ಯಜಮಾನ ಪ್ರೀಮಿಯರ್ ಲೀಗ್ ಸೀಸನ್-2’ ಕಪ್ ಗೆದ್ದ ಕೋಟಿಗೊಬ್ಬ ಕಿಂಗ್ಸ್; ದಚ್ಚು ಅಭಿಮಾನಿ ತಂಡ ರನ್ನರ್ ಅಪ್

ಸಾಹಸಸಿಂಹ ಡಾ.ವಿಷ್ಣುವರ್ಧನ್ ಹೆಸರಿನಡಿ ಆಯೋಜಿಸಲಾಗಿದ್ದ ‘ಯಜಮಾನ ಪ್ರೀಮಿಯರ್ ಲೀಗ್ ಸೀಸನ್-2’ ಟ್ರೋಫಿಯನ್ನು ಸುದೀಪ್ ಅಭಿಮಾನಿಗಳ ತಂಡ ಕೋಟಿಗೊಬ್ಬ ಕಿಂಗ್ಸ್ ಎತ್ತಿ ಹಿಡಿದ್ರೆ, ದರ್ಶನ್ ಅಭಿಮಾನಿಗಳ ಸೂರ್ಯವಂಶ ಸ್ಟ್ರೈಕರ್ಸ್ ರನ್ನರ್ ಆಗಿ ಹೊರಹೊಮ್ಮಿದೆ.

ಸ್ಯಾಂಡಲ್ ವುಡ್ ನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಶುರು ಮಾಡಿದ ಕೀರ್ತಿ ವಿಷ್ಣುದಾದಾ ಅವರಿಗೆ ಸಲ್ಲುತ್ತದೆ. ಸಿನಿಮಾ ತಂಡಗಳನ್ನು ಕಟ್ಟಿಕೊಂಡು ವಿಷ್ಣು ಸದಾ ಕ್ರಿಕೆಟ್ ಆಡುತ್ತಿದ್ದರು. ವೃತ್ತಿಪರ ಕ್ರಿಕೆಟ್ ಆಟಗಾರರ ಜೊತೆಯೂ ಅವರು ಪಂದ್ಯಾವಳಿಗಳನ್ನು ಆಡಿದ್ದೂ ಇದೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಕೂಡ ‘ಯಜಮಾನ ಪ್ರೀಮಿಯರ್ ಲೀಗ್’ (YPL) ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ.

ಈ ಹಿಂದೆ ಜೂನ್ ನಲ್ಲಿಯೇ ಯಜಮಾನ ಪ್ರೀಮಿಯರ್ ಲೀಗ್ ಸೀಸನ್ 2 ಆಯೋಜನೆ ಆಗಿತ್ತು. ಮಳೆ ಮತ್ತು ಇತರ ಕಾರಣಗಳಿಂದಾಗಿ ಅದು ಮುಂದೂಡಲ್ಪಟ್ಟಿತ್ತು. ಬೆಂಗಳೂರಿನ ಬಿಐಸಿಸಿ ಇನ್ಫಿನಿಟಿ ಔಟ್ ಡೋರ್ ಗ್ರೌಂಡ್ ನಲ್ಲಿ ಇದೇ 12 ಮತ್ತು 13 ಎರಡು ದಿನಗಳ ಯಜಮಾನ ಪ್ರೀಮಿಯರ್ ಲೀಗ್ ಸೀಸನ್ 2 ಏರ್ಪಡಿಸಲಾಗಿತ್ತು.

ಡಾ.ವಿಷ್ಣು ಸೇನಾ ಸಮಿತಿಯು ಹಮ್ಮಿಕೊಂಡಿದ್ದ ಎರಡನೇ ಸೀಸನ್ ಇದಾಗಿದ್ದು, ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಪಂದ್ಯಾವಳಿ ನಡೆದಿದೆ. ಒಟ್ಟು 12 ತಂಡಗಳು ಭಾಗಿಯಾಗಿದ್ದು, ಈ ಪೈಕಿ ಕೋಟಿಗೊಬ್ಬ ಕಿಂಗ್ಸ್ ಗೆಲುವು ತನ್ನದಾಗಿಸಿಕೊಂಡಿದೆ.

ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಟರಾದ ವಸಿಷ್ಠ ಸಿಂಹ, ಡಾರ್ಲಿಂಗ್ ಕೃಷ್ಣ, ರವಿಶಂಕರ್ ಗೌಡ, ಬಾಲಾಜಿ, ಶ್ರೇಯಸ್ ಮಂಜು, ನಟಿ ಮಿಲನಾ ನಾಗರಾಜ್ ಸೇರಿದಂತೆ ಹಲವಾರು ಕಲಾವಿದರು ಭಾಗಿಯಾದರೆ,

ನಿರ್ದೇಶಕರಾದ ಶಶಾಂಕ್, ನವೀನ್ ಕೃಷ್ಣ, ರಘು ರಾಮ್ ಮತ್ತು ಇತರ ನಿರ್ದೇಶಕರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಮತ್ತು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Related Posts

error: Content is protected !!