ರಮೇಶ್ ರೆಡ್ಡಿ ಅವರ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಗಾಳಿಪಟ 2” ಚಿತ್ರ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಚಿತ್ರ ಬಿಡುಗಡೆಗೆ ಅಭಿಮಾನಿ ಸಮೂಹ ಕಾತುರದಿಂದ ಕಾಯುತ್ತಿದೆ.
ಈ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ “ನೀನು ಬಗೆಹರಿಯದ ಹಾಡು” ಎಂಬ ಗೀತೆ ಇತ್ತೀಚೆಗೆ ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಗಾಯಕ ನಿಹಾಲ್ ತಾವ್ರೋ ಹಾಡಿದ್ದಾರೆ. ಪವನ್ ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಕುದುರೆಮುಖದ ಸುಂದರ ಪರಿಸರದಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಧನು ನೃತ್ಯ ನಿರ್ದೇಶನ ಮಾಡಿದ್ದಾರೆ.
ಸದ್ಯದಲ್ಲೇ ಟೀಸರ್, ಟ್ರೇಲರ್ ಹಾಗೂ ಇನ್ನೂ ಎರಡು ಹಾಡುಗಳ ಬಿಡುಗಡೆಯಾಗಲಿದೆ. ಆಗಸ್ಟ್ 12 ಕ್ಕೆ ಚಿತ್ರ ತೆರೆಗೆ ಬರಲಿದೆ.
ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಹಕರು.
ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸುವುದರೊಂದಿಗೆ, ನಿರ್ಮಾಣವನ್ನು ಮಾಡುತ್ತಿರುವ ಚಿತ್ರ “ಲಂಕಾಸುರ”. ಇದು ಟೈಗರ್ ಟಾಕೀಸ್ ಸಂಸ್ಥೆಯ ಮೊದಲ ಚಿತ್ರವೂ ಹೌದು. ನಿಶಾ ವಿನೋದ್ ಪ್ರಭಾಕರ್ ಈ ಚಿತ್ರದ ನಿರ್ಮಾಪಕರು. ಪ್ರಮೋದ್ ಕುಮಾರ್ ನಿರ್ದೇಶಕರು.
“ಅಣ್ಣ ಗನ್ ಹಿಡ್ದು ನಿಂತ ಅಂದ್ರೆ ಭಸ್ಮಾಸುರ, ಲಾಂಗ್ ಹಿಡ್ದು ನಡ್ಕೊಂಡು ಬಂದ್ರೆ ಲಂಕಾಸುರ. ಲಂಕಾಸುರ ಲಂಕಾಸುರ .. ಎಂಬ ಟೈಟಲ್ ಟ್ರ್ಯಾಕ್ A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.
ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಚೇತನ್ ಕುಮಾರ್ ಬರೆದಿರುವ ಈ ಹಾಡನ್ನು ವಿಜೇತ್ ಕೃಷ್ಣ ಅವರೆ ಹಾಡಿದ್ದಾರೆ. ಜೋಯೆಲ್ ಶಾಸ್ತ್ರಿ ಗಿಟಾರ್ ನುಡಿಸಿದ್ದಾರೆ.
ಮೋಹನ್ ಕುಮಾರ್ ನೃತ್ಯ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ನಾಯಕ ವಿನೋದ್ ಪ್ರಭಾಕರ್ ಅಭಿನಯಿಸಿದ್ದಾರೆ. ಹೆಚ್.ಎಂ.ಟಿ, ಟೊರಿನೊ ಫ್ಯಾಕ್ಟರಿ ಹಾಗೂ ಮಲ್ಲೇಶ್ವರಂ ದೋಬಿ ಘಾಟ್ ನಲ್ಲಿ ನಿರ್ಮಿಸಲಾಗಿದ್ದ ಆರು ಅದ್ದೂರಿ ಸೆಟ್ ಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ.
ರಾಮ ರಾಮ ರೇ ನಿರ್ದೇಶಕ ಸತ್ಯಪ್ರಕಾಶ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಆ ಚಿತ್ರಕ್ಕೆ ಅನ್ ಲಾಕ್ ರಾಘವ ಎಂದು ಹೆಸರಿಡಲಾಗಿದೆ. ಈ ಶೀರ್ಷಿಕೆಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅನಾವರಣಗೊಳಿಸಿದ್ದಾರೆ
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ, ‘ ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲಾ’, ‘ಮ್ಯಾನ್ ಆಫ್ ದಿ ಮ್ಯಾಚ್’ನಂತಹ ಅಪರೂಪದ ಸಿನಿಮಾ ಕಥೆ ಹೇಳಿ ಸಕ್ಸಸ್ ಕಂಡಿರುವ ನಿರ್ದೇಶಕ ಸತ್ಯಪ್ರಕಾಶ್ ನಿರ್ಮಾಣದ ಹೊಸ ಸಿನಿಮಾದ ಟೈಟಲ್ ನ್ನು ರಿವೀಲ್ ಆಗಿದೆ. ಸತ್ಯ ಮತ್ತು ಮಯೂರ ಪಿಕ್ಚರ್ಸ್ ವತಿಯಿಂದ ನಿರ್ಮಾಣವಾಗುತ್ತಿರುವ ‘ಅನ್ ಲಾಕ್ ರಾಘವ’ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ನಿರ್ಮಾಪಕ ಸತ್ಯಪ್ರಕಾಶ್ ಮಾತನಾಡಿ, ಇಂಡಸ್ಟ್ರೀಗೆ ಬಂದಾಗ ದೊಡ್ಡ ಟೀಂ ಕಟ್ಟಬೇಕು ಎಂಬ ಆಸೆ ಇತ್ತು. ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡ್ತಿರುವ ಈ ಸಿನಿಮಾ ನಿಜವಾದ ಕಮರ್ಷಿಯಲ್ ಸಿನಿಮಾ. ತುಂಬಾ ಹೊಸ ಪ್ರೆಸೆಂಟೇಷನ್ ನಲ್ಲಿ ಸಿನಿಮಾ ಮಾಡಿದ್ದೇವೆ. ಇಡೀ ಸಿನಿಮಾ ರೋಮ್ಯಾಂಟಿಕ್ ಕಾಮಿಡಿ ಜರ್ನಿ ಇರುತ್ತದೆ. ಮೂರು ರೀತಿ ಕಾಮಿಡಿ ಇರುತ್ತದೆ. ಪಾತ್ರ ಏನು ಮಾತಾಡ್ತಾರೆ ಅಂತಾ ಗೊತ್ತಾಗಲ್ಲ. ಆದ್ರೆ ಪ್ರೇಕ್ಷಕ ನಗ್ತಾರೆ. ಅನೂಪ್ ಸೀಳಿನ್ ಸರ್ ಅದ್ಭುತ ಮ್ಯೂಸಿಕ್ ಕೊಟ್ಟಿದ್ದಾರೆ ಎಂದರು.
‘ಭಾಗ್ಯರಾಜ್’, ‘ಕಳ್ಬೆಟ್ಟದ ದರೋಡೆಕೋರರು’, ‘ರಾಜು ಜೇಮ್ಸ್ ಬಾಂಡ್’ ಚಿತ್ರಗಳನ್ನು ನಿರ್ದೇಶಿಸಿರುವ ದೀಪಕ್ ಮಧುವನಹಳ್ಳಿ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ಡಿ ಸತ್ಯಪ್ರಕಾಶ್ ಕತೆ-ಚಿತ್ರಕತೆ-ಸಂಭಾಷಣೆ ಬರೆದು ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ‘ವೀಕೆಂಡ್’ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ನವನಟ ಮಿಲಿಂದ್ ನಾಯಕನಾಗಿ ಹಾಗೂ ‘ಲವ್ ಮಾಕ್ಟೇಲ್ – 2’ ಚಿತ್ರದ ರೇಚಲ್ ಡೇವಿಡ್ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಸಾಧುಕೋಕಿಲ, ಅವಿನಾಶ್, ರಮೇಶ್ ಭಟ್, ಸುಂದರ್ ವೀಣಾ, ಧರ್ಮಣ್ಣ ಕಡೂರು, ಭೂಮಿಶೆಟ್ಟಿ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದು, ಲವಿತ್ ಛಾಯಾಗ್ರಹಣ ಹಾಗೂ ಅಜಯ್ ಕುಮಾರ್ ಸಂಕಲನವಿದೆ.
ಚಿತ್ರಕ್ಕೆ ಲವಿತ್ ಛಾಯಾಗ್ರಹಣವಿದೆ. ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನವಿದೆ. ಮಿಲಿಂದ್, ರೇಚಲ್ ಡೇವಿಡ್, ಸಾಧುಕೋಕಿಲ, ಅವಿನಾಶ್, ರಮೇಶ್ ಭಟ್, ಸುಂದರ್ ವೀಣಾ, ಧರ್ಮಣ್ಣ ಕಡೂರು, ಭೂಮಿಶೆಟ್ಟಿ ಹಾಗೂ ಮತ್ತಿತರರು ಚಿತ್ರದಲ್ಲಿದ್ದಾರೆ.
68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, 2020ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ತಮಿಳಿನ ಸೂರಾರೈ ಪೋಟ್ರು ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಕನ್ನಡದ ತಲೆದಂಡ, ಡೊಳ್ಳು , ನಾದದ ನವನೀತ ಮತ್ತು ತುಳು ಭಾಷೆಯ ಜೀಟಿಗೆ ಸಿನಿಮಾಗಳು ರಜತ ಕಮಲ ಪಡದುಕೊಂಡಿವೆ.
ಹಾಗೆ ನೋಡಿದರೆ ಬಾಲಿವುಡ್ ಸಿನಿಮಾಗಳೇ ಹೆಚ್ಚು ಈ ರಾಷ್ಟ್ರೀಯ ಪ್ರಶಸ್ತಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುತ್ತಿದ್ದವು. ಈ ಬಾರಿ ಸೌತ್ ಇಂಡಿಯನ್ ಸಿನಿಮಾಗಳೇ ಹೆಚ್ಚು ಪ್ರಶಸ್ತಿಗಳನ್ನು ಬಾಚಿವೆ. ನಟ ಸಂಚಾರಿ ವಿಜಯ್ ಅಭಿನಯದ ಪ್ರವೀಣ್ ಕೃಪಾಕರ್ ನಿರ್ದೇಶನದ ತಲೆದಂಡ ಚಿತ್ರವನ್ನು ಪರಿಸರ ಸಂರಕ್ಷಣೆ ಸಂಬಂಧಿತ ಅತ್ಯುತ್ತಮ ಚಿತ್ರ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. ಪ್ರಶಸ್ತಿಯು ರಜತ ಕಮಲ ಮತ್ತು 1.50 ಲಕ್ಷ ನಗದು ಒಳಗೊಂಡಿದೆ. ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಚಿತ್ರವೂ ಅತ್ಯುತ್ತಮ ಕನ್ನಡ ಚಿತ್ರ ವಿಭಾಗದಡಿ ರಜತ ಕಮಲಕ್ಕೆ ಭಾಜನವಾಗಿದೆ. ಪ್ರಶಸ್ತಿ ಒಂದುಬಲಕ್ಷ ನಗದು ಒಳಗೊಂಡಿದೆ. ಅತ್ತ್ಯುತ್ತಮ ಧ್ವನಿಗ್ರಹಣಕ್ಕೂ ಚಿತ್ರ ಪ್ರಶಸ್ತಿ ಪಡೆದಿದೆ.
ಸಂತೋಷ್ ಮಾಡ ನಿರ್ದೇಶನದ ತುಳು ಭಾಷೆಯ ಜೀಟಿಗೆ ಸಿನಿಮಾಗೂ ಪ್ರಶಸ್ತಿ ಬಂದಿದ್ದು, ಅತ್ಯುತ್ತಮ ಕಲರ, ಸಂಸ್ಕೃತಿ ಆಧಾರಿತ ಚಿತ್ರ ವಿಭಾಗದಡಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ನಾದದ ನವನೀತ ಸಿನಿಮಾಗೆ ಪ್ರಶಸ್ತಿ ಲಭಿಸಿದೆ.
ಡೊಳ್ಳು ಸಿನಿಮಾಗೆ ಪ್ರಶಸ್ತಿ ಪಡೆದ ನಿರ್ದೇಶಕ ಸಾಗರ್ ಪುರಾಣಿಕ್, ಇಂತಹ ವಿಷಯದ ಸಿನಿಮಾ ನಿರ್ಮಾಣ ಮಾಡಲು ಪವನ್ ಒಡೆಯರ್ ಮುಂದಾಗಿದ್ದರಿಂದಲೇ ಇದು ಸಾಧ್ಯವಾಗಿದೆ. ಜಾಗತೀಕರಣದ ಪರಿಣಾಮವನ್ನು ಈ ಸಿನಿಮಾ ಮೂಲಕ ತೋರಿಸಿದ್ದೇವೆ. ಪ್ರಶಸ್ತಿಗೆ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.
ತಲೆದಂಡ ಸಿನಿಮಾ ನಿರ್ದೇಶಕ ಪ್ರವೀಣ್ ಕೃಪಾಕರ್, ನಾನು ವೈಯಕ್ತಿಕವಾಗಿ ಸಂಚಾರಿ ವಿಜಯ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದೆ. ಶೋಲಿಗ ಬುಡಕಟ್ಟು ಜನಾಂಗಕ್ಕೆ ಸೇರಿದ ಅರೆಬುದ್ಧಿ ಮಾಂದ್ಯ ಕುನ್ನ ಎಂಬ ಪಾತ್ರದಲ್ಲಿ ವಿಜಯ್ ಅದ್ಭುತವಾಗಿ ನಟಿಸಿದ್ದರು. ಹಾಗಾಗಿ ಈ ಪ್ರಶಸ್ತಿಯನ್ನು ವಿಜಯ್ ಅವರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.
ಪವನ್ ಒಡೆಯರ್ ನಿರ್ಮಾಣದ ಚೊಚ್ಚಲ ಸಿನಿಮಾ ಡೊಳ್ಳು ಮುಕುಟಕ್ಕೆ ಮತ್ತೊಂದು ಪ್ರಶಸ್ತಿ ಗರಿ ಸೇರಿದೆ. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. 30 ವಿವಿಧ ಭಾಷೆಯ 400 ಸಿನಿಮಾಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. ಈ ಪೈಕಿ ಡೊಳ್ಳು ಸಿನಿಮಾ ಎರಡು ವಿಭಾಗದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕನ್ನಡದ ಅತ್ಯುತ್ತಮ ಚಿತ್ರ, ಬೆಸ್ಟ್ ಆಡಿಯೋಗ್ರಾಫಿ ಡೊಳ್ಳು ಸಿನಿಮಾ ಬಾಚಿಕೊಂಡಿದೆ.
ಡೊಳ್ಳು ಕುಣಿತದ ಸುತ್ತ ಸಾಗುವ ಈ ಸಿನಿಮಾವನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದು, ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಜೋಡಿಯಾಗಿ ನಟಿಸಿದ್ದು, ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ ಸುರೇಶ್ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ. ಚಿತ್ರರಂಗಕ್ಕೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಪವನ್ ಒಡೆಯರ್, ತಮ್ಮದೇ ಒಡೆಯರ್ ಮೂವೀಸ್ ಬ್ಯಾನರ್ ಮೂಲಕ ಪತ್ನಿ ಅಪೇಕ್ಷಾ ಜೊತೆಗೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ.
ಪ್ರತಿಷ್ಟಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಅಂತಾರಾಷ್ಟ್ರೀಯ ಢಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ಡೊಳ್ಳು ಸಿನಿಮಾ ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ.
ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ಟೀಸರ್ ಭಾರೀ ಸದ್ದು ಮಾಡಿತ್ತು. ಅನಂತ್ ಕಾಮತ್ ಸಂಗೀತ, ಅಭಿಲಾಷ್ ಕಲಾಥಿ ಕ್ಯಾಮೆರಾ ಕೈಚಳಕ ಇರುವ ಈ ಚಿತ್ರ ಶೀರ್ಘದಲ್ಲಿಯೇ ತೆರೆಗೆ ಬರಲಿದೆ.
ಕನ್ನಡದಲ್ಲಿ ಈಗ ಸದ್ಯಕ್ಕೆ ಸುದ್ದಿಯಾಗುತ್ತಿರೋ ಚಿತ್ರ ಮಾನ್ಸೂನ್ ರಾಗ. ಹೌದು ಚಿತ್ರ ಶುರುವಾದಾಗಿಂದಲೂ ಒಂದೊಂದೇ ವಿಷಯದಲ್ಲಿ ಸದ್ದು ಮಾಡುತ್ತಲೇ ಇದೆ. ಈಗ ಸಿನಿಮಾ ರಿಲೀಸ್ ಆಗೋಕೆ ತಯಾರಿ ನಡೆಸುತ್ತಿದೆ. ಆಗಸ್ಟ್ 19ಕ್ಕೆ ರಾಜ್ಯಾದ್ಯಂತ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ.
ಈಗ ಹೊಸ ಸುದ್ದಿ ಅಂದರೆ, ಮಾನ್ಸೂನ್ ರಾಗಕ್ಕಾಗಿಯೇ ಹೀರೋ ಡಾಲಿ ಧನಂಜಯ್ ಅಭಿಮಾನಿಗಳು ಫೀಲ್ಡಿಗಿಳಿದಿದ್ದಾರೆ.
ಡಾಲಿ ಧನಂಜಯ ಫ್ಯಾನ್ಸ್ ಕಟೌಟ್ಸ್ ಮಾಡಲು ಮುಂದಾಗಿರೋದೇ ಈ ಹೊತ್ತಿನ ಸುದ್ದಿ. ಡಾಲಿ ಫ್ಯಾನ್ಸ್ ಫ್ಯಾನ್ ಕಾನ್ಸೆಪ್ಟ್ ನಲ್ಲಿ ಮಾನ್ಸೂನ್ ರಾಗ ಕಟೌಟ್ಸ್ ಆಗುತ್ತಿದೆ. ಡಾಲಿ ರಚಿತಾ ಕಾಂಬಿನೇಷನ್ ಇರುವ ಸ್ಪೆಷಲ್ ಕಟೌಟ್ಸ್ ಈಗ ತಲೆ ಎತ್ತಲು ತಯಾರಾಗುತ್ತಿವೆ ಅನ್ನೋದು ವಿಶೇಷ.
ಈ ಚಿತ್ರದ ವಿಶೇಷ ಅಂದರೆ, ಮಾನ್ಸೂನ್ ರಾಗ ಪ್ರದರ್ಶನವಾಗುವ ರಾಜ್ಯದ ಪ್ರತಿ ಚಿತ್ರಮಂದಿರಗಳ್ಲೂ ಡಾಲಿ ಹಾಗು ಧನಂಜಯ್ ಅವರ ಸ್ಪೆಷಲ್ ಕಟೌಟ್ಸ್ ನಿಲ್ಲಲಿವೆ. ಇದಕ್ಕಾಗಿ ಈಗಾಗಲೇ ಡಾಲಿ ಫ್ಯಾನ್ಸ್ ಸ್ವತಃ ಕಾಳಜಿವಹಿಸಿ ಕಟೌಟ್ಸ್ ಕಾನ್ಸೆಪ್ಟ್ ಕೈಗೆತ್ತಿಕೊಂಡಿದ್ದಾರೆ. ಆಗಸ್ಟ್ 19ಕ್ಕೆ ರಿಲೀಸ್ ಆಗುತಗತಿರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಕಟೌಟ್ಸ್ ತಯಾರಿ ಭರ್ಜರಿಯಾಗಿಯೇ ನಡೆಯುತ್ತಿದೆ.
ಅದೇನೆ ಇರಲಿ, ಅಭಿಮಾನಿಗಳ ಅಭಿಮಾನವೇ ಅಂಥದ್ದು. ತಮ್ಮ ಪ್ರೀತಿಯ ಹಿರೋ ಸಿನಿಮಾ ತೆರೆಗೆ ಅಪ್ಪಳಿಸಲಿದೆ ಅಂತ ಗೊತ್ತಾದರೆ, ಮೊದಲು ಸಂಭ್ರಮಿಸೋದು ಕೂಡ ಅವರೇ. ಬರೀ ಕಟೌಟ್ ನಿಲ್ಲಿಸೋದಷ್ಟೇ ಅಲ್ಲ, ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಸಂತಸ ಪಡುತ್ತಾರೆ. ಈ ಮಾನ್ಸೂನ್ ರಾಗ ಚಿತ್ರದ ವಿಷಯದಲ್ಲೂ ಡಾಲಿ ಫ್ಯಾನ್ಸ್ ಅದನ್ನೇ ಮಾಡುತ್ತಿದ್ದಾರೆ.
ಇನ್ನು ಈ ಚಿತ್ರಕ್ಕೆ ರಮೇಶ್ ಅರವಿಂದ್ ಅಭಿನಯದ ಪುಷ್ಪಕ ವಿಮಾನ ಸಿನಿಮಾ ನಿರ್ದೇಶಿಸಿದ್ದ ರವೀಂದ್ರನಾಥ್ ನಿರ್ದೇಶನ ಮಾಡಿದ್ದಾರೆ.
ವಿಖ್ಯಾತ್ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿಖ್ಯಾತ್ ನಿರ್ಮಾಣಕ್ಕೆ ಏನೆಲ್ಲ ಬೇಕೋ ಎಲ್ಲವನ್ನೂ ಒದಗಿಸಿದ್ದರಿಂದ ಸಿನಿಮಾ ಅಂದುಕೊಂಡಿದ್ದಕ್ಕಿಂತಲೂ ಸೊಗಸಾಗಿ ಮೂಡಿ ಬಂದಿದೆ. ಪ್ರಚಾರದ ವಿಚಾರದಲ್ಲೂ ಅವರು ಹಿಂದಿಲ್ಲ, ತಮ್ಮ ಸಿನಿಮಾವನ್ನು ಸಾಕಷ್ಟು ಕಡೆ ತಲುಪುವಲ್ಲಿಯೂ ಅವರು ತಮ್ಮದೇ ತಂಡದ ಜೊತೆ ಕೆಲಸ ನಿರ್ವಹಿಸುತ್ತಿದ್ದಾರೆ.
ಇನ್ನು ಈ ಚಿತ್ರದ ಹೈಲೆಟ್ ಇರೋದೇ ಸಂಗೀತದಲ್ಲಿ. ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಅವರ ಸಂಗೀತ ಹಾಡು ಈಗಾಗಲೇ ಎಲ್ಲೆಡೆ ಸದ್ದು ಮಾಡಿದೆ.
ಕೊರೋನ ಹೊಡೆತಕ್ಕೆ ಸಿಲುಕಿ ಚಿತ್ರರಂಗ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಅಂತಹ ಸಮಯದಲ್ಲಿ ಅಂದರೆ, ಕಳೆದವರ್ಷ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾದ ಚಿತ್ರ “ಲಂಕೆ”. ಈಗ ಈ ಸಿನಿಮಾ ಅಮೆಜಾನ್ ನಲ್ಲಿ ರಿಲೀಸ್ ಆಗಿದ್ದು ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ
ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿ, ರಾಮ್ ಪ್ರಸಾದ್ ಎಂ.ಡಿ ನಿರ್ಮಿಸಿ, ನಿರ್ದೇಶಿಸಿರುವ “ಲಂಕೆ” ಚಿತ್ರ ಉತ್ತರ ಕರ್ನಾಟಕ ಭಾಗದ ಅಥಣಿ, ಜಮಖಂಡಿ ಮುಂತಾದ ಕಡೆ ಈಗಲೂ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಇತ್ತೀಚೆಗೆ ಅಮೆಜಾನ್ ಪ್ರೈಮ್ ನಲ್ಲಿ ಈ ಚಿತ್ರ ಬಿಡುಗಡೆಯಾಗಿದೆ.
ಅಲ್ಲೂ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಈಗಾಗಲೇ ಚಿತ್ರ 300 ದಿನಗಳನ್ನು ಪೂರೈಸಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾಗಲಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಾಮಪ್ರಸಾದ್. ಅಂದಹಾಗೆ, ಖ್ಯಾತ ನಟ ಸಂಚಾರಿ ವಿಜಯ್ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದರು.
ನಮ್ಮ ಹೈಕ್ಳು ಚಿತ್ರ ಲಾಂಛನದಲ್ಲಿ ಸ್ನೇಹಲತ ಅವರು ನಿರ್ಮಿಸಿರುವ ರಕ್ಕಂ ಚಿತ್ರ ಜುಲೈ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೆ.ಸೆಂದಿಲ್ ಚಿತ್ರವನ್ನು ನಿರ್ದೇಶಿಸಿದ್ದಾರೆ
ನಮ್ಮ ತಂಡದಲ್ಲಿ ಹೆಚ್ಚಿನವರಿಗೆ ಇದು ಮೊದಲ ಚಿತ್ರವಿರಬಹುದು, ಆದರೆ ಎಲ್ಲರಿಗೂ ರಂಗಭೂಮಿ, ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವವಿದೆ. ನಾನು ಮೂಲತಃ ರಂಗಭೂಮಿ ಕಲಾವಿದ. ಎನ್ ಎಸ್ ಡಿ ಯಲ್ಲಿ ತರಬೇತಿ ಪಡೆದುಕೊಂಡಿದ್ದೇನೆ. ಪುನೀತ್ ರಾಜ್‍ಕುಮಾರ್ ಅವರು ನಡೆಸಿಕೊಡುತ್ತಿದ್ದ “ಕನ್ನಡದ ಕೋಟ್ಯಾಧಿಪತಿ” ಸೇರಿದಂತೆ ಅನೇಕ ರಿಯಾಲಿಟಿ ಶೋಗಳಿಗೆ ಕೆಲಸ ಮಾಡಿದ್ದೇನೆ. ಈಗ ಹಂಸಲೇಖ ಅವರ ಬಳಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದು ಮೊದಲ ನಿರ್ದೇಶನದ ಚಿತ್ರ. ಕೋವಿಡ್ ಪೂರ್ವದಲ್ಲಿ ನಿರ್ಮಾಣವಾದ ಚಿತ್ರವಿದು. ಪ್ರಧಾನಮಂತ್ರಿಗಳು ಡಿಮಾನಿಟೇಸೇಶನ್ ಮಾಡಿದ ಸಮಯದಲ್ಲಿ ಹುಟ್ಡಿದ ಕಥೆ ಇದು. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದರೂ ತಪ್ಪಾಗಲಾರದು. “ರಕ್ಕಂ” ಎಂದರೆ ಹಣದ ಗಂಟು ಎಂಬ ಅರ್ಥವಿದೆ.
ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆದಿದೆ. ರಣಧೀರ್ ಗೌಡ ನಾಯಕನಾಗಿ ನಟಿಸಿದ್ದಾರೆ. ಅಮೃತ ನಾಯರ್ ನಾಯಕಿ. ಹಿರಿಯ ಕಲಾವಿದ ನಂಜಪ್ಪ ಬೆನಕ, ಹಿರಿಯ ನಿರ್ದೇಶಕ ಬಿ.ರಾಮಮೂರ್ತಿ ಅವರು ಸೇರಿದಂತೆ ಸಾಕಷ್ಟು ಜನ ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ಇದೇ 29 ರಂದು ನಮ್ಮ ಚಿತ್ರ ತೆರೆಗೆ ಬರಲಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ ಸೆಂದಿಲ್.
ನಿರ್ದೇಶಕರು ಹೇಳಿದ ಕಥೆ ನನಗೆ ತುಂಬಾ ಹಿಡಿಸಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ ಎಂದರು ನಿರ್ಮಾಪಕಿ ಸ್ನೇಹಲತ.
ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಹಾಗೂ ರಂಗಾಯಣದಲ್ಲಿ ಅಭಿನಯ ಕಲಿತಿದ್ದೀನಿ. ಸಹಾಯಕ ನಿರ್ದೇಶಕನಾಗೂ ದುಡಿದಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ರಂಗ ಎಂಬುದು ನನ್ನ ಪಾತ್ರದ ಹೆಸರು. ಎರಡು ಶೇಡ್ ಗಳಲ್ಲಿ ಅಭಿನಯಿಸಿದ್ದೇನೆ. ಮೊದಲು ಹಳ್ಳಿಯವನಾಗಿ ನಂತರ ಪಟ್ಟಣವಾಸಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ರಣಧೀರ್ ಗೌಡ.
ಚಿತ್ರದಲ್ಲಿ ನಟಿಸಿರುವ ಹಿರಿಯ ಕಲಾವಿದ ನಂಜಪ್ಪ ಬೆನಕ, ನಿರ್ದೇಶಕ ಬಿ.ರಾಮಮೂರ್ತಿ, ನಟರಾದ ವಿನಯ್ ಪಾಂಡವಪುರ, ದಯಾನಂದ್, ಸಹ ನಿರ್ದೇಶಕ ಗೋಪಾಲ್, ಛಾಯಾಗ್ರಾಹಕ ಶ್ಯಾಮ್, ಸಂಗೀತ ನಿರ್ದೇಶಕ ಶ್ರೀವತ್ಸ, ಗಾಯಕ ರವೀಂದ್ರ ಸೊರಗಾವಿ, ನೃತ್ಯ ನಿರ್ದೇಶಕರಾದ, ಚಾಮರಾಜ್, ಅರುಣ್ ಹಾಗೂ ಕಾರ್ಯಕಾರಿ ನಿರ್ಮಾಪಕ ಸಂದೇಶ್ “ರಕ್ಕಂ” ಚಿತ್ರದ ಬಗ್ಗೆ ಮಾತನಾಡಿದರು.
ನಿರ್ಮಾಪಕ ಸಂಜಯ್ ಬಾಬು, ನಿರ್ದೇಶಕ ಮಾ ಚಂದ್ರು ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಈ ಬಾರಿ ಕರ್ನಾಟಕ ರತ್ನ ಡಾ. ರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ರವರ ವಿಷಯಾಧಾರಿತ ವಿಶೇಷ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಲಾಲ್ ಬಾಗ್ ನಲ್ಲಿ ಆಗಸ್ಟ್ 5 ರಿಂದ 15 ರವರೆಗೂ ನಡೆಯಲಿದೆ
ಆಗಸ್ಟ್ 5ರಂದು ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ಸಿಗಲಿದೆ. ಶಿವರಾಜಕುಮಾರ್ ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರನ್ನು ಫಲಪುಷ್ಪ ಪ್ರದರ್ಶನಕ್ಕೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲು ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದಿಂದ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಉದ್ಯಾನ ಕಲಾಸಂಘದ ಉಪಾಧ್ಯಕ್ಷರಾದ ಶ್ರೀ ವಾಸುದೇವ್. ತೋಟಗಾರಿಕೆ ಜಂಟಿ ನಿರ್ದೇಶಕರಾದ ಡಾ. ಎಂ ಜಗದೀಶ್ ಹಾಗೂ ಲಾಲ್ ಬಾಗ್ ತೋಟಗಾರಿಕೆ ಉಪನಿರ್ದೇಶಕರಾದ ಶ್ರೀಮತಿ ಜಿ ಕುಸುಮ ಹಾಗೂ ದಿನಿ ಸಿನಿ ಕ್ರಿಯೇಷನ್ಸ್ ನ ದಿನೇಶ್ ರವರು ಉಪಸ್ಥಿತರಿದ್ದರು.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ “ಜೇಮ್ಸ್”. ಈ ಚಿತ್ರವನ್ನು ನಿರ್ದೇಶಕ ಹಾಗೂ ಗೀತರಚನೆಕಾರ ಚೇತನ್ ಕುಮಾರ್ (ಬಹದ್ದೂರ್) ನಿರ್ದೇಶಿಸಿದ್ದರು.
ಜೇಮ್ಸ್” ಸಿನಿಮಾವನ್ನು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ದೊಡ್ಡಮಟ್ಟದ ಯಶಸ್ಸು ಮಾಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಜೇಮ್ಸ್” ನಂತರ ನಿರ್ದೇಶಕ ಚೇತನ್ ಕುಮಾರ್ ಅವರ ಮುಂದಿನ ಸಿನಿಮಾ ಯಾವುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆ ಕುತೂಹಲ ಕ್ಕೆ ಈಗ ತೆರೆ ಬಿದ್ದಿದೆ.
ಸದ್ಯದಲ್ಲೇ ಚೇತನ್ ಕುಮಾರ್ ನಿರ್ದೇಶನದ ಚಿತ್ರವೊಂದು ಆರಂಭವಾಗಲಿದೆ. “ರೆಮೋ” ಚಿತ್ರದ ಇಶಾನ್ ಈ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ.
“ರೆಮೋ” ಚಿತ್ರದ ಬಿಡುಗಡೆ ನಂತರ ಈ ಚಿತ್ರ ಆರಂಭವಾಗಲಿದೆ. ಶೀಘ್ರದಲ್ಲೇ ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ಚೇತನ್ ಕುಮಾರ್ ತಿಳಿಸಿದ್ದಾರೆ.