ನ್ಯಾಚುರಲ್ ಸ್ಟಾರ್ ನಾನಿ ನಟಿಸುತ್ತಿರುವ 30ನೇ ಸಿನಿಮಾ ಹಾಯ್ ನಾನ್ನ.. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಚಿತ್ರದ ಹಾಡು ಭಾರೀ ಸದ್ದು ಮಾಡಿತ್ತು. ಇದೀಗ ಟೀಸರ್ ಅನಾವರಣಗೊಂಡಿದೆ. ತಂದೆ ಮತ್ತು ಮಗಳ ಬಾಂಧವ್ಯದ ಜೊತೆಗೆ ಪ್ರೀತಿ ಕಥಾಹಂದರವೇ ಟೀಸರ್ ನ ಹೈಲೆಟ್.. ತಾಯಿ ಇಲ್ಲದ ಮಗಳಿಗೆ ಅಪ್ಪನೇ ಸರ್ವಸ್ವ. ಅಪ್ಪನಿಗೆ ಮಗಳ ಜೀವ. ಈ ಚೆಂದದ ಕುಟುಂಬಕ್ಕೆ ಎಂಟ್ರಿಯಾಗುವ ನಾಯಕಿ. ಆ ನಂತರ ಏನಾಗುತ್ತದೆ ಅನ್ನೋದೇ ಟೀಸರ್ ಹೈಲೆಟ್ಸ್.
ನಾನಿ ಮತ್ತು ಮೃಣಾಲ್ ಠಾಕೂರ್ ಜೋಡಿಯಾಗಿ ನಟಿಸಿದ್ದಾರೆ. ಹಾಯ್ ನಾನ್ನ ಸಿನಿಮಾಗೆ ಯುವ ನಿರ್ದೇಶಕ ಶೌರ್ಯುವ್ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶಕನಾಗಿ ಇದು ಇವರ ಮೊದಲ ಚಿತ್ರವಾಗಿದೆ. ಅಪ್ಪನಾಗಿ ನಾನಿ ಹಾಗೂ ಮಗಳಾಗಿ ಬೇಬಿ ಕಿಯಾರಾ ಖಾನ್ ನಟಿಸಿದ್ದಾರೆ.
ಮೋಹನ್ ಚೆರುಕುರಿ, ಮೂರ್ತಿ ಕಲಗಾರ, ಡಾ. ವಿಜೇಂದ್ರ ರೆಡ್ಡಿ ಅವರು ‘ವೈರ ಎಂಟರ್ಟೇನ್ಮೆಂಟ್’ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಸಾನೂ ಜಾನ್ ವರ್ಗೀಸ್ ISC ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ.
‘ಹೃದಯಂ’ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ. ಸಂಕಲನದ ಜವಾಬ್ದಾರಿಯನ್ನು ಪ್ರವೀಣ್ ಆಂಥೋನಿ ಅವರು ನಿಭಾಯಿಸುತ್ತಿದ್ದಾರೆ. ಡಿಸೆಂಬರ್ 7ಕ್ಕೆ ಪಂಚ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ತೆಲುಗಿನ ಯುವ ನಟ ವಿಕ್ರಾಂತ್ ನಟನೆಯ ಸ್ಪಾರ್ಕ್ ಲೈಫ್ ಸಿನಿಮಾ ಬಿಡುಗಡೆಗೆ ಹೊಸ್ತಿಲಿನಲ್ಲಿ ನಿಂತಿದೆ. ನವೆಂಬರ್ 17ಕ್ಕೆ ವಿಶ್ವಾದ್ಯಂತ ಚಿತ್ರ ತೆರೆಕಾಣಲಿದೆ. ಈಗಾಗಲೇ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಸ್ಪಾರ್ಕ್ ಲೈಫ್ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ನೆರವೇರಿಸಿದೆ.
ಈ ವೇಳೆ ಮಾತನಾಡಿದ ನಾಯಕ ವಿಕ್ರಾಂತ್, ಸ್ಪಾರ್ಕ್ ಸಿನಿಮಾ ನನ್ನ ಮೂರು ವರ್ಷದ ಕನಸು. ಎಲ್ಲರಿಗೂ ಟ್ರೇಲರ್ ಇಷ್ಟವಾಗಿದೆ ಎಂದು ಭಾವಿಸುತ್ತೇನೆ. ಈ ಚಿತ್ರಕ್ಕಾಗಿ ಒಂದುವರೆ ವರ್ಷ ಕಥೆ ಬರೆದೆ. ಇನ್ನೊಂದುವರೆ ವರ್ಷ ನಿರ್ಮಾಣದಲ್ಲಿ ತೊಡಗಿಸಿಕೊಂಡೆ. ಮೇಕಿಂಗ್ ನಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಕಾಮಿಡಿ, ಪ್ರೀತಿ, ಥ್ರಿಲ್ಲಿಂಗ್ ಎಲಿಮೆಂಟ್ ಎಲ್ಲವೂ ಸಿನಿಮಾದಲ್ಲಿದೆ. ನಾನು ನಾಯಕನಾಗಿಯೂ ಬಣ್ಣ ಹಚ್ಚಿದ್ದೇನೆ ಎಂದರು.
ಮೆಹ್ರೀನ್ ಪಿರ್ಜಾದಾ ಮತ್ತು ರುಕ್ಷಾರ್ ಧಿಲ್ಲೋನ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಮಲಯಾಳಂನ ಹಿರಿಯ ನಟ ಗುರು ಸೋಮಸುಂದರಂ ಖಳನಾಯಕನಾಗಿ ನಟಿಸಿದ್ದಾರೆ. ನಾಸರ್, ಸುಹಾಸಿನಿ ಮಣಿರತ್ನಂ, ವೆನ್ನೆಲ ಕಿಶೋರ್, ಸತ್ಯ, ಬ್ರಹ್ಮಾಜಿ, ಶ್ರೀಕಾಂತ್ ಅಯ್ಯಂಗಾರ್, ಚಮ್ಮಕ್ ಚಂದ್ರ, ಅನ್ನಪೂರ್ಣಮ್ಮ, ರಾಜಾ ರವೀಂದ್ರ ಮುಂತಾದ ತಾರಾಬಳಗದಲ್ಲಿದ್ದಾರೆ.
ಡೆಫ್ ಫ್ರಾಗ್ ಪ್ರೊಡಕ್ಷನ್ಸ್ ನಿರ್ದೇಶನದ ಈ ಚಿತ್ರಕ್ಕೆ ವಿಕ್ರಾಂತ್ ನಾಯಕನಾಗಿ ನಟಿಸುವುದರ ಜೊತೆಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಡೆಫ್ ಫ್ರಾಗ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ‘ಹೃದಯಂ’ ಮತ್ತು ಕುಶಿ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡುತ್ತಿದ್ದಾರೆ.
ಆಕ್ಷನ್ ದೃಶ್ಯಗಳ ಜೊತೆಗೆ ಎಮೋಷನ್ಸ್, ಲವ್ ಮುಂತಾದ ಅಂಶಗಳನ್ನು ಇಟ್ಟುಕೊಂಡು ಸ್ಪಾರ್ಕ್ ಲೈಫ್ ಸಿನಿಮಾ ಮಾಡಲಾಗಿದೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗಿರುವ ಈ ಚಿತ್ರ, ನವೆಂಬರ್ 17ಕ್ಕೆ ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಬ್ಲಿಂಕ್ ಸಿನಿಮಾದ ಎರಡನೇ ಹಾಡು ರಿಲೀಸ್ ಆಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಆಗಂತುಕ ಸಾಂಗ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಬ್ಲಿಂಕ್ ಅಂಗಳದಿಂದ ಸಖಿಯೆ ಎಂಬ ಮೆಲೋಡಿ ಹಾಡು ಅನಾವರಣಗೊಂಡಿದೆ. ಪ್ರಮೋದ್ ಮರವಂತೆ ಸಾಹಿತ್ಯದ ಗೀತೆಗೆ ಸಿದ್ದಾರ್ಥ್ ಬೆಳ್ಮಣ್ಣು ಧ್ವನಿಯಾಗಿದ್ದು, ಪ್ರಸನ್ನ ಕುಮಾರ್ ಎಂ.ಎಸ್ ಸಾಹಿತ್ಯ ಒದಗಿಸಿದ್ದಾರೆ.
ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾತನಾಡಿ, ರಂಗಭೂಮಿ ಜೊತೆ ಜೊತೆಯಲಿ ಸಿನಿಮಾ ಮಾಡಬೇಕೆಂಬ ಕನಸು ಇತ್ತು. ಕೋವಿಡ್ ಸಮಯದಲ್ಲಿ ಒಂದಿಷ್ಟು ಸಿನಿಮಾ ನೋಡ್ತಾ ನಾವು ಯಾಕೆ ಈ ರೀತಿ ಸಿನಿಮಾಗಳನ್ನು ಕನ್ನಡದಲ್ಲಿ ಮಾಡಬಾರದೆಂಬ ಯೋಚನೆ ಬಂತು. ಸ್ನೇಹಿತರು ಮತ್ತು ರಂಗಭೂಮಿ ಗೆಳೆಯರಿಂದ ಈ ಸಿನಿಮಾ ತಯಾರಾಗಿದೆ. ಸಿನಿಮಾ ಮಾಡಬೇಕೆಂಬ ಆಲೋಚನೆ ನಮ್ಮದು. ಸಿನಿಮಾ ಆಗಿದ್ದೆಲ್ಲಾ ಪ್ರಕೃತಿ ನಮಗೆ ಮಾಡಿದ ಬೆಂಬಲ ಮಾಡಿದೆ ಎಂದರು.
ನಾಯಕ ದೀಕ್ಷಿತ್ ಮಾತನಾಡಿ, ಬ್ಲಿಂಕ್ ಸಿನಿಮಾ ಯಾವುದೇ ಪರ್ಟಿಕ್ಯೂಲರ್ ಜಾನರ್ ಗೆ ಬೀಳಲ್ಲ. ಸೈನ್ಸ್ ಫಿಕ್ಷನ್ ಸಣ್ಣ ಎಳೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಮನುಷ್ಯತ್ವ, ಮನುಷ್ಯ ಪ್ರೀತಿ ಅನ್ನೋವುದನ್ನು ಸಿನಿಮಾ ತೋರಿಸಿಕೊಡುತ್ತದೆ. ಸೈನ್ಸ್ ಫಿಕ್ಷನ್ ಎಂದರೆ ಒಂದು ಲ್ಯಾಬ್ ಅಥವಾ ಬೇರೆ ಪ್ರಪಂಚದಲ್ಲಿ ನಡೆಯುವ ಕಥೆಯಾಗಿರುತ್ತದೆ. ಬಟ್ ಇದು ಹಾಗಲ್ಲ. ನಮ್ಮಂತಹ ಮಧ್ಯಮ ವರ್ಗದ ನಡುವೆ ಸೈನ್ಸ್ ಫಿಕ್ಷನ್ ಆದರೆ ಏನೆಲ್ಲ ಕಳವಳ ಆಗಬಹುದು.. ಏನೆಲ್ಲಾ ಸನ್ನಿವೇಶ ಎದುರಿಸಬಹುದು ಅನ್ನೋದು ಈ ಸಿನಿಮಾದ ಮುಖ್ಯಕಥೆ ಎಂದರು.
ನಾಯಕಿ ಮಂದಾರ ಮಾತನಾಡಿ, ನಾನು ಸ್ವಪ್ನ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಮ್ಮ ನಿರ್ದೇಶಕರು ನನಗೆ ಐದಾರು ವರ್ಷಗಳಿಂದ ಪರಿಚಯ. ಅವರೇ ನಾಟಕಗಳನ್ನು ಬರೆದು ನಟಿಸಿ ನಿರ್ದೇಶಿಸುತ್ತಿದ್ದರು. ಅಂದಿನಿಂದ ಅವರು ನನಗೆ ಸ್ನೇಹಿತರು. ಬ್ಲಿಂಕ್ ಸಿನಿಮಾದ ಸ್ಕ್ರೀಪ್ಟ್ ಕೇಳಿದಾಗ ಖುಷಿಯಾಯಿತು. ನಾನು ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಸಿನಿಮಾದ ಎಲ್ಲಾ ಹಾಡುಗಳು ಅದ್ಭುತವಾಗಿ ಮೂಡಿಬಂದಿದೆ. ಕನ್ನಡದಲ್ಲಿ ಲೂಸಿಯಾ, ಬೆಲ್ ಬಾಟಂ, ರಂಗಿತರಂಗ ಸಿನಿಮಾಗಳು ಹೇಗೆ ಕ್ರಾಂತಿ ಮಾಡಿದವೋ. ಹಾಗೆಯೇ ಈ ಚಿತ್ರವೂ ಮೈಲಿಗಲ್ಲಾಗಲಿದೆ ಎಂಬ ಭರವಸೆ ಇದೆ ಎಂದರು.
ಜನನಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಮೂಡಿ ಬರ್ತಿರುವ ಬ್ಲಿಂಕ್ ಕನ್ನಡದಲ್ಲಿ ಒಂದು ಹೊಸ ಶೈಲಿಯ ಸಿನಿಮಾ , ವಿನೂತನ ಚಿತ್ರಕಥೆಯ ಈ ಚಿತ್ರ ಕನ್ನಡದ ಮಟ್ಟಿಗೆ ಹೊಸ ಪ್ರಯೋಗ. ಬ್ಲಿಂಕ್ ಸಿನಿಮಾಗೆ ರವಿಚಂದ್ರ ಎ ಜೆ ಬಂಡವಾಳ ಹೂಡಿದ್ದು, ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ಹೆಜ್ಜೆ. ಮಿಡಲ್ ಕ್ಲಾಸ್ ಹುಡುಗನ ಜೀವನದಲ್ಲಿ ನಡೆಯುವ unexpected ಘಟನೆಗಳು ಹೇಗೆ ಆವನ ಸುತ್ತ- ಮುತ್ತಲಿನ ವಾತಾವರಣ ಬದಲಿಸುತ್ತದೆ ಎಂಬುದು ಈ ಕಥೆಯ ಸಾರಾಂಶ.
Sci-Fi ಶೈಲಿಯಲ್ಲಿ ಮೂಡಿಬರುತ್ತಿರುವ ಬ್ಲಿಂಕ್ ಚಿತ್ರಕ್ಕೆ ನಾಯಕ ನಟರಾಗಿ ದಿಯಾ ಹಾಗೂ ದಸರಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ನಾಯಕಿಯಾರಾಗಿ ಮಂದಾರ ಬಟ್ಟಲಹಳ್ಳಿ ಹಾಗೂ ಚೈತ್ರ ಜೆ ಆಚಾರ್ ನಟಿಸುತ್ತಿದ್ದು, ವಜ್ರಧೀರ್ ಜೈನ್ , ಗೋಪಾಲ ಕೃಷ್ಣದೇಶಪಾಂಡೆ , ಕಿರಣ್ ನಾಯ್ಕ್ ಮತ್ತು ಹಲವಾರು ಕಲಾವಿದರ ತಾರಗಣವಿದ್ದು, ಅವಿನಾಶ ಶಾಸ್ರ್ತಿ ರವರ ಛಾಯಾಗ್ರಹಣ, ಮತ್ತು ಸಂಜೀವ್ ಜಾಗಿರ್ದಾರ್ ರವರ ಸಂಕಲನವಿದೆ.
ವಿಷ್ಣು ಮಂಚು ಅಭಿನಯದ ಮಹತ್ವಾಕಾಂಕ್ಷೆಯ ಚಿತ್ರವಾದ ‘ಕಣ್ಣಪ್ಪ – ದಿ ಗ್ರೇಟ್ ಎಪಿಕ್ ಇಂಡಿಯನ್ ಟೇಲ್’ ಕುರಿತು ಈಗಾಗಲೇ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ. ಅದಕ್ಕೆ ಒಂದು ಪ್ರಮುಖ ಕಾರಣ ಚಿತ್ರದ ತಾರಾಗಣ. ‘ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಮೋಹನ್ ಲಾಲ್, ಈ ಚಿತ್ರದಲ್ಲಿ ನಟಿಸುತ್ತಿರುವುದು ಈಗಾಗಲೇ ಸುದ್ದಿಯಾಗಿದೆ. ಈಗ ಶಿವರಾಜಕುಮಾರ್ ಸಹ ಈ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ.
ಶಿವರಾಜ್‍ಕುಮಾರ್ ಅವರಿಗೂ, ಕಣ್ಣಪ್ಪನಿಗೂ ಬಹಳ ಹಳೆಯ ನಂಟು. ಹಲವು ವರ್ಷಗಳ ಹಿಂದೆ ಶಿವರಾಜ್‍ಕುಮಾರ್ ಅವರು, ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದಲ್ಲಿ ಮೊದಲು ದಿಣ್ಣನಾಗಿ, ಆ ನಂತರ ಶಿವನ ಅನುಗ್ರಹಕ್ಕೆ ಪಾತ್ರವಾಗುವ ಕಣ್ಣಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ಪಾತ್ರವನ್ನು ತೆಲುಗಿನಲ್ಲಿ ವಿಷ್ಣು ಮಂಚು ಮಾಡುತ್ತಿದ್ದಾರೆ ಎನ್ನುವುದು ವಿಶೇಷ. ‘ಕಣ್ಣಪ್ಪ’ ಚಿತ್ರದಲ್ಲಿ ಶಿವರಾಜ್‍ಕುಮಾರ್ ಅವರ ಪಾತ್ರವೇನು? ಎಂಬ ವಿಷಯವನ್ನು ಚಿತ್ರತಂಡ ಸದ್ಯಕ್ಕೆ ರಹಸ್ಯವಾಗಿಟ್ಟಿದೆ. ಆದರೆ, ಶಿವಣ್ಣ ಅವರ ಪಾತ್ರ ಇಡೀ ಚಿತ್ರದ ಹೈಲೈಟ್ ಆಗಲಿದ್ದು, ಅಭಿಮಾನಿಗಳಿಗೆ ಬಹಳ ಇಷ್ಟವಾಗಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.
ಈ ಹಿಂದೆ ಸ್ಟಾರ್ ಪ್ಲಸ್ ವಾಹಿನಿಗಾಗಿ ‘ಮಹಾಭಾರತ’ ಸರಣಿಯನ್ನು ನಿರ್ದೇಶಿಸಿದ್ದ ಮುಕೇಶ್ ಕುಮಾರ್ ಸಿಂಗ್, ಈ ಪೌರಾಣಿಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹಿರಿಯ ನಟ ಮತ್ತು ನಿರ್ಮಾಪಕ ಡಾ. ಮೋಹನ್ ಬಾಬು ನಿರ್ಮಿಸುತ್ತಿರುವ ಶಿವನ ಅಚಲ ಭಕ್ತನಾದ ಕಣ್ಣಪ್ಪನ ಕಾಲಾತೀತ ಕಥೆಯ ಚಿತ್ರೀಕರಣ ಈಗಾಗಲೇ ನ್ಯೂಜಿಲ್ಯಾಂಡ್‍ನಲ್ಲಿ ಪ್ರಾರಂಭವಾಗಿದೆ.
ಸಂದೇಶ್ ಪ್ರೊಡಕ್ಷನ್ಸ್ ನಲ್ಲಿ ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಘೋಸ್ಟ್” ಚಿತ್ರ ಅಕ್ಟೋಬರ್ 19ರಂದು ಬಿಡುಗಡೆಯಾಗುತ್ತಿದೆ.
ಈ ಚಿತ್ರಕ್ಕೆ ಶುಭಕೋರಿ ಅಕ್ಟೋಬರ್ 18ರ ಬುಧವಾರ ಮಧ್ಯಾಹ್ನ 3 ಗಂಟೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ದೂರಿ ಮೆರವಣಿಗೆ ನಡೆಯಲಿದೆ.
ಜ್ವಾಲಾಮುಖಿ ಡಾ.ರಾಜಕುಮಾರ್ ಅಭಿಮಾನಿಗಳ ಬಳಗ ಈ ಅದ್ದೂರಿ ಮೆರವಣಿಗೆ ಆಯೋಜಿಸಿದೆ. ಡೋಲು, ನಗರಿ, ಕೇರಳದ ಚಂಡೆ, ತಮಟೆ ಮೊದಲಾದ ವಾದ್ಯಗಳು, ಜಾನಪದ ಕಲಾ ತಂಡಗಳು, ನೂರೈವತ್ತಕ್ಕೂ ಆಟೋಗಳಲ್ಲಿ ನಕ್ಷತ್ರಗಳು ಈ ಮೆರವಣಿಗೆಯ ಪ್ರಮುಖ ಆಕರ್ಷಣೆ. ಸಾವಿರಾರು ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.
ಮೈಸೂರಿನ ಇಟ್ಟಿಗೆಗೂಡಿನಿಂದ ಆರಂಭವಾಗುವ ಮೆರವಣಿಗೆ ಡಿಸಿ ಕಛೇರಿ ಮೂಲಕ ಸಾಗಿ ವುಡ್ ಲ್ಯಾಂಡ್ಸ್ ಚಿತ್ರಮಂದಿರ ತಲುಪಲಿದೆ. ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್, ನಿರ್ಮಾಪಕರಾದ ಸಂದೇಶ್ ಮುಂತಾದವರು ಈ ಅದ್ದೂರಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಮೈಸೂರಿನಲ್ಲಿ ಈಗ ದಸರಾ ಸಡಗರ. ಅದರೊಂದಿಗೆ “ಘೋಸ್ಟ್” ಚಿತ್ರ ಸಹ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳ ಆನಂದವನ್ನು ಮತ್ತಷ್ಟು ಹೆಚ್ಚಿಸಲಿದೆ.
ಸಾಯಿ ರಮೇಶ್ ಪ್ರೊಡಕ್ಷನ್ಸ್ ನಲ್ಲಿ ಕೆ.ರಮೇಶ್ ಹಾಗೂ ಬಿ.ಭೈರಪ್ಪ ಮೈಸೂರು ನಿರ್ಮಿಸುತ್ತಿರುವ ಹಾಗೂ ರಾಮ್ ಜನಾರ್ದನ್ ನಿರ್ದೇಶನದ “ಭಗೀರಥ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಮೈಸೂರು, ಮಡಿಕೇರಿ, ಸಕಲೇಶಪುರ, ಮಂಗಳೂರು ಸುತ್ತಮುತ್ತ ಚಿತ್ರಕ್ಕೆ 25 ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣವಾಗಿದೆ. ಸದ್ಯ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ನವೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕ ರಾಮ್ ಜನಾರ್ದನ್ ತಿಳಿಸಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿದೆ ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಮಾಡಿದ್ದಾರೆ. ಪ್ರದೀಪ್ ವರ್ಮ ಸಂಗೀತ ನಿರ್ದೇಶನ, ಅಕುಲ್ ನೃತ್ಯ ನಿರ್ದೇಶನ, ಸೂರಿ ಚಿತ್ತೂರು ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಹಾಗೂ ಮೋಹನ್ ರಾಸು ಅವರ ಸಹ ನಿರ್ದೇಶನ “ಭಗೀರಥ” ಚಿತ್ರಕ್ಕಿದೆ.
ಜಯಪ್ರಕಾಶ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿಕಾಳೆ, ಶ್ರೀನಿವಾಸಪ್ರಭು, ಬಾಲ ರಾಜವಾಡಿ, ನಯನ, ರವಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುಭಾಸ್ಕರನ್ ಅವರು ನಿರ್ಮಿಸುತ್ತಿರುವ, ಲಕ್ಷ್ಮಣ್ ನಿರ್ದೇಶನದಲ್ಲಿ ಯುವರಾಜ ನಿಖಿಲ್ ಕುಮಾರ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ.
ಬಹು ನಿರೀಕ್ಷಿತ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ ಅವರು ನಟಿಸುತ್ತಿದ್ದಾರೆ. ವಿಜಯ್ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೇ ವಿಜಯ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ವಿಜಯ್ ಅವರ ಪಾತ್ರ ಏನ್ನಿರಬಹುದು? ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಬಗ್ಗೆ ಸಿನಿರಸಿಕರಿಗೆ ಸಾಕಷ್ಟು ನಿರೀಕ್ಷೆಯಿದೆ.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ವಂಶಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ಆಯುಷ್ ಟಿ.ವಿ ಕಳೆದ 7 ವರ್ಷಗಳಿಂದ ಆರೋಗ್ಯಕರ ಜೀವನ ಶೈಲಿಗಾಗಿ ಎಂಬ ಧ್ಯೇಯದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರ ಮನ್ನಣೆಗಳಿಸಿರುವ ಏಕೈಕ ಆರೋಗ್ಯದ ಕುರಿತಾದ ವಾಹಿನಿಯಾಗಿದ್ದು, ಪ್ರಸ್ತುತ ಕರ್ನಾಟಕದ ಜನಪ್ರಿಯ ಮನೋರಂಜನಾ ವಾಹಿನಿ ಸಿರಿಕನ್ನಡ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕೇಂದ್ರ (ಕ್ಷೇಮವನ) ಇವರ ಸಹಭಾಗಿತ್ವದಲ್ಲಿ ಆಯೋಜಿಸಿರುವ ವಿಶ್ವದ ಮೊಟ್ಟಮೊದಲ ಆರೋಗ್ಯದ ಕುರಿತಾದ ರಿಯಾಲಿಟಿ ಶೋ “ಫಿಟ್ ಬಾಸ್”.
ಮನುಷ್ಯನಿಗೆ ಎಲ್ಲದಕ್ಕಿಂತ ಆರೋಗ್ಯವೇ ಹೆಚ್ಚು ಎಂಬ ಧ್ಯೇಯದಿಂದ ನಮ್ಮ ಆಯೂಷ್ ಟಿವಿ ಕಳೆದ ಏಳು ವರ್ಷಗಳಿಂದ ಆರೋಗ್ಯದ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಸ್ಥೂಲಕಾಯದವರಿಗಾಗಿ(ಹೆಚ್ಚು ದಪ್ಪ) “ಫಿಟ್ ಬಾಸ್” ಎಂಬ ರಿಯಾಲಿಟಿ ಶೋ ಆರಂಭಿಸಲಾಗಿದೆ. ನಮ್ಮೊಂದಿಗೆ ಸಿರಿಕನ್ನಡ ವಾಹಿನಿ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಕೇಂದ್ರ(ಕ್ಷೇಮವನ) ಕೈ ಜೋಡಿಸಿದೆ ಎಂದು ಆಯೂಷ್ ಟಿವಿ ವೈಸ್ ಚೇರ್ಮನ್ ಅರುಣಾಚಲಂ ತಿಳಿಸಿದರು.
ಕಳೆದ ಕೆಲವು ವರ್ಷಗಳಿಂದ ನಮ್ಮ ಸಿರಿಕನ್ನಡ ವಾಹಿನಿ ಹಲವು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆ ಪಡೆದಿದೆ. ಪ್ರಸ್ತುತ ಆಯೂಷ್ ಟಿವಿಯ “ಫಿಟ್ ಬಾಸ್” ರಿಯಾಲಿಟಿ ಶೋ ಜೊತೆಗೆ ಸಿರಿಕನ್ನಡ ವಾಹಿನಿ ಕೈ ಜೋಡಿಸಿದೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಈ ರಿಯಾಲಿಟಿ ಶೋ ಅಕ್ಟೋಬರ್ 16 ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಆಯೂಷ್ ಟಿವಿ ಸಂಜೆ 7 ಕ್ಕೆ ಹಾಗೂ ಸಿರಿಕನ್ನಡ ವಾಹಿನಿಯಲ್ಲಿ ರಾತ್ರಿ 8 ಕ್ಕೆ ಪ್ರಸಾರವಾಗಲಿದೆ ಎಂದರು ಸಿರಿಕನ್ನಡ ವಾಹಿನಿ ಸಂಸ್ಥಾಪಕ ನಿರ್ದೇಶಕ ಸಂಜಯ್ ಶಿಂಧೆ.
ಈ ರಿಯಾಲಿಟಿ ಶೋ ನ ಆಡಿಷನ್ ನಲ್ಲಿ ಸುಮಾರು 2000 ಜನ ಪಾಲ್ಗೊಂಡಿದ್ದರು. ಅದರಲ್ಲಿ ಸುಮಾರು 100 ಕೆಜಿ ಗಿಂತ ಹೆಚ್ಚು ತೂಕವಿರುವ 21 ಜನರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಇಪ್ಪತ್ತೊಂದು ದಿನ ,ತಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಲು ಇಲ್ಲಿ ಪಾಲ್ಗೊಂಡಿದ್ದು ವಿಶೇಷ, ತಮ್ಮ ಆರೋಗ್ಯದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಕ್ಯೂರ್ ಮಾಡಿಕೊಳ್ಳುವುದರ ಜೊತೆಗೆ ಆಟ, ಮೋಜು, ಮಸ್ತಿ, ಮತ್ತು ಸ್ನೇಹ ಸಂಬಂಧಗಳ ಮೌಲ್ಯಗಳನ್ನು ಈ ರಿಯಾಲಿಟಿ ಶೋ ನಲ್ಲಿ ಕಲಿತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ರೂಪಿಕಾ, ನಿರೂಪಕ ಮುರಳಿ, ಆರ್ಯನ್ ಶಾಮ್ ಮುಂತಾದ ಗಣ್ಯರು ಗ್ರ್ಯಾಂಡ್ ಫಿನಾಲೆಗೆ ಆಗಮಿಸಿ ಸ್ಪರ್ಧಿಗಳಿಗೆ ಶುಭ ಕೋರಿದ್ದಾರೆ. ಗೆದ್ದ ಸ್ಪರ್ಧಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ ಎಂದು “ಫಿಟ್ ಬಾಸ್” ರಿಯಾಲಿಟಿ ಶೋ ನಿರ್ದೇಶಕ ಬಾಲಕೃಷ್ಣ ತಿಳಿಸಿದರು.
21 ದಿನಗಳಕಾಲ ಪ್ರತಿ ದಿನ ಮುಂಜಾನೆ 5 ರಿಂದ ಯೋಗದೊಂದಿಗೆ ಸಾಧಕರ ದಿನಚರಿ ಪ್ರಾರಂಭವಾದರೆ ಕ್ರಮೇಣ ವಿವಿಧ ನ್ಯಾಚುರೋಪತಿ ಚಿಕಿತ್ಸೆಗಳು ಹಾಗೂ ಹಲವು ಮನೋರಂಜನಾ ಕಾರ್ಯಕ್ರಮಗಳು ಸ್ಪರ್ಧಿಗಳನ್ನು ಕ್ರಿಯಾಶೀಲರನ್ನಾಗಿಸಿರುವಂತೆ ಮಾಡಿದ್ದವು ಎಂಬ ಮಾಹಿತಿಯನ್ನು “ಕ್ಷೇಮವನ”ದ ಮುಖ್ಯ ಕ್ಷೇಮಾಧಿಕಾರಿ ಡಾ.ನರೇಂದ್ರ ಶೆಟ್ಟಿ ನೀಡಿದರು.
” ಫಿಟ್ ಬಾಸ್” ರಿಯಾಲಿಟಿ ಶೋ ನ ಆರಂಭದ ದಿನ ಹಾಗೂ ಫಿನಾಲೆ ದಿನ ನಿರೂಪಕನಾಗಿ ಕೆಲಸ ಮಾಡಿದ್ದು ಖುಷಿಯಾಗಿದೆ. ಇಂತಹ ಕಾರ್ಯಕ್ರಮಗಳನ್ನು ಎಲ್ಲರೂ ನೋಡಬೇಕೆಂದರು ಪ್ರಶಾಂತ್ ಸಂಬರ್ಗಿ.
“ಫಿಟ್ ಬಾಸ್” ಕಾರ್ಯಕ್ರಮದ ಬಗ್ಗೆ ಆಯೂಷ್ ಟಿವಿಯ ದಿವ್ಯ ಅವರು ಮಾತನಾಡಿದರು
ಹರಿಕೃಷ್ಣ, ವ್ಯವಸ್ಥಾಪಕ ನಿರ್ದೇಶಕರು ಆಯುಷ್ ಟಿ ವಿ, ಸಂಜಯ್ ಶಿಂಧೆ, ಸಂಸ್ಥಾಪಕ ನಿರ್ದೇಶಕರು ಸಿರಿ ಕನ್ನಡ ವಾಹಿನಿ ಪ್ರಶಾಂತ್ ಸಂಬರ್ಗಿ, ಕಲಾವಿದರು ಹಾಗೂ ಫಿಟ್ ಬಾಸ್ ಗ್ರ್ಯಾಂಡ್ ಫಿನಾಲೆ ನಿರೂಪಕರು ಬಾಲಕೃಷ್ಣ, ಫಿಟ್ ಬಾಸ್ ರಿಯಾಲಿಟಿ ಷೋ ನಿರ್ದೇಶಕರು ಅರುಣಾಚಲಂ , ವೈಸ್ ಚೇರ್ಮನ್ ಆಯುಷ್ ಟಿವಿ ಅರವಿಂದ್ ಎನ್.ಜೆ , ಪವನ್ ಕುಮಾರ್ , ವಿನಾಯಕ್ ಪೈ , ದಿವ್ಯ(ಆಯೂಷ್ ಟಿವಿ), ರಾಜೇಶ್ ರಾಜಘಟ್ಟ ಮುಖ್ಯಸ್ಥರು , ಸಿರಿ ಕನ್ನಡ ವಾಹಿನಿ ಇದ್ದರು
ಮಾಲಾಶ್ರೀ ಅಂದಾಕ್ಷಣ ನೆನಪಿಗೆ ಬರೋದೇ ಖಡಕ್ ಪೊಲೀಸ್ ಅಧಿಕಾರಿ. ಅಂಥದ್ದೊಂದು ಖದರ್ ಇರುವ ಸಿನಿಮಾವೊಂದು ಈ ವಾರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.
ಹೌದು, ಬಹಳ ದಿನಗಳ ಬಳಿಕ ಮಾಲಾಶ್ರೀ ಅವರು ಸಖತ್ ಫೋರ್ಸ್ ಇರುವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಸಿನಿಮಾದ ಹೆಸರು ಮಾರಕಾಸ್ತ್ರ.
ಸಿನಿಮಾದ ಶೀರ್ಷಿಕೆ ಹೇಳುವಂತೆ ಇದೊಂದು ಭ್ರಷ್ಠರ ವಿರುದ್ಧ ಸೆಣೆಸಾಡುವ ಕಥೆ. ಈ ಸಿನಿಮಾದಲ್ಲಿ ಸಾಕಷ್ಟು ಸಾಮಾಜಿಕ ಪರಿಣಾಮ ಬೀರುವ ಅಂಶಗಳಿವೆ.
ಅಂದಹಾಗೆ, ಗುರುಮೂರ್ತಿ ಸುನಾಮಿ ಈ ಸಿನಿಮಾದ ನಿರ್ದೇಶಕರು.ಕೋಮಲ ನಟರಾಜ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಮಾಲಾಶ್ರೀ ಅವರು ಹೈಲೆಟ್. ಅವರೊಂದಿಗೆ ದೊಡ್ಡ ತಾರಾ ಬಳಗವೇ ಇದೆ.
ಮಾಲಾಶ್ರೀ ಇದ್ದಾರೆಂದರೆ ಸಾಹಸಮಯ ದೃಶ್ಯಗಳಿಗೇನೂ ಕಮ್ಮಿ ಇಲ್ಲ ಬಿಡಿ. ಮೈ ನವಿರೇಳಿಸುವ ಸಾಹಸ ದೃಶ್ಯಗಳೇ ತುಂಬಿವೆ. ಮಾಸ್ಟರ್ ಥ್ರಿಲ್ಲರ್ ಮಂಜು ಅವರ ಕಾಂಬಿನೇಷನ್ ಸಾಹಸದಲ್ಲಿ ಅದ್ಭುತ ಸ್ಟಂಟ್ಸ್ ಮಾಡಿದ್ದಾರೆ ಮಾಲಾಶ್ರೀ.
ಇನ್ನು, ಸಿನಿಮಾ ರಿಲೀಸ್ ಮೊದಲೇ ನಿರ್ಮಾಪಕರ ಮೊಗದಲ್ಲಿ ಮಂದಹಾಸ ಬೀರಿದೆ. ಕಾರಣ, ಸಿನಿಮಾ ಡಬ್ಬಿಂಗ್ ರೈಟ್ಸ್ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿದೆ. ಹಾಗಾಗಿ ತಂಡ ಕೂಡ ಖುಷಿಯಲ್ಲಿದೆ.
ಮೊದಲ ಸಲ ನಿರ್ಮಾಣ ಮಾಡಿರುವ ಕೋಮಲ ನಟರಾಜ್ ಅವರು ಸಿನಿಮಾಗೆ ಏನೆಲ್ಲ ಬೇಕೋ ಎಲ್ಲವನ್ನೂ ಅಚ್ಚುಕಟ್ಟಾಗಿ ಒದಗಿಸಿದ್ದರಿಂದಲೇ ಚಿತ್ರ ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಾರೆ ನಿರ್ದೇಶಕರು.
ಸಂದೇಪ್ರೊಡಕ್ಷನ್ಸ್ ನಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸಿ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಘೋಸ್ಟ್” ಚಿತ್ರ ಇದೇ ಅಕ್ಟೋಬರ್ 19 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಅಖಿಲ ಕರ್ನಾಟಕ ಡಾ.ಶಿವರಾಜಕುಮಾರ್ ಅಭಿಮಾನಿಗಳ ಸಂಘದವರು ಹಾಡೊಂದನ್ನು ಸಿದ್ದಪಡಿಸಿ “ಘೋಸ್ಟ್” ಚಿತ್ರಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.
ಈ ರೀತಿ ಅಭಿಮಾನಿಗಳು ಚಿತ್ರವೊಂದಕ್ಕೆ ಹಾಡಿನ ಉಡುಗೊರೆ ನೀಡಿರುವುದು ಇದೇ ಮೊದಲು. ಅಭಿಮಾನಿಗಳು ಅಭಿಮಾನದಿಂದ ನೀಡಿರುವ ಈ ಹಾಡನ್ನು ರೋಲಿಂಗ್ ಟೈಟಲ್ಸ್ ನಲ್ಲಿ ಬಳಸಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.
ಅಕ್ಟೋಬರ್ 11 ರ ಮಧ್ಯಾಹ್ನ 1ಗಂಟೆಗೆ ಈ ಹಾಡು ಹೊಸಪೇಟೆಯ “ಮೀರ್ ಅಲ್ಲಂ” ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.