ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ, ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ಹಾಗೂ ದೀಪಕ್ ಅರಸ್ ನಿರ್ದೇಶನದ “ಶುಗರ್ ಫ್ಯಾಕ್ಟರಿ” ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಿಖಿಲ್ ಕುಮಾರಸ್ವಾಮಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ಭರ್ಜರಿ ಯಶಸ್ವಿಯಾಗಲೆಂದು ಹಾರೈಸಿದರು. ಜಗದೀಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
“ಶುಗರ್ ಫ್ಯಾಕ್ಟರಿ” ಎಂದರೆ ಒಂದು ಪಬ್ ನ ಹೆಸರು ಎಂದು ಮಾತು ಆರಂಭಿಸಿದ ನಿರ್ದೇಶಕ ದೀಪಕ್ ಅರಸ್, ಚಿತ್ರದಲ್ಲಿ ಪಬ್ ಕೂಡ ಒಂದು ಪಾತ್ರ ಹಾಗಾಗಿ ನಮ್ಮ ಚಿತ್ರಕ್ಕೆ “ಶುಗರ್ ಫ್ಯಾಕ್ಟರಿ” ಎಂದು ಹೆಸರಿಟ್ಟಿದ್ದೇವೆ. ಹಾಗಂತ ನಮ್ಮ ಚಿತ್ರದಲ್ಲಿ ಬರಿ ಹಾಡು, ಕುಣಿತ, ಕುಡಿತ ಅಷ್ಟೇ ಇಲ್ಲ. ಇದೊಂದು ಸುಮಧುರ ಪ್ರೇಮ ಕಾವ್ಯ ಕೂಡ. ಆಕ್ಷನ್ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗುತ್ತದೆ. ಒಟ್ಟಿನಲ್ಲಿ ಈಗಿನ ಜನತೆ ಯಾವ ಮನೋರಂಜನೆ ಬಯಸುತ್ತಾರೊ ಅದೆಲ್ಲವೂ ನಮ್ಮ ಚಿತ್ರದಲ್ಲಿದೆ ಎಂದರು.
ಚಿತ್ರತಂಡದವರ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಬಂದಿದೆ. ಇದೇ ನವೆಂಬರ್ 24ರಂದು ತೆರೆಗೆ ಬರುತ್ತಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕ ಆರ್ ಗಿರೀಶ್.
“ಲವ್ ಮಾಕ್ಟೇಲ್” ಚಿತ್ರದ ನಂತರ ಕೇಳಿದ ಕಥೆ ಇದು. ನಾನು “ಲವ್ ಮಾಕ್ಟೇಲ್ ” ಚಿತ್ರದ ಆಡಿಶನ್ ನಲ್ಲಿ ಯುವಜನತೆ ಈಗ ಯಾವ ರೀತಿ ಕಥೆ ಇಷ್ಟ ಪಡುತ್ತಾರೆ ಎಂದು ಕೇಳುತ್ತಿದೆ. ಅದೇ ತರಹದ ಕಥೆಯನ್ನು ದೀಪಕ್ ಮಾಡಿದ್ದಾರೆ. ಚಿತ್ರ ಚೆನ್ನಾಗಿ ಬಂದಿದೆ ಎಂದು ನಾಯಕ ಡಾರ್ಲಿಂಗ್ ಕೃಷ್ಣ ತಿಳಿಸಿದರು.
ನಾಯಕಿಯರಾದ ಸೋನಾಲ್ ಮೊಂತೆರೊ, ಅದ್ವಿತಿ ಶೆಟ್ಟಿ ಹಾಗೂ ರುಹಾನಿ ಶೆಟ್ಟಿ ತಮ್ಮ ಪಾತ್ರಗಳ ಕುರಿತು ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ಕಬೀರ್ ರಫಿ ಹಾಗೂ ನೃತ್ಯ ನಿರ್ದೇಶಕ ಧನಂಜಯ್ “ಶುಗರ್ ಫ್ಯಾಕ್ಟರಿ” ಬಗ್ಗೆ ಮಾತನಾಡಿದರು. ರಂಗಾಯಣ ರಘು ಅವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.