ಆ ಮನೆಯಲ್ಲೊಂದು ವಿಚಿತ್ರ ಪ್ರೇಮದಾಟ! ಭೀತಿ ಪ್ರೀತಿ ಇತ್ಯಾದಿ

ವಿಜಯ್ ಭರಮಸಾಗರ
ರೇಟಿಂಗ್: 5/2.5

ಚಿತ್ರ: ದಿ ವೆಕೆಂಟ್ ಹೌಸ್
ನಿರ್ದೇಶನ: ಎಸ್ತರ್ ನರೋನ್ಹಾ
ನಿರ್ಮಾಣ: ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್
ತಾರಾಗಣ: ಎಸ್ತರ್ ನರೋನ್ಹಾ, ಶ್ರೇಯಸ್ ಚಿಂಗ, ಸಂದೀಪ್ ಮಲಾನಿ ಇತರರು.

ಕಾನನದೊಳಗಿನ ನಡು ರಸ್ತೆ. ಆವರಿಸಿದ ಕಗ್ಗತ್ತಲು. ಮೃತ ದೇಹ ಹೊತ್ತು ಬರುತ್ತಿರುವ ವಿಕಾರವಾದ ರೂಪ. ಇಷ್ಟು ಹೇಳಿದ ಮೇಲೆ ಇದೊಂದು ದೆವ್ವದ ಕಥೆ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಬಿಡಿ.

ಹೌದು, ದಿ ವೆಕೆಂಟ್ ಹೌಸ್ ಪಕ್ಕಾ ಹಾರರ್ ಫೀಲ್ ತುಂಬಿದ ಚಿತ್ರ. ಹಾಗಂತ ಇಡೀ ಸಿನಿಮಾವನ್ನು ದೆವ್ವವೇ ಆವರಿಸಿಕೊಂಡಿದೆ ಅಂದುಕೊಳ್ಳುವಂತಿಲ್ಲ. ಮೊದಲ ಬಾರಿಗೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಎಸ್ತರ್ ನರೋನ್ಹಾ ಒಂದಷ್ಟು ಭಯ ಬೀಳಿಸುವ ಪ್ರಯತ್ನ ಮಾಡಿದ್ದಾರೆ. ಮೊದಲರ್ಧ ಪ್ರೀತಿ ಗೀತಿ ಇತ್ಯಾದಿ ತುಂಬಿದ್ದರೆ, ದ್ವಿತಿಯಾರ್ಧ ಅಲ್ಲಲ್ಲಿ ಭೀತಿ ಹುಟ್ಟಿಸೋಕೆ ಶುರು ಮಾಡುತ್ತಾರೆ. ಒಟ್ಟಾರೆ ಹೆಚ್ಚೇನು ಪ್ರಭಾವ ಬೀರದಿದ್ದರೂ, ದೆವ್ವ ಕೊಡುವ ಕಾಟ ಮಾತ್ರ ಗಮನಸೆಳೆಯದೇ ಇರದು.

ಸಿನಿಮಾದ ಚಿತ್ರಕಥೆ ಇನ್ನಷ್ಟು ಬಿಗಿಯಾಗಿರಬೇಕಿತ್ತು. ಸಂಭಾಷಣೆ ಬಗ್ಗೆ ಕೊಂಚ ಗಮನಿಸಬೇಕಿತ್ತು. ಸಿನಿಮಾ ಎಲ್ಲೋ ಒಂದು ಕಡೆ ಸ್ಲೋ ಎನಿಸುತ್ತಿದ್ದಂತೆಯೇ ಅಲ್ಲೊಂದು ಹಾಡು ತೂರಿ ಬಂದು ಸಿನಿಮಾವನ್ನು ಮತ್ತದೇ ಟ್ರ್ಯಾಕ್ ಕಡೆಗೆ ಕರೆದೊಯ್ಯುತ್ತೆ. ಉಳಿದಂತೆ ಹಿನ್ನೆಲೆ ಸಂಗೀತದಲ್ಲಿ ಗಿಟಾರ್ ನದ್ದೇ ಸದ್ದು. ಇಂತಹ ಸಿನಿಮಾಗಳಿಗೆ ಎಫೆಕ್ಟ್ ಮುಖ್ಯ. ಅದಿಲ್ಲಿ ಮಾಯ. ಆದರೂ ಕೆಲವು ಕಡೆ ದೆವ್ವದ ಪ್ರೇಮದಾಟ ನೋಡುಗರಿಗೆ ನಗುಬತರಿಸುತ್ತೆ ಅನ್ನೋದೇ ಸಮಾಧಾನ.

ಚಿತ್ರದಲ್ಲಿ ಓಹೋ ಎನ್ನುವ ಎಲಿಮೆಂಟ್ಸ್ ಇರದಿದ್ದರೂ, ಕಥೆ ಸ್ವಲ್ಪ ಇಂಟ್ರೆಸ್ಟಿಂಗ್ ಎನಿಸುತ್ತೆ. ನಿರ್ದೇಶಕರ ಜಾಣತನ ಬಗ್ಗೆ ಹೇಳಬೇಕೆಂದರೆ, ಇಲ್ಲಿ ನಾಲ್ಕು ಪಾತ್ರಗಳು ಮಾತ್ರ ರಾರಾಜಿಸುತ್ತವೆ. ಎರಡು‌ಮನೆ ನಾಲ್ಕು ಪಾತ್ರ ಒಂದು ರಸ್ತೆ, ಒಂದು ತೋಟ ಇವಿಷ್ಟೇ ಲೊಕೇಷನ್. ಒಂದು ದೆವ್ವದ ಕಥೆ ಹೇಳೋಕೆ ಇಷ್ಟು ಸಾಕು ಬಿಡಿ.

ಇಷ್ಟಕ್ಕೂ ಕಥೆ ಏನು?
ಅಪ್ಪ ಅಮ್ಮನ ಕಳಕೊಂಡ ಅನಾಥ ಹುಡುಗ ಒಬ್ಬ ಶಿಕ್ಷಕ. ಅವನಿಗೋ ಪ್ರೀತಿಸುವ ಬಯಕೆ. ಅದೇ ಸಮಯದಲ್ಲಿ ಖಾಲಿ ಇರುವ ಎದುರು ಮನೆಗೆ ಗಂಡ ಹೆಂಡತಿಯ ಆಗಮನವಾಗುತ್ತೆ. ಇತ್ತ ಆ ಹುಡುಗನ ಮನದಲ್ಲಿ ಸಣ್ಣ ಆಸೆ ಚಿಗುರೊಡೆಯುತ್ತೆ. ಎದುರು ಮನೆ ಹುಡುಗಿ ಅಂದುಕೊಂಡು ಪ್ರೀತಿಸತೊಡಗುತ್ತಾನೆ. ಆದರೆ, ಆಕೆಗೆ ಮದ್ವೆ ಆಗಿರೋ ವಿಷಯ ಗೊತ್ತಾದ ಮೇಲೆ ಆಸೆಗಳು ನುಚ್ಚು ನೂರು.

ಅತ್ತ ತನ್ನೊಳಗಿನ ಆಸೆಯನ್ನು ಆಕೆಯ ಮುಂದೆ ಹೊರಹಾಕುವಾಗ ಒಂದು ಘಟನೆ ನಡೆಯುತ್ತೆ. ಆಮೇಲೆ ಆಕೆಯ ಪತಿ ರಸ್ತೆ ಅಪಘಾತದಲ್ಲಿ ಸಾಯುತ್ತಾನೆ. ಮುಂದೆ ಆಗೋದೆಲ್ಲಾ ಭಯಾನಕ ಘಟನೆಗಳು. ಹಾಗಂತ ಬೆಚ್ಚಿ ಬೀಳಿಸುವ ಘಟನೆಗಳೇನು ಅಲ್ಲಿ. ಸಣ್ಣದ್ದೊಂದು ತಿರುವುಬಸಿನಿಮಾದ ಹೈಲೆಟ್. ಅದೇನು ಎಂಬ ಕುತೂಹಲ ಇದ್ದರೆ ವೆಕೆಂಟ್ ಹೌಸ್ ನೋಡಬಹುದು.

ಯಾರು‌ ಹೇಗೆ

ಎಸ್ತರ್ ನರೋನ್ಹಾ ಪಾತ್ರವನ್ನು ಆವರಿಸಿದ್ದಾರೆ. ಇಢಿ ಸಿನಿಮಾದ ಹೈಲೆಟ್ ಅವರು. ಶ್ರೇಯಸ್ ಚಿಂಗ ನಟನೆ ಬಗ್ಗೆ ಹೆಚ್ಚೇನು ಹೇಳಂಗಿಲ್ಲ. ಪ್ರೇಮಿಯಾಗಿ, ನಗುತ್ತ ನಗಿಸುತ್ತ ಅಳುತ್ತಲೇ ಕಾಡುತ್ತಾರೆ. ಸಂದೀಪ್ ಮಲಾನಿ ನಿರ್ದೇಶಕರು ಕೊಟ್ಟ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.
ನರೇಂದ್ರ ಗೌಡ ಛಾಯಾಗ್ರಹಣದಲ್ಲಿ ಮಲೆನಾಡ ಸೊಬಗಿದೆ. ವಿಜಯ್ ರಾಜ್ ಸಂಕಲನ ಇನ್ನಷ್ಟು ಚುರುಕಾಗಬೇಕಿತ್ತು.

Related Posts

error: Content is protected !!