ಹೊಯ್ಸಳ ಕ್ರಿಯೇಷನ್ಸ್ ನಿಂದ ಕೆ ಆರ್ ಹೊಯ್ಸಳ ನಿರ್ಮಿಸುತ್ತಿರುವ ‘ರಂಗಸಮುದ್ರ’ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಮುಗಿಸಿದೆ. ಶೇ.85ರಷ್ಟು ರಾಜ್ಯದ ವಿವಿದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಬೆಂಗಳೂರು ಹೊರವಲಯದ ವಿದ್ಯಾನಗರದಲ್ಲಿ ಚಿತ್ರದ ಅಂತಿಮ ಹಂತದ ಪೂರಕ ಸನ್ನಿವೇಶಗಳನ್ನು ನಿರ್ದೇಶಕ ರಾಜಕುಮಾರ್ ಅಸ್ಕಿ ನಿರ್ದೇಶನದಲ್ಲಿ ಹಿರಿಯ ಛಾಯಾಗ್ರಾಹಕ ಗಿರಿ ಚಿತ್ರೀಕರಿಸಿದ್ದಾರೆ.

ರಂಗಾಯಣ ರಘು, ಸಂಪತ್ ರಾಜ್, ಕರಾವಳಿಯ ಕೆವಿಆರ್ ಮತ್ತು ದಿವ್ಯಾ ಗೌಡ, ಗುರುರಾಜ್ ಹೊಸಕೋಟೆ ಮೋಹನ್ ಜುನೇಜ, ಮೂಗು ಸುರೇಶ್, ಉಗ್ರಂ ಮಂಜು, ಸ್ಕಂದ ತೇಜಸ್, ಡ್ರಾಮಾ ಜ್ಯೂನಿಯರ್ ಮಹೇಂದ್ರ ಮತ್ತಿತರರು ಚಿತ್ರದ ಭೂಮಿಕೆಯಲ್ಲಿದ್ದಾರೆ. ಚಿತ್ರದ ಪ್ರಮುಖ ದೃಶ್ಯಕ್ಕೆ ಅಂತಿಮ ಹಂತದ ಚಿತ್ರೀಕರಣ ಕಳೆದ ಅಕ್ಟೋಬರ್ ನಲ್ಲಿ ನಡೆಯ ಬೇಕಿತ್ತು. ಇದಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಚಿತ್ರತಂಡ ಸಂಪರ್ಕಿಸಿತ್ತು. ಆದರೆ ವಿಧಿ ಅವರನ್ನು ಹಠಾತ್ ಸೆಳೆದೊಯ್ದಿತ್ತು. ಈ ಘಟನೆಯಿಂದ ಚಿತ್ರತಂಡ ಶಾಕ್ ಗೆ ಒಳಗಾಗಿತ್ತು. ಇದೀಗ ಇನ್ನೊಬ್ಬರು ಸ್ಟಾರ್ ನಟರು ಆ ದೃಶ್ಯದಲ್ಲಿ ನಟಿಸಿದ್ದಾರೆ.

ಸದ್ಯಕ್ಕೆ ಅವರ ವಿವರಗಳನ್ನು ಸಸ್ಪೆನ್ಸ್ ಆಗಿ ಇಡಲಾಗಿದೆ. ಈ ವಿವರಗಳನ್ನು ಚಿತ್ರತಂಡ ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಿದೆ. ಚಿತ್ರಕ್ಕೆ ದೇಸೀ ಮೋಹನ್ ಸಂಗೀತ ನೀಡಿದ್ದಾರೆ. ಸಂಕಲನ ಶ್ರೀಕಾಂತ್, ವಾಗೀಶ್ ಚನ್ನಗಿರಿ ಗೀತ ಸಾಹಿತ್ಯ ನೀಡಿದ್ದಾರೆ.

ಚಿತ್ರದ ಹಾಡುಗಳಿಗೆ ಖ್ಯಾತ ಗಾಯಕರಾದ ಕೈಲಾಶ್ ಖೇರ್, ಕೀರವಾಣಿ, ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ ಧ್ವನಿಯಾಗಿದ್ದಾರೆ. ಶೀಘ್ರದಲ್ಲಿಯೇ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂಬುದು ನಿರ್ಮಾಪಕ ಕೆ ಆರ್ ಹೊಯ್ಸಳ ಮಾತು.