ಮಗನ ಮೇಲಿನ ಪ್ರೀತಿಗೆ ಅಮ್ಮ ನಿರ್ಮಿಸಿದ ಸಿನಿಮಾ: ಡಿಸೆಂಬರ್ 9ರಂದು ಕ್ಷೇಮಗಿರಿಯಲ್ಲಿ ಕರ್ ನಾಟಕ ರಿಲೀಸ್…

ವಿಭಿನ್ನ ಕಥೆಯ “ಕ್ಷೇಮಗಿರಿಯಲ್ಲಿ ಕರ್ ನಾಟಕ” ಚಿತ್ರ ಡಿಸೆಂಬರ್ 9ರಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ನಿರ್ದೇಶಕರು ಹೇಳಿದ್ದಿಷ್ಟು.

ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಸೈಕಾಲಜಿಯಲ್ಲಿ ಮಾಸ್ಟರ್ಸ್ ಮಾಡಿರುವ ನಾನು, ಯೂರೋಪ್ ನಲ್ಲಿ ನಿರ್ದೇಶನದ ಕುರಿತು ತರಬೇತಿ ಪಡೆದಿದ್ದೇನೆ. ನನ್ನ ತಾಯಿ ಮೈಕಲ್ ರಾಣಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೆ.ಡಿ ನಾಯಕನಾಗಿ, ಶ್ರದ್ದಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ವಿನುತಾ, ‌ನೀನಾಸಂ ಚೇತನ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯ ಪ್ರತಿಭೆಗಳು ಹೆಚ್ಚಾಗಿ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.

ಒಬ್ಬ ಮನುಷ್ಯನ ಅಂತರಾಳವನ್ನು ತೆರೆದಿಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ಯಕ್ಷಗಾನವನ್ನು ‌ಪೂರ್ಣಪ್ರಮಾಣದಲ್ಲಿ ಬಳಸಿಕೊಂಡಿದ್ದೇವೆ. “ಕ್ಷೇಮಗಿರಿ” ಅಂದರೆ ಊರಿನ ಹೆಸರು.‌ ಚಿತ್ರದಲ್ಲಿ ಹತ್ತು ಹಾಡುಗಳಿದೆ. ರವಿಶಂಕರ್ ಗುಂಡ್ಮಿ ಸಂಗೀತ ನೀಡಿದ್ದಾರೆ. ವಿ.ಮನೋಹರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಗೋವಿಂದರಾಜು ಈ ಚಿತ್ರದ ಛಾಯಾಗ್ರಹಕರು ಎಂದು ನಿರ್ದೇಶಕ ಜಾನ್ ಪೀಟರ್ ರಾಜಣ್ಣ ಮಾಹಿತಿ ನೀಡಿದರು.

ನನ್ನ ಮಗನ‌ ಮೊದಲ ನಿರ್ದೇಶನದ ಚಿತ್ರಕ್ಕೆ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕಿ ಮೈಕಲ್ ರಾಣಿ .

ನಾನು ಮೂಲತಃ ರಂಗಭೂಮಿಯವನು. ಟೆಂಟ್ ಸಿನಿಮಾ‌ ಶಾಲೆಯಲ್ಲಿ ತರಬೇತಿ ಪಡೆದಿದ್ದೇನೆ.‌ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೇನೆ ಎಂದು ನಾಯಕ ಜೆ.ಡಿ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. ಮುಖ್ಯಪಾತ್ರದಲ್ಲಿ ನಟಿಸಿರುವ ಬೇಬಿ ವಿನುತಾ, ನೀನಾಸಂ ಚೇತನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

ಹಾಡುಗಳನ್ನು ಬರೆದು ಸಂಗೀತ ನೀಡಿರುವ ರವಿಶಂಕರ್ ಗುಂಡ್ಮಿ ಸಂಗೀತದ ಬಗ್ಗೆ ಮಾಹಿತಿ ನೀಡಿದರು.

ಮೂವತ್ತಕ್ಕೂ ಅಧಿಕ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ವಿತರಕ ಪ್ರಸನ್ನ ತಿಳಿಸಿದರು.

Related Posts

error: Content is protected !!