Categories
ಸಿನಿ ಸುದ್ದಿ

ಹುಲಿಯನಿಗೊಂದು ಹುಲಿಯಾ ಹಾಡು! ಗಿರಿಜಾ ಸಿದ್ಧಿ ಧ್ವನಿಗೆ ಸಿದ್ಧರಾಮಯ್ಯ ಫಿದಾ…

ಹಿರಿಯ ರಾಜಕಾರಣಿ ಸಿದ್ದರಾಮಯ್ಯನವರಿಗೋಸ್ಕರ ಸಲಗ ಖ್ಯಾತಿಯ ಗಿರಿಜಾ ಸಿದ್ದಿ ಮೈಸೂರು ಹುಲಿಯಾ ಎಂಬ ಹಾಡು ಹಾಡಿದ್ದಾರೆ. ಎಪ್ಪತ್ತೈದರ ವಸಂತಕ್ಕೆ ಕಾಲಿಟ್ಟಿರುವ ರಾಜಕೀಯ ಧುರೀಣ ಸಿದ್ದಣ್ಣನಿಗೋಸ್ಕರ ಅಪರೂಪದ ಹಾಡಿಗೆ ಕಂಠದಾನ ಮಾಡಿದ್ದಾರೆ ಗಿರಿಜಾ ಸಿದ್ಧಿ.

ಸಲಗ ಚಿತ್ರದ ಟಿಣಿಂಗ ಮಿಣಿಂಗ ಟಿಶ್ಯಾ ಹಾಡಿನ ಮೂಲಕ ಮನೆ ಮಾತಾಗಿದ್ದ ಗಿರಿಜಾ ಇದೇ ಮೊದಲ ಬಾರಿಗೆ ಜನಪದ ಶೈಲಿಯಲ್ಲಿ ಈ ಹಾಡು ಹಾಡಿದ್ದು, ಸಂಗೀತ ನಿರ್ದೇಶಕ ವೀರ್ ಸಮರ್ಥ್ ಈ ಹಾಡಿಗೆ ಸಂಗೀತ ನೀಡಿದ್ದು, ಸಿನೆಮಾ ಶೈಲಿಯಲ್ಲಿ ಹಾಡು ಮೂಡಿ ಬಂದಿದೆ. ಸಿದ್ದರಾಮಯ್ಯನವರ ಎಪ್ಪತ್ತೈದು ವರುಷದ ಜೀವನ ಸಾಧನೆಯ ವರ್ಣನೆ ಹೊಂದಿರುವ ಈ ಹಾಡಿಗೆ ಜೇಮ್ಸ್ ಖ್ಯಾತಿಯ ಚೇತನ್ ಕುಮಾರ್ ವಿಶೇಷವಾದ ಸಾಹಿತ್ಯ ಬರೆದಿದ್ದಾರೆ. ಕೈ ಹಿಡಿಯೋ ಕೈ ಸಿದ್ದರಾಮಯ್ಯ ಎನ್ನುತ್ತ ಶುರುವಾಗುವ ಈ ಹಾಡನ್ನು ಸಿದ್ದರಾಮಯ್ಯನವರ ಆಪ್ತರೂ ಆಗಿರುವ ಪುಲಕೇಶಿ ನಗರದ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ.

ಸಲಗ ಗಿರಿಜಾ ಹಾಡಿರುವ ಈ ಹಾಡಿನ ಜೊತೆಗೆ ಇದೇ ಆಗಸ್ಟ್ 3 ರಂದು ಇನ್ನೊಂದು ಹಾಡು ಸಹ ಬಿಡುಗಡೆ ಆಗಲಿದ್ದು, ಅದನ್ನು ಚುಟುಚುಟು ಅಂತೈತಿ ಖ್ಯಾತಿಯ ರವೀಂದ್ರ ಸೊರಗಾವಿ ಹಾಡಿದ್ದಾರೆ. ಹರ್ಷ ವರ್ಧನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು ಜೇಮ್ಸ್ ಖ್ಯಾತಿಯ ಚೇತನ್ ಕುಮಾರ್ ಅವರೇ ಸಾಹಿತ್ಯ ಬರೆದಿದ್ದಾರೆ.

ಈ ಎರಡೂ ಲಿರಿಕಲ್ ವೀಡಿಯೋ ಹೊಂದಿರುವ ಹಾಡುಗಳು ಎ೨ ಎಂಟರ್ ಟೈನ್ ಮೆಂಟ್ ಚಾನೆಲ್ ನಲ್ಲಿ ರಿಲೀಸ್ ಆಗಲಿದ್ದು, ಈಗಾಗಲೇ ಸಿದ್ದಿ ಹಾಡಿರುವ ಜೈ ಜೈ ಜೈ ಜೈ ಜನ ನಾಯಕ ಎಂಬ ಸಾಲುಗಳಿಂದ ಕೂಡಿರುವ ಹಾಡು ವೈರಲ್ ಆಗಿದೆ. ಸಿದ್ದರಾಮಯ್ಯ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೇ ಮಾಡಿದೆ.


ಆಗಸ್ಟ್ ೩ರಂದು ಸಿದ್ದರಾಮಯ್ಯನವರ ಹುಟ್ಟುಹಬ್ಬದ ಸಮಾರಂಭ ದಾವಣಗೆರೆಯಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ಅದೇ ದಿನ ಈ ಹಾಡಿನ ಲೋಕಾರ್ಪಣೆಯಾಗಲಿದೆ.

Categories
ಸಿನಿ ಸುದ್ದಿ

ನಟಿ ಮೇಘನರಾಜ್ ಅವರಿಗೆ ಪ್ರತಿಷ್ಠಿತ ಫೆಸ್ಟಿವಲ್ ಆಫ್ ಗ್ಲೋಬ್ ಪ್ರಶಸ್ತಿ…

ತಮ್ಮ ಉತ್ತಮ ನಟನೆಯ ಮೂಲಕ ಜನಪ್ರಿಯರಾಗಿರುವ ನಟಿ ಮೇಘನರಾಜ್ ಅವರಿಗೆ ಈ ಬಾರಿಯ ಪ್ರತಿಷ್ಠಿತ “FOG HERO” ಅವಾರ್ಡ್ ದೊರಕಿದೆ.

ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ “ಫೆಡರೇಷನ್ ಆಫ್ ಇಂಡೋ ಅಮೆರಿಕನ್ಸ್ ಆಫ್ ನಾರ್ತೆನ್ ಕ್ಯಾಲಿಫೋರ್ನಿಯಾ” ಇವರು ಆಯೋಜಿಸುವ “ಫೆಸ್ಟಿವಲ್ ಆಫ್ ಗ್ಲೋಬ್”(FOG) ಸಮಾರಂಭ ಕಳೆದ ನಲವತ್ತು ವರ್ಷಗಳಿಂದ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ. ಈ ಬಾರಿ ಆಗಸ್ಟ್‌ 19, 20 ಹಾಗೂ 21 ರಂದು ಈ ಸಮಾರಂಭ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮಾರಂಭಕ್ಕೆ ಅಲ್ಲಿ ನೆಲೆಸಿರುವ ಭಾರತೀಯರು, ಸ್ಥಳೀಯರು ಸೇರಿದಂತೆ ಲಕ್ಷಕ್ಕೂ ಅಧಿಕ ಜನ‌ರು ಬರುವ ನಿರೀಕ್ಷೆಯಿದೆ.

ಅಲ್ಲಿನ ರಾಜಕೀಯ ಪ್ರಮುಖರು, ಗಣ್ಯರು ಸಹ ಸಮಾರಂಭಕ್ಕೆ ಆಗಮಿಸುತ್ತಾರೆ. ಪ್ರತಿವರ್ಷ ಭಾರತದ ಸ್ವಾತಂತ್ರ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಆಗಸ್ಟ್ 15ರ ಆಸುಪಾಸಿನ ದಿನಗಳಲ್ಲಿ ಈ ಹಬ್ಬ ಸಡಗರದಿಂದ ನಡೆಯಲಿದೆ. ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅಲ್ಲಿ ನಡೆಯುತ್ತದೆ.

ಕಳೆದ ಎರಡು ವರ್ಷಗಳ ನಂತರ (ಕೊರೋನ ನಂತರ) ಈ ಬಾರಿ ಮತ್ತೆ ಅದ್ದೂರಿಯಾಗಿ ಈ ಹಬ್ಬವನ್ನು ಆಯೋಜಿಸಲಾಗಿದೆ.

ಪ್ರತಿವರ್ಷ ಈ ಸಂದರ್ಭದಲ್ಲಿ ಭಾರತದಲ್ಲಿ ಸಾಧನೆ ಮಾಡಿರುವ ಗಣ್ಯರೊಬ್ಬರಿಗೆ “FOG HERO” ಅವಾರ್ಡ್” ನೀಡಲಾಗುತ್ತದೆ. ಹೆಚ್ಚಾಗಿ ಚಿತ್ರರಂಗದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಆಶಾ ಪರೇಕ್, ಅಮಿತಾಬ್ ಬಚ್ಚನ್, ದೇವಾನಂದ್, ವಿನೋದ್ ಖನ್ನಾ, ಧರ್ಮೇಂದ್ರ ಮುಂತಾದ ಸಿನಿರಂಗದ ಗಣ್ಯರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬಾರಿ ದಕ್ಷಿಣ ಭಾರತದ ಖ್ಯಾತ ನಟಿ ಮೇಘನರಾಜ್ “F0G HERO” ಅವಾರ್ಡ್ ಗೆ ಭಾಜನರಾಗಿದ್ದಾರೆ ಎಂದು ಸಂಸ್ಥೆಯ ಕ್ರಿಸ್ ಮೂರ್ತಿ ಮಾಹಿತಿ ನೀಡಿದರು.

ಅಮಿತಾಭ್‌ ಬಚ್ಚನ್‌, ಧರ್ಮೇಂದ್ರ ಮುಂತಾದ ಗಣ್ಯರು ಪಡೆದಿರುವ ಈ ಪ್ರತಿಷ್ಠಿತ ಪ್ರಶಸ್ತಿಗೆ ನಾನು ಭಾಜನಳಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ಅಂತಹ ಮಹಾನ್ ನಟರಿಗೆ ಸಂದಿರುವ ಪ್ರಶಸ್ತಿಗೆ ಈ ಬಾರಿ ನಾನು ಆಯ್ಕೆಯಾಗಿರುವುದು ನನ್ನ ಪುಣ್ಯ. ನನ್ನ ತಂದೆಯ ಮೂಲಕ ಈ ವಿಷಯ ನನಗೆ ತಿಳಿಯಿತು. ಆಗಸ್ಟ್21 ರಂದು ನಡೆಯುವ ಅದ್ದೂರಿ ಸಮಾರಂಭದಲ್ಲಿ ಈ ಪ್ರಶಸ್ತಿ ಸ್ವೀಕರಿಸಲಿದ್ದೇನೆ. ಕನ್ನಡ ಚಿತ್ರರಂಗ ಈಗ ಇಡೀ ವಿಶ್ವದಾದ್ಯಂತ ಜನಪ್ರಿಯ. ಕನ್ನಡಿಗಳಾಗಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಹೆಚ್ಚಿನ ಖುಷಿಯಾಗಿದೆ ಎಂದರು ನಟಿ ಮೇಘನರಾಜ್.

Categories
ಸಿನಿ ಸುದ್ದಿ

ಕೆವಿಎನ್ ಪ್ರೊಡಕ್ಷನ್ ತೆಕ್ಕೆಗೆ ಗಾಳಿಪಟ 2 ವಿತರಣೆ ಹಕ್ಕು

ಕನ್ನಡ ಚಿತ್ರರಂಗ ಈಗ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತಹ ಸಿನಿಮಾಗಳನ್ನು ಕಟ್ಟಿ ಕೊಡುತ್ತಿದೆ. ಸದಭಿರುಚಿಯ ಸಿನಿಮಾಗಳ ಜೊತೆಯಲ್ಲಿ ಮಾಸ್ ಸಿನಿಮಾಗಳ ಮೂಲಕ ಸಾಗರದಾಚೆಗೂ ಜೋರು ಸದ್ದು ಮಾಡುತ್ತಿದೆ.

ಈಗ ಹೊಸ ಸುದ್ದಿ ಅಂದರೆ, ಕನ್ನಡದಲ್ಲಿ ದೊಡ್ಡ ಪ್ರೊಡಕ್ಷನ್ ಕಂಪನಿ ಎನಿಸಿಕೊಂಡಿರುವ ಕೆವಿಎನ್ ಪ್ರೊಡಕ್ಷನ್ ಕೂಡ ಎಂಟ್ರಿಯಾಗಿದ್ದು, ಆ ಮೂಲಕ ಬಿಗ್ ಸ್ಟಾರ್ಸ್ ಸಿನಿಮಾಗಳ ನಿರ್ಮಾಣದ‌ ಜೊತೆ ಜೊತೆಗೆ ಸ್ಟಾರ್ಸ್ ಸಿನಿಮಾಗಳ ವಿತರಣೆ ಮಾಡಲು ಮುಂದಾಗಿದೆ. ಈಗಾಗಲೇ ಹಲವು ಸಿನಿಮಾಗಳ ವಿತರಣೆ ಹಕ್ಕು ಪಡೆದಿರುವ ಕೆವಿಎನ್, ಈಗ ಯೋಗರಾಜ್ ಭಟ್ ನಿರ್ದೇಶನದ, ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಅಭಿನಯದ ಗಾಳಿಪಟ 2 ಸಿನಿಮಾದ ವಿತರಣೆ ಹಕ್ಕು ಪಡೆದಿದ್ದಾರೆ.

ಸದ್ಯ ಕೆವಿಎನ್ ಪ್ರೊಡಕ್ಷನ್ಸ್ ನಿಂದ ಬಹು ತಾರಾಗಣದ
ಗಾಳಿಪಟ 2 ಚಿತ್ರದ ವಿತರಣೆ ಹಕ್ಕು ಪಡೆದಿದ್ದಾರೆ. ಇತ್ತೀಚೆಗೆ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಿರ್ಮಾಪಕ ರಮೇಶ್ ರೆಡ್ಡಿ

Categories
ಸಿನಿ ಸುದ್ದಿ

ಮಾದೇವನಿಗೆ ಜೈ ಎಂದ ಸೋನಾಲ್! ವಿನೋದ್ ಪ್ರಭಾಕರ್ ಗೆ ಮಾಂಥೆರೋ ಮತ್ತೆ ಜೋಡಿ…

ಮರಿ ಟೈಗರ್ ವಿನೋದ್ ಪ್ರಭಾಕರ್ ಬತ್ತಳಿಕೆಯ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು ಮಾದೇವ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಅಂಗಳಕ್ಕೀಗ ಪಂಚತಂತ್ರ ಬ್ಯೂಟಿ ಸೋನಲ್ ಮಾಂಥೆರೋ ಎಂಟ್ರಿ ಕೊಟ್ಟಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸೋನಲ್ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ನಟಿಸಲಿದ್ದಾರೆ.

ವಿನೋದ್ ಹಾಗೂ ಸೋನಲ್ ಈ ಹಿಂದೆ ರಾಬರ್ಟ್ ಸಿನಿಮಾದಲ್ಲಿ ತನು-ರಾಘವ ಎಂಬ ಪಾತ್ರದ ಮೂಲಕ ಪ್ರೇಕ್ಷಕರ ಮನೆ ಗೆದ್ದಿದ್ದರು. ಇದೀಗ ಮತ್ತೊಮ್ಮೆ ಈ ಜೋಡಿ ಒಂದಾಗಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಖಾಕಿ ಸಿನಿಮಾ ಸಾರಥಿ ನವೀನ್ ಬಿ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮಾದೇವ ಚಿತ್ರದಲ್ಲಿ ಸೋನಲ್ 80ರ ದಶಕದ ಮಧ್ಯಮವರ್ಗದ ಹುಡುಗಿಯಾಗಿ ಬಣ್ಣ ಹಚ್ಚಲಿದ್ದಾರೆ.

80 ದಶಕದ ಎಮೋಷನಲ್ ಹಾಗೂ ಮಾಸ್ ಎಲಿಮೆಂಟ್ ಕಂಟೆಂಟ್ ಹೊಂದಿರುವ ಮಾದೇವ ಸಿನಿಮಾ ರೈಲು ಮತ್ತು ಜೈಲಿನ ಬ್ಯಾಕ್ ಡ್ರಾಪ್ ನಲ್ಲಿ ನಡೆಯಲಿದೆ. ವಿನೋದ್ ಪ್ರಭಾಕರ್ ಈ ಹಿಂದಿನ ಪಾತ್ರಗಳಿಗಿಂತ ಈ ಚಿತ್ರದಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಶಿವಮೊಗ್ಗ, ಧಾರವಾಡ ಮತ್ತು ಹೈದರಾಬಾದ್‌ನಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ. ಹಿರಿಯ ನಟಿ ಶ್ರುತಿ, ಪೋಷಕ ಕಲಾವಿದ ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದು, ಬಾಲಕೃಷ್ಣ ತೋಟ ಕ್ಯಾಮೆರಾ ಕೈಚಳಕ, ಪ್ರದ್ಯೋಥನ್ ಮ್ಯೂಸಿಕ್ ಪುಳಕ ಸಿನಿಮಾಕ್ಕಿದೆ. ಗಾಯತ್ರಿ ರಾಜೇಶ್ ಹಾಗೂ ಲವ್ ಗುರು ಸುಮಂತ್ ನಿರ್ಮಾಣದ ಮಾದೇವ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಮಾದೇವ ಸಿನಿಮಾದ ಜೊತೆಯಲ್ಲಿ ವಿನೋದ್ ಪ್ರಭಾಕರ್ ಲಂಕಾಸುರ ಸಿನಿಮಾದಲ್ಲಿಯೂ ಬ್ಯುಸಿಯಾಗಿದ್ದಾರೆ. ತಮ್ಮದೇ ಟೈಗರ್ ಟಾಕೀಸ್ ನಡಿ ವಿನೋದ್ ಪತ್ನಿ ನಿಶಾ ನಿರ್ಮಾಣ ಮಾಡ್ತಿರುವ ಈ ಚಿತ್ರದ ಟೈಟಲ್ ಟ್ರ್ಯಾಕ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡ್ತಿದೆ. ಈ ಚಿತ್ರದಲ್ಲಿ ಮರಿ ಟೈಗರ್ ಹೊಸ ಅವತಾರದಲ್ಲಿ ಅಬ್ಬರಿಸಿದ್ದಾರೆ.

Categories
ಸಿನಿ ಸುದ್ದಿ

ರೆಟ್ರೋ ಶೈಲಿಯಲ್ಲಿ ಪರಿಮಳ ಡಿಸೋಜ ಮಿಂಚಿಂಗ್! ಅದ್ಧೂರಿ ಸೆಟ್ ಸಾಂಗ್ ಜೊತೆ ಶೂಟಿಂಗ್ ಕಂಪ್ಲೀಟ್…

ವಿಲೇಜ್ ರೋಡ್ ಸಂಸ್ಥೆಯ ಮೂಲಕ ವಿನೋದ್ ಶೇಷಾದ್ರಿ ಅವರು ನಿರ್ಮಿಸುತ್ತಿರುವ ಹಾಗೂ ಡಾ.ಗಿರಿಧರ್ ಹೆಚ್ ಟಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಪರಿಮಳ ಡಿಸೋಜಾ” ಚಿತ್ರದ ಹಾಡೊಂದರ ಚಿತ್ರೀಕರಣ ಇತ್ತೀಚೆಗೆ ನೆಲಮಂಗಲದ ಬಳಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್ ನಲ್ಲಿ ನಡೆಯಿತು.

ರೆಟ್ರೋ ಶೈಲಿಯಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡಿನಲ್ಲಿ ವಿನೋದ್ ಶೇಷಾದ್ರಿ ಹಾಗೂ ಶ್ವೇತ ರಮೇಶ್ ನಟಿಸಿದ್ದಾರೆ. ವಿನೋದ್ ಶೇಷಾದ್ರಿ ಅವರೆ ಈ ಹಾಡನ್ನು ಬರೆದಿದ್ದು, ರಾಜೇಶ್ ಕೃಷ್ಣನ್ ‌ಹಾಗೂ ಶೃತಿ.ವಿ.ಎಸ್ ಹಾಡಿದ್ದಾರೆ. ಈ ಹಾಡಿನ ಚಿತ್ರೀಕರಣದೊಂದಿಗೆ “ಪರಿಮಳ ಡಿಸೋಜಾ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಒಟ್ಟು 72 ದಿನಗಳ ಚಿತ್ರೀಕರಣ ನಡೆದಿದೆ.

ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಕ್ರಿಸ್ಟೋಪರ್ ಜೇಸನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್,ಜಯಂತ್ ಕಾಯ್ಕಿಣಿ, ಕೆ.ಕಲ್ಯಾಣ್ ಹಾಗೂ ವಿನೋದ್ ಶೇಷಾದ್ರಿ ಹಾಡುಗಳನ್ನು ಬರೆದಿದ್ದಾರೆ. ಜೋಗಿ ಪ್ರೇಮ್, ರಾಜೇಶ್ ಕೃಷ್ಣನ್, ಶೃತಿ ವಿ ಎಸ್, ನಕುಲ್ ಆಭಯಂಕರ್, ಸುಪ್ರೀಯ ರಾಮ್ ಹಾಡಿದ್ದಾರೆ,
ಕೆ .ರಾಮ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಹಾಗೂ ವಿಜಯನಗರ ಮಂಜು ನೃತ್ಯ ಈ ಚಿತ್ರಕ್ಕಿದೆ.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರದ ಜೊತೆಗೆ ಉತ್ತಮ ಸಂಗೀತಮಯ ಚಿತ್ರವೂ ಹೌದು. ಕುಟುಂಬ ಸಮೇತ ನೋಡಬಹುದಾದ ಚಿತ್ರ ನಮ್ಮದು ಎನ್ನುತ್ತಾರೆ ನಿರ್ದೇಶಕರು.

ಶ್ರೀನಿವಾಸ್ ಪ್ರಭು, ಭವ್ಯ, ಕೋಮಲ ಬನವಾಸೆ, ವಿನೋದ್ ಶೇಷಾದ್ರಿ, ಶಿವಕುಮಾರ್ ಆರಾದ್ಯ, ಮೀಸೆ ಆಂಜನಪ್ಪ, ಶ್ವೇತ ರಮೇಶ್, ಸುನೀಲ್ ಎ ಮೋಹಿತೆ, ನಾಗಮಂಗಲ ಜಯರಾಮಣ್ಣ,

ಚಂದನ ಶ್ರೀನಿವಾಸ್, ಡಾ.ಚಂದ್ರಶೇಖರ್ ಎನ್ ಆರ್, ಪೂಜಾ ರಾಮಚಂದ್ರ, ಯೋಗೇಶ್, ರೊಹಿಣಿ ಸೇರಿದಂತೆ ಐವತಕ್ಕೂ ಹೆಚ್ಚು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ

Categories
ಸಿನಿ ಸುದ್ದಿ

ಪಾಕ್ ನೆಲದಲ್ಲೂ ವಿಕ್ರಾಂತನ ಅಬ್ಬರ! ನೇಪಾಳದಲ್ಲಿ ರೋಣನ ಯಾತ್ರೆ… 27ಕ್ಕೆ 27ದೇಶದಲ್ಲಿ ಪ್ರೀವ್ಯೂ

ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ದುಬೈ ನಲ್ಲಿ ವರ್ಲ್ಡ್‌ ಪ್ರೀಮಿಯರ್ ಆಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು,
ಈಗ ‘ಸಿನೆಬಡ್ಸ್’ ಎಂಬ ಆಪ್‌ ಮೂಲಕ ಪ್ರೇಕ್ಷಕರು ವಿಕ್ರಾಂತ್‌ರೋಣ ಚಿತ್ರವನ್ನು ತನ್ನಿಷ್ಟದ ಭಾಷೆಗಳಲ್ಲಿ ನೋಡುವಂಥ ಅವಕಾಶವನ್ನು ಕಲ್ಪಿಸುತ್ತಿರುವುದು ವಿಶೇಷ.

ಅಂದಹಾಗೆ, ಈ ಆಪನ್ನು ಹೊರತಂದಿರುವ ಆದಿತ್ಯ ಕಶ್ಯಪ್ ಹೇಳಿದ್ದಿಷ್ಟು.
ನಮ್ಮ ಸಹೋದರ ವಿನೀತ್ ಕಶ್ಯಪ್ ಅವರು ಡೆವಲಪ್ ಮಾಡಿದ ಆಪ್ ಇದಾಗಿದ್ದು, ಪ್ಲೇಸ್ಟೋರ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಿ ತೆರೆಮೇಲೆ ಯಾವುದೇ ಭಾಷೆ ಸಿನಿಮಾ ಪ್ರದರ್ಶನವಾಗುತ್ತಿರಲಿ, ನಾವು ಮೊಬೈಲ್ ನಲ್ಲಿ ನಮ್ಮಿಷ್ಟದ ಭಾಷೆ ಆಯ್ಕೆ ಮಾಡಿಕೊಂಡು ಹೆಡ್ ಫೋನ್ ಮೂಲಕ ಕೇಳುತ್ತ ಚಿತ್ರವನ್ನು ವೀಕ್ಷಿಸಬಹುದು.
ಕಳೆದವಾರ ರಿಲೀಸಾದ ತಮಿಳಿನ ರಾಕೆಟ್ರಿ ಚಿತ್ರದ ಜೊತೆ ನಾವು ಟೈಅಪ್ ಆಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಇದಲ್ಲದೆ ಓಟಿಟಿಯಲ್ಲಿ ಬರುವ ಚಿತ್ರಗಳನ್ನೂ ನಮ್ಮ ಭಾಷೆಯಲ್ಲೇ ವೀಕ್ಷಿಸಬಹುದಾಗಿದೆ. ಚಿತ್ರದ ನಿರ್ಮಾಪಕರು ಆಪ್‌ನೊಂದಿಗೆ ಮೊದಲೇ ಟೈಅಪ್ ಮಾಡಿಕೊಂಡಿದ್ದರೆ ಮಾತ್ರವೇ ಅದು ಸಾಧ್ಯವಾಗಲಿದೆ ಎಂದು ವಿವರಿಸಿದರು.

ನಿರ್ಮಾಪಕ ಜಾಕ್ ಮಂಜು ಮಾತನಾಡಿ ಒಂದೆರಡು ತಿಂಗಳ ಹಿಂದೆಯೇ ನನ್ನಬಳಿ ಬಂದಿದ್ದರೆ ಬೆಂಗಾಳಿ, ಮರಾಠಿ, ಗುಜರಾತಿ ಭಾಷೆಯಲ್ಲೂ ನಮ್ಮ ಚಿತ್ರವನ್ನು ಡಬ್ ಮಾಡಬಹುದಿತ್ತು. ನಾವು ಡಬ್ ಮಾಡಿದ ಅಷ್ಟೂ ಭಾಷೆಯ ಸೌಂಡ್‌ಟ್ರ‍್ಯಾಕನ್ನು ಇವರಿಗೆ ಕೊಟ್ಟಾಗ ಅವರು ಅದನ್ನು ತಮ್ಮ ಆಪ್‌ಗೆ ಅಳವಡಿಸುತ್ತಾರೆ. ಕೆಲ ಕೇಂದ್ರಗಳಲ್ಲಿ ಎಲ್ಲಾ ಭಾಷೆಯಲ್ಲಿ ರಿಲೀಸ್ ‌ಮಾಡಲು ಸಾಧ್ಯವಾಗದಿದ್ದಾಗ ಆ ಭಾಷೆಯ ಜನರಿಗೆ ಇದರಿಂದ ಅನುಕೂಲವಾಗುತ್ತದೆ. ಇದು
ಚಿತ್ರದ ಯಾವುದೇ ಕಂಟೆಂಟನ್ನು ಕಾಪಿ ಮಾಡಲ್ಲ, ಇದೆಲ್ಲ ತಿಳಿದುಕೊಂಡೇ ನಾವು ಮುಂದುವರೆಯುತ್ತಿದ್ದೇವೆ ಎಂದರು. ಜುಲೈ 27ರಂದು ಪ್ರಪಂಚದ 27ದೇಶಗಳಲ್ಲಿ ಪ್ರೀವ್ಯೂ ಆಗುತ್ತಿದೆ. ಜೊತೆಗೆ ದುಬೈನಲ್ಲಿ 5 ಭಾಷೆಯಲ್ಲೂ ಪ್ರದರ್ಶನವಾಗಲಿದೆ. ನಿನ್ನೆಯಷ್ಟೇ ನೇಪಾಳ ಕನ್‌ಫರ್ಮ್ ಆಯ್ತು, ಅಲ್ಲದೆ ಪಾಕಿಸ್ತಾನದಲ್ಲೂ ವಿಕ್ರಾಂತ್‌ರೋಣ ರಿಲೀಸಾಗುವ ಸಾಧ್ಯತೆಯಿದೆ. ಪ್ರಪಂಚದಾದ್ಯಂತ 3200ರಿಂದ 3500 ಚಿತ್ರಮಂದಿಗಳಲ್ಲಿ ವಿಕ್ರಾಂತ್ ರೋಣ ರಿಲೀಸಾಗುತ್ತಿದೆ, ಕರ್ನಾಟಕದಲ್ಲೇ 400ರಿಂದ 420 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕರ್ನಾಟಕಕ್ಕಿಂತ ತೆಲುಗು ರಾಜ್ಯಗಳಲ್ಲಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಬಾಲಿವುಡ್‌ನಲ್ಲಿ 900 ಚಿತ್ರಮಂದಿರ, ಟಾಲಿವುಡ್‌ನಲ್ಲಿ 350ಕ್ಕೂ ಹೆಚ್ಚು ಥಿಯೇಟರ್ ಅಲ್ಲದೆ ವಿದೇಶಗಳಲ್ಲಿ 800ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ವಿಕ್ರಾಂತ್‌ರೋಣ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ನಾಳೆ, ನಾಡಿದ್ದು ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಈಗಾಗಲೇ ರಿಲೀಸಾಗಿರುವ ಟ್ರೇಲರ್ ಜೊತೆಗೆ ಹಾಡುಗಳಂತೂ ಒಂದಕ್ಕಿಂತ ಒಂದು ಹೆಚ್ಚಾಗಿ
ವೈರಲ್ ಆಗಿವೆ. ಅದರಲ್ಲೂ ಯಾರ ಮೊಬೈಲ್‌ನಲ್ಲಿ ನೋಡಿದರೂ ರಾರಾ.. ರಕ್ಕಮ್ಮ ಹಾಡಿನ
ರೀಲ್ಸ್ ನದ್ದೇ ಅಬ್ಬರ. ಈ ಹಾಡು ಅಷ್ಟೂ ಭಾಷೆಗಳಲ್ಲೂ ದೊಡ್ಡ ಕ್ರೇಜನ್ನೇ ಸೃಷ್ಟಿಸಿದೆ.ಶೇಂಗಾ.90ರಷ್ಟು ೩ಡಿ ವರ್ಷನ್ ಚಿತ್ರ ರಿಲೀಸಾಗುತ್ತಿದ್ದು, 3ಡಿ ಇಲ್ಲದ ಕಡೆ ಮಾತ್ರವೇ 2ಡಿ
ವರ್ಷನ್ ಪ್ರದರ್ಶನವಾಗಲಿದೆ.

Categories
ಸಿನಿ ಸುದ್ದಿ

ಚಲನಚಿತ್ರ ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಫಿಲ್ಮ್ ಚೇಂಬರ್‌ ಸನ್ಮಾನ…

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಮೂರು ಪ್ರಶಸ್ತಿಗಳು ಲಭಿಸಿವೆ. ವಿಶಿಷ್ಟ ಕಥಾಹಂದರದ ‘ಡೊಳ್ಳು’ ಸಿನಿಮಾಗೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಸಿನಿಮಾ ಹಾಗೂ ಸಿಂಕ್ ಸೌಂಡ್ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ದೊರೆತಿದೆ.

‘ತಲೆದಂಡ’ ಚಿತ್ರಕ್ಕೆ ಪರಿಸರ ಕಾಳಜಿಯ ಕಥಾವಸ್ತುವುಳ್ಳ ರಾಷ್ಟ್ರ ಪ್ರಶಸ್ತಿಯ ಗರಿ ಒಲಿದಿದೆ. ‘ಅತ್ಯುತ್ತಮ ಕಲೆ ಹಾಗೂ ಸಾಂಸ್ಕೃತಿಕ ಸಿನಿಮಾ’ ವಿಭಾಗದಲ್ಲಿ ಗಿರೀಶ್​ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ’ ಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದು, ಇದು ಕನ್ನಡಿಗರಿಗೆ ಹೆಮ್ಮಯ ಸಂಗತಿ.

ಫಿಲ್ಮ್‌ ಚೇಂಬರ್ ವತಿಯಿಂದ ರಾಷ್ಟ್ರ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು. ಡೊಳ್ಳು ಸಿನಿಮಾ ನಿರ್ಮಾಪಕರಾದ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್, ನಿರ್ದೇಶಕ ಸಾಗರ್ ಪುರಾಣಿಕ್ ಹಾಗೂ ‘ತಲೆದಂಡ’ ಚಿತ್ರದ ನಿರ್ಮಾಪಕಿ ಡಾ. ಹೇಮಾಮಾಲಿನಿ ಕೃಪಾಕರ್ ಸೇರಿದಂತೆ

ಈ ಬಾರಿ ಪ್ರಶಸ್ತಿ ವಿಜೇತರಿಗೆ ಫಿಲ್ಮಂ ಚೇಂಬರ್ ಅಧ್ಯಕ್ಷರಾದ ಭಾ.ಮಾ.ಹರೀಶ್ ಸಾರಥ್ಯದಲ್ಲಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಫಿಲ್ಮಂ ಚೇಂಬರ್ ಪದಾಧಿಕಾರಿಗಳು, ಮಾಜಿ ಅಧ್ಯಕ್ಷ ಚಿನ್ನೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.

Categories
ಸಿನಿ ಸುದ್ದಿ

ಅನ್ ಲಾಕ್ ರಾಘವ ಸಿನಿಮಾಗೆ ಮಿಲಿಂದ್, ರಚೆಲ್ ಡೇವಿಡ್ ನಾಯಕ-ನಾಯಕಿ…

ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ ಸಿನಿಮಾ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ನಿರ್ದೇಶನದ ಜೊತೆಗೆ ಸಿನಿಮಾ ನಿರ್ಮಾಣ, ವಿತರಣೆಯಲ್ಲೂ ಬ್ಯುಸಿಯಾಗಿರೋದು ಗೊತ್ತೇ ಇದೆ. ಸದಾ ಹೊಸ ಪ್ರತಿಭೆಗಳನ್ನು ಗುರುತಿಸುವಲ್ಲಿ ಮುಂಚೂಣಿಯಲ್ಲಿರುವ ಸತ್ಯ ಪ್ರಕಾಶ್ ಮತ್ತೊಬ್ಬ ನವನಟನಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಅವರೇ ಮಿಲಿಂದ್. 2018ರಲ್ಲಿ ತೆರೆಕಂಡ ಅನಂತ್ ನಾಗ್ ಅಭಿನಯದ ವೀಕೆಂಡ್ ಸಿನಿಮಾದಲ್ಲಿ ನಟಿಸಿದ್ದ ಮಿಲಿಂದ್ ಗಿದು ಎರಡನೇ ಸಿನಿಮಾ.

ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಪಾತ್ರಕ್ಕೆ ತಯಾರಿಯೂ ಭರ್ಜರಿಯಾಗಿ ನಡೆಯುತ್ತಿದೆ. ಮಿಲಿಂದ್ ಜೋಡಿಯಾಗಿ ಲವ್ ಮಾಕ್ಟೈಲ್ ಖ್ಯಾತಿಯ ರಚೆಲ್ ಡೇವಿಡ್ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸತ್ಯ ಪ್ರಕಾಶ್ ನಿರ್ದೇಶನದಲ್ಲಿ ತೆರೆಕಂಡ ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ಬಿಡುಗಡೆಯಾಗಿ ಉತ್ತಮ ವಿಮರ್ಶೆ ಪಡೆದುಕೊಂಡಿತ್ತು. ಈ ಚಿತ್ರವನ್ನು ನಿರ್ದೇಶನದ ಜೊತೆ ನಿರ್ಮಾಪಕ ಮಂಜುನಾಥ್ ಜೊತೆಗೂಡಿ

ಸತ್ಯ ಹಾಗೂ ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣ ಕೂಡ ಮಾಡಿದ್ದರು. ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಈ ಚಿತ್ರಕ್ಕೂ ಮಯೂರ ಪಿಕ್ಚರ್ಸ್ ಡಿ.ಮಂಜುನಾಥ್ ಕೈ ಜೋಡಿಸಿದ್ದಾರೆ.

ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಸತ್ಯ ಪ್ರಕಾಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಭಾಗ್ಯರಾಜ್, ರಾಜು ಜೇಮ್ಸ್ ಬಾಂಡ್, ಕಳ್ಬೆಟ್ಟದ ದರೋಡೆಕೋರರು ಸಿನಿಮಾ ನಿರ್ದೇಶಿಸಿರುವ ದೀಪಕ್ ಮಧುವನಹಳ್ಳಿ ನಾಲ್ಕನೇ ಸಿನಿಮಾವಿದು. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ಲವಿತ್ ಕ್ಯಾಮೆರಾ ವರ್ಕ್,ಅಜಯ್ ಸಂಕಲನ ಚಿತ್ರಕ್ಕಿರಲಿದೆ.

Categories
ಸಿನಿ ಸುದ್ದಿ

ರಂಗಸಮುದ್ರ ಶೂಟಿಂಗ್ ಕಂಪ್ಲೀಟ್: ಇದು ಹೊಸಬರ ಸಿನಿಮಾ- ರಂಗಾಯಣ ರಘು ಹೈಲೆಟ್…

ಹೊಯ್ಸಳ ಕ್ರಿಯೇಷನ್ಸ್ ನಿಂದ ಕೆ ಆರ್ ಹೊಯ್ಸಳ ನಿರ್ಮಿಸುತ್ತಿರುವ ‘ರಂಗಸಮುದ್ರ’ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಮುಗಿಸಿದೆ. ಶೇ.85ರಷ್ಟು ರಾಜ್ಯದ ವಿವಿದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಬೆಂಗಳೂರು ಹೊರವಲಯದ ವಿದ್ಯಾನಗರದಲ್ಲಿ ಚಿತ್ರದ ಅಂತಿಮ ಹಂತದ ಪೂರಕ ಸನ್ನಿವೇಶಗಳನ್ನು ನಿರ್ದೇಶಕ ರಾಜಕುಮಾರ್ ಅಸ್ಕಿ ನಿರ್ದೇಶನದಲ್ಲಿ ಹಿರಿಯ ಛಾಯಾಗ್ರಾಹಕ ಗಿರಿ ಚಿತ್ರೀಕರಿಸಿದ್ದಾರೆ.

ರಂಗಾಯಣ ರಘು, ಸಂಪತ್ ರಾಜ್, ಕರಾವಳಿಯ ಕೆವಿಆರ್ ಮತ್ತು ದಿವ್ಯಾ ಗೌಡ, ಗುರುರಾಜ್ ಹೊಸಕೋಟೆ ಮೋಹನ್ ಜುನೇಜ, ಮೂಗು ಸುರೇಶ್, ಉಗ್ರಂ ಮಂಜು, ಸ್ಕಂದ ತೇಜಸ್, ಡ್ರಾಮಾ ಜ್ಯೂನಿಯರ್ ಮಹೇಂದ್ರ ಮತ್ತಿತರರು ಚಿತ್ರದ ಭೂಮಿಕೆಯಲ್ಲಿದ್ದಾರೆ. ಚಿತ್ರದ ಪ್ರಮುಖ ದೃಶ್ಯಕ್ಕೆ ಅಂತಿಮ ಹಂತದ ಚಿತ್ರೀಕರಣ ಕಳೆದ ಅಕ್ಟೋಬರ್ ನಲ್ಲಿ ನಡೆಯ ಬೇಕಿತ್ತು. ಇದಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಚಿತ್ರತಂಡ ಸಂಪರ್ಕಿಸಿತ್ತು. ಆದರೆ ವಿಧಿ ಅವರನ್ನು ಹಠಾತ್ ಸೆಳೆದೊಯ್ದಿತ್ತು. ಈ ಘಟನೆಯಿಂದ ಚಿತ್ರತಂಡ ಶಾಕ್ ಗೆ ಒಳಗಾಗಿತ್ತು. ಇದೀಗ ಇನ್ನೊಬ್ಬರು ಸ್ಟಾರ್ ನಟರು ಆ ದೃಶ್ಯದಲ್ಲಿ ನಟಿಸಿದ್ದಾರೆ.

ಸದ್ಯಕ್ಕೆ ಅವರ ವಿವರಗಳನ್ನು ಸಸ್ಪೆನ್ಸ್ ಆಗಿ ಇಡಲಾಗಿದೆ. ಈ ವಿವರಗಳನ್ನು ಚಿತ್ರತಂಡ ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಿದೆ. ಚಿತ್ರಕ್ಕೆ ದೇಸೀ ಮೋಹನ್ ಸಂಗೀತ ನೀಡಿದ್ದಾರೆ. ಸಂಕಲನ ಶ್ರೀಕಾಂತ್, ವಾಗೀಶ್ ಚನ್ನಗಿರಿ ಗೀತ ಸಾಹಿತ್ಯ ನೀಡಿದ್ದಾರೆ.

ಚಿತ್ರದ ಹಾಡುಗಳಿಗೆ ಖ್ಯಾತ ಗಾಯಕರಾದ ಕೈಲಾಶ್ ಖೇರ್, ಕೀರವಾಣಿ, ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ ಧ್ವನಿಯಾಗಿದ್ದಾರೆ. ಶೀಘ್ರದಲ್ಲಿಯೇ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂಬುದು ನಿರ್ಮಾಪಕ ಕೆ ಆರ್ ಹೊಯ್ಸಳ ಮಾತು.

Categories
ಸಿನಿ ಸುದ್ದಿ

ಅವರು ಹೇಳಿದ್ದು 9 ಸುಳ್ಳು ಕಥೆಗಳು! ಇದು ಹೊಸಬರ ಚಿತ್ರ: ಟ್ರೇಲರ್ ಗೆ ಶಿವಣ್ಣ ಧ್ವನಿ…

ಶೃಂಗಾರ, ಹಾಸ್ಯ, ಕರುಣ ಸೇರಿದಂತೆ ಹೀಗೆ ನವರಸಗಳಿದೆ ಇಂತಹ ನವರಸಗಳನ್ನು ಆಧರಿಸಿ “9 ಸುಳ್ಳು ಕಥೆಗಳು” ಎಂಬ ಚಿತ್ರ ನಿರ್ದೇಶನ ಮಾಡಿದ್ದಾರೆ ಮಂಜುನಾಥ್ ಮುನಿಯಪ್ಪ.

ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ಟ್ರೇಲರ್ ಗೆ‌ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಧ್ವನಿ ನೀಡಿರುವುದು ಚಿತ್ರದ ವಿಶೇಷ. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸದಾಶಿವ ಶೆಣೈ, ಪತ್ರಕರ್ತ, ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿದರು.

ಮೂಲತಃ ರಂಗಭೂಮಿಯಲ್ಲಿ ಸಾಕಷ್ಟು ವರ್ಷಗಳಿಂದ ಅನುಭವವಿರುವ ಮಂಜುನಾಥ್ ಮುನಿಯಪ್ಪ ನಿರ್ದೇಶಿಸಿ, ನಿರ್ಮಿಸಿರುವ ಮೊದಲ ಚಿತ್ರವಿದು.

ಇದೊಂದು ನೈಜ ಘಟನೆ ಆಧಾರಿತ ಚಿತ್ರ. ಕೆಲವು ಪುಸ್ತಕಗಳ ಹಾಗೂ ಸಣ್ಣಕಥೆಗಳನ್ನು ಓದಿದ್ದೀನಿ‌. ನವರಸಗಳನ್ನು ಆಧರಿಸಿ ಈ ಚಿತ್ರದ ಕಥೆ ಮಾಡಿದೆ‌‌. ನಂತರ ನಿರ್ಮಾಪಕರಿಗೆ ಹುಡುಕಾಡಿದೆ. ಯಾರು ಸಿಗಲಿಲ್ಲ.
ನನ್ನ ಸ್ನೇಹಿತ ಸೂರ್ಯನಾರಾಯಣ್ ಮೊದಲು ದೊಡ್ಡ ಮೊತ್ತದ ಹಣ ನೀಡಿ ಈ ಚಿತ್ರಕ್ಕೆ ಚಾಲನೆ ನೀಡಿದರು. ನಂತರ ಸಾಕಷ್ಟು ಗೆಳೆಯರು ನನ್ನ ಜೊತೆಯಾದರು.

ಪ್ರಮೋದ್ ಶೆಟ್ಟಿ, ವಿನಾಯಕ ಜೋಶಿ, ಕರಿ ಸುಬ್ಬು, ಸುಕೃತ ವಾಗ್ಲೆ, ಲಕ್ಷ್ಮೀ ಚಂದ್ರಶೇಖರ್ ಸೇರಿದಂತೆ ನೂರಕ್ಕೂ ಅಧಿಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ‌. ಶಿವರಾಜಕುಮಾರ್ ಅವರು ಟ್ರೇಲರ್ ಗೆ ಧ್ವನಿ ನೀಡಿದ್ದಾರೆ. ಪ್ರವೀಣ್ – ಪ್ರದೀಪ್ ಸಂಗೀತ ನಿರ್ದೇಶನದಲ್ಲಿ ಆರು ಹಾಡುಗಳು ಅದ್ಭುತವಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಮಂಜುನಾಥ್ ಮುನಿಯಪ್ಪ ಚಿತ್ರದ ಬಗ್ಗೆ ವಿವರಣೆ ನೀಡಿದರು.

ಚಿತ್ರದಲ್ಲಿ ಆರು ಹಾಡುಗಳಿವೆ. ಸಂತ ಶಿಶುನಾಳ ಶರೀಫರ ಗೀತೆಯೊಂದನ್ನು ಬಳಸಿಕೊಂಡಿದ್ದೇವೆ. ವಿಕ್ರಮ್ ವಸಿಷ್ಠ, ಸತೀಶ್ ಬೆಲ್ಲೂರು ಹಾಗೂ ಕಿರಣ್ ವಿಪ್ರ ಹಾಡುಗಳನ್ನು ಬರೆದಿದ್ದಾರೆ. ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ವಾರಿಜಾಶ್ರೀ, ಶಶಿಧರ್ ಕೋಟೆ, ಚಿಂತನ್ ವಿಕಾಸ್ ಸೇರಿದಂತೆ ಪ್ರಸಿದ್ದ ಗಾಯಕರು ಈ ಹಾಡುಗಳನ್ನು ಹಾಡಿದ್ದಾರೆ‌.

ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಇದೇ ಮೊದಲ ಬಾರಿಗೆ ನಮ್ಮ ಚಿತ್ರದ ಕನ್ನಡದ ಹಾಡೊಂದನ್ನು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕರಾದ ಪ್ರವೀಣ್ & ಪ್ರದೀಪ್ ಸಂಗೀತದ ಬಗ್ಗೆ ಮಾಹಿತಿ ನೀಡಿದರು.

ನಾನು ಸಾಹಿತ್ಯ ಪ್ರೇಮಿಯಾಗಿ ಕಾಣಿಸಿಕೊಂಡಿದ್ದೀನಿ ಎಂದರು ನಟ ವಿನಾಯಕ ಜೋಶಿ.‌ ನಿರ್ದೇಶಕರು ನನ್ನ ಬಹುಕಾಲದ ಗೆಳೆಯ. ಉತ್ತಮ ಪಾತ್ರಕೊಟ್ಟಿದ್ದಾರೆ ಎಂದು ಪ್ರಮೋದ್ ಶೆಟ್ಟಿ ಹೇಳಿದರು. ಕರಿಸುಬ್ಬು ಮತ್ತು ಕೃಷ್ಣ ಹೆಬ್ಬಾಳೆ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಈ ಚಿತ್ರಕ್ಕಾಗಿ
ಮೈಲಿಗಟ್ಟಲೆ ಓಡಿದ ಅನುಭವವನ್ನು ಹಿರಿಯ ನಟಿ ಲಕ್ಷ್ಮೀ ಚಂದ್ರಶೇಖರ್ ಹಂಚಿಕೊಂಡರು.

ಪರಮೇಶ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಅವರ ಸಂಕಲನವಿದೆ.

ಪ್ರಮೋದ್ ಶೆಟ್ಟಿ, ವಿನಾಯಕ ಜೋಶಿ, ಕೃಷ್ಣ ಹೆಬ್ಬಾಳೆ, ಸಕೃತ ವಾಗ್ಲೆ, ಕರಿಸುಬ್ಬು, ನಂದಗೋಪಾಲ್, ಲಕ್ಷ್ಮೀ ಚಂದ್ರಶೇಖರ್, ಶ್ರೀನಿವಾಸಪ್ರಭು, ಸುನೇತ್ರ ಪಂಡಿತ್, ಸುಪ್ರಿತಾ ಶೆಟ್ಟಿ, ಸುಂದರ್ ವೀಣಾ, ವೀಳ್ಯಾ ರಾಘವೇಂದ್ರ ಸೇರಿದಂತೆ ನೂರಕ್ಕೂ ಅಧಿಕ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

error: Content is protected !!