Categories
ಸಿನಿ ಸುದ್ದಿ

ಕಾಂಗರೂ ಇದು ಆದಿತ್ಯ ಚಿತ್ರ: ಪೋಸ್ಟರ್ ರಿಲೀಸ್ ಮಾಡಿದ ಶಿವರಾಜ ಕುಮಾರ್


.
ಆದಿತ್ಯ ನಾಯಕರಾಗಿ ನಟಿಸಿರುವ ಹಾಗೂ ಕಿಶೋರ್ ಮೇಗಳಮನೆ ನಿರ್ದೇಶನದ “ಕಾಂಗರೂ” ಚಿತ್ರದ ಮೋಷನ್ ಪೋಸ್ಟರ್ A2 music ಮೂಲಕ ಬಿಡುಗಡೆಯಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಆದಿತ್ಯ ಅವರ ಅಭಿಮಾನಿಗಳು ಮೋಷನ್ ಪೋಸ್ಟರ್ ಗೆ ಫಿದಾ ಆಗಿದ್ದಾರೆ. ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

” ಮೋಷನ್ ಪೋಸ್ಟರ್ ತುಂಬಾ ಚೆನ್ನಾಗಿದೆ. ನೋಡಿದಾಗ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎಂದಿನಿಸುತ್ತದೆ. ಆದಿತ್ಯ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ” ಎಂದು ಶಿವಣ್ಣ ಹಾರೈಸಿದ್ದಾರೆ.

ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ನಿರ್ಮಾಣವಾಗುತ್ತಿದೆ.

ಆದಿತ್ಯ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದು, ಸೈಕಿಯಾಟ್ರಿಸ್ಟ್ ಡಾಕ್ಟರ್ ಪಾತ್ರ ನಿರ್ವಹಿಸಿದ್ದಾರೆ. ಶಿವಮಣಿ, ಕರಿಸುಬ್ಬು, ನಾಗೇಂದ್ರ ಅರಸ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚನ್ನಕೇಶವ ಬಿ.ಸಿ, ಕುಣಿಗಲ್, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ಕೆ ಜಿ ಆರ್ ಗೌಡ ಈ ಚಿತ್ರವನ್ನು ನಿರ್ಮಾಣ‌ ಮಾಡುತ್ತಿದ್ದಾರೆ.

ನಿರ್ದೇಶಕ ಕಿಶೋರ್ ಮೇಗಳಮನೆ ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ, ಸಾಧುಕೋಕಿಲ ಸಂಗೀತ ನೀಡಿದ್ದಾರೆ. ಉದಯ್ ಲೀಲ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಮಿಸ್ಟರ್ ನಟ್ವರ್ ಲಾಲ್: ಫೆಬ್ರವರಿ 23ಕ್ಕೆ ಬಿಡುಗಡೆ; ಇದು ತಾಜ್ ಮಹಲ್ ಮಾರಿದವನ ಕಥೆ!

ತನುಷ್ ಸಿನಿಮಾಸ್ ಲಾಂಛನದಲ್ಲಿ ತನುಷ್ ಶಿವಣ್ಣ ನಿರ್ಮಿಸಿರುವ, ವಿ.ಲವ ನಿರ್ದೇಶನದ ಹಾಗೂ ತನುಷ್ ಶಿವಣ್ಣ – ಸೋನಾಲ್ ಮೊಂತೆರೊ ಜೋಡಿಯ “Mr ನಟ್ವರ್ ಲಾಲ್” ಚಿತ್ರ ಫೆಬ್ರವರಿ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಚಿತ್ರ ಜನರ ಮನ ಗೆದ್ದಿದೆ.

ವಿಲಿಯಂ ಡೇವಿಡ್ ಛಾಯಾಗ್ರಹಣ, ಧರ್ಮವಿಶ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ರಾ ಪುಷ್ಪರಾಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ತನುಷ್ ಶಿವಣ್ಣ, ಸೋನಾಲ್ ಮೊಂತೆರೊ, ನಾಗಭೂಷಣ, ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್, ಸುಂದರರಾಜ್, ಕಾಂತರಾಜು ಕಡ್ಡಿಪುಡಿ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ನಿರ್ದೇಶಕಿ ಅಂಜಲಿ‌ ಮೆನನ್ ಜತೆ ಕೆ ಆರ್ ಜಿ ಸ್ಟುಡಿಯೋಸ್ ಸಾಥ್

ಚಿರಪರಿಚಿತ ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಕೆ ಆರ್ ಜಿ ಸ್ಟುಡಿಯೋಸ್ ಇದೀಗ ಖ್ಯಾತ ಮಲಯಾಳಂ ನಿರ್ದೇಶಕಿ ಅಂಜಲಿ‌ ಮೆನನ್ ಅವರೊಂದಿಗೆ ಹೊಸ ತಮಿಳು ಚಿತ್ರಕ್ಕಾಗಿ ಕೈ ಜೋಡಿಸಿದೆ. “ಬ್ಯಾಂಗ್ಲೂರ್ ಡೇಸ್”, “ಉಸ್ತಾದ್ ಹೊಟೇಲ್”, “ಮಂಜಡಿಕುರು”, “ಕೂಡೆ” ಮತ್ತು ಇತ್ತೀಚಿನ “ವಂಡರ್ ವುಮನ್” ಅಂತಹಾ ಹೆಸರಾಂತ ಚಿತ್ರಗಳನ್ನು ಕೊಡುಗೆಯಾಗಿ ನೀಡಿರುವ ನಿರ್ದೇಶಕಿ ಅಂಜಲಿ‌ ಮೆನನ್ ಇದೀಗ ತಮಿಳು‌ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ.

ಕೆ ಆರ್ ಜಿ ಸ್ಟುಡಿಯೋಸ್ ಈ ಸಹಯೋಗದ‌ ಮೂಲಕ ಕನ್ನಡ ಚಿತ್ರರಂಗಕ್ಕೂ ಹಾಗೂ ಇನ್ನಿತರ ಚಿತ್ರರಂಗಕ್ಕೂ ಇರುವ ಅಂತರವನ್ನು ಕಡಿಮೆ ಮಾಡಿ, ಸಮಗ್ರ ನಿರ್ಮಾಣದ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸುತ್ತಿದೆ ಎಂದರೆ ತಪ್ಪಾಗಲಾರದು.
ಕೆ ಆರ್ ಜಿ ಸ್ಟುಡಿಯೋಸ್ ತನ್ನ ಸಿನಿಮಾ ವಿತರಣೆಯನ್ನು 2017ರಲ್ಲಿ‌ ಆರಂಭಿಸಿ, ಇಲ್ಲಿಯ ವರೆಗೂ ಸರಿಸುಮಾರು 100 ಚಿತ್ರಗಳನ್ನು ವಿತರಿಸಿದೆ. 2020ರಲ್ಲಿ, “ರತ್ನನ್ ಪ್ರಪಂಚ” ಚಿತ್ರದ ಮೂಲಕ ಚಿತ್ರ ನಿರ್ಮಾಣವನ್ನು ಆರಂಭಿಸಿತು. ರೋಹಿತ್ ಪದಕಿಯವರ ನಿರ್ದೇಶನದಲ್ಲಿ, ಡಾಲಿ‌ ಧನಂಜಯ್ ಅಭಿನಯದಲ್ಲಿ ಮೂಡಿ‌ಬಂದ ಈ‌ ಚಿತ್ರ Amazon primeನಲ್ಲಿ ಬಿಡುಗಡೆಗೊಂಡು ಎಲ್ಲರ ಮನೆ ಮಾತಾಗಿತ್ತು‌. ನಂತರದಲ್ಲಿ , ಮಾರ್ಚ್ 2023ರಲ್ಲಿ ತೆರೆ ಕಂಡ “ಗುರುದೇವ್ ಹೊಯ್ಸಳ” ಬಹಳ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಯನ್ನು ಗಳಿಸಿತ್ತು.
ಕೆ ಆರ್ ಜಿ ಸ್ಟುಡಿಯೋಸ್ ನ‌ ಈ ಸಹಯೋಗ ವಿಭಿನ್ನ ಕಥಾ ವಸ್ತುವನ್ನು ಒಳಗೊಂಡಿರುವ ಚಿತ್ರಗಳನ್ನು ಸಿನಿ ಪ್ರೇಮಿಗಳಿಗೆ ಉಣಬಡಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ. ಅಷ್ಟೇ ಅಲ್ಲದೆ, ದಕ್ಷಿಣ ಭಾರತದ 4 ಭಾಷೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ.

ಈ ಕುರಿತು ನಿರ್ದೇಶಕಿ ಅಂಜಲಿ‌ ಮೆನನ್ ಮಾತನಾಡಿ, ಸಿನಿಮಾಗಳು ಭಾಷೆ ಎಂಬ ಗೋಡೆಯನ್ನು ದಾಟಿ ಎಲ್ಲರನ್ನು ತಲುಪುತ್ತಿರುವ‌ ಈ ಕಾಲದಲ್ಲಿ ಕೆ ಆರ್ ಜಿ ಸ್ಟುಡಿಯೋಸ್ ಅಂತಹ ಸಂಸ್ಥೆಯೊಡನೆ ನಾನು ಕೈ ಜೋಡಿಸಿರುವುದು ಸಮಂಜಸವೇ ಎನಿಸುತ್ತಿದೆ. ನಮ್ಮ ಈ ಸಹಯೋಗದಲ್ಲಿ ಉನ್ನತ ಮಟ್ಟದ ಚಿತ್ರ ನಿರ್ಮಾಣ ಹಾಗೂ ನಿರ್ದೇಶನವನ್ನು ಎದುರು ನೋಡುತ್ತಿದ್ದೇನೆ ಎಂದರು‌.

ಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥಾಪಕರು ಮತ್ತು ನಿರ್ಮಾಪಕರು ಆದ ಕಾರ್ತಿಕ್ ಗೌಡ ಮಾತನಾಡಿ, ಅಂಜಲಿ ಮೆನನ್ ಮತ್ತು ನಮ್ಮ ಸಹಯೋಗ ಕೆ ಆರ್ ಜಿ ಸ್ಟುಡಿಯೋಸ್ ನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂದರೆ ಉತ್ಪ್ರೇಕ್ಷೆಯಲ್ಲ. “ಸಿನಿಮಾ”ಗೆ ಇರುವ‌ ಶಕ್ತಿಯನ್ನು ನಾವು ನಂಬುತ್ತೇವೆ. ಅದು ತೆರೆಯ ಮೇಲೆ ಯಾವ ರೀತಿಯ “ಜಾದುವನ್ನಾದರೂ” ಸೃಷ್ಟಿಸಬಲ್ಲದು. ಈ ನಿಟ್ಟಿನಲ್ಲಿ ನಮ್ಮ ಸಹಯೋಗ ಬಹಳ ಅರ್ಥಪೂರ್ಣವಾಗಲಿದೆ ಎಂದು ನಂಬಿದ್ದೇನೆ. ಈ ಕುರಿತು ನಮ್ಮ ಪಯಣ ಶುರು ಆಗಲು ಕಾರಣ ನನ್ನ ಸ್ನೇಹಿತ ಹಾಗೂ Entertainment Executive ವಿಜಯ್ ಸುಬ್ರಹ್ಮಣ್ಯಂ. ಚಿತ್ರದ ಕಥಾವಸ್ತುವಿಗೆ, ಅದರ ನಿರೂಪಣೆಗೆ ಇರುವ ಶಕ್ತಿಯನ್ನು ಕುರಿತು ಹಾಗೂ ಉನ್ನತ ಮಟ್ಟದ ನಿರ್ಮಾಣವು ಪ್ರೇಕ್ಷಕರ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂದೆಲ್ಲಾ ನಾವು ಚರ್ಚಿಸಿದ್ದೇವೆ. ನಮ್ಮಲ್ಲಿರುವ ಸಾಮರ್ಥ್ಯವನ್ನು ಆತ ಗಮನಿಸಿ,ನಮಗೆ ಮಾರ್ಗದರ್ಶಕನಾಗಿ ಹಾಗೂ ನಮ್ಮೊಡನೆ ಸಹ-ನಿರ್ಮಾಪಕನಾಗಿ ಕೈ ಜೋಡಿಸಿದಕ್ಕಾಗಿ ನಾನು ಆಭಾರಿಯಾಗಿರುತ್ತೇನೆ. “ತುಲ್ಸಿಯಾ” ಸಂಸ್ಥೆಯ ಸ್ಥಾಪಕರಾದ ಚೈತನ್ಯ ಹೆಗಡೆ ಅಂತಹ ಸಮಾನ ಮನಸ್ಕರ ಸಹಕಾರದಿಂದ ಅತ್ಯುನ್ನತ ಗುಣಮಟ್ಟದ ಚಿತ್ರಗಳನ್ನು ನೀಡುವ ಭರವಸೆ ನಮ್ಮ ಸಂಸ್ಥೆ ನೀಡಲಿದೆ.

ಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥೆಯ ಈ‌ ಸಹಯೋಗ ಕೇವಲ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸುವುದಷ್ಟೇ ಅಲ್ಲದೆ, ಕಥಾ ನಿರೂಪಣೆಯಲ್ಲಿ‌ ಹೊಸ ಆವಿಷ್ಕಾರಗಳನ್ನು ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತರಲಿದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ. ದಕ್ಷಿಣ ಭಾರತೀಯ ಸಿನಿಮಾದ ಭವಿಷ್ಯವನ್ನು ರೂಪಿಸಲು ಸಜ್ಜಾಗಿರುವ‌ ಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥೆಗೆ ಗುಣಮಟ್ಟದ ಕಥಾ ವಸ್ತು ಹಾಗೂ ನವೀನ ಕಥಾ ನಿರೂಪಣೆಗೆ ಅಂಜಲಿ ಮೆನನ್ ಜೊತೆಗಿನ ಸಹಯೋಗ ಬಲು ದೊಡ್ಡ ಉದಾಹರಣೆ ಮತ್ತು ಮಾದರಿಯಾಗಲಿದೆ ಎಂದು ನಂಬಿದ್ದೇನೆ.
“ತುಲ್ಸಿಯಾ” ದೇಶದ ಅತ್ಯುನ್ನತ ಬರಹಗಾರರನ್ನು, ನಿರ್ದೇಶಕರನ್ನು, ನಟರನ್ನು ಒಳಗೊಂಡಿರುವಂತಹ “content management” ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು ಪ್ರತಿನಿಧಿಸುವ ಅಂಜಲಿ ಮೆನನ್ ಅವರೊಂದಿಗೆ ಕೈ ಜೋಡಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

Categories
ಸಿನಿ ಸುದ್ದಿ

ಗುರು ದೇಶಪಾಂಡೆ ನಿರ್ಮಾಣದ ಹೊಸ ಸಿನಿಮಾಗೆ ಚಾಲನೆ: ಗಿರಿರಾಜ್ ನಿರ್ದೇಶನದ ಚಿತ್ರಕ್ಕೆ ಹಾಡುಗಳ ಧ್ವನಿಮುದ್ರಣ ಶುರು

ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ತಮ್ಮ ಜಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ “ಪ್ರೊಡಕ್ಷನ್ ನಂ 4” ಚಿತ್ರದ ಹಾಡುಗಳ ಧ್ವನಿಮುದ್ರಣ (ಸಾಂಗ್ ರೆಕಾರ್ಡಿಂಗ್) ಪೂಜೆ ನಾಗರಭಾವಿಯ ಲೂಪ್ ಸ್ಟುಡಿಯೋಸ್ ನಲ್ಲಿ ನೆರವೇರಿದೆ. “ಜಟ್ಟ”, “ಮೈತ್ರಿ” ಚಿತ್ರಗಳ ಖ್ಯಾತಿಯ ಬಿ.ಎಂ ಗಿರಿರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.‌ ಕನ್ನಡದ ಹೆಸರಾಂತ ನಿರ್ದೇಶಕ ಬಿ.ಜೆ.ಭರತ್ ಸಂಗೀತ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಹಿಂದೆ ಸಾಂಗ್ ರೆಕಾರ್ಡಿಂಗ್ ಪೂಜೆ ಎಂದರೆ ಒಂದು ಸಡಗರ ಎಂದು ಮಾತು ಆರಂಭಿಸಿದ ನಿರ್ದೇಶಕ ಗಿರಿರಾಜ್, ಈಗ ಕೆಲವು ವರ್ಷಗಳಿಂದ ಆ ಸಂಸ್ಕೃತಿ ಮರೆತು ಹೋಗಿದೆ. ಗುರು ದೇಶಪಾಂಡೆ ಮತ್ತೆ ಸಾಂಗ್ ರೆಕಾರ್ಡಿಂಗ್ ಪೂಜೆ ಮೂಲಕ ತಮ್ಮ ನೂತನ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಇಂದು ಒಳ್ಳೆಯ ದಿವಸ ಎಂದು ಪೂಜೆ ಆರಂಭಿಸಿದ್ದೇವೆ. ಈ ಸಿನಿಮಾ ಈ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿರುತ್ತದೆ. ಮರೆಯಾಗುತ್ತಿರುವ ಸಂಸ್ಕೃತಿಯ ಮತ್ತೆ ತರುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇವೆ. ಭರತ್ ಅವರ ಸಂಗೀತ ನಿರ್ದೇಶನದಲ್ಲಿ ಇಂದಿನಿಂದ ಸಾಂಗ್ ರೆಕಾರ್ಡಿಂಗ್ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದರು.

ಇದು ಜಿ ಸಿನಿಮಾಸ್ ಮೂಲಕ ನಿರ್ಮಾಣವಾಗುತ್ತಿರುವ ನಾಲ್ಕನೇಯ ಚಿತ್ರ. ನಮ್ಮ ಜಿ ಅಕಾಡೆಮಿ ಮೂಲಕ ಸಾಕಷ್ಟು ಮಕ್ಕಳಿಗೆ ನಟನಾ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಹತ್ತು ಬ್ಯಾಚ್ ಗಳು ಯಶಸ್ವಿಯಾಗಿ ಪೂರ್ಣವಾಗಿದೆ. ಮಕ್ಕಳಿಗೆ ಬರೀ ನಟನೆ ಕಲಿಸಿಕೊಟ್ಟು ಕಳುಹಿಸಿದರೆ ಸಾಲದು. ಅವರಿಗೆ ಸೂಕ್ತ ವೇದಿಕೆ ಕೂಡ ಕಲ್ಪಿಸಿಕೊಡಬೇಕು. ಅದರಲ್ಲೂ ವಿಶೇಷವಾಗಿ ಮಧ್ಯಮವರ್ಗದ ಮಕ್ಕಳಿಗೆ. ಆ ಸಲುವಾಗಿ ನಮ್ಮ ಈ ಚಿತ್ರದಲ್ಲಿ ನಮ್ಮ ಜಿ ಅಕಾಡೆಮಿಯ 15ಕ್ಕೂ ಅಧಿಕ ಮಕ್ಕಳು ನಟಿಸಲಿದ್ದಾರೆ. ಕನ್ನಡದ ಹೆಸರಾಂತ ನಟರು ಈ ಚಿತ್ರದ ನಾಯಕರಾಗಿ ಅಭಿನಯಿಸಲಿದ್ದಾರೆ.

ಈ ಕುರಿತು ಹೆಚ್ಚಿನ ವಿಷಯಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇವೆ. ಕನ್ನಡದಲ್ಲಿ ಕಮರ್ಷಿಯಲ್ ಹಾಗೂ ಪ್ರಶಸ್ತಿ ಚಿತ್ರಗಳು ಎಂಬ ಎರಡು ವಿಭಾಗಗಳಿದೆ. ಬೇರೆ ಕಡೆ ಆ ರೀತಿ ಇಲ್ಲ. ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳನ್ನು ಜನರು ನೋಡುತ್ತಾರೆ. ಆಗ ಅದು ಎರಡು ವಿಭಾಗಗಳನ್ನೊಳಗೊಂಡ ಒಂದೇ ಚಿತ್ರವಾಗುತ್ತದೆ. ನಮ್ಮ ಚಿತ್ರ ಕೂಡ ಅದೇ ರೀತಿ ಇರಲಿದೆ ಎಂದು ನಿರ್ಮಾಪಕ ಗುರು ದೇಶಪಾಂಡೆ ತಿಳಿಸಿದರು.

ಇಂದಿನಿಂದ ಹಾಡುಗಳ ಧ್ವನಿಮುದ್ರಣ ಆರಂಭವಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ ಎಂದರು ಸಂಗೀತ ನಿರ್ದೇಶಕ ಬಿ.ಜೆ.ಭರತ್. ಗೀತರಚನೆಕಾರ ಪುನೀತ್ ಆರ್ಯ ಹಾಗೂ ವಿತರಕ ವೆಂಕಟ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಇದು ಹಸಿದವರ ಕಥೆ! ಮಾರ್ಚ್ 1 ಕ್ಕೆ ಜುಗಲ್ ಬಂದಿ ಮೋಡಿ: ನೋಡುವ ಡಿಂಡಿಮ ಸಿನಿಮಾನ…

ಕಾಂತಾರ ಸಿನಿಮಾದಲ್ಲಿ ಕಮಲಕ್ಕ ಪಾತ್ರ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಮಾನಸಿ ಸುಧೀರ್ ಜುಗಲ್ ಬಂದಿ” ಸಿನಿಮಾ ಮೂಲಕ ಸಿನಿ ಪ್ರಿಯರನ್ನು ರಂಜಿಸಲು ಸಜ್ಜಾಗಿದ್ದಾರೆ. ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 1ರಂದು ಹಲವು ಕಥೆಗಳ ‘ಜುಗಲ್ ಬಂದಿ’ ತೆರೆಗೆ ಬರುತ್ತಿದೆ.

ನಾಲ್ಕು ಡಿಫರೆಂಟ್ ಪ್ಲಾಟ್ ಒಳಗೊಂಡ ಸಿನಿಮಾ ‘ಜುಗಲ್ ಬಂದಿ’.ಭಗವದ್ಗೀತೆ, ಕುರಾನ್, ಬೈಬಲ್ನಲ್ಲೂ ಬರ್ದಿಲ್ಲ ದುಡ್ಮಾಡದೆಂಗತ!
ಟ್ಯಾಗ್ ಲೈನ್ ಮೂಲಕ ಕುತೂಹಲ ಕ್ರಿಯೇಟ್ ಮಾಡಿರುವ ಈ ಚಿತ್ರಕ್ಕೆ ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನದ ಜೊತೆಗೆ ತಮ್ಮ ಮೊದಲ ಸಿನಿಮಾಗೆ ತಾವೇ ಬಂಡವಾಳ ಕೂಡಾ ಹೂಡಿರುವುದು ವಿಶೇಷ.

ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಚಿತ್ರದಲ್ಲಿ ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್ ಒಳಗೊಂಡ ತಾರಾಬಳಗವಿದೆ. ಪ್ರದ್ಯೋತ್ತನ್ ಸಂಗೀತ ನಿರ್ದೇಶನ, ಪ್ರಸಾದ್ ಹೆಚ್ ಎಂ ಸಂಕಲನ ಈ ಚಿತ್ರಕ್ಕಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ರಿಷಿಕಾ ಫಿಲ್ಮ್ಸ್ ರಾಜ್ಯಾದ್ಯಂತ ಸಿನಿಮಾ ವಿತರಣೆ ಜವಾಬ್ದಾರಿ ಹೊತ್ತಿದ್ದು, ಅವರದ್ದೇ ಪ್ರೆಸೆಂಟ್ಸ್ ಮೂಲಕ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಈ ನೆಲದ ಕಥೆ, ನೊಂದು ಬೆಂದವರ ವ್ಯಥೆ ಇದು: ಧೈರ್ಯಂ ಸರ್ವತ್ರ ಸಾಧನಂ ಫೆ.23ಕ್ಕೆ ರಿಲೀಸ್

ಕಾಂತರ – ಕಾಟೇರ ಚಿತ್ರಗಳ ಮೊದಲೇ ಚಿತ್ರೀಕರಣ ಮುಗಿಸಿದ್ದ ಧೈರ್ಯಂ ಸರ್ವತ್ರ ಸಾಧನಂ. ಕಾಂತಾರ ಚಿತ್ರದಲ್ಲಿ ಬಂದೂಕು ಹಂದಿ ಬೇಟೆ , ಬುಡಕಟ್ಟು ಜನಾಂಗ ಅಸ್ಪೃಶ್ಯತೆ ಎಂಬ ಕೆಲವೊಂದು ಅಂಶಗಳು ಗಮನ ಸೆಳೆದಿತ್ತು.
ಕಾಟೇರ ಕೂಡ ಇದೇ ಸಾಲಿನಲ್ಲಿ ಸಾಗಿದ ಚಿತ್ರ.

ಈಗ ಧೈರ್ಯಂ ಸರ್ವತ್ರ ಸಾಧನಂ ಚಿತ್ರದಲ್ಲೂ ಸಮಾಜದಲ್ಲಿ ನೊಂದವರ, ಬೆಂದವರ ಕಥೆ ಇದೆ. ಇಲ್ಲೂ ಬಂದೂಕು, ಹಂದಿ ಬೇಟೆ ಎಂಬ ಅಂಶಗಳಿವೆ.
ನಿರ್ದೇಶಕ ಎ. ಆರ್. ಸಾಯಿರಾಮ್ ಸಿನಿಮಾ ಬಗ್ಗೆ ಹೇಳುವುದಿಷ್ಟು.


2021 ಡಿಸೆಂಬರ್ 6 ರಂದು ಚಿತ್ರೀಕರಣ ಶುರು ಆಗಿ,
ಜನವರಿ 14ರಂದು ಚಿತ್ರೀಕರಣ ಮುಗಿಯಿತು.
ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲಾಗಿತ್ತು. ಇದೊಂದು ನೆಲದ ಕಥೆ. ನೊಂದವರ ಬದುಕು ಇಲ್ಲಿದೆ. ಆ ಕಾಲಘಟ್ಟದಲ್ಲಿನ ಅಂಶಗಳು ಇಲ್ಲಿವೆ ಎಂದರು.

ನಿರ್ಮಾಪಕರ ಆನಂದ್ ಬಾಬು ಮಾತನಾಡಿ, ಇದೊಂದು ಕಾಡುವ ಹಾಗು ನೋಡುವ ಚಿತ್ರ. ಇಲ್ಲಿ ಗ್ರಾಫಿಕ್ಸ್ ಹೆಚ್ಚಾಗಿದೆ.
4 ರೀತಿಯ ಹಂದಿ 2 ಮೊಲ ಹಾಗೂ ಖಳನಾಯಕನ ಮನೆಯನ್ನು ಸಿಜಿ ಮೂಲಕ ಮಾಡಿರುವುದು ವಿಶೇಷ.
ತುಂಬಾ ನೈಜವಾಗಿ ಕಾಣುವಂತೆ ನಿರ್ದೇಶಕರು ಸಿಜಿ ಕೆಲಸ ಮಾಡಿಸಿದ್ದಾರೆ.
ಪ್ರತಿಯೊಂದು ವಿಭಾಗದಲ್ಲಿ ನಿರ್ದೇಶಕರು ಸೂಕ್ಷ್ಮವಾಗಿ ಕೆಲಸ ಮಾಡಿದ್ದಾರೆ. ಗುಣಮಟ್ಟಕ್ಕಾಗಿ ಸಮಯವಾಗಿದೆ. ಫೆಬ್ರವರಿ 23ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ.

ಜನರಿಗೆ ತುಂಬಾ ಇಷ್ಟ ಆಗುವ ಸಿನಿಮಾ ಧೈರ್ಯಂ ಸರ್ವತ್ರ ಸಾಧನಂ, ಪ್ರತಿಯೊಬ್ಬರ ಮನೆಯಲ್ಲೂ ಈ ರೀತಿಯ ಕಥೆಗಳು ಇರುತ್ತವೆ ಪ್ರೇಕ್ಷಕರ ನಾಡಿ ಮಿಡಿತಕ್ಕೆ ನಿರ್ದೇಶಕರು ಸಿನಿಮಾ ಮಾಡಿದ್ದಾರೆ ಎಂಬುದು ನಿರ್ಮಾಪಕ ಆನಂದ್ ಬಾಬು ಮಾತು.

ಎ.ಪಿ ಪ್ರೊಡಕ್ಷನ್ಸ್‌ ಸಂಸ್ಥೆ ನಿರ್ಮಾಣದಲ್ಲಿ ಚಿತ್ರ ತಯಾರಾಗಿದೆ.
ಈಗಾಗಲೇ ಹೆಂಡವೇ ನಮ್ಮ ಮನೆಯ ದೇವರು ಹಾಡು
ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ಹೃದಯ ಶಿವ ಅವರ ಸಾಹಿತ್ಯವಿದು. ಸಮಾಜದಲ್ಲಿ ನಮ್ಮ ಸುತ್ತ ಮುತ್ತಲೇ ನಮಗೆ ಅರಿವಿಗೆ ಬಾರದ ರೀತಿ ನಮ್ಮ ಮುತ್ತಲು ಬೆಂಕಿ ಹಾಕೋ ಕ್ರೂರ ಮನಸ್ಥಿತಿಗಳ ಅನಾವರಣ ಮಾಡುವ ಹಾಡಿದು.

ಸದ್ಯ ಬೇಡಿಕೆ ಹೆಚ್ಚಾಗುತ್ತಿದೆ. ಅಂದಹಾಗೆ ಇದು ಎ.ಆರ್. ಸಾಯಿರಾಮ್ ಅವರ ಮೊದಲ ನಿರ್ದೇಶನದ ಚಿತ್ರ. ಎ.ಪಿ ಪ್ರೊಡಕ್ಷನ್ಸ್‌ ಸಂಸ್ಥೆಯ ಆನಂದ್ ಬಾಬು ನಿರ್ಮಾಣದ ನಾಲ್ಕನೆ ಚಿತ್ರ (ಕಮರೊಟ್ಟು ಚೆಕ್‌ ಪೋಸ್ಟ್. ಗುಬ್ಬಿಮರಿ.) ರವಿಕುಮಾರ್ ಸನಾ ಛಾಯಾಗ್ರಹಣವಿದೆ. ಜ್ಯೂಡ ಸ್ಯಾಂಡಿ ಸಂಗೀತ ಮಾಡಿದರೆ, ಶ್ರೀಕಾಂತ್ ಅವರ ಸಂಕಲನವಿದೆ.

Categories
ಸಿನಿ ಸುದ್ದಿ

ಗೂಢಾಚಾರಿ-2′ ಟೀಂ ಸೇರಿದ ಬಾಲಿವುಡ್ ಸ್ಟಾರ್; ಅಡಿವಿ ಶೇಷ್ ಜೊತೆ ಇಮ್ರಾನ್ ಹಶ್ಮಿ

ಟಾಲಿವುಡ್ನಲ್ಲಿ ನೂತನ ದಾಖಲೆ ಮಾಡಿದ ಸೂಪರ್ ಹಿಟ್ ಚಿತ್ರ ‘ಗೂಢಚಾರಿ’ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅಡಿವಿ ಶೇಷ್ ಅವರ ಅಭಿನಯದಲ್ಲಿ ಮೂಡಿಬಂದ ಆ್ಯಕ್ಷನ್-ಥ್ರಿಲ್ಲರ್ ಶೈಲಿಯ ಆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾಗಿ ಕಲೆಕ್ಷನ್ ಮಾಡಿತ್ತು. ಈಗ ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿರುವುದು ಕೂಡ ಗೊತ್ತಿದೆ. ‘ಗೂಢಚಾರಿ 2’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಸಖತ್ ಸದ್ದು ಮಾಡಿದೆ. ಇದೀಗ ಗೂಢಚಾರಿ ಸೀಕ್ವೆಲ್ ಗೆ ಬಾಲಿವುಡ್ ಸ್ಟಾರ್ ಎಂಟ್ರಿಯಾಗಿದ್ದಾರೆ.

ಗೂಢಚಾರಿ 2 ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಇಮ್ರಾನ್ ಹಶ್ಮಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಟೈಗರ್ 3 ಸಿನಿಮಾ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆ ಪಡೆದಿರುವ ಅವರೀಗ ಟಾಲಿವುಡ್ ನತ್ತ ಹೆಜ್ಜೆ ಇಟ್ಟಿದ್ದಾರೆ. ಗೂಢಚಾರಿ ಬಳಗ ಇಮ್ರಾನ್ ಫಸ್ಟ್ ಲುಕ್ ರಿಲೀಸ್ ಮಾಡಿ ಅವರನ್ನು ಸ್ವಾಗತಿಸಿದೆ. ಆದ್ರೆ ಯಾವ ಪಾತ್ರದಲ್ಲಿ ಇಮ್ರಾನ್ ನಟಿಸುತ್ತಿದ್ದಾರೆ ಎಂಬ ಕುತೂಹಲವನ್ನು ಹಾಗೇ ಉಳಿಸಿಕೊಂಡಿದೆ. ಇಮ್ರಾನ್ ಹಶ್ಮಿ ಎಂಟ್ರಿಗೆ ಇಡೀ ಚಿತ್ರತಂಡ ಖುಷಿಯಾಗಿದೆ. ‘ಗೂಢಚಾರಿ 2’ ಸಿನಿಮಾ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿದೆ. ಅಡಿವಿ ಶೇಷ್ ಅಭಿನಯಿಸಿದ್ದ ‘ಮೇಜರ್’ ಚಿತ್ರಕ್ಕೆ ಸಂಕಲನಕಾರ ಆಗಿದ್ದ ವಿನಯ್ ಕುಮಾರ್ ಸಿರಿಗಿನೀದಿ ಅವರು ‘ಗೂಢಚಾರಿ 2’ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.

‘ಗೂಢಚಾರಿ 2’ ಚಿತ್ರಕ್ಕೆ ಅಡಿವಿ ಶೇಷ್ ಅವರೇ ಕಥೆ ಬರೆದಿದ್ದಾರೆ. ‘ಕಾರ್ತೀಕೇಯ 2’, ‘ಮೇಜರ್’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಣ ಸಂಸ್ಥೆಗಳು ‘ಗೂಢಚಾರಿ 2’ ಚಿತ್ರಕ್ಕೆ ಬಂಡವಾಳ ಹೂಡುತ್ತಿವೆ. ‘ಪೀಪಲ್ ಮೀಡಿಯಾ ಫ್ಯಾಕ್ಟರಿ’, ‘

ಅಭಿಷೇಕ್ ಅಗರ್ವಾಲ್ ಆರ್ಟ್ಸ್’ ಹಾಗೂ ‘ಎ.ಕೆ. ಎಂಟರ್ಟೇನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್’ ಬ್ಯಾನರ್ ಮೂಲಕ ಟಿ.ಜಿ. ವಿಶ್ವಪ್ರಸಾದ್ ಹಾಗೂ ಅಭಿಷೇಕ್ ಅಗರ್ವಾಲ್ ಅವರು ಜೊತೆಯಾಗಿ ‘ಗೂಢಚಾರಿ 2’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಬನಿತಾ ಸಂಧು ಅಡಿವಿ ಶೇಷ್ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಭಾವತೀರ ಯಾನ ದಲ್ಲಿ ಸರಿ ತಪ್ಪುಗಳ ಅವಲೋಕನ

ಸಿನಿಮಾ ಪ್ರೇಮಿಗಳ ತಂಡವೊಂದು ಅತ್ಯಂತ ಶ್ರಧ್ದೆಯಿಂದ, ಪ್ರೀತಿಯಿಂದ ನಿರ್ಮಾಣ ಮಾಡಿದ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಆ ಸಿನಿಮಾದ ಹೆಸರೇ ಭಾವತೀರಯಾನ. ಇಂದಿನ ಯುವಕ, ಯುವತಿಯರ ಭಾವನೆ, ಪ್ರೀತಿಯ ಹಾಡು ಪಾಡು, ನೋವು ನಲಿವು, ಸುಖ ದುಖಗಳನ್ನು ತೆರೆದಿಡುವ ಪ್ರಯತ್ನವಾಗಿ ಈ ಸಿನಿಮಾ ಮೂಡಿಬಂದಿದೆ.

ಆರೋಹಾ ಫಿಲಂಸ್ ಮೂಲಕ ಮಯೂರ ಅಂಬೇಕಲ್ಲು ಹಾಗೂ ತೇಜಸ್ ಕಿರಣ್ ವರ್ಷದ ಹಿಂದೆ ಫಸ್ಟ್ ಲವ್ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದರು, ಮಯೂರ ಅಂಬೆಕಲ್ಲು ನಿರ್ದೇಶನದ ಆ ಕಿರುಚಿತ್ರ ಮಿಲಿಯನ್‌ಗೂ ಹೆಚ್ಚು ವೀಕ್ಷಣೆಯಾಗಿ ನೋಡುಗರೆಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು, ಅದರ ಎರಡನೇಅಬಾಗವನ್ನೂ‌ಮಾಡಿದಾಗ ಇದನ್ನು ಸಿನಿಮಾ ಮಾಡಿ ಎಂದು ಹಿರಿಯರೆಲ್ಲರೂ ನೀಡಿದ ಸಲಹೆಯಿಂದ ಪ್ರೇರಿತರಾದ ಈ ತಂಡ ಇದೀಗ ಎರಡು ಭಾಗದ ಈ ಶಾರ್ಟ್ ಫಿಲಂ ಅನ್ನು ಸಿನಿಮಾ ರೂಪಕ್ಕೆ ತಂದಿದೆ,

ಆ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ಒಬ್ಬ ಹುಡುಗನ ಪ್ರೀತಿಯ ಪಯಣ ಈ ಚಿತ್ರದಲ್ಲಿದ್ದು, ತೇಜಸ್ ಕಿರಣ್ ಹಾಗೂ ಆರೋಹಿ ನೈನಾ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇವರ ಸಂಧ್ಯಾಕಾಲದ ಪಾತ್ರಗಳನ್ನು ಹಿರಿಯ ಕಲಾವಿದರಾದ ರಮೇಶ್ ಭಟ್ ಹಾಗೂ ವಿದ್ಯಾಮೂರ್ತಿ ನಿರ್ವಹಿಸಿದ್ದಾರೆ. ಅಂಕಣಕಾರ ಎ.ಆರ್. ಮಣಿಕಾಂತ್ ಅವರ ಜನಪ್ರಿಯ ಲೇಖನಗಳ ಗುಚ್ಚ ಭಾವತೀರಯಾನ, ಅದನ್ನೇ ತಮ್ಮ ಚಿತ್ರದ ಶೀರ್ಷಿಕೆಯಾಗಿ ಮಯೂರ ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ಭಾಮ.ಹರೀಶ್, ನಿತ್ಯಾನಂದ ಪ್ರಭು, ಕರಿಸುಬ್ಬು, ಶಿಲ್ಪಾ ಶ್ರೀನಿವಾಸ್, ಲಯನ್ ವೆಂಕಟೇಶ್ ಅಲ್ಲದೆ ಪತ್ರಕರ್ತ ಎ.ಆರ್. ಮಣಿಕಾಂತ್ ಕೂಡ ಹಾಜರಿದ್ದು ಟೈಟಲ್ ಲಾಂಚ್ ಮಾಡಿದರು.

ಹಿರಿಯ ನಟ ರಮೇಶ್ ಭಟ್ ಮಾತನಾಡಿ, ನನ್ನ 50 ವರ್ಷಗಳ ಜರ್ನಿಯಲ್ಲಿ ಮನೆಗೆ ಸ್ವೀಟ್ಸ್, ಬೊಕ್ಕೆ ತಂದು ಪಾತ್ರ ಕೊಟ್ಟವರು ತುಂಬಾ ವಿರಳ. ಈ ಹುಡುಗರು ನನಗೆ ಅಷ್ಟು ಗೌರವ ಕೊಟ್ಟರು. ಈ ಇಬ್ಬರು ಹುಡುಗರು ತುಂಬಾ ಕಾನ್ಫಿಡೆಂಟಾಗಿ ಸಿನಿಮಾ ಮಾಡಿದ್ದಾರೆ, ಇಡೀ ತಂಡ ಪ್ರೀತಿಯಿಂದ ಹಾನೆಸ್ಟಾಗಿ ಕೆಲಸ ಮಾಡಿದೆ. ಮನುಷ್ಯನಿಗೆ ಪ್ರಬುದ್ದತೆ ಬಂದಮೇಲೆ ತಾನು ಮಾಡಿದ ಸರಿ ತಪ್ಪುಗಳನ್ನು ಅವಲೋಕಿಸುವ ಸಮಯ ಬಂದಿರುತ್ತದೆ, ಮನದ ತೊಳಲಾಟಗಳನ್ನು ವ್ಯಕ್ತಪಡಿಸುವ ನನ್ನ ಈ ಪಾತ್ರ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತೆ ಎಂದು ಹೇಳಿದರು.

ನಂತರ ಮಾತನಾಡಿದ ವಿದ್ಯಾಮೂರ್ತಿ ಇದು ಭಾವನೆಗಳೇ ತುಂಬಿದ ಯಾನ ಎನ್ನಬಹದು. ರಮೇಶ್ ಭಟ್ ಅವರ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದರು.

ನಾಯಕನಟ ತೇಜಸ್ ಮಾತನಾಡುತ್ತ, ಒಬ್ಬ ಯುವಕನ ಲೈಫ್ ಜರ್ನಿ ಈ ಚಿತ್ರದಲ್ಲಿದೆ. ವಿದ್ಯಾಮೂರ್ತಿ ಅವರ ಪ್ರಿ ಕ್ಲೈಮ್ಯಾಕ್ಸ್ ಸೀನ್ ಎಲ್ಲರಿಗೂ ತುಂಬಾ ಇಷ್ಟವಾಗುತ್ತೆ, ವಿಶಾಖ ನಾಗಲಾಪುರ ತುಂಬಾ ಚೆನ್ನಾಗಿ ಡೈಲಾಗ್ ಬರೆದಿದ್ದಾರೆ. ಎರಡೂ ಭಾಗದ ಶಾರ್ಟ್ ಫಿಲಂ ೪೦ ನಿಮಿಷ ಇತ್ತು, ನಂತರ ಒಂದಷ್ಟು ಪಾತ್ರಗಳನ್ನು ಸೇರಿಸಿದಾಗ ಒಂದು ಗಂಟೆಯ ಕಥೆ ಹೆಚ್ಚಾಯಿತು. ನಮ್ಮ ಸಿನಿಮಾ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದರು.

ನಿರ್ದೇಶನದ ಜೊತೆ ಸಂಗೀತ ಸಂಯೋಜನೆಯನ್ನೂ ಮಾಡಿರುವ ಮಯೂರ ಮಾತನಾಡುತ್ತ ಈ ಕಾನ್ಸೆಪ್ಟ್ ಶುರುವಾಗಲು ಕಾರಣ ಕೃಷ್ಣ, ಅವರು ಕೊಟ್ಟ ಸಣ್ಣ ಲೈನ್ ಈಗ ಸಿನಿಮಾವಾಗಿದೆ. ನಮ್ಮ ತಂದೆ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ ಬಿಕೆ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಎಂದರು. ನಂತರ ನಾಯಕಿ ಆರೋಹಿ ನೈನಾ ಮಾತನಾಡಿ ನಮ್ಮ ಪುಟ್ಟ ಹೆಜ್ಜೆಗೆ ನಿಮ್ಮ ಸಹಕಾರ ಬೇಕು. ಆರಂಭದಲ್ಲಿ ವೆಬ್ ಸೀರೀಸ್ ಮಾಡಬೇಕು ಎಂದುಕೊಂಡಿದ್ದೆವು, ನಂತರ ಶಾರ್ಟ್ ಫಿಲಂ ಈಗ ಚಲನಚಿತ್ರವಾಗಿದೆ ಎಂದರು.

Categories
ಸಿನಿ ಸುದ್ದಿ

ಜೆಸಿ ಯೂನಿರ್ವಸಿಟಿ ಇದು ಡಾಲಿ ಪಿಕ್ಚರ್ಸ್ ಚಿತ್ರ: ಪ್ರಖ್ಯಾತ್ ಹೀರೋ

ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ನಿಂದ 5ನೇ ಸಿನಿಮಾ ಸೆಟ್ಟೇರಿಸಿದೆ. ಸೂಪರ್ ಸಕ್ಸಸ್ ನೀಡಿರುವ ಡಾಲಿ ಪಿಕ್ಚರ್ಸ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ.

ಈ ಬಾರಿ ಡಾಲಿ ಪಿಕ್ಚರ್ಸ್ ನಿಂದ ‘ನಡುವೆ ಅಂತರವಿರಲಿ’ ಖ್ಯಾತಿಯ ನಟ ಪ್ರಖ್ಯಾತ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಸಿನಿಮಾಗೆ ‘ಜೆಸಿ ಎಂದು ಟೈಟಲ್ ಇಡಲಾಗಿದೆ. ಜೆಸಿ ಎಂದರೆ ಜುಡಿಸಿಯಲ್ ಕಸ್ಟಡಿ. ಜೈಲಿಂದ ಹೊರ ಬಂದ ಯುವಕನ ಕಥೆ ಇದಾಗಿದೆ.

ಬುಧವಾರ ಜೆಸಿ ಸಿನಿಮಾದ ಮುಹೂರ್ತ ನೆರವೇರಿತು. ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಮಾಡುವ ಮೂಲಕ ಜೆಸಿ ಚಿತ್ರಕ್ಕೆ ಚಾಲನೆ ನೀಡಲಾಯಿತು.

ಮುಹೂರ್ತದ ಸಮಯದಲ್ಲಿ ಇಡೀ ಸಿನಿಮಾತಂಡ ಹಾಜರಿತ್ತು. ಡಾಲಿ ಧನಂಜಯ ತಮ್ಮದೇ ನಿರ್ಮಾಣದ 5ನೇ ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿ ತಂಡಕ್ಕೆ ಶುಭಹಾರೈಸಿದರು.

ಜೆಸಿ ಫಸ್ಟ್ ಲುಕ್ ನಲ್ಲಿ ಬೆಂಗಳೂರು ಕಾರಾಗೃಹ, ಜೈಲು ಕಂಬಿಗಳನ್ನು ನೋಡಬಹುದು. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಸಿನಿಮಾತಂಡ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಬಿಟ್ಟುಕೊಡಲಿದ್ದಾರೆ.

ಇನ್ನು 2018ರಲ್ಲಿ ರಿಲೀಸ್ ಆಗಿದ್ದ ನಡುವೆ ಅಂತವಿರಲಿ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಪ್ರಖ್ಯಾತ್ ನಟನೆಯ 2ನೇ ಸಿನಿಮಾ ಇದಾಗಿದೆ. ಸುಮಾರು 5 ವರ್ಷಗಳ ಬಳಿಕ ಪ್ರಖ್ಯಾತ್ ಹೀರೋ ಆಗಿ ಮತ್ತೆ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

ಅಂದಹಾಗೆ ‘ಜೆಸಿ’ ಸಿನಿಮಾಗೆ ಚೇತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ಚೇತನ್ ಜೈರಾಮ್ ಅವರಿಗೂ ಇದು ಮೊದಲ ಸಿನಿಮಾ. ಪಕ್ಕಾ ಮಾಸ್ ಸಿನಿಮಾ ಇದಾಗಿದ್ದು ಚಿತ್ರಕ್ಕೆ ಮಾಸ್ತಿ ಅವರ ಖಡಕ್ ಡೈಲಾಗ್ ಇರಲಿದೆ. ಕಾರ್ತಿಕ್ ಅವರ ಛಾಯಾಗ್ರಾಹಣ, ರೋಹಿತ್ ಸೋವರ್ ಅವರ ಸಂಗೀತ ಜೆಸಿ ಸಿನಿಮಾಗೆ ಇರಲಿದೆ. ಸದ್ಯದಲ್ಲೇ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

Categories
ಸಿನಿ ಸುದ್ದಿ

ಮೈನಾ ಎಂಬ ಜವಾಬ್ದಾರಿ ಮಗಳು! ಉದಯ ಟಿವಿಯಲ್ಲಿ ಫೆ.19ರಿಂದ ಮೈನಾ ಪ್ರಸಾರ

ಟೆಲಿವಿಷನ್ ಲೋಕದಲ್ಲಿ ತನ್ನದೆ ಸಾಮರ್ಥ್ಯವನ್ನು ಕಾಪಾಡಿಕೊಂಡು ಬರುತ್ತಿರುವ ’ಉದಯ ವಾಹಿನಿ’ಯು ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಹಲವಾರು ಉತ್ತಮ ಧಾರವಾಹಿಗಳನ್ನು ವೀಕ್ಷಕರಿಗೆ ನೀಡುತ್ತಾ ಬಂದಿದೆ. ಆ ಸಾಲಿಗೆ ಈಗ ’ಮೈನಾ’ ಎಂಬ ಹೊಸ ಧಾರಾವಾಹಿ ಸೇರ್ಪಡೆಯಾಗಿದೆ.

ಈ ಧಾರಾವಾಹಿ ಬಗ್ಗೆ ಹೇಳುವುದಾದರೆ, ಮೈಲಾರಕೋಟೆ ಮೈನಾ ಆ ಮನೆಗೆ ಕಿರಿಮಗಳು. ಊರಲ್ಲಿ ಅಲೆಮಾರಿ. ಪರರಿಗೆ ಉಪಕಾರಿ. ಚಿಕ್ಕ ಪೆಟ್ಟಿಗೆ ಅಂಗಡಿ ನಡೆಸುತ್ತಿರುವ ನೀತಿವಂತ ಅಪ್ಪ ಮುತ್ತಣ್ಣ. ಅವರಿವರ ಹೊಲದಲ್ಲಿ ಕೂಲಿ ಮಾಡಿ ಸಂಸಾರದ ನೊಗಕ್ಕೆ ಹೆಗಲು ಕೊಟ್ಟಿರುವ ಅಮ್ಮ.

ಸೀತೆಯಂಥ ಅಕ್ಕ ರಾಧೆ. ಕಾಲೇಜಿಗೆ ಹೋಗುತ್ತಿರುವ ಅಣ್ಣ. ಈಕೆಯ ಪುಟ್ಟಗೂಡಲ್ಲಿ ದುಡ್ಡಿಗೆ ಕೊರತೆ. ಪ್ರೀತಿ ವಾತ್ಸಲ್ಯಕ್ಕಲ್ಲ. ಅಕ್ಕನಿಗೆ ವಯಸ್ಸು ಮೀರುತ್ತಿದ್ದು, ಮದ್ವೆ ಸಂಬಂಧ ಕೂಡಿ ಬರುತ್ತಿಲ್ಲ.

ಒಂದೊಂದು ಸಲವು ನಾನಾ ಕಾರಣಗಳಿಂದ ಮದುವೆ ಮುರಿದು ಹೋಗುತ್ತಿರುತ್ತದೆ. ಕೆಲವೊಂದು ಸಂಬಂಧ ಮುರಿಯಲು ಮೈನಾ ನೆಪವಾಗುತ್ತಾಳೆ. ಮುಂದೆ ಅಣ್ಣ ಕೈ ಕೊಟ್ಟಾಗ, ತಂಗಿಯು ಅಕ್ಕನಿಗೆ ಮದುವೆ ಮಾಡಿಸಲು ಜವಬ್ದಾರಿ ಹೊತ್ತುಕೊಂಡು ಪಟ್ಟಣಕ್ಕೆ ಬರುತ್ತಾಳೆ. ಅಲ್ಲಿಂದ ಆಕೆಯ ಬದುಕು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಅದೇ ಧಾರಾವಾಹಿಯ ವಿಶೇಷ.

ಮೈನಾ ಪಾತ್ರದಲ್ಲಿ ವಿಜಯಲಕ್ಷೀ ನಟಿಸುತ್ತಿದ್ದಾರೆ. ತಾರಾಗಣದಲ್ಲಿ ನಾಗಾಭರಣ, ಅಪೂರ್ವ, ಅಂಜಲಿ, ಮಾನಸಿ ಜೋಶಿ, ಸಚಿನ್, ಸಿದ್ದಾರ್ಥ್, ಪ್ರಭಂಜನ, ಸಾಗರ್, ಹರ್ಷಾರ್ಜುನ್, ಯಶಸ್ವಿನಿ, ಆಶಾ, ಅನುಷಾ, ಕುಮಾರಿ ತಿಶ್ಯ, ಮಾಸ್ಟರ್ ರಣವೀರ್ ಮುಂತಾದವರ ಅಭಿನಯವಿದೆ. ಅಪರೂಪದ ವಿಶಿಷ್ಟ ಪಾತ್ರಕ್ಕೆ ಹಿರಿಯ ನಟಿ ಭವ್ಯ ಕಾಣಿಸಿಕೊಳ್ಳುತ್ತಿದ್ದಾರೆ.

ಸಂತೋಷ್‌ಗೌಡ ಹಾಸನ ನಿರ್ದೇಶನ ಮಾಡುತ್ತಿದ್ದು, ಆನಂದ್ ಆಡಿಯೋ ಕಂಪನಿಯ ಸಹಸಂಸ್ಥೆ ’ಕೋಮಲ್ ಎಂಟರ್ ಪ್ರೈಸಸ್’ ಬ್ಯಾನರ್ ಅಡಿ ಧಾರವಾಹಿಯು ನಿರ್ಮಾಣವಾಗುತ್ತಿದೆ. ಕೆ.ಕಲ್ಯಾಣ್ ಸಾಹಿತ್ಯದ ಗೀತೆಗೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜಿಸಿದ್ದಾರೆ.

ಛಾಯಾಗ್ರಹಣ ಜಗದೀಶ್‌ವಾಲಿ ಹಾಗೂ ದಯಾಕರ್, ಸಂಕಲನ ಪ್ರಕಾಶ್‌ಕಾರಿಂಜ ಅವರದಾಗಿದೆ. ಫೆಬ್ರವರಿ 19, ಸೋಮವಾರದಿಂದ ಭಾನುವಾರದವರೆಗೆ ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ’ಮೈನಾ’ ಪ್ರಸಾರವಾಗಲಿದೆ.

error: Content is protected !!