ಅವಮಾನ+ಅಪಹಾಸ್ಯ+ ವಿಶ್ವಾಸ+ ಶ್ರದ್ಧೆ = ರಾಜಯೋಗ! ಸಂಬಂಧಗಳ ನೈಜ ಚಿತ್ರಣ

ವಿಜಯ್ ಭರಮಸಾಗರ

ರೇಟಿಂಗ್: 5/3

ಚಿತ್ರ: ರಾಜಯೋಗ
ನಿರ್ದೇಶನ: ಲಿಂಗರಾಜ ಉಚ್ಚಂಗಿದುರ್ಗ
ನಿರ್ಮಾಣ: ಶ್ರೀ ರಾಮರತ್ನ ಪ್ರೊಡಕ್ಷನ್ಸ್
ತಾರಾಗಣ: ಧರ್ಮಣ್ಣ ಕಡೂರು, ನಿರೀಕ್ಷಾ ರಾವ್, ನಾಗೇಂದ್ರ ಶಾ, ಕೃಷ್ಣ ಮೂರ್ತಿ ಕವತ್ತಾರ್, ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ್ ಹಿರೇಮಠ್ ಇತರರು.

‘ಈ ಘಳಿಗೆಯಲ್ಲಿ ನಿನಗೆ ಮಗು ಹುಟ್ಟಿದರೆ ರಾಜಯೋಗ ಶುರುವಾಗುತ್ತೆ… ಹೋಗಲಿ ಬಿಡು ಈಗ ಒಳ್ಳೆ ಘಳಿಗೆ ಮಧ್ಯಮ ಯೋಗವಿದೆ… ಮೂಲ ನಕ್ಷತ್ರ ಶುರುವಾಯ್ತು. ಮಗು ಹುಟ್ಟುತ್ತಲೇ ಗಂಡಾಂತರ ಶುರುವಾಗುತ್ತೆ…
ಆ ಗ್ರಾಮದ ಐನೋರು ಈ ಡೈಲಾಗ್ ಹೇಳಿದ ಬಳಿಕ ಮಗುವೊಂದರ ಜನನವಾಗುತ್ತೆ. ಅಲ್ಲಿಗೆ ಮೂಲನಕ್ಷತ್ರದಲ್ಲಿ ಹುಟ್ಟಿದ ಹುಡುಗನ ಕಥೆ -ವ್ಯಥೆ ಇತ್ಯಾದಿ ಕಷ್ಟ ಕಾರ್ಪಣ್ಯಗಳ ತೊಳಲಾಟವೇ ಚಿತ್ರದ ಒನ್ ಲೈನ್.

ನಿರ್ದೇಶಕರು ಒಂದೊಳ್ಳೆಯ ಎಳೆಯನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲ ಗಮನ ಸೆಳೆಯುವ ಅಂಶವೆಂದರೆ ಗ್ರಾಮೀಣ ಭಾಷೆ ಮತ್ತು ಅಲ್ಲಿನ ಪರಿಸರ. ಎಲ್ಲವನ್ನೂ ಅಷ್ಟೇ ರಸವತ್ತಾಗಿ ತೋರಿಸುವುದರ ಜೊತೆಗೊಂದು ಮಾನವೀಯತೆ, ಸಂಬಂಧಗಳ ಮೌಲ್ಯ ವನ್ನು ಸಾರಿದ್ದಾರೆ. ಹಳ್ಳಿ ಸುತ್ತ ನಡೆಯುವ ಕಥೆಯಾದ್ದರಿಂದ ನೈಜತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಬಳಸಿರುವ ಭಾಷೆಯೂ ಕೂಡ ಆಪ್ತವೆನಿಸಿ, ನೋಡಿಸಿಕೊಂಡು ಹೋಗುತ್ತೆ. ಮೊದಲರ್ಧ ಹಾಸ್ಯವಾಗಿ ಸಾಗುವ ಸಿನಿಮಾದಲ್ಲಿ ಆಳವಾದ ವಿಷಯವಿದೆ. ದ್ವಿತಿಯಾರ್ಧದಲ್ಲೂ ಇನ್ನಷ್ಟು ಹಿಡಿತ ಇದ್ದಿದ್ದರೆ ಸಿನಿಮಾ ಮತ್ತಷ್ಟು ಚುರುಕಾಗಿರುತ್ತಿತ್ತು. ಪದೇ ಪದೇ ಹೇಳಿದ ತೋರಿಸಿದ ದೃಶ್ಯ ವಿಷಯಗಳೇ ಇಣುಕುತ್ತವೆ. ಹಾಗಾಗಿ ನೋಡುಗರಿಗೆ ಕೊಂಚ ಕಿರಿಕಿರಿ ಎನಿಸಬಹುದು. ನಿರ್ದೇಶಕರು ಸ್ವಲ್ಪ ಅವಧಿ ಕಡಿಮೆಗೊಳಿಸಬಹುದಿತ್ತು. ದ್ವಿತಿಯಾರ್ಧ ಕೆಲ ಕಡೆ ವಿನಾಕಾರಣ ಎಳೆದಂತಾಗಿದೆ. ಎಲ್ಲೋ ಒಂದು ಕಡೆ ನೋಡುಗ ಸೀಟಿಗೆ ಒರಗುತ್ತಾನೆ ಅನ್ನುವಷ್ಟರಲ್ಲಿ, ಅಲ್ಲೊಂದು ಹಾಡು ಬಂದು ಮತ್ತೆ ಟ್ರ್ಯಾಕ್ ಗೆ ಕರೆದೊಯ್ಯುತ್ತೆ. ಉಳಿದಂತೆ ಎಲ್ಲೂ ಹೊಡಿ ಬಡಿ ಕಡಿ ದೃಶ್ಯಗಳಿಲ್ಲ. ಹಳ್ಳಿಯೊಂದರ ಕೂಡು ಕುಟುಂಬದೊಳಗಿನ ಸಾರವನ್ನು ಅಚ್ಚುಕಟ್ಟಾಗಿ ಉಣಬಡಿಸುವಲ್ಲಿ ನಿರ್ದೇಶಕರ ಹರಸಾಹಸ ಮಾಡಿದ್ದಾರೆ.

ಕಥೆ ಇಷ್ಟು..

ಅವನು ಪ್ರಾಣೇಶ. ಮೂಲ ನಕ್ಷತ್ರದಲ್ಲಿ ಹುಟ್ಟಿದವ. ಅಪ್ಪ ಮಾತ್ರವಲ್ಲ, ದೊಡ್ಡಪ್ಪ, ಚಿಕ್ಕಪ್ಪ, ಚಿಕ್ಕಮ್ಮ ಅಣ್ಣ ತಂಗಿ ಎಲ್ಲರೂ ಅವನನ್ನು ಹೀಯಾಳಿಸುವರೆ. ಊರ ಜನರೂ ಇದಕ್ಕೆ ಹೊರತಲ್ಲ. ಹೀಗಿರುವಾಗ, ಬಿ ಎ ಓದಿರುವ ಪ್ರಾಣೇಶಿಗೆ ಕೆಎಎಸ್ ಎಕ್ಸಾಂ ಬರೆದು ತಹಸೀಲ್ದಾರ್ ಆಗಬೇಕೆಂಬ ಛಲ. ಎಲ್ಲರೂ ಅವನನ್ನು ಕೇವಲವಾಗಿ ನೋಡುವರೇ. ಘಟನೆಯೊಂದರಲ್ಲಿ ಪ್ರಾಣೇಶನ ಸಾಧನೆಯ ಮಹತ್ವ ಎಲ್ಲರಿಗೂ ಗೊತ್ತಾಗುತ್ತೆ. ಅಲ್ಲೊಂದು ಟ್ವಿಸ್ಟು, ಟೆಸ್ಟು ಎದುರಾಗುತ್ತೆ. ಅದೇ ಸಿನಿಮಾದ ಬಿಗ್ ಟ್ವಿಸ್ಟ್. ಆ ಟ್ವಿಸ್ಟ್ ನ ಕುತೂಹಲ ಇದ್ದರೆ, ಒಂದೊಮ್ಮೆ ಸಿನಿಮಾ ನೋಡಲು ಅಡ್ಡಿಯಿಲ್ಲ.

ಯಾರು ಹೇಗೆ?

ಮೊದಲ ಸಲ ಪ್ರಮುಖ ಪಾತ್ರ ನಿರ್ವಹಿಸಿ, ಇಡೀ ಸಿನಿಮಾವನ್ನು ಆವರಿಸಿರುವ ಧರ್ಮಣ್ಣ ನಿಜಕ್ಕೂ ತಾನೊಬ್ಬ ಕಲಾವಿದ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ಅವರಿಗೆ ತಕ್ಕ ಪಾತ್ರ ಸಿಕ್ಕಿದೆ. ಆ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರಿಲ್ಲಿ ನಗಿಸೋಕು ಸೈ , ಅಳಿಸೋಕು ಸೈ. ಒಟ್ಟಾರೆ ಒಂದು ಭಾವನಾತ್ಮಕ ಸಿನಿಮಾಗೆ ಹೇಗೆ ನೈಜತೆ ಕಟ್ಟಿಕೊಡಲು ಸಾಧ್ಯವೋ ಅದನ್ನು‌ ಮಾಡಿದ್ದಾರೆ.

ನಾಯಕಿ ನಿರೀಕ್ಷಾ ರಾವ್ ಪಾತ್ರಕ್ಕೆ ಮೋಸ ಮಾಡಿಲ್ಲ. ನಾಗೇಂದ್ರ ಶಾ ಅವರಿಲ್ಲಿ ಹೆಚ್ಚು ಕಾಡುತ್ತಾರೆ. ನಗಿಸುತ್ತಾರೆ, ಅಳಿಸುತ್ತಾರೆ., ಕೃಷ್ಣ ಮೂರ್ತಿ ಕವತ್ತಾರ್, ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ್ ಹಿರೇಮಠ್ , ಮಠ ಇತರರು ಗಮನ ಸೆಳೆಯುತ್ತಾರೆ.
ಅಕ್ಷಯ್ ರಿಶಭ್ ಸಂಗೀತದ ಎರಡು ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತಕ್ಕಿನ್ನು ಸ್ವಾದ ಬೇಕಿತ್ತು. ವಿಷ್ಣುಪ್ರಸಾದ್ ಕ್ಯಾಮೆರಾ ಕೈ ಚಳಕದಲ್ಲಿ ಹಳ್ಳಿಯ ಸೊಗಸಿದೆ.

Related Posts

error: Content is protected !!