ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ ಅವರು ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ, ದಲಿತ ಸಮುದಾಯ ಕುರಿತ ಪದ ಬಳಕೆಯೊಂದನ್ನು ಮಾಡಿದ್ದು, ಅದು ಆ ಸಮುದಾಯದವರ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪ ಮಾಡಿ, ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು ದಕ್ಷಿಣ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ ಎಸ್ ಮಧುಸೂದನ್ ಅವರು ಈ ಸಂಬಂಧ ದೂರು ನೀಡಿದ್ದು, ಆ ಹಿನ್ನೆಲೆಯಲ್ಲಿ ಉಪೇಂದ್ರ ಅವರ ವಿರುದ್ಧ ದೂರು ದಾಖಲಾಗಿದೆ.
ಉಪೇಂದ್ರ ಅವರು ನೇರ ಪ್ರಸಾರದಲ್ಲಿ ಮಾತನಾಡುವ ಸಂದರ್ಭದಲ್ಲಿ ‘ಊರು ಎಂದರೆ ಹೊಲಗೇರಿ ಇರುತ್ತದೆ’ ಎಂಬ ಪದ ಬಳಿಸಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ನಟನರಾಗಿ ಅವರು ಮಾದರಿಯಾಗಿರಬೇಕಿತ್ತು. ಅವರನ್ನು ಅನುಕರಣೆ ಮಾಡುವವರು ಕೂಡ ಇದೇ ಹಾದಿ ತುಳಿದರೆ, ಸಮಾಜದಲ್ಲಿ ಎಲ್ಲವೂ ಹಾಳಾಗುತ್ತದೆ ಉಪೇಂದ್ರ ಅವರ ಮಾತಿನಿಂದ ದಲಿತರ ಭಾವನೆಗಳಿಗೆ ನೋವಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ದೂರು ನೀಡಿದ್ದಾರೆ.
ಈ ಬಗ್ಗೆ ತಮ್ಮ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಉಪೇಂದ್ರ, ಹೀಗೆ ಅವಹೇಳನಕಾರಿಯಾಗಿ ಮಾತನಾಡುವುದರಿಂದ ತಮಗೆ ಸಿಗುವ ಲಾಭವಾದರೂ ಏನೂ ಇಲ್ಲ. ನಾನು ಮಾತಿನ ವೇಳೆ ಹೇಳಿದ್ದರೂ, ಅದು ಉದ್ದೇಶ ಪೂರ್ವಕವಲ್ಲ. ಅಷ್ಟಕ್ಕೂ ವಿಡಿಯೋ ಡಿಲೀಟ್ ಮಾಡಿದ್ದೇನೆ. ಕ್ಷಮೆ ಕೂಡ ಕೇಳಿದ್ದೇನೆ. ಕ್ಷಮೆ ಸ್ವೀಕರಿಸುವ ದೊಡ್ಡತನ ಇಲ್ಲವೇ? ಎಂದಿದ್ದಾರೆ.
‘ಇಂದು ನನ್ನ ವಿರುದ್ಧ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ. 50 ವರ್ಷಗಳ ಹಿಂದೆ ನನ್ನ ಬಾಲ್ಯ, ನಾನು ಎಂತಹ ಪರಿಸರದಲ್ಲಿ ಬೆಳೆದೆ, ಆ ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ. ಇವೆಲ್ಲವನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ?
ನನಗೆ ಹುಚ್ಚೇ? ಅದಕ್ಕೆ ಕಾರಣವಾದರೂ ಏನು? ಅದರಿಂದ ನನಗೆ ಸಿಗುವ ಲಾಭವಾದರೂ ಏನು? ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ? ಯಾಕೆ ಇಷ್ಟೊಂದು ಧ್ವೇಷ?’ ಎಂದು ಉಪೇಂದ್ರ ಪ್ರಶ್ನಿಸಿದ್ದಾರೆ.