ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಈಗ ಹಿಂದಿ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಲಂಡನ್ ನಲ್ಲಿ ಮುಗಿಸಿಕೊಂಡು ಬಂದಿದ್ದಾರೆ.
‘ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಜರ್ನಿ ಆಗಿದೆ. ಕಳೆದ ವರ್ಷ ಶೂಟಿಂಗ್ ನಲ್ಲಿ ಬ್ಯುಸಿ ಇದ್ದೆ. ಈಗ ಹಿಂದಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಮೊದಲ ಹಂತದ ಶೂಟಿಂಗ್ ಮುಗಿದಿದೆ. ಇದೊಂದು ಹಾರರ್, ಥ್ರಿಲ್ಲರ್ ಚಿತ್ರ. ಯಶಸ್ವಿ ಸಿನಿಮಾಗಳ ನಿರ್ದೇಶಕ ಆಯುರ್ ಶರ್ಮಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಹೆಸರು ‘ವಾಕ್ರೋ ಹೌಸ್’.
ನಾನು ಇಲ್ಲಿ ಲಂಡನ್ ಬೇಸ್ ಬುಕ್ ರೈಟರ್ ಪಾತ್ರ ಮಾಡುತ್ತಿದ್ದು, ಮೊದಲ ಹಂತದ ಶೂಟಿಂಗ್ ಲಂಡನ್ ನಲ್ಲಿ ನಡೆದಿದೆ. ನನ್ನ ಜೊತೆ ಈ ಚಿತ್ರದಲ್ಲಿ ಪರಂವ್ಹಾ ಸೇರಿದಂತೆ ಸಾಕಷ್ಟು ಜನ ಒಳ್ಳೆಯ ಕಲಾವಿದರಿದ್ದಾರೆ. ಇದು ನನ್ನ ಮೊದಲ ಹಿಂದಿ ಹಾರರ್ ಸಿನಿಮಾ. ಒಳ್ಳೆಯ ಕಥೆ, ಪಾತ್ರ ಇದ್ದ್ದುದರಿಂದ ಖುಷಿಯಾಗಿದ್ದೇನೆ ಎಂಬುದು ಅವರ ಮಾತು.
‘ಈ ಹಿಂದಿ ಸಿನಿಮಾ ಜೊತೆ ಮಲಯಾಳಂನಲ್ಲಿ ಒಂದು, ತಮಿಳು ಮೂರು ಹಾಗೂ ತೆಲುಗು ಒಂದು ಸಾಂಗ್ ಮಾಡಿದ್ದೇನೆ. ಸದ್ಯ ಕನ್ನಡದಲ್ಲಿ 2 ಸಿನಿಮಾ ಮಾಡುತ್ತಿದ್ದೇನೆ. ಈ ಮಾರ್ಚ್ ಗೆ ನನ್ನ ಸಿನಿಮಾಗಳು ರಿಲೀಸ್ ಆಗಬಹುದು.
‘ನಾನೊಬ್ಬ ಭಾರತೀಯ’ ಎಂಬ ತಮಿಳು ಚಿತ್ರದಲ್ಲಿ ಕಮಾಂಡೋ ಪಾತ್ರ ಮಾಡುತ್ತಿದ್ದು, ಇದು ನನಗೆ ವಿಷೇಶವಾದ ಸಿನಿಮಾ’ ಎನ್ನುತ್ತಾರೆ ರಾಗಿಣಿ.
ಹಾಸ್ಟೆಲ್ ಹುಡುಗರೆಲ್ಲ ಸೇರಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರನ್ನು ಕಿಡ್ನಾಪ್ ಮಾಡಿದ್ದಾರೆ. ಎರಡು ವಾರವಾದರೂ ಇನ್ನೂ ಬಿಡುಗಡೆ ಮಾಡಿಲ್ಲ. ಇಷ್ಟು ದಿನ ಹಾಡು ಬಿಡುಗಡೆ ಮಾಡಿ ಎಂದು ಬೇಡಿಕೆ ಇಟ್ಟಿದ್ದ ಹುಡುಗರು, ಈಗ ಬಿಡುಗಡೆಯಾಗಿರುವ ಹಾಡು ಹತ್ತು ಮಿಲಿಯನ್ ವೀವ್ಸ್ ಪಡೆದ ಮೇಲೆ ಬಿಡುಗಡೆ ಮಾಡುತ್ತೇವೆ ಎಂದು ಹಿಂಸೆ ನೀಡುತ್ತಿದ್ದಾರೆ ಎಂದು ಅಜನೀಶ್ ಲೋಕನಾಥ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬಿಡುಗಡೆಯಾಗಿರುವ ‘ಪ್ರೊಟೆಸ್ಟ್ ಸಾಂಗ್’ ಹತ್ತು ಮಿಲಿಯನ್ ವೀವ್ಸ್ ಪಡೆಯಲು ಸಹಕರಿಸಿ ಎಂದು ಕರ್ನಾಟಕ ಜನತೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಅಜನೀಶ್. ಆದರೆ ಇದೆಲ್ಲ ರಿಯಲ್ ಅಲ್ಲ ರೀಲ್. ಹೌದು, ಇದು ಬಿಡುಗಡೆಗೆ ಸಜ್ಜಾಗಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಹೊಸ ರೀತಿಯ ಪ್ರಮೋಶನ್ ತಂತ್ರ.
ಸಖತ್ ಕ್ರಿಯೇಟಿವ್ ಆಗಿ ಸಿನಿಮಾ ಪ್ರಮೋಷನ್ ಮಾಡುತ್ತ ಕಲಾರಸಿಕರುನ್ನು ತನ್ನತ್ತ ಸೆಳೆಯುತ್ತಿರುವ, ಕುತೂಹಲ ಹುಟ್ಟು ಹಾಕಿರುವ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಕಳೆದ ವಾರ ಚಿತ್ರತಂಡ ‘ಪ್ರೊಟೆಸ್ಟ್ ಸಾಂಗ್’ ಬಿಡುಗಡೆ ಮಾಡಿತ್ತು. ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ಗೂ ಅಧಿಕ ವೀವ್ಸ್ ಪಡೆದುಕೊಂಡಿತ್ತು. ಯೋಗರಾಜ್ ಭಟ್ ಕ್ಯಾಚಿ ಲಿರಿಕ್ಸ್, ಅಜನೀಶ್ ಲೋಕನಾಥ್ ಕಿಕ್ ಕೊಡೋ ಮ್ಯೂಸಿಕ್ ಹಾಗೂ ಹಾಡು ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು.
ಇದೀಗ ಈ ಹಾಡು ಹತ್ತು ಮಿಲಿಯನ್ ವೀವ್ಸ್ ಕಾಣಬೇಕೆಂಬುದು ಹಾಸ್ಟೆಲ್ ಹುಡುಗರ ಮಹದಾಸೆ. ಅದಕ್ಕೆಂದೇ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರಿಂದ ಪತ್ರ ಬರೆಸಿ ಮನವಿ ಮಾಡಿದೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಯೂತ್ ಸಬ್ಜೆಕ್ಟ್ ಒಳಗೊಂಡ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭೆಗಳು ತಾರಾಗಣದಲ್ಲಿರುವ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಇರಲಿದೆ. ಪುನೀತ್ ರಾಜ್ ಕುಮಾರ್, ಸುದೀಪ್, ರಮ್ಯಾ, ರಕ್ಷಿತ್ ಶೆಟ್ಟಿ ಹೀಗೆ ಸ್ಟಾರ್ ನಟ ನಟಿಯರು ಈ ಸಿನಿಮಾಗೆ ಸಾಥ್ ನೀಡಿದ್ದಾರೆ.
ಯೂನಿಕ್ ಕಾನ್ಸೆಪ್ಟ್ ಮೂಲಕ ಚಿತ್ರದ ಪ್ರಚಾರ ಕಾರ್ಯ ಮಾಡಿ ಅಪಾರ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೊಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನವಿದೆ.
ಈ ಹಿಂದೆ ಪಲ್ಲಕ್ಕಿ, ಅಮೃತವಾಹಿನಿ ಚಿತ್ರ ನಿರ್ದೇಶಿಸಿದ್ದ ಕೆ.ನರೇಂದ್ರಬಾಬು ಈಗ ’13’ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ರಾಘವೇಂದ್ರ ರಾಜ್ಕುಮಾರ್, ಶ್ರುತಿ, ಪ್ರಮೋದ್ ಶೆಟ್ಟಿ ಇಲ್ಲಿ ಹೈಲೆಟ್. ಯುವಿ ಪ್ರೊಡಕ್ಷನ್ಸ್ ಮೂಲಕ ಚಿತ್ರವನ್ನು ಸಂಪತ್ ಕುಮಾರ್, ಮಂಜುನಾಥ್, ಮಂಜುನಾಥಗೌಡ ನಿರ್ಮಿಸುತ್ತಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಗುಜರಿ ಅಂಗಡಿ ಮಾಲೀಕರಾಗಿ, ಶ್ರುತಿ ಟೀ ಅಂಗಡಿ ನಡೆಸುವ ಸಾಯಿರಾಬಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡೆದ ಒಂದು ನೈಜ ಘಟನೆ ಚಿತ್ರಕ್ಕೆ ಸ್ಫೂರ್ತಿ.
ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರತಂಡ, ಚಿತ್ರದ ಮೇಕಿಂಗ್ ವೀಡಿಯೋ ತೋರಿಸಿ ಚಿತ್ರೀಕರಣದ ಅನುಭವ ಹಂಚಿಕೊಂಡಿತು. ಅಂತರ್ಜಾತಿ ಪ್ರೇಮ ಕಥೆ ಇದಾಗಿದ್ದು, ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಫೂರ್ತಿ ಹೇಗೆಲ್ಲ ಕಷ್ಟಪಡುತ್ತಾರೆ ಎಂಬುದನ್ನು ಹೇಳುವ, ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಥೆಯಿದು.
‘ಮುಹೂರ್ತದ ಸಂದರ್ಭದಲ್ಲಿ 3 ತಿಂಗಳಲ್ಲಿ ಮೊದಲ ಪ್ರತಿ ಹೊರ ತರುತ್ತೇನೆ ಎಂದು ಹೇಳಿದ್ದೆ, ಆದರೆ ಸಾಕಷ್ಟು ಅಡೆತಡೆಗಳುಂಟಾಗಿ 6 ತಿಂಗಳಾಗಿದೆ, ಕೊಟ್ಟಿಗೆಹಾರದಲ್ಲಿ ಮಾಡಬೇಕೆಂದಿದ್ದ ಸೀನನ್ನು ಮಂಡ್ಯ ಹತ್ತಿರದ ಹಳ್ಳಿಯೊಂದರಲ್ಲಿ ಮಾಡಿದ್ದೇನೆ. ನನ್ನ ತಂಡ ಜೊತೆ ನಿಂತಿದ್ದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ನಾಲ್ವರು ಪ್ರೊಡ್ಯೂಸರ್ ಪಿಲ್ಲರ್ ಗಳಂತೆ ನಿಂತಿದ್ದಾರೆ. ರಾಘಣ್ಣ ಅವರನ್ನು ಈವರೆಗೆ ನೋಡಿದ್ದಕ್ಕಿಂತ ಬೇರೆಯದೇ ರೀತಿ ಇಲ್ಲಿ ನೋಡಬಹುದು ಎಂದು ನಿರ್ದೇಶಕ ನರೇಂದ್ರ ಬಾಬು ಹೇಳಿದರು.
ರಾಘಣ್ಣ ಮಾತನಾಡಿ, ನಿರ್ದೇಶಕರು ಬಂದು ಈ ಟೈಟಲ್ ಹೇಳಿದಾಗ ’13’ ಇದೇನಿರಬಹುದು ಅನಿಸಿತ್ತು. ಶೃತಿ ಮಾಡುತ್ತಿದ್ದಾರೆ ಅಂದಾಗ ಇಷ್ಟವಾಯ್ತು. ನಮಗೂ ಆಕ್ಟ್ ಮಾಡುವಾಗ ಕುತೂಹಲ ಮೂಡುತ್ತೆ. ಚಿತ್ರದಲ್ಲಿ 13 ಪದಕ್ಕೆ ಅರ್ಥ ಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ, ಈಗ ಶೂಟಿಂಗ್ ಮಾಡುವುದು ಮುಖ್ಯವಲ್ಲ, ನಂತರ ಅದನ್ನು ಹೇಗೆ ಪ್ರೊಮೋಟ್ ಮಾಡಬೇಕು ಅನ್ನೋದು ಮುಖ್ಯ. ಶಾಲೆ ಕಟ್ಟಡಗಳನ್ನು ಅಭಿವೃದ್ಧಿ ಪಡಿಸುವುದು, ಇಂಥ ಕೆಲಸಗಳನ್ನು ಮಾಡುವ ಮೂಲಕ ಪ್ರೊಮೋಟ್ ಮಾಡಬೇಕಿದೆ. ಎಲ್ಲೋ ಒಂದು ಕಡೆ ಸಿನಿಮಾದವರು ಸೇವೆಯನ್ನೂ ಮಾಡ್ತಾರೆ ಅನ್ನೋದು ಜನರಿಗೆ ಗೊತ್ತಾಗಬೇಕು. ಶ್ರುತಿ ಅದ್ಭುತ ನಟಿ. ಅವರ ಜೊತೆ 2ನೇ ಚಿತ್ರ ಎಂದರು.
ಶೃತಿ ಮಾತನಾಡಿ, 13 ಹೆಸರು ಮಾತ್ರ ನೆಗೆಟಿವ್, ಸಿನಿಮಾಪೂರ್ತಿ ಪಾಸಿಟಿವ್ ಆಗಿದೆ. ಇದೇ ಮೊದಲ ಬಾರಿಗೆ ಮುಸ್ಲಿಂ ಹೆಣ್ಣು ಮಗಳ ಪಾತ್ರ ಮಾಡಿದ್ದೇನೆ. ನಿರ್ದೇಶಕರು ಈ ಪಾತ್ರದ ಬಗ್ಗೆ ಹೇಳಿದಾಗ ತುಂಬಾ ಹೆದರಿದ್ದೆ. ಯಾಕೆಂದರೆ ನಾನು ಮಾಡುವ ಪಾತ್ರ ಯಾರಿಗೂ ನೋವುಂಟು ಮಾಡಬಾರದು ಅಲ್ಲದೆ ಎಲ್ಲೋ ಸ್ವಲ್ಪ ಲೋಪದೋಷ ಆದರೂ ತಂಡಕ್ಕೆ ಅಲ್ಲದೆ ವೈಯಕ್ತಿಕವಾಗಿ ನಮಗೂ ತೊಂದರೆ ಆಗುತ್ತದೆ. ಗೆಲುವಿನ ಸರದಾರ ಚಿತ್ರದ ನಂತರ ರಾಘಣ್ಣ ಜೊತೆ ಅಭಿನಯಿಸಿದ್ದೇನೆ ಎಂದು ಹೇಳಿದರು.
ನಿರ್ಮಾಪಕ ಕೆ. ಸಂಪತ್ ಕುಮಾರ್ ಮಾತನಾಡಿ, ಏನೇ ನೋವು ಕೊಟ್ಟರೂ ಸಿನಿಮಾ ಆದ್ಭುತವಾಗಿ ಬಂದಿದೆ. ಗೋವಿಂದ ಗೋಪಾಲ, ಸಾಫ್ಟ್ವೇರ್ ಗಂಡ ಸೇರಿ ನನ್ನ ನಿರ್ಮಾಣದ 5ನೇ ಚಿತ್ರವಿದು. ಅಮೃತವಾಹಿನಿ ನಂತರ ಬಾಬು ಜೊತೆ ಎರಡನೇ ಚಿತ್ರ ಎಂದು ಹೇಳಿಕೊಂಡರು. ಇನ್ನು ಇವರ ಜತೆ ಕೈಜೋಡಿಸಿರುವ ಮಂಜುನಾಥ್ಗೌಡ ಹಾಗೂ ಮಂಜುನಾಥ್ ಚಿತ್ರದ ಕುರಿತಂತೆ ಮಾತನಾಡಿದರು. ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಮಂಜುನಾಥ್ ನಾಯ್ಡು ಅವರ ಛಾಯಾಗ್ರಹಣ ಹಾಗೂ ಸೋಹನ್ ಬಾಬು ಅವರ ಸಂಗೀತ ಈ ಚಿತ್ರಕ್ಕಿದೆ.
ಯುವನಟ ಅಭಯ್ ಚಂದ್ರಶೇಖರ್ ವಿಭಿನ್ನ ಪ್ರೇಮಕಥೆಯುಳ್ಳ ಮನಸಾಗಿದೆ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದರು. ಈಗವರು ಮತ್ತೊಂದು ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಮಂಗಳವಾರ ಅಭಯ್ ಹುಟ್ಟುಹಬ್ಬ. ಇದೇ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಚಿತ್ರದ ಹೆಸರು ಮಂಡ್ಯಹೈದ. ಈ ಚಿತ್ರವನ್ನು ಅಭಯ್ ತಂದೆ ಚಂದ್ರಶೇಖರ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ, ಅಲ್ಲದೆ ಈ ಚಿತ್ರಕ್ಕೆ ವಿ. ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೇ ತಿಂಗಳ ೧೮ರಂದು ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಬಂಡೆ ಮಾಂಕಾಳಮ್ಮ ದೇವಸ್ಥಾನದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಚಂದ್ರಶೇಖರ್, ಮಂಡ್ಯ ಹೈದ ನಮ್ಮ ಬ್ಯಾನರ್ನಿಂದ ಹೊರಬರುತ್ತಿರುವ ೫ನೇ ಚಿತ್ರ. ಅಲ್ಲದೆ ನನ್ನ ಮಗನನ್ನು ಹಾಕಿಕೊಂಡು ನಿರ್ಮಿಸುತ್ತಿರುವ ೨ನೇ ಚಿತ್ರವೂ ಹೌದು. ತೇಜಸ್ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಇದೇ ತಿಂಗಳ ೧೮ರಂದು ಚಿತ್ರದ ಮುಹೂರ್ತ ನಡೆಸಿ, ಅಂದಿನಿಂದಲೇ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ, ಅದೇ ದಿನ ಚಿತ್ರದ ಟೈಟಲ್, ಕಥೆಯ ಕುರಿತಂತೆ ಹಾಗೂ ಚಿತ್ರೀಕರಣದ ಬಗ್ಗೆ ಎಲ್ಲಾ ವಿವರಗಳನ್ನು ತಿಳಿಸುತ್ತೇವೆ, ಇಂದು ಅಭಯ್ ಹುಟ್ಟುಹಬ್ಬ, ಹಾಗಾಗಿ ಚಿತ್ರದ ಟೈಟಲ್ ಲಾಂಚ್ ಮಾಡಿದ್ದೇವೆ, ಕಿರುತೆರೆ ನಟಿ ಭೂಮಿಕಾ ಅವರನ್ನು ಈ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯಿಸುತ್ತಿದ್ದೇವೆ ಎಂದು ಹೇಳಿದರು.
ನಂತರ ನಿರ್ದೇಶನ ಶ್ರೀಕಾಂತ್ ಮಾತನಾಡಿ, ನಾನು ಈ ಹಿಂದೆ ರಾಗಣ್ಣ ಅಭಿನಯದ ವಾರ್ಡ್ ನಂ.೧೧ ಎಂಬ ಚಿತ್ರವನ್ನು ನಿರ್ದೇಶಿಸಿದ್ದೆ. ಇದು ನನ್ನ ನಿರ್ದೇಶನದ ೨ನೇ ಚಿತ್ರ. ಮಂಡ್ಯ ಹೈದನ ಲವ್ ಯಾವ ಥರ ಇರುತ್ತೆ ಅಂತ ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಈ ಚಿತ್ರದ ಶೇ.೮೦ ರಷ್ಟು ಚಿತ್ರೀಕರಣವನ್ನು ಮಂಡ್ಯ ಹಾಗೂ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಉಳಿದ ೨೦ ಭಾಗವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸುತ್ತಿದ್ದೇವೆ. ಕೆಲವರು ಪ್ರೀತಿಗೋಸ್ಕರ ಪ್ರಾಣವನ್ನೇ ತೆಗೀತಾರೆ, ಇನ್ನೂ ಕೆಲವರು ಪ್ರಾಣವನ್ನು ಕೊಡುತ್ತಾರೆ, ನಾಯಕ ಪ್ರೀತಿಗಾಗಿ ಪ್ರಾಣ ಕೊಡ್ತಾನಾ, ಅಥವಾ ಪ್ರಾಣ ತೆಗೀತಾನಾ ಅನ್ನುವುದೇ ಮಂಡ್ಯಹೈದ ಚಿತ್ರದ ಒನ್ಲೈನ್ ಕಥೆ. ಚಿತ್ರದಲ್ಲಿ ೫ ಹಾಡುಗಳಿದ್ದು, ಸುರೇಂದ್ರನಾಥ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮನುಗೌಡ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ ಎಂದು ಹೇಳಿದರು. ಚಿತ್ರದ ನಾಯಕ ಅಭಯ್ ಮಾತನಾಡಿ ಇಂದು ನನಗೆ ತುಂಬಾ ವಿಶೇಷವಾದ ದಿನ, ಈ ಸಿನಿಮಾದಲ್ಲಿ ನನ್ನ ತಂದೆ ತುಂಬಾ ಇನ್ವಾಲ್ ಆಗಿದ್ದಾರೆ. ನನ್ನ ಮೊದಲ ಚಿತ್ರದಲ್ಲೂ ಅಷ್ಟೇ. ಅಲ್ಲದೆ ಇದು ನನಗೆ ತುಂಬಾ ಇಷ್ಟವಾಗಿರುವಂಥ ಸಬ್ಜೆಕ್ಟ್. ಪಕ್ಕಾ ಮಂಡ್ಯ ಭಾಷೆ ಈ ಚಿತ್ರದಲ್ಲಿರುತ್ತದೆ. ನನ್ನ ಸಹೋದರ ತೇಜಸ್ ಚಿತ್ರದ ಪ್ರೊಡಕ್ಷನ್ ಕೆಲಸದಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಿದರು.
ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಭೂಮಿಕಾ ಮಾತನಾಡುತ್ತ ನಾನು ಈಗಾಗಲೇ ಗೀತಾ ಸೀರಿಯಲ್ನಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದೆ. ಜೊತೆಗೆ ಪುಟ್ಟಕ್ಕನ ಮಕ್ಕಳು ನಲ್ಲೂ ಅಭಿನಯಿಸಿದ್ದೇನೆ. ಜೊತೆಗೆ ರಾಬರ್ಟ್, ಬ್ರಹ್ಮಚಾರಿ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳನ್ನು ಮಾಡಿದ್ದೆ, ಈ ಚಿತ್ರದ ಮೂಲಕ ನಾಯಕಿಯಾಗುತ್ತಿದ್ದೇನೆ ಎಂದು ಹೇಳಿದರು,
ರಾಗಿಣಿ ದ್ವಿವೇದಿ…. ಈ ಹೆಸರು ಕೇಳಿದಾಕ್ಷಣ, ಪಡ್ಡೆ ಹುಡುಗರ ಕಿವಿ ನೆಟ್ಟಗಾಗುತ್ತೆ . ಕಣ್ಮುಂದೆ ಹತ್ತಾರು ಕಲ್ಪನೆಗಳು ಓಡಾಡುತ್ತವೆ. ಅದರಲ್ಲೂ ಹುಡುಗರಂತೂ ರಂಗಾದ ರಾಗಿಣಿ ಪೋಸ್ಟರ್ ನೋಡಿಯೇ ಥ್ರಿಲ್ ಆಗುವಷ್ಟರ ಮಟ್ಟಿಗೆ ರಾಗಿಣಿ ಮೋಡೊ ಮಾಡಿರುವುದಂತೂ ಸುಳ್ಳಲ್ಲ.
ಅಂದಹಾಗೆ, ರಾಗಿಣಿ ಹೆಸರು ಬರೀ ಕನ್ನಡ ಮಾತ್ರವಲ್ಲ ಭಾರತೀಯ ಚಿತ್ರರಂಗಕ್ಕೆ ಚಿರಪರಿಚಿತ. ರಾಗಿಣಿ ಈಗ ಒಂದಷ್ಟು ಸಿನಿಮಾಗಳ ಮೂಲಕ ಬ್ಯುಜಿ. ಕನ್ನಡ ಮಾತ್ರವಲ್ಲ, ಅವರು ಪರಭಾಷೆಯ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುವ ಮೂಲಕ ಬ್ಯುಜಿಯಾಗಿದ್ದಾರೆ ಅಂದರೆ ಒಪ್ಪಲೇಬೇಕು.
ಅವರು ನಟಿಸಿರುವ ಕನ್ನಡದ ‘ಸಾರಿ’ ಕರ್ಮ ರಿಟರ್ನ್ಸ್ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ. ಈ ಸಿನಿಮಾದಲ್ಲಿ ರಾಗಿಣಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ಮೇಲೆ ರಾಗಿಣಿಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.
ಇದರೊಂದಿಗೆ ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಅವರು ನಿರ್ದೇಶಿಸುತ್ತಿರುವ ‘ಬಿಂಗೋ’ ಸಿನಿಮಾ ಕೂಡ ಕೈಯಲ್ಲಿದೆ. ಈ ಸಿನಿಮಾದಲ್ಲೂ ರಾಗಿಣಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ನಡುವೆ ಒಂದಷ್ಟು ಕಥೆಗಳನ್ನು ಕೇಳಿರುವ ಅವರು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡಬೇಕಷ್ಟೆ. ರಾಗಿಣಿ ಈಗಾಗಲೇ ಮಲಯಾಳಂ ಸಿನಿಮಾವೊಂದರಲ್ಲೂ ಕಾಣಿಸಿಕೊಂಡಾಗಿದೆ. ಈಗ ಬಾಲಿವುಡ್ ಅಂಗಳದಲ್ಲೂ ಸದ್ದು ಮಾಡೋಕೆ ಹೊರಟಿದ್ದಾರೆ.
ಇನ್ನೂ ಹೆಸರಿಡದ ಬಾಲಿವುಡ್ ಸಿನಿಮಾದಲ್ಲಿ ರಾಗಿಣಿ ನಟಿಸುತ್ತಿದ್ದಾರೆ. ಆ ಸಿನಿಮಾಗಾಗಿಯೇ ರಾಗಿಣಿ ಒಂದಷ್ಟು ಹೊಸ. ಲುಕ್ ನಲ್ಲಿ ಮಿರ ಮಿರ ಮಿಂಚುತ್ತಿದ್ದಾರೆ.
ಸದ್ಯ ಹೊಸ ಬಗೆಯ ಕಥೆ ಹಾಗು ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸುತ್ತಿರುವ ರಾಗಿಣಿ, ಸೂಕ್ತ ಕಥೆ ಮತ್ತು ಪಾತ್ರಗಳ ಆಯ್ಕೆ ಎದುರು ನೋಡುತ್ತಿದ್ದಾರೆ.
ನಟ ದೇವರಾಜ್ ಪುತ್ರ ಪ್ರಣಾಮ್ ದೇವರಾಜ್ ಅಭಿನಯದ ದ್ವಿತೀಯ ಚಿತ್ರ ವೈರಂ. ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ದೇವರಾಜ್, ಚಂದ್ರಕಲಾ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಟೀಸರ್ ಬಿಡುಗಡೆ ವೇಳೆ ಇದ್ದರು.
ಟೀಸರ್ ಬಿಡುಗಡೆ ಮಾಡಿದ ದೇವರಾಜ್ ಮಾತನಾಡಿ, ಕನ್ನಡ ಚಿತ್ರರಂಗ ಈಗ ಮತ್ತೆ ಬ್ಯುಸಿಯಾಗಿದೆ. ಇಂತಹ ಸಮಯದಲ್ಲಿ ನನ್ನ ಮಗನ 2ನೇ ಸಿನಿಮಾ ಬರುತ್ತಿದೆ. ನಿರ್ದೇಶಕ ಸಾಯಿಶಿವನ್ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಕೇಳಿದ್ದೇನೆ. ಚೆನ್ನಾಗಿದೆ. ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು.
ಚಿಕ್ಕ ವಯಸಿನಿಂದ ಅಪ್ಪ, ಅಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. 4 ವರ್ಷಗಳ ನಂತರ ಈ ಸ್ಟೇಜ್ ಮೇಲೆ ನಿಂತು ಮಾತನಾಡುತ್ತಿದ್ದೇನೆ. ಹಿಂದಿನ ಚಿತ್ರದಲ್ಲಿ ಚಾಕೊಲೇಟ್ ಬಾಯ್ ಆಗಿದ್ದೆ. ಈ ಸಿನಿಮಾದಲ್ಲಿ ಆಕ್ಷನ್ ಹೀರೋ ಆಗಿದ್ದೇನೆ. ಸಾಯಿ ಶಿವನ್ ಅವರಲ್ಲಿ ತುಂಬಾ ಕಾನ್ಫಿಡೆನ್ಸ್ ಇದೆ. ನಿರ್ಮಾಪಕರಾಗಿ ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ತುಂಬಾ ಸಪೋರ್ಟ್ ಮಾಡಿದ್ದಾರೆ.
ಡಿ.ಓ.ಪಿ. ಕೆಲಸವೂ ಅದ್ಭುತವಾಗಿದೆ. ನಾನು ಇಷ್ಟು ಚೆನ್ನಾಗಿ ತೆರೆಮೇಲೆ ಕಾಣಿಸಲು ಅವರೇ ಕಾರಣ. ಒಬ್ಬ ಹೀರೋ ಗುರುತಿಸಿಕೊಳ್ಳೋದು ಅವನೆದುರು ಸ್ಟ್ರಾಂಗ್ ವಿಲನ್ ಇದ್ದಾಗ, ನನಗೆ ಎರಡನೇ ಚಿತ್ರದಲ್ಲೇ ಗರುಡರಾಮ್ ರಂಥ ಖಳನಟರೆದುರು ಅಭಿನಯಿಸುವ ಅವಕಾಶ ಸಿಕ್ತು. ಶಂಕರ್ ಅಶ್ವಥ್ ಹಾಗೂ ವೀಣಾಸುಂದರ್ ನನ್ನ ತಂದೆ, ತಾಯಿ ಪಾತ್ರ ಮಾಡಿದ್ದಾರೆ.ಚಿತ್ರದಲ್ಲಿ ಎಂಜಾಯ್ ಮಾಡುವಂಥ ೪ ಹಾಡುಗಳಿದ್ದು, ಕವಿರಾಜ್, ನಾಗೇಂದ್ರ ಪ್ರಸಾದ್, ರಾಮ್ ನಾರಾಯಣ್ ಹಾಡುಗಳನ್ನು ಬರೆದಿದ್ದಾರೆ ಎಂದು ನಾಯಕ ಪ್ರಣಾಮ್ ದೇವರಾಜ್ ತಿಳಿಸಿದರು.
ಚಿತ್ರದ ನಾಯಕಿ ಮೋನಾಲ್ ಮಾತನಾಡುತ್ತ ಇದು ನನ್ನ ಮೊದಲ ಕನ್ನಡ ಚಿತ್ರ. ಒಬ್ಬ ಕ್ರಿಶ್ಚಿಯನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಒಂದೊಳ್ಳೆ ಲವ್ ಸ್ಟೋರಿ ಚಿತ್ರದಲ್ಲಿದೆ ಎಂದರು.
ಚಿತ್ರದಲ್ಲಿ ಜನರಿಗೆ ಒಂದು ಯೂನಿವರ್ಸಲ್ ಮೆಸೇಜ್ ಇದೆ. ಜನ ಬದಲಾಗಬೇಕು ಎಂದು ಹೇಳಲಾಗಿದೆ. ಜನ ಸಪೋರ್ಟ್ ಮಾಡುತ್ತಾರೆಂಬ ನಂಬಿಕೆಯಿದೆ ಎಂದರು ಖಳನಾಯಕ ಗರುಡಾರಾಮ್.
ಚಿತ್ರದಲ್ಲಿ ಹೀರೋ ಡೆಡಿಕೇಶನ್, ಇನ್ವಾಲ್ ಮೆಂಟ್ ತುಂಬಾ ಚೆನ್ನಾಗಿತ್ತು. ಆತ ಸಿಂಗಲ್ ಟೇಕ್ ಆರ್ಟಿಸ್ಟ್ ಎಂದು ನಿರ್ದೇಶಕ ಸಾಯಿಶಿವನ್, ಪ್ರಣಾಮ್ ದೇವರಾಜ್ ಅವರನ್ನು ಹೊಗಳಿದರು.
ನಿರ್ಮಾಪಕರಾದ ಜೆ.ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ಚಿತ್ರದ ಬಗ್ಗೆ ಮಾತನಾಡಿದರು. ಗೋಪಿನಾಥ್ ಅವರ ಛಾಯಾಗ್ರಹಣ ಹಾಗೂ ಮಹತಿ ಸ್ವರಸಾಗರ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ತಮ್ಮ ಅಮೋಘ ನಟನೆಯ ಮೂಲಕ ಜನಪ್ರಿಯರಾಗಿರುವ ನಟ ಕೋಮಲ್ ಕುಮಾರ್, ಐದು ವರ್ಷಗಳ ನಂತರ ನಾಯಕರಾಗಿ ನಟಿಸುತ್ತಿರುವ ಚಿತ್ರ “ಕಾಲಾಯಾ ನಮಃ”.
ಚಿತ್ರಕ್ಕೆ ಈಗ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈಗ ಮತ್ತೊಂದು ಖುಷಿಯ ವಿಚಾರವೆಂದರೆ, ತಮ್ಮ ನಟನೆಯ ಮೂಲಕ ಭಾರತದಾದ್ಯಂತ ಹೆಸರು ಮಾಡಿರುವ ಬಹುಭಾಷಾ ನಟ ಪ್ರಕಾಶ್ ರೈ ” ಕಾಲಾಯಾ ನಮಃ” ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಪ್ರಕಾಶ್ ರೈ ಅವರ ಅಭಿನಯದ ಸನ್ನಿವೇಶಗಳ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ.
ಅನುಸೂಯ ಕೋಮಲ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಮತಿವಣನ್ ನಿರ್ದೇಶಿಸುತ್ತಿದ್ದಾರೆ. ಎಮಿಲ್ ಸಂಗೀತ ನಿರ್ದೇಶನ ಹಾಗೂ ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಕೋಮಲ್ ಕುಮಾರ್, ಆಸಿಯಾ ಫಿರ್ದೋಸ್, ಪ್ರಕಾಶ್ ರೈ, ಸುಚೀಂದ್ರ ಪ್ರಸಾದ್, ತಿಲಕ್, ಯತಿರಾಜ್ ಜಗ್ಗೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ಪಾದರಾಯ ಸಿನಿಮಾ ಕೈಗೆತ್ತಿಕೊಂಡಿದ್ದು ಗೊತ್ತೇ ಇದೆ. ಆಗ ಸಿನಿಮಾಗೆ ಜಾಕ್ ಮಂಜು ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಪಾದರಾಯ ಸಿನಿಮಾದಿಂದ ಜಾಕ್ ಮಂಜು ಹಿಂದೆ ಸರಿದಿದ್ದಾರೆ. ಈಗ ಆರ್.ಚಂದ್ರು ಈ ಸಿನಿಮಾ ನಿರ್ಮಾಪಕರು. ಕಬ್ಜ ಜೊತೆಗೆ ಈ ಸಿನಿಮಾಗೂ ಚಂದ್ರು ಹಣ ಹಾಕಲಿದ್ದಾರೆ
ಚಕ್ರವರ್ತಿ ಚಂದ್ರಚೂಡ್ ಹಾಗೂ ನಿರ್ದೇಶಕ ನಾಗಶೇಖರ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಪಾದರಾಯ’. ಹನುಮ ಜಯಂತಿಯಂದು ಟೈಟಲ್ ರಿವೀಲ್ ಮಾಡಿ ಸಂಚಲನ ಸೃಷ್ಟಿಸಿದ್ದ ಚಿತ್ರತಂಡ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿದೆ, ಸದ್ಯ ಲೇಟೆಸ್ಟ್ ಅಪ್ಡೇಟ್ ಒಂದು ಚಿತ್ರತಂಡದಿಂದ ಹೊರಬಿದ್ದಿದೆ. ‘ಪಾದರಾಯ’ ಚಿತ್ರದ ಮೂಲಕ ಸೆನ್ಸೇಷನಲ್ ಸಿಂಗರ್ ಮಂಗ್ಲಿ ನಾಯಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ.
‘ಕಣ್ಣೇ ಅದಿರಿಂದಿ’ ಹಾಡಿನ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ, ಅಪಾರ ಖ್ಯಾತಿ ಗಳಿಸಿಕೊಂಡ ತೆಲುಗಿನ ಗಾಯಕಿ ಮಂಗ್ಲಿ. ಆ ನಂತರ ಕನ್ನಡದಲ್ಲೂ ಹಲವು ಹಾಡುಗಳಿಗೆ ದನಿಯಾಗಿರುವ ಮಂಗ್ಲಿ ಕನ್ನಡಿಗರ ಪ್ರೀತಿಗೂ ಪಾತ್ರರಾಗಿದ್ದಾರೆ. ಈಗ ನಾಯಕಿಯಾಗಿ ಚಿತ್ರರಂಗಕ್ಕೆ ಮಂಗ್ಲಿ ಪಾದರ್ಪಣೆ ಮಾಡುತ್ತಿದ್ದಾರೆ. ಅದು ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಮುಖಾಂತರ ಅನ್ನೋದು ವಿಶೇಷ.
ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ‘ಪಾದರಾಯ’ ಚಿತ್ರಕ್ಕೆ ಮಂಗ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಈ ಮೂಲಕ ಗಾಯಕಿ, ನಿರೂಪಕಿಯಾಗಿ ಸೈ ಎನಿಸಿಕೊಂಡ ಮಂಗ್ಲಿ ನಾಯಕಿಯಾಗಿ ಹೊಸ ಜರ್ನಿ ಆರಂಭಿಸುತ್ತಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿರುವ ‘ಪಾದರಾಯ’ ಚಿತ್ರದಲ್ಲಿ ಮೈನಾ ಖ್ಯಾತಿಯ ನಿರ್ದೇಶಕ ನಾಗಶೇಖರ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ.
ಆರ್.ಚಂದ್ರು ನಿರ್ಮಾಪಕ
ಚಿತ್ರೀಕರಣಕ್ಕೆ ಹೊರಡುವ ಮುನ್ನ ನಾಯಕ ನಟ ನಾಗಶೇಖರ್ 42 ದಿನಗಳ ಕಟ್ಟುನಿಟ್ಟಿನ ವ್ರತ ಆಚರಣೆ ಮಾಡುತ್ತಿದ್ದಾರೆ. ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ರಿಂದ ಹನುಮ ಮಾಲೆ ಹಾಕಿಸಿಕೊಂಡಿರುವ ನಾಗಶೇಖರ್ 42 ದಿನಗಳ ಕಾಲ ಅಂಜನಾದ್ರಿ ಬೆಟ್ಟದಲ್ಲಿ ವ್ರತವನ್ನು ಆಚರಿಸುತ್ತಿದ್ದಾರೆ.
‘ಪಾದರಾಯ’ ಚಿತ್ರ 2013-14ರಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ. ಆರು ರಾಜ್ಯಕ್ಕೆ ಸಂಬಂಧಿಸಿದ ಘಟನೆ ಇದಾಗಿದ್ದು, ಯೂನಿವರ್ಸಲ್ ಸಬ್ಜೆಕ್ಟ್ಗ. ಹಾಗಾಗಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರುತ್ತಿದೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ.
ಸಿದ್ದೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ನಡಿ ಆರ್.ಚಂದ್ರು ‘ಪಾದರಾಯ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಂದಹಾಗೆ, ಈ ಹಿಂದೆ ಈ ಸಿನಿಮಾಗೆ ಜಾಕ್ ಮಂಜು ನಿರ್ಮಾಣ ಮಾಡಲಿದ್ದಾರೆ ಎಂದು ಸ್ವತಃ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದರು. ಆದರೆ ಈಗ ನಿರ್ಮಾಪಕರಾಗಿ ಆರ್.ಚಂದ್ರು ಎಂಟ್ರಿಯಾಗಿದ್ದಾರೆ. ಇನ್ನು, ನಾಗಶೇಖರ್ ಸಹ ನಿರ್ಮಾಣವಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ತಮಿಳು ಚಿತ್ರರಂಗದ ಹೆಸರಾಂತ ಸಂಕಲನಕಾರ ಆಂಟೋನಿ ಚಿತ್ರದ ಸಂಕಲನವಿದೆ.
ಕೆಲ ಸಿನಿಮಾಗಳೇ ಹಾಗೆ. ಶೀರ್ಷಿಕೆಯಿಂದಲೇ ಕುತೂಹಲ ಹುಟ್ಟಿಸಿ ಬಿಡುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ಕಬ್ಜ ಕೂಡ ಸೇರಿದೆ. ಹೌದು, ಕಬ್ಜ ಬಹು ನಿರೀಕ್ಷಿತ ಸಿನಿಮಾ. ಕಾರಣ, ಉಪೇಂದ್ರ ಅಭಿನಯದ ಈ ಸಿನಿಮಾಗೆ ಸ್ಟಾರ್ ಡೈರೆಕ್ಟರ್ ಆರ್.ಚಂದ್ರು ನಿರ್ದೇಶನವಿದೆ. ಅದ್ಧೂರಿ ಬಜೆಟ್ ನಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪೋಸ್ಟರ್, ಟೀಸರ್ ಮೂಲಕವೇ ಕ್ರೇಜ್ ಹೆಚ್ಚಿಸಿರುವ ಸಿನಿಮಾ ಈಗ ಭಾರತೀಯ ಇಪ್ಪತ್ತು ಸಿನಿಮಾಗಳ ಪೈಕಿ ಕನ್ನಡದ ಕಬ್ಜ ಏಳನೇ ಸ್ಥಾನದಲ್ಲಿದ್ದು, ಕ್ರೇಜ್ ಹೆಚ್ಚಿಸಿದೆ.
ಸಿನಿಮಾ, ಟಿವಿ ಕಾರ್ಯಕ್ರಮ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ತಾಣವೆನಿಸಿಕೊಂಡಿರುವ ಇಂಟರ್ನೆಟ್ ಮೂವಿ ಡೇಟಾಬೇಸ್ (ಐಎಂಡಿಬಿ) ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 20 ಚಿತ್ರಗಳ ಈ ಪಟ್ಟಿಯಲ್ಲಿ ಕನ್ನಡದಿಂದ ಉಪೇಂದ್ರ ಹಾಗೂ ಸುದೀಪ್ ಅಭಿನಯಿಸಿರುವ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ ಮಾತ್ರ ಇರುವುದು ವಿಶೇಷ.
‘ಕಬ್ಜ’ ಚಿತ್ರವು ಈ ಪಟ್ಟಿಯ ಏಳನೇ ಸ್ಥಾನದಲ್ಲಿದ್ದು, ಮಿಕ್ಕಂತೆ ಶಾರುಖ್ ಖಾನ್ ಅಭಿನಯದ ‘ಪಠಾಣ್’, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ – ದಿ ರೂಲ್’, ಪ್ರಭಾಸ್ ಅಭಿನಯದ ‘ಸಲಾರ್’ ಮತ್ತು ‘ಆದಿಪುರುಷ್’, ವಿಜಯ್ ಅಭಿನಯದ ‘ವಾರಿಸು’, ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’, ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಮುಂತಾದ ಚಿತ್ರಗಳಿವೆ. ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳೇ ಹೆಚ್ಚಿರುವ ಈ ಚಿತ್ರಗಳ ಪಟ್ಟಿಯಲ್ಲಿ ಕನ್ನಡದಿಂದ ಏಕೈಕ ಚಿತ್ರವಾಗಿ ‘ಕಬ್ಜ’ ಹೊರಹೊಮ್ಮಿದೆ.
ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ನಡಿ ಆರ್. ಚಂದ್ರು ಕಥೆ ಬರೆದು, ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರವು ಶುರುವಾದಾಗಿನಿಂದ ಇಲ್ಲಿಯವರೆಗೂ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಅದರಲ್ಲೂ ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾದ ಮೇಲೆ ಆ ನಿರೀಕ್ಷೆಗಳು ನೂರ್ಮಡಿಯಾಗಿವೆ ಎಂದರೆ ತಪ್ಪಿಲ್ಲ.
ಬರೀ ಕರ್ನಾಟಕವಷ್ಟೇ ಅಲ್ಲ, ಬೇರೆ ಭಾಷೆಗಳಲ್ಲೂ ಈ ಚಿತ್ರಕ್ಕಾಗಿ ಬೇಡಿಕೆ ಹೆಚ್ಚಿದ್ದು, ಈಗಾಗಲೇ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್ನ ಜನಪ್ರಿಯ ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಪಡೆದುಕೊಂಡಿದೆ. ಹಿಂದಿಯಷ್ಟೇ ಅಲ್ಲ, ಬೇರೆ ಅವತರಣಿಕೆಗಳ ಹಕ್ಕುಗಳಿಗೂ ಬೇಡಿಕೆ ಹೆಚ್ಚಿದೆ. ‘ಕಬ್ಜ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.
ಉಪೇಂದ್ರ, ಸುದೀಪ್, ಶ್ರೀಯಾ ಶರಣ್ ಸೇರಿದಂತೆ ಪ್ರತಿಭಾವಂತರ ದೊಡ್ಡ ದಂಡೇ ಇರುವ ಈ ಚಿತ್ರಕ್ಕೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.
ಮಧುರವಾದ ಹಾಡುಗಳು ಕ್ರಮೇಣ ಕಡಿಮೆಯಾಗುತ್ತಿರುವ ದಿನಗಳಲ್ಲಿ ‘ಕಡಲತೀರದ ಭಾರ್ಗವ’ ಚಿತ್ರದಿಂದ ಸುಮಧುರವಾದ ಹಾಡೊಂದು ಬಂದಿದೆ. ‘ಮಧುರ ಮಧುರ’ ಎಂದೇ ಶುರುವಾಗುವ ಈ ಹಾಡು, ಇದೀಗ ಎಆರ್ಸಿ ಚಾನಲ್ನಲ್ಲಿ ಬಿಡುಗಡೆಯಾಗಿದೆ.
ನಿರ್ದೇಶಕ ಚೇತನ್ ಕುಮಾರ್ ರಚಿಸಿರುವ ಮಧುರ ಮಧುರ ಹಾಡನ್ನು ಅನಿಲ್ ಸಿ.ಜೆ ಮತ್ತು ವಾರಿಜಾಶ್ರೀ ವೇಣುಗೋಪಾಲ್ ಹಾಡಿದ್ದಾರೆ. ಮಾಧುರ್ಯ ತುಂಬಿದ ಈ ಹಾಡನ್ನು ವಿಶೇಷವಾಗಿ ನಿರ್ಮಿಸಲಾಗಿರುವ ಸೆಟ್ನಲ್ಲಿ ಚಿತ್ರೀಕರಣ ಮಾಡುವುದರ ಜೊತೆಗೆ, ಕುಮಟದ ಸುಂದರ ಪರಿಸರದಲ್ಲಿ ಸೆರೆ ಹಿಡಿಯಲಾಗಿದೆ.
ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಪಡೆದು ಬಿಡುಗಡೆಗೆ ಸಜ್ಜಾಗುತ್ತಿರುವ ‘ಕಡಲ ತೀರದ ಭಾರ್ಗವ’ ಚಿತ್ರದ ಪ್ರಮೋಷನ್ ಇದೀಗ ಈ ಹಾಡಿನಿಂದ ಪ್ರಾರಂಭವಾಗಿದೆ. ಕಳೆದ ವರ್ಷ ಚಿತ್ರದ ‘ಸಮಯವೇ’ ಎಂಬ ಲಿರಿಕಲ್ ವೀಡಿಯೋ ಬಿಡುಗಡೆಯಾಗಿತ್ತು. ಈಗ ‘ಮಧುರ ಮಧುರ’ ಚಿತ್ರದ ವೀಡಿಯೋ ಹಾಡು ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಯಾಗಲಿದೆ.
‘ಕಡಲತೀರದ ಭಾರ್ಗವ’ ಚಿತ್ರದ ಹಿಂದೆ ಉತ್ಸಾಹಿ ಯುವಕರ ತಂಡವಿದ್ದು, ಈ ಚಿತ್ರವನ್ನು ಎವ ಕಲಾ ಸ್ಟುಡಿಯೋಸ್ನಡಿ ವರುಣ್ ರಾಜು ಮತ್ತು ಭರತ್ ಗೌಡ ಜಂಟಿಯಾಗಿ ನಿರ್ಮಿಸಿದ್ದಾರೆ. ಭರತ್ ಗೌಡ, ಶ್ರುತಿ ಪ್ರಕಾಶ್, ವರುಣ್ ರಾಜು, ರಾಘವ್ ನಾಗ್, ಕೆ.ಎಸ್. ಶ್ರೀಧರ್, ಅಶ್ವಿನ್ ಹಾಸನ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ. ಅವರ ಸಂಗೀತ ಮತ್ತು ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ.