“ಗೆಜ್ಜೆನಾದ”, ” ನಂದ ಲವ್ಸ್ ನಂದಿತಾ”, “ಕನ್ನಡದ ಕಂದ”, “ಆಟ” ಮುಂತಾದ ಸೂಪರ್ ಹಿಟ್ ಚಿತ್ರಗಳ ಹಾಗೂ ಕಿರುತೆರೆಯ ಸಾಕಷ್ಟು ಯಶಸ್ವಿ ಧಾರಾವಾಹಿಗಳ ನಿರ್ದೇಶಕ ಬಿ.ಎನ್. ವಿಜಯ್ ಕುಮಾರ್ (ಗೆಜ್ಜೆನಾದ) ಈಗ ನಿರ್ಮಾಪಕರಾಗಿದ್ದಾರೆ. ಅಥರ್ವ್ ಪಿಕ್ಚರ್ಸ್ ಅಡಿಯಲ್ಲಿ ಧರ್ಮೇಂದ್ರ ಎಂ ರಾವ್ ಅವರ ಜೊತೆಯಾಗಿ ನೂತನ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಏಪ್ರಿಲ್ 13 ರಂದು ಬಿಡುಗಡೆಯಾಗಲಿದೆ.
ಇದು ಮಹಾನಗರವೊಂದರಲ್ಲಿ ನಡೆಯುವ ಕಥೆಯಾಗಿದೆ. ಮೂರು ವಿಭಿನ್ನ ಕಥೆಗಳು ಚಿತ್ರದಲ್ಲಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ.
ಬಿ.ಎನ್.ವಿಜಯ್ ಕುಮಾರ್ ಅವರ ಪುತ್ರ ಅಥರ್ವ್ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಜನಪ್ರಿಯ ಧಾರಾವಾಹಿಗಳಾದ “ಪುನರ್ ವಿವಾಹ” ಹಾಗೂ “ಪತ್ತೆದಾರಿ ಪ್ರತಿಭಾ” ದಲ್ಲಿ ಅಥರ್ವ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಈ ಚಿತ್ರದ ಮೂಲಕ ಅಥರ್ವ್ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆಯನ್ನು ಅಥರ್ವ್ ಅವರೆ ಬರೆದಿದ್ದಾರೆ. ಚಿತ್ರಕಥೆ ಅಥರ್ವ್ ಹಾಗೂ ರಾಜೀವ್ ಕಿರಣ್ ವೆನಿಯಲ್ ಅವರದು. “ಕನ್ನಡತಿ” ಧಾರಾವಾಹಿ ರೆಮೋಲ, ಸಂಪತ್ ಮೈತ್ರೇಯ, ಬಿ.ಸುರೇಶ್, ರೂಪಾ ರಾಯಪ್ಪ, ಆಶೀಶ್, ಬಿ.ಎಂ.ವೆಂಕಟೇಶ್, ಮೋಹನ್, ಆರ್ ಜೆ ಅನೂಪ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಸಾಕಷ್ಟು ಡಾಕ್ಯುಮೆಂಟರಿ, ಜಾಹೀರಾತು ಹಾಗೂ ಕಿರುಚಿತ್ರಗಳನ್ನು ನಿರ್ದೇಶಿಸಿರುವ ರಾಜೀವ್ ಕಿರಣ್ ವೆನಿಯಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರೌಶನ್ ಜಾ ಛಾಯಾಗ್ರಹಣ, ಪ್ರದೀಪ್ ಗೋಪಾಲ್ ಸಂಕಲನ ಹಾಗೂ ಸಿದ್ಧಾರ್ಥ್ ಪರಾಶರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
2020ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ರಮೇಶ್ ಅರವಿಂದ್ ಅಭಿನಯದ ಪತ್ತೇದಾರಿ ಚಿತ್ರ ‘ಶಿವಾಜಿ ಸುರತ್ಕಲ್’ ಮುಂದುವರೆದ ಭಾಗ ‘ಶಿವಾಜಿ ಸುರತ್ಕಲ್ – ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಇದೇ ಶುಕ್ರವಾರ (ಏಪ್ರಿಲ್ 14) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘ಶಿವಾಜಿ ಸುರತ್ಕಲ್ 2’ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಮೂಲಕ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಿಸಿದ್ದಾರೆ. ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಮೊದಲ ಭಾಗದಂತೆಯೇ ಈ ಚಿತ್ರವು ಸಹ ಒಂದು ಮರ್ಡರ್ ಮಿಸ್ಟ್ರಿಯಾಗಿದ್ದು, ಚಿತ್ರದಲ್ಲಿ ನಡೆಯುವ ಕೊಲೆಗಳಿಗೂ, ನಾಯಕ ಶಿವಾಜಿಗೂ ಒಂದು ನಂಟಿರುತ್ತದೆ. ಆ ನಂಟೇನು? ಕೊಲೆಗಳ ಹಿಂದಿರುವ ರಹಸ್ಯವೇನು? ಮತ್ತು ಕೊಲೆಗಾರ ಯಾರು? ಎಂಬುದೇ ಈ ಚಿತ್ರದ ಹೂರಣ. ‘ಮೊದಲ ಭಾಗ ನೋಡಿದವರಿಗೆ ಈ ಚಿತ್ರವು ಖಂಡಿತಾ ಇಷ್ಟವಾಗುತ್ತದೆ. ಇಲ್ಲಿ ಕೊಲೆಗಳ ಜೊತೆಗೆ ಮನರಂಜನೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಸಹ ಇದೆ. ಚಿತ್ರ ನೋಡುತ್ತಿದ್ದಂತೆ ಇಲ್ಲಿ ಎರಡು ಪಾತ್ರಗಳಿವೆಯೋ ಅಥವಾ ನಾಯಕನ ಮನಸ್ಸಿನಲ್ಲಿ ಆಗುವ ತಳಮಳಗಳೋ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಕಾಡುತ್ತದೆ.
ಕನ್ನಡದಲ್ಲಿ ಇದೊಂದು ವಿಭಿನ್ನವಾದ ಪ್ರಯತ್ನ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ. ‘ಶಿವಾಜಿ ಸುರತ್ಕಲ್ 2’ ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ನಾಜರ್, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಬೆಂಗಳೂರು, ಮೈಸೂರು, ಹೈದರಾಬಾದ್, ಸುರತ್ಕಲ್, ಕಾಪು, ಹೊನ್ನಾವರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಗುರುಪ್ರಸಾದ್ ಮತ್ತು ಮಧು ಅಂಬಟ್ ಅವರ ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಸಂಗೀತವಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಚಿತ್ರದ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಆಪರೇಷನ್ ಅಲಮೇಲಮ್ಮ, ಕವಲುದಾರಿ ಸಿನಿಮಾ ಖ್ಯಾತಿಯ ರಿಷಿ ನಟನೆಯ ರಾಮನ ಅವತಾರ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಟೀಸರ್ ಮೂಲಕ ನಿರ್ದೇಶಕ ವಿಕಾಸ್ ಪಂಪಾಪತಿ ಭರಪೂರ ನಗುವಿನ ಮ್ಯಾಜಿಕ್ಕನ್ನು ಪ್ರೇಕ್ಷಕರಿಗೆ ಉಣ ಬಡಿಸಿದ್ದಾರೆ. ರಿಷಿ ಪಂಚಿಂಗ್ ಸಂಭಾಷಣೆ ಮೂಲಕ ನೋಡುಗರನ್ನು ನಕ್ಕು ನಲಿಸುತ್ತಾರೆ. ಇವರಿಗೆ ಜೋಡಿಯಾಗಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಟಿಸಿದ್ದಾರೆ. ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಟೀಸರ್ ರಿಲೀಸ್ ಬಳಿಕ ಮಾತಾನಾಡಿದ ರಿಷಿ, ಸಾಮಾನ್ಯವಾಗಿ ಕಾಮಿಡಿ ಕಷ್ಟವಾದ ಜಾನರ್. ಅದರಲ್ಲಿ ಡಬಲ್ ಮೀನಿಂಗ್ ಮಾಡಬಹುದು. ಬೇರೆಯವರನ್ನು ನಿಂದಿಸಿ ಕಾಮಿಡಿ ಮಾಡಬಹುದು. ಡಬಲ್ ಮೀನಿಂಗ್ ಇಲ್ಲದೇ. ಯಾರಿಗೂ ನಿಂದಿಸದೆ ಕಾಮಿಡಿ ಮಾಡಬಹುದು ಎಂಬುದಕ್ಕೆ ನಿರ್ದೇಶಕ ವಿಕಾಸ್ ಪಂಪಾಪತಿ ಉದಾಹರಣೆ. ನಾನು ಈ ಸಿನಿಮಾವನ್ನು ತುಂಬಾ ಮಜಾಕೊಂಡು ಮಾಡಿದ್ದೇನೆ. ನನಗೆ ಖುಷಿ ಕೊಟ್ಟ ಸಿನಿಮಾ. ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಅವರೆಲ್ಲರ ಎನರ್ಜಿ ನೋಡಿ ನನಗೆ ಖುಷಿಯಾಗಿದೆ. ಟೀಸರ್ ಚೆನ್ನಾಗಿ ಮೂಡಿಬಂದಿದೆ. ನಮ್ಮ ಸಿನಿಮಾ ಮೇಲೆ ನಿಮ್ಮ ಪ್ರೋತ್ಸಾಹ ಇರಲಿ.
ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ವಿಕಾಸ್ ಪಂಪಾಪತಿ, ರಾಮನ ಅವತಾರ ಚಿತ್ರ ಕಲಿಯುಗದ ರಾಮನ ಕಥೆಯಾಗಿದ್ದು, ಸಿನಿಮಾ ನೋಡುವಾಗ ಅಲ್ಲಲ್ಲಿ ಪೌರಾಣಿಕ ರಾಮಾಯಣದ ನೆನಪು ಮಾಡಿಕೊಡುತ್ತದೆಯೆಂದು ಹೇಳಿದ್ದಾರೆ. ಯಾವುದೇ ರೀತಿ ಕಾಂಪ್ರಮೈಸ್ ಮಾಡಿಕೊಳ್ಳದೆ ಸಿನಿಮಾವನ್ನು ಮಾಡಿದ್ದು ಕನ್ನಡ ಸಿನಿ ರಂಗದಲ್ಲಿ ಇದೊಂದು ವಿಭಿನ್ನ ಚಿತ್ರವಾಗುವುದರಲ್ಲಿ, ಪ್ರೇಕ್ಷಕರಿಗೆ ಮನೋರಂಜನೆ ಕೊಡುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದಾರೆ.
ವಿಕಾಸ್ ಪಂಪಾಪತಿ “ರಾಮನ ಅವತಾರ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ.
ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ರಾಮನ ಅವತಾರ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶಪಾಂಡೆ ಛಾಯಾಗ್ರಹಣವಿದೆ. ಜೂಡಾ ಸ್ಯಾಂಡಿ ಸಂಗೀತ, ಅಮರನಾಥ್ ಸಂಕಲನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿರುವ ಚಿತ್ರತಂಡ ಜೂನ್ ಮೊದಲ ವಾರ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.
ವಿಭಿನ್ನ ಟೈಟಲ್ ನಿಂದಲೇ ಗಮನ ಸೆಳೆದಿರುವ ‘ಅನ್ ಲಾಕ್ ರಾಘವ’ ಚಲನಚಿತ್ರದ ಡಬ್ಬಿಂಗ್ ಪಿ.ಆರ್.ಕೆ. ಆಡಿಯೋ ಸ್ಟುಡಿಯೋದಲ್ಲಿ ಆರಂಭವಾಗಿದೆ. ಈ ಸಿನಿಮಾದ ನಾಯಕಿ ರೇಚಲ್ ಡೇವಿಡ್ ತಮ್ಮ ಪಾತ್ರಕ್ಕಾಗಿ ಕನ್ನಡ ಪದಗಳ ಉಚ್ಛಾರಣೆಯನ್ನು ಕಲಿತು, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುತ್ತಿರುವುದು ವಿಶೇಷ. ತನ್ನ ಈ ಪ್ರಯತ್ನಕ್ಕೆ ಅನ್ಲಾಕ್ ರಾಘವ ಚಲನಚಿತ್ರ ತಂಡ ತುಂಬಾ ಸಹಕಾರ ನೀಡುತ್ತಿದೆ ಎಂದು ನಾಯಕಿ ರೇಚಲ್ ಡೇವಿಡ್ ಹರ್ಷ ವ್ಯಕ್ತಪಡಿಸಿದ್ದಾರೆ.
ಅನ್ ಲಾಕ್ ರಾಘವ ಚಿತ್ರತಂಡ ಚಿತ್ರದುರ್ಗ ಹಾಗೂ ಬೆಂಗಳೂರಿನಲ್ಲಿ 60 ದಿನಗಳ ಕಾಲ ಸಿನಿಮಾ ಶೂಟಿಂಗ್ ನಡೆಸಿದೆ. ಅನ್ ಲಾಕ್ ರಾಘವದಲ್ಲಿ ಚಿತ್ರ ಸಿನಿಗೀತೆ ಪ್ರೇಮಿಗಳಿಗಾಗಿಯೇ ಕುಣಿಸಿ-ತಣಿಸುವ ಮೂರು ಹಾಡುಗಳ ರಸದೌತಣವಿದ್ದರೆ, ಆ್ಯಕ್ಷನ್ ಪ್ರಿಯರಿಗಾಗಿ ಬರೋಬ್ಬರಿ ನಾಲ್ಕು ವಿಭಿನ್ನ ಫೈಟ್ ಗಳ ಸಖತ್ ಮನರಂಜನೆಯಿದೆ ಎಂದು ಚಿತ್ರದ ನಿರ್ದೇಶಕರಾದ ದೀಪಕ್ ಮಧುವನಹಳ್ಳಿ ಮಾಹಿತಿ ನೀಡಿದ್ದಾರೆ. ಜೊತೆಗೆ “ನಿರ್ದೇಶಕ, ಫೈಟ್ ಮಾಸ್ಟರ್, ನೃತ್ಯ ನಿರ್ದೇಶಕರು ಮೂವರೂ ಒಂದು ವಿಶೇಷ ಗೀತೆಯನ್ನು ವಿಭಿನ್ನವಾಗಿ ಒಟ್ಟಾಗಿ ಸಂಯೋಜಿಸಿದ್ದು, ಅದ್ಭುತವಾಗಿ ಮೂಡಿಬಂದಿದೆ” ಎಂದೂ ಕೂಡ ಹೇಳಿದ್ದಾರೆ.
ಇತ್ತೀಚಿಗಷ್ಟೇ ಯುಗಾದಿ ಹಬ್ಬದ ವಿಶೇಷವಾಗಿ ‘ಅನ್ ಲಾಕ್ ರಾಘವ’ ಚಿತ್ರತಂಡ ಬಿಡುಗಡೆ ಮಾಡಿದ್ದ ಸಿನಿಮಾದ ಎರಡನೆಯ ಪೋಸ್ಟರ್ ಕೂಡ ವೈರಲ್ ಆಗಿದೆ. ‘ಅನ್ಲಾಕ್ ರಾಘವ’ ಸಿನಿಮಾವನ್ನು, ಇದೇ ವರ್ಷ ಜುಲೈ ಅಂತ್ಯದ ಒಳಗಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ.
‘ಅನ್ ಲಾಕ್ ರಾಘವ’ ಚಿತ್ರವನ್ನು ಸತ್ಯ ಹಾಗೂ ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ಮಂಜುನಾಥ್ ದಾಸೇಗೌಡ, ಡಿ ಸತ್ಯಪ್ರಕಾಶ್ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದು, ದೀಪಕ್ ಮಧುವನಹಳ್ಳಿ ಅವರು ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದು, ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಧನಂಜಯ್ ಮಾಸ್ಟರ್ ಹಾಗೂ ಮುರಳಿ ಮಾಸ್ಟರ್ ನೃತ್ಯನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿದೆ.
ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಮಿಲಿಂದ್ ನಾಯಕನಾಗಿ ಹಾಗೂ ರೇಚಲ್ ದೇವಿಡ್ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗೂರು ಸುರೇಶ್, ಅಥರ್ವ ಪ್ರಕಾಶ್, ಶ್ರೀದತ್ತ, ಬೃಂದಾ ವಿಕ್ರಮ್ ಮೊದಲಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
ಉಷಾ ಗೋವಿಂದರಾಜು ನಿರ್ಮಾಣದ, ಸುಜಯ್ ಶಾಸ್ತ್ರಿ ನಿರ್ದೇಶನದಲ್ಲಿ ಚಂದನ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರದ ಪ್ರಮೋಷನ್ ಸಾಂಗ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಯಿತು. ಈ ಹಾಡಿನಲ್ಲಿ ಚಂದನ್ ಶೆಟ್ಟಿ ಅವರ ಜೊತೆ ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಚಂದನ್ ಶೆಟ್ಟಿ ಅವರೆ ಈ ಹಾಡನ್ನು ಬರೆದಿದ್ದು, ಮಂಗ್ಲಿ ಹಾಗೂ ಚಂದನ್ ಶೆಟ್ಟಿ ಹಾಡಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡಿಗೆ ಮಾತ್ರ ಚಂದನ್ ಶೆಟ್ಟಿ ಅವರೆ ಸಂಗೀತ ನೀಡಿದ್ದಾರೆ. ಪ್ರವೀಣ್ – ಪ್ರದೀಪ್ ಈ ಚಿತ್ರದ ಸಂಗೀತ ನಿರ್ದೇಶಕರು.
ನಾನು “ಕೆಂಪೇಗೌಡ” ಚಿತ್ರದಿಂದಲೂ ರಾಗಿಣಿ ಅವರ ಅಭಿಮಾನಿ. ಈಗ ಅವರ ಜೊತೆ ಹಾಡೊಂದರಲ್ಲಿ ನಟಿಸಿರುವುದು ಸಂತೋಷವಾಗಿದೆ. ಹಾಡು ಹಾಗೂ ಚಿತ್ರ ಎಲ್ಲರ ಮನ ಗೆಲಲ್ಲಿದೆ. ಇದು ನಾನು ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ . ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಚಂದನ್ ಶೆಟ್ಟಿ.
ಈ ಹಾಡು ಚೆನ್ನಾಗಿದೆ. ಚಂದನ್ ಶೆಟ್ಟಿ ಪ್ರತಿಭಾವಂತ. ಅವರು ಸಂಗೀತ ನೀಡಿ, ಹಾಡುವ ಹಾಡುಗಳು ನನಗೆ ಇಷ್ಟ. ಬಹಳ ದಿನಗಳಿಂದ ಅವರ ಜೊತೆ ನಟಿಸುವ ಕುರಿತು ಮಾತುಕತೆ ನಡೆಯುತ್ತಿತ್ತು. ಈಗ ಈ ಚಿತ್ರದ ಪ್ರಮೋಷನ್ ಸಾಂಗ್ ನಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ ಎಂದು ತಿಳಿಸಿದ ನಟಿ ರಾಗಿಣಿ ದ್ವಿವೇದಿ, ಚಿತ್ರಕ್ಕೆ ಶುಭ ಕೋರಿದರು.
ಇದು 80/90 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಈ ಕಥೆಯನ್ನು ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದ ಗೋವಿಂದರಾಜು ಅವರಿಗೆ ಹಾಗೂ ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ನನ್ನ ಧನ್ಯವಾದ. ಸದ್ಯದಲ್ಲೇ ನಿಮ್ಮ ಮುಂದೆ ಬರುತ್ತೇವೆ ಎಂದು ನಿರ್ದೇಶಕ ಸುಜಯ್ ಶಾಸ್ತ್ರಿ ತಿಳಿಸಿದರು.
ನಿರ್ದೇಶಕರು ಹೇಳಿದ ಕಥೆ ಕೇಳಿ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಈ ಹಾಡು ಹಾಗೂ ಚಿತ್ರ ನೋಡಿ ಸಂತೋಷವಾಗಿದೆ. ನಾವು ಅಂದಕೊಂಡದಿಕ್ಕಿಂತ ಚಿತ್ರ ಚೆನ್ನಾಗಿ ಬಂದಿದೆ ಎಂದರು ನಿರ್ಮಾಪಕ ಗೋವಿಂದರಾಜು.
ನಾಯಕಿ ಅರ್ಚನಾ ಕೊಟ್ಟಿಗೆ ಚಿತ್ರದಲ್ಲಿ ನಟಿಸಿರುವ ರಜನಿಕಾಂತ್, ರಾಕೇಶ್ ಪೂಜಾರಿ, ಕಥೆ ಬರೆದಿರುವ ರಾಜ್ ಗುರು, ಛಾಯಾಗ್ರಹಕ ವಿಶ್ವಜಿತ್ ರಾವ್ ಚಿತ್ರದ ಕುರಿತು ಮಾತನಾಡಿದರು. ಸಮಾರಂಭಕ್ಕೆ ಆಗಮಿಸಿದ್ದ ಚಿತ್ರರಂಗದ ಗಣ್ಯರು ಚಿತ್ರಕ್ಕೆ ಶುಭ ಕೋರಿದರು.
ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ ರೋಜಿ. ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮುಹೂರ್ತ ಸಮಾರಂಭ ಇತ್ತೀಚೆಗೆ ನವರಂಗ್ ಚಿತ್ರಮಂದಿರದಲ್ಲಿ ನಡೆಯಿತು. ಡಾಲಿ ಧನಂಜಯ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ, ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.
” ಹೆಡ್ ಬುಷ್” ಚಿತ್ರದ ನಂತರ ಶೂನ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಡಿ.ವೈ.ರಾಜೇಶ್ ಹಾಗೂ ಡಿ.ವೈ.ವಿನೋದ್ ನಿರ್ಮಾಣ ಮಾಡುತ್ತಿದ್ದಾರೆ.
ಯೋಗಿ ನನ್ನ ಆತ್ಮೀಯ ಗೆಳೆಯ. “ರೋಜಿ” ಯೋಗಿ ಅಭಿನಯದ 50ನೇ ಸಿನಿಮಾ ಎಂದು ತಿಳಿದು ಸಂತೋಷವಾಯಿತು. ಶೂನ್ಯ ಕೂಡ ನಮ್ಮ ಸಂಸ್ಥೆಯ ನಿರ್ಮಾಣದ “ಹೆಡ್ ಬುಷ್” ಚಿತ್ರ ನಿರ್ದೇಶನ ಮಾಡಿದ್ದರು. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಡಾಲಿ ಹಾರೈಸಿದರು.
ಇದು ನನ್ನ ಐವತ್ತನೇ ಚಿತ್ರ. ನಾನು ಈ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನ ಪಾತ್ರ ಎನ್ನಬಹುದು. ಶೂನ್ಯ ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ಶೀರ್ಷಿಕೆ ಬಿಡುಗಡೆ ಮಾಡಿ, ಶುಭ ಹಾರೈಸಿದ ಸ್ನೇಹಿತ ಡಾಲಿ ಧನಂಜಯ ಅವರಿಗೆ ಧನ್ಯವಾದ ಎಂದರು ನಾಯಕ ಯೋಗಿ.
ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ ಎಲ್ಲರೂ ನೀಡಿದ್ದ ಪ್ರೋತ್ಸಾಹಕ್ಕೆ ಚಿರ ಋಣಿ. ಈಗ ನನ್ನ ನಿರ್ದೇಶನದ ಎರಡನೇ ಚಿತ್ರ “ರೋಜಿ” ಗೆ ಚಾಲನೆ ಸಿಕ್ಕಿದೆ. ಚಿತ್ರದಲ್ಲಿ ಯೋಗಿ ಅವರ ಹೆಸರೆ “ರೋಜಿ”. ಚಿತ್ರರಂಗದವರಿಗೆ ಚಿತ್ರಮಂದಿರ ದೇವಸ್ಥಾನವಿದಂತೆ.
ಹಾಗಾಗಿ ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ಆರಂಭಿಸಿದ್ದೇವೆ. ಮೇ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಶೂನ್ಯ ತಿಳಿಸಿದರು.
ನಿರ್ಮಾಪಕ ಡಿ.ವೈ.ರಾಜೇಶ್ ಆಗಮಿಸಿದ ಗಣ್ಯರಿಗೆ ಧನ್ಯವಾದ ಹೇಳಿದರು.
ಕೆಜಿಎಫ್ ರೈಟರ್ ಚಂದ್ರಮೌಳಿ ಡೈರೆಕ್ಟರ್ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ದಿಲ್ ಮಾರ್ ಸಿನಿಮಾ ಮೂಲಕ ಚೊಚ್ಚಲ ಬಾರಿ ಅವರು ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಸಿನಿಮಾದಲ್ಲಿ ಮಾಸ್ ಮಹಾರಾಜ ರವಿತೇಜಾ ನಟನೆಯ ಕಿಲಾಡಿ ಚಿತ್ರದಲ್ಲಿ ನಟಿಸಿದ್ದ ಬೋಲ್ಡ್ ಬ್ಯೂಟಿ ಡಿಂಪಲ್ ಹಯಾತಿ ನಾಯಕಿಯಾಗಿ ನಟಿಸಿದ್ದಾರೆ. ಹೀರೋಯಿನ್ ಆಗಿ ಡಿಂಪಲ್ ಗೆ ಇದು ಮೊದಲ ಚಿತ್ರವಾಗಿದ್ದು, ಒಂದೊಳ್ಳೆ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಯುವ ಪ್ರತಿಭೆ ರಾಮ್ ನಾಯಕನಾಗಿ ಬಣ್ಣ ಹಚ್ಚಿದ್ದು, ಡೈಲಾಗ್ ಕಿಂಗ್ ಸಾಯಿ ಕುಮಾರ್ ವಿಲನ್ ಆಗಿ ಘರ್ಜಿಸಿದ್ದಾರೆ.
ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿ ಬರ್ತಿರುವ ದಿಲ್ ಮಾರ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯದಲ್ಲಿಯೇ ಹಾಡು ಬಿಡುಗಡೆಯಾಗಲಿದೆ. ಇದಾದಾ ಬಳಿಕ ಟ್ರೇಲರ್ ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಗೆ ಕಿಕ್ ಸ್ಟಾರ್ಟ್ ಕೊಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
ಅರ್ಜುನ್ ರೆಡ್ಡಿ ಖ್ಯಾತಿಯ ರಾದನ್ ಸಿನಿಮಾಕ್ಕೆ ಸಂಗೀತ ನೀಡಿದ್ದು, ಕೆ ಮಹೇಶ್ ಮತ್ತು ನಾಗರಾಜ್ ಭದ್ರಾವತಿ ಬಂಡವಾಳ ಹೂಡಿರುವ ದಿಲ್ ಮಾರ್ ಮೇ ಕೊನೆಯ ವಾರ ತೆರೆಗೆ ಬರಲಿದೆ.
ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ-2 ಟ್ರೇಲರ್ ರಿಲೀಸ್ ಆಗಿದೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ ಟೀಸರ್ ಯೂಟ್ಯೂಬ್ ನಲ್ಲಿ ಭಾರೀ ಸದ್ದು ಮಾಡ್ತಿದೆ. ಗುಂಡಿನಿಂದ ಗಾಯಗೊಂಡು ಪುಷ್ಪ ತಿರುಪತಿ ಜೈಲಿನಿಂದ ಎಸ್ಕೇಪ್ ಆಗಿರುತ್ತಾನೆ. ಪುಷ್ಪನಿಗಾಗಿ ಹುಡುಗಾಟ, ಹೊಡೆದಾಟ, ದಾಳಿ ನಡೆಯುತ್ತದೆ. ಎಷ್ಟು ದಿನವಾದ್ರೂ ಪುಷ್ಪ ಪತ್ತೆಯಾಗುವುದಿಲ್ಲ. ದಟ್ಟ ಅರಣ್ಯದಲ್ಲಿ ಹುಲಿಯೊಟ್ಟಿಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡುವ ಪುಷ್ಪರಾಜನ ಖದರ್.. ಕಾಡಲ್ಲಿ ಪ್ರಾಣಿಗಳು ಎರಡೆಜ್ಜೆ ಹಿಂದೆ ಇಟ್ರೆ ಹುಲಿ ಬಂದಿದೆ ಅಂತಾ ಅರ್ಥ..ಹುಲಿನೇ ಎರಡೆಜ್ಜೆ ಹಿಂದಿ ಇಟ್ರೆ ಪುಷ್ಪ ಬಂದಿದ್ದಾನೆಂಬ ಬೆಂಕಿ ಡೈಲಾಗ್ ಮೂಲಕ ಅಲ್ಲು ಅರ್ಜುನ್ ದರ್ಶನವಾಗುತ್ತದೆ.
ಟ್ರೇಲರ್ ರಿಲೀಸ್ ಗೂ ಮೊದಲು ರಿವೀಲ್ ಆಗಿದ್ದ ಪುಷ್ಪ ಪಾರ್ಟ್-2 ಗ್ಲಿಂಪ್ಸ್ ಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿತ್ತು. ಕಥಾನಕನೇ ನಾಪತ್ತೆಯಾಗಿದ್ದಾನೆ. ಹಾಗಿದ್ರೆ ಪುಷ್ಪರಾಜ್ ಎಲ್ಲಿ ಹೋದ ಅನ್ನೋ ಕ್ಯೂರಿಯಾಸಿಟಿಗೆ ಟ್ರೇಲರ್ ನಲ್ಲಿ ಉತ್ತರ ಸಿಕ್ಕಿದೆ. ಈ ಬಾರಿ ಸುಕುಮಾರ್ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುವ ಸೂಚನೆ ಸಿಕ್ಕಿದೆ. ಮತ್ತೊಮ್ಮೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಜೋಡಿ ಬಾಕ್ಸಾಫೀಸ್ ಶೇಕ್ ಮಾಡೋದು ಪಕ್ಕ ಅಂತಿದೆ ಟಾಲಿವುಡ್.. ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡ್ತಿದ್ದಾರೆ.
ಕಳೆದ ವರ್ಷದ ವಿಶ್ವಾದ್ಯಂತ ತೆರೆಗೆ ಬಂದ ಪುಷ್ಪ ಸಿನಿಮಾ 400 ಕೋಟಿಗೂ ಅಧಿಕ ಮೊತ್ತದ ಕಲೆಕ್ಷನ್ ಮಾಡಿತ್ತು. ರಕ್ತಚಂದನ ಕಳ್ಳ ಸಾಗಾಣಿಕೆ ಕಥಾಹಂದರದ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅಬ್ಬರಿಸಿ ಬೊಬ್ಬಿರಿದ್ದರು. ಅಲ್ಲು ಆಕ್ಟಿಂಗ್, ಸುಕುಮಾರ್ ಟೀಕಿಂಗ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಬೆಳ್ಳಿಪರದೆಯಲ್ಲಿ ಅಖಂಡ ಗೆಲುವು ಕಂಡ ಪುಷ್ಪ ಪಾರ್ಟ್-2 ಮೇಲೆ ನಿರೀಕ್ಷೆ ಹೆಚ್ಚಿದೆ. ಪುಷ್ಪ ಸೀಕ್ವೆಲ್ ಹೇಗಿರುತ್ತದೆ ಎಂಬ ಕೌತಕದ ನಡುವೆ ಪುಷ್ಪ-2 ಅಂಗಳದಿಂದ ಹೊರ ಬಂದ ಟ್ರೇಲರ್ ಧಮಾಕ ಎಬ್ಬಿಸಿದೆ.
ಸುದೀಪ್ ಒಂದಷ್ಟು ಪ್ರೀತಿ ಪಾತ್ರರಿಗೆ ಸಾಥ್ ನೀಡುತ್ತಲೇ ಬಂದಿದ್ದಾರೆ. ಸಿನಿಮಾ ಪ್ರಚಾರ ಇರಬಹುದು, ಅತಿಥಿ ಪಾತ್ರವೇ ಇರಬಹುದು. ಹೀಗೆ ಒಂದಲ್ಲ ಒಂದು ವಿಷಯಗಳಲ್ಲಿ ಸಾಥ್ ಕೊಡುತ್ತಿದ್ದಾರೆ. ಅದರಲ್ಲೂ ತಮ್ಮ ಜೊತೆ ವರ್ಷಗಳ ಕಾಲ ಇದ್ದವರ ಸಿನಿಮಾದಲ್ಲಿ ಕಾಣಿಸಿಕೊಳ್ಳದಿದ್ದರೆ ಹೇಗೆ? ಹೌದು, ಸುದೀಪ್ ರಾಜೀವ್ ಅಭಿನಯದ ‘ಉಸಿರೇ ಉಸಿರೇ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಕುರಿತ ಒಂದು ಸುದ್ದಿ ಇದು…
ಎನ್. ಗೊಂಬೆ ಬ್ಯಾನರ್ ನಲ್ಲಿ ಪ್ರದೀಪ್ ಯಾದವ್ ನಿರ್ಮಾಣದ, ಸಿ ಎಂ ವಿಜಯ್ ನಿರ್ದೇಶನದ “ಉಸಿರೇ ಉಸಿರೇ” ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ. ಸದ್ಯ ಈಗಾಗಲೇ “ಉಸಿರೇ ಉಸಿರೇ” ಚಿತ್ರಕ್ಕೆ ಕೊನೆಯ ಹಂತದ ಚಿತ್ರೀಕರಣನಡೆಯುತ್ತಿದೆ.
ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. ಕೊನೆಯ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಸಿ.ಎಂ.ವಿಜಯ್ ನಿರ್ದೇಶನದ ಈ ಚಿತ್ರಕ್ಕೆ ಮನು ಬಿ ಕೆ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನವಿದೆ ವಿವೇಕ್ ಚಕ್ರವರ್ತಿ ಅವರ ಸಂಗೀತ ನಿರ್ದೇಶನ “ಉಸಿರೇ ಉಸಿರೇ” ಚಿತ್ರಕ್ಕಿದೆ.