ಕನ್ನಡ ಸಿನಿರಂಗದ ಅಶ್ವಿನ್ ನಕ್ಷತ್ರ! ಅಶ್ವಿನ್ ಹಾಸನ್ ಎಂಬ ನಿರ್ದೇಶಕರ ಕಲಾವಿದ…

ಕಲಾವಿದನಾಗೋ ಹೆಬ್ಬಯಕೆಯಲ್ಲಿ ಸಂಬಳ ಕೊಡೋ ಕೆಲಸ ಬಿಟ್ಟು ಬಣ್ಣದ ಲೋಕಕ್ಕೆ ಹೆಜ್ಜೆ ಇಡುವ ಅದೆಷ್ಟೋ ಮಂದಿ ನಮ್ಮ ಮುಂದಿದ್ದಾರೆ. ಹಾಗೆ ಬಂದು ಬಣ್ಣದ ಲೋಕದಲ್ಲಿ ಕಳೆದು ಹೋಗುವವರಿಗೂ ಲೆಕ್ಕವಿಲ್ಲ. ಅಂತವರ ಪಟ್ಟಿಯಲ್ಲಿ ಬಹಳ ವಿಭಿನ್ನವಾಗಿ ನಿಲ್ಲುವವರು ರಂಗಭೂಮಿ ಕಲಾವಿದ, ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಅಶ್ವಿನ್ ಹಾಸನ್. ಬೆಳ್ಳಿತೆರೆ ಮೇಲೆ ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ರಾರಾಜಿಸುವ ಕನಸಿನಲ್ಲೇ ಅದಕ್ಕೆ ತಕ್ಕುದಾದ ಎಲ್ಲಾ ತಯಾರಿಯೊಂದಿಗೆ ಹೆಜ್ಜೆ ಇಡುತ್ತಾ ಭರವಸೆ ಮೂಡಿಸುತ್ತಿದ್ದಾರೆ.

ಆರಂಭಿಕ ದಿನಗಳಲ್ಲಿ ಸಿಕ್ಕ ಚಿಕ್ಕ ಪುಟ್ಟ ಪಾತ್ರಗಳಿಗೆ ರಂಗಭೂಮಿ ಅನುಭವವನ್ನೆಲ್ಲ ಧಾರೆ ಎರೆದು ಪಾತ್ರದಿಂದ ಪಾತ್ರಕ್ಕೆ, ಸಿನಿಮಾದಿಂದ ಸಿನಿಮಾಗೆ ತಾವೊಬ್ಬ ಭರವಸೆಯ ನಟನಾಗಬಲ್ಲೇ ಎಂಬುದನ್ನು ನಿರೂಪಿಸುತ್ತಲೇ ಬರುತ್ತಿದ್ದಾರೆ. ಈಗಾಗಲೇ ‘ಜಗ್ಗುದಾದ’, ‘ಹೆಬ್ಬುಲಿ’, ‘ಅವನೇ ಶ್ರೀಮನ್ನಾರಾಯಣ’, ‘ರಾಜಕುಮಾರ’, ‘ಹೆಡ್ ಬುಶ್’, ‘ಥಗ್ಸ್ ಆಫ್ ರಾಮಘಡ’ ಸಿನಿಮಾಗಳಲ್ಲಿ ಇವರ ಅಭಿನಯದ ಸಾಮರ್ಥ್ಯ ಸಾಭೀತಾಗಿದೆ ಕೂಡ. ಸಹಜ, ನೈಜ ಅಭಿನಯದ ಸಾಮರ್ಥ್ಯದ ಫಲವೇ ಸುಮಾರು ಎಪ್ಪತ್ತಕ್ಕೂ ಹೆಚ್ಚಿನ ಸಿನಿಮಾಗಳು ಇವರನ್ನರಸಿ ಬಂದಿರೋದು.

ಕಳೆದ ವರ್ಷ ಅಶ್ವಿನ್ ಹಾಸನ್ ನಟನೆಯ ಹನ್ನೆರಡು ಸಿನಿಮಾಗಳು ಬಿಡುಗಡೆಯಾಗಿದ್ದು, 2023ರ ಆರಂಭದಲ್ಲೇ 6 ಸಿನಿಮಾಗಳು ಬಿಡುಗಡೆಯಾಗಿವೆ. ಬಿಡುಗಡೆಗೆ ಸಾಲಿನಲ್ಲಿರುವ ‘ಸಪ್ತ ಸಾಗರದಾಚೆ ಎಲ್ಲೋ’, ‘ದಸರಾ’, ‘ರಾಯಲ್’, ‘ಕೈವ’, ‘ಎಂಥಾ ಕಥೆ ಮಾರಾಯ’, ‘ನಾಟೌಟ್’, ‘ನೈಟ್ ಕರ್ಪ್ಯೂ’, ‘ಗ್ರೇ ಗೇಮ್ಸ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಶ್ವಿನ್ ಹಾಸನ್ ಅಭಿನಯಿಸಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ‘ಹೋಪ್’ ಹಾಗೂ ‘ಥಗ್ಸ್ ಆಫ್ ರಾಮಘಡ’ ಸಿನಿಮಾಗಳು ಇವರಿಗೆ ಅಪಾರ ಪ್ರಶಂಸೆ ತಂದುಕೊಟ್ಟಿದೆ. ಹನ್ನೊಂದು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದು, ‘ವರ್ಜಿನ್’ ಹಾಗೂ ‘ಸೆಲ್ಯೂಟ್’ ಕಿರುಚಿತ್ರಗಳ ಅಭಿನಯಕ್ಕೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.

ಒಂದೇ ತರನಾದ ಪಾತ್ರಕ್ಕೆ ಒಗ್ಗಿಕೊಳ್ಳದೇ, ಅಶ್ವಿನ್ ಎಂದರೇ ಎಲ್ಲಾ ಪಾತ್ರಕ್ಕೂ ಸೈ ಎನ್ನುವಂತೆ ಒಂದಿಷ್ಟು ಪ್ರಯೋಗಾತ್ಮಕ ಹಾಗೂ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರೇಮ್, ಧ್ರುವ ಸರ್ಜಾ ಜೋಡಿಯ ‘ಕೆಡಿ’ ಚಿತ್ರದಲ್ಲೂ ನಟಿಸುತ್ತಿರೋದು ಇವರ ಯಶಸ್ಸೇಂದೇ ಹೇಳಬಹುದು.

ನಾನೊಬ್ಬ ಅದ್ಭುತ ಅಭಿನಯಗಾರ ಆಗಬೇಕು. ಯಾವುದೇ ಪಾತ್ರವಾದರೂ ಲೀಲಾಜಾಲವಾಗಿ ಅಭಿನಯಿಸುವ ಪರ್ಫಾಮರ್ ಆಗಬೇಕು. ಅದಕ್ಕೆಂದೇ ಒಂದೇ ರೀತಿಯ ಪಾತ್ರಕ್ಕೆ ಬ್ರ್ಯಾಂಡ್ ಆಗದೇ ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರ ಹುಡುಕುತ್ತಿರುತ್ತೇನೆ. ಆ ನಿಟ್ಟಿನಲ್ಲಿ ಪ್ರಕಾಶ್ ರೈ, ಫಹಾದ್ ಫಾಸಿಲ್, ವಿಜಯ್ ಸೇತುಪತಿ ಹೀಗೆ ಹಲವರು ನನಗೆ ಸ್ಪೂರ್ತಿ. ನಿರ್ದೇಶಕರ ನೆಚ್ಚಿನ ನಟನಾಗಬೇಕು,

ಅವರ ಕಥೆಗಳಲ್ಲಿ ನನಗೆಂದೇ ಒಂದು ಪಾತ್ರವಿರಬೇಕು ಹಾಗಾದ ದಿನವೇ ಕಲಾವಿದನಾಗಿ ನನ್ನ ಯಶಸ್ಸು ಅನ್ನೋದು ನನ್ನ ಕಲಾ ಜೀವನದ ಗುರಿ. ಕಲಾವಿದರಿಗೆ ಭಾಷೆಯ ಎಲ್ಲೆ ಇರೋದಿಲ್ಲ ಅನ್ನೋದು ನನ್ನ ಬಲವಾದ ನಂಬಿಕೆ ಆದ್ರಿಂದ ಬೇರೆ ಭಾಷೆಯ ಸಿನಿಮಾಗಳ ಅವಕಾಶ ಬಂದರೆ ನಟಿಸುವ ಹಂಬಲವಿದೆ ಎಂದು ತಮ್ಮ ಮನದಾಳದ ಅಭಿಪ್ರಾಯ ಹಂಚಿಕೊಳ್ಳುತ್ತಾರೆ ಅಶ್ವಿನ್ ಹಾಸನ್.

Related Posts

error: Content is protected !!