ಇದು ಸಂಬಂಧಗಳ ಭಾವಜೀವ! ಹಳ್ಳಿಗಾಡಿನ ಆನಂದಮಯ ಚಿತ್ರ

ಚಿತ್ರ: ನಾಕೋಳಿಕ್ಕೆ ರಂಗ
ನಿರ್ದೇಶನ: ಗೊರವಾಲೆ ಮಹೇಶ್
ನಿರ್ಮಾಣ: ಎಸ್.ಟಿ.ಸೋಮಶೇಖರ್
ತಾರಾಗಣ: ಮಾಸ್ಟರ್ ಆನಂದ್, ಭವ್ಯಾ, ರಾಜೇಶ್ವರಿ, ಪುಂಗ, ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಸುಧಾಕರ್ ಇತರರು.

ರೇಟಿಂಗ್ ; 5/3

ವಿಜಯ್ ಭರಮಸಾಗರ

ನನ್ ಮಗನಿಗೆ ಒಳ್ಳೆಯದಾದರೆ ಸುಕ್ಕುರಾಜನ ಬಲಿ ಕೊಡ್ತೀನಿ…’ ಹೀಗಂತ ಊರ ದೇವತೆ ಮಾರವ್ವನ ಮುಂದೆ ಆ ತಾಯಿ ಹರಕೆ ಹೊರುತಾಳೆ! ಆಕೆಯ ಮಗ ಚೇತರಿಸಿಕೊಳ್ತಾನಾ? ಅವಳ ಹರಕೆ ತೀರುತ್ತಾ? ಆ ಹರಕೆ ಏನು ಅನ್ನೋದೇ ಚಿತ್ರದ ಇಂಟ್ರೆಸ್ಟಿಂಗ್ ಕಥೆ.

ಈ ವಾರ ತೆರೆ ಕಂಡ ‘ನಾಕೋಳಿಕ್ಕೆ ರಂಗ’ ಸಿನಿಮಾ ಕಥೆ ಇದು. ಪಲ್ಕಾ ಹಳ್ಳಿಗಾಡಿನ ಸೊಗಡು ತುಂಬಿರುವ ಕಥಾಹಂದರದಲ್ಲಿ ಹಾಸ್ಯ, ಗೆಳೆತನ, ಚಿಗುರೊಡೆವ ಸಣ್ಣ ಪ್ರೀತಿ, ನಂಬಿಕೆ, ಅಪನಂಬಿಕೆ, ಮೌಢ್ಯ ಕಂದಾಚಾರ, ಅಚಾರ, ವಿಚಾರ ಇತ್ಯಾದಿ ಚಿತ್ರದೊಳಗಿರುವ ಹೂರಣ.

ಇಲ್ಲಿ ಅಮ್ಮ, ಮಗ ಮತ್ತು ಕೋಳಿ ಹೈಲೆಟ್. ಇಡೀ ಸಿನಿಮಾ ಕಥೆ ಕೋಳಿ ಮತ್ತು ನಾಯಕ ರಂಗನ ಸುತ್ತವೇ ತಿರುಗುತ್ತೆ. ಹಾಗಾಗಿ ಅಲ್ಲಿನ ಸಂಸ್ಕೃತಿ, ಆಚರಣೆಗಳು ನೋಡುಗರನ್ನು ಸೆಳೆಯುತ್ತವೆ. ವಿಶೇಷವಾಗಿ ನಿರ್ದೇಶಕರು ಇಲ್ಲಿ ಮೌಢ್ಯ ಕಂದಾಚಾರ, ನಂಬಿಕೆ, ಅಪನಂಬಿಕೆ ಕುರಿತು ಹೇಳಿದ್ದಾರೆ. ಆ ಮೂಲಕ ಸಂಬಂಧಗಳ ಮೌಲ್ಯ, ಮಾನವೀಯ ಗುಣದ ಬಗ್ಗೆಯೂ ಹೇಳುವ ಮೂಲಕ ನೋಡುಗರ ಸೆಳೆಯುವಲ್ಲಿ ಸಫಲರಾಗಿದ್ದಾರೆ.

ಮೊದಲರ್ಧ ಹಾಸ್ಯದ ಮೂಲಕ ಸಾಗುವ ಸಿನಿಮಾ ಕೊಂಚ ನಿಧಾನವೆನಿಸಿದರೂ, ದ್ವಿತಿಯಾರ್ಧ ಎಮೋಷನ್ಸ್ ಕಟ್ಟಿಕೊಟ್ಟು ಕುತೂಹಲ ಕೆರಳಿಸುತ್ತಾರೆ. ಕೆಲವು ಕಡೆ ಭಾವುಕತೆಗೆ ದೂಡುವುದರ ಜೊತೆ ಸ್ವಾರಸ್ಯಕರ ಅಂಶಗಳು ಗಮನಸೆಳೆಯುತ್ತವೆ. ಇನ್ನು ಕಥೆಗೆ ಪೂರಕವಾಗಿ ಸಂಗೀತವೂ ಸಾಥ್ ನೀಡಿದೆ.

ಎಲ್ಲೂ ಗೊಂದಲವಿಲ್ಲದೆ, ಅರಾಮವಾಗಿ ನಗುತ್ತಲೇ, ಆಗಾಗ ಎದೆಭಾರವಾಗಿಸಿಕೊಂಡು ಒಂದೊಳ್ಳೆಯ ದೃಶ್ಯಾವಳಿ ಕಣ್ತುಂಬಿಕೊಳ್ಳಲು ಸಾಧ್ಯವಾಗಿಸಿರುವ ಸಿನಿಮಾ ಹಳ್ಳಿಯ ವಾತಾವರಣಕ್ಕೆ ತಳ್ಳುತ್ತದೆ. ನೋಡುಗರಿಗೆ ಪ್ರಾಣಿ ಪ್ರೀತಿಯನ್ನು ಹೆಚ್ಚಿಸುತ್ತದೆ.

ಕಥೆ ಏನು?

ಆ ಊರಲ್ಲಿ ರಂಗನಿಗೆ ಅವನವ್ವ ಮತ್ತು ಪ್ರೀತಿಯ ಕೋಳಿ ಅಚ್ಚುಮೆಚ್ಚು. ಕೋಳಿ ಅಂದರೆ ರಂಗನಿಗೆ ಪ್ರಾಣ. ಗೆಳೆಯರ ಜೊತೆ ಸುತ್ತಾಡಿ ಕಿತಾಪತಿ ಮಾಡುವ ರಂಗ, ಕೆಲ ಘಟನೆಗಳಿಗೆ ಕಾರಣವಾಗುತ್ತಾನೆ. ಓದು ಬರಹ ಬಾರದ ರಂಗ ಒಮ್ಮೆ ಪಾಟೀಲರ ಹೊಲದಲ್ಲಿ ರಾತ್ರಿ ಕೆಲಸ ಮಾಡುವಾಗ ದೃಶ್ಯವೊಂದನ್ನು ಕಂಡು ಎಚ್ಚರ ತಪ್ಪಿ ಬೀಳುತ್ತಾನೆ. ಅವನ ತಾಯಿ ಊರ ದೇವತೆ ಮಾರಮ್ಮ ಬಳಿ ಮಗನ ಚೇತರಿಕೆಗೆ ಬೇಡಿಕೊಳ್ಳುತ್ತಾಳೆ.

ಅಲ್ಲಿನ ಪೂಜಾರಿ ಮಗ ಸರಿಹೋಗಬೇಕಾದರೆ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಕೋಳಿನ ಬಲಿ ಕೊಡಬೇಕು ಅಂತಾನೆ. ರಂಗನ ತಾಯಿ ಒಲ್ಲದ ಮನಸ್ಸಲ್ಲೇ ಒಪ್ಪುತ್ತಾಳೆ. ಈ ವಿಷಯ ರಂಗನಿಗೆ ಗೊತ್ತಾಗುತ್ತೆ. ಆಮೇಲೆ ರಂಗನ ಕೋಳಿ ಹರಕೆಗೆ ಬಲಿಯಾಗುತ್ತೋ ಇಲ್ಲವೋ ಅನ್ನೋದು ಕಥೆ. ಕುತೂಹಲ ಇದ್ದರೆ ಒಮ್ಮೆ ನೋಡಲ್ಲಡ್ಡಿಯಿಲ್ಲ.

ಯಾರು ಹೇಗೆ?

ಮಾಸ್ಟರ್ ಆನಂದ್ ಪಕ್ಕಾ ಹಳ್ಳಿಗನಾಗಿ ವಿಜೃಂಭಿಸಿದ್ದಾರೆ. ಟೈಮಿಂಗ್ ಮೂಲಕ ನಗಿಸಿ ಭಾವುಕತೆಗು ತಳ್ಳುತ್ತಾರೆ. ನಮ್ಮ ಪಲ್ಕದ ಮನೆ ಹುಡುಗನಂತೆ ಕಾಣುವ ಆನಂದ್, ಕಚಗುಳಿ ಇಡುವ ಮೂಲಕ ಗಮನಸೆಳೆಯುತ್ತಾರೆ.
ರಾಜೇಶ್ವರಿ ಅವರಿಗೆ ಮೊದಲ ಸಿನಿಮಾ ಅನಿಸಲ್ಲ. ಮುಗ್ಧ ಹುಡುಗಿಯಾಗಿ ಇಷ್ಟವಾಗುತ್ತಾರೆ.

ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಭವ್ಯಾ ಅವರು ತಾಯಿಯಾಗಿ ಆಕರ್ಷಣೆಯಾದರೆ, ಅಲ್ಲಲ್ಲಿ ಬರುವ ಪಾತ್ರಗಳು ಕೂಡ ಗಮನಸೆಳೆಯುತ್ತವೆ. ವಿಶೇಷವಾಗಿ ಶಕೀಲಾ ಇಲ್ಲೊಂದು ಮುಖ್ಯ ಪಾತ್ರ ಮಾಡಿ, ಹೀಗೂ ಮಾಡ್ತೀನಿ ಎಂಬುದನ್ನ ತೋರಿಸಿದ್ದಾರೆ. ಉಳಿದಂತೆ, ರಾಕ್ ಲೈನ್ ಸುಧಾಕರ್, ಹೊನ್ನವಳ್ಳಿ ಕೃಷ್ಣ ಅವರು ಪಾತ್ರಕ್ಕೆ ಮೋಸ ಮಾಡಿಲ್ಲ.

ರಾಜು ಎಮ್ಮಿಗನೂರು ಅವರ ಸಂಗೀತದಲ್ಲಿ ಕೋ ಕೋ ನಾ ಕೋಳಿಕೆ‌ರಂಗ ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತವೂ ಪೂರಕ.
ಧನಪಾಲ್ ಕ್ಯಾಮೆರಾ ಕೈಚಳಕದಲ್ಲಿ ಹಳ್ಳಿಯ ಸೊಗಡು ಅಂದವಾಗಿದೆ.

Related Posts

error: Content is protected !!