Categories
ಸಿನಿ ಸುದ್ದಿ

ರೂಪೇಶ್ ಶೆಟ್ಟಿ ಹೊರಡಿಸಿದ ಹೊಸ ಅಧಿಪತ್ರ! ಹುಟ್ದಬ್ಬಕ್ಕೆ ಸಿನಿಮಾ ಅನೌನ್ಸ್

ಬಿಗ್ ಬಾಸ್ ವಿನ್ನರ್, ರಾಕ್ ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿಗಿಂದು ಜನ್ಮದಿನದ ಸಂಭ್ರಮ. ಅವರ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾ ಅನೌನ್ಸ್ ಮಾಡಲಾಗಿದೆ. ಸರ್ಕಸ್ ಚಿತ್ರದ ಮೂಲಕ ನಟನೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಗುರುತಿಸಿಕೊಂಡಿರುವ ರಾಕ್ ಸ್ಟಾರ್ ಹೊಸ ಹೆಜ್ಜೆಗೆ ಅಧಿಪತ್ರ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.

ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಚಯನ್ ಶೆಟ್ಟಿ ಎಂಬುವರು ಅಧಿಪತ್ರ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗ್ತಿರುವ ಅಧಿಪತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.

ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಅಧಿಪತ್ರ ಸಿನಿಮಾವನ್ನು ಮಂಗಳೂರು, ಉಡುಪಿ ಸುತ್ತಮುತ್ತ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

ರೂಪೇಶ್ ಶೆಟ್ಟಿ ಡೇಂಜರ್ ಝೋನ್, ನಿಶ್ಯಬ್ದ-2, ಅನುಷ್ಕಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಅಧಿಪತ್ರ‌ ಮೂಲಕ ಹೊಸ ಬಗೆಯ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರಲಿದ್ದಾರೆ.

Categories
ಸಿನಿ ಸುದ್ದಿ

ತೆಲುಗಿನ ಟೈಗರ್ ನಾಗೇಶ್ವರ್ ರಾವ್ ಸಿನಿಮಾಗೆ ಅನುಪಮ್‌ ಖೇರ್ ಎಂಟ್ರಿ: ಸ್ವಾತಂತ್ರ್ಯ ದಿನಕ್ಕೆ ಫಸ್ಟ್ ಲುಕ್ ರಿಲೀಸ್

ತೆಲುಗಿನ ಮಾಸ್ ಮಹಾರಾಜ ರವಿತೇಜ ಅವರ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಟೈಗರ್ ನಾಗೇಶ್ವರ್ ರಾವ್ ಅಂಗಳಕ್ಕೆ ಬಾಲಿವುಡ್ ದಿಗ್ಗಜ ಅನುಪಮ್ ಖೇರ್ ಎಂಟ್ರಿಯಾಗಿದೆ. ಸ್ವಾತಂತ್ರ್ಯ ದಿನದ ಅಂಗವಾಗಿ ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ಅನುಪಮ್ ಖೇರ್ ಅವರ ಪಾತ್ರ ಹಾಗೂ ಲುಕ್ ಪರಿಚಯಿಸಿದೆ. ಗುಪ್ತಚರ ಇಲಾಖೆಯ ಅಧಿಕಾರಿ ರಾಘವೇಂದ್ರ ರಜಪುತ್ ಪಾತ್ರದಲ್ಲಿ ಅನುಪಮ್ ಖೇರ್ ನಟಿಸುತ್ತಿದ್ದು, ಇದೇ 17ರಿಂದ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ.

70ರ ಕಾಲಘಟ್ಟದ ಹೈದ್ರಾಬಾದ್ ದ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಹಿಂದಿನ ಎಲ್ಲಾ ಚಿತ್ರಕ್ಕಾಗಿ ರವಿತೇಜ ಗೆಟಪ್, ಬಾಡಿ ಲಾಗ್ವೇಜ್ ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಗಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ.

ದಸರಾ ಹಬ್ಬಕ್ಕೆ ಟೈಗರ್ ನಾಗೇಶ್ವರ್ ರಾವ್ ಬಾಕ್ಸಾಫೀಸ್ ಬೇಟೆಗಿಳಿಯಲಿದ್ದು, ಅಂದರೆ ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಸಿನಿಮಾ ಬೆಳ್ಳಿತೆರೆಗಪ್ಪಳಿಸಲಿದೆ. ದಸರಾ ಹಬ್ಬದ ಸಂದರ್ಭ ಹಾಗೂ ದಸರಾ ರಜೆ ಹಿನ್ನೆಲೆ ಪ್ಲಾನ್ ಮಾಡಿಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಮಾಡಲಾಗುತ್ತಿದೆ.

Categories
ಸಿನಿ ಸುದ್ದಿ

ಪರಿಮಳ ಡಿಸೋಜಾ ಟ್ರೇಲರ್ ರಿಲೀಸ್- ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ


ಯುವ ಪ್ರತಿಭೆ ವಿನೋದ್ ಶೇಷಾದ್ರಿ ನಟಿಸಿ, ‘ವಿಲೇಜ್ ರೋಡ್ ಫಿಲಂಸ್’ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದೇ ಸೆಪ್ಟೆಂಬರ್ 15ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್, ನಿರ್ಮಾಪಕ ಎಂ.ಎನ್ ಸುರೇಶ್ ಹಾಗೂ ನಟಿ ಭವ್ಯ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಿರ್ಮಾಪಕ ಕಮ್ ನಟ ವಿನೋದ್ ಶೇಷಾದ್ರಿ ಮಾತನಾಡಿ, ‘ಈ ಚಿತ್ರ ನಿರ್ಮಾಣ ಮಾಡುವ ಜೊತೆಗೆ ಪೊಲೀಸ್ ಪಾತ್ರ ಕೂಡ ಮಾಡಿದ್ದೇನೆ. ಜೊತೆಗೆ ಚಿತ್ರದ ಒಂದು ಗೀತೆಗೆ ಸಾಹಿತ್ಯ ಕೂಡ ಬರೆದಿದ್ದೇನೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಒಳಗೊಂಡ ಆ್ಯಕ್ಷನ್, ಸೆಂಟಿಮೆಂಟ್, ಫ್ಯಾಮಿಲಿ ಮನರಂಜನೆ ಇರುವ ಕೌಟುಂಬಿಕ ಚಿತ್ರ. ಚಿತ್ರದಲ್ಲಿ ಒಟ್ಟು 107 ಕಲಾವಿದರು ನಟಿಸಿದ್ದಾರೆ’ ಎಂದು ಹೇಳಿದರು.

ನಿರ್ದೇಶಕ ಡಾ.ಗಿರಿಧರ್ ಹೆಚ್ ಟಿ. ಮಾತನಾಡಿ ‘ಇದೊಂದು ಸಾಂಸಾರಿಕ ಕಥೆ ಒಳಗೊಂಡ ಸಿನಿಮಾ. ಹಿಂದೂ ಕುಟುಂಬದ ಮನೆಗೆ ಕ್ರಿಶ್ಚಿಯನ್ ಹುಡುಗಿ ಸೊಸೆಯಾಗಿ ಬರುತ್ತಾರೆ. ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ಒಂದು ಘಟನೆ ನಡೆಯುತ್ತದೆ ಆ ಘಟನೆ ಏನು? ಅದರಿಂದ ಏನೆಲ್ಲಾ ಆಗುತ್ತದೆ ಎಂಬುದೇ ಈ ಚಿತ್ರದ ಕಥಾವಸ್ತು. ಇದರಲ್ಲಿ ಹೀರೋ ಅಂತ ಯಾರು ಇಲ್ಲ ಕಥೆಯೇ ನಾಯಕ ಎಂದರು.

‘ಇದೊಂದು ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾ. ಸೆಪ್ಟೆಂಬರ್ 15ರಂದು ಸಿನಿಮಾ ರಿಲೀಸ್ ಆಗಲಿದೆ. ಅದ್ಭುತವಾಗಿ ಸಿನಿಮಾ ಮೂಡಿ ಬಂದಿದೆ’ ಎಂದು ಹೇಳಿದರು ನಟಿ ಭವ್ಯ.

ಇದೇ ಸಂದರ್ಭದಲ್ಲಿ ಕಲಾವಿದರಾದ ಕೋಮಲ ಬನವಾಸೆ, ಸುನೀಲ್ ಮೋಹಿತ್, ರೋಹಿಣಿ ಜಗನ್ನಾಥ, ಚಂದನಾ ಶ್ರೀನಿವಾಸ, ಶಿವಕುಮಾರ ಆರಾಧ್ಯ ಹಾಗೂ ಸಂಕಲನಕಾರ ಸಂಜೀವ ರೆಡ್ಡಿ, ಗಾಯಕಿ ಶೃತಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

Categories
ಸಿನಿ ಸುದ್ದಿ

ಆಗಸ್ಟ್ 17ಕ್ಕೆ ಮೈಸೂರಲ್ಲಿ ವಾಮನ ಟೀಸರ್ ರಿಲೀಸ್

ನಟ ಧನ್ವೀರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ವಾಮನ” ಚಿತ್ರದ ಆಕ್ಷನ್ ಟೀಸರ್ ಆಗಸ್ಟ್ 17 ರಂದು ಮೈಸೂರಿನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಹಿಟ್ ಆಗಿದೆ. ಸದ್ಯ ಆಕ್ಷನ್ ಟೀಸರ್ ಬಿಡುಗಡೆಯಾಗಲಿದ್ದು, ಅದೇ ದಿನ ಚಿತ್ರತಂಡದಿಂದ ಬಿಗ್ ಅನೌನ್ಸ್ ಮೆಂಟ್ ಸಹ ಇದೆ.

EQUINOX GLOBAL ENTERTAINMENT ಲಾಂಛನದಲ್ಲಿ ಚೇತನ್ ಗೌಡ ಅವರು ನಿರ್ಮಿಸಿರುವ ಮೊದಲ ಚಿತ್ರವಿದು.

ಶಂಕರ್ ರಾಮನ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ನೀಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನವಿದೆ.

ಭೂಷಣ್ ನೃತ್ಯ ನಿರ್ದೇಶನ, ಅರ್ಜುನ್ ರಾಜ್, ವಿಕ್ರಂ ಮೋರ್ ಹಾಗೂ ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಹಾಗೂ ನವೀನ್ ಹಾಡೋನಳ್ಳಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಧನ್ವೀರ್ ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತಕುಮಾರ್, ಕಾಕ್ರೋಜ್ ಸುಧಿ, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆ.ಆರ್ ಪೇಟೆ, ಕೆ.ಜಿ.ಸಚ್ಚು, ಅರುಣ್ ಶ್ರೀರಾಮಯ್ಯ ಮುಂತಾದವರು “ವಾಮನ” ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹಯ್ಯೋಡಾ ಅಂದ್ರು ಶಾರುಖ್ ಖಾನ್: ಜವಾನ್ ಸಿನಿಮಾ ಹಾಡು ರಿಲೀಸ್

ಹಲವು ಪ್ರೇಮಕಥೆಯಾಧಾರಿತ ಚಿತ್ರಗಳು ಮತ್ತು ಹಾಡುಗಳಲ್ಲಿ ಅಭಿನಯಿಸುವ ಮೂಲಕ ‘ಕಿಂಗ್ ಆಫ್ ರೊಮ್ಯಾನ್ಸ್’ ಎಂಬ ಬಿರುದಿಗೆ ಭಾಜನರಾದವರು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್. ಆ ಬಿರುದನ್ನು ನಿಜಗೊಳಿಸುವಂತೆ ಅವರು ಇನ್ನೊಮ್ಮೆ ಒಂದು ಅದ್ಭುತ ಗೀತೆಯೊಂದಿಗೆ ವಾಪಸ್ಸಾಗಿದ್ದಾರೆ.
‘ಜವಾನ್’ ಚಿತ್ರದ ‘ಹಯ್ಯೋಡಾ’ ಎಂಬ ಹಾಡು ಬಿಡುಗಡೆಯಾಗಿದೆ.

ಭಾರತೀಯ ಚಿತ್ರರಂಗದದಲ್ಲೇ ಹಲವು ರೊಮ್ಯಾಂಟಿಕ್ ಮತ್ತು ಮಧುರಗೀತೆಗಳಿಗೆ ಜನಪ್ರಿಯರಾದ ಶಾರುಖ್ ಖಾನ್ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಅನಿರುದ್ಧ್ ರವಿಚಂದರ್ ಸಂಯೋಜಿಸಿದ್ದು, ಅನಿರುದ್ಧ್ ಮತ್ತು ಪ್ರಿಯಾ ಮಾಲಿ ಹಾಡಿದ್ದಾರೆ. ಈ ಸುಮಧುರ ಹಾಡಿಗೆ ವಿವೇಕ್ ಸಾಹಿತ್ಯ ರಚಿಸಿದ್ದಾರೆ.


ಇದೇ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡಿರುವ ಶಾರುಖ್ ಖಾನ್ ಮತ್ತು ನಯನತಾರಾ, ತೆರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ಅಭಿನಯದಿಂದ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು, ಭಾರತೀಯ ಚಿತ್ರರಂಗದ ಜನಪ್ರಿಯ ಕೊರಿಯೋಗ್ರಾಫರ್ ಆಗಿರುವಂತಹ ಫರಾ ಖಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ.


‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸಿದರೆ, ಗೌರವ್ ವರ್ಮಾ ಸಹನಿರ್ಮಾಪಕರಾಗಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶಿಸಿರುವ ಈ ಚಿತ್ರವು ಜಗತ್ತಿನಾದ್ಯಂತ ಸೆಪ್ಟೆಂಬರ್ 7ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

Categories
ಸಿನಿ ಸುದ್ದಿ

ಡಿ ಜೆ ಸೌಂಡು ಶುರು ಗುರು! ಮತ್ತೆ ಬಂದ ಚಕ್ರವರ್ತಿ ಚಂದ್ರಚೂಡ: ನಿರ್ದೇಶನದ ಸಿನಿಮಾಗೆ ಮಿಲಿಂದ್ ಗೌತಮ್ ಹೀರೋ

ಪತ್ರಕರ್ತ, ಉತ್ತಮ ಮಾತುಗಾರ, ನಟ ಮತ್ತು ನಿರ್ದೇಶಕ ಬಿಗ್ ಬಾಸ್ ಖ್ಯಾತಿಯ ಡಿ.ಜೆ. ಚಕ್ರವರ್ತಿ ಚಂದ್ರಚೂಡ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪತ್ರಕರ್ತರಾಗಿ ಗುರುತಿಸಿಕೊಂಡು, ಸಾಹಿತ್ಯ ಲೋಕದಲ್ಲೂ ಮಿಂದೆದ್ದು, ಬಣ್ಣದ ಲೋಕವನ್ನೂ ಸ್ಪರ್ಶಿಸಿ ಸದ್ದು ಮಾಡಿದವರು. ಈಗ ಮತ್ತೊಂದು ಹೊಸ ಇನ್ನಿಂಗ್ಸ್ ಶುರುವಿಗೆ ಸಜ್ಜಾಗುತ್ತಿದ್ದಾರೆ.

ಹೌದು, ಚಕ್ರವರ್ತಿ ಚಂದ್ರಚೂಡ್ ನಿರ್ದೇಶನಕ್ಕಿಳಿಯುತ್ತಿದ್ದಾರೆ. ನಿರ್ದೇಶನ ಅವರಿಗೆ ಹೊಸದಲ್ಲ. ಈ ಬಾರಿ ಹೊಸತನದ ಕಥೆಯೊಂದಿಗೆ ಎಂಟ್ರಿಕೊಡುತ್ತಿದ್ದಾರೆ. ಮಯೂರ ಮೋಷನ್ ಪಿಕ್ಚರ್ಸ್‌ ನಿರ್ಮಾಣದ ನೂತನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವ .ಜೆ.ಚಕ್ರವರ್ತಿ ಸಿನಿಮಾಗೆ ಮಂಜುನಾಥ್ ಡಿ ನಿರ್ಮಾಪಕರು. ಅವರು ಅನ್ ಲಾಕ್ ರಾಘವ ನಂತರ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ.

ಇನ್ನು ಮಿಲಿಂದ್ ಗೌತಮ್ ನಾಯಕ. ಡಿ.ಜೆ. ಚಕ್ರವರ್ತಿ ಚಂದ್ರಚೂಡ್ ಏಳು ವರ್ಷಗಳ ನಂತರ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ವಿಶೇಷ.

“ಅನ್ ಲಾಕ್ ರಾಘವ” ನಂತರ ಮಿಲಿಂದ್ ಗೌತಮ್ ಅವರು ಸತತ ಮೂರು ತಿಂಗಳುಗಳಿಂದ ಈ ಹೊಸ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಬೇರೆ ಬೇರೆ ನಿರ್ದೇಶಕರಿಗೆ ಹಲವು ಸಿನಿಮಾಗಳನ್ನು ಬರೆಯುತ್ತಿರುವ ಚಕ್ರವರ್ತಿ ಈ ಸಿನಿಮಾವನ್ನು ತಾವೇ ಬರೆದು ನಿರ್ದೇಶಿಸುತ್ತಿದ್ದಾರೆ.

ಮಣಿಕಾಂತ್ ಕದ್ರಿ ಸಂಗೀತ, ಮಧು ತುಂಬನಕೆರೆ ಸಂಕಲನ, ಯೋಗೇಶ್ವರನ್ ಛಾಯಾಗ್ರಹಣ, ಕಾರ್ಯಕಾರಿ ನಿರ್ಮಾಪಕರಾಗಿ ಪ್ರಶಾಂತ್ ಬಾಗೂರು, ಡಿಜಿಟಲ್ ಮಾರ್ಕೆಟಿಂಗ್ ಸುನೀಲ್ ಮಾನೆ, ಸಹ ನಿರ್ದೇಶಕರಾಗಿ ಚಂದ್ರಶೇಖರ ಮುದಬಾವಿ ಮುಂತಾದವರ ತಂಡವಿದೆ.

ಈಗಾಗಲೇ ಕದ್ರಿ ಮಣಿಕಾಂತ್ ಹಾಡುಗಳು ಸಂಯೋಜನೆಯಲ್ಲಿದು, ಚಿತ್ರೀಕರಣಕ್ಕೆ ಪೂರ್ವ ತಯಾರಿ ಭರದಿಂದ ಸಾಗಿದೆ.

ಆಗಸ್ಟ್ 18ರಂದು ಟೀಸರ್ ಚಿತ್ರೀಕರಣ ನಡೆಯಲಿದ್ದು, ಸೆಪ್ಟೆಂಬರ್ 2 , ಅಭಿನಯ ಚಕ್ರವರ್ತಿ ಸುದೀಪ್ ರವರ ಹುಟ್ಟಿದ ದಿನದಂದು ಟೀಸರ್ ಬಿಡುಗಡೆ ಮಾಡಲಿದ್ದಾರೆ.

ನಿರ್ದೇಶಕರ ಹುಟ್ಟುಹಬ್ಬದಂದು(ಆಗಸ್ಟ್ 15) ಟೀಮ್ ಅನೌನ್ಸ್ ಆಗಲಿದೆ. ಈ ಪೋಸ್ಟರ್ ನಲ್ಲಿರುವ ಸ್ಕ್ಯಾನ್ ಮಾಡಿ ಮ್ಯಾಜಿಕ್ ನೋಡಿ! ನಿಮಗೊಂದು ಅಪರೂಪದ ವಿಷಯ ಸಿಗಲಿದೆ.

Categories
ಸಿನಿ ಸುದ್ದಿ

ಉಪೇಂದ್ರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಗೆ ಹೈಕೋರ್ಟ್ ತಡೆ

ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ ಅವರು ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ, ದಲಿತ ಸಮುದಾಯ ಕುರಿತ ಪದ ಬಳಕೆ ಮಾಡಿದ್ದರ ವಿರುದ್ಧ ದಾಖಲಾಗಿದ್ದ ಕೇಸ್ ಗೆ ಹೈಕೋರ್ಟ್ ತಡೆ ನೀಡಿದೆ.

ಉಪೇಂದ್ರ ಆಡಿದ ಮಾತಿನಿಂದ ಆ ಸಮುದಾಯದವರ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪಿಸಿ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಾಗಿತ್ತು.

ಈ ಕುರಿತು ಉಪೇಂದ್ರ ಅವರು ದೂರು ರದ್ದು ಪಡಿಸುವಂತೆ ಮನವಿ ಮಾಡಿ , ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು, ಉಪೇಂದ್ರ ಅವರು ಯಾವುದೇ ಸಮುದಾಯಕ್ಕೆ ನೋವುಂಟು ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡಿರಲಿಲ್ಲ. ಆಕಸ್ಮಿಕವಾಗಿ ಗಾದೆ ಮಾತಿನ ಪದ ಬಳಕೆ ಮಾಡಿದ್ದಾರೆ. ಆದರೂ ಅವರು ಕ್ಷಮೆ‌ ಕೋರಿ, ಮಾತಾಡಿದ ವಿಡಿಯೋ ಡಿಲೀಟ್ ಮಾಡಿದ್ದಾರೆ. ಹಾಗಾಗಿ ದಾಖಲಾಗಿರುವ ಪ್ರಕರಣಕ್ಕೆ ತಡೆ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ‌ ಮಾಡಿದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ ತಡೆಯಾಜ್ಞೆ ನೀಡಿದೆ.

ಈ ಬಗ್ಗೆ ತಮ್ಮ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಉಪೇಂದ್ರ, ‘ಅನ್ಯಾಯದ ಅನುಮಾನಕ್ಕೆ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ, ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ, ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹ್ರದಯಗಳು ಹಿಡಿದ ಪ್ರೀತಿಯ ಕೊಡೆ, ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹ್ರದಯ ನನಗೆ ಕೊಡೆ ತಾಯಿ ನನಗೆ ಕೊಡೆ’ ಎಂದು ಧನ್ಯವಾದ ಹೇಳಿದ್ದಾರೆ.

Categories
ಸಿನಿ ಸುದ್ದಿ

ಯಜಮಾನ ಪ್ರೀಮಿಯರ್ ಲೀಗ್ ಸೀಸನ್-2’ ಕಪ್ ಗೆದ್ದ ಕೋಟಿಗೊಬ್ಬ ಕಿಂಗ್ಸ್; ದಚ್ಚು ಅಭಿಮಾನಿ ತಂಡ ರನ್ನರ್ ಅಪ್

ಸಾಹಸಸಿಂಹ ಡಾ.ವಿಷ್ಣುವರ್ಧನ್ ಹೆಸರಿನಡಿ ಆಯೋಜಿಸಲಾಗಿದ್ದ ‘ಯಜಮಾನ ಪ್ರೀಮಿಯರ್ ಲೀಗ್ ಸೀಸನ್-2’ ಟ್ರೋಫಿಯನ್ನು ಸುದೀಪ್ ಅಭಿಮಾನಿಗಳ ತಂಡ ಕೋಟಿಗೊಬ್ಬ ಕಿಂಗ್ಸ್ ಎತ್ತಿ ಹಿಡಿದ್ರೆ, ದರ್ಶನ್ ಅಭಿಮಾನಿಗಳ ಸೂರ್ಯವಂಶ ಸ್ಟ್ರೈಕರ್ಸ್ ರನ್ನರ್ ಆಗಿ ಹೊರಹೊಮ್ಮಿದೆ.

ಸ್ಯಾಂಡಲ್ ವುಡ್ ನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಶುರು ಮಾಡಿದ ಕೀರ್ತಿ ವಿಷ್ಣುದಾದಾ ಅವರಿಗೆ ಸಲ್ಲುತ್ತದೆ. ಸಿನಿಮಾ ತಂಡಗಳನ್ನು ಕಟ್ಟಿಕೊಂಡು ವಿಷ್ಣು ಸದಾ ಕ್ರಿಕೆಟ್ ಆಡುತ್ತಿದ್ದರು. ವೃತ್ತಿಪರ ಕ್ರಿಕೆಟ್ ಆಟಗಾರರ ಜೊತೆಯೂ ಅವರು ಪಂದ್ಯಾವಳಿಗಳನ್ನು ಆಡಿದ್ದೂ ಇದೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಕೂಡ ‘ಯಜಮಾನ ಪ್ರೀಮಿಯರ್ ಲೀಗ್’ (YPL) ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ.

ಈ ಹಿಂದೆ ಜೂನ್ ನಲ್ಲಿಯೇ ಯಜಮಾನ ಪ್ರೀಮಿಯರ್ ಲೀಗ್ ಸೀಸನ್ 2 ಆಯೋಜನೆ ಆಗಿತ್ತು. ಮಳೆ ಮತ್ತು ಇತರ ಕಾರಣಗಳಿಂದಾಗಿ ಅದು ಮುಂದೂಡಲ್ಪಟ್ಟಿತ್ತು. ಬೆಂಗಳೂರಿನ ಬಿಐಸಿಸಿ ಇನ್ಫಿನಿಟಿ ಔಟ್ ಡೋರ್ ಗ್ರೌಂಡ್ ನಲ್ಲಿ ಇದೇ 12 ಮತ್ತು 13 ಎರಡು ದಿನಗಳ ಯಜಮಾನ ಪ್ರೀಮಿಯರ್ ಲೀಗ್ ಸೀಸನ್ 2 ಏರ್ಪಡಿಸಲಾಗಿತ್ತು.

ಡಾ.ವಿಷ್ಣು ಸೇನಾ ಸಮಿತಿಯು ಹಮ್ಮಿಕೊಂಡಿದ್ದ ಎರಡನೇ ಸೀಸನ್ ಇದಾಗಿದ್ದು, ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಪಂದ್ಯಾವಳಿ ನಡೆದಿದೆ. ಒಟ್ಟು 12 ತಂಡಗಳು ಭಾಗಿಯಾಗಿದ್ದು, ಈ ಪೈಕಿ ಕೋಟಿಗೊಬ್ಬ ಕಿಂಗ್ಸ್ ಗೆಲುವು ತನ್ನದಾಗಿಸಿಕೊಂಡಿದೆ.

ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಟರಾದ ವಸಿಷ್ಠ ಸಿಂಹ, ಡಾರ್ಲಿಂಗ್ ಕೃಷ್ಣ, ರವಿಶಂಕರ್ ಗೌಡ, ಬಾಲಾಜಿ, ಶ್ರೇಯಸ್ ಮಂಜು, ನಟಿ ಮಿಲನಾ ನಾಗರಾಜ್ ಸೇರಿದಂತೆ ಹಲವಾರು ಕಲಾವಿದರು ಭಾಗಿಯಾದರೆ,

ನಿರ್ದೇಶಕರಾದ ಶಶಾಂಕ್, ನವೀನ್ ಕೃಷ್ಣ, ರಘು ರಾಮ್ ಮತ್ತು ಇತರ ನಿರ್ದೇಶಕರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಮತ್ತು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Categories
ಸಿನಿ ಸುದ್ದಿ

ನಟ ಉಪೇಂದ್ರ ವಿರುದ್ಧ ಅಟ್ರಾಸಿಟಿ ಕೇಸ್: ಆ ಮಾತಿಂದ ನನಗೆ ಯಾವ ಲಾಭವೂ ಇಲ್ಲ, ಯಾಕಿಷ್ಟು ದ್ವೇಷ ? : ಉಪ್ಪಿ

ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ ಅವರು ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ, ದಲಿತ ಸಮುದಾಯ ಕುರಿತ ಪದ ಬಳಕೆಯೊಂದನ್ನು ಮಾಡಿದ್ದು, ಅದು ಆ ಸಮುದಾಯದವರ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪ ಮಾಡಿ, ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬೆಂಗಳೂರು ದಕ್ಷಿಣ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ ಎಸ್ ಮಧುಸೂದನ್ ಅವರು ಈ ಸಂಬಂಧ ದೂರು ನೀಡಿದ್ದು, ಆ ಹಿನ್ನೆಲೆಯಲ್ಲಿ ಉಪೇಂದ್ರ ಅವರ ವಿರುದ್ಧ ದೂರು ದಾಖಲಾಗಿದೆ.

ಉಪೇಂದ್ರ ಅವರು ನೇರ ಪ್ರಸಾರದಲ್ಲಿ ಮಾತನಾಡುವ ಸಂದರ್ಭದಲ್ಲಿ ‘ಊರು ಎಂದರೆ ಹೊಲಗೇರಿ ಇರುತ್ತದೆ’ ಎಂಬ ಪದ ಬಳಿಸಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ನಟನರಾಗಿ ಅವರು ಮಾದರಿಯಾಗಿರಬೇಕಿತ್ತು. ಅವರನ್ನು ಅನುಕರಣೆ ಮಾಡುವವರು ಕೂಡ ಇದೇ ಹಾದಿ ತುಳಿದರೆ, ಸಮಾಜದಲ್ಲಿ ಎಲ್ಲವೂ ಹಾಳಾಗುತ್ತದೆ ಉಪೇಂದ್ರ ಅವರ ಮಾತಿನಿಂದ ದಲಿತರ ಭಾವನೆಗಳಿಗೆ ನೋವಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ದೂರು ನೀಡಿದ್ದಾರೆ.

ಈ ಬಗ್ಗೆ ತಮ್ಮ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಉಪೇಂದ್ರ, ಹೀಗೆ ಅವಹೇಳನಕಾರಿಯಾಗಿ ಮಾತನಾಡುವುದರಿಂದ ತಮಗೆ ಸಿಗುವ ಲಾಭವಾದರೂ ಏನೂ ಇಲ್ಲ. ನಾನು ಮಾತಿನ ವೇಳೆ ಹೇಳಿದ್ದರೂ, ಅದು ಉದ್ದೇಶ ಪೂರ್ವಕವಲ್ಲ. ಅಷ್ಟಕ್ಕೂ ವಿಡಿಯೋ ಡಿಲೀಟ್ ಮಾಡಿದ್ದೇನೆ. ಕ್ಷಮೆ ಕೂಡ ಕೇಳಿದ್ದೇನೆ. ಕ್ಷಮೆ ಸ್ವೀಕರಿಸುವ ದೊಡ್ಡತನ ಇಲ್ಲವೇ? ಎಂದಿದ್ದಾರೆ.

‘ಇಂದು ನನ್ನ ವಿರುದ್ಧ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ. 50 ವರ್ಷಗಳ ಹಿಂದೆ ನನ್ನ ಬಾಲ್ಯ, ನಾನು ಎಂತಹ ಪರಿಸರದಲ್ಲಿ ಬೆಳೆದೆ, ಆ ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ. ಇವೆಲ್ಲವನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ?

ನನಗೆ ಹುಚ್ಚೇ? ಅದಕ್ಕೆ ಕಾರಣವಾದರೂ ಏನು? ಅದರಿಂದ ನನಗೆ ಸಿಗುವ ಲಾಭವಾದರೂ ಏನು? ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ? ಯಾಕೆ ಇಷ್ಟೊಂದು ಧ್ವೇಷ?’ ಎಂದು ಉಪೇಂದ್ರ ಪ್ರಶ್ನಿಸಿದ್ದಾರೆ.

Categories
ಸಿನಿ ಸುದ್ದಿ

ಥ್ರಿಲ್ಲರ್ ಈಗ ಡೆಡ್ಲಿ ಕಿಲ್ಲರ್! ಚಿತ್ರಕ್ಕೆ ಸಿಕ್ತು ಯು/ಎ ಪ್ರಮಾಣ ಪತ್ರ

ಬಹಳ ದಿನಗಳ ನಂತರ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ಡೆಡ್ಲಿ ಕಿಲ್ಲರ್, ಕೀರ್ತಿ ಸಿಲ್ವರ್ ಸ್ಕ್ರೀನ್‌ ಹಾಗೂ ವೇದಿಕ್ ಕಾಸ್ಮಾಸ್ ಮೂಲಕ ಪ್ರಶಾಂತ್ ಟಿ.ತಂಬ್ರಳ್ಳಿಮಠ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಭಿನ್ನವಾದ ಆಕ್ಷನ್, ಥ್ರಿಲ್ಲರ್, ಹಾರರ್ ಕಥಾಹಂದರ ಒಳಗೊಂಡ ಈ ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದ್ದು, ಇತ್ತೀಚೆಗಷ್ಟೇ ಸೆನ್ಸಾರ್ ಪ್ರಕ್ರಿಯೆ ಕೂಡ ಮುಗಿಸಿಕೊಂಡಿದೆ. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಕೊಡದೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.


ಈ ಚಿತ್ರದಲ್ಲಿ ಯುವನಟ ಅಭಯ್‌ವೀರ್ ಹಾಗೂ ನಿವೀಕ್ಷಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಐವರು ವಿಲನ್‌ಗಳ ಜೊತೆ ಹುಡುಗಿಯೊಬ್ಬಳನ್ನು ಪೊಲೀಸರು ಆಂದ್ರ ಪ್ರದೇಶದಲ್ಲಿ ಬಂಧಿಸಿ, ಕರ್ನಾಟಕಕ್ಕೆ ಕರೆತರುವಾಗ ಮಾರ್ಗಮದ್ಯೆ ಕಾಡಲ್ಲಿ ಅವರುಗಳು ಪೋಲೀಸರಿಂದ ಎಸ್ಕೇಪ್ ಆಗುತ್ತಾರೆ, ಅಲ್ಲಿಂದ ಅವರು ರಕ್ಷಣೆಗಾಗಿ ಕಾಡಲ್ಲಿರುವ ಮನೆಯೊಂದಕ್ಕೆ ಹೋಗುತ್ತಾರೆ.

ನಂತರ ಅವರೆಲ್ಲ ಅದೇ ಮನೆಯಲ್ಲಿ ಲಾಕ್ ಆಗಿಬಿಡುತ್ತಾರೆ, ಮುಂದೇನಾಯ್ತು ಅನ್ನೋದೇ ಚಿತ್ರದ ಕುತೂಹಲ. ಈ ಚಿತ್ರದಲ್ಲಿ ಒಟ್ಟು ೩ ಹಾಡುಗಳಿದ್ದು, ವಿನು ಮನಸು ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಅಲ್ಲದೆ ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣ, ದೀಪು ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ೬ ವಿಶಿಷ್ಠವಾದ ಸಾಹಸ ದೃಶ್ಯಗಳಿದ್ದು, ನಿರ್ದೇಶಕ ಥ್ರಿಲ್ಲರ್ ಮಂಜು ಅವರೇ ಎಲ್ಲಾ ಆಕ್ಷನ್ ಗಳನ್ನು ಕಂಪೋಜ್ ಮಾಡಿದ್ದಾರೆ.

ಲೋಕೇಂದ್ರ ಸೂರ್ಯ, ಥ್ರಿಲ್ಲರ್ ಮಂಜು, ಸುನಿಲ್ ಬಾಲ್ಡರ್ ಮುಂತಾದವರು ಈ ಚಿತ್ರದ ಉಳಿದ ಪಾಅತ್ರಗಳಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಡೆಡ್ಲಿ ಕಿಲ್ಲರ್ ಚಿತ್ರವು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

error: Content is protected !!