Categories
ಸಿನಿ ಸುದ್ದಿ

ಜಗತ್ತಿನೆಲ್ಲೆಡೆ ವಿಜಯಾನಂದ! 1200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್…

ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ತಯಾರಾಗಿರುವ ‘ವಿಜಯಾನಂದ’ ಚಿತ್ರವು ಡಿಸೆಂಬರ್ 9ರಂದು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಜಗತ್ತಿನಾದ್ಯಂತ 1200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.


1976ರಲ್ಲಿ ಒಂದು ಟ್ರಕ್ನಿಂದ ಪ್ರಾರಂಭವಾಗಿ ಇಂದು ಭಾರತದ ಅತೀ ದೊಡ್ಡ ಲಾಜಿಸ್ಟಿಕ್ಸ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಆರ್ಲ್ ಸಂಸ್ಥೆಯ ಮಾಲೀಕರಾಗಿರುವ ವಿಜಯ ಸಂಕೇಶ್ವರ ಅವರ ಸಾಹಸಮಯ ಮತ್ತು ರೋಮಾಂಚನಕಾರಿ ಕಥೆಯನ್ನು ಸಾರುವ ಈ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಮತ್ತು ಅವರ ಮಗ ಡಾ. ಆನಂದ ಸಂಕೇಶ್ವರ ಅವರು ನಡೆದು ಬಂದ ಹಾದಿಯ ಕಥೆ ಇದೆ.


ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಇತ್ತೀಚೆಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಜಯ ಸಂಕೇಶ್ವರ ಅವರ ಜೀವನವನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಪಠ್ಯವನ್ನಾಗಿ ಅಳವಡಿಸಬೇಕು ಎಂದು ಹೇಳಿದ್ದರು. ಅವರೊಬ್ಬ ನಿಜವಾದ ಕಾಯಕಪುರುಷ ಎಂದು ಡಾ. ವಿಜಯ ಸಂಕೇಶ್ವರ ಅವರನ್ನು ಬಣ್ಣಿಸಿದ್ದರು. ಅಂತಹ ಕಾಯಕಪುರುಷನ ಜೀವನ ತೆರೆಯ ಮೇಲೆ ಬರುವುದಕ್ಕೆ ತಯಾರಾಗಿದ್ದು, ನಾಳೆಯಿಂದ ಪ್ರೇಕ್ಷಕರು ಜಗತ್ತಿನಾದ್ಯಂತ ಚಿತ್ರವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಈಗಾಗಲೇ ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲ ಭಾಷೆಗಳಲ್ಲೂ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಈ ಹಿಂದೆ ‘ಟ್ರಂಕ್’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ರಿಷಿಕಾ ಶರ್ಮ, ‘ವಿಜಯಾನಂದ’ ಚಿತ್ರಕ್ಕೆ ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

ಆ ಚಿತ್ರದಲ್ಲಿ ನಾಯಕನಾಗಿದ್ದ ನಿಹಾಲ್ ರಜಪೂತ್, ಈ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಅಭಿನಯಿಸಿದ್ದು, ಮೂರು ವಯೋಮಾನ ಮತ್ತು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಸಿರಿ ಪ್ರಹ್ಲಾದ್, ಅರ್ಚನಾ ಕೊಟ್ಟಿಗೆ, ಪ್ರಕಾಶ್ ಬೆಳವಾಡಿ, ಭರತ್ ಬೋಪಣ್ಣ, ಶೈನ್ ಶೆಟ್ಟಿ, ದಯಾಳ್ ಪದ್ಮನಾಭನ್, ರಮೇಶ್ ಭಟ್ ಮುಂತಾದ ಪ್ರತಿಭಾವಂತ ಕಲಾವಿದರು ವಿಜಯಾನಂದ ಚಿತ್ರದ ಭಾಗವಾಗಿದ್ದಾರೆ.


ವಿಆರ್ಎಲ್ ಪ್ರೊಡಕ್ಷನ್ಸ್ನಡಿ ಡಾ. ಆನಂದ ಸಂಕೇಶ್ವರ ನಿರ್ಮಿಸಿರುವ ‘ವಿಜಯಾನಂದ’ ಚಿತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ ಸಂಗೀತ ಸಂಯೋಜಿಸಿದ್ದು, ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ಪದವಿಪೂರ್ವ ಟೀಸರ್ ರಿಲೀಸ್ ಮಾಡಿದ ಜಗ್ಗೇಶ್: ಡಿಸೆಂಬರ್ 30ಕ್ಕೆ ಸಿನಿಮಾ ಬಿಡುಗಡೆ…

ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ, ಹರಿಪ್ರಸಾದ್ ಜಯಣ್ಣ ನಿರ್ದೇಶನದ “ಪದವಿಪೂರ್ವ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನವರಸ ನಾಯಕ ಜಗ್ಗೇಶ್ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ನಿರ್ದೇಶಕ ಹರಿಪ್ರಸಾದ್ ನನಗೆ “ವಾಸ್ತು ಪ್ರಕಾರ” ಚಿತ್ರದ ಸಮಯದಿಂದಲೂ ಪರಿಚಯ. ಸೌಮ್ಯ ಸ್ವಭಾವದ ಆತ ಮಹಾನ್ ಬುದ್ದಿವಂತ, ವಿದ್ಯಾವಂತ. ಯೋಗರಾಜ್ ಭಟ್ ಅವರ ಗರಡಿಯಲ್ಲಿ ಬಂದಿರುವ ಈತ ಚಿತ್ರವನ್ನು ಚೆನ್ನಾಗಿ ಮಾಡಿರುತ್ತಾರೆಂಬ ನಂಬಿಕೆ ಇದೆ. ಟೀಸರ್ ಚೆನ್ನಾಗಿದೆ. ಹದಿನಾರರಿಂದ ಹದಿನೆಂಟು ವಯಸ್ಸಿನವರ ಕುರಿತಾದ ಸಿನಿಮಾಗಳು ಬರುವುದು ಬಹಳ ಕಡಿಮೆ. ಈ ಚಿತ್ರ ಆ ವಯಸ್ಸಿನವರಿಗೆ ಸಂಭಂದಿಸಿದ್ದು. ನಾಯಕ ಪೃಥ್ವಿ ಶಾಮನೂರು ಬಹಳ ಲವಲವಿಕೆಯಿಂದ ನಟಿಸಿದ್ದಾನೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಜಗ್ಗೇಶ್ ಹಾರೈಸಿದರು.

ಸುಮಾರು ಹತ್ತು ವರ್ಷದ ಹಿಂದೆ ಹರಿಪ್ರಸಾದ್ ನನ್ನ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಶುರು ಮಾಡಿದರು. ನಂತರ “ಪಂಚತಂತ್ರ” ಚಿತ್ರದ ನಿರ್ಮಾಪಕರಾದರು. ಈಗ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಹರಿ ತುಂಬಾ ಬುದ್ದಿವಂತ. ನಿರ್ದೇಶನದ ಬಗ್ಗೆ ವಿದೇಶದಲ್ಲಿ ಕಲಿತು ಬಂದಿರುವಾತ. ಹರಿ ಈ ಚಿತ್ರವನ್ನು ಎಲ್ಲರಿಗೂ ಹಿಡಿಸುವ ಹಾಗೆ ಮಾಡಿರುತ್ತಾರೆಂಬ ಭರವಸೆಯಿದೆ. ಈ ಚಿತ್ರ ಇನ್ನೂ ಬಿಡುಗಡೆಯೇ ಆಗಿಲ್ಲ ಆಗಲೇ ನಾಯಕ ಪೃಥ್ವಿ ಶಾಮನೂರು, ನನ್ನ ನಿರ್ದೇಶನದ “ಗರಡಿ” ಚಿತ್ರದಲ್ಲೂ ಅಭಿನಯಿಸಿದ್ದಾನೆ. ಚಿತ್ರದಲ್ಲಿ ನಟಿಸಿರುವ ಅಂಜಲಿ, ಯಶಾ ಶಿವಕುಮಾರ್ ಎಲ್ಲರ ಅಭಿನಯ ಚೆನ್ನಾಗಿದೆ. ಎಲ್ಲರಿಗೂ ಶುಭವಾಗಲಿ ಎಂದರು ಚಿತ್ರದ ನಿರ್ಮಾಪಕರಲೊಬ್ಬರಾದ ಯೋಗರಾಜ್ ಭಟ್.

ಇದು ಮೊಬೈಲ್‌ ಬರುವುದಕ್ಕೂ ಪೂರ್ವದಲ್ಲಿ ಅಂದರೆ 96-97 ನೇ ಇಸವಿಯಲ್ಲಿ ನಡೆಯುವ ಕಥೆ. ಆಗ ಮೈದಾನಗಳು ಜಾಸ್ತಿ. ಆಟಗಾರರು ಕಡಿಮೆ. ಈಗ ಆಟಗಾರರು ಜಾಸ್ತಿ . ಮೈದಾನಗಳು ಕಡಿಮೆ. ಆ ಕಾಲಘಟ್ಟದಲ್ಲಿ ನಾನು ಕಂಡ ಕೆಲವು ಘಟನೆಗಳನ್ನಾಧರಿಸಿ “ಪದವಿಪೂರ್ವ” ಚಿತ್ರ ಮಾಡಿದ್ದೇನೆ. ಡಿಸೆಂಬರ್ 30ರಂದು ತೆರೆಗೆ ಬರುತ್ತಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಜಗ್ಗೇಶ್ ಸರ್ ಗೆ, ನಿರ್ಮಾಪಕರಾದ ಯೋಗರಾಜ್ ಭಟ್, ರವಿ ಶಾಮನೂರು ಅವರಿಗೆ ಹಾಗೂ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಹರಿಪ್ರಸಾದ್ ಜಯಣ್ಣ.

ನಿರ್ಮಾಪಕ ರವಿ ಶಾಮನೂರು, ನಾಯಕ ಪೃಥ್ವಿ ಶಾಮನೂರು, ನಾಯಕಿ ಅಂಜಲಿ ಅನೀಶ್, ಮುಖ್ಯ ಪಾತ್ರಧಾರಿ ಯಶಾ ಶಿವಕುಮಾರ್, ನಟ ನಟರಾಜ್, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಮುಂತಾದವರು “ಪದವಿಪೂರ್ವ” ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

Categories
ಸಿನಿ ಸುದ್ದಿ

ತನುಜಾಗೆ ಸಚಿವ ಸುಧಾಕರ್ ಸಾಥ್: ಟ್ರೇಲರ್ ರಿಲೀಸ್…

ಇಡೀ ದೇಶವೇ ಕೊರೋನ ಹಾವಳಿಯಿಂದ ತತ್ತರಿಸಿ ಹೋಗಿದ್ದ
ಸಮಯ. ಅಂತಹ ಸಮಯದಲ್ಲಿ ಶಿವಮೊಗ್ಗದ ಕುಗ್ರಾಮದಿಂದ ಬೆಂಗಳೂರಿಗೆ ಬಂದು ತನುಜಾ ನೀಟ್ ಪರೀಕ್ಷೆ ಬರೆಯುತ್ತಾರೆ. ಆಕೆ ಪರೀಕ್ಷೆ ಬರೆಯಲು ಮುಖ್ಯ ಕಾರಣ ಆಗಿನ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್, ಪತ್ರಕರ್ತರಾದ ವಿಶ್ವೇಶ್ವರ್ ಭಟ್ ರವರು ಹಾಗೂ ಪ್ರದೀಪ್ ಈಶ್ವರ್. ಇವರೆಲ್ಲರ ಸಹಾಯದಿಂದ ತನುಜಾ ನೀಟ್ ಪರೀಕ್ಷೆ ಬರೆದು, ಇಂದು ಬೆಳಗಾವಿಯಲ್ಲಿ ಎರಡನೇ ವರ್ಷದ ಎಂ.ಬಿ.ಬಿ.ಎಸ್ ಅಭ್ಯಾಸ ಮಾಡುತ್ತಿದ್ದಾರೆ.

ಈ ವಿಷಯವನ್ನಿಟ್ಟುಕೊಂಡು ಹರೀಶ್ ಎಂ ಡಿ ಹಳ್ಳಿ ಚಿತ್ರ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ವೈದ್ಯಕೀಯ ಸಚಿವರಾದ ಸುಧಾಕರ್ “ತನುಜಾ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಪತ್ರಕರ್ತರಾದ ವಿಶ್ವೇಶ್ವರ ಭಟ್ ಇದ್ದರು.

ನಾನು ಸಮಾನ್ಯವಾಗಿ ಎಲ್ಲರ ಟ್ವೇಟ್ ಫಾಲೋ ಮಾಡುತ್ತಿರುತ್ತೇನೆ. ನನ್ನ ಆತ್ಮೀಯ ಸ್ನೇಹಿತರಾದ ವಿಶ್ವೇಶ್ವರ ಭಟ್ ಅವರು ತನುಜಾ ನೀಟ್ ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ಟ್ವೇಟ್ ಮಾಡಿದ್ದನ್ನು ಗಮನಿಸಿ, ಆ ಹುಡುಗಿ ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ದೆಹಲಿಯ ನೀಟ್ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಈ ವಿಷಯದಲ್ಲಿ ನಮ್ಮ ನಾಯಕರೂ ಹಾಗೂ ಆಗ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರ ಸಹಕಾರವಂತೂ ಅಪಾರ. ಆಮೇಲೆ ವಿಶ್ವೇಶ್ವರ ಭಟ್ ಅವರು ನಿರ್ದೇಶಕ ಹರೀಶ್ ಅವರನ್ನು ಪರಿಚಯ ಮಾಡಿಸಿ, ತನುಜಾ ಕುರಿತ ಸಿನಿಮಾ ಮಾಡುತ್ತಿದ್ದಾರೆ‌ ಎಂದರು.

ಹರೀಶ್ ಅವರು ನೀವು ಸಹ ಸಚಿವರಾಗಿಯೇ ಇದರಲ್ಲಿ ಅಭಿನಯಿಸಬೇಕು ಎಂದರು. ಡಾಕ್ಟರ್ ಆಗಿರುವ ನನ್ನನ್ನು ಆಕ್ಟರ್ ಮಾಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆ ತನುಜಾ ಅಂದುಕೊಂಡಿದ್ದನ್ನು ಸಾಧಿಸಿ ವೈದ್ಯೆ ಆಗುತ್ತಿದ್ದಾಳೆ. ಈ ಸಿನಿಮಾ “ತನುಜಾ” ಕೂಡ ಯಶಸ್ವಿಯಾಗಲಿ ಎಂದು ಸಚಿವ ಸುಧಾಕರ್ ಹಾರೈಸಿದರು.

ನನ್ನ ಪರಿಚಯದವರೊಬ್ಬರಿಂದ ಕೋವಿಡ್ ಸಮಯದಲ್ಲಿ ತನುಜಾ ಪರೀಕ್ಷೆ ‌ಬರೆಯಲು ಮುಂದಾಗಿರುವ ವಿಷಯ ತಿಳಿಯಿತು. ತಕ್ಷಣ ನಾನು ಈ ವಿಷಯದ ಕುರಿತು ಟ್ವೇಟ್ ಮಾಡಿದೆ. ತನುಜಾ ತಾಯಿ ಸಹ ನನಗೆ ಫೋನ್ ಮಾಡಿ ಮಗಳು ಪರೀಕ್ಷೆ ಬರೆಯಲು ಸಹಾಯ ಮಾಡುವಂತೆ ಕೇಳಿಕೊಂಡರು. ನನ್ನ ಟ್ವೇಟ್ ಗೆ ಕೊರೋನ ಅಂತಹ ಕಷ್ಟ ಸಮಯದಲ್ಲಿ, ಅದರಲ್ಲೂ ಅವರೆ ಆರೋಗ್ಯ ಸಚಿವರಾಗಿ ಸಾಕಷ್ಟು ಒತ್ತಡವಿದ್ದರೂ ನನ್ನ ಮನವಿಗೆ ಸ್ಪಂದಿಸಿ ತನುಜಾ ನೀಟ್ ಪರೀಕ್ಷೆ ಬರೆಯಲು ಸುಧಾಕರ್ ಸಹಾಯ ಮಾಡಿದರು. ಆಗ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ಆ ಹುಡಿಗಿಗೆ ನಮ್ಮ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ನಾನು ಈ ಘಟನೆಯನ್ನು ಅಂಕಣದಲ್ಲಿ ಬರೆದುಕೊಂಡಿದ್ದೆ. ಅಂಕಣ ಓದ್ದಿದ ಹರೀಶ್ ಚಿತ್ರ ಮಾಡಲು ಮುಂದಾದರು. ಕಷ್ಟಪಟ್ಟು ನಿರ್ಮಾಪಕರನ್ನು ಹುಡುಕಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಈ ಚಿತ್ರವನ್ನು ನೋಡಿ ಎಂದರು ಪತ್ರಕರ್ತ ವಿಶ್ವೇಶ್ವರ ಭಟ್.

“ತನುಜಾ” ನಿಜಕ್ಕೂ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಫೂರ್ತಿ. ಆಕೆಯ ಪಾತ್ರ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದರು ನಟಿ ಸಪ್ತ ಪಾವೂರ್.

ನಟ ರಾಜೇಶ್ ನಟರಂಗ ಸಹ ತಮ್ಮ ಪಾತ್ರದ ಕುರಿತು ಮಾತನಾಡಿದರು.

ತನುಜಾ ತಾಯಿ ಹಿರಿಯಮ್ಮ ಅವರು ಸಮಾರಂಭಕ್ಕೆ ಆಗಮಿಸಿ, ಮಗಳು ಪರೀಕ್ಷೆ ಬರೆಯಲು ಸಹಕಾರ ನೀಡಿದ್ದ ಸಕಲರಿಗೂ ಧನ್ಯವಾದ ತಿಳಿಸಿದರು. ಚಿತ್ರರಂಗ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ನಿರ್ದೇಶನ: ಹರೀಶ್ ಎಂ.ಡಿ ಹಳ್ಳಿ
ನಿರ್ಮಾಪಕ ಚಂದ್ರಶೇಖರ್ ಗೌಡ, ಮನೋಜ್ ಬಿ.ಜಿ
ಸಹ ನಿರ್ಮಾಪಕರಾದ ಪ್ರಕಾಶ್ ಮದ್ದೂರು,ಅನಿಲ್ ಶಡಕ್ಷರಿ, ಗಿರೀಶ .ಕೆ – ಗೋವರ್ಧನ ಬಿ, ಅವಿನಾಶ್ ಗೌಡ
ಕಾರ್ಯಕಾರಿ ನಿರ್ಮಾಪಕರಾದ ರಘುನಂದನ್ ಎಸ್ ಕೆ ಇದ್ದರು. ಚಿತ್ರಕ್ಕೆ ಸಂಗೀತವನ್ನು ಪ್ರದ್ಯೋತನ ನೀಡಿದರೆ,
ಉಮೇಶ್ ಆರ್.ಬಿ ಸಂಕಲನ ಮತ್ತು ರವೀಂದ್ರನಾಥ ಕ್ಯಾಮೆರಾ ಹಿಡಿದಿದ್ದಾರೆ.

Categories
ಸಿನಿ ಸುದ್ದಿ

ಮಗನ ಮೇಲಿನ ಪ್ರೀತಿಗೆ ಅಮ್ಮ ನಿರ್ಮಿಸಿದ ಸಿನಿಮಾ: ಡಿಸೆಂಬರ್ 9ರಂದು ಕ್ಷೇಮಗಿರಿಯಲ್ಲಿ ಕರ್ ನಾಟಕ ರಿಲೀಸ್…

ವಿಭಿನ್ನ ಕಥೆಯ “ಕ್ಷೇಮಗಿರಿಯಲ್ಲಿ ಕರ್ ನಾಟಕ” ಚಿತ್ರ ಡಿಸೆಂಬರ್ 9ರಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ನಿರ್ದೇಶಕರು ಹೇಳಿದ್ದಿಷ್ಟು.

ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಸೈಕಾಲಜಿಯಲ್ಲಿ ಮಾಸ್ಟರ್ಸ್ ಮಾಡಿರುವ ನಾನು, ಯೂರೋಪ್ ನಲ್ಲಿ ನಿರ್ದೇಶನದ ಕುರಿತು ತರಬೇತಿ ಪಡೆದಿದ್ದೇನೆ. ನನ್ನ ತಾಯಿ ಮೈಕಲ್ ರಾಣಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೆ.ಡಿ ನಾಯಕನಾಗಿ, ಶ್ರದ್ದಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ವಿನುತಾ, ‌ನೀನಾಸಂ ಚೇತನ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯ ಪ್ರತಿಭೆಗಳು ಹೆಚ್ಚಾಗಿ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.

ಒಬ್ಬ ಮನುಷ್ಯನ ಅಂತರಾಳವನ್ನು ತೆರೆದಿಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ಯಕ್ಷಗಾನವನ್ನು ‌ಪೂರ್ಣಪ್ರಮಾಣದಲ್ಲಿ ಬಳಸಿಕೊಂಡಿದ್ದೇವೆ. “ಕ್ಷೇಮಗಿರಿ” ಅಂದರೆ ಊರಿನ ಹೆಸರು.‌ ಚಿತ್ರದಲ್ಲಿ ಹತ್ತು ಹಾಡುಗಳಿದೆ. ರವಿಶಂಕರ್ ಗುಂಡ್ಮಿ ಸಂಗೀತ ನೀಡಿದ್ದಾರೆ. ವಿ.ಮನೋಹರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಗೋವಿಂದರಾಜು ಈ ಚಿತ್ರದ ಛಾಯಾಗ್ರಹಕರು ಎಂದು ನಿರ್ದೇಶಕ ಜಾನ್ ಪೀಟರ್ ರಾಜಣ್ಣ ಮಾಹಿತಿ ನೀಡಿದರು.

ನನ್ನ ಮಗನ‌ ಮೊದಲ ನಿರ್ದೇಶನದ ಚಿತ್ರಕ್ಕೆ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕಿ ಮೈಕಲ್ ರಾಣಿ .

ನಾನು ಮೂಲತಃ ರಂಗಭೂಮಿಯವನು. ಟೆಂಟ್ ಸಿನಿಮಾ‌ ಶಾಲೆಯಲ್ಲಿ ತರಬೇತಿ ಪಡೆದಿದ್ದೇನೆ.‌ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೇನೆ ಎಂದು ನಾಯಕ ಜೆ.ಡಿ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. ಮುಖ್ಯಪಾತ್ರದಲ್ಲಿ ನಟಿಸಿರುವ ಬೇಬಿ ವಿನುತಾ, ನೀನಾಸಂ ಚೇತನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

ಹಾಡುಗಳನ್ನು ಬರೆದು ಸಂಗೀತ ನೀಡಿರುವ ರವಿಶಂಕರ್ ಗುಂಡ್ಮಿ ಸಂಗೀತದ ಬಗ್ಗೆ ಮಾಹಿತಿ ನೀಡಿದರು.

ಮೂವತ್ತಕ್ಕೂ ಅಧಿಕ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ವಿತರಕ ಪ್ರಸನ್ನ ತಿಳಿಸಿದರು.

Categories
ಸಿನಿ ಸುದ್ದಿ

ಪಾದರಾಯನ ಹಿಂದೆ ಜಾಕ್ ಮಂಜು! ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಸಜ್ಜು: ಚಂದ್ರಚೂಡ್ ನಿರ್ದೇಶನ…

ಚಕ್ರವರ್ತಿ ಚಂದ್ರಚೂಡ್ ಮತ್ತೆ ನಿರ್ದೇಶನ ಟ್ರ್ಯಾಕ್ ಗೆ ಮರಳಿದ್ದಾರೆ. ಹನುಮ ಜಯಂತಿಯಂದೇ ತಮ್ಮ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಟೈಟಲ್ ಅನಾವರಣ ಮಾಡಿದ್ದಾರೆ. ಚಿತ್ರಕ್ಕೆ ‘ಪಾದರಾಯ’ ಎಂದು ಟೈಟಲ್ ಇಡಲಾಗಿದ್ದು, ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ‘ಮೈನಾ’. ‘ಸಂಜು ವೆಡ್ಸ್ ಗೀತಾ’ ಖ್ಯಾತಿಯ ನಿರ್ದೇಶಕ ನಾಗಶೇಖರ್ ನಾಯಕ ನಟನಾಗಿ ನಟಿಸುತ್ತಿದ್ದಾರೆ.

ನೈಜ ಘಟನೆ ಆಧರಿಸಿದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಐದು ಭಾಷೆಯಲ್ಲಿ ನಿರ್ಮಾಣವಾಗಿ ಬಿಡುಗಡೆಯಾಗುತ್ತಿದೆ. ನಾಗಶೇಖರ್ ನಾಯಕ ನಟನಾಗಿ ನಟಿಸುವುದರ ಜೊತೆಗೆ ಚಿತ್ರಕ್ಕೆ ಸಹ ನಿರ್ಮಾಪಕ ಕೂಡ ಆಗಿದ್ದಾರೆ.

‘ಪಾದರಾಯ’ ಎಂದರೇ ಹನುಮಂತ. ಅಂಜನಾದ್ರಿ ಸುತ್ತಮುತ್ತ ನಡೆಯುವ ಕಥೆ ಚಿತ್ರಲ್ಲಿದೆ. 2013-14ರಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ. ಈ ಘಟನೆ ಆರು ರಾಜ್ಯಕ್ಕೆ ಸಂಬಂಧಿಸಿದ್ದು, ಯೂನಿವರ್ಸಲ್ ಸಬ್ಜೆಕ್ಟ್ . ಹಾಗಾಗಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೇವೆ. ಶಾಲಿನಿ ಆರ್ಟ್ಸ್ ಬ್ಯಾನರ್ ನಡಿ ಜಾಕ್ ಮಂಜು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ನಾಯಕಿ ಹುಡುಕಾಟದಲ್ಲಿದ್ದೇವೆ ಜನವರಿಯಲ್ಲಿ ಚಿತ್ರೀಕರಣ ಆರಂಭಿಸಲಿದ್ದೇವೆ. ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ಹಂಚಿಕೊಳ್ಳೋದಾಗಿ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ತಿಳಿಸಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ತಮಿಳು ಚಿತ್ರರಂಗದ ಹೆಸರಾಂತ ಸಂಕಲನಕಾರ ಆಂಟೋನಿ ಚಿತ್ರದ ಸಂಕಲನ ಜವಾಬ್ದಾರಿ ಹೊತ್ತಿದ್ದಾರೆ. ಸತ್ಯ ಹೆಗಡೆ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ತುಳುನಾಡ ದೈವ “ಕೊರಗಜ್ಜ” ಕುರಿತ ಚಿತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ನಟ ಕಬೀರ್ ಬೇಡಿ: ಇದು ಸುಧೀರ್ ಅತ್ತಾವರ್ ಸಿನಿಮಾ…

ಧ್ರುತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿ ತ್ರಿವಿಕ್ರಮ್ ಸಪಲ್ಯ ನಿರ್ಮಿಸುತ್ತಿರುವ, ಸುಧೀರ್ ಅತ್ತಾವರ್ ನಿರ್ದೇಶನದ “ಕರಿ ಹೈದ….ಕರಿ ಅಜ್ಜ …”.ಸಿನಿಮಾದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ ನಟಿಸಿದ್ದಾರೆ.
ಯುರೋಪಿನಾದ್ಯಂತ ಪ್ರಸಿದ್ದಿ ಪಡೆದ ” ಸಂದೀಕನ್” ಟಿವಿ ಸೀರಿಸ್ ನಲ್ಲಿ ನಟಿಸಿರುವ ಕಬೀರ್ ಬೇಡಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
“ಕರಿ ಹೈದ ಕರಿ ಅಜ್ಜ” ಚಿತ್ರದ ತಮ್ಮ ಪಾತ್ರದ ಬಗ್ಗೆ ಕಬೀರ್ ಬೇಡಿ ಹೇಳಿದ್ದಿಷ್ಟು.

ಸುಧೀರ್ ಅತ್ತಾವರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ನಟಿಸಿದ್ದು ಖುಷಿಯಾಗಿದೆ. “ಕೊರಗಜ್ಜ” ದೈವದ ಕುರಿತಾದ ಈ ಚಿತ್ರದಲ್ಲಿ ರಾಜನ ಪಾತ್ರ ನನ್ನದು. ಶೃತಿ, ಭವ್ಯ, ಭರತ್ ಸೂರ್ಯ ಮುಂತಾದ ಕಲಾವಿದರ ಜೊತೆ ಅಭಿನಯಿಸಿದ್ದ ಅನುಭವವನ್ನು ಹಂಚಿಕೊಂಡ ಕಬೀರ್ ಬೇಡಿ, ಬೆಂಗಳೂರಿನ ನೃತ್ಯ ಗ್ರಾಮಕ್ಕೆ ಬರುತ್ತಿದ್ದುದ್ದನ್ನು ಹಾಗೂ ಗಿರೀಶ್ ಕಾರ್ನಾಡ್ ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು.‌

ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣವಾಗಿದೆ. ಬೆಳ್ತಂಗಡಿ ಆಸುಪಾಸಿನಲ್ಲೇ ಹೆಚ್ಚು ಚಿತ್ರೀಕರಣವಾಗಿದೆ. ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರ ಕುಟುಂಬದವರಿಗೆ “ಕೊರಗಜ್ಜ”ನ ಕುರಿತಾದ ಚಿತ್ರ ಮಾಡುವ ಹಂಬಲವಿತ್ತು. ಈ ಕಥೆ ಮೆಚ್ಚಿ ಅವರು ನಿರ್ಮಾಕ್ಕೆ ಮುಂದಾದರು. . ಕೊರಗಜ್ಜನ ಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ, ಕೊರಗಜ್ಜನ ಜನಾಂಗದ ಮಹನೀಯರೊಂದಿಗೆ ಚರ್ಚೆ ಮಾಡಿ 12ನೇ ಶತಮಾನದಲ್ಲಿದ್ದ ಕೊರಗಜ್ಜನ ಬಗ್ಗೆ ಯಾರಿಗೂ ಗೊತ್ತಿರದ ನಿಜ ಬದುಕಿನ ವಿಷಯವನ್ನು ತಿಳಿಸುವ ಪ್ರಯತ್ನ ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ.

ಭರತ್ ಸೂರ್ಯ “ಕೊರಗಜ್ಜ” ನ ಪಾತ್ರದಲ್ಲಿ ಕಾಣಿಸಿಕೊಳುತ್ತಿದ್ದಾರೆ. ಕಬೀರ್ ಬೇಡಿ, ಶೃತಿ, ಭವ್ಯ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವಿದ್ಯಾಧರ್ ಶೆಟ್ಟಿ ಸಂಕಲನದ ಜೊತೆಗೆ ಇತಿಹಾಸದ ದಾಖಲೆ ಮತ್ತು ಪುರಾವೆಗಳನ್ನು ಕಲೆ ಹಾಕಿದ್ದಾರೆ. ಪವನ್ ವಿ ಕುಮಾರ್ ಮತ್ತು ಗಣೇಶ್ ಕೆಳಮನೆ ಛಾಯಾಗ್ರಹಣ, ಸುಧೀರ್- ಕೃಷ್ಣ ರವಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ ಎಂದು ಮಾಹಿತಿ ನೀಡಿದ ನಿರ್ದೇಶಕ ಸುಧೀರ್ ಅತ್ತಾವರ್, ಕಲಾ‌ ನಿರ್ದೇಶನವನ್ನು ತಾವೇ ಮಾಡಿರುವುದಾಗಿ ಹೇಳಿದರು.

ನಮ್ಮ ಕುಟುಂಬದವರಿಗೆ “ಕೊರಗಜ್ಜ” ನ ಮೇಲೆ ವಿಶೇಷ ಭಕ್ತಿ. ಹಾಗಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಚಿತ್ರತಂಡದ ಪ್ರೋತ್ಸಾಹದಿಂದ ಚಿತ್ರ ಉತ್ತಮವಾಗಿ ಮೂಡಿ ಬರುತ್ತಿದೆ. ಅಂದುಕೊಂಡಂತೆ ಆದರೆ, ಏಪ್ರಿಲ್ ಅಥವಾ ಮೇ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು ನಿರ್ಮಾಪಕ ತ್ರಿವಿಕ್ರಮ ಸಪಲ್ಯ.

ಕಬೀರ್ ಬೇಡಿ ಅವರಂತಹ ಮಹಾನ್ ನಟನ ಜೊತೆ ಅಭಿನಯಿಸಿದ್ದು ತುಂಬಾ ಸಂತೋಷವಾಗಿದೆ. ನಾನು ಈ ಚಿತ್ರದಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸುಧೀರ್ ಅತ್ತಾವರ್ ಒಳ್ಳೆಯ ಚಿತ್ರ ನಿರ್ದೇಶಿಸುತ್ತಿದ್ದಾರೆ. ನಿಮ್ಮೆಲ್ಲರ ಬೆಂಬಲವಿರಲಿ ಎಂದರು ಹಿರಿಯ ನಟಿ ಭವ್ಯ.

Categories
ಸಿನಿ ಸುದ್ದಿ

ಯಪ್ಪಾ ರಾಕ್ಷಸರು! ಟೀಸರ್ ಭಯಾನಕ!! ಸಖತ್ ಕುತೂಹಲದ ಥ್ರಿಲ್ಲರ್ ಸಿನಿಮಾ…

ಹಿರಿಯ ನಟ ಸಾಯಿಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ರಾಕ್ಷಸರು’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ಡಿಸೆಂಬರ್ 16 ರಂದು ತೆರೆ ಕಾಣುತ್ತಿದೆ. ಟೀಸರ್ ಸಹ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ‘ಗಟ್ಟಿ ಗುಂಡಿಗೆ ಇರೋರ್ಗೆ ಮಾತ್ರ’ ಎಂಬ ಅಡಿಬರಹ ಈ ಚಿತ್ರಕ್ಕಿದೆ.
ಚಿತ್ರಕ್ಕೆ ಅಜಯ್ ಕುಮಾರ್ ಕಥೆ, ಚಿತ್ರಕಥೆ ಬರೆದಿದ್ದು , ಸಂಭಾಷಣೆಯನ್ನು ರಾಜಶೇಖರ್ ಬರೆದಿದ್ದಾರೆ.
ರಜತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಯಶಸ್ವಿ ನಿರ್ಮಾಪಕ ರಮೇಶ್ ಕಶ್ಯಪ್ ‘ಗರುಡಾದ್ರಿ ಸಿನಿಮಾಸ್’ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ.

ನಾನು ನಟನೆ ಆರಂಭಿಸಿ, ಐವತ್ತು ವರ್ಷಗಳಾಗಿದೆ. ಅದರಲ್ಲೂ ಇಪ್ಪತ್ತೈದು ವರ್ಷಗಳ ಹಿಂದೆ ತೆರೆಕಂಡ “ಪೊಲೀಸ್‌ ಸ್ಟೋರಿ” ನನಗೆ ಹೆಸರು ತಂದುಕೊಟ್ಟ ಚಿತ್ರ. ಈ ಸಮಯದಲ್ಲಿ ನಾನು ನನ್ನ ತಂದೆ – ತಾಯಿಯನ್ನು ಸ್ಮರಿಸುತ್ತೇನೆ. “ಹೆತ್ತವರು” ಚಿತ್ರದ ನಂತರ ಅಜಯ್ ಕುಮಾರ್ ಅವರೊಂದಿಗೆ “ರಾಕ್ಷಸರು” ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ನಾನು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲೇ ಕಾಣಿಸಿಕೊಂಡಿದ್ದೇನೆ ಎಂದರು ನಟ ಸಾಯಿಕುಮಾರ್.

ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಥೆಗಾರ ಅಜಯ ಕುಮಾರ್, ‘ಇಷ್ಟು ದಿನಗಳು ನಾನು ಸೆಂಟಿಮೆಂಟ್ ಕಥೆಗಳನ್ನು ಬರೆಯುತ್ತಿದ್ದೆ. ಈ ಭಾರಿ ಅದಕ್ಕೆ ವಿರುದ್ದವಾಗಿ ಮೊದಲ ಸಲ ಕ್ರೈಮ್, ಥ್ರಿಲ್ಲರ್, ಆ್ಯಕ್ಷನ್ ಕಥೆ ಮಾಡಿದ್ದೇನೆ. ಈ ಚಿತ್ರದಲ್ಲಿ ಹೆಚ್ಚು ಕ್ರೈಮ್ ತೋರಿಸಲಾಗಿದೆ. ಹಾಗಾಗಿ ಎಲ್ಲಾ ಭಾಷೆಗಳಲ್ಲೂ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳನ್ನು ತೆಗೆಯಲು ಹೇಳಿದರು‌. ಅದರಿಂದ ಸ್ವಲ್ಪ ವಿಳಂಬವಾಯಿತು. ಈಗ ಬಿಡುಗಡೆ ಹಂತಕ್ಕೆ ಬಂದಿದೆ. ನಮ್ಮ ಸುತ್ತಮುತ್ತ ನಡೆವ ಘಟನೆಗಳನ್ನೇ ತೆಗೆದುಕೊಂಡು ಕಥೆ ಮಾಡಲಾಗಿದೆ.
ಚಿತ್ರದಲ್ಲಿ ಕ್ರೈಮ್ ಹೆಚ್ಚಾಗಿದ್ದರು, ಎಲ್ಲರೂ ನೋಡಲೇ ಬೇಕಾದ ಸಿನಿಮಾ ಇದು ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿರುವ ಥ್ರಿಲ್ಲರ್ ಮಂಜು ಮಾತನಾಡಿ ‘ಈ ಚಿತ್ರದಲ್ಲಿ ಅದ್ಭುತವಾದ ಆ್ಯಕ್ಷನ್ ದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು, 8 ಆ್ಯಕ್ಷನ್ ಗಳು ಇವೆ. ಇದರಲ್ಲಿ ಒಂದು ಗೀತೆಯನ್ನು ನಾನೇ ಕೊರಿಯೋಕ್ರಾಫಿ ಕೂಡ ಮಾಡಿದ್ದೇನೆ. ಇದೊಂದು ಮೆಸೇಜ್ ಇರುವಂತಹ ಸುಂದರ ಸಿನಿಮಾ. ನಾನು ಸಿನಿಮಾ ನೋಡಿದ್ದೇನೆ. ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ’ ಎಂದರು.

ಚಿತ್ರದಲ್ಲಿ ನಟಿಸಿರುವ ಕಲಾವಿದರಾದ ಪುನೀತ್, ಅಂಜಿ, ಜಿತಿನ್ ಅವಿ, ಕಿರಣ್, ಸುನೀಲ್ ಹಾಗೂ ರುಶಿಕಾ ರಾಜ್ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು.

ಚಿತ್ರದ ಬಗ್ಗೆ ಒನ್ ಲೈನ್ ನಲ್ಲಿ ಹೇಳುವುದಾರೆ, ಐದು ಜನ ಕ್ರಿಮಿನಲ್ ಗಳು ಮಾಡಬಾರದ ದುಷ್ಕೃತ್ಯಗಳನ್ನು ಮಾಡಿ ತಲೆ ಮರಸಿಕೊಂಡಿರುತ್ತಾರೆ. ಇವರನ್ನು ಪೊಲೀಸರು ಹೇಗೆ ಹುಡುಕುತ್ತಾರೆ? ಎಂಬುದೇ ಕಥಾಹಂದರ. ಈ ಚಿತ್ರವನ್ನು ಆರಕ್ಷಕರಿಗೆ ಅರ್ಪಿಸಲು ನಿರ್ಧರಿಸಿರುವುದಾಗಿ ನಿರ್ಮಾಪಕ ರಮೇಶ್ ಕಶ್ಯಪ್ ತಿಳಿಸಿದರು.

ಎರಡು ಹಾಡುಗಳಿರುವ ಈ‌ ಚಿತ್ರಕ್ಕೆ ಎಮಿಲ್ ಸಂಗೀತ ನೀಡಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಮನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಡೈಲಾಗ್ ಕಿಂಗ್ ಸಾಯಿಕುಮಾರ್, ರಾಜಶೇಖರ್, ನಾಜರ್, ಸುಮನ್, ಕಿರಣ್ ಸುನೀಲ್, ರುಶಿಕಾ ರಾಜ್, ಅವಿನಾಶ್ ನೀರಜ್ ಯಾದವ್, ಹರ್ಷಿತ್, ಚೈತ್ರ, ಮಾನಸ, ಆಶಾ, ಮಂಜುಳ, ಸುರೇಖ, ರಚನ, ಕಮಲ, ಚಂದ್ರಕಲಾ, ರಾಧ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಫಾರ್ ರಿಜಿಸ್ಟ್ರೇಷನ್ ನಲ್ಲಿ ಅಂಡರ್ ವಾಟರ್ ಸಾಂಗು: ಈ ಹಾಡಿಗೆ ಮೋಕೋಬೋಟ್ ಕ್ಯಾಮೆರಾ ಬಳಕೆ….

ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿಯಾಗಿ ನಟಿಸಿರುವ “F0R REGN”. (ಫಾರ್ ರಿಜಿಸ್ಟ್ರೇಷನ್) ಚಿತ್ರದ ಚಿತ್ರೀಕರಣ ಹಾಡೊಂದರ‌ ಚಿತ್ರೀಕರಣದೊಂದಿಗೆ ಮುಕ್ತಾಯವಾಗಿದೆ. ಅಂಡರ್ ವಾಟರ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ.
ಈ ಹಾಡಿನ ಚಿತ್ರೀಕರಣಕ್ಕಾಗಿ ” “ಮೋಕೊ ಬೋಟ್” ಕ್ಯಾಮರಾ ಬಳಸಲಾಗಿದೆ.‌ ನನಗೆ ತಿಳಿದ ಕನ್ನಡ ಚಿತ್ರರಂಗದಲ್ಲಿ ಹಾಡೊಂದರ ಚಿತ್ರೀಕರಣಕ್ಕಾಗಿ ಈ ಕ್ಯಾಮೆರಾ ಬಳಸಿರುವುದು ಇದೇ ಮೊದಲು ಎನ್ನುತ್ತಾರೆ ನಿರ್ದೇಶಕ ನವೀನ್ ದ್ವಾರಕನಾಥ್.

ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡು ಈ ಹಾಡನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನವಿರುವ ಈ ಹಾಡಿನಲ್ಲಿ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಅಭಿನಯಿಸಿದ್ದಾರೆ‌.

ಇತ್ತೀಚಿಗೆ ಬಿಡುಗಡೆಯಾಗಿರುವ ಚಿತ್ರದ ಫಸ್ಟ್ ಲುಕ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಈ ಚಿತ್ರ(2023 ರ ಫೆಬ್ರವರಿ 10) ತೆರೆಗೆ ಬರುತ್ತಿದೆ.

ನಿಶ್ಚಲ್ ಫಿಲಂಸ್ ಮೂಲಕ
ಎನ್ .ನವೀನ್ ರಾವ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನವೀನ್ ದ್ವಾರಕನಾಥ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಹರೀಶ್ ಸಂಗೀತ ನಿರ್ದೇಶನ, ಅಭಿಷೇಕ್ ಕಲ್ಲತ್ತಿ- ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿದೆ.

ಪೃಥ್ವಿ ಅಂಬರ್, ಮಿಲನ‌ ನಾಗರಾಜ್,
ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಇದು ಅಮಾಯಕನೊಬ್ಬ ಮೇಲಿನ ವಿಚಾರಣೆ! ಹೊಸಬರ ವಿಭಿನ್ನ ಸಿನಿಮಾಗೆ ಚಾಲನೆ…

ಕನ್ನಡದಲ್ಲಿ ಈಗ ದಿನ ಕಳೆದಂತೆ ಹೊಸಬರ ಆಗಮನವಾಗುತ್ತಿದೆ. ಹೊಸ ಬಗೆಯ ಸಿನಿಮಾಗಳು ಕೂಡ ಸೆಟ್ಟೇರುತ್ತಿವೆ. ಆ ಸಾಲಿಗೆ ‘ವಿಚಾರಣೆ’ ಎಂಬ ಚಿತ್ರವೂ ಸೇರಿದೆ. ಹೌದು, ಡಿಸೆಂಬರ್ 2 ರಂದು ಬನ್ನೇರಘಟ್ಟ ರಸ್ತೆಯ ಶಾಂತಿನಿಕೇತನ್ ಅರೆಕೆರೆಯ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಮುಹೂರ್ತ ನೆರವೇರಿತು.

ಯಶ ಫಿಲಂಸ್ ಬ್ಯಾನರ್ ನಡಿ ಈ ಚಿತ್ರವನ್ನು ಆರ್. ಭಾಗ್ಯ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ನಿರ್ಮಾಣಕ್ಕೂ ಮೊದಲು ನಿರ್ಮಾಪಕಿ ಭಾಗ್ಯ ಅವರು, ‘ಪಟ್ಟಾಭಿಷೇಕ’, ‘ಬೆಲ್’ ಮತ್ತು ‘ ಎಫ್ ಐ ಆರ್’ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

ಇನ್ನು ಈ ಚಿತ್ರವನ್ನು ಎನ್. ಅಕುಲ್ ನಿರ್ದೇಶನ ಮಾಡುತ್ತಿದ್ದಾರೆ. ಇವರು ಮೂಲತಃ ನೃತ್ಯ ನಿರ್ದೇಶಕರು. ಈ ಚಿತ್ರದ ಮೂಲಕ ಅವರು ನಿರ್ದೇಶಕನ ಪಟ್ಟ ಅಲಂಕರಿಸುತ್ತಿದ್ದಾರೆ. ನಿರ್ದೇಶಕ ಅಕುಲ್ ಅವರು ಇದಕ್ಕೂ ಮೊದಲು160 ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆ ಅನುಭವದ ಮೇಲೆ ‘ವಿಚಾರಣೆ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ವಿಚಾರಣೆ ಸಿನಿಮಾ ಕುರಿತು ಹೇಳುವ ನಿರ್ದೇಶಕ ಅಕುಲ್, ‘ ಒಂದು ಘಟನೆಯಲ್ಲಿ ಅಮಾಯಕನೊಬ್ಬ ಪೊಲೀಸರ ಕೈ ಗೆ ಸಿಕ್ಕಿ ಬೀಳುತ್ತಾನೆ. ಆ ಅಮಾಯಕ ಯಾವುದೇ ತಪ್ಪು ಮಾಡದಿದ್ದರೂ, ಪೋಲೀಸರಿಂದ ಚಿತ್ರಹಿಂಸೆ ಅನುಭವಿಸುತ್ತಾನೆ.

ಅವನು ತಪ್ಪು ಮಾಡಿದ್ದು ಏನು? ಅನ್ನೋದು ಸಸ್ಪೆನ್ಸ್. ಜೊತೆಗೆ ಆ ಅಮಾಯಕನನ್ನು ಮದುವೆಯಾದ ಹುಡುಗಿ, ಈ ಘಟನೆಯಿಂದ ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾಳೆ. ಕೊನೆಗೆ ಆ ಹುಡುಗ ಪೊಲೀಸರ ಕೈಯಿಂದಹೊರ ಬರುತ್ತಾನಾ ಇಲ್ಲವಾ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ.

ಚಿತ್ರದಲ್ಲಿ ಪ್ರೀತಿ, ದೌರ್ಜನ್ಯ, ಎಮೋಷನಲ್ ಅಂಶಗಳೂ ಇವೆ. ಇನ್ನು ಇದರೊಂದಿಗೆ ಚಿತ್ರದಲ್ಲಿ ಕಾಮಿಡಿ ಹಾಗು ಸೆಂಟಿಮೆಂಟ್ ಕೂಡ ಇದೆ. ನಾಲ್ಕು ಭರ್ಜರಿ ಫೈಟ್ಸ್ ಮತ್ತು ಮೂರು ಹಾಡುಗಳಿವೆ. ಕನ್ನಡದಲ್ಲಿ ಈಗ ತೆರೆಗೆ ಬರುತ್ತಿರುವ ವಿಭಿನ್ನ ಕಥಾವಸ್ತು ಇರುವ ಸಿನಿಮಾಗಳ ಸಾಲಿಗೆ ಈ ಸಿನಿಮಾದ ಕಥೆಯು ಇದೆ ಎಂಬುದು ನಿರ್ದೇಶಕರ ಮಾತು.

ಚಿತ್ರಕ್ಕೆ ಮಡೆನೂರು ಮನು ಹೀರೋ. ಜಾನು ನಾಯಕಿ. ಇವರಿಗೆ ಇದು ಮೊದಲ ಅನುಭವ. ಉಳಿದಂತೆ ಚಿತ್ರದಲ್ಲಿ ನಾಗೇಂದ್ರ ಅರಸ್, ಪ್ರಮೋದ್ ಶೆಟ್ಟಿ, ಆದಿ ಕೇಶವ್, ಮಹೇಶ್ ಇತರರು ಇದ್ದಾರೆ.

ಚಿತ್ರಕ್ಕೆ ಜಿ.ವಿ.ರಮೇಶ್ ಅವರ ಛಾಯಾಗ್ರಹಣವಿದೆ. ಸತೀಶ್ ಬಾಬು ಅವರು ಸಂಗೀತ ನೀಡುತ್ತಿದ್ದಾರೆ.

Categories
ಸಿನಿ ಸುದ್ದಿ

ಇದು ಹೊಸಬರ ವರ್ಣಚಿತ್ರ! ವಿಭಿನ್ನ ಕಥೆಯ ವರ್ಣಂ ಸಿನಿಮಾಗೆ ಚಾಲನೆ

ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುತ್ತಿರುವ ಈ ಸಮಯದಲ್ಲಿ ವಿಭಿನ್ನ ಕಥೆಯುಳ್ಳ ಅನೇಕ ಹೊಸ ಚಿತ್ರಗಳು ಆರಂಭವಾಗುತ್ತಿವೆ. ಆ ಸಾಲಿಗೆ ಈಗ ಹೊಸಬರ ವರ್ಣಂ ಸಿನಿಮಾವೂ ಸೇರಿದೆ.

ವರ್ಣಂ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇತ್ತೀಚೆಗೆ ಮುಹೂರ್ತ ಸಮಾರಂಭ ತುಮಕೂರಿನ ಶೆಟ್ಟಿಹಳ್ಳಿ ಶ್ತೀಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಸೌಭಾಗ್ಯಮ್ಮ(ನಿರ್ಮಾಪಕರ ತಾಯಿ) ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ, ಶುಭ ಕೋರಿದರು.

ಏಂಜಲ್ ಫಿಲಂಸ್ ಬ್ಯಾನರ್ ನಲ್ಲಿ ಆರ್. ಜಗದೀಶ್ ಬಾಬು ನಿರ್ಮಿಸುತ್ತಿರುವ ಈ ಚಿತ್ರವನ್ನು ಅರುಣ್ ರಾಜ ನಿರ್ದೇಶಿಸುತ್ತಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಕಥಾಹಂದರ ಇರುವ ಚಿತ್ರ. ಚೈತ್ರಾ ಅನಂತಾಡಿ ಕಥೆ ಬರೆದರೆ, ಮಂಜುನಾಥ್ಚಿ ಕೋಟಿಕೆರೆ ಚಿತ್ರಕಥೆ ಬರೆದಿದ್ದಾರೆ.


ಪ್ರದೀಪ್ ವಿ ಬಂಗಾರಪೇಟೆ ಛಾಯಾಗ್ರಹಣವಿದೆ. ಕೀರ್ತಿರಾಜ್ ಹಿನ್ನೆಲೆ ಸಂಗೀತ ಹಾಗೂ ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ‌. ಪವನ್ ಎನ್. ಈ ಚಿತ್ರದ ಸಹ ನಿರ್ಮಾಪಕರು.

ಮನು ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಮೇಘನ “ವರ್ಣಂ” ಚಿತ್ರದ ನಾಯಕಿ. ಎಂ.ಕೆ.ಮಠ, ರಿತಿಕ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಎರಡು ಭರ್ಜರಿ ಸಾಹಸ ಸನ್ನಿವೇಶಗಳು ಹಾಗೂ ಎರಡು ಹಾಡುಗಳು “ವರ್ಣಂ” ಚಿತ್ರದಲ್ಲಿದೆ. ಡಿಸೆಂಬರ್ 8 ರಿಂದ ತುಮಕೂರು, ಹೊನ್ನಾವರ ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

error: Content is protected !!