ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅತ್ಯಂತ ಮೆಚ್ಚುಗೆ ಪಡೆದ ರಿಷಬ್ ಶೆಟ್ಟಿ ಸಂಸ್ಥೆಯ ಹೆಮ್ಮೆಯ ಚಲನಚಿತ್ರ, “ಶಿವಮ್ಮ,” ಬುಸಾನ್ ಚಲನಚಿತ್ರೋತ್ಸವ ಸೇರಿದಂತೆ ಜಗತ್ತಿನಾದ್ಯಂತ ಹಲವಾರು ಪ್ರತಿಷ್ಠಿತ ಚಲನಚಿತ್ರೋತ್ಸವಗಳ ಮೂಲಕ ಒಂದು ವರ್ಷದ ಪ್ರಯಾಣದ ನಂತರ ಅಂತಿಮವಾಗಿ ಭಾರತಕ್ಕೆ ಆಗಮಿಸಲಿದೆ.
ಭಾರತದ ಪ್ರತಿಷ್ಠಿತ ಮಾಮಿ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದಕ್ಷಿಣ ಏಷ್ಯಾದ ಚೊಚ್ಚಲ ಪ್ರದರ್ಶನವನ್ನು ಕಾಣುತ್ತಿದೆ.
“ಶಿವಮ್ಮ” ಚಿತ್ರವನ್ನು ಸಂಪೂರ್ಣವಾಗಿ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಿಸಲಾಗಿದ್ದು, ಊರಿನ ಗ್ರಾಮಸ್ಥರೇ ಮುಖ್ಯ ತಾರಾಗಣದಲ್ಲಿದ್ದಾರೆ.
ತನ್ನ ಕುಟುಂಬದ ಉನ್ನತಿಗೋಸ್ಕರ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರದಲ್ಲಿ ತೊಡಗುವ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಹಳ್ಳಿ ಹೆಣ್ಣುಮಗಳ ಕಥೆಯಾಗಿದೆ.
ಇರಾನ್‌ನಲ್ಲಿ ನಡೆದ ಫಜರ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ ಮೊದಲ ಕನ್ನಡ ಚಿತ್ರ ಇದಾಗಿದೆ.
ಚಿತ್ರವು ಈಗಾಗಲೇ ಐದು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು, ಚಿತ್ರದ ಟೀಸರ್ ಇಂದು ಸಂಜೆ 6 ಗಂಟೆಗೆ ರಿಷಬ್ ಶೆಟ್ಟಿ ಫಿಲಂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.
ಹಿರಿತೆರೆ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ನಟ ಅನಿರುದ್ಧ್ ಜತಕರ್ ನಾಯಕರಾಗಿ ನಟಿಸಿರುವ, “ರಾಘು” ಚಿತ್ರದ ಖ್ಯಾತಿಯ ಎಂ.ಆನಂದರಾಜ್ ನಿರ್ದೇಶನದ “chef ಚಿದಂಬರ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ನಮ್ಮ ಚಿತ್ರದ ಚಿತ್ರೀಕರಣ ಆಗಸ್ಟ್ 10ರಂದು ಆರಂಭವಾಗಿತ್ತು. ಅಕ್ಟೋಬರ್ 10ರಂದು ಮುಕ್ತಾಯವಾಗಿದೆ ಎಂದು ಮಾತು ಪ್ರಾರಂಭಿಸಿದ ನಿರ್ದೇಶಕ ಆನಂದರಾಜ್, ನಮ್ಮ ಚಿತ್ರಕ್ಕೆ ಒಟ್ಟು 29 ದಿನಗಳ ಕಾಲ ಬೆಂಗಳೂರು, ಮಂಗಳೂರು, ತುಮಕೂರು, ದೇವರಾಯನದುರ್ಗ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಡಾರ್ಕ್ ಹ್ಯೂಮರ್ ಜಾನರ್ ನ ಚಿತ್ರ. ಅನಿರುದ್ದ್ ಅವರು ಶೆಫ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿಧಿ ಸುಬ್ಬಯ್ಯ ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೆಚೆಲ್ ಡೇವಿಡ್ ಅವರ ಪಾತ್ರ ಕೂಡ ವಿಭಿನ್ನವಾಗಿದೆ. ಶರತ್ ಲೋಹಿತಾಶ್ವ, ಶಿವಮಣಿ, ಶ್ರೀಧರ್, ಮಹಂತೇಶ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರತಂಡದ ಸಹಕಾರದಿಂದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭವಾಗಲಿದೆ ಎಂದು ತಿಳಿಸಿದರು.
ನಾನು ಯಾವತ್ತಿಗೂ ಅಡುಗೆಮನೆ ಕಡೆ ಹೋದವನಲ್ಲ. ಈ ಚಿತ್ರದಲ್ಲಿ ಮೊದಲ ಬಾರಿಗೆ ಶೆಫ್ ಪಾತ್ರ ನಿರ್ವಹಿಸಿದ್ದೇನೆ. ತರಬೇತಿ ಪಡೆದು ಈ ಪಾತ್ರ ನಿರ್ವಹಣೆ ಮಾಡಿದ್ದೇನೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾದರೂ, ನಿರ್ದೇಶಕರು ಕಥೆಯನ್ನು ಹಾಸ್ಯದ ಮೂಲಕ ಹೇಳಿದ್ದಾರೆ. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ ಎಂದರು ನಾಯಕ ಅನಿರುದ್ಧ್ ಜತಕರ್.
ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎನ್ನುತ್ತಾರೆ ನಾಯಕಿ ನಿಧಿ ಸುಬ್ಬಯ್ಯ.
ಅನು ಎಂಬುದು ನನ್ನ ಪಾತ್ರದ ಹೆಸರು. ನನ್ನ ಪಾತ್ರ ಹಾಗೂ ಕಥೆ ಎರಡೂ ಚೆನ್ನಾಗಿದೆ ಎಂದರು ನಾಯಕಿ ರೆಚೆಲ್ ಡೇವಿಡ್.
ನಿರ್ಮಾಪಕಿ ರೂಪ ಡಿ.ಎನ್, ಛಾಯಾಗ್ರಾಹಕ ಉದಯ್ ಲೀಲಾ, ಚಿತ್ರದಲ್ಲಿ ನಟಿಸಿರುವ ಮಹಾಂತೇಶ್, ಸೌಂಡ್ ಇಂಜಿನಿಯರ್ ಬಿ.ಆರ್ ನವೀನ್ ಕುಮಾರ್ ಇದ್ದರು.
ಚಿತ್ರಕ್ಕೆ ನಿರ್ದೇಶಕರೆ ಕಥೆ ರಚಿಸಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಆಶಿಕ್ ಹುಸಗುಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ ಅವರ ನೃತ್ಯ ನಿರ್ದೇಶನ “chef ಚಿದಂಬರ” ಚಿತ್ರಕ್ಕಿದೆ.
ಹಳ್ಳಿಯಲ್ಲಿ ಮಿಠಾಯಿ ಮಾರಿಕೊಂಡು ಜೀವನ ನಡೆಸುತ್ತಿದ್ದ ಯುವಕನೊಬ್ಬನನ್ನು ಶ್ರೀಮಂತ ಮನೆತನದ ಯುವತಿಯು ಪ್ರೀತಿಸಿದಾಗ ಏನಾಗಬಹುದು ಎಂಬುದನ್ನು ಸೈಕಲ್ ಸವಾರಿ ಚಿತ್ರದ ಮೂಲಕ ನಿರ್ದೇಶಕ ದೇವು ಕೆ.ಅಂಬಿಗ ಅವರು ಹೇಳಹೊರಟಿದ್ದಾರೆ. ಕಲಾರಂಗ್ ಫಿಲಂ ಸ್ಟುಡಿಯೋ ಅಂಡ್ ಪ್ರೊಡಕ್ಷನ್ಸ್ ವತಿಯಿಂದ ಸುರೇಶ್ ಶಿವೂರ ಹಾಗೂ ಲೋಕೇಶ್ ಸವದಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಸಂಪೂರ್ಣ ಉತ್ತರ ಕರ್ನಾಟಕ ಸೊಗಡಿನ ಭಾಷೆ, ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನಿರ್ದೇಶಕ ದೇವು ಅವರೇ ನಾಯಕನಾಗಿಯೂ ನಟಿಸಿದ್ದಾರೆ. ಬಿಜಾಪುರದ ದೀಕ್ಷಾ ಬೀಸೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರೋಹನ್ ಎಸ್. ದೇಸಾಯಿ ಅವರು ಸಂಗೀತದ ಜೊತೆಗೆ ಕ್ಯಾಮೆರಾ ವರ್ಕ್, ಡಿ.ಐ. ಕೆಲಸವನ್ನೂ ಸಹ ನಿರ್ವಹಿಸಿದ್ದಾರೆ.
ನ.3ರಂದು ಬಿಡುಗಡೆಯಾಗಲು ಸಿದ್ದವಾಗಿರುವ ಈ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ದೇವು ವಿಜಯಪುರದಲ್ಲಿ ನಮ್ಮದೇ ಸ್ಟುಡಿಯೋ ಆರಂಭಿಸಿ ಒಂದಷ್ಟು ಶಾರ್ಟ್ ಫಿಲಂಗಳನ್ನು ಮಾಡಿರುವೆ. ಸಿನಿಮಾವೊಂದರ ಪೋಸ್ಟ್ ಪ್ರೊಡಕ್ಷನ್ ಕೂಡ ಅದರಲ್ಲೇ ನಡೆದಿದೆ. ಲಾಕ್ ಡೌನ್ ಸಮಯದಲ್ಲಿ 2 ಪಾತ್ರಗಳನ್ನಿಟ್ಟುಕೊಂಡು ಕಿರುಚಿತ್ರವೊಂದನ್ನು ನಿರ್ದೇಶನ ಮಾಡಬೇಕೆಂದು ಈ ಕಥೆ ಬರೆದಿದ್ದೆ. ನಂತರ ಅದು ಸಿನಿಮಾ ಆಯಿತು. ಅಗ ನಮ್ಮಲ್ಲಿದ್ದುದು 5ಲಕ್ಷ ಮಾತ್ರ. ನಂತರ ಸುರೇಶ್ ಶಿವೂರು ಅವರು ನಮ್ಮ ಸಹಾಯಕ್ಕೆ ನಿಂತರು. ಕಡ್ಡಿಹೋಗಿ ದೊಡ್ಡ ಗುಡ್ಡವೇ ಆಯ್ತು. ಚಿತ್ರದಲ್ಲಿ 5 ಹಾಡುಗಳಿದ್ದು ಯಾವುದೂ ಕಥೆಯನ್ನು ಬಿಟ್ಟು ಇಲ್ಲ. ನಂತರ ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ ಲೋಕೇಶ್ ಸವದಿ ಅವರು ಕೈಜೋಡಿಸಿದರು. ಅವರಿಂದಲೇ ಈಗ ಸಿನಿಮಾ ಬಿಡುಗಡೆಯಾಗುತ್ತಿದೆ.
ಶಿವಾಜಿ ಮೆಟಗಾರ್ ಪ್ರತಿ ಹಂತದಲ್ಲೂ ಜೊತೆಗಿದ್ದು ಸಹಕರಿಸಿದರು. ನಾನು ಊರಲ್ಲಿ ಬಾಂಬೆ ಮಿಠಾಯಿ ಮಾರುವ ಬಸು ಎಂಬ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಾಹುಕಾರ್ ಮನೆಯ ಹುಡುಗಿ ಈತನ ಹಿಂದೆ ಬಿದ್ದು ಲವ್ ಮಾಡಿದಾಗ ಏನಾಗುತ್ತದೆ ಎನ್ನುವುದೇ ಈ ಸಿನಿಮಾ ಎಂದರು. ನಾಯಕಿ ದೀಕ್ಷಾ ಬೀಸೆ ಮಾತನಾಡಿ ಮೂಲತಃ ನಾನೊಬ್ಬ ಭರತನಾಟ್ಯ ನೃತ್ಯಗಾರ್ತಿ. ಚಿಕ್ಕವಯಸಿನಿಂದಲೂ ಕಲಾವಿದೆಯಾಗಬೇಕೆಂಬ ಆಸೆಯಿತ್ತು. ಅದು ಈ ಚಿತ್ರದಿಂದ ಈಡೇರಿದೆ. ಯಾವುದೇ ತರಬೇತಿ ಇಲ್ಲದೆ ಅಭಿನಯಿಸಿದ್ದೇನೆ ಎಂದರು.
ಸಂಗೀತ-ಕ್ಯಾಮೆರಾ ಎರಡನ್ನೂ ನಿಭಾಯಿಸಿರುವ ರೋಹನ್ ದೇಸಾಯಿ ಮಾತನಾಡಿ ಕಡಿಮೆ ಟೆಕ್ನೀಷಿಯನ್ ಇಟ್ಟುಕೊಂಡು ಮಾಡಿರುವ ಸಿನಿಮಾ. ಅಕ್ಷನ್, ಮಾಸ್, ಕಾಮಿಡಿ, ಸಸ್ಪೆನ್ಸ್, ಲವ್ ಎಲ್ಲಾ ಥರದ ಅಂಶಗಳು ಚಿತ್ರದಲ್ಲಿವೆ ಎಂದರು. ನಿರ್ಮಾಪಕರಲ್ಲೊಬ್ಬರಾದ ಲೋಕೇಶ್ ಸವದಿ ಮಾತನಾಡಿ ಮೊದಲು ನನಗೆ ಸಿನಿಮಾ ಬಗ್ಗೆ ಅಂಥಾ ಇಂಟರೆಸ್ಟ್ ಇರಲಿಲ್ಲ. ಒಮ್ಮೆ ಶಿವಾಜಿ ಬಂದು ಈ ವಿಚಾರ ಹೇಳಿದರು. ಒಂದು ಐಟಂ ಸಾಂಗನ್ನು 5 ದಿನ ಮಾಡಿದ್ದನ್ನು ನೋಡಿದಾಗ ಚಿತ್ರತಂಡದವರು ಎಷ್ಟು ಎಫರ್ಟ್ ಹಾಕ್ತಾರೆ ಅನ್ನೋದು ಗೊತ್ತಾಯ್ತು ಎಂದು ಹೇಳಿದರು.
ವಿಲನ್ ಪಾತ್ರ ಮಾಡಿರುವ ಶಿವಾಜಿ ಮಾತನಾಡಿ ನನ್ನ ಒಂದೇ ಮಾತಿಗೆ ಸ್ನೇಹಿತರೂ ಆದ ಲೋಕೇಶ್ ಹಣ ಹಾಕಲು ಒಪ್ಪಿದರು. ಮರಳುದಂದೆ ನಡೆಸುವ ಖಳನಾಯಕ, ನಾಯಕಿಯ ತಾತನಾಗೂ ಕಾಣಿಸಿಕೊಂಡಿದ್ದೇನೆ ಎಂದರು. ನಾಯಕನ ತಾಯಿ ಪಾತ್ರಧಾರಿ ಗೀತಾ ರಾಘವೇಂದ್ರ, ಎರಡನೇ ನಾಯಕಿ ಕಾವ್ಯ ಚಿತ್ರದ ಕುರಿತು ಮಾತನಾಡಿದರು.
ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಿಸಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ನಿರ್ದೇಶಕ ದೇವು ಅವರೇ ಬರೆದಿದ್ದಾರೆ.
ಕಳೆದ ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಕೆ.ನರೇಂದ್ರ ಬಾಬು ಅವರು ನೆನಪಿರಲಿ ಪ್ರೇಮ್ ಅಭಿನಯದ ಪಲ್ಲಕ್ಕಿ, ರಾಘಣ್ಣ ಶೃತಿ ಅಭಿನಯದ 13 ಸೇರಿದಂತೆ ಹಲವಾರು ವಿಭಿನ್ನ ಜಾನರ್ ಚಿತ್ರಗಳನ್ನೇ ನಿರ್ದೇಶಿಸುತ್ತ ಬಂದಿದ್ದಾರೆ. ಈಗ ಅವರು ಮತ್ತೊಂದು ಹೊಸ ಪ್ರಾಜೆಕ್ಟ್ ನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ.
ದಶಕಗಳ ಹಿಂದೆ ನಟ ಕಮಲಹಾಸನ್ ಅಭಿನಯದಲ್ಲಿ ತೆರೆಕಂಡಿದ್ದ, ಸೂಪರ್ ಹಿಟ್ ಚಲನಚಿತ್ರವೊಂದರ ಶೀರ್ಷಿಕೆ ಇಟ್ಟುಕೊಂಡು ವಿಭಿನ್ನ ಪ್ರೇಮಕಥೆಯೊಂದನ್ನು ಹೇಳಹೊರಟಿದ್ದಾರೆ.
ವಿನ್ಸ್ ಡೆವಲಪರ್ಸ್ ಅರ್ಪಿಸಿ, ಎಸ್.ಕೆ. ಸಿನಿ ಎಂಟರ್ ಟೈನರ್ಸ್ ಅಡಿಯಲ್ಲಿ, ಶ್ರೀಮತಿ ಚೇತನಾ ಮಂಜುನಾಥ್ ಅವರು ನಿರ್ಮಿಸುತ್ತಿರುವ ಆ ಚಿತ್ರದ ಹೆಸರು “ಮರಿಯಾ ಮೈ ಡಾರ್ಲಿಂಗ್ “ ಇದು ಮತ್ತೊಂದು ಅಪ್ಪಟ ಪ್ರೇಮ ಕಾವ್ಯವಾಗಿದ್ದು ಕನ್ನಡ ಸಿನಿರಸಿಕರಿಗೆ ಹೊಸತನದ ಸಿಂಚನ ನೀಡುವ ಕಥಾಹಂದರವನ್ನು ಒಳಗೊಂಡಿದೆ.
ಬರುವ ನವೆಂಬರ್ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಆರಂಭಿಸಿ, ಉತ್ತರ ಭಾರತದ ಕಾಶ್ಮೀರ ಮತ್ತು ಸುತ್ತಮುತ್ತಲಿನ ರಮಣೀಯ ಸ್ಥಳಗಳಲ್ಲಿ ಶೂಟಿಂಗ್ ನಡೆಸುವ ಪ್ಲಾನ್ ಅನ್ನು ಚಿತ್ರತಂಡ ಹಾಕಿಕೊಂಡಿದೆ. ಚಿತ್ರದ ಕಲಾವಿದರು, ತಂತ್ರಜ್ಞರ ಬಗ್ಗೆ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವುದಾಗಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಕೆ. ನರೇಂದ್ರಬಾಬು ಅವರು ತಿಳಿಸಿದ್ದಾರೆ.
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಸಿನಿಮಾ ಲವ್ ರೆಡ್ಡಿ. ಟೈಟಲ್ ಹೇಳುವಂತೆ ಇದೊಂದು ಸುಂದರ ಪ್ರೇಮಕಥೆ ಜೊತೆಗೆ ಫ್ಯಾಮಿಲಿ ಎಮೋಷನಲ್ ಡ್ರಾಮಾ. ಈ ಸಿನಿಮಾ ಮೂಲಕ ಗಡಿನಾಡ ಪ್ರತಿಭೆ ಅಂಜನ್ ರಾಮಚಂದ್ರ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದು, ನಾಯಕಿಯಾಗಿ ಶ್ರಾವಣಿ ನಟಿಸಿದ್ದಾರೆ. ಈ ಹಿಂದೆ ಲವ್ ರೆಡ್ಡಿ ಸಿನಿಮಾದ ಫಸ್ಟ್ ಲುಕ್ ನ್ನು ನಟಸಿಂಹ ಬಾಲಯ್ಯ ಬಿಡುಗಡೆ ಮಾಡಿದ್ದರು. ಇದೀಗ ಫಸ್ಟ್ ಝಲಕ್ ನ್ನು ಜನಪ್ರಿಯ ಶಾಸಕರಾದ ಪ್ರದೀಪ್ ಈಶ್ವರ್ ಅನಾವರಣ ಮಾಡಿ ತಮ್ಮೂರಿನ ಸಿನಿಮೋತ್ಸಾಹಿಗಳಿಗೆ ಸಾಥ್ ಕೊಟ್ಟಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಅಂಜನ್ ರಾಮಚಂದ್ರ ನಮ್ಮ ಜಿಲ್ಲೆಯ ಹುಡುಗ. ಇನ್ಫೋಸಿಸ್ ನಾರಾಯಣ್ ಮೂರ್ತಿಯವರಿಗೆ ಜನ್ಮ ಕೊಟ್ಟ ಜಿಲ್ಲೆ ನಮ್ಮದು. ಎರಡು ಭಾರತ ರತ್ನ, ಎರಡು ಪದ್ಮಶ್ರೀ, ಒಂದು ಪದ್ಮಭೂಷಣ ಪಡೆದ ಜಿಲ್ಲೆ ನಮ್ಮದು. ಆರ್ ಆರ್ ಆರ್ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳಿಗೆ ಸಾಹಿತ್ಯ ಬರೆಯುವ ವರದರಾಜು ಚಿಕ್ಕಬಳ್ಳಾಪುರ ಇದ್ದಾರೆ. ಇಂತಹ ಜಿಲ್ಲೆಯಿಂದ ಅಂಜನ್ ರಾಮಚಂದ್ರನ್ ಹೀರೋ ಆಗಿ ಬರ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆ. ಕನ್ನಡಿಗರು ಈ ಚಿತ್ರವನ್ನು ಆರಾಧಿಸಬೇಕು. ಹಾರೈಸಬೇಕು ಎಂದರು.
ನಾಯಕ ಅಂಜನ್ ಮಾತನಾಡಿ, ಈ ಸಿನಿಮಾ ಶುರುವಾಗುವ ಮೊದಲು ನಾನು ನಮ್ಮ ಡೈರೆಕ್ಟರ್ ಸಾಕಷ್ಟು ಸ್ಟ್ರಗಲ್ ಮಾಡಿದ್ದೇವೆ. ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇವೆ. ಕಷ್ಟಪಟ್ಟು ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ತುಂಬಾ ಜನ ಈ ಚಿತ್ರಕ್ಕೆ ಬೆಂಬಲ ಕೊಟ್ಟಿದ್ದಾರೆ. ಈ ಸಿನಿಮಾದಿಂದ ತುಂಬಾ ಜನ ಇಂಡಸ್ಟ್ರೀಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ ಎಂದರು.
ನಿರ್ದೇಶಕ ಸ್ಮರಣ್ ರೆಡ್ಡಿ ಮಾತನಾಡಿ, ನಾನು ಮೂಲತಃ ಹೈದ್ರಾಬಾದ್. ಲವ್ ರೆಡ್ಡಿ ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬರ್ತಿದೆ. ಈ ಚಿತ್ರದ ಮೂಲಕ ನನ್ನ ಕನಸು ನನಸಾಗಿದೆ. ಕಳೆದ ಏಳು ವರ್ಷದಿಂದ ಸಿನಿಮಾ ಇಂಡಸ್ಟ್ರೀಯಲ್ಲಿ ಕೆಲಸ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದ ಎಂದರು.
ಲವ್ ರೆಡ್ಡಿ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಇಂಪ್ರೆಸ್ ಆಗಿ ಮೂಡಿಬಂದಿದ್ದು, ಗಾಢವಾದ ಪ್ರೇಮಛಾಯೆ ಕಾಣ್ತಿದೆ. ಲವ್ ಅಟ್ ಫಸ್ಟ್ ಸೈಟ್ ಎನ್ನುವಾಗ ಹಾಗೇ ನಾಯಕಿ ನೋಡಿ ಪ್ರೀತಿಯಲ್ಲಿ ಬೀಳುವ ನಾಯಕ ಲವ್ ರೆಡ್ಡಿ ಝಲಕ್ ಹೈಲೆಟ್. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಸ್ಮರಣ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ಹೆಜ್ಜೆ.
ಅಂಜನ್ ರಾಮಚಂದ್ರ ಒಂದಷ್ಟು ಕಿರುಚಿತ್ರ ಹಾಗೂ ವೆಬ್ ಸೀರೀಸ್ ಗಳಲ್ಲಿ ನಟಿಸಿರುವ ಅನುಭವವಿದೆ. ನಿರ್ದೇಶಕ ಸ್ಮರಣ್ ಜೊತೆಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು, ಇದೀಗ ನಾಯಕನಾಗಿ ಚೊಚ್ಚಲ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಹೊಸ ಕನಸ್ಸಿನೊಂದಿಗೆ ಅಂಜನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಲವ್ ರೆಡ್ಡಿ ಸಿನಿಮಾ ಮೂಲಕ ಒಂದಷ್ಟು ಯುವ ಸಿನಿಮೋತ್ಸಾಹಿಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರ ಸುತ್ತಮುತ್ತ ಲವ್ ರೆಡ್ಡಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಸೆಹೇರಿ ಸ್ಟುಡಿಯೋ, ಎಂಜಿಆರ್ ಫಿಲಂಸ್, ಗೀತಾಂಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುನಂದಾ ಬಿ ರೆಡ್ಡಿ, ಮದನ್ ಗೋಪಾಲ್ ರೆಡ್ಡಿ, ಪ್ರಭಂಜನ್ ರೆಡ್ಡಿ, ಹೇಮಲತಾ ರೆಡ್ಡಿ, ನಾಗರಾಜ್ ಬೀರಪ್ಪ ನಿರ್ಮಾಣ ಮಾಡಿದ್ದಾರೆ. ಪ್ರಿನ್ಸ್ ಹೆನ್ರಿ ಸಂಗೀತ ಸಂಯೋಜನೆ, ಅಷ್ಕರ್ ಅಲಿ ಛಾಯಾಗ್ರಾಹಣ, ಬಾಹುಬಲಿಯ ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಲವ್ ರೆಡ್ಡಿ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.
‘ ನಾನು ಕೋ ಕೋ ಕೋಳಿಕ್ಕೆ ರಂಗ…’ ಬಹುಶಃ ಈ ಹಾಡನ್ನು ಕೇಳದವರೇ ಇಲ್ಲ. ಈ ಹಾಡು ಇಂದಿಗೂ ಎವರ್ ಗ್ರೀನ್. ಇಷ್ಟಕ್ಕೂ ಈ ಹಾಡಿನ ಬಗ್ಗೆ ಹೇಳೋಕೆ ಕಾರಣ ‘ ನಾ ಕೋಳಿಕ್ಕೆರಂಗ’ ಸಿನಿಮಾ. ಹೌದು, ಮಾಸ್ಟರ್ ಆನಂದ್ ಈ ಸಿನಿಮಾದ ಹೀರೋ. ಇದೊಂದು ಹಳ್ಳಿ ಕಥೆ. ಸಿನಿಮಾದ ಶೀರ್ಷಿಕೆ ಹೇಳುವಂತೆ, ಕೋಳಿ ಹಾಗು ರಂಗನ ಕಥೆ. ಅದೊಂದು ಅಪರೂಪದ ಭಾವ ಸಂಗಮ. ಈ ಚಿತ್ರ ಈಗ ತೆರೆಗೆ ಬರಲು ಸಜ್ಜಾಗಿದೆ. ನವೆಂಬರ್ 10 ರಂದು ರಿಲೀಸ್ ಆಗುತ್ತಿದೆ.
ತಮ್ಮ ಸಿನಿಮಾ ಬಗ್ಗೆ ಮಾತಿಗಿಳಿದ ನಾಯಕ ಮಾಸ್ಟರ್ ಆನಂದ್, ‘ಕೊರೊನಾ ಮೊದಲು ಚಿತ್ರ ಶುರುವಾಗಿತ್ತು. ಆ ನಂತರ ಸಮಸ್ಯೆ ಎದುರಾಯ್ತು. ಈಗ ಸಿನಿಮಾ ಪ್ರೇಕ್ಷಕರ ಎದುರು ಬರಲು ರೆಡಿಯಾಗಿದೆ. ಚಿತ್ರದಲ್ಲೊಂದು ಹಾಡಿದೆ. ‘ ಮರೆಯೋದುಂಟೆ ಮೈಸೂರ ದೊರೆಯ’ ಈ ಹಾಡು ಹೈಲೆಟ್. ಮೈಸೂರು ದಸರಾ ಮತ್ತು ಮಹಾರಾಜರ ಬಗ್ಗೆ ವಿಷಯವಿದೆ. ಹಾಗಾಗಿ ದಸರಾ ವೇಳೆ ರಿಲೀಸ್ ಮಾಡುವ ಉದ್ದೇಶ ಇತ್ತು. ನವೆಂಬರ್ 10 ರಂದು ಬಿಡುಗಡೆ ಆಗಲಿದೆ ಎಂದರು.
ಇಲ್ಲಿ ಕೋಳಿ ರಂಗ ಮತ್ತು ಅಮ್ಮನ ಕಥೆ ಇದೆ. ಮಂಡ್ಯ ಭಾಗದಲ್ಲೇ ಶೇ. 90 ರಷ್ಟು ಚಿತ್ರೀಕರಣ ಮಾಡಿದ್ದೇವೆ. ಅಲ್ಲಿನ ಸಂತೆ ಕಸಲಗೆರೆ ಎಂಬ ಊರಲ್ಲಿ ಶೂಟಿಂಗ್ ಆಗಿದ್ದು ವಿಶೇಷ. ಮಂಡ್ಯ ಮೈಸೂರು ಸೊಗಡಿನ ಭಾಷೆ ಇದೆ.
ಇನ್ನು ಭವ್ಯಾ ಮೇಡಮ್ ಅವರು ತಾಯಿ ಪಾತ್ರ ಮಾಡಿದ್ದಾರೆ. ಅವರು ಹಿರಿಯ ಕಲಾವಿದರು. ನನ್ನ ತಾಯಿ ಪಾತ್ರ ಮಾಡಲು ಒಪ್ಪಿದ್ದೇ ಖುಷಿ. ಇದೊಂದು ರೀತಿ ಟ್ರಯಂಗಲ್ ಸ್ಟೋರಿ. ಹಾಗಂತ ಲವ್ ಸ್ಟೋರಿ ಅಲ್ಲ, ಕೋಳಿ ರಂಗ ಮತ್ತು ಅಮ್ಮನ ವಾತ್ಸಲ್ಯದ ಕಥೆ ಇದೆ. ಕೋಳಿ ಮತ್ತು ಅಮ್ಮನ ಮೇಲೆ ರಂಗನಿಗೆ ಪ್ರೀತಿ. ಘಟನೆ ಒಂದರಲ್ಲಿ ರಂಗನಿಗೆ ಈ ಎರಡರಲ್ಲಿ ಯಾವುದು ಮುಖ್ಯ ಆಗುತ್ತೆ ಅನ್ನೋದು ಸಸ್ಪೆನ್ಸ್.
ಇಲ್ಲಿ ಮನರಂಜನೆ ಜಾಸ್ತಿ ಇದೆ. ರಾಜೇಶ್ವರಿ ಅವರು ನಾಯಕಿಯಾಗಿ ಚೆನ್ನಾಗಿ ನಟಿಸಿದ್ದಾರೆ. ಹಳ್ಳಿ ಪ್ರಭಾವಿ ವ್ಯಕ್ತಿ ಮೇಲೆ ದ್ವೇಷ ಬರಲು ನಾಯಕಿ ಕಾರಣ. ಊರು ಬಿಡೋಕು ನಾಯಕಿ ಕಾರಣ ಆಗುತ್ತಾಳೆ. ಕಾಮಿಡಿ ಕಿಲಾಡಿ ತಂಡ ಕೂಡ ನಟಿಸಿದೆ.
ಉಳಿದಂತೆ ಹಾಸ್ಯ ಸನ್ನಿವೇಶದಲ್ಲಿ ಸ್ವತಂತ್ರ ನೀಡಿದ್ದಾರೆ. ನಿರ್ಮಾಪಕ ಸೋಮಶೇಖರ್ ಕೂಡ ಸಿನಿಮಾಗೆ ಯಾವ ಕೊರತೆ ಇಲ್ಲದಂತೆ ಮಾಡಿದ್ದಾರೆ. ರಾಜು ಎಮ್ಮಿಗನೂರು ಸಂಗೀತ ಇದೆ. ಇದೇ ಮೊದಲ ಸಲ ಅಪ್ಪು ಅವರು ನನ್ನ ಸಿನಿಮಾದ ಇಂಟ್ರಡಕ್ಷನ್ ಸಾಂಗ್ ಹಾಡಿದ್ದಾರೆ. ಅದು ಮರೆಯದ ಅನುಭವ ಎಂದರು ಮಾಸ್ಟರ್ ಆನಂದ್.
ನಿರ್ದೇಶಕ ಗೊರವಾಲೆ ಮಹೇಶ್ ಮಾತನಾಡಿ, ಇದು ನನ್ನ ಮೊದಲ ಚಿತ್ರ. ಮೌಢ್ಯಗಳ ಕುರಿತು ಕಥೆ ಸಾಗಲಿದೆ. ಹರಕೆಗೆ ಬಲಿ ಬಗ್ಗೆಯ ಹಳ್ಳಿ ಕಥೆ ಇದೆ. ಒಂದೊಳ್ಳೆಯ ವಿಷಯ ಈ ಮೂಲಕ ಹೇಳ ಹೊರಟಿದ್ದೇನೆ. ಮಾಸ್ಟರ್ ಆನಂದ್ ಅದ್ಭುತವಾಗಿ ನಟಿಸಿದ್ದಾರೆ. ಭವ್ಯಾ ಮೇಡಮ್ ತಾಯಿ ಪಾತ್ರದ ಮೂಲಕ ಭಾವುಕತೆ ಹೆಚ್ಚಿಸುತ್ತಾರೆ. ಇಡೀ ಚಿತ್ರ ನಗಿಸುತ್ತಲೇ ಭಾವುಕತೆಗೆ ದೂಡುತ್ತದೆ ಎಂದರು ಗೊರವಾಲೆ ಮಹೇಶ್.
ಹಿರಿಯ ಕಲಾವಿದೆ ಭವ್ಯಾ ಮಾತನಾಡಿ, ಒಂದು ಭಾವನಾತ್ಮಕ ವಿಷಯದ ಸುತ್ತ ಕಥೆ ಸಾಗಲಿದೆ. ಹಳ್ಳಿ ಜನರ ಭಾವನೆಗಳು, ತುಡಿತ ಹೇಗೆಲ್ಲಾ ಇರುತ್ತೆ ಎಂಬುದು ಇಲ್ಲಿ ಹೈಲೆಟ್. ಕೋಳಿ ಮತ್ತು ಮಗನ ಸುತ್ತ ನಡೆಯುವ ಕಥೆ ಎಲ್ಲರಿಗೂ ಇಷ್ಟ ಆಗುತ್ತೆ ಎಂದರು ಭವ್ಯಾ.
ನಿರ್ಮಾಪಕ ಎಸ್.ಟಿ. ಸೋಮಶೇಖರ್ ಮಾತನಾಡಿ, ಕೋಳಿ ಮತ್ತು ಹೀರೋ ನಡುವಿನ ಭಾವನಾತ್ಮಕ ಕಥೆ ಇಲ್ಲಿದೆ. ಮಗಳು ರಾಜೇಶ್ವರಿ ನಾಯಕಿಯಾಗಿದ್ದಾರೆ. ಹೊಸ ಬಗೆಯ ಕಥೆ ಇಲ್ಲಿದೆ. ಮನರಂಜನಾ ಅಂಶಗಳು ಹೆಚ್ಚಾಗಿವೆ. ನಿಮ್ಮೆಲ್ಲರ ಬೆಂಬಲ ಇರಲಿ ಎಂದರು ಸೋಮಶೇಖರ್.
ನಾಯಕಿ ರಾಜೇಶ್ವರಿ ಅವರಿಗೆ ಇದು ಮೊದಲ ಚಿತ್ರ. ಮೊದಲ ಸಲ ಕ್ಯಾಮೆರಾ ಮುಂದೆ ನಿಂತಾಗ ಭಯ ಆಯ್ತು. ಆನಂದ್ ಸರ್ ಧೈರ್ಯ ತುಂಬಿ ನಟಿಸಲು ಉತ್ಸಾಹ ತುಂಬಿದರು. ಭವ್ಯಾ ಮೇಡಂ ಜೊತೆ ನಟಿಸಿದ್ದು ಮರೆಯದ ಅನುಭವ ಅಂದರು.
ಸಂಕಲನಕಾರ ವಿಶ್ವ ಅವರಿಗೆ ಈ ಚಿತ್ರ ವಿಶೇಷ. ಕಾರಣ, ಇಲ್ಲಿ ಮೈಸೂರು ಮಹಾರಾಜರ ಹಾಡು ಜನರನ್ನು ತಲುಪುತ್ತೆ ಎಂಬುದು. ಆ ಹಾಡಿನ ಮೂಲಕ ರಾಜರ ಬಗ್ಗೆ ಹೇಳಲು ಸಾಧ್ಯವಾಗಿದೆ ಎಂದರು.
ಚಿತ್ರಕ್ಕೆ ಧನಪಾಲ್ ಮತ್ತು ಬೆಟ್ಟೇಗೌಡ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಪುಂಗ, ಶಕೀಲಾ,ಇತರರು ನಟಿಸಿದ್ದಾರೆ.
ಇದು ಗಂಡ ಹೆಂಡತಿಯ ಚಿತ್ರ. ನಟಿ ಇಳಾ ವಿಟ್ಲ ಹಾಗು ಆರ್ಯನ್ ಕಾಂಬೆನೇಷನ್ ನಲ್ಲಿ ಕಚೋರಿ ಸಿನಿಮಾ ಮೂಡಿ ಬಂದಿದೆ. ಸದ್ಉ ಬಿಡುಗಡೆ ತಯಾರಿಯಲ್ಲಿದೆ.
ಕಚೋರಿ ಎಲ್ಲರೂ ಇಷ್ಟಪಡುವ ಖಾದ್ಯ. ಈ ಹೆಸರಲ್ಲಿ ಚಿತ್ರವೊಂದು ನಿರ್ಮಾಣವಾಗಿದೆ. ಅದು ರಿಲೀಸ್ ಆಗೋಕು, ಸಿದ್ದವಾಗಿದೆ. ಸಿನಿವೇ ಸಿನಿ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ಆರ್ಯನ್ ಅವರು ನಿರ್ಮಾಣ ಮಾಡುವುದರ ಜೊತೆಗೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ. ಆರ್ಯನ್ ಈ ಚಿತ್ರದ ನಾಯಕರೂ ಆಗಿದ್ದು, ಇಳಾ ವಿಟ್ಲ ನಾಯಕಿ. ಹಿರಿಯ ನಟ ಕೀರ್ತಿರಾಜ್ ಒಬ್ಬ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕ, ನಿರ್ದೇಶಕ ಆರ್ಯನ್, ನಾನು ಸಿನಿವೇ ಸಿನಿ ಆಕ್ಟಿಂಗ್ ಕ್ಲಾಸಸ್ ನಡೆಸುತ್ತಿದ್ದು, ಆರಂಭದಲ್ಲಿ ಒಂದು ಮಕ್ಕಳ ಚಿತ್ರ ಮಾಡಬೇಕೆಂದುಕೊಂಡಿದ್ದೆ. ನಂತರ ಕೋವಿಡ್ ಸಮಯದಲ್ಲಿ ಚಿತ್ರವನ್ನು ಆರಂಭಿಸಿದೆವು. ಸ್ನೇಹಿತರಾದ ರಮೇಶ್, ಮಂಜುನಾಥ್, ಖಾಜಾಹುಲಿ ಇವರೆಲ್ಲ ನನಗೆ ತುಂಬಾ ಸಪೋರ್ಟ್ ಮಾಡಿದರು. ಚಿತ್ರದಲ್ಲಿ ನಾಯಕ ಕಚೋರಿ ಮಾರುವ ಹುಡುಗ, ಆತ ಶ್ರೀಮಂತ ಹುಡುಗಿಯನ್ನು ಲವ್ ಮಾಡುತ್ತಾನೆ. ನಂತರ ಬ್ರೇಕಪ್ ಆಗುತ್ತೆ, ಏಕೆ ಬ್ರೇಕಪ್ ಆಯ್ತು, ಅದಕ್ಕೆ ಕಾರಣ ಏನು ? ಎಂದು ಹುಡುಕುವುದೇ ಚಿತ್ರದ ಎಳೆ. ಗಂಗಾವತಿ ಸುತ್ತಮುತ್ತ ಟಾಕೀ ಪೋರ್ಷನ್ ಮುಗಿಸಿ, ವಿಜಯ ಪ್ರಕಾಶ್ ಹಾಡಿದ ಡ್ಯುಯೆಟ್ ಸಾಂಗನ್ನು ಮನಾಲಿಯಲ್ಲಿ ಶೂಟ್ ಮಾಡಿದ್ದೇವೆ. ಕೆಂಪೇಗೌಡ, ಮೋಹನ್ ಜುನೇಜಾ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಫ್ಯಾಮಿಲಿ ಕೂತು ನೋಡುವಂಥ ಚಿತ್ರ ಇದಾಗಿದ್ದು, ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ ಎಂದರು.
ಹಿರಿಯ ನಟ ಕೀರ್ತಿರಾಜ್ ಮಾತನಾಡಿ ಚಿತ್ರದಲ್ಲಿ ನಾನೊಬ್ಬ ಡಾನ್ ಆಗಿ ನಟಿಸಿದ್ದು, ಜೀವನದಲ್ಲಿ ನೊಂದ ನಾಯಕ, ನನ್ನ ಆಶ್ರಯಕ್ಕೆ ಬಂದು ಅಲ್ಲಿ ಹೇಗೆ ಬೆಳೆಯುತ್ತಾನೆಂಬುದೇ ಕಥೆ, ಆರ್ಯನ್, ಇಳಾ ವಿಟ್ಲ ಇಬ್ಬರೂ ನನ್ನನ್ನು ತಂದೆ ಥರ ನೋಡಿಕೊಂಡರು. ಆರ್ಯನ್ ಮೊದಲ ಚಿತ್ರವಾದರೂ ಹತ್ತಾರು ಸಿನಿಮಾ ಮಾಡಿದವರಂತೆ ಕೆಲಸ ತೋರಿಸಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ಕೃಪಾಕರ್ ಮಾತನಾಡಿ ಈ ಸಿನಿಮಾ ಕಚೋರಿಯಷ್ಟೇ ಚೆನ್ನಾಗಿದೆ. ಮೊದಲು ಹೊಸಬರನ್ನು ನಾಯಕರನ್ನಾಗಿ ಮಾಡಬೇಕೆಂದುಕೊಂಡಿದ್ದರು, ಕಾರಣಾಂತರಗಳಿಂದ ಅವರೇ ನಟಿಸಬೇಕಾಯ್ತು. ಚಿತ್ರದಲ್ಲಿ ೨ ಡ್ಯುಯೆಡ್, ಐಟಂ, ಟೀಸಿಂಗ್, ಫೀಲಿಂಗ್ ಸೇರಿ ೫ ವೆರೈಟಿ ಹಾಡುಗಳಿವೆ. ಹೊಸ ಪ್ರತಿಭೆ ಪ್ರತಾಪ್‌ರೆಡ್ಡಿ ಅವರಿಂದ ಹಾಡೊಂದನ್ನು ಬರೆಸಿದ್ದೇನೆ ಎಂದರು. ನಾಯಕಿ ಇಳಾವಿಟ್ಲಾ ಮಾತನಾಡಿ ನಾಯಕಿಯಾಗಿ ಇದು ನನ್ನ ೩ನೇ ಚಿತ್ರ. ಕಾಲೇಜ್ ಯುವತಿ ನಂತರ ರಾಜಕಾರಣಿಯಾಗಿ ಎರಡು ಶೇಡ್ ಇರುವ ಪಾತ್ರ ಮಾಡಿದ್ದೇನೆ. ಯಾಕೆ ಅವಳು ಈಥರ ಮಾಡ್ತಾಳೆ ಅನ್ನೋದನ್ನು ಕಂಡುಹಿಡಿಯುವುದೇ ಚಿತ್ರದ ಎಳೆ ಎಂದರು.
ಕೆಂಪೇಗೌಡ ಮಾತನಾಡಿ ಚಿತ್ರದುದ್ದಕ್ಕೂ ಆರ್ಯನ್ ಜೊತೆ ಇರುವ, ಆತನ ಲವ್‌ಗೆ ಸಪೋರ್ಟ್ ಮಾಡುವ ಗೆಳೆಯನ ಪಾತ್ರ ಮಾಡಿದ್ದೇನೆ ಎಂದರು. ಸಾಹಿತಿ ಪ್ರತಾಪ್‌ರೆಡ್ಡಿ ಮಾತನಾಡಿ ನಾನು ಆಕ್ಟಿಂಗ್ ಕಲಿಯಲು ಇವರಬಳಿ ಹೋಗಿದ್ದೆ. ಬರವಣಿಗೆ ನನ್ನ ಹವ್ಯಾಸ. ಮೊದಲು ಒಂದು ಹಾಡು ಬರೆಸಿದರು. ಅದು ಅವರಿಗೆ ಇಷ್ಟವಾಗಿ ಎಲ್ಲಾ ಹಾಡುಗಳನ್ನು ನನ್ನಕೈಲೇ ಬರೆಸಿದರು ಎಂದರು. ಆರ್ಯನ್ ಸ್ನೇಹಿತ ಗಂಗಾವತಿಯ ಖಾಜಾಹುಲಿ ಮಾತನಾಡಿ ನಾನೊಬ್ಬ ಸ್ಟೇಜ್ ಆರ್ಟಿಸ್ಟ್, ಒಂದು ಪಾತ್ರ ಮಾಡುವ ಜೊತೆಗೆ ಹಾಡನ್ನೂ ಹಾಡಿದ್ದೇನೆ ಎಂದರೆ, ವಿಲನ್ ಪಾತ್ರ ಮಾಡಿರುವ ಮಂಜುನಾಥ್, ಕಾಮಿಡಿ ಪಾತ್ರಧಾರಿ ದೊಡ್ಡ ಬಸವರಾಜ್ ಇವರೆಲ್ಲ ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಂಡರು. ವಿಶೇಷವಾಗಿ ನಟ ಧರ್ಮ ಕೀರ್ತಿರಾಜ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ,
ಈ ಹಿಂದೆ ಇಂಜಿನಿಯರ್ಸ್ ಮತ್ತು ಗಂಡುಲಿ ಎಂಬ ಚಿತ್ರ ನಿರ್ದೇಶಿಸಿದ್ದ ವಿನಯ್ ರತ್ನಸಿದ್ದಿ ಈಗ ಮತ್ತೊಂದು ಪ್ರೇಮಕಥೆ ಹಿಡಿದುಕೊಂಡು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇದೇ ತಿಂಗಳಲ್ಲಿ ತೆರೆಗೆ ಬರಲು ಸಿದ್ದವಾಗಿರುವ ಪ್ರೇಮಂ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿನಯ್ ರತ್ನಸಿದ್ದಿ ಅವರೇ ಚಿತ್ರದ ನಾಯಕನಾಗಿ ನಟಿಸುವುದರ ಜೊತೆಗೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ. ಶಕುಂತಲಾ, ವೈಷ್ಣವಿ, ಸುಶ್ಮಿತಾ, ಮಂಜುಶ್ರೀ, ಕಾವೇರಿ ಹಾಗೂ ಪ್ರಿಯಾಂಕಾ ಸೇರಿ ಆರು ನಾಯಕಿಯರು ಚಿತ್ರದಲ್ಲಿದ್ದಾರೆ. ರತ್ನಸಿದ್ದಿ ಫಿಲಂಸ್ ಮೂಲಕ ಚಂದನ, ಅಮರೇಂದ್ರ ವರದ ಹಾಗೂ ಪ್ರಸಾದ್ ಬಿಜಿ, ಈ ಚಿತ್ರವನ್ನು ನಿರ್ಮಿಸಿದ್ದಾರೆ.
ನಾಯಕ ವಿನಯ್ ರತ್ನಸಿದ್ದಿ ಮಾತನಾಡಿ, ಪರಿಶುದ್ದವಾದ ಪ್ರೇಮಕ್ಕೆ ಎಂದೂ ಸಾವಿಲ್ಲ ಎಂದು ಹೇಳುವ ಕಥೆ ನಮ್ಮ ಪ್ರೇಮಂ ಟುಟು ಚಿತ್ರದಲ್ಲಿದೆ. ಫಸ್ಟ್ ಲಾಕ್‌ಡೌನ್‌ನಲ್ಲಿ ಎರಡು ಪಾತ್ರಗಳನ್ನಿಟ್ಟುಕೊಂಡು ಈ ಚಿತ್ರವನ್ನು ಪ್ರಾರಂಭಿಸಿದ್ದೆವು. ಅದೀಗ 200 ಪಾತ್ರಗಳಾಗಿದೆ. ಟುಟು ಎಂದರೆ 2 ವಿಕ್ಟರಿ, 2 ಥಿಂಕಿಂಗ್ ಏನಾದರೂ ಆಗಬಹುದು. ಚಿತ್ರದಲ್ಲಿ ಎರಡು ರೀತಿಯ ಆಲೋಚನೆಗಳ ಬಗ್ಗೆ ಹೇಳಿದ್ದೇವೆ, ಬುದ್ದಿನಂತನಲ್ಲದ, ಹೆಡ್ಡನಂತಿರುವ ನಾಯಕನ ಜೀವನದಲ್ಲಿ ಬರುವ ತಿರುವುಗಳು, ಆತನಿಗಾಗುವ ಪ್ರೀತಿ, ಆ ಪ್ರೀತಿಯಿಂದಾಗುವ ತೊಳಲಾಟಗಳು, ಅದರಿಂದ ಆತ ಹೇಗೆ ಹೊರಬರುತ್ತಾನೆ ಎನ್ನುವುದೇ ಪ್ರೇಮಂ ಟುಟು ಕಥೆ.
ಚಿತ್ರದಲ್ಲಿ ಬಿಟ್ ಸೇರಿ 4 ಹಾಡುಗಳು, 4 ಫೈಟ್‌ಗಳಿವೆ. ನಾಯಕನ ಜೀವನದಲ್ಲಿ ಆರು ಜನ ನಾಯಕಿಯರು ಒಂದೊದು ಹಂತದಲ್ಲಿ ಬಂದು ಪ್ರೀತಿಯ ಅನುಭವ ತೋರಿಸುತ್ತಾರೆ. ಅವರಲ್ಲಿ ಯಾರದು ಪರಿಶುದ್ದವಾದ ಪ್ರೀತಿ, ಅದು ಆತನಿಗೆ ಸಿಗುತ್ತೋ ಇಲ್ಲವೋ ಎನ್ನುವುದು ಚಿತ್ರದ ಕೊನೆಯಲ್ಲಿ ಗೊತ್ತಾಗುತ್ತದೆ, ಈ ಹಂತದಲ್ಲಿ ಉಂಟಾಗುವ ಗೊಂದಲಗಳು ಆತನ ಬದುಕುವ ರೀತಿಯನ್ನೇ ಬದಲಾಯಿಸುತ್ತವೆ. ಈ 6 ಜನ ನಾಯಕಿಯರು ಕಥೆಗೆ ಪೂರಕವಾಗಿಯೇ ಬರುತ್ತಾರೆ, ತುಮಕೂರು ಬಳಿಯ ಹೊನ್ನುಡಿಕೆಯಲ್ಲಿ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಉಳಿದಂತೆ ಬೆಂಗಳೂರು, ವಿಮಾನ ನಿಲ್ದಾಣ ಸೇರಿ 70 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಒಂದಷ್ಟು ಜನರಿಗೆ ಪ್ರೀಮಿಯರ್ ಹಾಕಿದಾಗ ಒಳ್ಳೇಚಿತ್ರ ಎಂಬ ಅಭಿಪ್ರಾಯ ಬಂತು. ಒಳ್ಳೇ ರೇಟಿಗೆ ಡಬ್ಬಿಂಗ್ ರೈಟ್ಸ್ ಕೇಳ್ತಿದ್ದಾರೆ ಎಂದು ಹೇಳಿದರು.
ನಿರ್ಮಾಪಕ ತಿಪಟೂರು ಪ್ರಸಾದ್ ಮಾತನಾಡಿ, ನಾನು ಪ್ರೈವೇಟ್ ಸೆಕ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಟ್ರೇಲರ್ ನೋಡಿದಾಗ ಇಷ್ಟವಾಯ್ತು, ತುಂಬಾ ಎಫರ್ಟ್ ಹಾಕಿ ಸಿನಿಮಾ ಮಾಡಿದ್ದಾರೆ ಎಂದರು. ಮತ್ತೊಬ್ಬ ನಿರ್ಮಾಪಕ ಅಮರೇಂದ್ರ ವರದ ಮಾತನಾಡಿ, ವಿನಯ್ ಜೊತೆ 2017ರಿಂದಲೂ ನಾನಿದ್ದೇನೆ. ಇಬ್ಬರೂ ಸೇರಿ ಇಂಜಿನಿಯರ್, ಗಂಡುಲಿ ನಂತರ ಈ ಚಿತ್ರವನ್ನು ಮಾಡಿದ್ದೇವೆ ಎಂದರು.
ನಾಯಕಿಯರ ಪೈಕಿ ಮಂಜುಶ್ರೀ ಮಾತನಾಡಿ, ನಾನು ಮೂಲತಃ ಮಾಡೆಲ್, ಈಗಾಗಲೇ 2 ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇನ್ನು ಈ ಚಿತ್ರದ ಹಾಡುಗಳಿಗೆ ಅಜಯ್ ಶ್ರೀನಿವಾಸಮೂರ್ತಿ ಅವರ ಸಂಗೀತ ಸಂಯೋಜನೆಯಿದ್ದು, ಆನಂದ್ ಇಳಯರಾಜಾ, ಅರುಣ್ ಮತ್ತು ಮನು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ,
ಅಲ್ಲದೆ ಈ ಚಿತ್ರಕ್ಕೆ ವಿನಯ್ ಅವರ ಸಂಕಲನ, ನಾಗರಾಜ ಹುಲಿವಾನ್ ಅವರ ಡಿಟಿಎಸ್, ಯೇಷನ್ ಅವರ ವಿಎಫ್‌ಎಕ್ಸ್ ಕೆಲಸವಿದೆ,ಚಂದ್ರಪ್ರಭ, ಲೋಕೆಶ್ ರಾಜಣ್ಣ,ಉಮೇಶ್ ಕಿನ್ನಾಳ,ಶಿವಮೊಗ್ಗ ರಾಮಣ್ಣ ಮುಂತಾದವರ ತಾರಬಳಗವಿದೆ
ಬಹುಭಾಷಾ ನಟಿ ಮಹಾಲಕ್ಷ್ಮಿ ನಟನೆಗೆ ಕಮ್ಬ್ಯಾಕ್ ಮಾಡಿದ್ದಾರೆ. ಅವರು ನಟಿಸಿರುವ ‘ಟಿಆರ್ಪಿ ರಾಮ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ TRP ರಾಮ ಟ್ರೇಲರ್ ಅನಾವರಣಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.ಕಮರ್ಷಿಯಲ್ ಅಂಶಗಳ ಜೊತೆಗೆ ಒಳ್ಳೆಯ ಸಂದೇಶ ಇಟ್ಟುಕೊಂಡು ನಿರ್ಮಾಣವಾಗಿರುವ ಈ ಚಿತ್ರ ಸೆನ್ಸಾರ್ ಪಾಸಾಗಿದ್ದು, ಯು/ ಎ ಸರ್ಟಿಫಿಕೇಟ್ ಸಿಕ್ಕಿದೆ.
‘TRP ರಾಮ’ ಸಿನಿಮಾಗೆ ರವಿಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲೂ ಅವರು ನಟಿಸಿದಾರೆ. ‘ಅಶುತೋಶ್ ಪಿಕ್ಚರ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣವಾಗಿದೆ. ತಾಯಿ ಪಾತ್ರದಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಪತ್ರಕರ್ತೆಯಾಗಿ ಸ್ಪರ್ಶ ಅಭಿನಯಿಸಿದ್ದಾರೆ.
ರಾಜ್ ಗುರು ಹೊಸಕೋಟೆ ಅವರು ಸಂಗೀತ ನೀಡಿದ್ದಾರೆ. ಸುನಿಲ್ ಕಶ್ಯಪ್ ಅವರು ಸಂಕಲನ ಮತ್ತು ಗುರುಪ್ರಸಾದ್ ಅವರು ಛಾಯಾಗ್ರಹಣ ಮಾಡಿದ್ದಾರೆ. ರಾಕೇಶ್ ಆಚಾರ್ಯ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.
TRP ಸತ್ಯ ಘಟನೆಗಳನ್ನ ಆಧರಿಸಿ ಬರ್ತಿರೋ ಸಿನಿಮಾ ಆಗಿದೆ. ಚಿತ್ರದ ನಿರ್ದೇಶಕ ರವಿ ಪ್ರಸಾದ್ ಇಲ್ಲಿ ಆ ವಿಕೃತ ರಾಮನ ಪಾತ್ರ ಮಾಡಿದ್ದಾರೆ. ಆದರೆ ಇಲ್ಲಿ “TRP” ಅಂದ್ರೇನೂ ಅನ್ನೋ ಪ್ರಶ್ನೆ ಕುತೂಹಲಕ್ಕೆ ನವೆಂಬರ್ ತಿಂಗಳಲ್ಲಿ ಉತ್ತರ ಸಿಗಲಿದೆ. ಅಂದರೆ TRP ರಾಮ ಸಿನಿಮಾ ನವೆಂಬರ್ ಮೊದಲ ವಾರ ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸಿದೆ.
ವಿಭಿನ್ನ ಹೆಸರಿನ ಮೂಲಕ ಗಮನ ಸೆಳೆಯುತ್ತಿರುವ ಕ್ಲಾಂತ ಸಿನಿಮಾದ ಟೀಸರ್ A2 ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಸಂಗೀತ ಭಟ್ ಕಂಬ್ಯಾಕ್ ಚಿತ್ರ ಇದಾಗಿದ್ದು, ಸಾಕಷ್ಟು ನಿರೀಕ್ಷೆ ಇದೆ. ಈ ನಿರೀಕ್ಷೆಯನ್ನು ದ್ವಿಗುಣ ಮಾಡುವ ರೀತಿಯಲ್ಲಿ ಈ ಚಿತ್ರದ ಟೀಸರ್ ಮೂಡಿ ಬಂದಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಕ್ಲಾಂತ ಟೀಸರ್ ಇದ್ದು , ಸಂಗೀತ ಅವರ ನಟನೆ ಎಲ್ಲರ ಗಮನ ಸೆಳೆದಿದೆ.
ರಂಗನ್ ಸ್ಟೈಲ್, ದಗಲು ಬಾಜಿಲು ಸೇರಿದಂತೆ ಬೇರೆ ಬಗೆಯ ಜಾನರ್ ಚಿತ್ರ ನಿರ್ದೇಶಿರುವ ವೈಭವ್ ಪ್ರಶಾಂತ್ ಕ್ಲಾಂತ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ದಟ್ಟ ಅರಣ್ಯಕ್ಕೆ ತೆರಳುವ ಇಬ್ಬರು ಪ್ರೇಮಪಕ್ಷಿಗಳನ್ನು ಗ್ಯಾಂಗ್ ಒಂದು ಅಟ್ಯಾಕ್ ಮಾಡುತ್ತದೆ. ಆ ಗ್ಯಾಂಗ್ ನಿಂದ ಆ ಜೋಡಿ ಹೇಗೆ ತಪ್ಪಿಕೊಂಡು ಬರ್ತಾರೆ.
ಅವರ ವಿರುದ್ಧ ಹೇಗೆ ಹೋರಾಡುತ್ತಾರೆ ಅನ್ನೋದನ್ನು ಟೀಸರ್ ನಲ್ಲಿ ಕೊಡಲಾಗಿದೆ. ಎಂ ವಿಘ್ನೇಶ್ ನಾಯಕನಾಗಿ, ಸಂಗೀತ ಭಟ್ ನಾಯಕಿಯಾಗಿ ನಟಿಸುತ್ತಿದ್ದು, ಉಳಿದಂತೆ ಶೋಭರಾಜ್ , ವೀಣಾ ಸುಂದರ್ , ಕಾಮಿಡಿ ಕಿಲಾಡಿ ದೀಪಿಕಾ , ಪ್ರವೀಣ್ ಜೈನ್ , ಯುವ , ತಿಮ್ಮಪ್ಪ ಕುಲಾಲ್ , ಸ್ವಪ್ನ , ರಾಘವೇಂದ್ರ ಕಾರಂತ್ , ಪಂಚಮಿ ವಾಮಂಜೂರ್ , ವಾಮದೇವ ಪುಣಿಂಚತ್ತಾಯ ಮುಂತಾದ ತಾರಾಬಳಗದಲ್ಲಿದ್ದಾರೆ.
ಕ್ಲಾಂತ ಸಿನಿಮಾದ ಚಿತ್ರೀಕರಣ ಕುಕ್ಕೆ ಸುಬ್ರಹ್ಮಣ್ಯ , ಗುಂಡ್ಯ , ಕಳಸ ಸುತ್ತ ಮುತ್ತ ಕಾಡಿನಲ್ಲಿ ಅದ್ಧೂರಿ ವೆಚ್ಚದಲ್ಲಿ ತಯಾರಾಗಿದೆ. ಪಕ್ಕಾ ಆಕ್ಷನ್ , ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಎಸ್ ಪಿ ಚಂದ್ರಕಾಂತ್ ಸಂಗೀತ, ಪಿಆರ್ ಸೌಂದರ್ ರಾಜ್ ಸಂಕಲನ, ಮೋಹನ್ ಲೋಕನಾಥ್ ಛಾಯಾಗ್ರಹಣ ಚಿತ್ರಕ್ಕಿದೆ. ಸಂತೋಷ್ ನಾಯ್ಕ್, ವರಾಹ ರೂಪಂ ಖ್ಯಾತಿಯ ಶಶಿರಾಜ್ ಕಾವೂರ್, ವೈಭವ್ ಪ್ರಶಾಂತ್ ಸಾಹಿತ್ಯ ಹಾಡುಗಳಿಗಿವೆ.
ವಿನೋದ್ ಸ್ಟಂಟ್ ಮಾಸ್ಟರ್ ಆಗಿ , ಮಹೇಶ್ ದೇವ್ ಡಿ ಎನ್ ಪುರ ಸಂಭಾಷಣೆ ಸಿನಿಮಾಕ್ಕಿದೆ. ಎರಡು ಹಾಡುಗಳಿಗೆ ರಘು ಅವರ ನೃತ್ಯ ಸಂಯೋಜನೆ ಇದೆ . ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ನಡಿ ಉದಯ್ ಅಮ್ಮಣ್ಣಾಯ ಬಂಡವಾಳ ಹೂಡಿದ್ದು, ಅರುಣ್ ಗೌಡ, ಪ್ರದೀಪ್ ಗೌಡ ಹೇಮಂತ್ ರೈ ಸಹ ನಿರ್ಮಾಪಕರಾಗಿ ಆಗಿ ಸಾಥ್ ಕೊಟ್ಟಿದ್ದಾರೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದೆ.