“ಗುಲ್ಟು”, ” ಹೊಂದಿಸಿ ಬರೆಯಿರಿ”, “ಹೊಯ್ಸಳ” ಚಿತ್ರಗಳ ಮೂಲಕ ಜನಮನ್ನಣೆ ಪಡೆದಿರುವ ನವೀನ್ ಶಂಕರ್ ಅಭಿನಯದ “ಕ್ಷೇತ್ರಪತಿ” ಚಿತ್ರದ ನೂತನ ಪೋಸ್ಟರ್ ಬಿಡುಗಡೆಯಾಗಿದೆ.
“ಬಸವ” ಪಾತ್ರದಲ್ಲಿ ನವೀನ್ ಶಂಕರ್ ಕಾಣಿಸಿಕೊಳ್ಳುತ್ತಿದ್ದು, ಭೂಮಿಕಾ ಎಂಬ ಹೆಸರಿನಿಂದ ಹೊಸ ತಲೆಮಾರಿನ ಪತ್ರಕರ್ತೆ ಪಾತ್ರದಲ್ಲಿ ಅರ್ಚನಾ ಜೋಯಿಸ್ ಅಭಿನಯಿಸಿದ್ದಾರೆ. ರೈತರ ಹೋರಾಟಕ್ಕೆ ಮಹಿಳಾ ಆಯಾಮ (women perspective) ಅರ್ಚನಾ ಜೋಯಿಸ್ ಪಾತ್ರ ನೀಡುತ್ತದೆ. ಈ ಹಿಂದೆ “ಹೊಂದಿಸಿ ಬರೆಯಿರಿ” ಚಿತ್ರದಲ್ಲಿ ಮೋಡಿ ಮಾಡಿದ್ದ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ ಜೋಡಿ “ಕ್ಷೇತ್ರಪತಿ” ಚಿತ್ರದಲ್ಲಿ ಮತ್ತೆ ಪ್ರೇಕ್ಷಕರನ್ನು ರಂಜಿಸಲಿದೆ. ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ “ಕ್ಷೇತ್ರಪತಿ” ಚಿತ್ರದ ಟೀಸರ್ ನೋಡುಗರ ಮನ ಗೆದ್ದಿದೆ.
ರವಿ ಬಸ್ರೂರ್ ಮ್ಯೂಸಿಕ್ & ಮೂವೀಸ್ ಅರ್ಪಿಸುತ್ತಿರುವ, ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ಕ್ಷೇತ್ರಪತಿ” ಚಿತ್ರ ಪೊಲಿಟಿಕಲ್ ಡ್ರಾಮ ಕಥಾಹಂದರ ಹೊಂದಿದೆ. ದಿ ಇಮೋಷನ್ಸ್ ಫ್ಯಾಕ್ಟರಿ ಗ್ರೂಪ್ ಸಹ ನಿರ್ಮಾಣವಿರುವ ಈ ಚಿತ್ರ ಆಗಸ್ಟ್ 18 ರಂದು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿದೆ. ಶ್ರೀಕಾಂತ್ ಕಟಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೈ ವಿ ಬಿ ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ನವೀನ್ ಶಂಕರ್ , ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಉಸ್ತಾದ್ ರಾಮ್ ಪೋತಿನೇನಿ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಪುರಿ ಜಗನ್ನಾಥ್ ಜೋಡಿಯ ಕ್ರೇಜಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್. ಕಳೆದ ತಿಂಗಳಷ್ಟೇ ಅದ್ಧೂರಿಯಾಗಿ ಹೈದ್ರಾಬಾದ್ ನಲ್ಲಿ ಸೆಟ್ಟೇರಿದ್ದ ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರಕ್ಕಾಗಿ ರಾಮ್ ಕಂಪ್ಲೀಟ್ ಲುಕ್ ಬದಲಿಸಿದ್ದು, ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಪುರಿ ಕನೆಕ್ಟ್ಸ್ ಬ್ಯಾನರ್ ನಡಿ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಅದ್ಧೂರಿಯಾಗಿ ನಿರ್ಮಿಸುತ್ತಿರುವ ‘ಡಬಲ್ ಇಸ್ಮಾರ್ಟ್’ ಸಿನಿಮಾ ಅಂಗಳಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಎಂಟ್ರಿಯಾಗಿದೆ.
ಬಿಗ್ ಬುಲ್ ಪಾತ್ರದಲ್ಲಿ ಸಂಜಯ್ ದತ್
ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ಇತ್ತೀಚೆಗೆ ಸೌತ್ ಸಿನಿಮಾಗಳದತ್ತ ಚಿತ್ತ ಹರಿಸುತ್ತಿದ್ದಾರೆ. ಕೆಜಿಎಫ್ ಬಳಿಕ ಬ್ಯಾಕ್ ಟು ಬ್ಯಾಕ್ ದಕ್ಷಿಣ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜುಬಾಬಾ ಈಗ ‘ಡಬಲ್ ಇಸ್ಮಾರ್ಟ್’ ಭಾಗವಾಗಿದ್ದಾರೆ. ಸಂಜಯ್ ದತ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಚಿತ್ರತಂಡ ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡಿದೆ ಶುಭ ಕೋರಿದೆ. ಗಡ್ಡ ಬಿಟ್ಟು ಬಿಟ್ಟು ಸ್ಟೈಲೀಶ್ ಲುಕ್ ನಲ್ಲಿ ಸಿಗಾರ್ ಸೇದುತ್ತಾ ರಗಡ್ ಆಗಿ ಮುನ್ನಭಾಯಿ ಕಾಣಿಸಿಕೊಂಡಿದ್ದು, ಈ ಪಾತ್ರಕ್ಕೆ ಬಿಗ್ ಬುಲ್ ಎಂದು ಹೆಸರಿಡಲಾಗಿದೆ. ಸಂಜಯ್ ದತ್ ಹಿಂದೆಂದೂ ಕಾಣದ ರೀತಿಯಲ್ಲಿ ತೋರಿಸಲು ನಿರ್ದೇಶಕ ಪುರಿ ಜಗನ್ನಾಥ್ ಪ್ಲಾನ್ ಮಾಡಿಕೊಂಡಿದ್ದಾರೆ.
ಪುರಿ ಜಗನ್ನಾಥ್ ಕಥೆ ಬರೆದು ನಿರ್ದೇಶಿಸುತ್ತಿರುವ ಡಬಲ್ ಇಸ್ಮಾರ್ಟ್ ಸಿನಿಮಾಗೆ ಹಾಲಿವುಡ್ ಗಿಯಾನಿ ಜಿಯಾನೆಲ್ಲಿ ಕ್ಯಾಮೆರಾ ಹಿಡಿಯಲಿದ್ದಾರೆ. ಲೈಗರ್ ಸಿನಿಮಾದಲ್ಲಿ ಖಳನಾಯಕ ಘರ್ಜಿಸಿದ್ದ ವಿಷು ರೆಡ್ಡಿ ಪುರಿ ಕನೆಕ್ಟ್ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಭಾರೀ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರಲಿದೆ. ಮುಂದಿನ ವರ್ಷದ ಶಿವರಾತ್ರಿ ಹಬ್ಬಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಬರಲಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಮಾಹಿತಿಯನ್ನು ಶೀಘ್ರದಲ್ಲೇ ಘೋಷಣೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
ಹಿಂದೆ “ಸಂಕಷ್ಟಕರ ಗಣಪತಿ”, ಪಿ ಆರ್ ಕೆ ಪ್ರೊಡಕ್ಷನ್ಸ್ ನಿರ್ಮಾಣದ “ಫ್ಯಾಮಿಲಿ ಪ್ಯಾಕ್” ಚಿತ್ರಗಳ ಮೂಲಕ ಜನರಿಗೆ ಹತ್ತಿರವಾಗಿದ್ದ ನಾಯಕನಟ ಲಿಖಿತ್ ಶೆಟ್ಟಿ ‘ಫುಲ್ ಮೀಲ್ಸ್’ ಮೂಲಕ ನಟನೆಯೊಂದಿಗೆ ಪರಿಪೂರ್ಣ ನಿರ್ಮಾಪಕರೂ ಆಗಿದ್ದಾರೆ.
ಖುಷಿ ರವಿ, ತೇಜಸ್ವಿನಿ ಶರ್ಮ ನಾಯಯಕಿರರಾಗಿದ್ದು, ಪ್ರಮುಖ ತಾರಾಗಣದಲ್ಲಿ ರಂಗಾಯಣ ರಘು, ವಿಜಯ್ ಚಂಡೂರ್,. ಚಂದ್ರ ಕಲಾ ಮೋಹನ್, ರಾಜೇಶ್ ನಟರಂಗ, ರವಿ ಶಂಕರ ಗೌಡ, ಸುಜಯ್ ಶಾಸ್ತ್ರಿ, ರಮೇಶ್ ಪಂಡಿತ್, ಹೊನ್ನವಳ್ಳಿ ಕೃಷ್ಣ ಇದ್ದಾರೆ.
ಎನ್ ವಿನಾಯಕ ನಿರ್ದೇಶನದ ಈ ಚಿತ್ರಕ್ಕೆ, ಮನೋಹರ್ ಜೋಷಿ ಛಾಯಾಗ್ರಹಣವಿದೆ. ಹರೀಶ ರಾಜಣ್ಣ ಸಂಭಾಷಣೆ ಬರೆದಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ, ವಿಶ್ವಾಸ್ ಕಶ್ಯಪ್ ಕಲೆ, ಗುರು ಕಿರಣ್ ಸಂಗೀತ ಫುಲ್ ಮೀಲ್ಸ್ ಚಿತ್ರಕ್ಕಿದೆ.
ನಟಿ ರಾಗಿಣಿ ದ್ವಿವೇದಿ ಪ್ರಮುಖಪಾತ್ರದಲ್ಲಿ ನಟಿಸಿರುವ “ಶೀಲ” ಚಿತ್ರ ಕನ್ನಡ ಹಾಗೂ ಮಲೆಯಾಳಂ ಭಾಷೆಗಳಲ್ಲಿ ನಿರ್ಮಾಣವಾಗಿದೆ. ”ಶೀಲ” ಚಿತ್ರದ(ಕನ್ನಡ) ಟ್ರೇಲರ್ ಅನ್ನು ನಟಿ ಪ್ರಿಯಾಂಕ ಉಪೇಂದ್ರ ಅವರು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಪ್ರಿಯಾಂಕ ಉಪೇಂದ್ರ, ಟ್ರೇಲರ್ ತುಂಬಾ ಚೆನ್ನಾಗಿದೆ. ರಾಗಿಣಿ ಅವರ ಅಭಿನಯ ಕೂಡ ಅದ್ಭುತವಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
“ಶೀಲ” ಮಹಿಳಾ ಪ್ರಧಾನ ಚಿತ್ರ. ಪ್ರಸ್ತುತ ಹೆಣ್ಣು ಮಕ್ಕಳು ದಿನನಿತ್ಯ ಸಮಾಜದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಇತ್ತೀಚೆಗೆ ಮಲಯಾಳಂನಲ್ಲಿ ಚಿತ್ರ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಆಗಸ್ಟ್ 4 ರಂದು “ಶೀಲ” ಚಿತ್ರ ಕರ್ನಾಟಕದಾದ್ಯಂತ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಪ್ರಿಯಾಂಕ ಉಪೇಂದ್ರ ಅವರಿಗೆ ಧನ್ಯವಾದ. ಎಲ್ಲರೂ ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು ನಾಯಕಿ ರಾಗಿಣಿ ದ್ವಿವೇದಿ.
ನಿರ್ಮಾಪಕ ಡಿ.ಎಂ.ಪಿಳ್ಳೈ ಸಹ “ಶೀಲ” ಚಿತ್ರದ ಕುರಿತು ಮಾತನಾಡಿದರು.
ಚಿತ್ರ : ಆಚಾರ್ ಅಂಡ್ ಕೋ ನಿರ್ದೇಶನ : ಸಿಂಧು ಶ್ರೀನಿವಾಸಮೂರ್ತಿ ನಿರ್ಮಾಣ : ಪಿ ಆರ್ ಕೆ ಪ್ರೊಡಕ್ಷನ್ಸ್ ತಾರಾಗಣ: ಅಶೋಕ್, ಸುಧಾ ಬೆಳವಾಡಿ, ಸಿಂಧು ಇತರರು
‘ಕೆಲ ಸಂಬಂಧಗಳು ಹೊಡಕೊಂಡ್ರೆ ನೆಮ್ಮದಿ, ಕೆಲ ಸಂಬಂಧಗಳು ಉಳಕೊಂಡ್ರೆ ನೆಮ್ಮದಿ’ ಈ ಡೈಲಾಗ್ ನೊಡುಗರ ಕಿವಿಗೆ ಬೀಳುವ ಹೊತ್ತಿಗೆ ತೆರೆ ಮೇಲೊಂದು ಚಂದದ ಕಥೆ ಸರಾಗವಾಗಿ ಹರಿದಾಡಿರುತ್ತೆ. ಅಲ್ಲಿ ಯಾವುದೇ ಡಿಶುಂ ಡಿಶುಂ ಇಲ್ಲ. ಮರ ಸುತ್ತೋ ಹಾಡುಗಳಿಲ್ಲ. ಆದರೂ, ಅತ್ತಿತ್ತ ನೋಡದಂತೆ ಸುಮ್ಮನೆ ಎರಡು ತಾಸು ಕುಲಿತು ಆ ಮನೆಯ ‘ಆಚಾರ’ ವಿಚಾರ ತಿಳ್ಕೊಂಡು, ನೋಡ್ಕೊಂಡು ಹಾಗೊಂದು ನಗೆ ಬೀರಿ ಹೊರಬರಬೇಕಷ್ಟೆ.
ಇದು ಈ ವಾರ ತೆರೆಗೆ ಅಪ್ಪಳಿಸಿರುವ ‘ ಆಚಾರ್ ಅಂಡ್ ಕೋ’ ಚಿತ್ರದೊಳಗಿನ ರುಚಿಯಾದ ಹೂರಣ. ಹಾಗಾಗಿ ಯಾವುದೇ ಅನುಮಾನಗಳಿಲ್ಲದೆ, ಒಂದೊಳ್ಳೆ ಕಥಾಹಂದರಲ್ಲಿ ಅರಳಿರೋ ಚಿತ್ರ ಅಂತ ಮುಲಾಜಿಲ್ಲದೆ ಹೇಳಬಹುದು.
ಇಲ್ಲಿ ತೆರೆ ಮೇಲೆ ಕಾಣಿಸಿಕೊಂಡಿರುವ ಬಹುತೇಕರು ಹೊಸಬರು. ತೆರೆ ಹಿಂದೆ ಕೂಡ ಹೊಸಬರದ್ದೇ ಬುದ್ಧಿ ಚಳಕವಿದೆ. ಕಥೆಯಲ್ಲಿ ಗಟ್ಟಿತನವಿದೆ, ಚಿತ್ರಕಥೆಯಲ್ಲಿ ಚುರುಕುತನವಿದೆ, ನಿರೂಪಣೆಯಲ್ಲಿ ಸ್ಪಷ್ಟತೆ ಇದೆ. ಕುಟುಂಬ ಸಮೇತ ನೋಡಬಹುದಾದ ಪರಿ ಶುದ್ಧ ಚಿತ್ರವಿದು.
ಕೆಲ ಸಿನಿಮಾಗಳು ಇಷ್ಟ ಆಗೋದೆ ಕಂಟೆಂಟ್ ಮೂಲಕ. ಅದು ಇಲ್ಲಿದೆ. ಅದರಲ್ಲೂ ಮನಸ್ಸಿಗೆ ನಾಟುವ, ಕಾಡುವ, ನೆನಪಿಸುವ ಸಿನಿಮಾಗಳ ಸಾಲಿಗೆ ಈ ಸಿನಿಮಾ ಸೇರುತ್ತೆ. ಕಥೆ ತೀರಾ ಸಿಂಪಲ್. ಹೇಳುವ ಮತ್ತು ತೋರಿಸುವ ವಿಧಾನ ವಿಭಿನ್ನವಾಗಿದೆ. ಆರಂಭದಿಂದ ಅಂತ್ಯದವರೆಗೂ ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ನೋಡುಗನಿಗೆ ಎಲ್ಲೂ ಬೇಸರಿಸದ ವಿಚಾರಗಳು, ದೃಶ್ಯಗಳು ಇಲ್ಲಿವೆ. ಹಿಂದೆಲ್ಲಾ ಕೂಡು ಕುಟುಂಬ ಹೇಗಿತ್ತು, ಹೆಂಗೆಲ್ಲಾ ಸಮಸ್ಯೆ ಎದುರಾಗುತ್ತಿದ್ದವು ಎಂಬುದು ಸಿನಿಮಾದ ಎಳೆ. ಒಂದು ನೀಟ್ ಸಿನಿಮಾಗೆ ಇರಬೇಕಾದ ಎಲ್ಲಾ ಗುಣ ಲಕ್ಷಣಗಳು ಈ ಸಿನಿಮಾದಲ್ಲಿವೆ. ಆ ಕಾರಣಕ್ಕೆ ಹೊಸಬರ ಪ್ರಯತ್ನ ಸಾರ್ಥಕವೆನಿಸಿದೆ.
ಮೊದಲರ್ಧ ಕೆಲವು ಸಿದ್ಧಾಂತಗಳೊಂದಿಗೆ ಅಲ್ಲಲ್ಲಿ ಹಾಸ್ಯಮಯವಾಗಿ ಸಾಗುವ ಸಿನಿಮಾ ಮುಗಿಯೋದೇ ಗೊತ್ತಾಗಲ್ಲ. ದ್ವಿತಿಯಾರ್ಧ ಮತ್ತಷ್ಟು ಕುತೂಹಲ ಹಾಗು ಉತ್ಸಾಹದಲ್ಲೇ ನೋಡುಗನಲ್ಲಿ ಮಂದಹಾಸ ಬೀರುತ್ತೆ. ಇಲ್ಲೂ ಪಾತ್ರಗಳಿಗೆ ಬೆಟ್ಟದಷ್ಟು ಆಸೆಗಳಿವೆ, ಪುಟ್ಟಿಯಷ್ಟು ಕನಸುಗಳಿವೆ, ಖುಷಿ ಇದೆ, ದುಃಖ ವಿದೆ, ನೋವಿದೆ, ನಲಿವಿದೆ, ಜವಾಬ್ದಾರಿತನವಿದೆ, ಸೋಮಾರಿತನವೂ ಇದೆ, ಶಿಸ್ತು, ಸಂಯಮ ಎಲ್ಲವೂ ಮೇಳೈಸಿದೆ. ಮೊದಲೇ ಹೇಳಿದಂತೆ ಈ ಸಿನಿಮಾ ಹಳೆ ಕಾಲದ ದಿನಗಳನ್ನು ಮೆಲುಕು ಹಾಕಿಸುವುದು ದಿಟ.
ಅಂದಹಾಗೆ, ಇದು 60 ರ ದಶಕದ ಆಸುಪಾಸಲ್ಲಿ ನಡೆಯೋ ಕಥೆ. ಆಗ ಕೂಡು ಕುಟುಂಬ ಹೇಗಿತ್ತು. ಜೀವನ ಶೈಲಿ, ಊಟ, ಉಡುಗೆ ತೊಡುಗೆ, ಆಚಾರ, ವಿಚಾರ, ನಡೆ, ನುಡಿ ಇತ್ಯಾದಿ ಹೇಗಿತ್ತು ಎಂಬುದನ್ನು ಇಲ್ಲಿ ಕಾಣಬಹುದು. ಹಾಗೆ ಹೇಳುವುದಾದರೆ ನಿರ್ದೇಶಕರು ಆಗಿನ ಕಾಲಕ್ಕೆ ಕರೆದೊಯ್ಯುವಲ್ಲಿ ಯಶಸ್ವಿ.
ಕಥೆ ಏನು?
ಇದು 60 ರ ದಶಕದ ಕಥೆ. ಮಧುಸೂದನ್ ಆಚಾರ್ ಮತ್ತು ಸಾವಿತ್ರಿ ದಂಪತಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ಹತ್ತು ಮಕ್ಕಳು! ಅದೊಂದು ಕೂಡು ಕುಟುಂಬ. ಅಪ್ಪ ಪಿಡಬ್ಲ್ಯುಡಿ ಎಂಜಿನಿಯರ್. ಕೈ ತುಂಬ ಸಂಬಳ ಬಂದರೂ, ಮನೆ ನಿಭಾಯಿಸೋದು, ಮಕ್ಕಳನ್ನು ಸಲಹುವುದು ತುಸು ಕಷ್ಟ. ಅದರೂ ಸಿದ್ಧಾಂತಗಳಿಗೆ ಬದ್ಧನಾದ ಮಧುಸೂದನ್ ಆಚಾರ್, ತನ್ನ ಮಕ್ಕಳು ತನ್ನಂತೆ ಎಂಜಿನಿಯರ್ ಆಗಬೇಕೆಂಬ ಆಸೆ. ಮಕ್ಕಳಿಗೆ ಅದು ಇಷ್ಟವಿಲ್ಲ. ಹತ್ತು ಜನ ಮಕ್ಕಳದ್ದು ಒಂದೊಂದು ಕಥೆ ಮತ್ತು ವ್ಯಥೆ. ತಕ್ಕಮಟ್ಟಿಗೆ ಓದಿ ಅಪ್ಪನಿಗೆ ಇಷ್ಟವಿಲ್ಲದ ಕೆಲಸಮಾಡುವ ಗಂಡು ಮಕ್ಕಳು ಒಂದು ಕಡೆ, ಹೇಗೋ ತಿಳಿದದ್ದು ಓದಿ ಮದ್ವೆಯಾಗಿ ಹೋದರೆ ಸಾಕು ಅಂತ ಇರೋ ಹೆಣ್ಮಕ್ಕಳು ಇನ್ನೊಂದೆಡೆ.
ಈ ನಡುವೆ, ಮಧುಸೂದನ್ ಆಚಾರ್ ಹೃದಯಾಘಾತದಿಂದ ಸಾವಿಗೀಡಾಗುತ್ತಾರೆ. ಆ ಕುಟುಂಬ ಮೆಲ್ಲನೆಸಂಕಷ್ಟಕ್ಕೆ ಸಿಲುಕುತ್ತೆ. ಮನೆ ಜವಾಬ್ದಾರಿ ಹಿರಿ ಮಗನಿಗೆ ಬರುತ್ತೆ. ಆದರೆ, ಅದರಮದ ತಪ್ಪಿಸಿಕೊಳ್ಳುವ ಹಿರಿ ಮಗ, ಆ ಮನೆ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಹಾಕುತ್ತಾನೆ. ಹೇಗೋ ಬಂಡಿ ಎಳೆಯಲು ಮುಂದಾಗುವ ಎರಡನೇ ಮಗ ಕೂಡ ಅಪಘಾತತಕ್ಕೀಡಾಗುತ್ತಾನೆ. ಇದರಿಂದ ಅಕ್ಷರಶಃ ಆಚಾರ್ ಕುಟುಂಬ ನಲುಗುತ್ತೆ. ಈ ಮಧ್ಯೆ ಹಿರಿಯ ಮಗಳು ಓದಿಲ್ಲದಿದ್ದರೂ ತನಗೆ ಲಂಡನ್ ವಾಸವಾಗಿರೋ ಗಂಡನೇ ಬೇಕು ಅನ್ನೋ ಹಠ. ಈ ನಡುವೆ ಉಳಿದವರ ಮದ್ವೆ ಆಗುತ್ತಾ? ಆಚಾರ್ ಕುಟುಂಬದ ಸದಸ್ಯರು ಬದುಕು ಹೇಗೆ ಕಟ್ಟಿಕೊಳ್ತಾರೆ, ಅವರ ಆಸೆ ಕನಸು ಈಡೇರುತ್ತಾ ಅನ್ನೋದೆ ಮಜವಾದ ಕಥೆ.
ಯಾರು ಹೇಗೆ?
ಹಿರಿಯ ನಟ ಅಶೋಕ್ ಅವರು ಅಪ್ಪನಾಗಿ ಆಪ್ತವಾಗಿದ್ದಾರೆ. ಅವರು ತೆರೆ ಮೇಲೆ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಅಮ್ಮನಾಗಿ ಸುಧಾ ಬೆಳವಾಡಿ ಕೂಡ ಗಮನ ಸೆಳೆಯುತ್ತಾರೆ. ಉಳಿದಂತೆ ಇಲ್ಲಿ ಹಿರಿಯ ಮಗಳಾಗಿ ಕಾಣಿಸಿಕೊಂಡಿರುವ ಸಿಂಧು ಸಿನಿಮಾದ ಹೈಲೆಟ್. ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಪರದೆ ಮೇಲೆ ಕಾಣುವ ಪ್ರತಿ ಪಾತ್ರವೂ ಮನಸ್ಸಲ್ಲುಳಿಯುತ್ತೆ
ಬಿಂದು ಮಾಲಿನಿ ಅವರ ಸಂಗೀತದ ಎರಡು ಹಾಡು ಚೆನ್ನಾಗಿವೆ. ಹಿನ್ನೆಲೆ ಸಂಗೀತವೂ ಕಥೆಗೆ ಪೂರಕವಾಗಿದೆ. ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಆಗಿನ ಕಾಲವನ್ನು ಸಾಕ್ಷೀಕರಿಸಿದೆ. ಆಶಿಕ್ ಕುಸುಗೊಳ್ಳಿ ಸಂಕಲನ ವೇಗ ಹೆಚ್ಚಿಸಿದೆ. ತ್ರಿಲೋಕ್ ಸಂಭಾಷಣೆ ಖುಷಿ ನೀಡುತ್ತದೆ. ಅಭಿಮನ್ಯು ಸದಾನಂದನ್ ಕ್ಯಾಮರಾದಲ್ಲಿ ಅರವತ್ತರ ದಶಕದನೋಟ ವಿಶೇಷವೆನಿಸಿದೆ.
ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಸುಪುತ್ರ ವರುಣ್ ತೇಜ್ ನಟನೆಯ 14ನೇ ಸಿನಿಮಾದ ಮುಹೂರ್ತ ಸಮಾರಂಭ ಹೈದರಾಬಾದ್ ನಲ್ಲಿಂದು ಅದ್ಧೂರಿಯಾಗಿ ನೆರವೇರಿದೆ. ನಿರ್ದೇಶಕ ಮಾರುತಿ ಕ್ಯಾಮೆರಾಗೆ ಚಾಲನೆ ಕೊಟ್ಟಿದ್ದಾರೆ. ನಿರ್ಮಾಪಕ ಅಲ್ಲು ಅರವಿಂದ್ ಕ್ಲ್ಯಾಪ್ ಮಾಡಿದರು. ಹರೀಶ್ ಶಂಕರ್ ಮಟ್ಕಾ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.
ವರುಣ್ ತೇಜ್ ನಟನೆಯ 14ನೇ ಸಿನಿಮಾಗೆ ಮಟ್ಕಾ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಇದು ಜೂಟಾಟದ ಕಥೆಯಾಧಾರಿತ ಸಿನಿಮಾ. 1958ರಿಂದ 82ರ ಅವಧಿಯಲ್ಲಿ ವೈಜಾಗ್ ನಲ್ಲಿ ನಡೆದ ಸತ್ಯ ಘಟನೆಯಾಧಾರಿತ ಚಿತ್ರವಾಗಿದೆ. ಬರೋಬ್ಬರಿ 24 ವರ್ಷದ ಹಿಂದಿನ ಕಥೆಯಾಧಾರಿತ ಸಿನಿಮಾವಾಗಿರುವ ಮಟ್ಕಾದಲ್ಲಿ ವರುಣ್ ತೇಜ್ ನಾಲ್ಕು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೆಗಾ ಪ್ರಿನ್ಸ್ ಸಿನಿಕರಿಯರ್ ನ ಅತಿ ಹೆಚ್ಚು ಬಜೆಟ್‌ನ ಚಿತ್ರ ಎಂಬ ನಿರೀಕ್ಷೆ ಹುಟ್ಟಿಸಿದೆ.
ಫಲಾಸ ಸಿನಿಮಾ ಖ್ಯಾತಿಯ ಕರುಣ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮಟ್ಕಾ ಸಿನಿಮಾದಲ್ಲಿ ನಾಯಕಿಯಾಗಿ ಮೀನಾಕ್ಷಿ ಚೌಧರಿ ನಟಿಸುತ್ತಿದ್ದು, ನವೀನ್ ಚಂದ್ರ, ಕನ್ನಡದ ಕಿಶೋರ್, ಅಜಯ್ ಘೋಷ್, ಮೈಮ್ ಗೋಪಿ, ರೂಪಲಕ್ಷ್ಮಿ, ವಿಜಯರಾಮ ರಾಜು, ಜಗದೀಶ್, ರಾಜ್ ತಿರಂದಾಸ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಇನ್ನು, ಮಟ್ಕಾದ ಸ್ಪೆಷಲ್ ನಂಬರ್ ಗೆ ಬಾಲಿವುಡ್ ಬ್ಯೂಟಿ ನೋರಾ ಫತೇಹಿ ಮೆಗಾ ಪ್ರಿನ್ಸ್ ವರುಣ್ ತೇಜ್ ಜೊತೆ ಸೊಂಟ ಬಳುಕಿಸಲಿದ್ದಾರೆ.
ವೈರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಮೋಹನ್ ಚೆರುಕುರಿ ಮತ್ತು ಡಾ ವಿಜೇಂದರ್ ರೆಡ್ಡಿ ಟೀಗಾಲ ಅದ್ಧೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಜಿ ವಿ ಪ್ರಕಾಶ್ ಕುಮಾರ್ ಸಂಗೀತ ನೀಡುತ್ತಿದ್ದು, ಪ್ರಿಯ ಸೇಠ್ ಛಾಯಾಗ್ರಹಣ, ಕಾರ್ತಿಕ್ ಶ್ರೀನಿವಾಸ್ ಆರ್ ಸಂಕಲನ, ಸುರೇಶ್ ಕಲಾ ನಿರ್ದೇಶನವಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಮಟ್ಕಾ ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದೆ.
ರವಿ ಸುಬ್ಬರಾವ್, ತಮ್ಮ ಸ್ನೇಹಿತ ರಿತೇಶ್ ಜೋಶಿ ಅವರೊಂದಿಗೆ; ಸೇರಿ ನಿರ್ಮಿಸಿರುವ ಹಾಗೂ ರವಿ ಸುಬ್ಬರಾವ್ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿ ನಾಯಕನಾಗಿ ನಟಿಸಿರುವ “ಈ ಪಟ್ಟಣಕ್ಕೆ ಏನಾಗಿದೆ” (ಭಾಗ ೧) ಚಿತ್ರ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ.
ನನ್ನ ಜೀವನದಲ್ಲಿ ನಡೆದಿರುವ ಕೆಲವು ಘಟನೆಗಳು ಹಾಗೂ ನಾನು ನೈಜವಾಗಿ ಕಂಡಿರುವ ಕೆಲವು ಸನ್ನಿವೇಶಗಳು ಈ ಚಿತ್ರ ನಿರ್ಮಾಣಕ್ಕೆ ಸ್ಪೂರ್ತಿ ಎಂದು ಮಾತು ಪ್ರಾರಂಭಿಸಿದ ರವಿ ಸುಬ್ಬರಾವ್, ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ.
ಜೂಜು ಮತ್ತು ಬೆಟ್ಟಿಂಗ್ ಮಾಫಿಯಾದ ಸುತ್ತ ಹೆಣೆಯಲಾಗಿರುವ ಕಥೆ. ನಾಯಕ ಈ ಮಾಫಿಯ ಮೂಲಕ ಯುವಜನತೆಯನ್ನು ಮೋಸದ ಜಾಲಕ್ಕೆ ಬೀಳಿಸುತ್ತಾನೆ. ಈಗಿನ ಕಾಲದ ಯುವಕರು ಮನೆಯಲ್ಲಿರುವ ರೀತಿಯೆ ಬೇರೆ. ಆಚೆಕಡೆಯಿರುವ ರೀತಿಯೇ ಬೇರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಚಿತ್ರದ ಕೊನೆಗೆ ಇವೆಲ್ಲಾ ಮಾಡುವುದು ತಪ್ಪು ಎಂಬ ಸಂದೇಶ ಕೂಡ ಇದೆ.
ಹಲವು ಸನ್ನಿವೇಶಗಳನ್ನು ನೈಜವಾಗಿ ಚಿತ್ರಿಸಿರುವುದರಿಂದ ಕರ್ನಾಟಕದಲ್ಲಿ ನಮ್ಮ ಚಿತ್ರ ಸೆನ್ಸಾರ್ ಆಗಲಿಲ್ಲ. ಕೊನೆಗೆ ಹೈದರಾಬಾದ್ ನಲ್ಲಿ ನಮ್ಮ ಚಿತ್ರದ ಸೆನ್ಸಾರ್ ಆಯಿತು. ಅಲ್ಲಿನ ಸೆನ್ಸಾರ್ ಮಂಡಳಿ ಕೆಲವು ಕಟ್ಸ್ ಗಳೊಂದಿಗೆ ಎ ಪ್ರಮಾಣಪ್ರತ್ರ ನೀಡಿದೆ. ಚಿತ್ರವನ್ನು ಆಗಸ್ಟ್ ನಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕ, ನಿರ್ದೇಶಕ ಹಾಗೂ ನಾಯಕ ರವಿ ಸುಬ್ಬರಾವ್ ತಿಳಿಸಿದರು.
ಈ ಚಿತ್ರದಲ್ಲಿ ನನ್ನದು ಬೋಲ್ಡ್ ಹುಡುಗಿ ಪಾತ್ರ ಎಂದರು ನಾಯಕಿ ರಾಧಿಕಾ ರಾಮ್.
ಚಿತ್ರದಲ್ಲಿ ನಾಲ್ಕು ಹಾಡುಗಳಿದೆ ಎಂದು ತಿಳಿಸಿದ ಸಂಗೀತ ನಿರ್ದೇಶಕ ಅನಿಲ್ ಸಿ.ಜೆ, ಹಾಡುಗಳನ್ನು ಬರೆದವರ ಹಾಗೂ ಹಾಡಿದವರ ಹೆಸರುಗಳನ್ನು ಪರಿಚಯಿಸಿದರು.
ಮತ್ತೊಬ್ಬ ನಿರ್ಮಾಪಕ ರಿತೇಶ್ ಜೋಶಿ, ನಟ ಸತೀಶ್ ಶೆಟ್ಟಿ ಹಾಗೂ ವಿತರಕ ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಒಳ್ಳೆ ಸಿನಿಮಾಗಳಿಲ್ಲದೇ ಸೊರಗಿದ್ದ ಸ್ಯಾಂಡಲ್ ವುಡ್ ಇಂಡಸ್ಟ್ರೀಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಹೊಸ ಚೈತನ್ಯ ತಂದು ಕೊಟ್ಟಿದೆ. ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ಕ್ವಾಟ್ಲೆಗೆ ಪ್ರೇಕ್ಷಕ ಹೊಟ್ಟೆ ಹುಣ್ಣಾಗುವಂತೆ ನಕ್ಕುತ್ತಿದ್ದಾರೆ. ಭರಪೂರ ಮನರಂಜನೆ ಉಣಬಡಿಸಿರುವ ಈ ಸಿನಿಮಾಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಬರೀ ರಾಜ್ಯ ಮಾತ್ರವಲ್ಲ ಹೊರರಾಜ್ಯಗಳಿಗೂ ಹಾಸ್ಟೆಲ್ ಹುಡುಗರ ಹವಾಳಿ ಹಬ್ಬಿದೆ. ಈಗ ವಿದೇಶದಲ್ಲಿಯೂ ಧಮಾಕ ಎಬ್ಬಿಸಲು ಬಾಯ್ಸ್ ರೆಡಿಯಾಗಿದ್ದಾರೆ.
ವಿದೇಶದಲ್ಲಿ ಹಾಸ್ಟೆಲ್ ಹುಡುಗರ ಹಂಗಾಮ ಹಾಸ್ಟೆಲ್ ಹುಡುಗರ ಬೇಕಾಗಿದ್ದಾರೆ ಸಿನಿಮಾ ವಿದೇಶದಲ್ಲಿಯೂ ಬಿಡುಗಡೆಯಾಗುತ್ತಿದೆ. ಕೆನಡ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಯುಕೆ ಅಂಡ್ ಯೂರೋಪ್ ದೇಶಗಳಲ್ಲಿ ಇದೇ ವೀಕೆಂಡ್ ನಿಂದ ತುಂಗಾ ಹಾಸ್ಟೆಲ್ ಬಾಯ್ಸ್ ಕ್ವಾಟ್ಲೆ ಶುರುವಾಗಲಿದೆ. ಆರಂಭದಿಂದಲೂ ತಮ್ಮ ಚಿತ್ರವನ್ನು ಅತ್ಯಂತ ಕೆಟ್ಟ ಚಿತ್ರ ಎನ್ನುತ್ತಲೇ ಅತ್ಯುತ್ತಮ ಸಿನಿಮಾ ಎಂದು ಪ್ರೇಕ್ಷಕರಿಂದ ಬೆನ್ನು ತಟ್ಟಿಸಿಕೊಂಡಿರುವ ಚಿತ್ರತಂಡ ವಿಶ್ವಾದ್ಯಂತ ತಮ್ಮ ಸಿನಿಮಾವನ್ನು ಸಂಭ್ರಮಿಸುವ ತವಕದಲ್ಲಿದೆ.
ಹೈದ್ರಾಬಾದ್, ಚೆನ್ನೈ, ಕೊಚ್ಚಿ ಸೇರಿದಂತೆ ಹಲವರು ರಾಜ್ಯಗಳಲ್ಲಿ ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಕನಸ್ಸಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ವರುಣ್ ಗೌಡ, ನಿತಿನ್ ಕೃಷ್ಣಮೂರ್ತಿ, ಪ್ರಜ್ವಲ್ ಬಿ.ಪಿ, ಅರವಿಂದ್ ಎಸ್ ಕಶ್ಯಪ್ ಸಿನಿಮಾಗೆ ಬಂಡವಾಳ ಹೂಡಿದ್ದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಪಿಕ್ಚರ್ಸ್ ನಡಿ ಪ್ರೆಸೆಂಟ್ ಮಾಡಿದ್ದಾರೆ. ರಂಗಭೂಮಿ ಹಿನ್ನೆಲೆ ಹೊಂದಿರುವ ಪ್ರತಿಭಾನ್ವಿತ ತಂಡಕ್ಕೆ ರಿಷಬ್ ಶೆಟ್ಟಿ, ರಮ್ಯಾ, ಪವನ್ ಕುಮಾರ್, ಶೈನ್ ಶೆಟ್ಟಿ ಹಾಗೂ ದಿಗಂತ್ ಕೂಡ ಸಾಥ್ ಕೊಟ್ಟಿದ್ದಾರೆ.
ಇಡೀ ಸ್ಯಾಂಡಲ್ ವುಡ್ ಬೆಂಬಲವಾಗಿ ನಿಂತಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರೀಗೆ ಹೊಸ ಹುರುಪು ತಂದುಕೊಟ್ಟಿದೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಕಳೆದ ಶುರುವಾರ ರಾಜ್ಯಾದ್ಯಂತ ತೆರೆಕಂಡ ಸಿನಿಮಾ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕಪ್ರಭುವಿಗೆ ಮನರಂಜನೆ ರಸದೌತಣ ನೀಡುವಲ್ಲಿ ಹೊಸಬರ ತಂಡ ಯಶಸ್ವಿಯಾಗಿದೆ.
ಸ್ಯಾಂಡಲ್‌ವುಡ್‌ನಲ್ಲೀಗ ಹೊಸಬರಿಗೆ ವಿಫುಲ ಅವಕಾಶವಿದೆ. ಹೊಸಬರ ಚಿತ್ರಗಳು ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿವೆ. ಇದೀಗ ಮತ್ತೊಂದು ಪ್ರತಿಭಾನ್ವಿತ ಹಾಗೂ ಯುವ ಸಿನಿಮೋತ್ಸಾಹಿಗಳ ತಂಡವೊಂದು ಸೇರಿ ‘ಆರ’ ಎಂಬ ಸಿನಿಮಾ ನಿರ್ಮಿಸಿದ್ದು, ಇದೇ ವಾರ ಚಿತ್ರ ತೆರೆಗೆ ಬರ್ತಿದೆ. ಅಶ್ವಿನ್ ವಿಜಯಮೂರ್ತಿ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಪ್ರತಿಭಾನ್ವಿತ ನಟ ಸತ್ಯರಾಜ್ ವಿಭಿನ್ನ ಪಾತ್ರದಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನಿಹದಲ್ಲಿದ್ದಾರೆ.
ಕಿರುತೆರೆ, ಹಿರಿತೆರೆ ಎರಡರಲ್ಲಿಯೂ ಅನುಭವಿರುವವರು ಸತ್ಯರಾಜ್ ಮೂಲತಃ ಬೆಂಗಳೂರಿನವರೇ..ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಆಯ್ಕೆ ಮಾಡಿಕೊಂಡಿದ್ದು ಸಿನಿಮಾ ಕ್ಷೇತ್ರವನ್ನು. ಅದಕ್ಕೆ ಕಾರಣ ಸಿನಿಮಾ ಮೇಲೆ ಸತ್ಯರಾಜ್ ಅವರಿಗಿದ್ದ ಸೆಳೆತ. ಬಾಲ್ಯದಿಂದಲೂ ಚಿತ್ರರಂಗದ ಮೇಲೆ ಆಸಕ್ತಿ ಹೊಂದಿದ್ದ ಅವರು ಆರಂಭಿಕ ದಿನಗಳಲ್ಲಿ ಸಿನಿಮಾ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಆ ನಂತರ ಡೇಂಜರ್ ಝೋನ್ ಎಂಬ ಸಿನಿಮಾದ ಮೂಲಕ ಬಣ್ಣ ಹಚ್ಚಿದ್ದ ಸತ್ಯರಾಜ್, ಕಟ್ಟುಕಥೆದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡರು. ಗರುಡಾಕ್ಷ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿ ಅವರು ಆ ಬಳಿಕ ಸಾಲು ಸಾಲು ಅವಕಾಶಗಳನ್ನು ತಮ್ಮದಾಗಿಸಿಕೊಂಡರು.
ಕೆಜಿಎಫ್, ಶುಗರ್ ಲೆಸ್ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿರುವ ಸತ್ಯರಾಜ್, ಬುದ್ಧಿವಂತ-2, ಆರ, ಮೆಹಾಬೂಬ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಆರ ಸಿನಿಮಾದಲ್ಲಿ ದಿಲ್ಲಿ ಕ್ರಿಸ್ಥ ಎಂಬ ಖಡಕ್ ಖಳನಾಯಕನ ಪಾತ್ರದಲ್ಲಿ ಅವರು ನಟಿಸಿದ್ದು, ಈ ಚಿತ್ರಕ್ಕಾಗಿ ತುಳು ಭಾಷೆ ಕಲಿತಿದ್ದಾರಂತೆ. ಪದ್ಮಾವತಿ, ಕಮಲಿ, ಬ್ರಹ್ಮಗಂಟು, ನಾನು ನನ್ನ ಕನಸು, ಗೀತಾ, ಶಾಂತಂ ಪಾಪಂ, ಗಟ್ಟಿಮೇಳ , ಕೆಂಡಸಂಪಿಗೆ. ತ್ರಿಪುರ ಸುಂದರಿ ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿರುವ, ನಟಿಸುತ್ತಿರುವ ಸತ್ಯರಾಜ್, ಲಕ್ಷ್ಮೀ ರೈ ನಟನೆಯ ಝಾನ್ಸಿ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವ ಸತ್ಯರಾಜ್ ವಿಭಿನ್ನ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ತಮ್ಮನ್ನು ಪ್ರೋತ್ಸಾಹಿಸುತ್ತಿರುವ ಸಿನಿಮಾಪ್ರೇಮಿಗಳಿಗೆ , ಕನ್ನಡಿಗರಿಗೆ ಧನ್ಯವಾದ ತಿಳಿಸಿರುವ ಸತ್ಯರಾಜ್ ಅವರು, ಖಳನಾಯಕನ ಪಾತ್ರಗಳಲ್ಲಿಯೂ ಅಭಿನಯಿಸುವ ಆಸಕ್ತಿ ತೋರಿದ್ದಾರೆ.
ಓ ಎಂಬ ಹಾರರ್ ಸಿನಿಮಾ ನಿರ್ದೇಶಿಸಿದ್ದ ಮಹೇಶ ಸಿ ಅಮ್ಮಳ್ಳಿದೊಡ್ಡಿ ಎರಡನೇ ಹೆಜ್ಜೆ ಲವ್. ಟೈಟಲ್ ಹೇಳುವಂತೆ ಇದೊಂದು ಪ್ರೇಮ ಕಥಾಹಂದರದ ಚಿತ್ರ. ಈ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಈ ಹಿಂದೆ ರಿಲೀಸ್ ಆಗಿದ್ದ ಕಣ್ಮಣಿ ಹಾಡಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಅದರ ಬೆನ್ನಲ್ಲೇ ಈಗ ಒಂಟಿ ಅಲ್ಲ ನಾನೀಗ ಎಂಬ ಮಲೋಡಿ ಗಾನಲಹರಿ ಬಿಡುಗಡೆಯಾಗಿದೆ. ಹೃದಯ ಶಿವ ಸಾಹಿತ್ಯ ಬರೆದಿರುವ ಹಾಡಿಗೆ ಕೀರ್ತಿ ಮಾರಾತೆ ಧ್ವನಿಯಾಗಿದ್ದು, ಸಾಯಿ ಶ್ರೀ ಕಿರಣ್ ಟ್ಯೂನ್ ಹಾಕಿದ್ದಾರೆ. ಪ್ರೇಮಿಗಳ ನಡುವಿನ ಮಧುರ ಪ್ರೇಮಗೀತೆಯಾಗಿರುವ ಈ ಹಾಡಿನಲ್ಲಿ ಯುವ ಪ್ರತಿಭೆಗಳಾದ ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ್ ಕಾಣಿಸಿಕೊಂಡಿದ್ದಾರೆ.
ಶ್ರೀಕಾಲ ಭೈರವೇಶ್ವರ ಮೂವೀ ಮೇಕರ್ಸ್ ನಡಿ ದಿವಾಕರ್.ಎಸ್ ಲವ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಮೂಲಕ ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ ನಾಯಕ ಹಾಗೂ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದಾರೆ. ಕಾಂತಾರ ಸಿನಿಮಾ ಖ್ಯಾತಿಯ ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ ಸೇರಿದಂತೆ ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರೀ, ರಜತ್ ಶೆಟ್ಟಿ ಹಲವರು ಚಿತ್ರದ ಭಾಗವಾಗಿದ್ದಾರೆ.
ಸಿದ್ದಾರ್ಥ್ ಹೆಚ್ ಆರ್ ಛಾಯಾಗ್ರಹಣ, ರೋಸಿತ್ ವಿಜಯನ್, ಶ್ರೀ ಸಾಯಿ ಕಿರಣ್ ಸಂಗೀತ, ಕಂಬಳಿಹುಳ ಖ್ಯಾತಿಯ ಶಿವ ಪ್ರಸಾದ್ ಹಿನ್ನಲೆ ಸಂಗೀತ, ಲೋಕೇಶ್ ಪುಟ್ಟೇಗೌಡ ಸಂಕಲನ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. ನೈಜ ಘಟನೆಗಳಿಂದ ಪ್ರೇರಿತವಾದ ಕಥೆಯಾಗಿರುವ ಲವ್ ಸಿನಿಮಾವನ್ನು ಉಡುಪಿ, ಕೋಟ, ಕುಂದಾಪುರ, ಬೈಂದೂರ್, ಬಾಗಲಕೋಟೆ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಈಗಾಗಲೇ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ದವಾಗಿರುವ ಸಿನಿಮಾ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ.