ಪ್ರೀ-ಲುಕ್ ಮೂಲಕ ಗಮನ ಸೆಳೆದಿದ್ದ ಖ್ಯಾತ ನಟ ಪಿ. ರವಿಶಂಕರ್ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಫಸ್ಟ್ ಲುಕ್ ರಿವೀಲ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಉದ್ದನೆಯ ಕೂದಲು ಬಿಟ್ಟು ವಿನ್ಯಾಸಗೊಳಿಸಲಾದ ಉಡುಪಿನಲ್ಲಿ ಸುಂದರವಾಗಿ ಹಾಗೂ ಸೊಗಸಾಗಿ ಅದ್ವೈ ಕಾಣಿಸಿಕೊಂಡಿದ್ದಾರೆ. ಕಾಡು, ನಿಗೂಢ ಪ್ರವೇಶ ದ್ವಾರ, ಅದ್ವೈನನ್ನು ಬೆನ್ನಟ್ಟಿರುವ ತಂಡ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಗಮನಸೆಳೆಯುತ್ತಿದೆ.
ಸೋಶಿಯೋ-ಫ್ಯಾಂಟಸಿ ಅಡ್ವೆಂಚರ್ಸ್ ಶೈಲಿಯ ಸುಬ್ರಹ್ಮಣ್ಯ ಸಿನಿಮಾದ 60% ಕೆಲಸ ಪೂರ್ಣಗೊಂಡಿದ್ದು, ಮುಂಬೈನ ರೆಡ್ ಚಿಲ್ಲಸ್ ಸ್ಟುಡಿಯೋದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಚೆನ್ನೈನ ಹಲವಾರು ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ ಗ್ರಾಫಿಕ್ಸ್ ಕೆಲಸಗಳು ನಡೆಯುತ್ತಿವೆ.
‘ಎಸ್.ಜಿ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ತಿರುಮಲ ರೆಡ್ಡಿ ಹಾಗೂ ಅನಿಲ್ ಕಡಿಯಾಲ ಅವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರವೀಣಾ ಕಡಿಯಾಲ ಮತ್ತು ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ರವಿ ಬಸ್ರೂರ್ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಸುಬ್ರಹ್ಮಣ್ಯ’ ಸಿನಿಮಾಗೆ ವಿಘ್ನೇಶ್ ರಾಜ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ವಿಜಯ್ ಎಂ. ಕುಮಾರ್ ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಮಾಲಾಶ್ರೀ ಅಭಿನಯದ ‘ದುರ್ಗಿ’ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ರವಿಶಂಕರ್ ಅವರು ಈಗ ಮಗನ ಸಿನಿಮಾಗಾಗಿ ಮತ್ತೆ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಬರೋಬ್ಬರಿ 2 ದಶಕದ ಬಳಿಕ ಅವರು ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ.
ತೆಲುಗು ಚಿತ್ರರಂಗದ ನಂದಮೂರಿ ಕುಟುಂಬದಿಂದ ಮತ್ತೊಂದು ಕುಡಿ ಸಿನಿರಂಗ ಪ್ರವೇಶಿಸಿದೆ. ನಂದಮೂರಿ ತಾರಕ್ ರಾಮ್ ಮೊಮ್ಮಗ ಹಾಗೂ ಬಾಲಕೃಷ್ಣ ಅವರ ಪುತ್ರ ಮೋಕ್ಷಜ್ಞ ತಾತ-ತಂದೆಯಂತೆ ಚಿತ್ರರಂಗದಲ್ಲಿ ಹೆಸರು ಮಾಡುವ ಉತ್ಸಾಹದಿಂದ ಬಣ್ಣ ಹಚ್ಚಿದ್ದಾರೆ.
ನಂದಮೂರಿ ಬಾಲಕೃಷ್ಣ ಪುತ್ರ ನಂದಮೂರಿ ಮೋಕ್ಷಜ್ಞ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ನಿನ್ನೆ ಅವರ ಹುಟ್ಟುಹಬ್ಬದಂದು ಅವರ ಹೊಸ ಸಿನಿಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಸ್ಟೈಲೀಶ್ ಲುಕ್ ನಲ್ಲಿ ಮೋಕ್ಷಜ್ಞ ಕಾಣಿಸಿಕೊಂಡಿದ್ದು, ಬಾಲಯ್ಯ ಪುತ್ರನ ಎಂಟ್ರಿಯನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ.
ಮೋಕ್ಷಜ್ಞ ಹೊಸ ಸಿನಿಮಾವನ್ನು ‘ಹನುಮ್ಯಾನ್’ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ. SLV ಸಿನಿಮಾಸ್ ಹಾಗೂ ಲೆಜೆಂಡ್ ಪ್ರೊಡಕ್ಷನ್ ಬ್ಯಾನರ್ ನಡಿ ದಸರಾ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ಮಾಪಕ ಸುಧಾಕರ್ ಚೆರುಕುರಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಎಂ ತೇಜಸ್ವಿನಿ ನಂದಮೂರಿ ಚಿತ್ರ ಪ್ರೆಸೆಂಟ್ ಮಾಡುತ್ತಿದ್ದಾರೆ.
ಈ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಪ್ರಶಾಂತ್ ವರ್ಮಾ, ಮೋಕ್ಷಜ್ಞ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ನನಗೆ ದೊಡ್ಡ ಜವಾಬ್ದಾರಿಯಾಗಿದೆ. ಬಾಲಯ್ಯ ಅವರು ನನ್ನ ಮೇಲೆ ಹಾಗೂ ಕಥೆ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿ ಕೊಟ್ಟಿದ್ದಾರೆ. ಇದಕ್ಕಾಗಿ ಬಾಲಯ್ಯ ಅವರಿಗೆ ಕೃತಜ್ಞನಾಗಿರುತ್ತೇನೆ. ಈ ಕಥೆ ಇತಿಹಾಸದಿಂದ ಸ್ಫೂರ್ತಿ ಪಡೆದಿದೆ. ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ನ ಒಂದು ಭಾಗವಾಗಿದೆ ಎಂದಿದ್ದಾರೆ.
ಬಾಲಯ್ಯ ಪುತ್ರ ಮೋಕ್ಷಜ್ಞ ಯಾವಾಗ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಾರೆ? ಅವರನ್ನು ಲಾಂಚ್ ಮಾಡುವ ನಿರ್ದೇಶಕ ಯಾರು ಎಂಬ ಪ್ರಶ್ನೆಗಳು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದ್ದವು. ಇದೀಗ ‘ಹನುಮಾನ್’ ಸಿನಿಮಾದ ಮೂಲಕ ಪ್ರಶಾಂತ್, ತಮ್ಮದೇ ಒಂದು ಸಿನಿಮ್ಯಾಟಿಕ್ ಯೂನಿವರ್ಸ್ ಅನ್ನು ಕ್ರಿಯೆಟ್ ಮಾಡಿಕೊಂಡಿದ್ದಾರೆ. ನಂದಮೂರಿ ಮೋಕ್ಷಜ್ಞ ಸಿನಿಮಾ ಕೂಡ ಅದೇ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಮೂಡಿಬರಲಿದೆ.
ದೇಶದ ಜನತೆಗೆ ಗೌರಿ-ಗಣೇಶ ಹಬ್ಬದ ಸಂಭ್ರಮ. ಸಿನಿಮಾ ಮಂದಿಗೆ ಹಬ್ಬಗಳು ಮತ್ತಷ್ಟು ವಿಶೇಷ. ಹಬ್ಬ ಸಂಭ್ರಮಿಸುವ ಜೊತೆಗೆ ಹೊಸ ಸಿನಿಮಾ ಅನೌನ್ಸ್ ಮಾಡುವುದು, ಸಿನಿಮಾದ ಬಗ್ಗೆ ಅಪ್ಡೇಟ್ ನೀಡುವುದು ವಿಚಾರಗಳನ್ನು ಅಭಿಮಾನಿಗಳಲ್ಲಿ ಹಂಚಿಕೊಳ್ಳುವುದು ಕಾಮನ್. ಗೌರಿ ಗಣೇಶ ಹಬ್ಬಕ್ಕೂ ಕೂಡ ಸಾಕಷ್ಟು ಹೊಸ ಸಿನಿಮಾಗಳು ಅನೌನ್ಸ್ ಆಗಿದೆ. ಈ ನಡುವೆ ಹೊಸಬರ ಹೊಸ ಸಿನಿಮಾ ಗಮನ ಸೆಳೆಯುತ್ತಿದೆ. ಹೌದು ಗಣೇಶ ಹಬ್ಬದ ಪ್ರಯುಕ್ತ ಹೊಸ ಸಿನಿಮಾ ತಂಡ ‘ಟಾಮಿ’ ಎನ್ನುವ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಹೊಸಬರೇ ಸೇರಿಕೊಂಡು ಮಾಡುತ್ತಿರುವ ಸಿನಿಮಾ ಎನ್ನುವುದೆ ವಿಶೇಷ.
‘ಟಾಮಿ’ ಶ್ವಾನ ಪ್ರಿಯರಿಗೆ ಈ ಹೆಸರು ಮತ್ತಷ್ಟು ಆಪ್ತ. ಈ ಚಿತ್ರಕ್ಕೆ ಆಶು ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಮಿಂಚುತ್ತಿದ್ದಾರೆ. ಮೊದಲ ಬಾರಿಗೆ ನಿರ್ದೇಶನದ ಕ್ಯಾಪ್ ತೊಡುವ ಜೊತೆಗೆ ಫಸ್ಟ್ ಟೈಮ್ ತೆರೆ ಮೇಲೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ನಿರ್ದೇಶಕ ನಾಯಕ ಆಶು ಅವರಿಗೆ ಚೊಚ್ಚಲ ಸಿನಿಮಾ ಅಂದ ಮಾತ್ರಕ್ಕೆ ಚಿತ್ರರಂಗವೇನು ಹೊಸದೇನಲ್ಲ.
ಕಳೆದ ಏಳೆಂಟು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಅನೇಕ ಸಿನಿಮಾಗಳಿಗೆ ಅದರಲ್ಲೂ ಕಿಚ್ಚ ಸುದೀಪ್ ನಟನೆಯ ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ ಆಶು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ಮುಕುಂದ ಮುರಾರಿ’, ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುದೀಪ್ ನಟನೆಯ ‘ಅಂಬಿ ನಿಂಗೆ ವಯಸ್ಸಾಯ್ತೊ’, ಕೋಟಿಗೊಬ್ಬ-3 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ ಆಶು.
ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ನಾಯಕ ಆಶು, ಜೊತೆಯಲ್ಲಿ ನಾಯಿ ಹಾಗೂ ಆರ್ ಎಕ್ಸ್ ಬೈಕ್ ನೋಡಬಹುದು. ಪೋಸ್ಟರ್ ನೋಡುತ್ತಿದ್ದರೆ ನಾಯಕ ನಾಯಿ ಪ್ರೇಮಿ ಜೊತೆಗೆ ಆರ್ ಎಕ್ಸ್ ಬೈಕ್ ನ ಲವರ್ ಕೂಡ ಆಗಿರುತ್ತಾನೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಟಾಮಿ ಸಿನಿಮಾದಲ್ಲಿ ಬಹುತೇಕ ಹೊಸಬರು. ಎಲಿಪಾಸ್ ಇಂಡಿಯಾ ಎಂಟರ್ಟೈನ್ಮೆಂಟ್ ಬ್ಯಾನರ್ ಅಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಸಚಿನ್ ಶ್ಯಾಮ್ ಸುಂದರ್ ಹಾಗೂ ಅನೇಕ ಸ್ನೇಹಿತರು ಸೇರಿ ಬಂಡವಾಳ ಹೂಡುತ್ತಿದ್ದಾರೆ. ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶಕ ಪ್ರದ್ಯುತನ್ ‘ಟಾಮಿ’ ಸಿನಿಮಾಗೂ ಸಂಗೀತ ನೀಡುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಅಂಗಳದಲ್ಲಿ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಶೀರ್ಷಿಕೆ ಅನಾವರಣವನ್ನೇ ಕೊಂಚ ವಿಭಿನ್ನವಾಗಿ ಮಾಡಿದ್ದ ಚಿತ್ರತಂಡ, ಅದಾದ ಬಳಿಕವೂ ಚಿತ್ರದ ಪ್ರಚಾರವನ್ನೂ ಅಷ್ಟೇ ವಿಶೇಷವಾಗಿ ನೋಡುಗನ ಮುಂದೆ ತಂದಿಟ್ಟಿತ್ತು. ಸಾಕಷ್ಟು ಸಿನಿಮೋತ್ಸಾಹವಿರುವ ಆರ್ ಜೆ ಪ್ರದೀಪ್ ಅವರು ತಮ್ಮದೇ ಸಕ್ಕತ್ ಸ್ಟುಡಿಯೋ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾ. ಸಕ್ಕತ್ ಕಂಟೆಂಟ್‌ಗಳ ಮೂಲಕವೇ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿರುವ ಸಕ್ಕತ್ ಸ್ಟುಡಿಯೋ, ಈ ಹಿಂದೆ ವೆಬ್‌ಸಿರೀಸ್ ಗಮನ ಸೆಳೆದಿದ್ದ ಈ ನಿರ್ಮಾಣ ಸಂಸ್ಥೆ ಈಗ ಸಿನಿರಂಗಕ್ಕೂ ಹೆಜ್ಜೆ ಇಟ್ಟಿದೆ.
ಸಕ್ಕತ್ ಸ್ಟುಡಿಯೋ ಸಖತ್ ಕ್ರಿಯೇಟಿವ್ ಆಗಿ ಮರ್ಯಾದೆ ಪ್ರಶ್ನೆ ಚಿತ್ರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. RCB ಕಪ್ ಗೆಲ್ಲಬೇಕು ಅಂತಾ ಕೊಹ್ಲಿ ತಂಡಕ್ಕೆ ಚಿಯರ್ ಹೇಳುವ ಹಾಡು ನಿರ್ಮಿಸಿದ್ದ ಸಕ್ಕತ್ ಸ್ಟುಡಿಯೋ, ರ್ಯಾಪರ್ ಆಲ್ ಓಕೆ ಕಡೆಯಿಂದಲೂ ಮರ್ಯಾದೆ ಪ್ರಶ್ನೆಗಳಿಗೆ ಉತ್ತರ ಕೊಡಿಸಿತ್ತು. ಹೀಗೆ ಆರಂಭದಿಂದಲೂ ಬಗೆ ಬಗೆಯಲ್ಲಿ ಪ್ರಚಾರ ಮಾಡುತ್ತಿರುವ ಚಿತ್ರತಂಡ ಗೌರಿ ಗಣೇಶ ಹಬ್ಬದ ದಿನವಾದ ಇಂದು ಥ್ರಿಲ್ಲಿಂಗ್ ಅಪ್ ಡೇಟ್ ಕೊಟ್ಟಿದೆ.
ಮರ್ಯಾದೆ ಪ್ರಶ್ನೆ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ವಿಘ್ನ ವಿಪತ್ತುಗಳಿಲ್ಲದೆ ನಿಮ್ಮೆಲ್ಲರನ್ನು ತಲುಪುತ್ತೇವೆ ಅತಿ ಶೀಘ್ರದಲ್ಲೇ..ಹಬ್ಬ ಮಾಡೋಣ ರೆಡಿ ಇರಿ..ಇದು ಮರ್ಯಾದೆ ಪ್ರಶ್ನೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಪ್ರತಿಭಾನ್ವಿತರ ದಂಡೇ ಚಿತ್ರದಲ್ಲಿದ್ದು, ಭಿನ್ನ ಪಾತ್ರಗಳಿಗೆ ಹಲವರು ಬಣ್ಣ ಹಚ್ಚಿದ್ದಾರೆ. ರಾಕೇಶ್ ಅಡಿಗ, ಸುನೀಲ್ ರಾವ್, ಶೈನ್ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕೂರ್, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವಣ್ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ಸಕ್ಕತ್ ಸ್ಟುಡಿಯೋ ಬ್ಯಾನರ್‌ನಡಿ ಪ್ರದೀಪ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಈ ಚಿತ್ರಕ್ಕೆ ಪ್ರದೀಪ್ ಅವರೇ ಕಥೆ ಬರೆದಿದ್ದಾರೆ. ಕ್ರಿಯೆಟಿವ್ ಹೆಡ್ ಕೂಡ ಸಾಥ್ ಕೊಟ್ಟಿದ್ದಾರೆ. ಈ ಮೂಲಕ ಕನ್ನಡಕ್ಕೆ ಹೊಸದೊಂದು ಕಥೆ ಕೊಡೊಕೆ ರೆಡಿ ಆಗಿದ್ದಾರೆ ಪ್ರದೀಪ್.
ಮರ್ಯಾದೆ ಪ್ರಶ್ನೆ ಚಿತ್ರವನ್ನ ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ದಿ ಬೆಸ್ಟ್ ಆ್ಯಕ್ಟರ್, ಮೈಕ್ರೋ ಮೂವಿ ಮಾಡಿದ್ದರು. ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮರಾವರ್ಕ್ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ಕೊಟ್ಟಿದ್ದಾರೆ.
ಸ್ಯಾಂಡಲ್‌ವುಡ್‌ನ ಇಬ್ಬರು ತ್ಯಾಗರಾಜರ ಹೊಸ ಸಿನಿಮಾಗೆ ಮುಹೂರ್ತದ ಸಂಭ್ರಮ…ವಿಖ್ಯಾತ್ ನಿರ್ದೇಶನದ your’s sincerely ರಾಮ್ ಫಸ್ಟ್ ಲುಕ್ ಟೀಸರ್ ರಿಲೀಸ್
ಕನ್ನಡ ಚಿತ್ರರಂಗದ ತ್ಯಾಗರಾಜರು ಅಂತಾನೇ ಖ್ಯಾತಿ ಪಡೆದಿರುವ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಸಿನಿಮಾ ಸೆಟ್ಟೇರಿದೆ. ಗೌರಿ ಹಬ್ಬದ ಶುಭ ದಿನವಾದ ಇಂದು ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿಂದು ಮುಹೂರ್ತ ನೆರವೇರಿದೆ. ನಟಿ ಕಂ ನಿರೂಪಕಿ ಜಾನ್ವಿ ರಾಯಲ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರೆ, ನಿರ್ದೇಶಕ ವಿಖ್ಯಾತ್ ಪತ್ನಿ ಸ್ವಾತಿ ವಿಖ್ಯಾತ್ ಕ್ಯಾಮೆರಾಗೆ ಚಾಲನೆ ಕೊಟ್ಟಿದ್ದಾರೆ.
ರಮೇಶ್ ಅರವಿಂದ್ ಹಾಗೂ ಗಣೇಶ್ ಸಂಗಮದ ಹೊಸ ಸಿನಿಮಾಗೆ Your’s sincerely ರಾಮ್ ಎಂಬ ಕ್ಲಾಸ್ ಟೈಟಲ್ ಇಡಲಾಗಿದೆ. ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದ್ದು, ಬಹಳ ಇಂಪ್ರೆಸಿವ್ ಆಗಿ ಮೂಡಿಬಂದಿದೆ.
ನಟ ರಮೇಶ್ ಅರವಿಂದ್ ಮಾತನಾಡಿ, ವಿಖ್ಯಾತ್ ಪರಿಚಯ ಆಗಿದ್ದು 9 ವರ್ಷಗಳ ಹಿಂದೆ. ಪುಷ್ಪಕ ವಿಮಾನ ಕಥೆಯನ್ನು ಮೊದಲು ಹೇಳಲು ಬಂದರು. ಅಂದಿನಿಂದ ಇಂದಿನವರೆಗೂ ನೋಡಿಕೊಂಡು ಬರುತ್ತಿದ್ದೇನೆ ಇವನಿಗೆ ಇರುವ ಸೌಂದರ್ಯ ಪ್ರಜ್ಞೆ ತುಂಬ ಚೆನ್ನಾಗಿದೆ. ಅವರು ನಿರ್ಮಾಣ ಮಾಡಿದ ಚಿತ್ರಗಳ ಪೋಸ್ಟರ್, ಟೀಸರ್ ಗಳಲ್ಲಿ ಸೂಕ್ಷ್ಮ ಮನೋಭಾವವಿದೆ. ಅವರು ನಿರ್ದೇಶನ ಮಾಡುತ್ತಿರುವುದು ಖುಷಿ. ಇದು ನಿಮ್ಮ ಮೊದಲ ಪಯಣ. ಸತ್ಯ ವಿಖ್ಯಾತ್.ಇಬ್ಬರಲ್ಲಿ ಬಹಳ ಉತ್ಸವವಿದೆ. ಗಣೇಶ್ ನನ್ನ ಕಾಂಬೋ ನಿಮಗೆ ಎಷ್ಟು ಖುಷಿ ಕೊಡುತ್ತದೆಯೋ. ನಮಗೂ ಅಷ್ಟೇ ಖುಷಿ ಕೊಡುತ್ತದೆ.
ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ಗೌರಿ ಹಬ್ಬದ ದಿನ your’s sincerely ರಾಮ್. ಗಣೇಶ್ ಹಬ್ಬದ ದಿನ ರಾಮ್ ನೆನಪು ಮಾಡಿಕೊಂಡಿದ್ದೇವೆ. ಚಿಕ್ಕ ಗ್ಲಿಂಪ್ಸ್ ನೋಡಿದಿರಿ. ಇಬ್ಬರ ನಡುವಿನ ಸಂಬಂಧ. ಬೇರೆ ರೀತಿ ಫೀಲ್, ಬೇರೆ ಪ್ರಪಂಚಕ್ಕೆ ಕರೆದುಕೊಂಡು ಹೋಗುವಂತಹ ಕಥೆ. ಇದರ ನೂರಷ್ಟು ಸಿನಿಮಾದಲ್ಲಿ ಇರುತ್ತದೆ. ಪ್ರತಿ ಸೀನ್, ಸ್ಕ್ರೀನ್ ಪ್ಲೇ ಎಕ್ಸ್ ಪಿರಿಯನ್ಸ್ ಆಗಿರುತ್ತದೆ. ಬಹಳ ಖುಷಿ ಇದೆ. ರಮೇಶ್ ಸರ್ ಜೊತೆ ಚಿತ್ರ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಅದ್ಭುತ ನಟ, ಟೆಕ್ನಿಷಿಯನ್ ರಮೇಶ್ ಸರ್. ವಿಖ್ಯಾತ್ ಫ್ಯಾಷನೇಟೆಡ್ ಡೈರೆಕ್ಟರ್. ಸತ್ಯ ಅವರಿಗೆ ಒಳ್ಳೆದಾಗಲಿ ಎಂದರು.
ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ನಡಿ ಸತ್ಯ ರಾಯಲ Your’s sincerely ರಾಮ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಜೆ ಅನೂಪ್ ಸೀಳಿನ್ ಸಂಗೀತ, ಗುಣ ಕಲಾ ನಿರ್ದೇಶನ , ಪ್ರಶಾಂತ್ ರಾಜಪ್ಪ , ಯದುನಂದನ್ ಹಾಗೂ ಸಚಿನ್ ಸಂಭಾಷಣೆ ಚಿತ್ರಕ್ಕಿದೆ. ಆಡಿಯೊ ಹಕ್ಕುಗಳು ಆನಂದ್ ಆಡಿಯೊಗೆ ದಾಖಲೆ ಬೆಲೆಗೆ ಮಾರಾಟವಾಗಿದೆ. ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
“ಅವಳು ಈಗಲೂ ಟಚ್‌ನಲ್ಲಿದ್ದಾಳಾ? ಇಲ್ಲ, ಏಳು ವರ್ಷ ಆಗಿದೆ. ಟಚ್ ಇಲ್ಲ. ನೀನು ಇಷ್ಟಪಡ್ತಾ ಇದ್ಯಾ? ಇಲ್ಲ.. ಅವಳೂ ನಿನ್ನನ್ನು ಇಷ್ಟಪಡ್ತಾ ಇದ್ದಾಳಾ? ಗೊತ್ತಿಲ್ಲ…? ಆಕೆಯ ಹೆಸರೇನು? ಗೊತ್ತಿಲ್ಲ… ಎಲ್ಲಿದ್ದಾಳೆ? ಗೊತ್ತಿಲ್ಲ….
ಇದು ಮದ್ವೆ ಆಗುವ ಹುಡುಗಿಯ ಮುಂದೆ ಕುಳಿತು ಅವನು ತನ್ನ ಹಳೆಯ ಹುಡುಗಿಯ ಬಗೆಗಿನ ಮಾತುಕತೆ… “ಇಬ್ಬನಿ ತಬ್ಬಿದ ಇಳೆಯಲಿ” ಸಿನಿಮಾ ಬಗ್ಗೆ ಒಂದೇ ಮಾತಲ್ಲಿ ಹೇಳುವುದಾದರೆ, ಇದೊಂದು ಫೀಲ್ ಗುಡ್ ಮೂವಿ. ಬರವಣಿಗೆಯ ಚಿತ್ರ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ ಸಿನಿಮಾವಿದು. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳ ಬರವಿಲ್ಲ ಎಂಬುದಕ್ಕೆ ಇದೂ ಸಾಕ್ಷಿ. ಇದೊಂದು ದೃಶ್ಯ ಪ್ರೇಮ ಕಾವ್ಯ. ಮೊದಲರ್ಧ ನೋಡುಗರಿಗೆ ಒಳ್ಳೆಯ ಮುದ ನೀಡುವ ಸಿನಿಮಾ ದ್ವಿತಿಯಾರ್ಧ ಒಂದಷ್ಟು ತಿರುವುಗಳನ್ನು ಕೊಡುವುದರ ಜೊತೆಗೆ ಭಾವುಕತೆಯನ್ನು ಹೆಚ್ಚಿಸುತ್ತಾ ಹೋಗುತ್ತೆ. ಒಂದರ್ಥದಲ್ಲಿ ಸಿನಿಮಾ ಸಲೀಸಾಗಿ ನೋಡಿಸಿಕೊಂಡು ಹೋಗುವುದಲ್ಲದೆ, ಹಳೆಯ ನೆನಪಿಗೂ ಜಾರುವಂತೆ ಮಾಡುತ್ತೆ. ಎಲ್ಲೂ ಅತ್ತಿತ್ತ ಅಲುಗಾಡದಂತೆ ತದೇಕಚಿತ್ತದಿಂದಲೇ ಸಿನಿಮಾ ನೋಡುವಂತಹ ನಿರೂಪಣೆ ಇಲ್ಲಿ ಗಮನಸೆಳೆಯುತ್ತೆ.
ಎಲ್ಲಿಯೂ ಅಸಂಬದ್ಧ ಮಾತಾಗಲಿ, ಅಸಹ್ಯ ಎನಿಸುವ ದೃಶ್ಯಗಳಾಗಲಿ ಇಲ್ಲಿಲ್ಲ. ಮಳೆ ಸುರಿದು ನಿಂತಾಗ, ಆ ವಾತಾವರಣ ಎಷ್ಟೊಂದು ಕೂಲ್ ಆಗಿರುತ್ತೋ, ಕಣ್ಣಿಗೆ ಹೇಗೆ ಮುದ ನೀಡುತ್ತೋ ಅಂಥದ್ದೊಂದು ಫೀಲ್ ಇಲ್ಲಿ ಸಿಗುತ್ತೆ. ಬಹುತೇಕ ಸಿನಿಮಾ ಫ್ಲ್ಯಾಶ್ ಬ್ಯಾಕ್ ಕಥೆಗಳ ಮೂಲಕವೇ ನೋಡುಗರಿಗೆ ಅರ್ಥ ಮಾಡಿಸುತ್ತಾ ಹೋಗುತ್ತದೆ. ಸಿನಿಮಾದಲ್ಲಿ ಅನೇಕ ಕಾಡುವ ಅಂಶಗಳಿವೆ. ನೋಡುಗನಿಗೆ, ಹಳೆಯ ಹುಡುಗಿ ನೆನಪಾದರೂ ಅಚ್ಚರಿಯಿಲ್ಲ. ಅಷ್ಟರಮಟ್ಟಿಗೆ ಲವ್ ಬಾಂಡಿಂಗ್ ಸ್ಟೋರಿಯನ್ನು ಈಗಿನ ಟ್ರೆಂಡ್‌ಗೆ ಬ್ಲೆಂಡ್ ಮಾಡಿ ಕಟ್ಟುಕೊಡುವ ಪ್ರಯತ್ನ ಮಾಡಿದ್ದಾರೆ.
ಕಥೆ ಇಷ್ಟು… ಅವರಿಬ್ಬರೂ ಹಸೆಮಣೆ ಏರಿದ್ದಾರೆ. ಆದರೆ, ಅವನಿಗೇಕೋ ಆ ಮದುವೆ ಇಷ್ಟವಿಲ್ಲ. ಆಕೆಗೂ ಮದ್ವೆ ಇಷ್ಟವಿರದಿದ್ದರೂ ಮನೆಯವರ ಬಲವಂತಕ್ಕೆ ಒಪ್ಪಿದ್ದಾಳೆ. ಅವನಿಗೆ ಹಳೆಯ ನೆನಪಿನ ಗಾಯವಿನ್ನೂ ಮಾದಿಲ್ಲ. ಒಳಗೆ ಹಿಡಿದಿಟ್ಟ ನೋವುಗಳೂ ಕಾಡುತ್ತಿವೆ. ಈ ಮಧ್ಯೆ ಅವರಿಬ್ಬರ ಮದುವೆಗೆ ಬ್ರೇಕ್ ಬೀಳುತ್ತೆ. ಅವನು ಆ ಹಳೆಯ ಹುಡುಗಿಯನ್ನು ಹುಡುಕಿ ಹೊರಡುತ್ತಾನೆ. ಹಳೆಯ ಹುಡುಗಿ ಯಾರು, ಎಲ್ಲಿದ್ದಾಳೆ, ಹೆಸರೇನು? ಇದ್ಯಾವುದೂ ಅವನಿಗೆ ಗೊತ್ತಿಲ್ಲ. ಆದರೂ, ಹುಡುಕಿ ಹೊರಟ ಅವನಿಗೆ ಆಕಸ್ಮಿಕವಾಗಿ ಆ ಹುಡುಗಿ ಎದುರಾಗುತ್ತಾಳೆ. ಇನ್ನೇನು ಇಬ್ಬರ ಲವ್ ಸ್ಟೋರಿ ಮುಂದುವರೆಯುತ್ತೆ ಅನ್ನುವಷ್ಟರಲ್ಲಿ ನಿರ್ದಶಕರು ನೋಡುಗರಿಗೊಂದು ಟ್ವಿಸ್ಟ್ ಕೊಡುತ್ತಾರೆ. ಅದೇ ಸಿನಿಮಾದ ಹೈಲೆಟ್. ಆ ಟ್ವಿಸ್ಟ್ ಏನೆಂಬುದರ ಕುತೂಹಲವೇನಾದರೂ ಇದ್ದರೆ ಒಂದೊಮ್ಮೆ ಮಿಸ್ ಮಾಡದೆ ಸಿನಿಮಾ ನೋಡಬಹುದು.
ಆರಂಭದಿಂದ ಅಂತ್ಯದವರೆಗೂ ಸಿನಿಮಾ ಎಲ್ಲೂ ಬೋರ್ ಎನಿಸದೆ ನೋಡಿಸಿಕೊಂಡು ಹೋಗುವುದರ ಜೊತೆಗೆ ಒಂದೊಳ್ಳೆಯ ಭಾವನಾತ್ಮಕ ಸಂಬಂಧಕ್ಕೆ ಸಾಕ್ಷಿಯಾಗುತ್ತೆ. ಅಷ್ಟೇ ಅಲ್ಲ, ಕ್ಲೈಮ್ಯಾಕ್ಸ್ ದೃಶ್ಯ ನೋಡುವಾಗ ಒಂದಷ್ಟು ಕಣ್ಣು ಒದ್ದೆಗಳಾಗುವಂತಹ ಸನ್ನಿವೇಶಗಳೂ ಇವೆ. ಎಲ್ಲಾ ವರ್ಗ ಕೂಡ ಯಾವುದೇ ಅನುಮಾನವಿಲ್ಲದೆ ಸಿನಿಮಾವನ್ನು ಬಿಗಿದಪ್ಪಿಕೊಳ್ಳಲ್ಲಡ್ಡಿಯಿಲ್ಲ.
ಯಾರು ಹೇಗೆ? ಸಿನಿಮಾದಲ್ಲಿ ಕಾಣುವ ಪ್ರತಿ ಪಾತ್ರಗಳೂ ಕಥೆ ಹಾಗು ದೃಶ್ಯಗಳಿಗೆ ಪೂರಕವಾಗಿವೆ. ವಿಹಾನ್ ಇಲ್ಲಿ ಎಂದಿಗಿಂತಲೂ ಇಲ್ಲಿ ಸೊಗಸಾಗಿ ನಟಿಸಿದ್ದಾರೆ. ನೋಡುಗರಿಗೆ ಮನೆಯ ಹುಡುಗನಂತೆಯೇ ಕಾಣುತ್ತಾರೆ. ಅದಷ್ಟೇ ಅಲ್ಲ, ಪ್ರೀತಿಯ ಕಳಕೊಂಡು ಪರಿತಪಿಸೋ ಪಾಪದ ಹುಡುಗನಾಗಿ, ಅದೇ ಪ್ರೀತಿಸಿದ ಹುಡುಗಿ ಸಿಕ್ಕಾಗ ಸಂಭ್ರಮಿಸೋ ಹುಡುಗನಾಗಿ ಇಷ್ಟವಾಗುತ್ತಾರೆ. ಇನ್ನು, ನಾಯಕಿಯಾಗಿ ನಟಿಸಿರುವ ಅಂಕಿತಾ ಇಲ್ಲಿ ಒಳ್ಳೆಯ ಮಾರ್ಕ್ಸ್ ಪಡೆದಿದ್ದಾರೆ. ಮುಗ್ಧ ಹುಡುಗಿಯಾಗಿ, ನೋವಿದ್ದರೂ, ಹೇಳಲಾಗದೆ ಒದ್ದಾಡುವ ಅಮ್ಮನ ಮಗಳಾಗಿ ಗಮನಸೆಳೆಯುತ್ತಾರೆ. ಇನ್ನು, ಮಯೂರಿ ಕೂಡ ತೆರೆ ಮೇಲೆ ಇರುವಷ್ಟು ಕಾಲ ಇಷ್ಟವಾಗುತ್ತಾರೆ.
ಗಿರಿಜಾ ಶೆಟ್ಟರ್ ಕೂಡ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ತೆರೆ ಮೇಲೆ ಕಾಣುವ ಪ್ರತಿ ಪಾತ್ರಗಳೂ ನೋಡುಗರನ್ನು ರಂಜಿಸುತ್ತವೆ. ಇನ್ನು ಇಡೀ ಚಿತ್ರದ ಹೈಲೆಟ್ ಅಂದರೆ, ಛಾಯಾಗ್ರಾಹಣ. ಶ್ರೀವತ್ಸನ್ ಸೆಲ್ವರಾಜನ್ ಅವರ ಕ್ಯಾಮೆರಾ ಕೈಚಳಕ ಕೂಡ ಇಬ್ಬನಿಯಷ್ಟೇ ಮುದ್ದಾಗಿದೆ. ಗಗನ್ ಬಡೇರಿಯಾ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ಪ್ಲಸ್. ಹಾಡುಗಳು ಇಲ್ಲಿ ಸಿನಿಮಾದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ.
ಪೋಸ್ಟರ್ ಮೂಲಕ ಗಮನಸೆಳೆದಿದ್ದ ಕೋಣ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಬೆಂಗಳೂರಿನ ವಿಕ್ಟರಿ ಸಿನಿಮಾಸ್ ಥಿಯೇಟರ್ ನಲ್ಲಿ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು.
ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ನಟ ಕೋಮಲ್ ಕುಮಾರ್ , ಕೋಣ ಡಾರ್ಕ್ ಹ್ಯೂಮರ್ ಅಂತಾರೆ. ಆದರೆ ಇದರಲ್ಲಿ ಆ ರೀತಿಯ ಸಬ್ಟೆನ್ಸ್ ತುಂಬಾ ಇದೆ. ಚಾರ್ಲಿ ಚಾಂಪಿಯನ್ ಕಷ್ಟದಲ್ಲಿ ಸಿಗುವ ಪಾತ್ರ ಹೇಗೆ ಜನಕ್ಕೆ ಎಂಜಾಯ್ ಮೆಂಟ್ ಸಿಗುತ್ತದೆಯೋ ಹಾಗೇ. ಹರಿ ಹೇಳಿದ್ದು, ಮೂಢನಂಬಿಕೆ, ನನ್ನ ಹೊಸದಾಗಿ ತೋರಿಸಿದ ರೀತಿ, ಶಾಸ್ತ್ರ ಹೇಳುವ ರೀತಿ. ರೋಬೋ ಬಗ್ಗೆ ಹೇಳಿದ ರೀತಿ ಸಂತೋಷವಾಯ್ತು. ಕೋಣ ಸಿನಿಮಾ ನೋಡಿದಾಗ ಮಲಯಾಳಂ ಸಿನಿಮಾ ನೋಡಿದ ರೀತಿ ಆಯ್ತು. ನಿಮ್ಮ ಬೆಂಬಲ ಕೋಣ ಸಿನಿಮಾ ಮೇಲೆ ಇರಲಿ ಎಂದರು.
ನಿರ್ದೇಶಕರಾದ ಹರಿಕೃಷ್ಣ ಎಸ್ ಮಾತನಾಡಿ, ನಮ್ಮ ಪ್ರೊಡಕ್ಷನ್ ಹೌಸ್ ಲಾಂಚಿಂಗ್ ಗ್ರೀಟಿಂಗ್ ಆಗಿ ಕೋಣ ಟೀಸರ್ ಬಿಡುಗಡೆ ಮಾಡಲಾಗಿದೆ. ಕೋಮಲ್ ಸರ್ ಗೆ ಕಥೆ ಹೇಳಿದ ಅವರಿಗೆ ಇಷ್ಟವಾಯ್ತು. ಟೀಸರ್ ಗ್ರೀಟಿಂಗ್ ರೀತಿ. ನಮ್ಮ ಪ್ರೊಡಕ್ಷನ್ ನಲ್ಲಿ ಈ ಕ್ವಾಲಿಟಿ ಸಿನಿಮಾ ಬರುತ್ತದೆ ಎಂದು ಪ್ರಮೋಷನ್ ಮಾಡುತ್ತಿದ್ದೇವೆ. ಅತಿ ಶೀಘ್ರದಲ್ಲೇ ಶೂಟಿಂಗ್ ಶುರು ಮಾಡುತ್ತೇವೆ. ದೀಪಾವಳಿ ಬಳಿಕ ಮುಹೂರ್ತ ಮಾಡುತ್ತೇವೆ. ಹಳ್ಳಿಯಲ್ಲಿ ಕೋಣದ ಜೊತೆ ನಡೆಯುವ ಕಥೆ ಇದು ಎಂದರು.
ನಿರ್ಮಾಪಕಿ ಕಂ ನಟಿ ತನಿಷಾ ಕುಪ್ಪಂಡ ಮಾತನಾಡಿ, ಕೋಣ ಟೀಸರ್ ಸಕ್ಸಸ್ ಫುಲ್ ಆಗಿ ಲಾಂಚ್ ಆಗಿರುವುದಕ್ಕೆ ನನ್ನ ತಂಡ ಕಾರಣ. ಕೆ ಅಂದರೆ ಕುಪ್ಪಂಡ ಕೋಣ, ಕೋಮಲ್. ಈ ರೀತಿ ಲಿಂಕ್ ಇದೆ. ಕುಪ್ಪಂಡ ಪ್ರೊಡಕ್ಷನ್ ಅಂತಾ ಯೋಚನೆ ಮಾಡಿದಾಗ ಸಣ್ಣದಾಗ ಮಾಡೋಣಾ. ಆಲ್ಬಂ ಸಾಂಗ್ ಮಾಡೋಣಾ ಅಂತಾ ಐಡಿಯಾ ಬಂತು. ನನಗೆ ಆಲ್ಬಂ ಸಾಂಗ್ ಮಾಡಬೇಕು ಎಂಬ ಆಸೆ ಇತ್ತು. ಆ ಬಳಿಕ ಸಿನಿಮಾ. ಎಲ್ಲಾ ಸ್ನೇಹಿತರು ಜೊತೆಗೂಡಿ ಸಿನಿಮಾ ಶುರು ಮಾಡಿದ್ದೇವೆ. ನನಗೆ ಖುಷಿ ಇದೆ. ಈ ರೀತಿ ಟೀಂ ನನ್ನ ಜೊತೆ ಇರುವುದಕ್ಕೆ. ಕೋಮಲ್ ಸರ್ ಈ ಪ್ರಾಜೆಕ್ಟ್ ನಲ್ಲಿ ಇರುವುದು ನಮಗೆ ಖುಷಿ ಎಂದರು.
ಕೋಣ, ಕುಪ್ಪಂಡ ಪ್ರೊಡಕ್ಷನ್ ಚೊಚ್ಚಲ ಪ್ರಯತ್ನವಾಗಿದೆ. ಈ ಬ್ಯಾನರ್ ನಡಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಲ್ಪ ಹಾಗೂ ರವಿ ಕಿರಣ್ ನಿರ್ಮಾಣ ಮಾಡಿದ್ದಾರೆ. ಕೋಣ ಟೀಸರ್ ಬಹಳ ಕುತೂಹಲ ಹೆಚ್ಚಿಸಿದ್ದು, ನೈಜ ಘಟನೆ ಆಧರಿಸಿದ ಸಿನಿಮಾ ಇದಾಗಿದೆ. ನೈಜ ಘಟನೆ ಆಧರಿಸಿಯೇ ನಿರ್ದೇಶಕ ಎಸ್ ಹರಿಕೃಷ್ಣ ಒಂದು ರೋಚಕ ಕಥೆ ಹೆಣೆದಿದ್ದಾರೆ. ಈ ಕಥೆಯಲ್ಲಿ ಕೋಮಲ್ ಹೀರೋ ಅನ್ನೋದು ಒಂದು ಕಡೆಯಾದ್ರೆ, ಕೋಣ ಚಿತ್ರದ ಮತ್ತೊಬ್ಬ ಹೀರೋ ಅಂತಲೇ ಹೇಳಬಹುದು.
ಕೋಣ ಸಿನಿಮಾದಲ್ಲಿ ಕೋಮಲ್ ಹೊಸ ರೀತಿಯ ಪಾತ್ರವನ್ನ ನಿರ್ವಹಿಸಲಿದ್ದಾರೆ. ಮಂತ್ರವಾದಿ ಪಾತ್ರದಲ್ಲಿ ಸೆನ್ಸೇಷನಲ್ ಸ್ಟಾರ್ ಕೋಮಲ್ ನಟಿಸಿದ್ದಾರೆ. ಕೋಮಲ್ ಅಭಿನಯದ ಈ ಚಿತ್ರಕ್ಕೆ ಗಾಯಕ ಶಶಾಂಕ್ ಶೇಷಗಿರಿ ಸಂಗೀತ ಕೊಡುತ್ತಿದ್ದಾರೆ. ಗಿರೀಶ್ ಆರ್ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ. ಇದೊಂದು ಡಾರ್ಕ್ ಕಾಮಿಡಿ ಕಥಾಹಂದರ ಒಳಗೊಂಡಿದೆ .
ಕಿರಣ್ ರಾಜ್ ನಾಯಕರಾಗಿ ನಟಿಸಿರುವ “ರಾನಿ” ಟ್ರೇಲರ್ ಟ್ರೆಂಡಿಂಗ್ ನಲ್ಲಿದೆ ಮಾಸ್ ಗೆ ಮಾಸ್, ಕ್ಲಾಸ್ ಗೆ ಕ್ಲಾಸ್ ಎನ್ನುವಂತೆ ರಾನಿ ಟ್ರೇಲರ್ ಇದೆ. ಅದ್ದೂರಿ ಮೇಕಿಂಗ್ ಕಾಣುತ್ತಿದೆ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗಲಿರುವ “ರಾನಿ”ಸಿನಿಮಾ, ಬಿಡುಗಡೆಗೂ ಮುನ್ನವೇ ಬಾರಿ ಸದ್ದು ಮಾಡುತ್ತಿದೆ. ಟ್ರೇಲರ್ ಪ್ರೇಕ್ಷಕನಲ್ಲಿ ಬಾರಿ ಕುತೂಹಲ ಮೂಡಿಸಿದೆ, ಕಿರಣ್ ರಾಜ್ ಆಕ್ಷನ್, ಲುಕ್, ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ, ಗುರುತೇಜ್ ಶೆಟ್ಟಿ ಸಂಭಾಷಣೆ, ಸಚಿನ್ ಬಸ್ರೂರು ಹಿನ್ನೆಲೆ ಸಂಗೀತ ಹಾಗೂ ರಾಘವೇಂದ್ರ ಬಿ ಕೋಲಾರ ಕ್ಯಾಮರಾ ವರ್ಕ್ ಎಲ್ಲವೂ ಚೆನ್ನಾಗಿದೆ. ಸಿನಿಮಾದ ಕ್ವಾಲಿಟಿ ಟ್ರೇಲರ್ ನಲ್ಲಿ ಕಾಣುತ್ತಿದೆ.
ಪ್ರತಿ ಸಾರಿಯು ಚಿತ್ರತಂಡ ನಮ್ಮದು ಫ್ಯಾಮಿಲಿ ಆಕ್ಷನ್ ಜಾನರ್ ಸಿನಿಮಾ ಎಂದು ಹೇಳಿಕೊಂಡು ಬಂದಿದೆ ಟ್ರೇಲರ್ ನಲ್ಲೂ ಆ ಅಂಶ ಕಾಣುತ್ತಿದೆ. ಟ್ರೇಲರ್ ನಂತೆ ಸಿನಿಮಾದಲ್ಲೂ ಪ್ರೇಕ್ಷಕನ ಮನ ಗೆಲ್ಲುತ್ತಾನಾ “ರಾನಿ” ? ಎಂಬುದನ್ನು ಸೆಪ್ಟೆಂಬರ್ 12 ರ ವರೆಗೆ ಕಾದು ನೋಡಬೇಕಾಗಿದೆ. “ರಾನಿ” ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿದೇಶನ ಮಾಡಿದ್ದಾರೆ. ಸ್ಟಾರ್ ಕ್ರಿಯೇಷನ್ ಬ್ಯಾನರ್ ನಲ್ಲಿ ಚಂದ್ರಕಾಂತ್ ಪೂಜಾರಿ ಉಮೇಶ್ ಹೆಗ್ಡೆ ನಿರ್ಮಾಣ ಮಾಡಿದ್ದಾರೆ..
ಇತ್ತೀಚೆಗೆ ತೆರೆಕಂಡ ತನುಷ್ ಶಿವಣ್ಣ ಅಭಿನಯದ “ನಟ್ವರ್ ಲಾಲ್” ಚಿತ್ರ ಜನಮನಸೂರೆಗೊಂಡಿತ್ತು. ಅಮೇಜಾನ್ ಪ್ರೈಮ್ ನಲ್ಲೂ ಈ ಚಿತ್ರವನ್ನು ಅಧಿಕ ಸಂಖ್ಯೆಯ ಜನರು ವೀಕ್ಷಿಸುತ್ತಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸುತ್ತಿರುವ ಮತ್ತೊಂದು ಚಿತ್ರದ ಘೋಷಣೆಯಾಗಿದೆ.
ಚಿತ್ರಕ್ಕೆ “ನಪೋಲಿಯನ್” ಎಂದು ಹೆಸರಿಡಲಾಗಿದೆ. ಸಂಕ್ರಾಂತಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು “ನಟ್ವರ್ ಲಾಲ್” ಚಿತ್ರದ ನಿರ್ದೇಶಕ ಲವ ವಿ ಅವರೆ ನಿರ್ದೇಶಿಸುತ್ತಿದ್ದಾರೆ. “ವಿಕ್ರಾಂತ್ ರೋಣ” ಖ್ಯಾತಿಯ ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಹಾಗೂ “ಮಾರ್ಟಿನ್” ಖ್ಯಾತಿಯ ಮಹೇಶ್ ಅವರ ಸಂಕಲನ ಈ ನೂತನ ಚಿತ್ರಕ್ಕಿದೆ.
ಮುಂದಿನ ತಿಂಗಳ ಮಧ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಕರ್ನಾಟಕದ ಅನೇಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಶೋಷಿತ ಹೆಣ್ಣುಮಕ್ಕಳ ಪರ ಧ್ವನಿ ಎತ್ತುವ ಕಥಾಹಂದರ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಡೇವಿ ಸುರೇಶ್ ಸಂಗೀತ ನೀಡುತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.
ಬಹು ಬೇಡಿಕೆಯ ಚಿತ್ರ “ಮ್ಯಾಕ್ಸ್” ಇದೀಗ ತನ್ನ ಮೊದಲ ಗೀತೆ “ಮ್ಯಾಕ್ಸಿಮಮ್ ಮಾಸ್” ಅನ್ನು ಬಿಡುಗಡೆ ಮಾಡಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ಅಂಗವಾಗಿ ಈ ಮಾಸ್ ಗೀತೆಯನ್ನು ಇಂದು ಬಿಡುಗಡೆ ಮಾಡಿ, ಎಲ್ಲೆಡೆ ಸದ್ದು ಮಾಡುತ್ತಿದೆ.
ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಈ ಹಾಡಿಗೆ, ಖ್ಯಾತ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ರಚಿಸಿದ್ದು, ಚೇತನ್ ಗಂಧರ್ವ ಮತ್ತು ಎಂ.ಸಿ. ಬಿಜ್ಜು ದನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿರುತ್ತಾರೆ. ಒಟ್ಟಾರೆ ಅಭಿಮಾನಿಗಳಿಗೆ ಈ ಮಾಸ್ ಗೀತೆಯು ರಸದೌತಣವನ್ನು ಉಣಬಡಿಸಿದೆ ಎಂದರೆ ಉತ್ಪ್ರೇಕ್ಷೆಯಲ್ಲ.
“ಮ್ಯಾಕ್ಸ್” ಒಂದು ಮಾಸ್ ಚಿತ್ರವಾಗಿದ್ದು, ಇದನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿರುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಮತ್ತು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿರುತ್ತಾರೆ.