ನಿರ್ದೇಶನದಿಂದ ಜನಮನಸೂರೆಗೊಂಡಿರುವ ಪ್ರೇಮ್ (ಜೋಗಿ) ಅವರು ಗಾಯಕನಾಗೂ ಜನಪ್ರಿಯ. ವಿಲೇಜ್ ರೋಡ್ ಫಿಲಂಸ್ ಲಾಂಛನದಲ್ಲಿ ವಿನೋದ್ ಶೇಷಾದ್ರಿ ನಿರ್ಮಿಸುತ್ತಿರುವ “ಪರಿಮಳ ಡಿಸೋಜಾ” ಚಿತ್ರದ ಹಾಡೊಂದನ್ನು ನಿರ್ದೇಶಕ ಪ್ರೇಮ್ ಹಾಡಿದ್ದಾರೆ. ಕೆ.ಕಲ್ಯಾಣ್ ಗೀತರಚನೆ ಮಾಡಿದ್ದಾರೆ. ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ.
ಡಾ. ಗಿರಿಧರ್ ಹೆಚ್. ಟಿ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಪ್ರೇಮ್ ಅವರು ಹಾಡಿರುವ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯದಲ್ಲೇ ಆ ಹಾಡಿನ ಚಿತ್ರೀಕರಣ ನಡೆಯಲಿದೆ.
ಹಿಂದು ಸಂಪ್ರದಾಯದ ಶ್ರೀಮಂತ ಕುಟುಂಬವೊಂದು ಸುಖ ಸಂತೋಷದಿಂದ ಜೀವನ ನಡೆಸುತ್ತಿರುತ್ತಾರೆ. ಆ ಮನೆಗೆ ಕ್ರಿಶ್ಚಿಯನ್ ಸಂಪ್ರದಾಯದ ಪರಿಮಳ ಡಿಸೋಜಾ ಸೊಸೆಯಾಗಿ ಬರುತ್ತಾಳೆ. ಜೊತೆಗೆ ಮತ್ತಷ್ಟು ಸಂತೋಷ, ಆನಂದವನ್ನು ಹೊತ್ತು ತರುತ್ತಾಳೆ. ಎರಡುವರ್ಷಗಳ ನಂತರ ಆ ಮನೆಯಲ್ಲಿ ಯಾರು ಊಹಿಸದ ಘಟನೆ ನಡೆಯುತ್ತದೆ. ಆ ಘಟನೆಯಿಂದ ಮನೆಮಂದಿಯಲ್ಲಾ ಸಂಕಷ್ಟಕ್ಕೆ ಸಿಲುಕುತ್ತಾರೆ. ಮುಂದೇನು ನಡೆಯುತ್ತದೆ ಎಂಬುದೇ ಕುತೂಹಲ ಎನ್ನುವ ನಿರ್ದೇಶಕ ಗಿರಿಧರ್, ಇದೊಂದು ಸಸ್ಪೆನ್ಸ್ ಥ್ರಿಲ್ಲರ್, ಆಕ್ಷನ್ , ಸೆಂಟಿಮೆಂಟ್ ಹಾಗೂ ಕಾಮಿಡಿ ಎಲ್ಲವನ್ನು ಒಳಗೊಂಡಿರುವ ಚಿತ್ರ ಎಂದು ತಿಳಿಸುತ್ತಾರೆ.
ಕೋಮಲ ಬನವಾಸೆ , ವಿನೋದ್ ಶೇಷಾದ್ರಿ, ಶ್ರೀನಿವಾಸಪ್ರಭು, ಭವ್ಯ, ಪೂಜಾ ರಾಮಚಂದ್ರ, ಶಿವಕುಮಾರ್ ಆರಾಧ್ಯ, ಶಂಖನಾದ ಅಂಜನಪ್ಪ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಾಲ್ಕು ಹಾಡುಗಳಿದ್ದು, ವಿ.ನಾಗೇಂದ್ರಪ್ರಸಾದ್, ಜಯಂತ್ ಕಾಯ್ಕಿಣಿ , ಕೆ.ಕಲ್ಯಾಣ್ ಹಾಗೂ ವಿನೋದ್ ಶೇಷಾದ್ರಿ ಬರೆದಿದ್ದಾರೆ. ಜೋಗಿ ಪ್ರೇಮ್, ರಾಜೇಶ್ ಕೃಷ್ಣನ್, ಅನುರಾಧ ಭಟ್, ನಕುಲ್ ಅಭ್ಯಂಕರ್, ಸುಪ್ರಿಯಾ ರಾಮ್, ಶೃತಿ ವಿ.ಎಸ್ ಹಾಡಿದ್ದಾರೆ. ಕೆ.ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸಂಜೀವ್ ರೆಡ್ಡಿ ಅವರ ಸಂಕಲನವಿದೆ.
ಕನ್ನಡ ಸಿನಿಮಾ ಅಂಗಳದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ತೆರೆಮೇಲೆ ಧೂಳ್ ಎಬ್ಬಿಸಲು ಸಜ್ಜಾಗಿದೆ. ನಾಯಿ ಮತ್ತು ಮನುಷ್ಯನ ಬಾಂಧವ್ಯ ಕಥೆಯ ಚಾರ್ಲಿ 777 ಸಿನಿಮಾ ಇದೇ ತಿಂಗಳ 10ರಂದು ವರ್ಲ್ಡ್ ವೈಡ್ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡ್ತಿದೆ. ಈಗಾಗಲೇ ಟ್ರೇಲರ್ ನಲ್ಲಿಯೇ ತನ್ನ ತಾಕತ್ತು ತೋರಿಸಿರುವ ಚಾರ್ಲಿಗೆ ಚಿತ್ರರಸಿಕರು ಫುಲ್ ಫಿದಾ ಆಗಿದ್ದಾರೆ.
ಜೂನ್ 10ರಂದು ಸಿನಿಮಾ ತೆರೆಗೆ ಬರ್ತಿರೋದ್ರಿಂದ ಚಿತ್ರತಂಡ ಭರ್ಜರಿ ಪ್ರಮೋಷನ್ ಮಾಡ್ತಿದೆ. ರಾಜ್ಯ ರಾಜ್ಯ ಸುತ್ತಿ ಪ್ರಚಾರದ ಕಹಳೆ ಮೊಳಗಿಸಿರುವ ಚಾರ್ಲಿ ಅಂಗಳದಿಂದ ಮಸ್ತ್ ಖಬರ್ ವೊಂದು ರಿವೀಲ್ ಆಗ್ತಿದೆ. ಬರೋಬ್ಬರಿ 21 ಸಿಟಿಗಳಲ್ಲಿ ಚಾರ್ಲಿ ಸಿನಿಮಾ ಪ್ರೀಮಿಯರ್ ಆಗ್ತಿದೆ.
ಹೊಸ ದಾಖಲೆ ಬರೆದ ಚಾರ್ಲಿ
ಹೇಳಿಕೇಳಿ ಇದು ಕಾಂಪಿಟೇಷನ್ ಯುಗ. ಅದ್ರಲ್ಲೂ ಚಿತ್ರರಂಗದಲ್ಲಂತೂ ಕೇಳ್ಬೇಕೆ. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳು ಸದ್ದು ಮಾಡ್ತಿವೆ. ಪ್ಯಾನ್ ಇಂಡಿಯಾ ಸಿನಿಮಾಗಳು ಒಂದೊಂದಾಗಿ ತೆರೆಗೆ ಬರ್ತಿವೆ. ಇಷ್ಟೆಲ್ಲಾ ಕಾಂಪಿಟೇಷನ್ ಇದ್ರೂ ಚಾರ್ಲಿ 777 ಸಿನಿಮಾ ರಿಲೀಸ್ ಗೂ ಮುನ್ನ ಹೊಸ ರೆಕಾರ್ಡ್ ಬರೆದಿದೆ. ಹೈದ್ರಾಬಾದ್, ಚೆನ್ನೈ, ದೆಹಲಿ, ಮಧುರೈ ಸೇರಿದಂತೆ ಬರೋಬ್ಬರಿ 21 ಸಿಟಿಗಳಲ್ಲಿ ಪ್ರೀಮಿಯರ್ ಆಗ್ತಿರುವ ಮೊದಲ ಸಿನಿಮಾ ಎಂಬ ಖ್ಯಾತಿ ಚಾರ್ಲಿ ಭತ್ತಳಿಕೆ ಸೇರಿದೆ.
ಎಲ್ಲೆಲ್ಲಿ ಯಾವಾಗಾ ಪ್ರೀಮಿಯರ್
21 ಸಿಟಿಗಳಲ್ಲಿ ಪ್ರೀಮಿಯರ್ ಆಗ್ತಿರುವ ಚಾರ್ಲಿ-777 ಸಿನಿಮಾ ಹೈದ್ರಾಬಾದ್, ವಾರಾಣಾಸಿ 7ರಂದು, ದೆಹಲಿಯಲ್ಲಿ 2ರಂದು, ಅಮೃತಸರ 2ರಂದು, ಮಧುರೈ, ಪಂಜಿಮ್, ಬರೋಡಾ, ವೈಜಾಕ್ ನಲ್ಲಿ 8ರಂದು, ಕೊಯ್ಯಮತ್ತೂರು, ಸೊಲ್ಲಾಪುರ,ತಿರುವನಂತಪುರ, ಅಹಮದಾಬಾದ್ ನಲ್ಲಿ 7ರಂದು, ಪುಣೆ, ಮುಂಬೈ, ಕಿಚ್ಚಿನ್, ಲಖನೌ, ಚೆನ್ನೈ, ಜೈಪುರ, ಕೋಲ್ಕತ್ 6ರಂದು, ನಾಗಾಪುರ, ಸೂರತ್ ನಲ್ಲಿ 9ರಂದು ಪ್ರೀಮಿಯರ್ ಆಗ್ತಿದ್ದು, ಈಗಾಗ್ಲೇ ಆಲ್ ಮೋಸ್ಟ್ ಆಲ್ ಟಿಕೆಟ್ ಸೋಲ್ಟ್ ಔಟ್ ಆಗಿವೆ.
ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಾರ್ಲಿ 777 ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಧರ್ಮ ಪಾತ್ರದಲ್ಲಿ ಮಿಂಚಿದ್ದು, ರಕ್ಷಿತ್ ಗೆ ಜೋಡಿಯಾಗಿ ಸಂಗೀತ ಶೃಂಗೇರಿ ನಟಿಸಿದ್ದಾರೆ. ನಟನೆ ಜೊತೆಗೆ ರಕ್ಷಿತ್ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ರಕ್ಷಿತ್ ಜತೆಗೆ ರಾಜ್ ಬಿ. ಶೆಟ್ಟಿ, ದಾನಿಶ್ ಸೇಠ್, ತಮಿಳಿನ ಬಾಬಿ ಸಿಂಹ ಸೇರಿ ಇನ್ನೂ ಅನೇಕರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರಣ್ ರಾಜ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ನೋಬಿನ್ ಪೌಲ್ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಪ್ರತೀಕ್ ಶೆಟ್ಟಿ ಸಂಕಲನ, ಪ್ರಗತಿ ರಿಷಬ್ ಶೆಟ್ಟಿ ಅವರ ವಸ್ತ್ರ ವಿನ್ಯಾಸ, ವಿಕ್ರಮ್ ಮೋರ್ ಅವರ ಸಾಹಸ ಈ ಚಿತ್ರಕ್ಕಿದೆ.
ಜೂನ್ 3ರಿಂದ ಕನ್ನಡ ಬೆಳ್ಳಿತೆರೆ ಮೇಲೆ ಮೆಟಡೋರ್ ಪಯಣ ಶುರುವಾಗಲಿದೆ. ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಥಿಯೇಟರ್ ಗೆ ಲಗ್ಗೆ ಇಡಲು ಅಣಿಯಾಗಿದೆ.
ನಿರ್ಮಾಪಕ ಕಿರಣ್ ಕುಮಾರ್ ಅವರು ಮಾತನಾಡಿ, ಇಂಜಿನಿಯರಿಂಗ್ ಬ್ಯಾಗ್ರೌಂಡ್ ನಮ್ಮದು. ಒಟ್ಟಿಗೆ ಶಾರ್ಟ್ ಮೂವೀಗಳನ್ನು ಮಾಡಿ ನಂತರ ಸಿನಿಮಾ ಮಾಡುವ ಕನಸು ಹೊತ್ತು ಈಗ ಸಿನಿಮಾ ಮಾಡಿದ್ದೇವೆ. ನಮ್ಮ ಚಿತ್ರದಲ್ಲಿ ಒಳ್ಳೆ ಕಂಟೆಂಟ್ ಇದೆ. ಬೀದಿನಾಟಕ ಮೂಲಕ ರಾಜ್ಯಾದ್ಯಂತ ಸಿನಿಮಾ ಪ್ರಚಾರ ಮಾಡಿದ್ದೇವೆ ಎಂದರು.
ನಿರ್ದೇಶಕ ಸುದರ್ಶನ್, ಕಲಾವಿದರು ಹೊಸಬರು. ನಾಟಕದ ಹಿನ್ನೆಲೆಯುಳ್ಳವರು. ಎಲ್ಲರೂ ನಮ್ ಸ್ನೇಹಿತರು. ಸಿನಿಮಾದಲ್ಲಿ ಐದು ಕಥೆ ಇದೆ. ಹೈಪರ್ ಲಿಂಕ್ ರೀತಿ. ಕಾಮಿಡಿ, ಥ್ರಿಲ್ಲರ್ ಎಲ್ಲಾ ಬಗೆ ಕಥೆ ಇದೆ. ಜೂನ್ 3ಕ್ಕೆ ಸಿನಿಮಾ ಬರ್ತಿದೆ. ಎಲ್ಲರೂ ಸಪೋರ್ಟ್ ಮಾಡಿ ಎಂದರು.
ಮೆಟಡೋರ್ ಮೂಲಕ ಭರ್ಜರಿ ಪ್ರಮೋಷನ್
ಮೆಟಡೋರ್ ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಶುರುವಾಗಿದ್ದು, ಹೀಗಾಗಿ ಚಿತ್ರತಂಡ ಭರ್ಜರಿ ಪ್ರಮೋಷನ್ ಗೆ ಇಳಿದಿದೆ. ಮೆಟಡೋರ್ ವಾಹನಕ್ಕೆ ಸಿನಿಮಾದ ಪೋಸ್ಟರ್ ಅಂಟಿಸಿ, ಈ ಮೆಟಡೋರ್ ಮೂಲಕವೇ ರಾಜ್ಯಾದ್ಯಂತ ಪ್ರಮೋಷನ್ ನಡೆಸ್ತಿದೆ.
ಐದು ಕಥೆಯುಳ್ಳ ಹೈಪರ್ ಲಿಂಕ್ ಸಿನಿಮಾವಾಗಿರುವ ಮೆಟಡೋರ್ ಚಿತ್ರಕ್ಕೆ ಸುದರ್ಶನ್ ಜಿ ಶೇಖರ್ ನಿರ್ದೇಶನ ಮಾಡಿದ್ದು, ಈ ಹಿಂದೆ ಇವರು 13ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಕಿರಣ್, ರವಿ ಮೈಸೂರು, ಅರ್ಚನಾ ಮಹೇಶ್, ಮೋಹನ್ ಬಾಬು ಸೇರಿದಂತೆ ಹೊಸ ತಾರಾಬಳಗ ಸಿನಿಮಾದಲ್ಲಿದೆ.
ಓಂ ಸ್ಟುಡಿಯೋ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿ ಕಿರಣ್ ಕುಮಾರ್ ಎಸ್ ಹೆಚ್ ಬಂಡವಾಳ ಹೂಡಿದ್ದು, ತಂಗಾಳಿ ನಾಗರಾಜ್ ಸಂಗೀತ, ಗೋಪಿನಾಥ್ ಕ್ಯಾಮೆರಾ, ಕುಮಾರ್ ಸಿಎಚ್ ಸಂಕಲನ ಚಿತ್ರಕ್ಕಿದೆ.
ಪ್ರತಿಭಾನ್ವಿತ ತಂಡವೇ ಸೇರಿ ತಯಾರಿಸುವ ತೂತು ಮಡಿಕೆ ಸಿನಿಮಾ ರಿಲೀಸ್ ಹೊಸ್ತಿಲಿನಲ್ಲಿ ನಿಂತಿದ್ದು, ಚಿತ್ರತಂಡ ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದೆ. ಮೋಷನ್ ಪೋಸ್ಟರ್ ಹಾಗೂ ಯಾಮಾರಿದೆ ಹೃದಯ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ತೂತು ಮಡಿಕೆ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.
ನಿತಿನ್ ನಾರಾಯಣ್ ಕ್ಯಾಚಿ-ಮ್ಯಾಚಿ ಸಾಹಿತ್ಯವಿರುವ ಹಾಡಿಗೆ, ಚೇತನ್ ನಾಯ್ಕ್ ಧ್ವನಿಯಾಗಿದ್ದು, ಸ್ವಾಮಿನಾಥನ್ ಆರ್.ಕೆ ಸಂಗೀತದ ಕಂಪು ಹಾಡಿನ ಇಂಪನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಯಾಮಾರಿದೆ ಹೃದಯ ಹಾಡಿನ ಚಿತ್ರೀಕರಣ ನಡೆದ ಜಾಗದಲ್ಲಿಯೇ ಟೈಟಲ್ ಟ್ರ್ಯಾಕ್ ಕೂಡ ಶೂಟ್ ಆಗಿದ್ದು, ಅಲ್ಲಿನ ಸ್ಥಳೀಯರನ್ನು ಬಳಸಿಕೊಂಡು ಮೋಹನ್ ಮಾಸ್ಟರ್ ಹಾಡಿಗೆ ಕೊರಿಯೋಗ್ರಾಫಿ ಮಾಡಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಶೀರ್ಷಿಕೆ ಗೀತೆಗೆ ಮೆಚ್ಚುಗೆ ವ್ಯಕ್ತವಾಗ್ತಿದೆ.
ಕಿರುಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ನಂತ್ರ ಮೂಕವಿಸ್ಮಿತ, ಸಿಲಿಕಾನ್ ಸಿಟಿ, ಕಿಸ್ ಸಿನಿಮಾಗಳಲ್ಲಿ ಸಪೋರ್ಟಿಂಗ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಚಂದ್ರ ಕೀರ್ತಿ ತೂತು ಮಡಿಕೆ ಸಿನಿಮಾದಲ್ಲಿ ನಾಯಕನಾಗಿ ಮಿಂಚಿದ್ದು, ಜೊತೆಗೆ ಸಿನಿಮಾದ ಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಾಯಕಿಯಾಗಿ ಪಾವನಾ ಗೌಡ ನಾಯಕಿ ನಟಿಸಿದ್ದು, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಮುಂತಾದ ಕಲಾಬಳಗ ಸಿನಿಮಾದಲ್ಲಿದೆ.
ಕಾಮಿಡಿ ಥ್ರಿಲ್ಲರ್ ಸಸ್ಪೆನ್ಸ್ ಕಥಾಹೂರಣದ ತೂತುಮಡಿಕೆ ಸಿನಿಮಾಗೆ ಸರ್ವತಾ ಸಿನಿ ಗ್ಯಾರೇಜ್ ಬ್ಯಾನರ್ ನಡಿ ಮಧುಸೂಧನ್ ರಾವ್ ಹಾಗೂ ಶಿವಕುಮಾರ್ ಬಂಡವಾಳ ಹೂಡಿದ್ದು, ನವೀನ್ ಚಲ್ಲ ಛಾಯಾಗ್ರಾಹಣ, ಉಜ್ವಲ್ ಚಂದ್ರ ಸಂಕಲನ ಸಿನಿಮಾಕ್ಕಿದ್ದು, ಸದ್ಯ ಎರಡು ಹಾಡುಗಳನ್ನು ರಿಲೀಸ್ ಮಾಡಿರುವ ಚಿತ್ರತಂಡ ಶೀರ್ಷದಲ್ಲಿಯೇ ಟ್ರೇಲರ್ ಬಿಡುಗಡೆ ಮಾಡಲಿದೆ.
ಹನ್ನೆರಡನೆ ಶತಮಾನದ ಮಹಾಶರಣ ಶ್ರೀ ಅಲ್ಲಮಪ್ರಭು ಅವರ ಜೀವನಾಧಾರಿತ ವ್ಯೋಮಕಾಯ ಸಿದ್ದ “ಶ್ರೀ ಅಲ್ಲಮಪ್ರಭು” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ನಟ ನೆನಪರಲಿ ಪ್ರೇಮ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಇದಕ್ಕೆ ಸಾಕ್ಷಿಯಾದರು.
ನನಗೂ ಚಿತ್ರರಂಗಕ್ಕೂ ಸಂಬಂಧವಿಲ್ಲ. ನನ್ನ ಕ್ಷೇತ್ರವೇ ಬೇರೆ. ಆದರೂ ನನ್ನನ್ನು ಏಕೆ ಕರೆದರೂ ಎಂದು ಯೋಚಿಸುತ್ತಿದೆ? ಅವರು ನನ್ನ ಮೇಲಿಟ್ಟಿರುವ ಪ್ರೀತಿ ಅಪಾರ. ಹಾಗಾಗಿ ಬಂದಿದ್ದೀನಿ. ಕಮರ್ಷಿಯಲ್ ಚಿತ್ರಗಳ ಪೈಪೋಟಿ ಇರುವ ಈ ಸಮಯದಲ್ಲಿ ಇಂತಹ ಕಥೆ ಆಯ್ದುಕೊಂಡಿರುವ ನಿರ್ಮಾಪಕರಿಗೆ ಮೊದಲು ಧನ್ಯವಾದ ತಿಳಿಸಬೇಕು. ವೀರಭೂಮಿ, ಧರ್ಮಭೂಮಿ, ಪುಣ್ಯಭೂಮಿ ಅಂತ ಬೇರೆ ಯಾವ ದೇಶಕ್ಕೂ ಹೆಸರಿಲ್ಲ. ಆ ಎಲ್ಲಾ ಹೆಸರುಗಳಿರುವುದು ನಮ್ಮ ಭಾರತಕ್ಕೆ ಮಾತ್ರ. ಭಾರತಕ್ಕೆ ಈ ರೀತಿಯ ಹೆಸರು ಬರಲು ಸಾಕಷ್ಟು ಜನ ಸಾಧು-ಸಂತರು ಇಲ್ಲಿ ಅವತರಿಸುವುದೇ ಕಾರಣ. ಅಂತಹ ಮಹಾಪುರುಷರಾದ ಶ್ರೀಅಲ್ಲಮಪ್ರಭುಗಳ ಕುರಿತಾದ ಈ ಚಿತ್ರಕ್ಕೆ ಶುಭವಾಗಲಿ ಎಂದು ಪ್ರಮೋದ್ ಮುತಾಲಿಕ್ ಹಾರೈಸಿದರು.
ನಮ್ಮದು ಪುಣ್ಯಭೂಮಿ. ಹಿಂದೆ ಎಷ್ಟೋ ಜನ ನಮ್ಮ ದೇಶದ ಸಂಪತ್ತು ಲೂಟಿ ಮಾಡಿದರೂ, ಇನ್ನೂ ನಮ್ಮಲ್ಲಿ ಸಂಪತ್ತು ಇದೆ ಅಂದರೆ ಅದಕ್ಕೆ ಈ ಸಾಧು-ಸಂತರ ಆಶೀರ್ವಾದವೇ ಕಾರಣ. ಮಹಾಶರಣ ಅಲ್ಲಮಪ್ರಭುಗಳ ಕುರಿತಾದ ಈ ಚಿತ್ರಕ್ಕೆ ಒಳಿತಾಗಲಿ ಎಂದರು ನಟ ನೆನಪಿರಲಿ ಪ್ರೇಮ್.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಅವರು ಚಿತ್ರಕ್ಕೆ ಶುಭ ಕೋರಿದರು.
ಅಲ್ಲಮಪ್ರಭುಗಳು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಬಳಿಗಾವಿಯಲ್ಲಿ. ಆದರೆ ಅವರ ಕಾರ್ಯಕ್ಷೇತ್ರ ಬಾಗಲಕೋಟೆ ಬಳಿಯ ತೇರಾದಾಳ. ಚಾಮರಸ ಕವಿ ಬರೆದಿರುವ ಪ್ರಭುಲಿಂಗ ಲೀಲೆ ಆಧರಿಸಿ ಈ ಚಿತ್ರ ಮಾಡಿದ್ದೀವಿ. ಹನ್ನೆರಡನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಮಾಡಿದ ಸಾಧನೆಗಳು ಅನಂತ. ಅನುಭವ ಮಂಟಪದ ಮೊದಲ ಆಧ್ಯಕ್ಷರು ಅವರು. ಅಂತಹ ಮಹಾಶರಣರ ಬಗ್ಗೆ ಸಿನಿಮಾ ಮಾಡಿರುವುದು ನಮ್ಮ ಪುಣ್ಯ ಎಂದು ತಿಳಿಸಿದ ನಿರ್ಮಾಪಕ ಮಾಧವಾನಂದ ಅವರು, ಮಹಾವೀರ ಪ್ರಭು ಅವರು ನಿರ್ಮಾಣಕ್ಕೆ ನನಗೆ ಜೊತೆಯಾಗಿದ್ದಾರೆ ಎಂದರು.
ನಾನು ಸುಮಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಹನ್ನೆರಡನೆಯ ಶತಮಾನದ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ತೆರೆಗೆ ತರುವುದು ಅಷ್ಟು ಸುಲಭವಲ್ಲ. ಆ ಪ್ರಯತ್ನ ಮಾಡಿದ್ದೇವೆ. ತೇರದಾಳ, ಬನವಾಸಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಿದ್ದೇವೆ ಎನ್ನುತ್ತಾರೆ ನಿರ್ದೇಶಕ ಶರಣ್ ಗದ್ವಾಲ್.
ಸಂಕಲನಕಾರ ಕೆಂಪರಾಜ್, ಛಾಯಾಗ್ರಾಹಕ ಗಿರಿ ಅವರು ಈ ಚಿತ್ರದ ಕುರಿತು ಮಾತನಾಡಿದರು.
ಸಚಿನ್ ಸುವರ್ಣ, ನೀನಾಸಂ ಅಶ್ವಥ್, ರಮೇಶ್ ಪಂಡಿತ್, ಶೃಂಗೇರಿ ರಾಮಣ್ಣ, ಗಣೇಶ್ ರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 64 ನೇ ವಾರ್ಷಿಕ ಚುನಾವಣೆ ನಡೆದಿದ್ದು, ಭಾ.ಮ.ಹರಿಶ್ ಬಣಕ್ಕೆ ಭರ್ಜರಿ ಗೆಲುವು ಲಭಿಸಿದೆ.
ಶನಿವಾರ ಮಧ್ಯಾಹ್ನ 2 ಗಂಟೆಗೆ ಚುನಾವಣೆಯ ಮತದಾನ ಪ್ರಕ್ರಿಯೆ ಶುರುವಾಗಿ ಆರು ಗಂಟೆಯವರೆಗೆ ನಡೆಯಿತು. ಈ ಬಾರಿ ಶೇ. 62 ರಷ್ಟು ಮತದಾನ ನಡೆಯಿತು. ಒಟ್ಟು 1176 ಮತದಾನವಾಗಿದೆ. ಆ ಪೈಕಿ 796 ನಿರ್ಮಾಪಕರು, 301 ವಿತರಕರು, 679 ಪ್ರದರ್ಶರು ಈ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಭಾ. ಮ. ಹರೀಶ್ ಅವರು ಅತೀ ಹೆಚ್ಚು 781 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಮತ್ತೊಮ್ಮೆ ಅಧ್ಯಕ್ಷ ಸ್ಥಾನ ಬಯಸಿ ಸ್ಪರ್ಧಿಸಿದ್ದ ಸಾ.ರಾ.ಗೋವಿಂದು ಅವರು, 378 ಮತದಾನಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.
ಉಪಾಧ್ಯಕ್ಷ ರಾಗಿ ಜೈ ಗದೀಶ್, ಶ್ರೀನಿವಾಸ್, ಖಜಾಂಚಿಯಾಗಿ ಸಿದ್ಧರಾಜು, ಗೌರವ ಕಾರ್ಯದರ್ಶಿಯಾಗಿ ಸುಂಸರ್ ರಾಜ್, ಕುಮಾರ್, ಕುಶಾಲ್ ಇತರರು ಆಯ್ಕೆಯಾಗಿದ್ದಾರೆ. ಸಾ.ರಾ.ಗೋವಿಂದು ಬಣದ ವಿರುದ್ಧ ಭಾ.ಮ.ಹರೀಶ್ ಬಣ ಭರ್ಜರಿ ಗೆಲುವು ಸಾಧಿಸಿದ್ದು, ಕನ್ನಡ ಚಿತ್ರರಂಗದ ಸೇವೆಗೆ ಸದಾ ಸಿದ್ಧ ಎಂದು ಬಣ ತಿಳಿಸಿದೆ.
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಪ್ರಮೋದ್ ನಟನೆಯ ಬಹು ನಿರೀಕ್ಷಿತ ಸಿನ್ಮಾ ಬಾಂಡ್ ರವಿ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ. ಈಗಾಗಲೇ 70ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ, ಇತ್ತೀಚೆಗೆ ಬೆಂಗಳೂರಿನ HMTಯಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ನಡೆಸಿದೆ.
ಖ್ಯಾತ ಸಾಹಸ ನಿರ್ದೇಶಕ ಮಾಸ್ಟರ್ ವಿನೋದ್ ಸಾಹಸ ಸಂಯೋಜನೆಯಲ್ಲಿ ಭರ್ಜರಿ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆದಿದೆ. ಪ್ರಮೋದ್, ಸಹಕಲಾವಿದರು ಭರ್ಜರಿ ಆಕ್ಷನ್ ಸೀನ್ಸ್ ಭಾಗಿಯಾಗಿದ್ದರು.
ಕಳೆದ ಹನ್ನೊಂದು ವರ್ಷದಿಂದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಇದೊಂದು ಕಮರ್ಷಿಯಲ್, ಆಕ್ಷನ್-ಲವ್ ಸ್ಟೋರಿ ಸಿನಿಮಾವಾಗಿದ್ದು, ಲೈಫ್ ಲೈನ್ ಫಿಲ್ಮಸ್ ಬ್ಯಾನರ್ ನಡಿ ನರಸಿಂಹಮೂರ್ತಿ ಬಂಡವಾಳ ಹೂಡ್ತಿದ್ದಾರೆ.
ಈ ಹಿಂದೆ ನರಸಿಂಹಮೂರ್ತಿ ಮಾದ ಮತ್ತು ಮಾನಸಿ ಸಿನಿಮಾ ನಿರ್ಮಾಣ ಮಾಡಿದ್ದರು. ಪ್ರಮೋದ್ ಗೆ ಜೋಡಿಯಾಗಿ ಮಾಯಕನ್ನಡಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಕಾಜಲ್ ಕುಂದರ್ ನಾಯಕಿಯಾಗಿ ನಟಿಸ್ತಿದ್ದಾರೆ.
ಮಲ್ಲಿಕಾರ್ಜುನ್ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಕೊಂಡಿದ್ದಾರೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್, ತೆಲುಗಿನ ಖ್ಯಾತ ನಟ ರವಿ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿ ನಟಿಸ್ತಿದ್ದಾರೆ.
ಕೆಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಸಂಕಲನ, ಸುನಿಲ್ – ದೇವ್ ಎನ್ ರಾಜ್ ಸಂಭಾಷಣೆ, ಮನೋಮೂರ್ತಿ ಮಧುರ ಸಂಗೀತ, ಜಯಂತ್ ಕಾಯ್ಕಿಣಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಸಿನಿಮಾಕ್ಕಿದೆ.
“ವೀರ ಮದಕರಿ” ಚಿತ್ರದಿಂದ ಕನ್ನಡಿಗರ ಮನ ಗೆದ್ದಿರುವ ರಾಗಿಣಿ, ಈವರೆಗೂ ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಅವರ ನಟನೆಯ ಚಿತ್ರ “ಸಾರಿ” (ಕರ್ಮ ರಿಟರ್ನ್ಸ್) ರಿಲೀಸ್ ಗೆ ರೆಡಿಯಾಗುತ್ತಿದೆ. ರಾಗಿಣಿ ಹುಟ್ಟು ಹಬ್ಬದ ಅಂಗವಾಗಿ ಚಿತ್ರತಂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ
ರಾಗಿಣಿ ಬರ್ತ್ ಡೇಗೆ ವಿಷ್ ಮಾಡಿದವರಿಗೆ ಥ್ಯಾಂಕ್ಸ್ ಹೇಳುತ್ತಲೆ, ಸಿನಿಮಾ ಕುರಿತು ಹೇಳಿಕೊಂಡರು. ‘ ನನ್ನನ್ನು ಪತ್ರಕರ್ತ ಅಫ್ಜಲ್ ಭೇಟಿಯಾಗಿ ಈ ಚಿತ್ರದ ಕುರಿತು ವಿವರಿಸಿದರು. ಕಥೆ ಇಷ್ಟವಾಯಿತು. ನಿರ್ದೇಶಕ ಬ್ರಹ್ಮ ಅತ್ಯುತ್ತಮ ತಂತ್ರಜ್ಞರು. ನಾನು ಒಂದೇ ತರಹದ ಪಾತ್ರ ಮಾಡಲು ಇಷ್ಟ ಪಡುವುದಿಲ್ಲ. ಬೇರೆ ಬೇರೆ ಪಾತ್ರ ಮಾಡಬೇಕೆಂಬುದು ನನ್ನ ಆಸೆ. ಇದರಲ್ಲೂ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಿಮ್ಮ ಹಾರೈಕೆ ಇರಲಿ ಎನ್ನುತ್ತಾರೆ ನಾಯಕಿ ರಾಗಿಣಿ ದ್ವಿವೇದಿ.
ನಾನು 2000 ನೇ ಇಸವಿಯಿಂದಲ್ಲೂ ಅನಿಮೇಷನ್ ಹಾಗೂ ವಿ ಎಫ್ ಎಕ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಕುರಿತು ಕೆಲವರಿಗೆ ತರಗತಿ ಕೂಡ ತೆಗೆದುಕೊಳ್ಳುತ್ತೇನೆ. ಹಿಂದೆ “ಸಿದ್ದಿ ಸೀರೆ” ಎಂಬ ಚಿತ್ರ ನಿರ್ದೇಶಿಸಿದ್ದ ನನಗೆ ಇದು ಎರಡನೇ ಚಿತ್ರ. ಅಫ್ಜಲ್ ಅವರು ಹೇಳಿದ ಒಂದೆಳೆ ಕಥೆ ಇಷ್ಟವಾಯಿತು. ನಾನು ಅದನ್ನು ಮುಂದುವರೆಸಿದೆ. ಇದರಲ್ಲಿ ಮಾಟ-ಮಂತ್ರ, ಬ್ಲ್ಯಾಕ್ ಮ್ಯಾಜಿಕ್ ಅಂತ ಏನು ಇಲ್ಲ. ಇದೊಂದು ಕ್ರೈಂ ಥ್ರಿಲ್ಲರ್. ಸೂಪರ್ ಹೀರೋ ಕಾನ್ಸೆಪ್ಟ್ ನ ಚಿತ್ರ ಕೂಡ ಎನ್ನುತ್ತಾರೆ ನಿರ್ದೇಶಕ ಬ್ರಹ್ಮ.
ಸಮಾರಂಭವೊಂದರಲ್ಲಿ ಬ್ರಹ್ಮ ಅವರ ಬಳಿ ಈ ಸಿನಿಮಾ ವಿಷಯ ಹೇಳಿದೆ. ನಂತರ ರಾಗಿಣಿ ಅವರು ಈ ಪಾತ್ರಕ್ಕೆ ಸೂಕ್ತ ಅನಿಸಿತು. ಅವರ ಬಳಿ ಹೋಗಿ ನೀವು ಈ ಚಿತ್ರದಲ್ಲಿ ನಟಿಸಬೇಕು ಎಂದು ಕೇಳಿದಾಗ, ತಕ್ಷಣ ಒಪ್ಪಿಕೊಂಡರು. ಅವರಿಗೆ ಧನ್ಯವಾದ. ಕೆನಡಾ ನಿವಾಸಿ ನವೀನ್ ಕುಮಾರ್ ಈ ಚಿತ್ರದ ನಿರ್ಮಾಪಕರು. ಜೈ ಕೃಪ್ಲಾನಿ ಹಾಗೂ ಜೇನ್ ಜಾರ್ಜ್ ಸಹ ನಿರ್ಮಾಪಕರು. ಬೆಂಗಳೂರು, ಸಕಲೇಶಪುರದ ಸುತ್ತ ಚಿತ್ರೀಕರಣ ಮಾಡಿದ್ದೇವೆ. ಮುಂದಿನ ಭಾಗದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯಲಿದೆ ಎಂದು ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ಮಾಹಿತಿ ನೀಡಿದರು.
ಛಾಯಾಗ್ರಾಹಕ ರಾಜೀವ್ ಗಣೇಶನ್ ಹಾಗೂ ನಟ ಸ್ವರ್ಣ ಚಂದ್ರ ಕೂಡ “ಸಾರಿ” ಚಿತ್ರದ ಬಗ್ಗೆ ಮಾತನಾಡಿದರು.
ಪ್ರಶಸ್ತಿಗಳು ಸುಮ್ಮನೆ ಹುಡುಕಿ ಬರೋದಿಲ್ಲ. ಅದಕ್ಕೆ ಪ್ರಾಮಾಣಿಕತೆ, ಪರಿಶ್ರಮ ಬೇಕು. ಇಲ್ಲೀಗ ಹೇಳ ಹೊರಟಿರುವ ವಿಷಯ, ಲಹರಿ ಮ್ಯೂಸಿಕ್ ಸಂಸ್ಥೆಗೆ ಹುಡುಕಿ ಬಂದ ಪ್ರಶಸ್ತಿ. ಹೌದು, ಈ ವರ್ಷ ಲಹರಿ ಮ್ಯೂಸಿಕ್ ಸಂಸ್ಥೆಗೆ ಯುಟ್ಯೂಬ್ ಡೈಮಂಡ್ ಅವಾರ್ಡ್ ಬಂತು. ಅದಷ್ಟೇ ಅಲ್ಲ, ಸಂಸ್ಥೆ ನಿರ್ಮಾಣ ಮಾಡಿದ ಆಲ್ಬಂ ಸಾಂಗ್ ಗೆ ಗ್ರ್ಯಾಮಿ ಅವಾರ್ಡ್ ಬಂತು. ಈಗ ಲಹರಿ ಸಂಸ್ಥೆಯ ಮತ್ತೊಂದು ಅಂಗ ಸಂಸ್ಥೆ ಎಂಆರ್ ಟಿ ಮ್ಯೂಸಿಕ್ ಗೆ ಗೋಲ್ಡ್ ಅವಾರ್ಡ್ ಕೂಡ ಲಭಿಸಿದೆ.
ಈ ಕುರಿತು ಲಹರಿ ವೇಲು ಖುಷಿಯನ್ನು ಹಂಚಿಕೊಂಡಿದ್ದಾರೆ. ‘ವಿಶೇಷವೆಂದರೆ ಇದು ಶುರುವಾಗಿ ಕೇವಲ ಆರು ತಿಂಗಳಾಗಿದೆ. ಅದಾಗಲೇ ಈ ಅವಾರ್ಡ್ ಲಭಿಸಿದೆ. ಇದು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಸಂಗೀತ ಸಂಸ್ಥೆಯ ಎಲ್ಲಾ ಹಾಡುಗಳು ಸೇರಿದಂತೆ ಅಣ್ಣಾವ್ರ ಹಾಡು, ಅಂಬರೀಷ್ ಮತ್ತು ವಿಷ್ಣುವರ್ಧನ್ ಸಿನಿಮಾಗಳ ಗೀತೆಗಳು ಮತ್ತು ಕೆಜಿಎಫ್ 2 ಹಿಂದಿ ಭಾಷೆಯ ಹಾಡುಗಳನ್ನು ಮೊದಲ ಸಲ ಉತ್ತರ ಭಾರತ ಮಾರುಕಟ್ಟೆಯನ್ನು ನಾವೇಕೆ ಪ್ರವೇಶ ಮಾಡಬಾರದು ಅಂತ ಅಲ್ಲಿಯೂ ಕಾಲಿಟ್ಟು, ಅಲ್ಲೂ ಸಹ ಆಡಿಯೋ ಸೂಪರ್ ಹಿಟ್ ಆಗಿದೆ. ಹಾಗಾಗಿ ಗೋಲ್ಡ್ ಅವಾರ್ಡ್ ಗೆ ಇದೂ ಕಾರಣವಾಗಿದೆ.
ಎಂಆರ್ ಟಿ ಮ್ಯೂಸಿಕ್ ಲಹರಿ ಸಂಸ್ಥೆಯ ಅಂಗ ಸಂಸ್ಥೆ. ಕೇವಲ ಆರು ತಿಂಗಳಲ್ಲಿ ಬಂದಿರೋದು ದಾಖಲೆ. ಮುಂದಿನ ದಿನಗಳಲ್ಲಿ ಎಂಆರ್ ಟಿ ಸಂಸ್ಥೆಗೆ ಆದಷ್ಟು ಬೇಗ ಡೈಮಂಡ್ ಅವಾರ್ಡ್ ಬರುವಂತೆಯೇ ಶ್ರಮ ವಹಿಸುತ್ತೇವೆ ಎನ್ನುವ ಲಹರಿ ವೇಲು, ಈ ಪ್ರಶಸ್ತಿಗೆ ಕಾರಣರಾದ ಎಲ್ಲರಿಗೂ ನಾನು ಚಿರ ಋಣಿ. ಪ್ರಮುಖವಾಗಿ ಕಲಾ ಪ್ರೇಮಿಗಳು, ಸಿನಿಮಾ ನಿರ್ದೇಶಕರು, ನಿರ್ಮಾಪಕರು ಹಾಗು ಪತ್ರಕರ್ತರಿಗೆ ಧನ್ಯವಾದಗಳು ಎಂದಿದ್ದಾರೆ ವೇಲು.
ತುಳುನಾಡಿನ ಜಾನಪದ ಕ್ರೀಡೆಗಳಲ್ಲಿ ಬಹುಮುಖ್ಯವಾದ ಕ್ರೀಡೆ ಕಂಬಳ. ಈ ಕಂಬಳದ ಕುರಿತು “ವೀರ ಕಂಬಳ” ಎಂಬ ಚಿತ್ರವನ್ನು ಖ್ಯಾತ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ. ಅರುಣ್ ರೈ ತೋಡಾರ್ ನಿರ್ಮಾಣ ಮಾಡುತ್ತಿದ್ದಾರೆ
ಮೊದಲ ಸಲ ಕಂಬಳ ಕುರಿತು ರಾಜೇಂದ್ರ ಸಿಂಗ್ ಬಾಬು ಸಿನಿಮಾ ಮಾಡಿದ್ದಾರೆ. ಆ ಸಿನಿಮಾ ಕುರಿತು ಅವರು ಹೇಳಿದ್ದಿಷ್ಟು. ನಾನು ಜನಪ್ರಿಯ ವಾರಪತ್ರಿಕೆಯೊಂದರಲ್ಲಿ “ಕಂಬಳ’ದ ಕುರಿತು ಬರುತ್ತಿದ್ದ ಬರಹಗಳನ್ನು ಓದುತ್ತಿದ್ದೆ. ಆ ವಾರಪತ್ರಿಕೆಯ ಮುಖ್ಯಸ್ಥರು ನನಗೆ ಪರಿಚಯ. ಅವರಿಂದ ಕಂಬಳದ ಬಗ್ಗೆ ಇದ್ದ ಸಾಕಷ್ಟು ಆರ್ಟಿಕಲ್ ಗಳನ್ನು ತರಿಸಿಕೊಂಡು ಓದಿ, ಇದರ ಬಗ್ಗೆ ಸಿನಿಮಾ ಮಾಡಬೇಕೆಂದು ನಿರ್ಧಾರ ಮಾಡಿದೆ. ನಂತರ ತುಳು ನಟ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಭೇಟಿ ಮಾಡಿದೆ. ಅವರಿಂದ ಕಂಬಳದ ಬಗ್ಗೆ ಸಾಕಷ್ಟು ಮಾಹಿತಿ ದೊರಕಿತು. ಅರುಣ್ ರೈ ತೋಡಾರ್ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ಮೂಡುಬಿದಿರೆ ಬಳಿ ಇದಕ್ಕಾಗಿ ದೊಡ್ಡ ಕಂಬಳದ ಮೈದಾನ ಸಿದ್ದವಾಯಿತು.
ಇಪ್ಪತ್ತು ಜೊತೆ ಕೋಣ. ಒಂದು ಕೋಣ ನೋಡಿಕೊಳ್ಳಲು ನಾಲ್ಕು ಜನ. ಸಹ ಕಲಾವಿದರು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಜನ ಒಂದು ದಿನದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಕೋಣಗಳ ಮೂಡ್ ಒಂದೇ ತರಹ ಇರುವುದಿಲ್ಲ. ಅದನೆಲ್ಲಾ ನೋಡಿಕೊಂಡು ಚಿತ್ರೀಕರಣ ಮಾಡಬೇಕಿತ್ತು. ಒಂದು ಸಲ ಓಟದ ಶಾಟ್ ತೆಗೆದರೆ, ಸುಮಾರು ಒಂದು ಗಂಟೆ ವಿಶ್ರಾಂತಿ. ನಂತರ ಚಿತ್ರೀಕರಣ. ಈ ಚಿತ್ರಕ್ಕೆ ಕಥೆಯೇ ಹೀರೋ. ಅದು ಬಿಟ್ಟರೆ, ಕೋಣಗಳನ್ನು ಓಡಿಸುವುದರಲ್ಲಿ ಪ್ರಸಿದ್ಧರಾಗಿರುವ ಶ್ರೀನಿವಾಸ ಗೌಡ ಹಾಗೂ ನಾಟಕ ಕಲಾವಿದ ಸ್ವರಾಜ್ ಶೆಟ್ಟಿ ಕಂಬಳ ಓಡಿಸುವವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷಪಾತ್ರದಲ್ಲಿ ಆದಿತ್ಯ ಅಭಿನಯಿಸಿದ್ದಾರೆ. ರಾಧಿಕಾ ಚೇತನ್ ಪೊಲೀಸ್ ಕಮಿಷನರ್ ಆಗಿ ಕಾಣಿಸಿಕೊಂಡಿದ್ದಾರೆ. ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಾಂಜುರು ಸೇರಿದಂತೆ ಪ್ರಸಿದ್ದ ತುಳು ನಟರು ಈ ಚಿತ್ರದಲ್ಲಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಸ್ವಲ್ಪ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಖ್ಯಾತ ನಟ ಪ್ರಕಾಶ್ ರಾಜ್ ಅವರನ್ನು ಅಭಿನಯಿಸಲು ಕೇಳಿದ್ದೇವೆ. ಅವರು ಒಪ್ಪಿಗೆ ನೀಡಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ “ವೀರ ಕಂಬಳ” ನಿಮ್ಮ ಮುಂದೆ ಬರಲಿದೆ. ಈ ಚಿತ್ರಕ್ಕೆ ದೇಸಿ ಸಂಗೀತ ಬೇಕಿತ್ತು. ಹಾಗಾಗಿ ಅಲ್ಲಿನ ಬಗ್ಗೆ ತಿಳಿದಿರುವ ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಗಿರಿ ಈ ಚಿತ್ರದ ಛಾಯಾಗ್ರಾಹಕರು. ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಈ ಚಿತ್ರ ಬರುತ್ತಿದೆ. ತೆಲುಗು, ತಮಿಳು , ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಿಗೆ ಡಬ್ ಆಗಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಗೆ ಸಿದ್ದತೆ ನಡೆಯುತ್ತಿದೆ. ವಿದೇಶಗಳಲ್ಲಿ ಪ್ರೀಮಿಯರ್ ಶೋ ನಡೆಸುವ ಯೋಜನೆಯಿದೆ ಎಂದು “ವೀರ ಕಂಬಳ” ದ ಬಗ್ಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾಹಿತಿ ನೀಡಿದರು. ನಂತರ ವಿಶ್ವದಾದ್ಯಂತ ಜಯಭೇರಿ ಬಾರಿಸುತ್ತಿರುವ “ಕೆ ಜಿ ಎಫ್ ೨” ಚಿತ್ರತಂಡಕ್ಕೆ ಶುಭ ಕೋರಿದ ರಾಜೇಂದ್ರ ಸಿಂಗ್ ಬಾಬು, ಮುಂದೆ ನಾನು ಸಹ ದರ್ಶನ್ ಅವರ ಅಭಿನಯದಲ್ಲಿ ಅದ್ದೂರಿ ಚಿತ್ರವೊಂದನ್ನು ನಿರ್ದೇಶನ ಮಾಡುತ್ತೇನೆ ಎಂದರು.
ನನಗೆ ತುಳು ಚಿತ್ರದಲ್ಲಿ ಅಭಿನಯಿಸುವ ಆಸೆ ಮುಂಚಿನಿಂದಲೂ ಇತ್ತು. ಏಕೆಂದರೆ ನನ್ನ ಅಜ್ಜಿ ಹಾಗೂ ಅಮ್ಮ ಇಬ್ಬರೂ ದಕ್ಷಿಣ ಕನ್ನಡದವರು. ನಾನು ಚಿತ್ರದಲ್ಲಿ ಅಭಿನಯಿಸುವ ವಿಷಯ ನನಗೆ ಗೊತ್ತಿರಲಿಲ್ಲ. ನಿರ್ಮಾಪಕರು ಈ ರೀತಿ ಪಾತ್ರವಿದೆ. ನೀವು ಮಾಡಬೇಕೆಂದರು. ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಾನು ಮೊದಲ ದಿನ ಚಿತ್ರೀಕರಣಕ್ಕೆ ಸಿದ್ದವಾಗಿ ಬಂದಾಗ ಅಲ್ಲಿದವರೆಲ್ಲ ನನ್ನ ನೋಡಿ ಆಶ್ಚರ್ಯಪಟ್ಟರು. ಚಿತ್ರ ಬಿಡುಗಡೆಯಾದಾಗ ನನ್ನ ಪಾತ್ರದ ಬಗ್ಗೆ ನಿಮಗೂ ತಿಳಿಯಬಹುದು ಎಂದರು ನಟ ಆದಿತ್ಯ.
ಎಷ್ಟೋ ಜನಕ್ಕೆ ನಾನು ತುಳುನಾಡಿನವಳೆಂದು ತಿಳಿದಿಲ್ಲ. ನನ್ನ ಮಾತೃ ಭಾಷೆ ಕೂಡ ತುಳು. ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟ ನಿರ್ದೇಶಕರಿಗೆ ವಂದನೆಗಳು. ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ ಎಂದರು ನಟಿ ರಾಧಿಕಾ ಚೇತನ್.
ನಮ್ಮ ಊರಿನಲ್ಲಿ ನಡೆಯುವ ಕಂಬಳಕ್ಕೆ ರಾಜೇಂದ್ರ ಸಿಂಗ್ ಬಾಬು ಅವರನ್ನು ಆಹ್ವಾನಿಸಲು ಕಂಬಳದ ಅಧ್ಯಕ್ಷರು ಹೇಳಿದರು. ಬಾಬು ಸರ್ ನಮ್ಮ ಊರಿಗೆ ಬಂದರು. ಅಲ್ಲಿ ಈ ಚಿತ್ರದ ಮಾತುಕತೆಯಾಗಿ, ಚಿತ್ರ ಆರಂಭವಾಯಿತು. ನಾನು ರಾಜೇಂದ್ರ ಸಿಂಗ್ ಬಾಬು ಅವರ ದೊಡ್ಡ ಅಭಿಮಾನಿ. ಅವರು ನಮ್ಮ ಚಿತ್ರ ನಿರ್ದೇಶನ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು ನಿರ್ಮಾಪಕ ಅರುಣ್ ರೈ ತೋಡಾರ್.
ನಾನು ಮೂಲತಃ ರಂಗಭೂಮಿಯವನು. ತುಳು ಭಾಷೆಯ ಸಾಕಷ್ಟು ನಾಟಕಗಳಿಗೆ ಸಂಭಾಷಣೆ ಬರೆದಿದ್ದೇನೆ. ರಾಜೇಂದ್ರ ಸಿಂಗ್ ಬಾಬು ಅವರು ನನ್ನನ್ನು ಭೇಟಿಯಾಗಿ ಈ ಚಿತ್ರಕ್ಕೆ ತುಳು ಹಾಗೂ ಕನ್ನಡದಲ್ಲಿ ಸಂಭಾಷಣೆ ಬರೆಯಲು ಹೇಳಿದರು. ಈವರೆಗೂ ನಾನು ಕನ್ನಡ ಚಿತ್ರಕ್ಕೆ ಸಂಭಾಷಣೆ ಬರೆದಿರಲಿಲ್ಲ. ಇದೇ ಮೊದಲು. ಕನ್ನಡ ಚಿತ್ರರಂಗಕ್ಕೆ ಇದು ದೊಡ್ಡ ಚಿತ್ರವಾಗುತ್ತದೆ. ತುಳು ಭಾಷೆಯಲಂತೂ ಪ್ರಚಂಡ ಯಶಸ್ಸು ಕಾಣಲಿದೆ ಎಂದು ಚಿತ್ರಕಥೆ , ಸಂಭಾಷಣೆ ಬರೆದಿರುವ ವಿಜಯ್ ಕುಮಾರ್ ಕೋಡಿಯಾಲ್ ಬೈಲ್ ತಿಳಿಸಿದರು.
ಚಿತ್ರದಲ್ಲಿ ಅಭಿನಯಿಸಿರುವ ಶ್ರೀನಿವಾಸ ಗೌಡ , ಸ್ವರಾಜ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ “ವೀರ ಕಂಬಳ” ದ ಕುರಿತು ಮಾತನಾಡಿದರು.
ಅರ್ ಗಿರಿ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಹಾಗೂ ಶ್ರೀನಿವಾಸ್ ಆರ್ ಬಾಬು ಸಂಕಲನವಿರುವ ಈ ಚಿತ್ರಕ್ಕೆ ವಿಜಯ್ ಕುಮಾರ್ ಕಿಡಿಯಾಲ್ ಬೈಲ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ರಾಜೇಶ್ ಕುಡ್ಲ ಅವರ ನಿರ್ಮಾಣ ನಿರ್ವಹಣೆ “ವೀರ ಕಂಬಳ” ಚಿತ್ರಕ್ಕಿದೆ.
ಆದಿತ್ಯ, ರಾಧಿಕಾ ಚೇತನ್, ಗೋಪಿನಾಥ್ ಭಟ್, ಭೋಜರಾಜ್ ವಾಮಾಂಜೂರು, ಮೈಮ್ ರಮೇಶ್, ರಾಜಶೇಖರ ಕೋಟ್ಯಾನ್, ಉಷಾ ಭಂಡಾರಿ, ಶ್ರೀನಿವಾಸ ಗೌಡ, ಸ್ವರಾಜ್ ಶೆಟ್ಟಿ, ವೀಣಾ ಪೊನ್ನಪ್ಪ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.