68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, 2020ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ತಮಿಳಿನ ಸೂರಾರೈ ಪೋಟ್ರು ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಕನ್ನಡದ ತಲೆದಂಡ, ಡೊಳ್ಳು , ನಾದದ ನವನೀತ ಮತ್ತು ತುಳು ಭಾಷೆಯ ಜೀಟಿಗೆ ಸಿನಿಮಾಗಳು ರಜತ ಕಮಲ ಪಡದುಕೊಂಡಿವೆ.
ಹಾಗೆ ನೋಡಿದರೆ ಬಾಲಿವುಡ್ ಸಿನಿಮಾಗಳೇ ಹೆಚ್ಚು ಈ ರಾಷ್ಟ್ರೀಯ ಪ್ರಶಸ್ತಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುತ್ತಿದ್ದವು. ಈ ಬಾರಿ ಸೌತ್ ಇಂಡಿಯನ್ ಸಿನಿಮಾಗಳೇ ಹೆಚ್ಚು ಪ್ರಶಸ್ತಿಗಳನ್ನು ಬಾಚಿವೆ.
ನಟ ಸಂಚಾರಿ ವಿಜಯ್ ಅಭಿನಯದ ಪ್ರವೀಣ್ ಕೃಪಾಕರ್ ನಿರ್ದೇಶನದ ತಲೆದಂಡ ಚಿತ್ರವನ್ನು ಪರಿಸರ ಸಂರಕ್ಷಣೆ ಸಂಬಂಧಿತ ಅತ್ಯುತ್ತಮ ಚಿತ್ರ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. ಪ್ರಶಸ್ತಿಯು ರಜತ ಕಮಲ ಮತ್ತು 1.50 ಲಕ್ಷ ನಗದು ಒಳಗೊಂಡಿದೆ. ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಚಿತ್ರವೂ ಅತ್ಯುತ್ತಮ ಕನ್ನಡ ಚಿತ್ರ ವಿಭಾಗದಡಿ ರಜತ ಕಮಲಕ್ಕೆ ಭಾಜನವಾಗಿದೆ. ಪ್ರಶಸ್ತಿ ಒಂದುಬಲಕ್ಷ ನಗದು ಒಳಗೊಂಡಿದೆ. ಅತ್ತ್ಯುತ್ತಮ ಧ್ವನಿಗ್ರಹಣಕ್ಕೂ ಚಿತ್ರ ಪ್ರಶಸ್ತಿ ಪಡೆದಿದೆ.
ಸಂತೋಷ್ ಮಾಡ ನಿರ್ದೇಶನದ ತುಳು ಭಾಷೆಯ ಜೀಟಿಗೆ ಸಿನಿಮಾಗೂ ಪ್ರಶಸ್ತಿ ಬಂದಿದ್ದು, ಅತ್ಯುತ್ತಮ ಕಲರ, ಸಂಸ್ಕೃತಿ ಆಧಾರಿತ ಚಿತ್ರ ವಿಭಾಗದಡಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ನಾದದ ನವನೀತ ಸಿನಿಮಾಗೆ ಪ್ರಶಸ್ತಿ ಲಭಿಸಿದೆ.
ಡೊಳ್ಳು ಸಿನಿಮಾಗೆ ಪ್ರಶಸ್ತಿ ಪಡೆದ ನಿರ್ದೇಶಕ ಸಾಗರ್ ಪುರಾಣಿಕ್, ಇಂತಹ ವಿಷಯದ ಸಿನಿಮಾ ನಿರ್ಮಾಣ ಮಾಡಲು ಪವನ್ ಒಡೆಯರ್ ಮುಂದಾಗಿದ್ದರಿಂದಲೇ ಇದು ಸಾಧ್ಯವಾಗಿದೆ. ಜಾಗತೀಕರಣದ ಪರಿಣಾಮವನ್ನು ಈ ಸಿನಿಮಾ ಮೂಲಕ ತೋರಿಸಿದ್ದೇವೆ. ಪ್ರಶಸ್ತಿಗೆ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.
ತಲೆದಂಡ ಸಿನಿಮಾ ನಿರ್ದೇಶಕ ಪ್ರವೀಣ್ ಕೃಪಾಕರ್, ನಾನು ವೈಯಕ್ತಿಕವಾಗಿ ಸಂಚಾರಿ ವಿಜಯ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದೆ. ಶೋಲಿಗ ಬುಡಕಟ್ಟು ಜನಾಂಗಕ್ಕೆ ಸೇರಿದ ಅರೆಬುದ್ಧಿ ಮಾಂದ್ಯ ಕುನ್ನ ಎಂಬ ಪಾತ್ರದಲ್ಲಿ ವಿಜಯ್ ಅದ್ಭುತವಾಗಿ ನಟಿಸಿದ್ದರು. ಹಾಗಾಗಿ ಈ ಪ್ರಶಸ್ತಿಯನ್ನು ವಿಜಯ್ ಅವರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.