅವರನ್ನು ನೋಡಿದ್ದು ಮತ್ತು ಭೇಟಿ ಮಾಡಿ ಮಾತಾಡಿದ್ದು. ಅದಾದ ಬಳಿಕ ಅವರೊಂದಿಗೆ ಆರು ಸಿನಿಮಾಗಳನ್ನು ಮಾಡಿದೆ. “ವೀರಪ್ಪ ನಾಯ್ಕ” ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂತು. ಒಳ್ಳೆಯ ಹೆಸರೂ ಸಿಕ್ತು. ಹಣವೂ ಬಂತು ಇವತ್ತಿಗೂ “ವೀರಪ್ಪ ನಾಯ್ಕ” ಚಿತ್ರದ ಬಗ್ಗೆ ಎಲ್ಲರೂ ಮಾತಾಡುತ್ತಾರೆ. ಗೊತ್ತಿರದ ಒಂದು ಮುಖ್ಯವಾದ ವಿಷಯ ಹೇಳಲೇಬೇಕು. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರ ಕೆಲ ಆಪ್ತರಿಗೆ ಹೊರತುಪಡಿಸಿ, ಯಾರಿಗೂ ಈ ವಿಷಯ ಗೊತ್ತಿಲ್ಲ. ಭಾರತ ತಂಡದ ಬೌಲರ್ ಜಹೀರ್ ಖಾನ್ ಅವರು ವಿಷ್ಣುವರ್ಧನ್ ಅವರಿಗೆ ಒಳ್ಳೆಯ ಸ್ನೇಹಿತರು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಪಂದ್ಯ ಏರ್ಪಡುತ್ತೆ. ಆ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟಿಗರಿಗೆ ಒಂದು ಕ್ಯಾಂಪ್ ಹಾಕಲಾಗುತ್ತೆ. ಆ ಕ್ಯಾಂಪ್ನಲ್ಲಿ “ವೀರಪ್ಪನಾಯ್ಕ” ಚಿತ್ರ ಸ್ಕ್ರೀನಿಂಗ್ ನಡೆಯುತ್ತೆ. ಆ ಚಿತ್ರ ನೋಡಿದ ಕೂಡಲೇ ಜಹೀರ್ ಖಾನ್ ಅವರು ವಿಷ್ಣವರ್ಧನ್ ಸರ್ ಗೆ ಕಾಲ್ ಮಾಡಿ ಪ್ರೀತಿಯಿಂದ ಮಾತಾಡುತ್ತಾರೆ. ದೇಶಾಭಿಮಾನ ಬಗ್ಗೆ ಹುರಿದುಂಬಿಸಿರುವ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆಗ ಆ ಸರಣಿಯನ್ನು ಭಾರತ ಗೆಲ್ಲುತ್ತದೆ. ನಮ್ಮ ಸಂಸ್ಥೆಯಡಿ, ನಾನು ನಿರ್ದೇಶಿಸಿದ, ವಿಷ್ಣು ಸರ್ ಅಭಿನಯಿಸಿದ ಚಿತ್ರದ ಬಗ್ಗೆ ಇಂಡಿಯಾ ಟೀಮ್ ಹೊಗಳಿದ್ದು, ಹೆಗ್ಗಳಿಕೆ. “ವೀರಪ್ಪನಾಯ್ಕ” 25 ವಾರಗಳು ಪ್ರದರ್ಶನ ಕಾಣುತ್ತೆ. “ಸೂರ್ಯವಂಶ” ಕೂಡ 25 ವಾರಗಳು ಪ್ರದರ್ಶನವಾಗುತ್ತೆ. “ಜಮೀನ್ದಾರ”, “ಸಿಂಹಾದ್ರಿ ಸಿಂಹ”, “ಸಿರಿವಂತ” ಚಿತ್ರಗಳು ಶತದಿನ ಪೂರೈಸುತ್ತವೆ. “ವರ್ಷ” ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತೆ. ಅವರ ಜತೆ ಮಾಡಿದ ಆರು ಚಿತ್ರಗಳೂ ಯಶಸ್ಸು ಕೊಟ್ಟಿವೆ.
ರಾಮ್ ದಾಸ್ ಆಸೆ ಈಡೇರಲಿಲ್ಲ…
* ಅವರಿಗೆ ಎರಡು ಆಸೆಗಳಿದ್ದವು. ಒಂದು “ಶ್ರೀ ಕೃಷ್ಣ ಮಕರಂದ” ಕಥೆ ಅವರಿಗೆ ತುಂಬಾ ಇಷ್ಟವಾಗಿತ್ತು. ಮತ್ತೊಂದು “ಸಾಯಿಬಾಬಾ” ಸಿನಿಮಾದಲ್ಲಿ ಸಾಯಿಬಾಬಾ ಪಾತ್ರ ಮಾಡುವ ಆಸೆ ಇತ್ತು. ಆ ಎರಡೂ ಚಿತ್ರಗಳನ್ನೂ ನೀವೇ ನಿರ್ದೇಶಿಸಬೇಕು ಎಂದು ಹೇಳಿದ್ದರು. ಆದರೆ, ಅದು ಮಿಸ್ ಆಯ್ತು. ಅವರಿಗೆ ಆ ಎರಡು ಆಸೆಗಳಿದ್ದರೆ, ನನಗೆ ಅವರಿಗಾಗಿ “ರಾಮ್ ದಾಸ್ʼ” ಚಿತ್ರ ಮಾಡುವ ಆಸೆ ಇತ್ತು. ಸಂಪೂರ್ಣ ಆಧ್ಯಾತ್ಮ ಕುರಿತಾದ ಚಿತ್ರ ಮಾಡುವ ಆಸೆ ನನ್ನದ್ದಾಗಿತ್ತು. ಅದಾಗಲಿಲ್ಲ. ಇನ್ನೊಂದು ವಿಷಯವೆಂದರೆ, ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗುವಂತಹ ಚಿತ್ರ ಮಾಡಲು ರೆಡಿಯಾಗಿದ್ದೆ. ಅದು ವಿಷ್ಣುವರ್ಧನ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ಚಿತ್ರ. ಇಬ್ಬರೂ ನಟರೂ ಒಪ್ಪಿಗೆ ಕೊಟ್ಟಿದ್ದರು. “ಆಪ್ತರಕ್ಷಕ” ನಂತರ ಮಾಡೋಣ ಅಂದಿದ್ದರು. ಆದರೆ, ಅದು ಹಾಗೇ ಉಳಿದು ಹೋಯ್ತು.
ಅಣ್ಣಾವ್ರು ಮತ್ತು ವಿಷ್ಣು ಗಿರಿಜಾ ಮೀಸೆ…
* ಇನ್ನೊಂದು ವಿಶೇಷ ವಿಷಯ ಹೇಳಲೇಬೇಕು. ಬಹುಶಃ ಇದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ನನ್ನಲ್ಲಿಯೇ ಗುಟ್ಟಾಗಿದ್ದ ವಿಷಯ. ಒಮ್ಮೆ ನಾನು ಅಣ್ಣಾವ್ರ ಕಡೆಯಿಂದ ಫೋನ್ ಮಾಡಿಸಿ, ವಿಷ್ಣುವರ್ಧನ್ ಅವರನ್ನು ಮಾತಾಡಿಸಿದ್ದೆ. “ಸೂರ್ಯವಂಶ” ಚಿತ್ರದ ಗೆಟಪ್ ನೋಡಿ ಅಣ್ಣಾವ್ರಿಗೆ ಇಷ್ಟ ಆಗಿತ್ತು. ಎಷ್ಟು ಚೆನ್ನಾಗಿದೆ ಆ ಗಿರಿಜಾ ಮೀಸೆ ಅನ್ನೋರು. “ಶಬ್ದವೇದಿ” ಚಿತ್ರೀಕರಣ ಸಮಯದಲ್ಲಿ ಅಣ್ಣಾವ್ರು ಆಗಾಗ ವಿಷ್ಣುವರ್ಧನ್ ಗೆಟಪ್ ಬಗ್ಗೆ ಹೇಳುತ್ತಿದ್ದರು. ಆ ಸಂದರ್ಭದಲ್ಲೇ ನಾನೂ ಒಂದು ಸಲ ಅವರ ಜೊತೆ ಮಾತಾಡಿ ಅಂತ ಫೋನ್ ಮಾಡಿ ಕೊಟ್ಟಿದ್ದೆ. ಇಬ್ಬರು ನಟರು ಹರಟಿದ್ದರು. ಅದು ನಿಜಕ್ಕೂ ರಸಘಳಿಗೆ. ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್ ಮತ್ತು ಡಾ. ಅಂಬರೀಷ್ ಈ ಮೂವರು ಕನ್ನಡ ಚಿತ್ರರಂಗದ ಮುತ್ತುಗಳು. ಇವರ್ಯಾರೂ ನನ್ನನ್ನು ನಿರ್ದೇಶಕನನ್ನಾಗಿ ನೋಡಲಿಲ್ಲ. ಒಬ್ಬ ಗೆಳೆಯನಾಗಿ, ಕುಟುಂಬದ ಸದಸ್ಯನಾಗಿ ನೋಡಿದರು. ಹಾಗಾಗಿಯೇ ನಾನು ಅವರ ಅಂತರಂಗದೊಳಗೆ ಪ್ರವೇಶಿಸಲು ಸಾಧ್ಯವಾಯ್ತು.


ದುನಿಯಾ ವಿಜಯ್ ಇದೇ ಮೊದಲ ಸಲ ನಿರ್ದೇಶನ ಮಾಡಿರುವ ‘ಸಲಗ’ ಚಿತ್ರ ಇನ್ನೇನು ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ‘ನಾಲ್ಕು ಕ್ವಾರ್ಟರ್ ಕುಡಿದ್ರು ಸ್ಟಡಿಯಾಗಿ ನಿಲ್ತಿದ್ದೆ ಸೂರಿಯಣ್ಣ’ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗ ಮತ್ತೊಂದು ಮಳೆಯ ಹಾಡು ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ‘ಮಳೆಯೇ ಮಳೆಯೇ’ ಲಿರಿಕಲ್ ವಿಡಿಯೊ ಸಾಂಗ್ ಸೆಪ್ಟೆಂಬರ್ 4 ರಂದು ಬಿಡುಗಡೆಯಾಗಿದೆ. ದುನಿಯಾ ವಿಜಯ್ ಜೊತೆಗೆ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಧನಂಜಯ್ ಕೂಡ ಚಿತ್ರದ ಹೈಲೈಟ್.
ಸಂಚಿತ್ ಹೆಗ್ಡೆ , ಐಶ್ವರ್ಯ ಹಾಡಿರುವ ಈ ಗೀತೆಗೆ ನಾಗಾರ್ಜುನ್ ಶರ್ಮ ಸಾಹಿತ್ಯವಿದೆ. ಚರಣ್ ರಾಜ್ ಸಂಗೀತ ನೀಡಿದ್ದಾರೆ. ಕೆ.ಪಿ ಶ್ರೀಕಾಂತ್ ನಿರ್ಮಾಣವಿದೆ. A2 ಆಡಿಯೊ ಸಂಸ್ಥೆ ಮೂಲಕ ಹಾಡು ಬಿಡುಗಡೆಯಾಗಿದೆ.ಚಿತ್ರಕ್ಕೆ ವಿನೋದ್ ಸ್ಟಂಟ್ ಮಾಡಿಸಿದರೆ, ಮೋಹನ್ ನೃತ್ಯ ವಿದೆ. ಮಾಸ್ತಿ ಸಂಭಾಷಣೆ ಬರೆದಿದ್ದಾರೆ.



ಸಿನಿಮಾ ಅಂದರೆ ಹಾಗೆಯೇ. ಕ್ಯಾಮೆರಾ ಮುಂದೆ ನಿಲ್ಲಬೇಕಾದರೆ, ಮೊದಲು ನಟನೆ ಸೇರಿದಂತೆ ಡೈಲಾಗ್ ಡಿಲವರಿ, ಬಾಡಿಲಾಂಗ್ವೇಜ್ ಸೇರಿದಂತೆ ಇತರೆ ವಿಷಯಗಳಲ್ಲಿ ಪಕ್ವವಾಗಿರಬೇಕು ಸಿನಿಮಾದಲ್ಲಿ ಫೈಟ್ಸ್ ಸಹಜ. ಕೆಲವರು ಸಾಹಸ ನಿರ್ದೇಶಕರು ಚಿತ್ರೀಕರಣ ಸಮಯದಲ್ಲಿ ನಟ, ನಟಿಯರಿಗೆ ಫೈಟ್ಸ್ ಟಿಪ್ಸ್ ಹೇಳಿಕೊಡುತ್ತಾರೆ. ಇನ್ನೂ ಕೆಲವರು ಮಾಸ್ಟರ್ಸ್ ಬಳಿ ಸ್ಟಂಟ್ಸ್ ಕೂಡ ಕಲಿತು ನಂತರದ ದಿನಗಳಲ್ಲಿ ಕ್ಯಾಮೆರಾ ಮುಂದೆ ನಿಲ್ಲುತ್ತಾರೆ. ಈಗ ನಟಿ ಮೈತ್ರಿಯಾಗೌಡ ಕೂಡ ಸಿನಿಮಾಗಾಗಿಯೇ ಮಾರ್ಷಲ್ ಆರ್ಟ್ಸ್ ಕಲಿತಿದ್ದಾರೆ.
ಹೌದು, ನಟಿ ಮೈತ್ರಿಯಾಗೌಡ “ಆಗಂತುಕ” ಚಿತ್ರಕ್ಕಾಗಿ ಕಳೆದ ನಾಲ್ಕು ತಿಂಗಳ ಕಾಲ ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದಾರೆ. ಸಿನಿಮಾದಲ್ಲಿ ಅವರು ಖಡಕ್ ಅರಣ್ಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಭರ್ಜರಿ ಫೈಟ್ಸ್ಗಾಗಿ ಅವರು ಚಾಮರಾಜ ಮಾಸ್ಟರ್ ಬಳಿ ಸ್ಟಂಟ್ಸ್ ಕಲಿಯುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದಲೂ ಅವರು ಕುಂಫು, ಮೂವ್ ಥಾಯ್ ಇತರೆ ಸ್ಟಂಟ್ಸ್ ಗಳಲ್ಲಿ ಪರಿಣಿತಿ ಹೊಂದುತ್ತಿದ್ದಾರೆ.
ಸದ್ಯಕ್ಕೆ “ಆಗಂತುಕʼ ಚಿತ್ರ ಶೇ. 60 ರಷ್ಟು ಚಿತ್ರೀಕರಣವಾಗಿದೆ. ಎರಡು ಫೈಟ್ಸ್ ಹಾಗೂ ಸಾಂಗ್ಸ್ ಬಾಕಿ ಉಳಿದಿದೆ. ಕೊರೊನಾ ಲಾಕ್ಡೌನ್ ಬಳಿಕ ಚಿತ್ರೀಕರಣಕ್ಕೆ ಹೊರಡಲಿದೆ. ಚಿತ್ರಕ್ಕೆ ರಜತ್ ರಘುನಾಥ್ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ನಿರ್ಮಾಣವನ್ನೂ ಮಾಡಿದ್ದಾರೆ. ಇದೇ ಮೊದಲ ಸಲ ಖಾಕಿ ಖದರ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಮೈತ್ರಿಯಾಗೌಡ, ಸಿನಿಮಾ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಚಿತ್ರದ ಫೈಟ್ಸ್ ಅನ್ನು ರಿಯಲ್ ಆಗಿ ಮಾಡುವ ಆಸೆ ಮೈತ್ರಿಯಾ ಅವರದ್ದು. ಆದರೆ, ನಿರ್ದೇಶಕರು ರಿಸ್ಕ್ ಸ್ಟಂಟ್ ಬೇಡ ಎನ್ನುತ್ತಿದ್ದರೂ, ಒಂದೊಮ್ಮೆ ರಿಸ್ಕ್ ತೆಗೆದುಕೊಳ್ಳಬೇಕು ಎಂದು ನಾಲ್ಕು ತಿಂಗಳ ಕಾಲ ಅವರು ಸ್ಟಂಟ್ ತರಬೇತಿ ಪಡೆದಿದ್ದಾರೆ.
“ಆಗಂತುಕʼ ಬಗ್ಗೆ ಹೇಳುವುದಾದರೆ, ಇದೊಂದು ಮರ್ಡರ್ ಮಿಸ್ಟ್ರಿಯಾಗಿದ್ದು, ಬಹುತೇಕ ದಟ್ಟ ಅರಣ್ಯದಲ್ಲೇ ನಡೆಯೋ ಕಥೆ ಇದಾಗಿದೆ. ಸಕಲೇಶಪುರದಲ್ಲಿ ಚಿತ್ರೀಕರಣ ನಡೆದಿದ್ದು, ಇಷ್ಟರಲ್ಲೇ ಮಡಿಕೇರಿ, ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಹೋಗಲು ಚಿತ್ರತಂಡ ಸಜ್ಜಾಗಿದೆ. ಚಿತ್ರಕ್ಕೆ ಜಾರ್ಜ್ ಥಾಮಸ್ ಸಂಗೀತವಿದೆ. ಪಿವಿಆರ್ ಸ್ವಾಮಿ ಅವರ ಛಾಯಾಗ್ರಹಣವಿದೆ. ಡಿಂಗ್ರಿನಾಗರಾಜ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಇವರೊಂದಿಗೆ ಹೊಸ ಪ್ರತಿಭೆಗಳಿಗೂ ವೇದಿಕೆ ಕಲ್ಪಿಸಲಾಗಿದೆ.


ಸುದೀಪ್ ಈಗ ಬಿಝಿ. ಅದು ಎಲ್ಲರಿಗೂ ಗೊತ್ತಿದೆ. ಅವರ ಅಭಿನಯದ “ಕೋಟಿಗೊಬ್ಬ 3′ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಅನೂಪ್ ಭಂಡಾರಿ ನಿರ್ದೇಶನದ, ಜಾಕ್ ಮಂಜು ನಿರ್ಮಾಣದ “ಫ್ಯಾಂಟಮ್” ಕೂಡ ಚಿತ್ರೀಕರಣದಲ್ಲಿದೆ. ಇದರ ನಡುವೆ ಒಂದಷ್ಟು ಹೊಸ ಸಿನಿಮಾಗಳೂ ಕೂಡ ಸೆಟ್ಟೇರಲು ಸಜ್ಜಾಗಿವೆ. ವಿಶೇಷವೆಂದರೆ, ಸುದೀಪ್ ಮತ್ತೊಮ್ಮೆ ಜೋಗಿ ಪ್ರೇಮ್ ಜೊತೆ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ.
ಹೌದು, ಈ ವಿಷಯವನ್ನು ಸ್ವತಃ ಜೋಗಿ ಪ್ರೇಮ್ ಸ್ಪಷ್ಟಪಡಿಸಿದ್ದಾರೆ. ಸುದೀಪ್ ಹುಟ್ಟುಹಬ್ಬಕ್ಕೆ ಟ್ವಿಟ್ಟರ್ನಲ್ಲಿ ಶುಭಕೋರಿದ್ದ ಪ್ರೇಮ್ ಅವರಿಗೆ ಸುದೀಪ್ ಅಭಿಮಾನಿಗಳು ತಮ್ಮ ಮುಂದಿನ ಸಿನಿಮಾ ಯಾವಾಗ, ಯಾರ ಜೊತೆ ಎಂದು ಪ್ರಶ್ನಿಸಿದ್ದರು. ಅವರ ಪ್ರಶ್ನೆಗಳಿಗೆ ಪ್ರೇಮ್, ನಾನು ಸುದೀಪ್ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದೇನೆ ಎಂದಿದ್ದಾರೆ. “ದಿ ವಿಲನ್” ಬಳಿಕ ಮಾಡುತ್ತಿರುವ ಸಿನಿಮಾ ಇದಾಗಿರುವುದರಿಂದ ಕಥೆ, ಪಾತ್ರ ಎಲ್ಲವೂ ವಿಶೇಷವಾಗಿರಲಿದೆ ಎಂಬುದು ಪ್ರೇಮ್ ಸ್ಪಷ್ಟನೆ. ಹೊಸ ಚಿತ್ರದಲ್ಲಿ ಸುದೀಪ್ ಅವರ ಗೆಟಪ್ ವಿಭಿನ್ನವಾಗಿರಲಿದೆ ಎಂದಿದ್ದಾರೆ ಪ್ರೇಮ್.
ಸದ್ಯಕ್ಕೆ ಪ್ರೇಮ್ ಅವರು ರಕ್ಷಿತಾ ಸಹೋದರ ರಾಣಾ ಅವರ “ಏಕ್ ಲವ್ ಯಾ” ಸಿನಿಮಾದತ್ತ ಗಮನ ಹರಿಸಿದ್ದಾರೆ. ಆ ಚಿತ್ರದಲ್ಲಿ ರಿಷಾ ಮತ್ತು ರಚಿತಾ ನಾಯಕಿಯರು. ರಕ್ಷಿತಾ ತಮ್ಮ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅದೇನೆ ಇರಲಿ, ಜೋಗಿ ಪ್ರೇಮ್ ಪುನಃ ಸುದೀಪ್ ಜೊತೆ ಸಿನಿಮಾ ಮಾಡುವ ವಿಷಯ ಹೊರಹಾಕಿದ್ದಾರೆ. ಆದರೆ, ಆ ಚಿತ್ರ ಯಾವಾಗ ಸೆಟ್ಟೇರಲಿದೆ, ಯಾರು ನಿರ್ಮಾಣ ಮಾಡಲಿದ್ದಾರೆ. ಕಥೆ ಹೇಗಿರಲಿದೆ. ಸುದೀಪ್ ಅವರ ಗೆಟಪ್ ಹೇಗೆಲ್ಲಾ ಇರಲಿದೆ. ಇಲ್ಲೂ ಸುದೀಪ್ ಜೊತೆ ಬೇರೆ ಸ್ಟಾರ್ ಯಾರಾದರೂ ಇರುತ್ತಾರಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಸದ್ಯ ಉತ್ತರವಿಲ್ಲ. ಹೊಸ ಸಿನಿಮಾ ಮಾಡ್ತೀನಿ ಅಂತ ಪ್ರೇಮ್ ಹೇಳಿದ್ದಾರೆ. ಆದರೆ, ಅದು ಸೆಟ್ಟೇರಿ, ಶೀರ್ಷಿಕೆ ಅನೌನ್ಸ್ ಮಾಡಿ, ಟೀಮ್ ಸೆಟ್ ಮಾಡುವವರೆಗೂ ಪ್ರೇಮ್ ಇನ್ನೂ ಸಾಕಷ್ಟು ಸರ್ ಪ್ರೈಸ್ ನ್ಯೂಸ್ಗಳನ್ನು ಕೊಡುತ್ತಲೇ ಇರುತ್ತಾರೆ ಎಂಬುದಂತೂ ಸತ್ಯ.

…………………………………….
ಶಿವಣ್ಣ ಆಯ್ತು, ಉಪೇಂದ್ರ ಆಯ್ತು, ದರ್ಶನ್ ಆಯ್ತ, ಕೊನೆಗೆ ಸುದೀಪ್ ಪ್ರತಿಕ್ರಿಯೆ ಏನು ಅಂತ ಕಾತರದಲ್ಲಿದ್ದ ಚಿತ್ರೋದ್ಯಮಕ್ಕೆಕೊನೆಗೂ ಉತ್ತರ ಸಿಕ್ಕಿತು. ಕಳೆದ ನಾಲ್ಕೈದು ದಿನಗಳಿಂದ ಬಾರೀ ಸದ್ದುಮಾಡುತ್ತಿದ್ದ ಡ್ರಗ್ಸ್ ಮಾಫಿಯಾ ಕುರಿತು ನಟ ಕಿಚ್ಚ ಸುದೀಪ್ ಕೊನೆಗೂ ಪ್ರತಿಕ್ರಿಯೆ ಕೊಟ್ಟರು. ಅಚ್ಚರಿ ಅಂದ್ರೆ ಡ್ರಗ್ಸ್ ಮಾಫಿಯಾ ಆರೋಪ ಪ್ರಕರಣದಲ್ಲಿ ಕೇಂದ್ರ ಬಿಂದು ಆಗಿರುವ ಇಂದ್ರಜಿತ್ ಲಂಕೇಶ್ ಅವರ ಜತೆಗೆಯೇ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ್ದು.

ಡ್ರಗ್ಸ್ ಮಾಫಿಯಾ: ಸುದೀಪ್ ಹೇಳಿದ್ದಿಷ್ಟು!
ಡ್ರಗ್ಸ್ ದಂಧೆ ಬಗ್ಗೆ ನಾನೇನು ಹೇಳಲ್ಲ. ನಾನು ಕೂಡಾ ಚಿತ್ರರಂಗದವನೇ, ಆದರೆ ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡಲು ಹೋಗಬಾರದು. ನಮಗೆ ರೈಸ್, ದಾಲ್ ಗೊತ್ತು….ಇದರ ಬಗ್ಗೆ ಗೊತ್ತಿಲ್ಲ ಎಂದು ನಗೆ ಚಟಾಕಿ ಹಾರಿಸಿದರು.
ಚಿರು ಹೆಸರು ಪ್ರಸ್ತಾಪಕ್ಕೆ ಗರಂ
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂಬುದರ ಬಗ್ಗೆ ನನಗೇನೂ ಗೊತ್ತಿಲ್ಲ. ಚಿತ್ರರಂಗವನ್ನು ಎಲ್ಲರೂ ಸೇರಿ ಕಟ್ಟಿದ್ದಾರೆ. ಯಾವುದೋ ಒಂದು ವಿಚಾರದಿಂದಾಗಿ ಚಿತ್ರರಂಗದ ದೂಷಣೆ ಬೇಡ ಎಂದು ಸುದೀಪ್ ಹೇಳಿದರು.ಹಾಗೆಯೇ ಡ್ರಗ್ಸ್ ಮಾಫಿಯಾ ಆರೋಪ ಪ್ರಕರಣದಲ್ಲಿ ಚಿರು ಹೆಸರು ಕೇಳಿಬಂದಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಟ ಚಿರಂಜೀವಿ ಸರ್ಜಾಗೆ ಕುಟುಂಬ ಇದೆ, ಪತ್ನಿಯೂ ಇದ್ದಾರೆ. ಹೀಗಾಗಿ ನಿಧನರಾದವರ ಬಗ್ಗೆ ಮಾತನಾಡೋದು ಬೇಡ ಎಂದುವಿನಂತಿಸಿಕೊಂಡರು.

ನಂಗೆ ಡ್ರಗ್ಸ್ ಪಾರ್ಟಿ ಗೊತ್ತಿಲ್ಲ:
ನನಗೆ ಪಾರ್ಟಿ ಆಫರ್ ಬಂದಿರೋದು ರಾಜಕೀಯ ಪಕ್ಷಗಳಿಂದ, ಹೀಗಾಗಿ ಬೇರೆ ಪಾರ್ಟಿಗಳ ಬಗ್ಗೆ ನನಗೆ ಗೊತ್ತಿಲ್ಲ ಎನ್ನುತ್ತಾ ತಮ್ಮದೇ ಶೈಲಿಯಲ್ಲಿ ಡ್ರಗ್ಸ್ವಮಾಫಿಯಾ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟರು.

ಸಂಬಂಜ ಅನ್ನೋದು ದೊಡ್ಡದು ಕನಾ…
ಈ ಪದಗಳೊಮ್ಮೆ ಕಿವಿಗಪ್ಪಳಿಸಿದರೆ, ನೆನಪಾಗೋದೇ ದೇವನೂರು ಮಹಾದೇವ ಅವರು. ಹೌದು ಅವರ ಜನಪ್ರಿಯಗೊಂಡ “ಕುಸುಮ ಬಾಲೆ” ಪುಸ್ತಕದೊಳಗಿರುವ ಮರೆಯದ ಸಾಲುಗಳಿದು. ಇಷ್ಟಕ್ಕೂ ಈ ದೇವನೂರು ಮಹಾದೇವ ಅವರ ಪುಸ್ತಕದೊಳಗಿರುವ “ಸಂಬಂಜ ಅನ್ನೋದು ದೊಡ್ಡದು ಕನಾ…ʼ ಚಿತ್ರವೊಂದರ ಟ್ಯಾಗ್ ಲೈನ್. ಅ ಚಿತ್ರ ಬೇರಾವೂದೂ ಅಲ್ಲ, ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಸದ್ದಿಲ್ಲದೆಯೇ ಶೂಟಿಂಗ್ ಮುಗಿಸಿ, ಸೆನ್ಸಾರ್ ಮಂಡಳಿಯಿಂದ ಯು ಪ್ರಮಾಣ ಪತ್ರ ಪಡೆದಿರುವ “ಡಿ ಎನ್ ಎ” ಸಿನಿಮಾ.

ಹೌದು, ನಿರ್ದೇಶಕ ಪ್ರಕಾಶ್ ರಾಜ್ ಮೇಹು ಅವರು ಹೊಸ ರೀತಿಯ ನಿರೂಪಣೆಯೊಂದಿಗೆ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಶೀರ್ಷಿಕೆ ಹೇಳುವಂತೆ ಇದೊಂದು, ಭಾವನಾತ್ಮಕ ಸಂಬಂಧಗಳ ನಡುವಿನ ಕಥಾಹಂದರ ಹೊಂದಿದೆ. ಪ್ರಸ್ತುತ ದಿನಮಾನದಲ್ಲಿ ನಡೆಯುವ ವಿಷಯಗಳೇ ಚಿತ್ರದ ಹೈಲೈಟ್. ಜಾತಿ,ಧರ್ಮಗಳ ಹೆಸರಿನಲ್ಲಿ ಮನಷ್ಯ-ಮನಷ್ಯರ ನಡುವಿನ ಗೋಡೆಗಳು ಭದ್ರಗೊಳ್ಳುತ್ತಿರುವ ಪ್ರಸ್ತುತ ದಿನಗಳಲ್ಲಿ, ನಿಜವಾದ ಸಂಬಂಧ ಯಾವುದು? ರಕ್ತ ಸಂಬಂಧವೆ? ಭಾವನಾತ್ಮಕ ಸಂಬಂಧವೆ? ಅನ್ನುವ ವಿಷಯವನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕ ಪ್ರಕಾಶ್ ರಾಜು ಮೇಹು. ಈಗಾಗಲೇ ಚಿತ್ರವನ್ನು ವೀಕ್ಷಿಸಿರುವ ಸಿನಿಮಾರಂಗದ ಕೆಲ ಗೆಳೆಯರು, ಅಪ್ತರು, ತಂತ್ರಜ್ಞರು, ಚಿತ್ರದೊಳಗಿರುವ ಅಂಶಗಳ ಬಗ್ಗೆ, ನಿರ್ದೇಶಕರ ಆಲೋಚನೆಗಳ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರ. ಸೆನ್ಸಾರ್ ಮಂಡಳಿ ಕೂಡ ಸಿನಿಮಾ ವೀಕ್ಷಿಸಿ, ಯಾವುದೇ ಕಟ್, ಮ್ಯೂಟ್ ಇಲ್ಲದೆ ಯು ಪ್ರಮಾಣ ಪತ್ರ ನೀಡುವುದರ ಜೊತೆಗೆ ಚಿತ್ರದೊಳಗಿರುವ ತಾಕತ್ತಿನ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಂಬಂಧಗಳ ಮೌಲ್ಯಗಳಿರುವ ಕಥೆಯಲ್ಲಿ ಭಾವುಕತೆಯೇ ತುಂಬಿದೆ. ಹಾಗಾಗಿ, ಇದು ಎಲ್ಲಾ ವರ್ಗದವರಿಗೂ ಇಷ್ಟವಾಗುವ ಸಿನಿಮಾ ಇದಾಗಲಿದೆ ಎಂಬುದು ಅವರ ಮಾತು.

ಅದೇನೆ ಇರಲಿ, ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕೊರೊನಾ ಸಮಸ್ಯೆಯಿಂದ ಇಡೀ ಚಿತ್ರರಂಗವೇ ಸ್ಥಬ್ಧಗೊಂಡಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರರಂಗ ಚೇತರಿಸಿಕೊಂಡು, ಪುನಃ ಮೊದಲಿನಂತೆಯೇ ರಂಗೇರಲಿದೆ. “ಡಿಎನ್ಎ” ಕೂಡ ಬಿಡುಗಡೆಗೆ ಎದುರು ನೋಡುತ್ತಿದೆ. ಸದ್ಯ ಚಿತ್ರಮಂದಿರಕ್ಕೆ ದೊಡ್ಡ ಸಿನಿಮಾಗಳು ಅಪ್ಪಳಿಸಿದ ಬಳಿಕ ಈ ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ.