Categories
ಸಿನಿ ಸುದ್ದಿ

ಶಿವಣ್ಣ ಈಗ ಕ್ಲಾಸ್ ಟೀಚರ್: ಶಿವಣ್ಣ-ಶ್ರೀನಿ ಹೊಸ ಸಿನಿಮಾ ಅನೌನ್ಸ್

ಆಯುಧ ಬಿಟ್ಟು ಅಕ್ಷರ ಹಿಡಿದ ಶಿವಣ್ಣ…ಗೀತಾ ಪಿಕ್ಚರ್ಸ್ ಮೂರನೇ ಸಿನಿಮಾ A for ಆನಂದ್. ಮಕ್ಕಳ‌ ದಿನಾಚರಣೆ ದಿನದಂದು‌ ಮಕ್ಕಳ ಸಿನಿಮಾ ಘೋಷಿಸಿದ ಶಿವಣ್ಣ….ಗೀತಾ ಪಿಕ್ಚರ್ಸ್ ನಡಿ ಶ್ರೀನಿ ನಿರ್ದೇಶನದ ಚಿತ್ರ A for ಆನಂದ್

ಭೈರತಿ ರಣಗಲ್ ನಲ್ಲಿ ಲಾಯರ್, ಟಗರು ಸಿನಿಮಾದಲ್ಲಿ ಪೊಲೀಸ್, ಮಫ್ತಿಯಲ್ಲಿ ಡಾನ್… ಹೀಗೆ ಪ್ರತಿ ಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಪರಕಾಯ ಪ್ರವೇಶಿಸುವ ಕರುನಾಡ ಕಿಂಗ್ ಶಿವರಾಜ್ ಕುಮಾರ್ ಈಗ ಮಾಸ್ ನಿಂದ ಮೇಸ್ಟ್ರಾಗಿ ಬದಲಾಗುತ್ತಿದ್ದಾರೆ. ಭಜರಂಗಿ ಈಗ ಭೋದಕನಾಗಿದ್ದಾರೆ. ಭೈರತಿ ರಣಗಲ್ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ದೊಡ್ಮನೆ ದೊರೆ ಶಿವ ಸೈನ್ಯಕ್ಕೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಈಗಾಗಲೇ ಸಾಲು ಸಾಲು ಸಿನಿಮಾಗಳಿಗೆ ಸೈ ಎಂದಿರುವ ಶಿವಣ್ಣ ಹೊಸ ಸಿನಿಮಾ ಘೋಷಿಸಿದ್ದಾರೆ.

ಇಂದು ಮಕ್ಕಳ‌ ದಿನಾಚರಣೆ. ಈ ಶುಭ ದಿನದಂದು ಶಿವಣ್ಣ ಮಕ್ಕಳ ಸಿನಿಮಾದಲ್ಲಿ ನಟಿಸುವ ಬಗ್ಗೆ ಗುಟ್ಟುರಟ್ಟು ಮಾಡಿದ್ದಾರೆ. ‘ಸುಂದರ ಕಾಂಡ’ದಲ್ಲಿ ಸಿನಿಮಾದಲ್ಲಿ ಟೀಚರ್ ಆಗಿ‌ ಅಭಿನಯಿಸಿದ್ದ ಕರುನಾಡ ಕಿಂಗ್ ಈಗ ಬಹಳ ವರ್ಷದ ಬಳಿಕ ಈ ರೀತಿಯ ಪಾತ್ರ ಒಪ್ಪಿಕೊಂಡಿದ್ದಾರೆ. ವಿಶೇಷ ಅಂದರೆ ಇದು ನೈಜ ಘಟನೆಯಾಧಾರಿತ ಸಿನಿಮಾ.

ಲಾಂಗ್ ಬಿಟ್ಟು ಶಿವಣ್ಣ ಈಗ ಪೆನ್ನು ಹಿಡಿಯುತ್ತಿದ್ದಾರೆ. ಗುರುವಾಗುತ್ತಿರುವ ಶಿವಣ್ಣನಿಗೆ ಓಂಕಾರ ಹಾಕೋದಿಕ್ಕೆ ಘೋಸ್ಟ್ ಸೂತ್ರಧಾರ ಶ್ರೀ‌ನಿ‌ ಸಜ್ಜಾಗಿದ್ದಾರೆ. ಶ್ರೀನಿ ಬೇರೆ ತರಹದ ಕಥೆ ಮಾಡಿಕೊಂಡು ಬಂದಿದ್ದಾರೆ. ಪಾತ್ರ ಕೂಡಾ ರೆಗ್ಯುಲರ್‌ ಆಗಿಲ್ಲ. ಈ ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶ ಇರಲಿದೆ. ಶಿವಣ್ಣ-ಶ್ರೀನಿ ಕಾಂಬೋದ A for ಆನಂದ್ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ವೇದ, ಭೈರತಿ ರಣಗಲ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿರುವ ಗೀತಾ ಶಿವರಾಜ್ ಕುಮಾರ್ ಒಡೆತನದ ಗೀತಾ ಪಿಕ್ಚರ್ಸ್ ಈ ಚಿತ್ರ ನಿರ್ಮಾಣ ಮಾಡುತ್ತಿದೆ. A for ಆನಂದ್ ಸಿನಿಮಾಗೆ ಬಹುತೇಕ ಘೋಸ್ಟ್ ತಾಂತ್ರಿಕ ವರ್ಗವೇ ಕೆಲಸ ಮಾಡುತ್ತಿದೆ. ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್ ಕುಮಾರ್ ಸಂಕಲನ, ಪ್ರಸನ್ನ ವಿಎಂ ಸಂಭಾಷಣೆ ಚಿತ್ರಕ್ಕಿದೆ. ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ಇಡೀ ತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

Categories
ಸಿನಿ ಸುದ್ದಿ

ದಾಸವರೇಣ್ಯ ಶ್ರೀ ವಿಜಯ ದಾಸರು ಚಿತ್ರದ ಎರಡನೇ ಭಾಗಕ್ಕೆ ಚಾಲನೆ‌

ಖ್ಯಾತ ಹರಿದಾಸರಾದ ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ ಆರಾಧನಾ ಪರ್ವಕಾಲದಲ್ಲಿ “ದಾಸವರೇಣ್ಯ ಶ್ರೀ ವಿಜಯದಾಸರು ಭಾಗ 2” ಚಿತ್ರದ ಮುಹೂರ್ತ ಸಮಾರಂಭ ಬಸವನಗುಡಿಯ ಶ್ರೀಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ವಿದ್ವಾನ್ ಶ್ರೀಸತ್ಯಧ್ಯಾನಾಚಾರ್ಯ ಕಟ್ಟಿ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು.‌ ಇತ್ತೀಚೆಗಷ್ಟೇ ಟಿಟಿಡಿ ಸದಸ್ಯರಾಗಿ ಆಯ್ಕೆಯಾಗಿರುವ ನರೇಶ್ ಕುಮಾರ್ ಹಾಗೂ ಖ್ಯಾತ ಗಮಕ ಕಲಾವಿದರಾದ ಪ್ರಸನ್ನ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಹೂರ್ತ ಸಮಾರಂಭದ ನಂತರ ಮಾತನಾಡಿದ ಗಣ್ಯರು ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು. ‌‌‌

ನಾನು ನಮ್ಮ ತಂದೆ ತಾಯಿಯ ಆಶೀರ್ವಾದದಿಂದ ಎಸ್ ಪಿ ಜೆ ಮೂವೀಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ತಿಳಿಸಿದ ನಿರ್ಮಾಪಕ ತ್ರಿವಿಕ್ರಮ ಜೋಶಿ, ನಾನೇ ವಿಜಯದಾಸರ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಭಾಗ ಒಂದನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ವಿಜಯದಾಸರ ಆರಾಧನಾ ಸಂದರ್ಭದಲ್ಲೇ ಎರಡನೇ ಭಾಗಕ್ಕೆ ಚಾಲನೆ ದೊರಕ್ಕಿದೆ. ನನ್ನದಲ್ಲದ ಕ್ಷೇತ್ರಕ್ಕೆ ನಿರ್ದೇಶಕ ಮಧುಸೂದನ್ ಹವಾಲ್ದಾರ್ ನನ್ನನ್ನು ಎಳೆದು ತಂದಿದ್ದಾರೆ.

ಹರಿದಾಸರ ಕುರಿತಾಗಿ ಹತ್ತು ಸಿನಿಮಾಗಳನ್ನು ನಿರ್ಮಿಸುವ ಯೋಜನೆಯಿದೆ.‌ ಇದೇ ಸಂದರ್ಭದಲ್ಲಿ ಮತ್ತೊಂದು ವಿಷಯ ತಿಳಿಸುತ್ತಿದ್ದೇನೆ. ನವೆಂಬರ್ 12, ದೇಶ ಕಂಡ ಸಜ್ಜನ ರಾಜಕಾರಣಿ ದಿ.ಅನಂತಕುಮಾರ್ ಅವರು ನಮ್ಮನೆಲ್ಲಾ ಬಿಟ್ಟು‌ ಹೋದ ದಿನ. ಅವರು ನನ್ನ ಗುರುಗಳು. ಇಂದು ಅವರ ಶ್ರೀಮತಿ ಅವರು ಬಂದಿದ್ದಾರೆ.

ಅವರ ಜೊತಗೆ ಅನಂತಕುಮಾರ್ ಅವರ ಕುರಿತಾದ ಚಿತ್ರ ಮಾಡುವ ಬಗ್ಗೆ ಚರ್ಚಿಸಿದ್ದೇನೆ. ಸದ್ಯದಲ್ಲೇ ಈ ಚಿತ್ರವನ್ನು ಆರಂಭಿಸುತ್ತೇವೆ. ನನ್ನ ತರಹ ಸಾಕಷ್ಟು ಅನಂತಕುಮಾರ್ ಅಭಿಮಾನಿಗಳು ನನ್ನೊಂದಿಗಿರುತ್ತಾರೆ. ಇಂದು ಪೂಜ್ಯ ಆಚಾರ್ಯರು ಸಹ ಈ ಚಿತ್ರ ಆರಂಭಿಸುವಂತೆ ಹೇಳಿ ಆಶೀರ್ವದಿಸಿದ್ದಾರೆ ಎಂದರು.

“ದಾಸವರೇಣ್ಯ ಶ್ರೀ ವಿಜಯದಾಸರು ಭಾಗ ೨” ಚಿತ್ರಕ್ಕೆ ಚಾಲನೆ ನೀಡಿದ ಗಣ್ಯರಿಗೆ ಧನ್ಯವಾದ ತಿಳಿಸುತ್ತೇನೆ.‌ ಇಂದಿನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಇನ್ನು ನಾಲ್ಕು ತಿಂಗಳಲ್ಲಿ ಚಿತ್ರ ಸಿದ್ದವಾಗಲಿದೆ. ಹಂಪೆ, ಆನೆಗುಂದಿ, ಹುಲಗಿ, ಶ್ರೀರಂಗಪಟ್ಟಣ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಒಂಭತ್ತು ಹಾಡುಗಳು ಚಿತ್ರದಲ್ಲಿರುತ್ತದೆ. ತ್ರಿವಿಕ್ರಮ ಜೋಶಿ, ಪ್ರಭಂಜನ ದೇಶಪಾಂಡೆ, ಶರತ್ ಜೋಶಿ, ಶ್ರೀಲತ ಬಾಗೇವಾಡಿ ಮುಂತಾದವರು ಚಿತ್ರದ ತಾರಾಬಳಗದಲ್ಲಿರುತ್ತಾರೆ ಎಂದು ನಿರ್ದೇಶಕ ಮಧುಸೂದನ್ ಹವಾಲ್ದಾರ್ ತಿಳಿಸಿದರು.

ಚಿತ್ರಕಥೆ ಹಾಗೂ ಸಂಭಾಷಣೆ ಕುರಿತು ಜೆ.ಎಂ.ಪ್ರಹ್ಲಾದ್ ಮಾತನಾಡಿದರು. ಗೋಪಾಲದಾಸರ ಪಾತ್ರದಲ್ಲಿ ಕಾಣಿಕೊಳ್ಳುತ್ತಿರುವುದಾಗಿ ಪ್ರಭಂಜನ ದೇಶಪಾಂಡೆ ಹಾಗು ವಿಜಯದಾಸರ ಪತ್ನಿ ಹರಳಮ್ಮನವರ ಪಾತ್ರ ನಿರ್ವಹಿಸುತ್ತಿರುವುದಾಗಿ ನಟಿ ಶ್ರೀಲತ ಬಾಗೇವಾಡಿ ತಿಳಿಸಿದರು.

Categories
ಸಿನಿ ಸುದ್ದಿ

ಅಮರನ್ ಅಬ್ಬರ: ಶಿವ ಕಾರ್ತಿಕೇಯನ್-ಸಾಯಿಪಲ್ಲವಿ ಸಿನಿಮಾಗೆ ಜೈ ಎಂದ ಪ್ರೇಕ್ಷಕ

ತಮಿಳು ನಟ ಶಿವ ಕಾರ್ತಿಕೇಯನ್ ಹಾಗೂ ನಟಿ ಸಾಯಿ ಪಲ್ಲವಿ ನಟನೆಯ ಅಮರನ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್ ನಲ್ಲೂ ಗಳಿಕೆಯಲ್ಲಿ ಸಖತ್ ಸದ್ದು ಮಾಡ್ತಿದೆ. ಹುತಾತ್ಮರಾದ ಭಾರತೀಯ ಸೇನಾ ಅಧಿಕಾರಿ ಮೇಜರ್ ಮುಕುಂದ್ ವರದರಾಜನ್ ಅವರ ಸ್ಪೂರ್ತಿದಾಯಕ ಕಥೆ ಹೇಳುವ ಬಹುನಿರೀಕ್ಷಿತ ಬಯೋಪಿಕ್ ಸಿನಿಮಾ 2024ರ ತಮಿಳು ಚಿತ್ರರಂಗದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ. ಅಕ್ಟೋಬರ್ 31ರಂದು ತೆರೆಕಂಡ ಅಮರನ್ ಸಿನಿಮಾ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

ಸೋನಿ ಪಿಕ್ಚರ್ಸ್ ಸಹಯೋಗದಲ್ಲಿ ನಟ ಕಮಲ್ ಹಾಸನ್ ಅವರ ರಾಜಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರದಲ್ಲಿ ಶಿವಕಾರ್ತಿಕೇಯನ್ ಸೇನಾ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಸಾಯಿ ಪಲ್ಲವಿ ಅದ್ಭುತವಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟರ್ ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ.

ಈ ಚಿತ್ರವು ದಿವಂಗತ ಸೇನಾ ಮೇಜರ್ ಮುಕುಂದ್ ವರದರಾಜನ್ ಅವರ ಜೀವನವನ್ನು ಆಧರಿಸಿದೆ. ಶಿವಕಾರ್ತಿಕೇಯನ್ ಅವರು ಮೇಜರ್ ಮುಕುಂದ್ ಪಾತ್ರದಲ್ಲಿ ಕಾಣಿಸಿಕೊಂಡ್ರೆ. ಪತ್ನಿ ಇಂದೂ ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದೀಪಾವಳಿ ಹಬ್ಬದ ದಿನದಂದು ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಅಮರನ್ ಎಲ್ಲೆಡೆ ಅಬ್ಬರಿಸುತ್ತಿದ್ದು, ಚಿತ್ರತಂಡದ ಖುಷಿಗೆ ಕಾರಣವಾಗಿದೆ.

Categories
ಸಿನಿ ಸುದ್ದಿ

ಟಾಕ್ಸಿಕ್ ಸಿನಿಮಾ ವಿರುದ್ಧ ಎಫ್ಐಆರ್: ಸಿನಿಮಾಗೆ ಕಂಟಕ

ಕನ್ನಡದ ನಟ ಯಶ್‌ ನಟನೆಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಮಾಡಲು ಎಚ್ಎಂಟಿಯಲ್ಲಿದ್ದ ಮರ-ಗಿಡಗಳನ್ನು ಕಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಎಫ್‍ಐಆರ್ ದಾಖಲಿಸಿದೆ. ನ್ಯಾಯಾಲಯದ ಆದೇಶ ಪಡೆದು ಅರಣ್ಯ ಇಲಾಖೆ ಎಫ್‍ಐಆರ್ ದಾಖಲಿಸಿದೆ. ಟಾಕ್ಸಿಕ್ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿನ್ , ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಹಾಗು ಹೆಚ್‍ಎಂಟಿ ಜನರಲ್ ಮ್ಯಾನೇಜರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಕೆಲವು ದಿನಗಳ ಹಿಂದೆ ಮರಗಳ ಮಾರಣ ಹೋಮದ ಆರೋಪ ಕೇಳಿ ಬಂದಿದ್ದರಿಂದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಖುದ್ದು ಸ್ಥಳ ಪರಿಶೀಲನೆ ನಡೆಸಿದ್ದರು. ಆಗ, ಯಾರು ಶೂಟಿಂಗ್ ಗಾಗಿ ಮರ ಗಿಡಗಳನ್ನು ಕಡಿಯಲು ಅನುಮತಿ ನೀಡಿದ್ದರು. ಯಾರು ಈ ಕೃತ್ಯ ನಡೆಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ಪತ್ರದ ಆದೇಶದ ಮೇಲೆ, ಅರಣ್ಯ ಅಧಿಕಾರಿಗಳು, ವಿಚಾರಣೆ ನಡೆಸಿ, ಟಾಕ್ಸಿಕ್ ಸಿನಿಮಾದ ಶೂಟಿಂಗ್ ಗಾಗಿಯೇ ಮರಗಿಡ ಕಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಆರೋಪ ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಎಚ್ಚರಿಸಿದ್ದರು.

Categories
ಸಿನಿ ಸುದ್ದಿ

ಸಂಜು ವೆಡ್ಸ್ ಗೀತಾ-2 ಉಪ್ಪಿ ಮೆಚ್ಚಿದ ಕ್ಲೈಮ್ಯಾಕ್ಸ್: ಅವನು ಸಂಜು ಅವಳು ಗೀತಾ ಹಾಡು ಬಂತು

  • ಕ್ಲೈಮ್ಯಾಕ್ಸ್ ನೋಡಿ 100% ಹಿಟ್ ಅಂದ ಉಪ್ಪಿ,
  • ಸಾಂಗ್ ನೋಡಿ ಸೂಪರ್ ಹಿಟ್ ಅಂದ್ರು

ಪವಿತ್ರ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರ ನಿರ್ಮಾಣದ, ನಾಗಶೇಖರ್ ಅವರ ನಿರ್ದೇಶನದ ಈ ವರ್ಷದ ಬಹುನಿರೀಕ್ಷಿತ ಚಿತ್ರ ಸಂಜು ವೆಡ್ಸ್ ಗೀತಾ-2. ನಾಗಶೇಖರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರದ ‘ಅವನು ಸಂಜು ಅವಳು ಗೀತಾ ಅವರಿಬ್ಬರು ಸೇರಲು ಸಂಗೀತ’ ಎಂಬ ಹಾಡಿನ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಅಲ್ಲಿ ನಟ ಉಪೇಂದ್ರ, ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಕೂಡ ಹಾಜರಿದ್ದರು.
ಕವಿರಾಜ್ ಅವರ ಸಾಹಿತ್ಯ ರಚನೆಯ ಈ ಹಾಡಿಗೆ ಶ್ರೀಧರ್ ವಿ.ಸಂಭ್ರಮ್ ಅದ್ಭುತವಾದ ಟ್ಯೂನ್ ಹಾಕಿದ್ದಾರೆ.

ನಿರ್ದೇಶಕ‌ ನಾಗಶೇಖರ್ ನಾನು ಈ ಸಿನಿಮಾ ಮಾಡಬೇಕೆಂದು ನಿರ್ಧರಿಸಿದಾಗ ಮೊದಲು ಹಾಡುಗಳನ್ನು ರೆಡಿ ಮಾಡಿಕೊಳ್ಳಬೇಕಾಗಿತ್ತು. ಒಟ್ಟು 6 ಸುಂದರ ಹಾಡುಗಳು ಚಿತ್ರದಲ್ಲಿದ್ದು, ಈ ಹಾಡಿನಲ್ಲಿ ಒಬ್ಬ ಸೈನಿಕನ ಪ್ರೇಮಕಥೆಯನ್ನು ಹೇಳಿದ್ದೇನೆ. ಸ್ವಿಟ್ಜರ್ ಲ್ಯಾಂಡ್ ಸೈನಿಕನೊಬ್ಬ ತನ್ನ ರಾಣಿ ಸೆಲ್ವಿಕ್ ಳನ್ನು ತನ್ನ ಹೃದಯದಲ್ಲಿಟ್ಟುಕೊಂಡು ಪ್ರೀತಿ ಮಾಡ್ತಿರ್ತಾನೆ. ಆತನಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಲಿಕ್ಕೆ ಆಗ್ತಿರಲಿಲ್ಲ, ಏಕೆಂದರೆ ಆಕೆ ಮಹಾರಾಣಿ. ಆತನದು ಒನ್ ವೇ ಲವ್, ಒಮ್ಮೆ ಜರ್ಮನ್ ಸೈನಿಕರು ಸ್ವಿಟ್ಜರ್ ಲ್ಯಾಂಡ್ ಮೇಲೆ ಅಟ್ಯಾಕ್ ಮಾಡ್ತಾರೆ.

ಆಗ ವೀರಾವೇಶದಿಂದ ಹೋರಾಡಿದ ಆ ಸೈನಿಕ ಅವರನ್ನು ಸೋಲಿಸಿ ವೀರಮರಣವನ್ನಪ್ಪುತ್ತಾನೆ, ತನ್ನ ರಾಣಿಗೆ ಆಕೆಯ ಕಿರೀಟವನ್ನು ಮತ್ತೆ ತಂದುಕೊಡುತ್ತಾನೆ. ಸಾಯೋ ಸಮಯದಲ್ಲಿ ಆತ ರಾಣಿಗೆ ತನ್ನ ರಕ್ತದಲ್ಲಿ “ಐ ಲವ್ ಯು ಫಾರೆವರ್” ಅಂತ ಒಂದು ಪತ್ರ ಬರೆಯುತ್ತಾನೆ. ಈ ಹಾಡು ಚಿತ್ರಕಥೆಯಲ್ಲಿ ಬಹಳ ಮುಖ್ಯವಾದ ಭಾಗವಾಗಿರುತ್ತದೆ. ಈ ಸಾಂಗ್ ನಲ್ಲಿ ಮೊದಲಬಾರಿಗೆ ಆಕ್ಷನ್ ಇಟ್ಟಿದ್ದೇನೆ ಎಂದು ಹೇಳಿದರು.

ಶ್ರೀಧರ್ ವಿ.ಸಂಭ್ರಮ್ ಮಾತನಾಡಿ ‌ನಾಗಶೇಖರ್ ಅವರು ಈ ಥರದ ಕಥೆ ಇದೆ ಎಂದಾಗ ಖುಷಿಯಾಯ್ತು. ಅವರು ಸುಲಭವಾಗಿ ಟ್ಯೂನ್ ಒಪ್ಪುವವರಲ್ಲ, ಆದರೆ ಈ ನಾನು ಈ ಟ್ಯೂನ್ ಕೊಟ್ಟ ಕೂಡಲೇ ಒಪ್ಪಿದರು. ಎಲ್ಲಾ ಹಾಡುಗಳು ಕಥೆಗೆ ಪೂರಕವಾಗಿ ಮೂಡಿಬಂದಿವೆ ಎಂದರು. ಸಾಹಿತಿ ಕವಿರಾಜ್ ಮಾತನಾಡಿ ಇದು ಸಿನಿಮಾ ಕೆಲಸ ಅನಿಸೋದೇ ಇಲ್ಲ. ನಮಗೆ ಅಷ್ಟು ಫ್ರೀಡಂ ಕೊಟ್ಟಿರ್ತಾರೆ. ನಾಗಶೇಖರ್ ಸಿನಿಮಾಗೆ ಹಾಡುಗಳನ್ನು ಬರೀಬೇಕಾದ್ರೆ ತಾನಾಗೇ ಒಳ್ಳೊಳ್ಳೆ ಪದಗಳು ಹುಟ್ಟಿಕೊಳ್ಳುತ್ತವೆ. ನಿರ್ದೇಶಕರು ನಮಗೆಲ್ಲ ಒಂದು ರೆಸಾರ್ಟ್ ಬುಕ್ ಮಾಡಿ ಲಿರಿಕ್ ಬರೆಯಲು ಹೇಳಿದ್ದರು, ಈ ಚಿತ್ರದ ಸಾಂಗ್ ಬರೆಯಲು ಹೋದಾಗ ಏನೋ ಹೊಸ ಸ್ಪೂರ್ತಿ ಬರುತ್ತದೆ ಎಂದು ಹೇಳಿದರು.

ನಟ ಉಪೇಂದ್ರ ಮಾತನಾಡಿ ನನಗೆ ಮೊದಲು ಈ ಚಿತ್ರದ ಕ್ಲೈಮ್ಯಾಕ್ಸ್ ಏನು ಅಂತ ಗೊತ್ತಾಯ್ತು.ನಾನು ಅವತ್ತೇ ಹೇಳಿದೆ ಈ ಸಿನಿಮಾ ಸೂಪರ್ ಸಕ್ಸಸ್ ಅಂತ. ಈಗ ಈ ಹಾಡನ್ನು ನೋಡಿದಾಗ ಡಿಸೈಡ್ ಮಾಡಿದೆ. 100% ಹಿಟ್ ಆಗುತ್ತೆ ಎಂದು ಕಾನ್ಫಿಡೆಂಟಾಗಿ ಹೇಳಿದರು.
ನಿರ್ಮಾಪಕ ಛಲವಾದಿ ಕುಮಾರ್, ಮಾತನಾಡುತ್ತ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಖಂಡಿತ ಹಿಟ್ ಆಗುತ್ತೆ ಎಂಬ ಬಂಬಿಕೆಯಿದೆ ಎಂದರು. ನಾಯಕಿ ರಚಿತಾರಾಮ್ ಶೂಟಿಂಗ್ ನಲ್ಲಿದ್ದುದರಿಂದ ಬಂದಿರಲಿಲ್ಲ.

ವಿತರಕ ಗೋಕುಲರಾಜ್ ಮಾತನಾಡಿ ನನಗೆ ಚಿತ್ರದ ಸ್ಯಾಂಪಲ್ಸ್ ತೋರಿಸಿದರು.‌ ತುಂಬಾ ಚೆನ್ನಾಗಿ ಬಂದಿದೆ. ಎಂದರು. ನಾಗಶೇಖರ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಸಂಜು ಹಾಗೂ ಗೀತಾ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು ನಿರೂಪಿಸಿದ್ದಾರೆ. ಈ ಚಿತ್ರದಲ್ಲಿ ಒಬ್ಬ ರೇಶ್ಮೆ ಬೆಳೆಗಾರನಾಗಿ ನಟ ಶ್ರೀನಗರ ಕಿಟ್ಟಿ ಅವರು ಕಾಣಿಸಿಕೊಂಡಿದ್ದು, ನಾಯಕಿಯಾಗಿ ರಚಿತಾರಾಮ್ ಅಭಿನಯಿಸಿದ್ದಾರೆ.
ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ, ತಬಲಾನಾಣಿ ಸಂಪತ್ ಹೀಗೆ ಎಲ್ಲಾ ಹೆಸರಾಂತ ಕಲಾವಿದರೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್ ನ ಅದ್ಭುತವಾದ ಲೊಕೇಶನ್‌ಗಳಲ್ಲಿ 72 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಶಿಡ್ಲಘಟ್ಟದಲ್ಲಿ ರೈತರು ಎದುರಿಸುತ್ತಿರೋ ಸಮಸ್ಯೆ, ಅಲ್ಲಿನ ಕಪ್ಪುಮಣ್ಣಿನ ಕಥೆಯನ್ನು ಈ ಚಿತ್ರದ ಮೂಲಕ ನಾಗಶೇಖರ್ ಹೇಳ ಹೊರಟಿದ್ದಾರೆ. ಈಗಿನ ಕಾಲದ ಲವ್‌ಸ್ಟೋರಿ ಜೊತೆಗೆ ಒಂದು ಸರ್‌ ಪ್ರೈಸ್ ಕೂಡ ಈ ಚಿತ್ರದಲ್ಲಿದೆ.

ನಾಯಕ ಶ್ರೀನಗರ ಕಿಟ್ಟಿ ಮಾತನಾಡುತ್ತ ಮೊದಲಬಾರಿಗೆ ಒಬ್ಬ ರೇಶ್ಮೆ ಬೆಳೆಗಾರನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ನಿರ್ದೇಶನ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ವಿಶೇಷ ಪಾತ್ರದಲ್ಲಿ ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್‌ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.

Categories
ಸಿನಿ ಸುದ್ದಿ

ಅಭಿಷೇಕ್ ಅಂಬರೀಷ್ ದಂಪತಿಗೆ ಗಂಡು ಮಗು ಜನನ

ರೆಬೆಲ್ ಸ್ಟಾರ್ ಅಂಬರೀಷ್ ಮನೆಯಲ್ಲಿ ಈಗ ಖುಷಿ ಮನೆ ಮಾಡಿದೆ. ಹೌದು, ಅವರ ಮನೆಯಲ್ಲೀಗ ಮುದ್ದಾದ ಮಗುವಿನ ಆಗಮನವಾಗಿದೆ. ಅವಿವಾ ಅವರು ನವೆಂಬರ್ 12 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಜೊತೆ ಸುಮಲತಾ ಅಂಬರೀಷ್ ಅವರು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸದ್ಯ ಎಲ್ಲೆಡೆ ವೈರಲ್ ಆಗಿದೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಕಳೆದ 2023 ರಲ್ಲಿ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಅವರು ವಿವಾಹವಾಗಿದ್ದರು. ಇವರಿಬ್ಬರ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ಅಂದಹಾಗೆ, ನ.12 ರ ಬೆಳಿಗ್ಗೆ 8.30ರ ಹೊತ್ತಿಗೆ ಗಂಡು ಮಗುವಿನ ಜನನವಾಗಿದೆ.

ಅವಿವಾ ಅವರ ಸೀಮಂತ ಶಾಸ್ತ್ರ ಕೂಡ ಅದ್ಧೂರಿಯಾಗಿಯೇ ನೆರವೇರಿತ್ತು. ಈಗ ಅವರು ಗಂಡು ಮಗುವಿನ ತಾಯಿ ಆಗಿದ್ದಾರೆ. ‘ಅಂಬಿ ಮತ್ತೆ ಹುಟ್ಟಿ ಬಂದ’ ಎಂದು ಅಂಬರೀಷ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ಗುಂಮ್ಟಿ ಸಿನೆಮಾ ಟ್ರೇಲರ್ ಬಂತು: ಇದು ಕುಡುಬಿ ಜನಜೀವನ ಚಿತ್ರ

ಈಗಾಗಲೇ ತನ್ನ ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಂಮ್ಟಿ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಗುಂಮ್ಟಿ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಈಗಾಗಲೇ ‘ಗುಂಮ್ಟಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಎಲ್ಲೆಡೆ ಮೆಚ್ಚುಗೆ ಪಡೆದಿದೆ.

‘ಗುಂಮ್ಟಿ’ ಸಿನೆಮಾದ ಬಗ್ಗೆ ಮಾತನಾಡಿದ ನಿರ್ಮಾಪಕ ವಿಕಾಸ್ ಎಸ್. ಶೆಟ್ಟಿ, ‘ಬಾಲ್ಯದಿಂದಲೂ ನಮ್ಮ ಸುತ್ತಮುತ್ತ ಕಂಡ ಜಾನಪದ ಕಲೆಯೊಂದನ್ನು ಈ ಸಿನೆಮಾದಲ್ಲಿ ತೆರೆಗೆ ತರುವ ಪ್ರಯತ್ನ ಮಾಡಿದ್ದೇವೆ. ನೈಜತೆಯಿಂದ ಸಿನೆಮಾ ಮೂಡಿಬಂದಿದ್ದು, ಎಲ್ಲರಿಗೂ ಈ ಸಿನೆಮಾದ ಕಥಾಹಂದರ ಇಷ್ಟವಾಗಲಿದೆ. ‘ಗುಂಮ್ಟಿ’ ನೋಡುಗರ ಮನಮುಟ್ಟುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಸಿನೆಮಾಗಳನ್ನು ನಿರ್ದೇಶಿಸಿ ಕಂಟೆಂಟ್ ಸಿನೆಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶದ ಶೆಟ್ಟಿ ಆಜ್ರಿ, ‘ಗುಂಮ್ಟಿ’ ಸಿನೆಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದು, ಜೊತೆಗೆ ತೆರೆಮೇಲೆ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ.

‘ಗುಂಮ್ಟಿ’ಯ ಬಗ್ಗೆ ಮಾತಿಗಿಳಿದ ನಿರ್ದೇಶಕ ಕಂ ನಾಯಕ ನಟ ಸಂದೇಶ್ ಶೆಟ್ಟಿ ಆಜ್ರಿ, ‘ಇದೊಂದು ಕಲಾತ್ಮಕ ಸಿನೆಮಾವಾಗಿದ್ದು, ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ತೆರೆಮೇಲೆ ಹೇಳಲು ಹೊರಟಿದ್ದೇವೆೆ. ‘ಗುಂಮ್ಟಿ’ ಎಂಬುದು ಕುಡುಬಿ ಸಮುದಾಯಕ ಕಲಾಪ್ರಾಕಾರದ ಸಾಂಪ್ರದಾಯಿಕ ವಾದ್ಯವಾಗಿದ್ದು, ಅದನ್ನೇ ಸಿನೆಮಾದ ಟೈಟಲ್ ಆಗಿ ಇಟ್ಟುಕೊಂಡಿದ್ದೇವೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷ ‘ಗುಂಮ್ಟಿ’ ಸಿನಿಮಾದಲ್ಲಿ ಅನಾವರಣವಾಗಲಿದೆ’ ಎಂದು ಶೀರ್ಷಿಕೆ ಮತ್ತು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.

ಈಗಾಗಲೇ ಸಿನೆಮಾ ಬಿಡುಗಡೆಗೂ ಮೊದಲೇ ಎಲ್ಲ ಕಡೆಗಳಿಂದ ‘ಗುಂಮ್ಟಿ’ಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈಗಾಗಲೇ ಉಡುಪಿ ಜಿಲ್ಲೆಯ ಸುತ್ತಮುತ್ತ ಸುಮಾರು 24 ಕ್ಕೂ ಹೆಚ್ಚು ಪ್ರದರ್ಶನಗಳು ಮುಂಗಡವಾಗಿ ಬುಕ್ಕಿಂಗ್ ಆಗಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಇದೇ ವೇಳೆ ಹಂಚಿಕೊಂಡಿತು.

‘ಗುಂಮ್ಟಿ’ ಸಿನೆಮಾದಲ್ಲಿ ವೈಷ್ಣವಿ ನಾಡಿಗ್ ನಾಯಕಿಯಾಗಿ ಮಲ್ಲಿ ಎಂಬ ಹೆಸರಿನ ಕುಡುಬಿ ಸಮುದಾಯದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ‘ಗುಂಮ್ಟಿ’ ಸಿನಿಮಾವನ್ನು ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ‘ಗುಂಮ್ಟಿ’ ಚಿತ್ರಕ್ಕೆ ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ ಮೇಹು ಸಂಕಲನವಿದೆ. ‘ಗುಂಮ್ಟಿ’ ಸಿನೆಮಾದ ಹಾಡಿಗೆ ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ.

‘ಗುಂಮ್ಟಿ’ ಟ್ರೇಲರ್ ಬಿಡುಗಡೆ ವೇಳೆ ಹಾಜರಿದ್ದ ಚಿತ್ರದ ಕಲಾವಿದರು, ತಂತ್ರಜ್ಞರು ಚಿತ್ರದ ಕುರಿತು ತಮ್ಮ ಅನಿಸಿಕೆ, ಅಭಿಪ್ರಾಯ, ಅನುಭವಗಳನ್ನು ಹಂಚಿಕೊಂಡರು.

ಇನ್ನು ‘ಗುಂಮ್ಟಿ’ ಸಿನೆಮಾವನ್ನು ಉಡುಪಿ, ಕುಂದಾಪುರ, ಕಾರವಾರ, ಶಿರಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ಸದ್ಯ ಯಶಸ್ವಿಯಾಗಿ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಗುಂಮ್ಟಿ’ ಸೆನ್ಸಾರ್ ಮುಂದಿದೆ. ಇದೀಗ ಟ್ರೇಲರ್ ಬಿಡುಗಡೆ ಮೂಲಕ ‘ಗುಂಮ್ಟಿ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಶೀಘ್ರದಲ್ಲಿಯೇ ‘ಗುಂಮ್ಟಿ’ಯನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

Categories
ಸಿನಿ ಸುದ್ದಿ

ಬೆಂಗಳೂರಲ್ಲಿ ಶಿವಕಾರ್ತಿಕೇಯನ್: ಬೆಳಕಿನ‌ ಹಬ್ಬಕ್ಕೆ ಅಮರನ್ ಗ್ರ್ಯಾಂಡ್ ರಿಲೀಸ್

ತಮಿಳು ನಟ ಶಿವಕಾರ್ತಿಕೇಯನ್ ಅಭಿನಯದ ಅಮರನ್ ಸಿನಿಮಾ ಬೆಳಕಿನ ಹಬ್ಬ ದೀಪಾವಳಿಗೆ ಬೆಳ್ಳಿ ತೆರೆಗೆ ಅಪ್ಪಳಿಸುತ್ತಿದೆ. ಇದರ ಜೊತೆಗೆ ಸಿನಿಮಾದ ಪ್ರಚಾರ ಕಾರ್ಯ ಕೂಡ ವೇಗ ಪಡೆದುಕೊಂಡಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್​​ರೊಬ್ಬರ ಜೀವನಾಧಾರಿತ ಸಿನಿಮಾವಾಗಿದ್ದು ಅಕ್ಟೋಬರ್ 31 ರಂದು ಅಭಿಮಾನಿಗಳ ಮುಂದೆ ಬರುತ್ತಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ನಟ ಶಿವಕಾರ್ತಿಕೇಯನ್ ಸಿಲಿಕಾನ್​ ಸಿಟಿಗೆ ನಿನ್ನೆ ಆಗಮಿಸಿದ್ದರು.

ದಕ್ಷಿಣ ಭಾರತದ ಬಹುಭಾಷಾ ನಟಿ, ಸೌತ್​ನ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಹಾಗೂ ನಟ ಶಿವಕಾರ್ತಿಕೇಯನ್ ಜೋಡಿಯಾಗಿ ಅಮರನ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿರುವ ಅಮರಾನ್ ಚಿತ್ರ ನೋಡಲು ಫ್ಯಾನ್ಸ್ ಕಾತುರದಲ್ಲಿದ್ದಾರೆ.

ಇದರ ಮಧ್ಯೆ ಈ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ನಟ ಶಿವಕಾರ್ತಿಕೇಯನ್ ಬಂದಿದ್ದರು. ಬೆಂಗಳೂರಿನ ಕೋರಮಂಗಲದ ನೆಕ್ಸಸ್ ಮಾಲ್​​ನಲ್ಲಿ ಸಿನಿಮಾದ ಪ್ರೀ‌ ರಿಲೀಸ್ ಈವೆಂಟ್ ನಡೆಯಿತು. ಕಾರ್ಯಕ್ರಮದಲ್ಲಿ ಶಿವಕಾರ್ತಿಕೇಯನ್ ಭಾಗಿಯಾಗಿದ್ದರು. ಬಳಿಕ ಕನ್ನಡದಲ್ಲಿಯೇ ನಮಸ್ಕಾರ ಹೇಳಿ ಬೆಂಗಳೂರಿನ ನಂಟಿನ ಬಗ್ಗೆ ವಿವರಿಸಿದ ಶಿವಕಾರ್ತಿಕೇಯನ್ ಅರಮನ್ ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲ ಚಿತ್ರದ ಮೇಲೆ ಇರಲಿ ಎಂದರು.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್ ಮುಕುಂದ್ ವರದರಾಜನ್ ಜೀವನಾಧಾರಿತವೇ ಅಮರನ್ ಸಿನಿಮಾದ ಕಥೆ. ದೀಪಾವಳಿಯಂದು ಭರ್ಜರಿ ಓಪನಿಂಗ್ ಪಡೆಯುವ ಸೂಚನೆ ಕೊಟ್ಟಿದೆ. ಅಮರಾನ್ ಸಿನಿಮಾವನ್ನು ರಾಜಕುಮಾರ್ ಪೆರಿಯಸಾಮಿ ನಿರ್ದೇಶನ ಮಾಡಿದ್ದು, ಜಿ.ವಿ.ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ, ಸಿ.ಎಚ್.ಸಾಯಿ ಅವರ ಛಾಯಾಗ್ರಹಣ ಮತ್ತು ಆರ್. ಕಲೈವನನ್ ಅವರ ಸಂಕಲನ ಚಿತ್ರಕ್ಕಿದೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ಇಂಟರ್ನ್ಯಾಷನಲ್ ಜಂಟಿಯಾಗಿ ನಿರ್ಮಾಣ ಮಾಡಿದೆ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಮೂಕ ಜೀವಿಯ ಭಾವುಕ ಪಯಣ

ವಿಜಯ್ ಭರಮಸಾಗರ
ರೇಟಿಂಗ್: 3/5

ಚಿತ್ರ: ಮೂಕಜೀವ
ನಿರ್ದೇಶಕ: ಶ್ರೀನಾಥ್ ವಸಿಷ್ಠ
ನಿರ್ಮಾಣ: ಎಂ ವೆಂಕಟೇಶ, ಮಂಜುಳ
ತಾರಾಗಣ: ಕಾರ್ತಿಕ್ ಮಹೇಶ್, ಶ್ರೀಹರ್ಷ, ಅಪೂರ್ವಶ್ರೀ, ಮೇಘಶ್ರೀ, ಗಿರೀಶ್ ವೈದ್ಯನಾಥನ್, ರಮೇಶ್ ಪಂಡಿತ್, ವೆಂಕಟಾಚಲ, ಶ್ರೀನಾಥ್ ವಸಿಷ್ಠ ಇತರರು.

ಕೆಲವು ನೋಡುವ ಸಿನಿಮಾಗಳಿದ್ದರೆ, ಇನ್ನು ಕೆಲವು ಕಾಡುವ ಸಿನಿಮಾಗಳಿರುತ್ತವೆ. ಇದು ಆಪ್ತವಾಗಿ ‘ಕಾಡುವ ‘ ಸಿನಿಮಾಗಳ ಸಾಲಿಗೆ ಸೇರುವ ಚಿತ್ರ. ಹೊಡಿ ಬಡಿ ಕಡಿ ಚಿತ್ರಗಳ ಆರ್ಭಟದ ಮಧ್ಯೆ ಭಾವುಕತೆ ಹೆಚ್ಚಿಸುವ ಮೂಲಕ ಆತ್ಮ ಸ್ಥೈರ್ಯ ಇದ್ದರೆ ಬದುಕು ಕಷ್ಟ ಅಲ್ಲ ಎಂಬ ಸಂದೇಶ ಈ ಸಿನಿಮಾದಲ್ಲಿದೆ.

ಕಥೆಯಲ್ಲಿರುವ ಗಟ್ಟಿತನ, ನಿರ್ದೇಶಕರ ನಿರೂಪಣಾ ಶೈಲಿ ಸಿನಿಮಾದ ಜೀವಾಳ. ಪ್ರತಿ ಸನ್ನಿವೇಶ ಕೂಡ ಮನಸ್ಸಿಗೆ ನಾಟುತ್ತದೆ. ವಾಸ್ತವತೆಗೆ ಹತ್ತಿರ ಎನಿಸುವ , ಕಣ್ಮುಂದಿನ ನೈಜತೆಯನ್ನು ತೋರಿಸುವ ಕಥಾಹಂದರದ ಸಿನಿಮಾದಲ್ಲಿ ಭಾವನಾತ್ಮಕ ಅಂಶಗಳೇ ಕೊನೆಯವರೆಗು ಕಾಡುತ್ತ ಹೋಗುತ್ತವೆ.

ಮೊದಲರ್ಧ ಸಾಧಾರಣ ಕಥೆ ಎನಿಸಿಕೊಳ್ಳುವ ಈ ಚಿತ್ರ, ದ್ವಿತಿಯಾರ್ಧ ಒಂದಷ್ಟು ನಿರೀಕ್ಷಿಸದ ತಿರುವುಗಳನ್ನು ಪಡೆದುಕೊಂಡು ನೋಡುಗನಲ್ಲಿ ಕುತೂಹಲದ ಜೊತೆಗೆ ಮೂಕವಿಸ್ಮಿತರನ್ನಾಗಿಸುತ್ತೆ. ಮುಗ್ಧತನಕ್ಕೆ, ಒಳ್ಳೆಯ ತನಕ್ಕೆ ಬೆಲೆಯೇ ಇಲ್ಲದ ಮನುಷ್ಯತ್ವದ ಕ್ರೂರತೆ ತೆರೆದುಕೊಳ್ಳುತ್ತೆ.

ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಸಿನಿಮಾಗೆ ಚಿತ್ರಕತೆಯ ಬಿಗಿ ಹಿಡಿತವೇ ಆಧಾರ. ಎಲ್ಲೋ ಒಂದು ಕಡೆ ಸಿನಿಮಾ ನಿಧಾನ ಎನಿಸಿತು ಅಂದುಕೊಳ್ಳುವಷ್ಟರಲ್ಲಿ ತಾಯಿ ಮಗನ ವಾತ್ಸಲ್ಯ, ಮಮಕಾರ, ಕರುಣೆ, ಅವರಿಬ್ಬರ ಬಾಂಧವ್ಯ ನೋಡುಗರನ್ನು ತದೇಕಚಿತ್ತದಿಂದ ನೋಡುವಂತೆ ಮಾಡುತ್ತೆ.

ಇದೊಂದು ಮೂಕ ಜೀವಿಯ ಭಾವುಕ ಪಯಣ. ಇಲ್ಲಿ ಬಡತನವಿದೆ, ಪ್ರಾಮಾಣಿಕತೆ ಇದೆ, ಸಣ್ಣದ್ದೊಂದು ಪ್ರೀತಿ ಇದೆ, ಭಾವನಾತ್ಮಕದ ಬೆಸುಗೆ ಇದೆ. ಅಸೂಯೆ, ಮೋಸ, ಒಳ್ಳೇತನ, ಕೆಡುಕುತನ ಎಲ್ಲವೂ ಮೇಳೈಸಿದೆ. ಒಟ್ಟಲ್ಲಿ ಒಂದು ಪರಿಪೂರ್ಣತೆಯ ಸಿನಿಮಾ ಎಂಬ ಭಾವ ಮೂಡದೇ ಇರದು.

ಕಥೆ ಏನು?

ಇದು ಜೆ.ಎಂ.ಪ್ರಹ್ಲಾದ್ ಅವರ ಕಾದಂಬರಿ ಆಧಾರಿತ ಚಿತ್ರ.
ಅದೊಂದು ಹಳ್ಳಿ. ಅಲ್ಲೊಂದು ಕಡುಬಡತನದ ಕುಟುಂಬ. ತಾಯಿ ಮಗಳು ಮತ್ತು ಮಗನ ಸುತ್ತ ಸಾಗುವ ಕಥೆ. ಮಗನಿಗೆ ಮಾತು ಬರಲ್ಲ, ಕಿವಿ ಕೇಳಲ್ಲ. ಅವನನ್ನು ಸಲಹುವ ತಾಯಿಗೆ ಆತನದ್ದೇ ಚಿಂತೆ. ಮದ್ವೆ ವಯಸ್ಸಿಗೆ ಬಂದ ಮಗಳು ಆಸರೆ ಆಗ್ತಾಳೆ ಅಂದುಕೊಂಡರೆ ಅಲ್ಲೊಂದು ಘಟನೆ ನಡೆಯುತ್ತೆ.

ಹಳ್ಳಿಯಲ್ಲಿ ಜೀವಿಸುವ ಆ ಬಡ ಕುಟುಂಬದ ಯಾತನಾಮಯ ಬದುಕೇ ವಿಚಿತ್ರ. ಊರಲ್ಲಿ ನಿರೀಕ್ಷಿಸದ ಘಟನೆಗಳು ನಡೆದು ಹೋಗುತ್ತವೆ. ಸನ್ನಿವೇಶವೊಂದರಲ್ಲಿ ಮಾತು ಬಾರದ, ಕಿವಿ ಕೇಳದ ಆ ಹುಡುಗ ಬೆಂಗಳೂರು ಸೇರುತ್ತಾನೆ. ಅಲ್ಲಿ ನಡೆಯುವ ಘಟನೆಗಳೇ ಚಿತ್ರದ ಹೈಲೆಟ್. ವಿಕಲಚೇತನ ತನ್ನ ಬದುಕು ಕಟ್ಟಿಕೊಳ್ಳಲು ಪರದಾಡುವ ಸನ್ನಿವೇಶ ಕಾಡುತ್ತದೆ. ಕ್ಲೈಮ್ಯಾಕ್ಸ್ ವಿಶೇವೆನಿಸುತ್ತೆ. ಕುತೂಹಲ ಇದ್ದರೆ ಒಮ್ಮೆ ನೋಡಬಹುದು.

ಯಾರು ಹೇಗೆ?

ಇಲ್ಲಿ ತಾಯಿ ಪಾತ್ರ ಹೈಲೆಟ್. ಅಪೂರ್ವಶ್ರೀ ಅವರದು ಅಪರೂಪದ ನಟನೆ. ತಾಯಿ ಆಗಿ ಅವರು ಇಷ್ಟವಾಗುತ್ತಾರೆ. ಆ ಪಾತ್ರದಲ್ಲಿ ಜೀವಿಸಿದ್ದಾರೆ. ಶ್ರೀಹರ್ಷ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ವಿಕಲಚೇತನ ಪಾತ್ರದ ಮೂಲಕ ಇಷ್ಟವಾಗುತ್ತಾರೆ. ಕಾರ್ತಿಕ್ ಪಾತ್ರಕ್ಕೆ ಇನ್ನಷ್ಟು ಎಫರ್ಟ್ ಹಾಕಬೇಕಿತ್ತು. ಮೇಘಶ್ರೀ ಪಾತ್ರಕ್ಕೆ ಮೋಸ ಮಾಡಿಲ್ಲ. ಗಿರೀಶ್ ವೈದ್ಯನಾಥನ್, ರಮೇಶ್ ಪಂಡಿತ್, ವೆಂಕಟಾಚಲ, ಶ್ರೀನಾಥ್ ವಸಿಷ್ಠ ಇರುವಷ್ಟು ಕಾಲ ಇಷ್ಟವಾಗುತ್ತಾರೆ.
ಮನೋಹರ್ ಸಂಗೀತ ಕಥೆಗೆ ಪೂರಕವಾಗಿದೆ.

Categories
ಸಿನಿ ಸುದ್ದಿ

ಚಿತ್ರ ವಿಮರ್ಶೆ: ಸುಗಮ ದಾರಿಯಲ್ಲಿ ರೋಚಕ ಪಯಣ!

ವಿಜಯ್ ಭರಮಸಾಗರ
ರೇಟಿಂಗ್: 3/5

ಚಿತ್ರ: ಎಲ್ಲಿಗೆ ಪಯಣ ಯಾವುದೋ ದಾರಿ
ನಿರ್ದೇಶಕ: ಕಿರಣ್ ಸೂರ್ಯ
ನಿರ್ಮಾಪಕ: ಜತಿನ್ ಪಟೇಲ್
ತಾರಾಗಣ: ಅಭಿಮನ್ಯು ಕಾಶೀನಾಥ್, ಸ್ಪೂರ್ತಿ ಉಡಿಮನೆ, ರಾಜ್ ಬಲವಾಡಿ, ವಿಜಯಶ್ರೀ, ಶೋಭನ್, ಪ್ರದೀಪ್, ರಮೇಶ್ ನಾಯಕ್ ಇತರರು.

ನಿರ್ಜೀವ ವಸ್ತುಗಳಿಗೆ ಜೀವ ಕೊಡ್ತೀನಿ. ಜೀವ ಇರೋದ್ದಕ್ಕೆ ಜೀವ ತೆಗಿತೀನಿ…

ಕಾನನ ನಡುವಿನ ರಸ್ತೆಯೊಂದರಲ್ಲಿ ಹೀರೋ ತನ್ನ ಕಾರಲ್ಲಿ ಸಾಗುವಾಗ, ಪಕ್ಕದಲ್ಲೇ ಕುಳಿತ ವ್ಯಕ್ತಿಯೊಬ್ಬನಿಗೆ ಈ ಮಾತನ್ನು ಹೇಳ್ತಾನೆ. ಅಂದರೆ, ಅವನೊಬ್ಬ ಕುಂಚ ಕಲಾವಿದ. ಬಣ್ಣ ತುಂಬುವ ಮೂಲಕ ಕಲಾಕೃತಿಗೆ ಜೀವ ತುಂಬುವ ಕೆಲಸ ಅವನದು. ಆದರೆ, ಜೀವ ತೆಗೆಯೋ ಕೆಲಸ ಮಾಡ್ತಾನಾ? ಇದೇ ಸಿನಿಮಾದ ಸಸ್ಪೆನ್ಸ್. ಇದೊಂದು ಥ್ರಿಲ್ಲರ್ ಕಥೆ. ಥ್ರಿಲ್ ಎನಿಸುವ ಅಂಶಗಳೇ ಹೆಚ್ಚಾಗಿವೆ. ಹೆಚ್ಚು ಪಾತ್ರಗಳಿಲ್ಲ. ಆಡಂಬರ ಇಲ್ಲದ ದೃಶ್ಯಗಳು, ಸರಾಗವಾಗಿ ಸಾಗುವ ಕಥೆಗೆ ಚಿತ್ರಕಥೆ ಕೂಡ ಗಟ್ಟಿಯಾಗಿದೆ. ಎಲ್ಲೂ ಹಳಿತಪ್ಪದ ಕಥೆ ಮತ್ತು ಚಿತ್ರಕಥೆ. ಇಲ್ಲಿ ಇಷ್ಟವಾಗೋದು, ನಿರ್ದೇಶಕರು ಹೆಣೆದ ಕಥೆ ಮತ್ತು ಜಾಣತನದ ನಿರೂಪಣೆ.

ಮೊದಲರ್ಧ ಸಿನಿಮಾ ಕಾರಿನ ಜರ್ನಿಯಲ್ಲೇ ಸಾಗುತ್ತೆ. ಕಾಡಿನ ಪರಿಸರದ ನಡುವೆ ಅಲ್ಲಲ್ಲಿ ಥ್ರಿಲ್ಲಿಂಗ್ ಎನಿಸುವ ದೃಶ್ಯಗಳು ಎದುರಾಗಿ ನೋಡುಗನಿಗೆ ಮತ್ತಷ್ಟು ಕುತೂಹಲ ಹುಟ್ಟಿಸುವಲ್ಲಿ ಸಿನಿಮಾ ಯಶಸ್ವಿಯಾಗುತ್ತೆ. ದ್ವಿತಿಯಾರ್ಧದಲ್ಲಿ ಸಾಕಷ್ಟು ಟ್ವಿಸ್ಟ್ ಗಳಿವೆ. ಆ ತಿರುವುಗಳೇ ಸಿನಿಮಾದ ಹೈಲೆಟ್. ಅದನ್ನು ತಿಳಿಯುವ ಕುತೂಲಹವಿದ್ದರ ಒಂದೊಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ. ಒಟ್ಟಾರೆ, ಹೊಡಿ ಬಡಿ ಕಡಿ ಕಥೆಗಳ ಸಿನಿಮಾ ಮಧ್ಯೆ ಥ್ರಿಲ್ ಎನಿಸುವ ಸಸ್ಪೆನ್ಸ್ ಕಥೆಯ ಈ ಚಿತ್ರ ನೋಡುಗರಿಗೆ ರುಚಿಸುತ್ತೆ. ಸಸ್ಪೆನ್ಸ್, ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವ ವರ್ಗಕ್ಕೆ ನಿಜಕ್ಕೂ ಇಷ್ಟವಾಗುವ ಸಿನಿಮಾವಿದು.

ಕಥೆಯೇನು?

ಅಮರ್ (ನಾಯಕ) ಅವನೊಬ್ಬ ಕುಂಚ ಕಲಾವಿದ. ತನ್ನದೇ ಬಣ್ಣದ ಪ್ರಪಂಚದಲ್ಲಿ ಮಿಂದೇಳುವ ವ್ಯಕ್ತಿತ್ವ. ಅವನ ಕಲಾ ಬದುಕಲ್ಲಿ ಆಕಸ್ಮಿಕವಾಗಿ ಎಂಟ್ರಿಯಾಗುವ ನಾಯಕಿ ಜೊತೆ ಮಾತುಕತೆ ಬೆಳೆದು, ಅದು ಪ್ರೀತಿಗೂ ತಿರುಗಿ, ಇನ್ನೇನು ಮದುವೆ ಹಂತಕ್ಕೂ ತಲುಪುವ ಕ್ಷಣವದು. ಆದರೆ, ಅವರಿಬ್ಬರ ಮಧ್ಯೆ ಒಂದು ಘಟನೆ ನಡೆದು ಹೋಗುತ್ತೆ. ಅಲ್ಲೊಂದು ಆಗಬಾರದ್ದು ಆಗಿ ಹೋಗುತ್ತೆ. ಅದಕ್ಕೆ ಕಾರಣರಾದವರನ್ನು ಹುಡುಕಿ, ಅಂತ್ಯಗೊಳಿಸುವ ಗುರಿ ನಾಯಕನದ್ದು. ಅಲ್ಲಿ ನಡೆಯುವ ಘಟನೆ ಎಂಥದ್ದು, ಆ ಪಯಣದಲ್ಲಿ ಸಿಗುವ ಪಾತ್ರಗಳ್ಯಾವು, ಅಷ್ಟಕ್ಕೂ ಅಲ್ಲಿ ವಿಚಿತ್ರವಾಗಿ ವರ್ತಿಸುವರಾರು ಎಂಬುದೇ ಸಿನಿಮಾದ ಕಥೆ. ಇಲ್ಲಿ ಹಲವಾರು ಅಂಶಗಳು ನೋಡುಗರನ್ನು ಖುಷಿಪಡಿಸುತ್ತಷ್ಟೇ ಅಲ್ಲ, ಒಂದಷ್ಟು ಕುತೂಹಲವನ್ನೂ ಕೆರಳಿಸುತ್ತೆ. ಆ ಕುತೂಹಲ ನೋಡುವ ತವಕವಿದ್ದರೆ ಒಮ್ಮೆ ಆ ಪಯದ ದಾರಿಯನ್ನೊಮ್ಮೆ ಸವಿದು ಬರಬಹುದು.

ಯಾರು ಹೇಗೆ?

ಸಿನಿಮಾದಲ್ಲಿ ಬೆರಳೆಣಿಕೆ ಪಾತ್ರಗಳು ಮಾತ್ರ ಇವೆ. ಅಭಿಮನ್ಯು ಕಾಶೀನಾಥ್ ತುಂಬ ದಿನಗಳ ಬಳಿಕ ಒಳ್ಳೆಯ ಪಾತ್ರದ ಮೂಲಕವೇ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಇಲ್ಲಿ ಗಮನಸೆಳೆಯುತ್ತಾರೆ. ರಗಡ್ ಲುಕ್ ಅವರಿಗೆ ಚೆನ್ನಾಗಿ ಹೊಂದಿಕೊಂಡಿದೆ. ಭಾವುಕ ಸನ್ನಿವೇಶದಲ್ಲಿ ಫೀಲ್ ತುಂಬುತ್ತಾರೆ. ನೈಜವಾಗಿಯೇ ಹೊಡೆದಾಡಿದ್ದಾರೆ. ಇನ್ನು ಹಾಡಲ್ಲೂ ವಿಶೇಷ ಎನಿಸುತ್ತಾರೆ. ನಾಯಕಿ ಸ್ಪೂರ್ತಿ ಉಡಿಮನೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಲ್ಲಲ್ಲಿ ಕಾಡುವುದರ ಜೊತಗೆ ನೋಡುಗರನ್ನೂ ಭಾವುಕತೆಗೆ ದೂಡುತ್ತಾರೆ. ರಾಜ್ ಬಲವಾಡಿ ಅವರ ನಟನೆಯಲ್ಲಿ ನೈಜತೆ ಕಾಣುತ್ತೆ. ಉಳಿದಂತೆ ವಿಜಯಶ್ರೀ, ಶೋಭನ್, ಪ್ರದೀಪ್, ರಮೇಶ್ ನಾಯಕ್ ಇತರರು ತಮ್ಮ ಪಾತ್ರಗಳಿಗೆ ಮೋಸ ಮಾಡಿಲ್ಲ. ಸ್ಯತ್ಯ ರಾಮ್ ಛಾಯಾಗ್ರಹಣದಲ್ಲಿ ವಿರಾಜ್ ಪೇಟೆ ಆಸುಪಾಸಿನ ಪರಿಸರ ಅದ್ಭುತ ಎನಿಸುತ್ತೆ. ಪ್ರತಿ ಫ್ರೇಮ್ ನಲ್ಲೂ ಹೊಸತನವಿದೆ. ಪ್ರಣವ್ ರಾವ್ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ. ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.

error: Content is protected !!