ಉಪೇಂದ್ರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಗೆ ಹೈಕೋರ್ಟ್ ತಡೆ

ಸಾಮಾಜಿಕ ಜಾಲತಾಣದಲ್ಲಿ ನಟ ಉಪೇಂದ್ರ ಅವರು ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ, ದಲಿತ ಸಮುದಾಯ ಕುರಿತ ಪದ ಬಳಕೆ ಮಾಡಿದ್ದರ ವಿರುದ್ಧ ದಾಖಲಾಗಿದ್ದ ಕೇಸ್ ಗೆ ಹೈಕೋರ್ಟ್ ತಡೆ ನೀಡಿದೆ.

ಉಪೇಂದ್ರ ಆಡಿದ ಮಾತಿನಿಂದ ಆ ಸಮುದಾಯದವರ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪಿಸಿ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಾಗಿತ್ತು.

ಈ ಕುರಿತು ಉಪೇಂದ್ರ ಅವರು ದೂರು ರದ್ದು ಪಡಿಸುವಂತೆ ಮನವಿ ಮಾಡಿ , ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು, ಉಪೇಂದ್ರ ಅವರು ಯಾವುದೇ ಸಮುದಾಯಕ್ಕೆ ನೋವುಂಟು ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡಿರಲಿಲ್ಲ. ಆಕಸ್ಮಿಕವಾಗಿ ಗಾದೆ ಮಾತಿನ ಪದ ಬಳಕೆ ಮಾಡಿದ್ದಾರೆ. ಆದರೂ ಅವರು ಕ್ಷಮೆ‌ ಕೋರಿ, ಮಾತಾಡಿದ ವಿಡಿಯೋ ಡಿಲೀಟ್ ಮಾಡಿದ್ದಾರೆ. ಹಾಗಾಗಿ ದಾಖಲಾಗಿರುವ ಪ್ರಕರಣಕ್ಕೆ ತಡೆ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ‌ ಮಾಡಿದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ ತಡೆಯಾಜ್ಞೆ ನೀಡಿದೆ.

ಈ ಬಗ್ಗೆ ತಮ್ಮ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಉಪೇಂದ್ರ, ‘ಅನ್ಯಾಯದ ಅನುಮಾನಕ್ಕೆ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ, ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ, ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹ್ರದಯಗಳು ಹಿಡಿದ ಪ್ರೀತಿಯ ಕೊಡೆ, ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹ್ರದಯ ನನಗೆ ಕೊಡೆ ತಾಯಿ ನನಗೆ ಕೊಡೆ’ ಎಂದು ಧನ್ಯವಾದ ಹೇಳಿದ್ದಾರೆ.

Related Posts

error: Content is protected !!