Categories
ಸಿನಿ ಸುದ್ದಿ

ಘೋಸ್ಟ್ ಎಂಟ್ರಿಗೆ ದಿನಗಣನೆ: ಅಕ್ಟೋಬರ್ 19ಕ್ಕೆ ಶಿವರಾಜ್ ಕುಮಾರ್ ಚಿತ್ರ

ಅಕ್ಟೋಬರ್ 18ರ ಮಧ್ಯರಾತ್ರಿ 12 ಗಂಟೆಗೆ ಕೆ‌.ಜಿ. ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಚಿತ್ರದ ಮೊದಲ ಪ್ರದರ್ಶನ (ಫ್ಯಾನ್ ಶೋ) ಏರ್ಪಡಿಸಲಾಗಿದೆ.

ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಘೋಸ್ಟ್” ಚಿತ್ರ ಅಕ್ಟೋಬರ್ 19 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.


ಇದೇ ಮೊದಲ ಬಾರಿಗೆ ಕೆ.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ಅಕ್ಟೋಬರ್18 ರ ಮಧ್ಯರಾತ್ರಿ 12 ಕ್ಕೆ ಭರ್ಜರಿ ಫ್ಯಾನ್ ಶೋ ಆಯೋಜಿಸಲಾಗಿದೆ. ಬಹು ನಿರೀಕ್ಷಿತ ಈ ಚಿತ್ರವನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಳ್ಳಲು ಅಣಿಯಾಗುತ್ತಿದ್ದಾರೆ. ಶಿವಣ್ಣ ಅಭಿನಯದ “ಭಜರಂಗಿ” ಚಿತ್ರದ ಪ್ರದರ್ಶನ ಬೆ.6ರಿಂದ ಆರಂಭವಾಗಿತ್ತು. ಆದರೆ ಮಧ್ಯರಾತ್ರಿಯಿಂದಲೇ ಪ್ರದರ್ಶನ ಕಾಣುತ್ತಿರುವ ಮೊದಲ ಚಿತ್ರ “ಘೋಸ್ಟ್”.

ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ” Big daddy” ಟೀಸರ್ ಬಿಡುಗಡೆಯಾಗಿ, ಸಾಕಷ್ಟು ಜನಪ್ರಿಯವಾಗಿದೆ.

“ಘೋಸ್ಟ್” ಚಿತ್ರವನ್ನು ನೋಡಲು ಬರೀ ಭಾರತೀಯರಷ್ಟೇ ಅಲ್ಲ. ವಿದೇಶಿಗರು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ವಿದೇಶಿ ಅಭಿಮಾನಿಗಳು ತಾವು ಕೂಡ ಈ ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

ಶಿವರಾಜಕುಮಾರ್, ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ಶ್ರೀನಿ ಮುಂತಾದವರು “ಘೋಸ್ಟ್” ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಆಡು ಮಹಿಮೆ ದೊಡ್ದು ಕನಾ!

ರೇಟಿಂಗ್: 3/5

ವಿಜಯ್ ಭರಮಸಾಗರ

ಚಿತ್ರ : ಆಡೇ ನಮ್ God
ನಿರ್ದೇಶನ: ಪಿ.ಎಚ್‍. ವಿಶ್ವನಾಥ್‍
ನಿರ್ಮಾಣ: ಪ್ರೊ.ಬಿ. ಬಸವರಾಜ್, ರೇಣುಕಾ ಬಸವರಾಜ್
ತಾರಾಗಣ: ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನೂಪ್ ಶೂನ್ಯ, ಸಾರಿಕ ರಾವ್, ಬಿ. ಸುರೇಶ ಇತರರು.

‘ಆಡು ಕಟ್ಟಿಸಿಕೊಂಡಿದ್ದೀರಿ ಅಂದ್ರೆ ಖಂಡಿತವಾಗಿಯೂ ನಿಮಗೆ ಗಂಡು ಮಗುನೇ ಹುಟ್ಟುತ್ತೆ… ಆಡಾಣೆ… ಗಾಡಾಣೆ!

ಈ ಡೈಲಾಗ್ ಬರುವ ಹೊತ್ತಿಗೆ, ಒಂದೇ ಮನೆಯಲ್ಲಿ ವಾಸ ಮಾಡೋ ನಾಲ್ವರ ಪೈಕಿ ಮೂವರು ಬೇಜಾವಬ್ದಾರಿ ಗೆಳೆಯರಿಗೆ ಆಡು ಒಂದು ಆಕಸ್ಮಿಕವಾಗಿ ಸಿಕ್ಕಿ, ಅದು ‘ಆಡುಸ್ವಾಮಿ’ ರೂಪ ಪಡೆದು ಆ ಗೆಳೆಯರ ಬದುಕೇ ಬಂಗಾರವಾಗಿರುತ್ತೆ. ಹಲವು ತಿರುವುಗಳ ಬಳಿಕ ಆ ಗಾಡು ತೋರುವ ಮಹಿಮೆಯೇ ಚಿತ್ರದ ಟ್ವಿಸ್ಟು ಮತ್ತು ಟೆಸ್ಟು.

ಇದು ಒಂದು ಆಡು ಮತ್ತು ನಾಲ್ವರು ಗೆಳೆಯರ ಸುತ್ತ ಸಾಗುವ ಥ್ರಿಲ್ಲಿಂಗ್ ಸ್ಟೋರಿ. ಜನ ಮರುಳೋ ಜಾತ್ರೆ ಮರುಳೋ ಎಂಬ ಗಾದೆ ಮಾತು ಈ ಚಿತ್ರ ನೋಡುತ್ತ ನೆನಪಾಗುತ್ತೆ. ಕಥೆ ಚೆನ್ನಾಗಿದೆ. ಅದನ್ನು ಕಟ್ಟಿಕೊಟ್ಟಿರುವ ಪ್ರಯತ್ನವೂ ಸಾರ್ಥಕ. ನಿರ್ದೇಶಕ ಪಿ.ಎಚ್. ವಿಶ್ವನಾಥ್ ಅವರು ಈಗಿನ ಮೌಢ್ಯತೆ ಬಗ್ಗೆ ಸೂಕ್ಷ್ಮವಾಗಿ ತೋರಿಸುವುದರ ಜೊತೆಗೆ ಮನರಂಜನಾತ್ಮಕವಾಗಿ ಬಿಂಬಿಸಿದ್ದಾರೆ. ಆರಂಭದಿಂದ ಅಂತ್ಯದವರೆಗೆ ಸಿನಿಮಾ ನಗಿಸುತ್ತಲೇ ಸಾಗುತ್ತದೆ. ಅಲ್ಲಲ್ಲಿ ಬರುವ ಸಣ್ಣ ಪುಟ್ಟ ಏರಿಳಿತಗಳ ಮಧ್ಯೆ ಕೇಳುವ ಆಡು ಬಗೆಗಿನ ಹಾಡು ಆ ಎಲ್ಲಾ ಏರಿಳಿತವನ್ನೂ ಮರೆಸುತ್ತೆ. ಚುರುಕಾದ ಚಿತ್ರಕಥೆಗೆ ನಗೆಗಡಲ ಪ್ರಸಂಗಗಳು, ಕಚಗುಳಿಯ ಮಾತುಗಳು ಜೊತೆಗೆ ಪೂರಕವಾದ ಹಿನ್ನೆಲೆ ಸಂಗೀತ ಚಿತ್ರದ ವೇಗಕ್ಕೆ ಕಾರಣವಾಗಿದೆ.

ಒಂದು ಸರಳ ಕಥೆಯನ್ನು ಅಚ್ಚುಕಟ್ಟಾಗಿ ಹೇಳುವ ಮತ್ತು ತೋರಿಸುವ ಮೂಲಕ ಸಣ್ಣದ್ದೊಂದು ಮನರಂಜನೆಗೆ ಕಾರಣವಾಗಿರುವ ನಿರ್ದೇಶಕರು, ಪಾತ್ರಗಳ ಆಯ್ಕೆಯಲ್ಲೂ ಅಷ್ಟೇ ಜಾಣ್ಮೆ ಮೆರೆದಿದ್ದಾರೆ. ಹಾಗಾಗಿಯೇ ಚಿತ್ರ ನೋಡುಗರಿಗೆ ಎಲ್ಲೂ ಬೋರು ತರಿಸಲ್ಲ.

ಕಥೆ ಏನು?

ದಾಮು, ಶಿವಲಿಂಗು, ತುಕಾರಾಮ್, ತಿಪ್ಪೇಶಿ ಎಂಬ ನಾಲ್ವರು ಗೆಳೆಯರು. ಈ ಗೆಳೆಯರಲ್ಲಿ ಒಬ್ಬ ವ್ಯಾನ್ ಡ್ರೈವರ್, ಒಬ್ಬ ಕ್ಷೌರಿಕ, ಒಬ್ಬ ಬ್ರೋಕರ್ ಇನ್ನೊಬ್ಬ ಹೋಟೆಲ್ ಇಟ್ಟುಕೊಂಡು ಬದುಕು ನಡೆಸುವವರು. ಅವರೆಲ್ಲರೂ ಕೊರೊನಾ ಸಮಸ್ಯೆಗೆ ತತ್ತರಿಸಿದವರು. ಬದುಕು ಸರಿ ಹೋಗಲೆಂದು ದೇವರ ಮೊರೆ ಹೋದವರಿಗೆ, ಆಡೊಂದು ಆಕಸ್ಮಿಕವಾಗಿ ಸಿಗುತ್ತದೆ. ಅಲ್ಲಿಂದ ಅಚರ ಅದೃಷ್ಟವೇ ಬದಲಾಗುತ್ತೆ! ಅದೇಗೆ ಎಂಬ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಲು ಅಡ್ಡಿಯಿಲ್ಲ.

ಬದುಕು ನಡೆಸಲು ಹೆಣಗಾಡುವ ಅವರಿಗೆ ಆಡು ದೇವರಾ್ಇ ಬಿಡುತ್ತೆ. ಅದು ಎಷ್ಟರ ಮಟ್ಟಿಗೆಂದರೆ, ಇಡೀ ಊರಿಗೆ ಊರೇ ಆ ಆಡು ಸ್ವಾಮಿಯನ್ನು ಪೂಜಿಸಿ, ಆರಾಧಿಸುತ್ತಾರೆ. ಆಡು ಮೂಲಕ ಪವಾಡಗಳೇ ನಡೆದು ಹೋಗುತ್ತವೆ. ಅದನ್ನೇ ಗಟ್ಟಿ ಮಾಡಿಕೊಂಡ ಗೆಳೆಯರು ಆಡುಸ್ವಾಮಿ ಅಂತ ಪಟ್ಟ ಕಟ್ಟಿ ಬದುಕು ಹಸನು ಮಾಡಿಕೊಂಡು ಖುಷಿಯಲ್ಲಿರುತ್ತಾರೆ. ಜನರ ನಂಬಿಕೆಯನ್ನು ಎನ್ ಕ್ಯಾಶ್ ಮಾಡಿಕೊಂಡು ದೇವಸ್ಥಾನ ಕಟ್ಟಿಸಿ ಬಿಡುತ್ತಾರೆ. ಅದರಿಂದ ಹಣ ಹರಿದು ಬರುತ್ತೆ. ಹೀಗಿರುವಾಗ ಒಂದು ಘಟನೆ ನಡೆಯುತ್ತೆ. ಅದೇ ಸಿನಿಮಾದ ಟ್ವಿಸ್ಟು ಅದನ್ನು ನೀವು ಸಿನಿಮಾದಲ್ಲೇ ನೋಡಬೇಕು.

ಯಾರು ಹೇಗೆ?

ಚಿತ್ರದಲ್ಲಿ ಕಾಣಿಸಿಕೊಂಡಿರುವ ಪ್ರತಿಯೊಬ್ಬರೂ ಗಮನ ಸೆಳೆದಿದ್ದಾರೆ. ಮುಖ್ಯವಾಗಿ ಇಲ್ಲಿ ಬಿ.ಸುರೇಶ ಹೈಲೆಟ್. ಅವರಿಲ್ಲಿ ವಾಸ್ತುಬಗುರುವಾಗಿ, ಆಡುಸ್ವಾಮಿ ದೇವಾಲಯದ ಟ್ರಸ್ಟ್ ಅಧ್ಯಕ್ಷರಾಗಿ ಇಷ್ಟವಾಗುತ್ತಾರೆ. ಅವರ ಅಭಿನಯ ಆವರಿಸಿಕೊಂಡಿದೆ.
ನಟರಾಜ್, ಅಜಿತ್ ಬೊಪ್ಪನಹಳ್ಳಿ, ಮಂಜುನಾಥ್ ಜಂಬೆ, ಅನೂಪ್ ಶೂನ್ಯ ಈ ನಾಲ್ವರು ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಇಲ್ಲಿ ಪಿ.ಕೆ.ಎಚ್.ದಾಸ್ ಅವರ ಕ್ಯಾಮೆರಾ ಕೈಚಳಕ ಇಷ್ಟವಾಗುತ್ತೆ.

Categories
ಸಿನಿ ಸುದ್ದಿ

ಇನಾಮ್ದಾರ್ ಟ್ರೇಲರ್ ರಿಲೀಸ್ ಆಯ್ತು: ಕಪ್ಪು ಸುಂದರಿ ಸುತ್ತ…

ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣದ, ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ “ಇನಾಮ್ದಾರ್ ” ಚಿತ್ರದ ಟ್ರೇಲರ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಯಿತು. ನಿರಂಜನ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಉದ್ಯಮಿ ಕರುಣಾಕರ್ ರೆಡ್ಡಿ, ಎಂ.ಕೆ.ಮಠ ಮುಂತಾದ ಗಣ್ಯರು ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.

ಇದು ಉತ್ತರ ಕರ್ನಾಟಕ ಮೂಲದ ಶಿವಾಜಿ ಮಹಾರಾಜರನ್ನು ಆರಾಧಿಸುವ “ಇನಾಮ್ದಾರ್” ಕುಟುಂಬ ಹಾಗೂ ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಹಾಗೂ ಶಿವನ ಆರಾಧಕರಾದ ಕಾಡು ಜನರ ನಡುವೆ ನಡೆಯುವ ವರ್ಣ‌ಸಂಘರ್ಷದ ಕಥೆ. “ಇನಾಮ್ದಾರ್” ಚಿತ್ರಕ್ಕೆ “ಕಪ್ಪು ಸುಂದರಿಯ ಸುತ್ತ” ಎಂಬ ಅಡಿಬರಹವಿದೆ. ಬೆಳಗಾವಿ, ಕುಂದಾಪುರ, ಚಾಮರಾಜನಗರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.‌ ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಹಾಗೂ ಹಾಡುಗಳು ಜನರ ಮನ ಗೆದ್ದಿದೆ. ಅಕ್ಟೋಬರ್ 27 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದರು ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ.

ಟ್ರೇಲರ್ ನೋಡಿ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ ಎಂದು ಮಾತು ಆರಂಭಿಸಿದ ನಟ ಪ್ರಮೋದ್ ಶೆಟ್ಟಿ, ಈ ಚಿತ್ರದಲ್ಲಿ ನನ್ನದು ಕಾಳಿಂಗ ಎಂಬ ಕಾಡಿನ ನಾಯಕನ ಪಾತ್ರ. ತುಂಡು ಉಡುಗೆ, ಮೈ ಪೂರ್ತಿ ಕಪ್ಪು ಬಣ್ಣವಿರುತ್ತದೆ. ಸದ್ಯದಲ್ಲೇ “ಇನಾಮ್ದಾರ್” ಚಿತ್ರ ಬಿಡುಗಡೆಯಾಗುತ್ತಿದೆ ನೋಡಿ ಹಾರೈಸಿ ಎಂದರು.

ನಮ್ಮ ಚಿತ್ರ ಆರಂಭವಾದಾಗ ಬೇರೆ ನಿರ್ಮಾಪಕರಿದ್ದರು. ಕಾರಣಾಂತರದಿಂದ ಅವರು ಈ ಚಿತ್ರದಿಂದ ದೂರ ಸರಿದರು. ಆಗ ನಿರಂಜನ್ ಶೆಟ್ಟಿ ತಲ್ಲೂರು ಅವರು ಮುಂದೆ ಬಂದು ಈ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಅವರಿಗೆ ಧನ್ಯವಾದ. ನಾನು ಈ ಚಿತ್ರದಲ್ಲಿ “ಇನಾಮ್ದಾರ್” ಕುಟುಂಬದ ಮಗನಾಗಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕ ರಂಜನ್ ಛತ್ರಪತಿ ತಿಳಿಸಿದರು.

ನಾನು ಉದ್ಯಮಿ. ಸಿನಿಮಾ ರಂಗ ಹೊಸತು. ಇಡೀ ಚಿತ್ರತಂಡದ ಸಹಕಾರದಿಂದ “ಇನಾಮ್ದಾರ್” ಚಿತ್ರ ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಾರೆ ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರು.

ಚಿತ್ರದಲ್ಲಿ ಬರುವ ಕಪ್ಪು ಸುಂದರಿ ನಾನೇ ಎಂದರು ನಾಯಕಿ ಚಿರಶ್ರೀ ಅಂಚಿನ್.
ಎಂ.ಕೆ.ಮಠ, ರಘು ಪಾಂಡೇಶ್ವರ, ಚಿತ್ರಕಲಾ ಮುಂತಾದ ಕಲಾವಿದರು ತಮ್ಮ ಪಾತ್ರದ ಬಗ್ಗೆ ಹೇಳಿದರು. ಛಾಯಾಗ್ರಾಹಕ ಮುರಳಿ, ಸಂಕಲನಕಾರ ಶಿವರಾಜ್ ಮೇಹು ಸೇರಿದಂತೆ ಅನೇಕ ತಂತ್ರಜ್ಞರು ತಮ್ಮ ಕಾರ್ಯದ ಕುರಿತು ಮಾಹಿತಿ ನೀಡಿದರು. ರಾಕಿ ಸೋನು ಹಾಗೂ ನಕುಲ್ ಅಭಯಂಕರ್ ಈ ಚಿತ್ರದ ಸಂಗೀತ ನಿರ್ದೇಶಕರು.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಾಯಕನಾಗಿ ರಂಜನ್ ಛತ್ರಪತಿ, ನಾಯಕಿಯರಾಗಿ ಚಿರಶ್ರೀ ಅಂಚನ್, ಎಸ್ತರ್ ನೊರೋನ್ಹಾ, ಸಂದೇಶ್ ಶೆಟ್ಟಿ ಆಜ್ರಿ, ರಂಗಭೂಮಿ ಕಲಾವಿದ ಹಿನ್ನಲೆಯ ಪ್ರಮೋದ್ ಶೆಟ್ಟಿ, ಎಂ.ಕೆ.ಮಠ, ಥ್ರಿಲ್ಲರ್‌ಮಂಜು, ಶರತ್ ಲೋಹಿತಾಶ್ವ, ಅವಿನಾಶ್, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ನಾಗರಾಜ ಬೈಂದೂರು, ಪ್ರಶಾಂತ್ ಸಿದ್ಧಿ, ಸಂಜು ಬಸಯ್ಯ, ಮಾಹಬಲೇಶ್ವರ ಕ್ಯಾದಿಕೆ, ಲಕ್ಷ್ಮೀ ಪ್ರಿಯ, ಚಿತ್ರಕಲಾ ರಾಜೇಶ್, ರಕ್ಷಿತ್ ರಾಮಚಂದ್ರ ಶೆಟ್ಟಿ ಮತ್ತಿತರರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಓಂ ನಮಃ ಶಿವಾಯ ಹಾಡು ಬಿಡುಗಡೆ ಮಾಡಿದ ಸಿದ್ಧಗಂಗಾ ಶ್ರೀ: ಇದು ಲವ್ ಯೂ ಶಂಕರ್ ಸಿನಿಮಾ ಗೀತೆ

ಭಾರತದ ಅತೀ ದೊಡ್ಡ ಕಾಂಪೋಸಿಟ್‍ ಅನಿಮೇಷನ್‍ ಡ್ರಾಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಲವ್‍ ಯೂ ಶಂಕರ್’ ಚಿತ್ರದ ‘ಓಂ ನಮಃ ಶಿವಾಯ’ ಹಾಡನ್ನು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು ಬಿಡುಗಡೆ ಮಾಡಿದ್ದಾರೆ. ವರ್ಧನ್ ಸಿಂಗ್ ಸಂಗೀತ ಸಂಯೋಜಿಸಿದ್ದಾರೆ.


ರಿಲಯನ್ಸ್ ಎಂಟರ್ ಟೈನ್ ಮೆಂಟ್ ಸ್ಟುಡಿಯೋ ಮತ್ತು ಎಸ್.ಡಿ. ವರ್ಲ್ಡ್ ಫಿಲಂ ಪ್ರೈವೇಟ್‍ ಲಿಮಿಟೆಡ್‍ ಜೊತೆಯಾಗಿ ಅರ್ಪಿಸುತ್ತಿರುವ ‘ಲವ್‍ ಯೂ ಶಂಕರ್’ ಚಿತ್ರವನ್ನು ಜನಪ್ರಿಯ ನಿರ್ದೇಶಕ ‘ಮೈ ಫ್ರೆಂಡ್‍ ಗಣೇಶ’ ಖ್ಯಾತಿಯ ರಾಜೀವ್ ಎಸ್‍.ರುಯಾ ನಿರ್ದೇಶನ ಮಾಡಿದ್ದಾರೆ.


‘ಲವ್‍ ಯೂ ಶಂಕರ್’ ಚಿತ್ರದಲ್ಲಿ ಶ್ರೇಯಸ್‍ ತಲಪಾಡೆ, ತನಿಷಾ ಮುಖರ್ಜಿ, ಸಂಜಯ್‍ ಮಿಶ್ರಾ, ಮನ್‍ ಗಾಂಧಿ, ಅಭಿಮನ್ಯು ಸಿಂಗ್‍, ಪ್ರತೀಕ್‍ ಜೈನ್‍, ಹೇಮಂತ್‍ ಪಾಂಡೆ ಮುಂತಾದವರು ನಟಿಸಿದ್ದು, ಈ ಚಿತ್ರವು ತನ್ನ ವಿಭಿನ್ನ ಕಥಾಹಂದರ ಮತ್ತು ಅದ್ಭುತ ಅಭಿನಯಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಲಿದೆ. ತೇಜಸ್‍ ದೇಸಾಯಿ ಮತ್ತು ಸುನೀತಾ ದೇಸಾಯಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವರ್ಧನ್‍ ಸಿಂಗ್‍ ಮತ್ತು ರಾಮಿರಾ ತನೇಜ ಸಹ-ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.


ಕನ್ನಡ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರವು ನವಿರಾದ ಭಾವನೆಗಳು, ಪಾತ್ರಗಳು, ಹಾಡುಗಳು ಮತ್ತು ಕಲಾವಿದರ ಅದ್ಭುತ ಪಾತ್ರಪೋಷಣೆಯಿಂದ ಎಲ್ಲಾ ಭಾಷೆಗಳ ಮತ್ತು ಪ್ರದೇಶಗಳ ಪ್ರೇಕ್ಷಕರಿಗೆ ಆಪ್ತವಾಗಲಿದೆ ಎಂದು ಚಿತ್ರತಂಡ ನಂಬಿದೆ. ‘ಲವ್‍ ಯೂ ಶಂಕರ್’ ಚಿತ್ರವು ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. Visica films ವಿತರಣಾ ಸಂಸ್ಥೆ ಕರ್ನಾಟಕದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.

Categories
ಸಿನಿ ಸುದ್ದಿ

ಅಕ್ಟೋಬರ್ 13ಕ್ಕೆ ಜಲಪಾತ ದರ್ಶನ: ಚಿತ್ರಕ್ಕೆ ಸಿಕ್ತು ಯು ಸರ್ಟಿಫಿಕೇಟ್

ಇಂಡಸ್ ಹರ್ಬ್ಸ್ ನ ಟಿ ಸಿ ರವೀಂದ್ರ ತುಂಬರಮನೆ ನಿರ್ಮಿಸಿ , ರಮೇಶ್ ಬೇಗಾರ್ ಶೃಂಗೇರಿ ರಚಿಸಿ ನಿರ್ದೇಶಿಸಿರುವ ಜಲಪಾತ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡಿದ್ದು ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೇ ಚಿತ್ರ ತೇರ್ಗಡೆ ಹೊಂದಿದೆ. ಅಕ್ಟೋಬರ್ 13 ರ ಶುಕ್ರವಾರ ಜಲಪಾತ ಚಿತ್ರವು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ನಟ ಪ್ರಮೋದ್ ಶೆಟ್ಟಿ ಅವರು ಇಲ್ಲಿ ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಪದವಿಪೂರ್ವ ಖ್ಯಾತಿಯ ರಜನೀಶ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದು , ವೈಶಂಪಾಯನ ತೀರ ದಿಂದ ಗಮನ ಸೆಳೆದ ಮಲೆನಾಡು ಚಲುವೆ ನಾಗಶ್ರೀ ಈ ಚಿತ್ರದ ನಾಯಕಿ.

ಸಾದ್ವಿನಿ ಕೊಪ್ಪ ಸಂಗೀತವಿರುವ 3 ಹಾಡುಗಳು ಈಗಾಗಲೇ ಜನಪ್ರಿಯವಾಗಿದ್ದು ಹೆಸರಾಂತ ಗಾಯಕ ವಿಜಯಪ್ರಕಾಶ್ ಚಿತ್ರದ ಥೀಮ್ ಸಾಂಗ್ ಗೆ ಧ್ವನಿಯಾಗಿದ್ದಾರೆ. ವಿನುಮನಸು ಹಿನ್ನೆಲೆಸಂಗೀತ , ಶಶೀರ ಛಾಯಾಗ್ರಹಣ ಮತ್ತು ಅವಿನಾಶ್ ಸಂಕಲನವನ್ನು ಜಲಪಾತ ಹೊಂದಿದೆ.

ಮಲೆನಾಡು ಭಾಷೆ , ಸಂಸ್ಕೃತಿ ಮತ್ತು ಪ್ರಕೃತಿಯನ್ನು ಆಧರಿಸಿದ ವಿಶಿಷ್ಟ ಸಿನಿಮಾ ಜಲಪಾತದಲ್ಲಿ ರವಿಕುಮಾರ್ , ನಟರಾಜ್ , ವಿಶ್ವನಾಥ್ , ರೇಖಾ ಪ್ರೇಮ್ ಕುಮಾರ್ ದತ್ತಾತ್ರಿ , ಚಂದ್ರಶೇಖರ್ , ಎಂ ಆರ್. ಸುರೇಶ್ ಮೊದಲಾದ ಮಲೆನಾಡ ಅಪ್ಪಟ ರಂಗ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಪರಿಸರ ಕಾಳಜಿ ಮತ್ತು ಅರಿವನ್ನು ಮೂಡಿಸುವ ಫ್ಯಾಮಿಲಿ ಡ್ರಾಮ ದ ಶೈಲಿ ಹೊಂದಿರುವ ಜಲಪಾತ ಮಲೆನಾಡ ಸಿಗ್ನೀಚರ್ ನ್ನು ಹಿರಿತೆರೆಗೆ ತರುವ ಸಾಂಸ್ಕೃತಿಕ ಪ್ರಯತ್ನವಾಗಿದೆ ಎಂದು ನಿರ್ದೇಶಕ ರಮೇಶ್ ಬೇಗಾರ್ ತಿಳಿಸಿದ್ದಾರೆ.

ರಾಜ್ಯಾದ್ಯಂತ ಬಿಡುಗಡೆ ಆಗಲಿರುವ ಈ ಉದ್ದೇಶಿತ ಸಿನಿಮಾವನ್ನು ವೀಕ್ಷಿಸಿ ಬೆಂಬಲಿಸಿ ಎಂದು ನಿರ್ಮಾಪಕ ರವೀಂದ್ರ ತುಂಬರಮನೆ ವಿನಂತಿಸಿದ್ದಾರೆ.

Categories
ಸಿನಿ ಸುದ್ದಿ

ಧರ್ಮಣ್ಣನಿಗೆ ಇನ್ಮೇಲೆ ರಾಜಯೋಗ! ಟ್ರೇಲರ್ ರಿಲೀಸ್ ಆಯ್ತು

ಹಾಸ್ಯನಟ ಧರ್ಮಣ್ಣ ನಾಯಕನಾಗಿ ನಟಿಸಿರು ರಾಜಯೋಗ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿಶೇಷವಾಗಿ ಇಬ್ಬರು ಸಾಮಾನ್ಯ ಮಹಿಳೆಯರು ಟ್ರೇಲರ್ಬಿಬಿಡುಗಡೆಗೊಳಿಸಿದ್ದು ವಿಶೇಷ. ಲಿಂಗಾಜ ಉಚ್ಚಂಗಿದುರ್ಗ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಶ್ರೀರಾಮರತ್ನ ಪ್ರೊಡಕ್ಷನ್ಸ್ ಅಡಿ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆಎನ್, ಅರ್ಜುನ್ ಅಣತಿ ಅಲ್ಲದೆ ಧರ್ಮಣ್ಣ ಸಹೋದರ ಹೊನ್ನಪ್ಪ ಕಡೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಲಿಂಗರಾಜು ಮಾತನಾಡಿ, ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆ. ನಾನೂ ಸಹ ಹಳ್ಳಿಯಿಂದ ಬಂದವನು. ದೀಕ್ಷಿತ್ ಕೃಷ್ಣ, ಲಿಂಗರಾಜು ನನ್ನ ಸ್ನೇಹಿತರು, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಂದಲ್ಲ ಒಂದು ದಿನ ರಾಜಯೋಗ ಬಂದೇ ಬರುತ್ತದೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ರಾಮ ರಾಮ ರೇ ಚಿತ್ರದಲ್ಲಿ ಧರ್ಮಣ್ಣ ಅವರ ಅಭಿನಯ ನೋಡಿ, ಈ ಚಿತ್ರಕ್ಕೆ ಆಯ್ಕೆ ಮಾಡಿದ್ದೇನೆ. ತಂದೆ, ಪತ್ನಿ, ಚಿಕ್ಕಪ್ಪ ದೊಡ್ಡಪ್ಪ ಹೀಗೆ ಎಲ್ಲಾ ಪಾತ್ರಗಳು ಅವರ ಸುತ್ತ ಬರುತ್ತವೆ. ತಂದೆ ಮಗನ ನಡುವೆ ನಡೆಯುವ ಕಥೆ. ಜೋತಿಷ್ಯ ಸುಳ್ಳಲ್ಲ, ಆದರೆ ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದ ಕೊನೆಯಲ್ಲಿ ಮಗನ ಪಾತ್ರದ ಮೂಲಕ ತಂದೆಗೆ ಬುದ್ದಿ ಕಲಿಸುವ ಕಥೆಯಿದೆ. ಸೀರಿಯಸ್ ವಿಷಯವನ್ನು ಹಾಸ್ಯದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ, ಪಾಸ್ಟ್, ಫ್ಯೂಚರ್ ಯೋಚಿಸದೆ, ಪ್ರೆಸೆಂಟ್ ಲೈಫ್ ಬಗ್ಗೆ ಗಮನ ಹರಿಸಿದರೆ ನಮ್ಮ ಜೀವನ ಚೆನ್ನಾಗಿರುತ್ತದೆ ಎಂದು ಹೇಳುವ ಕಥೆ. ೩ ಹಂತಗಳಲ್ಲಿ 45 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಸದ್ಯ ಚಿತ್ರದ ಡಿಐ ನಡೀತಿದೆ ಎಂದು ಹೇಳಿದರು.

ನಾಯಕ ನಟ ಧರ್ಮಣ್ಣ ಮಾತನಾಡಿ, ನಾನು ಇಲ್ಲಿ ಕೂರಲು ಕಾರಣ ರಾಮಾ ರಾಮಾ ರೇ ತಂಡ. ಈ ಚಿತ್ರದಲ್ಲಿ ಕಥೆ, ನಿರ್ದೇಶಕ‌ ಇಬ್ಬರೂ ನಾಯಕರು. ನಾನೊಂದು ಪಾತ್ರ ಮಾಡಿದ್ದೇನೆ ಅಷ್ಟೇ. ಈ ಪಾತ್ರದಲ್ಲಿ ಕಾಮಿಡಿ, ಎಮೋಷನ್ ಎಲ್ಲಾ ಇದೆ, ಈ ಥರದ ಪಾತ್ರವನ್ನು ಹಿಂದೆಂದೂ ಮಾಡಿಲ್ಲ, ಗ್ರಾಮೀಣ ಭಾಗದಲ್ಲಿ ನಡೆಯೋ ಕಥೆಯಲ್ಲಿ ಸಂಬಂಧದ ಮೌಲ್ಯಗಳನ್ನು ಹಾಸ್ಯದ ಹಿನ್ನೆಲೆಯಲ್ಲಿ ಹೇಳಲು ಪ್ರಯತ್ನಿಸಿದ್ದೇವೆ. ಈ ಸಿನಿಮಾ ನೋಡುವಾಗ ಹಿರಿಯ ನಟರಾದ ಅನಂತನಾಗ್, ಶಶಿಕುಮಾರ್ ಖಂಡಿತ ನೆನಪಾಗ್ತಾರೆ. ಸದ್ಯದಲ್ಲೇ ನಿಮ್ಮ ಮುಂದೆ ಬರುತಗತೇವೆ ಎಂದು ಹೇಳಿದರು.

ಚಿತ್ರದ ನಾಯಕಿಯಾಗಿ ನಿರೀಕ್ಷಾರಾವ್ ನಟಿಸಿದ್ದಾರೆ. ಚಿತ್ರದಲ್ಲಿ ೬ ಹಾಡುಗಳಿದ್ದು, ಅಕ್ಷಯ್ ರಿಶಭ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಷ್ಣುಪ್ರಸಾದ್ ಕ್ಯಾಮೆರಾವರ್ಕ್ ನಿಭಾಯಿಸಿದ್ದಾರೆ. ಬಿ.ಎಸ್.ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದೆ, ನಾಗೇಂದ್ರ ಶಾ ನಾಯಕನ ತಂದೆಯ ಪಾತ್ರ ನಿರ್ವಹಿಸಿದ್ದು, ಕೃಷ್ಣ ಮೂರ್ತಿ ಕವುತಾರ್ ಒಬ್ಬ ಜೋತಿಷಿಯ ಪಾತ್ರ ಮಾಡಿದ್ದಾರೆ. ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಉಳಿದ ಪಾತ್ರವರ್ಗದಲ್ಲಿದ್ದಾರೆ,

Categories
ಸಿನಿ ಸುದ್ದಿ

ಮೂಡ್ಸ್ ಆಫ್ ರಾಘವ ಟೀಸರ್ ರಿಲೀಸ್: ಇದು ಅನ್ ಲಾಕ್ ರಾಘವ ಸಿನಿಮಾ ನ್ಯೂಸ್

ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ಚಿತ್ರಗಳಲ್ಲಿ “ಅನ್ ಲಾಕ್ ರಾಘವ” ಕೂಡ ಒಂದು. ಚಿತ್ರ ಸೆಟ್ಟೇರಿದ ದಿನದಿಂದಲೂ ಹಲವಾರು ವಿಶೇಷತೆಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ.
ಇದೀಗ ಚಿತ್ರತಂಡ ಸಿನಿ ಪ್ರೇಕ್ಷಕರಿಗೆ ಮತ್ತೊಂದು ಸಿಹಿ ಸುದ್ದಿ ಬಂದಿದೆ. ಅದೇ ‘ಮೂಡ್ಸ್ ಆಫ್ ರಾಘವ’ ಟೀಸರ್. ಬಿಡುಗಡೆಯಾಗಿದೆ . ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.


ಈ ಟೀಸರ್ ಕೂಡ ವಿಭಿನ್ನ ಹೆಸರಿನಿಂದಲೇ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ. ಹೀಗೆ ವಿಶೇಷ ರಸದೌತಣಗಳನ್ನು ಒಂದರ ನಂತರ ಮತ್ತೊಂದರಂತೆ ಉಣಬಡಿಸುತ್ತಿರುವ ‘ಅನ್ ಲಾಕ್ ರಾಘವ’ ಚಿತ್ರ ನೋಡಲು ಸ್ಯಾಂಡಲ್ವುಡ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
‘ಅನ್ ಲಾಕ್ ರಾಘವ’ ಚಿತ್ರವನ್ನು ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ನಡಿ ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದು, ದೀಪಕ್ ಮಧುವನಹಳ್ಳಿ ಅವರು ನಿರ್ದೇಶಿಸುತ್ತಿದ್ದಾರೆ.

ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದು, ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಧನಂಜಯ್ ಮಾಸ್ಟರ್ ಹಾಗೂ ಮುರಳಿ ಮಾಸ್ಟರ್ ನೃತ್ಯನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿದ್ದು, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

ಮಿಲಿಂದ್ ನಾಯಕನಾಗಿ ಹಾಗೂ ರೇಚಲ್ ಡೇವಿಡ್ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗೂರು ಸುರೇಶ್ ಹಾಗೂ ಮತ್ತಿತರ ಕಲಾವಿದರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
ಟೀಸರ್ ನ ಮಿಸ್ ಮಾಡದೇ ನೋಡಿ.. ರಾಘವನಿಗೆ ನಿಮ್ಮ ಪ್ರೋತ್ಸಾಹ ನೀಡಿ ಎನ್ನುತ್ತಿದೆ ಚಿತ್ರತಂಡ.

Categories
ಸಿನಿ ಸುದ್ದಿ

ಕುದ್ರು ಎಂಬ ವಿಶೇಷ ಚಿತ್ರ: ಅಕ್ಟೋಬರ್ 13ಕ್ಕೆ ರಿಲೀಸ್

ಭಾಸ್ಕರ್ ನಾಯ್ಕ್ ಬರೆದು ನಿರ್ದೇಶಿಸಿ, ನಿರ್ಮಿಸಿರುವ, ಕರಾವಳಿ ಭಾಗದ ಕಥಾಹಂದರ ಹೊಂದಿರುವ “ಕುದ್ರು” ಚಿತ್ರ ಅಕ್ಟೋಬರ್ 13 ರಂದು ಬಿಡುಗಡೆಯಾಗುತ್ತಿದೆ.

“ಕುದ್ರು” ಎಂದರೆ ನೀರಿನಿಂದ ಸುತ್ತುವರೆದ ದ್ವೀಪ ಎಂದು ಮಾತು ಆರಂಭಿಸಿದ ನಿರ್ಮಾಪಕ ಕಮ್ ನಿರ್ದೇಶಕ ಭಾಸ್ಕರ್ ನಾಯ್ಕ್, ಈ ದ್ವೀಪದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮೂರು ಕಟುಂಬಗಳು‌ ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಆ ಸಮಯದಲ್ಲಿ ವಾಟ್ಸಪ್ ಸಂದೇಶವೊಂದರಿಂದ ಎಲ್ಲರಲ್ಲೂ ಮನಸ್ತಾಪ ಬರುತ್ತದೆ. ಚಿತ್ರದ ಮೊದಲ ಭಾಗದ ಕಥೆ ಕಾಲೇಜಿನಲ್ಲಿ ನಡೆಯುತ್ತದೆ.

ಆನಂತರ ಕುತೂಹಲ ಮೂಡಿಸುವ ಕಥಾಹಂದರವಿದೆ. ಅದನ್ನು ಚಿತ್ರದಲ್ಲೇ ನೋಡಬೇಕು. ಉಡುಪಿ, ಮಲೆನಾಡು, ಗೋವಾ ಹಾಗೂ ಸೌದಿ ಅರೇಬಿಯಾದಲ್ಲಿ(ರಿಗ್) ಚಿತ್ರೀಕರಣವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟೀಸರ್ ಜನಪ್ರಿಯವಾಗಿದೆ ಎಂದರು.

ಈ ಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹುಡುಗಿಯಾಗಿ ಕಾಣಿಸಿಕೊಂಡಿರುವುದಾಗಿ ನಟಿ ಡೈನ ಡಿಸೋಜ ತಿಳಿಸಿದರು. ನನ್ನದು ಈ ಚಿತ್ರದಲ್ಲಿ ಮುಸ್ಲಿಂ ಹುಡುಗನ ಪಾತ್ರವೆಂದರು ನಟ ಫರ್ಹಾನ್. ಚಿತ್ರೀಕರಣವಾದ ಸ್ಥಳಗಳ ಬಗ್ಗೆ ಛಾಯಾಗ್ರಾಹಕ ಶ್ರೀ ಪುರಾಣಿಕ್ ಮಾಹಿತಿ ನೀಡಿದರು .

“ಕುದ್ರು” ಚಿತ್ರದಲ್ಲಿ ಬ್ರಾಹ್ಮಣ ಹುಡುಗನಾಗಿ ಹರ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ಕ್ರಿಶ್ಚಿಯನ್ ಹುಡುಗನಾಗಿ ಗಾಡ್ವಿನ್ ಹಾಗೂ ಬ್ರಾಹ್ಮಣ ಹುಡುಗಿ ಪಾತ್ರದಲ್ಲಿ ನಾಯಕಿ ಪ್ರಿಯಾ ಹೆಗ್ಡೆ ನಟಿಸಿದ್ದಾರೆ. ಪ್ರತೀಕ್ ಕುಂದು ಸಂಗೀತ ನಿರ್ದೇಶನ ಹಾಗೂ ಶ್ರೀನಿವಾಸ್ ಕಲಾಲ್ ಅವರ ಸಂಕಲನವಿರುವ “ಕುದ್ರು” ಚಿತ್ರಕ್ಕೆ ಉಡುಪಿ ಕೃಷ್ಣ ಆಚಾರ್ ಸಂಭಾಷಣೆ ಬರೆದಿದ್ದಾರೆ.

Categories
ಸಿನಿ ಸುದ್ದಿ

ವೇಷ ಟ್ರೇಲರ್ ರಿಲೀಸ್

ಹಂಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ರಾಘವೇಂದ್ರ ಡಿ.ಜಿ ನಿರ್ಮಿಸಿ ನಾಯಕನಟನಾಗಿ ಅಭಿನಯಿಸಿರುವ, ಕ್ರಷ್ಣ ನಾಡ್ಪಾಲ್ ನಿರ್ದೇಶನದ “ವೇಷ” ಚಿತ್ರದ ಟ್ರೇಲರ್ ಇತ್ತೀಚೆಗೆ A2 ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ‌, ಮರಿಟೈಗರ್ ವಿನೋದ್ ಪ್ರಭಾಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಹಾಗೂ ಸಂಭಾಷಣೆಕಾರ ಮಾಸ್ತಿ “ವೇಷ” ಚಿತ್ರದ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಜೀವನದಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿ ” ವೇಷ” ಹಾಕುತ್ತಾರೆ. ನಮ್ಮ ಚಿತ್ರದಲ್ಲೂ ಹಾಗೆ, ನಾಯಕನಿಗೆ ಯಾವುದೊ ಒಂದು ಸಂದರ್ಭ “ವೇಷ” ಹಾಕುವ ಹಾಗೆ ಮಾಡುತ್ತದೆ. ಟ್ರೇಲರ್ ಮೂಲಕ ಹೊರಬಂದಿರುವ “ವೇಷ” ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಬರಲಿದೆ.


ಈತನಕ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ನಿರ್ದೇಶನದ ಚಿತ್ರ ಎನ್ನುತ್ತಾರೆ ನಿರ್ದೇಶಕ ಕೃಷ್ಣ ನಾಡ್ಪಾಲ್.

ನಾನು ಮೂಲತಃ ರಂಗಭೂಮಿ ಕಲಾವಿದ. ನಟನೆ ನನ್ನ ಹವ್ಯಾಸ. “ವೇಷ” ಚಿತ್ರ ಆರಂಭವಾದಾಗ ನಾಯಕನ ಹುಡುಕಾಟದಲ್ಲಿದ್ದೆವು. ಆನಂತರ ಅನಿರೀಕ್ಷಿತವಾಗಿ ನಾನೇ ಈ ಚಿತ್ರದ ನಾಯಕನಾಗಿ ನಟಿಸಿದ್ದೇನೆ. ನಿರ್ಮಾಣವನ್ನು ಮಾಡಿದ್ದೇನೆ. ವಿನೋದ್ ಪ್ರಭಾಕರ್ ಅವರು ನಮಗೆ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದಾರೆ. ವಿನೋದ್ ಪ್ರಭಾಕರ್ ಅವರಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿರುವ ಗಣ್ಯರಿಗೆ ಧನ್ಯವಾದ ಎಂದರು ನಾಯಕ – ನಿರ್ಮಾಪಕ ರಾಘವೇಂದ್ರ,

ನಾಯಕಿ ನಿಧಿ ಮಾರೋಲಿ, ಸೌಖ್ಯ ಗೌಡ, ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಜಯ್ ಶೆಟ್ಟಿ, ರಾಜ ಅಲಿ, ಶಿಲ್ಪ ಕುಮಟಾ, ಸಾಹಸ ನಿರ್ದೇಶಕ ಜಾಗ್ವಾರ್ ಸಣ್ಣಪ್ಪ, ಸಂಗೀತ ನಿರ್ದೇಶಕ ಉತ್ತಮ್ ಸಾರಂಗ್ ಹಾಗೂ ಕ್ರಿಯೇಟಿವ್ ಹೆಡ್ ಕೀರ್ತನ್ ಶೆಟ್ಟಿ ಮುಂತಾದವರು ಮಾತಾಡಿದರು.


ಚಿತ್ರದ ವಿತರಣೆಯನ್ನ ಕೃಷಿ ಸ್ಟುಡಿಯೋಸ್ ಮತ್ತು ಸಚಿತ್ ಫಿಲ್ಮ್ಸ್ ನ ಮಾಲೀಕರಾದ ವೆಂಕಟ್ ಗೌಡ ಅವರು ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಹೊಸಬರ ಲವ್ ಶುರು ಗುರು: ಅಕ್ಟೋಬರ್ 6ಕ್ಕೆ ಚಿತ್ರ ರಿಲೀಸ್

ಅಪ್ಪಟ ಕನ್ನಡ ಪ್ರತಿಭೆಗಳಿಗೆ ಅವಕಾಶ ನೀಡಿ ತೆಗೆದಿರುವ ಲವ್‌ ಚಿತ್ರ ಬಿಡುಗಡೆಗೆ ಅಣಿಯಾಗಿದೆ. ಚಿತ್ರದ ಟ್ರೇಲರ್‌ ಕೂಡ ಬಿಡುಗಡೆಯಾಗಿದ್ದು, ಪ್ರಾಮಿಸಿಂಗ್‌ ಆಗಿದೆ. ಲವ್‌ ಚಿತ್ರವನ್ನು ಅಕ್ಟೋಬರ್‌ 6ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಮಹೇಶ ಸಿ ಅಮ್ಮಳ್ಳಿದೊಡ್ಡಿ ಲವ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಎರಡನೇ ಹೆಜ್ಜೆ. ಈ ಹಿಂದೆ ಮಹೇಶ ಓ ಎಂಬ ಹಾರರ್ ಚಿತ್ರ ನಿರ್ದೇಶಿಸಿದ್ದು, ಈಗ ಪ್ರೇಮಕಥೆ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

ನಿರ್ದೇಶಕರಾದ ಮಹೇಶ ಸಿ ಅಮ್ಮಳ್ಳಿದೊಡ್ಡಿ ಮಾತನಾಡಿ, ನಮ್ಮ ಸಿನಿಮಾ ಅಕ್ಟೋಬರ್ 6ಕ್ಕೆ ರಿಲೀಸ್ ಆಗ್ತಿದೆ. ಬಿ ಕೆ ಗಂಗಾಧರ್ ಅವರು ಲವ್ ಸಿನಿಮಾ ವಿತರಣೆ ಮಾಡಿದ್ದು, ಎಲ್ಲಾ ಮಲ್ಟಿಫ್ಲೆಕ್ಸ್ ನಲ್ಲಿ ರಿಲೀಸ್ ಮಾಡಿದ್ದು, 30ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಚಿತ್ರ ರಿಲೀಸ್ ಆಗ್ತಿದೆ ಎಂದರು.

ನಾಯಕಿ ವೃಷ ಪಾಟೀಲ ಮಾತನಾಡಿ, ಇದೇ ಅಕ್ಟೋಬರ್ 6ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಸ್ವಲ್ಪ ಭಯ ಇದೆ. ಮೊದಲ ಬಾರಿಗೆ ನಾನು ನಾಯಕಿಯಾಗಿ ನಟಿಸಿದ ಚಿತ್ರ ರಿಲೀಸ್ ಆಗ್ತಿದೆ. ಖುಷಿ ಜೊತೆಗೆ ಭಯನೂ ಇದೆ. ನಾನು ಸಿನಿಮಾ ನೋಡಲು ಕಾತುರಳಾಗಿದ್ದೇನೆ ಎಂದು ತಿಳಿಸಿದರು.

ನಾಯಕ ಪ್ರಜಯ್ ಜಯರಾಮ್ ಮಾತನಾಡಿ, ಸಿನಿಮಾ ಮಾಡಬೇಕು ಎಂದು ಹೊರಟಾಗ ಇಲ್ಲಿ ತನಕ ಬರುತ್ತದೆ ಎಂದು ಗೊತ್ತಿರಲಿಲ್ಲ. ಯಾಕಂದ್ರೆ ಹೊಸಬರ ಸಿನಿಮಾ. ಏನಾಗುತ್ತದೆ ಎಂಬ ಭಯ ಇತ್ತು. ಈಗ ಸಿನಿಮಾ ರಿಲೀಸ್ ಗೆ ರೆಡಿ ಇದೆ. ಹಿಂದೂ ಮುಸ್ಲಿಂ ಪ್ರೇಮಕಥೆ ಜೊತೆಗೆ ಮತ್ತೊಂದು ಪ್ರೇಮಕಥೆ ಸಿನಿಮಾದಲ್ಲಿದೆ ಎಂದರು.

ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ ನಾಯಕ ಹಾಗೂ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದಾರೆ. ಕಾಂತಾರ ಸಿನಿಮಾ ಖ್ಯಾತಿಯ ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ ಸೇರಿದಂತೆ ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರೀ, ರಜತ್ ಶೆಟ್ಟಿ ಹಲವರು ಚಿತ್ರದ ಭಾಗವಾಗಿದ್ದಾರೆ.

ಶ್ರೀಕಾಲ ಭೈರವೇಶ್ವರ ಮೂವೀ‌ ಮೇಕರ್ಸ್ ನಡಿ ದಿವಾಕರ್ ಲವ್ ಚಿತ್ರ ನಿರ್ಮಿಸುತ್ತಿದ್ದು, ಸಿದ್ದಾರ್ಥ್ ಹೆಚ್ ಆರ್ ಛಾಯಾಗ್ರಹಣ, ರೋಸಿತ್ ವಿಜಯನ್, ಶ್ರೀ ಸಾಯಿ ಕಿರಣ್ ಸಂಗೀತ, ಶಿವಪ್ರಸಾದ್ ಹಿನ್ನೆಲೆ ಸಂಗೀತ, ಲೋಕೇಶ್ ಪುಟ್ಟೇಗೌಡ ಸಂಕಲನ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.

ನೈಜ ಘಟನೆಯ ಪ್ರೇರಿತವಾದ ಕಥೆಯಾಗಿರುವ ಲವ್ ಸಿನಿಮಾವನ್ನು ಉಡುಪಿ, ಕೋಟ, ಕುಂದಾಪುರ, ಬೈಂದೂರ್, ಬಾಗಲಕೋಟೆ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಅಕ್ಟೋಬರ್‌ 6ಕ್ಕೆ ಲವ್ ಸಿನಿಮಾ ತೆರೆಗೆ ಬರ್ತಿದ್ದು, ಪೊಗರು ಸಿನಿಮಾ ನಿರ್ಮಿಸಿದ್ದ ಬಿಕೆ ಗಂಗಾಧರ್ ರಾಜ್ಯಾದ್ಯಂತ ಚಿತ್ರ ವಿತರಣೆ ಮಾಡಲಿದ್ದಾರೆ.
.

error: Content is protected !!