ಸತ್ಯರಾಜ್ ಎಂಬ ಆರ ಸಿನಿಮಾದ ಕಲಾವಿದನಾದ ನಾನು….

ಸ್ಯಾಂಡಲ್‌ವುಡ್‌ನಲ್ಲೀಗ ಹೊಸಬರಿಗೆ ವಿಫುಲ ಅವಕಾಶವಿದೆ. ಹೊಸಬರ ಚಿತ್ರಗಳು ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿವೆ. ಇದೀಗ ಮತ್ತೊಂದು ಪ್ರತಿಭಾನ್ವಿತ ಹಾಗೂ ಯುವ ಸಿನಿಮೋತ್ಸಾಹಿಗಳ ತಂಡವೊಂದು ಸೇರಿ ‘ಆರ’ ಎಂಬ ಸಿನಿಮಾ ನಿರ್ಮಿಸಿದ್ದು, ಇದೇ ವಾರ ಚಿತ್ರ ತೆರೆಗೆ ಬರ್ತಿದೆ. ಅಶ್ವಿನ್ ವಿಜಯಮೂರ್ತಿ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಪ್ರತಿಭಾನ್ವಿತ ನಟ ಸತ್ಯರಾಜ್ ವಿಭಿನ್ನ ಪಾತ್ರದಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನಿಹದಲ್ಲಿದ್ದಾರೆ.

ಕಿರುತೆರೆ, ಹಿರಿತೆರೆ ಎರಡರಲ್ಲಿಯೂ ಅನುಭವಿರುವವರು ಸತ್ಯರಾಜ್ ಮೂಲತಃ ಬೆಂಗಳೂರಿನವರೇ..ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಆಯ್ಕೆ ಮಾಡಿಕೊಂಡಿದ್ದು ಸಿನಿಮಾ ಕ್ಷೇತ್ರವನ್ನು. ಅದಕ್ಕೆ ಕಾರಣ ಸಿನಿಮಾ‌‌ ಮೇಲೆ ಸತ್ಯರಾಜ್ ಅವರಿಗಿದ್ದ ಸೆಳೆತ. ಬಾಲ್ಯದಿಂದಲೂ ಚಿತ್ರರಂಗದ ಮೇಲೆ ಆಸಕ್ತಿ ಹೊಂದಿದ್ದ ಅವರು ಆರಂಭಿಕ ದಿನಗಳಲ್ಲಿ ಸಿನಿಮಾ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಆ ನಂತರ ಡೇಂಜರ್ ಝೋನ್ ಎಂಬ ಸಿನಿಮಾದ ಮೂಲಕ ಬಣ್ಣ ಹಚ್ಚಿದ್ದ ಸತ್ಯರಾಜ್, ಕಟ್ಟುಕಥೆದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡರು. ಗರುಡಾಕ್ಷ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿ ಅವರು ಆ ಬಳಿಕ ಸಾಲು ಸಾಲು ಅವಕಾಶಗಳನ್ನು ತಮ್ಮದಾಗಿಸಿಕೊಂಡರು.

ಕೆಜಿಎಫ್, ಶುಗರ್ ಲೆಸ್ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿರುವ ಸತ್ಯರಾಜ್, ಬುದ್ಧಿವಂತ-2, ಆರ, ಮೆಹಾಬೂಬ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಆರ ಸಿನಿಮಾದಲ್ಲಿ ದಿಲ್ಲಿ ಕ್ರಿಸ್ಥ ಎಂಬ‌ ಖಡಕ್ ಖಳನಾಯಕನ ಪಾತ್ರದಲ್ಲಿ ಅವರು ನಟಿಸಿದ್ದು, ಈ ಚಿತ್ರಕ್ಕಾಗಿ ತುಳು ಭಾಷೆ ಕಲಿತಿದ್ದಾರಂತೆ. ಪದ್ಮಾವತಿ, ಕಮಲಿ, ಬ್ರಹ್ಮಗಂಟು, ನಾನು ನನ್ನ ಕನಸು, ಗೀತಾ, ಶಾಂತಂ ಪಾಪಂ, ಗಟ್ಟಿಮೇಳ , ಕೆಂಡಸಂಪಿಗೆ. ತ್ರಿಪುರ ಸುಂದರಿ ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿರುವ, ನಟಿಸುತ್ತಿರುವ ಸತ್ಯರಾಜ್, ಲಕ್ಷ್ಮೀ ರೈ ನಟನೆಯ ಝಾನ್ಸಿ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವ ಸತ್ಯರಾಜ್ ವಿಭಿನ್ನ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ತಮ್ಮನ್ನು ಪ್ರೋತ್ಸಾಹಿಸುತ್ತಿರುವ ಸಿನಿಮಾಪ್ರೇಮಿಗಳಿಗೆ , ಕನ್ನಡಿಗರಿಗೆ ಧನ್ಯವಾದ ತಿಳಿಸಿರುವ ಸತ್ಯರಾಜ್ ಅವರು, ಖಳನಾಯಕನ ಪಾತ್ರಗಳಲ್ಲಿಯೂ ಅಭಿನಯಿಸುವ ಆಸಕ್ತಿ ತೋರಿದ್ದಾರೆ.

Related Posts

error: Content is protected !!