ಕನ್ನಡದಲ್ಲಿ ಈಗಾಗಲೇ ಅನೇಕ ಸದಭಿರುಚಿಯ ಸಿನಿಮಾಗಳು ಬಂದಿವೆ. ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಜಾನರ್ ಇರುವ ಸಿನಿಮಾಗಳೂ ಸುದ್ದಿಯಾಗಿವೆ. ಈಗ ಕನ್ನಡ ಸಿನಿಮಾರಂಗದಲ್ಲಿ ಮತ್ತೊಂದು ‘ದಂತಕಥೆ’ ಶುರುವಾಗಲಿದೆ
ಹೌದು, ದಂತಕಥೆ ಸಿನಿಮಾ ಮೋಷನ್ ಪೋಸ್ಟರ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅನಾವರಣಗೊಳಿಸುವುದರ ಜೊತೆಗೆ ಇಡೀ ಚಿತ್ರತಂಡಕ್ಕೆ ಶುಭ ಕೋರಿದರು.
ಅಂದಹಾಗೆ, ದಂತಕಥೆ ಅಂದರೆ, ಅದೊಂದು, ಜಾನಪದ ಸಾಹಿತ್ಯದ ಪ್ರಾಕಾರ. ಇತಿಹಾಸದಲ್ಲಿ ನಡೆದ ಘಟನೆಯನ್ನು , ನಂಬಲಸಾಧ್ಯವಾದ ವಿಷಯ ಒಳಗೊಂಡಿರುವುದಕ್ಕೆ ದಂತಕಥೆ ಎನ್ನುತ್ತಾರೆ. ತಾರದ ಸಿನಿಮಾ ನಂತರ ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ದಂತಕಥೆ ಹುಟ್ಟಿಕೊಳ್ಳಲಿದೆ ಎಂಬುದು ವಿಶೇಷ.
ಈ ದಂತಕಥೆಗೆ ನಟ ರಘುಮುಖರ್ಜಿ ಹಾಗೂ ಕಿಶೋರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಮೋಷನ್ ಪೋಸ್ಟರ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಿಡುಗಡೆ ಮಾಡಿದ್ದಾರೆ.
ವಚನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹಲ್ಮಿಡಿ ಪ್ರೊಡಕ್ಷನ್ ಹಾಗೂ ಜನರತ್ನ ಪ್ರೊಡಕ್ಷನ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ.
ಮೋಷನ್ ಪೋಸ್ಟರ್ ನ ಕೊನೆಯಲ್ಲಿ ” ಇನ್ವೆಸ್ಟಿಗೇಷನ್ ಶುರು ” ಎನ್ನುವ ಲೈನ್ ಸದ್ಯ ಕುತೂಹಲ ಮೂಡಿಸಿದೆ. ಆದಷ್ಟು ಬೇಗ ದಂತಕಥೆಯನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ತಯಾರಿ ನಡೆಸಿದೆ.
ನಟ ವಿಜಯ ರಾಘವೇಂದ್ರ ಅವರು “ಜೋಗ್ 101” ಎಂಬ ಹೊಸ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದ ಫಸ್ಟ್ ಲುಕ್ ಕುತೂಹಲ ಮೂಡಿಸಿದ್ದು, ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ.
ಸೆವೆನ್ ಸ್ಟಾರ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ರಘು (ರಾಘವೇಂದ್ರ ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಜಯ್ ಕನ್ನಡಿಗ ಈ ಚಿತ್ರದ ನಿರ್ದೇಶಕರು.
ಸದ್ದಿಲ್ಲದೆ ಚಿತ್ರೀಕರಣ ಮುಗಿಸಿರುವ “ಜೋಗ್ 101” ಚಿತ್ರ ಈಗಾಗಲೇ ಬಿಡುಗಡೆಯ ಸನಿಹದಲ್ಲಿದೆ. ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಮೊದಲ ಹೆಜ್ಜೆಯಾಗಿ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಮುಂದೆ ಟೀಸರ್, ಹಾಡುಗಳು ಹಾಗೂ ಟ್ರೇಲರ್ ಸಹ ಬರಲಿದೆ.
ಅವಿನಾಶ್ ಆರ್ ಬಾಸೂತ್ಕರ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ವಿ.ನಾಗೇಂದ್ರಪ್ರಸಾದ್, ಜಯಂತ್ ಕಾಯ್ಕಿಣಿ ಹಾಗೂ ಮನ್ವರ್ಷಿ ನವಲಗುಂದ ಬರೆದಿದ್ದಾರೆ. ರಘು ದೀಕ್ಷಿತ್ ಮತ್ತು ಸಂಚಿತ್ ಹೆಗಡೆ ಹಾಡಿದ್ದಾರೆ. ಸುನೀತ್ ಹಲಗೇರಿ ಛಾಯಾಗ್ರಹಣ, ಮೋಹನ್ ರಂಗಕಹಳೆ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಕಲೈ ಮಾಸ್ಟರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶೇಖರ್ ನಟಿಸಿದ್ದಾರೆ. ಗೋವಿಂದೇ ಗೌಡ, ಕಡ್ಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ, ಶಶಿಧರ್, ಪ್ರಸನ್ನ, ಸುಂದರಶ್ರೀ, ಹರ್ಷಿತಾ ಗೌಡ “ಜೋಗ್ 101” ಚಿತ್ರದ ತಾರಾಬಳಗದಲ್ಲಿದ್ದಾರೆ.
ಟಿ.ಸಿ.ರವೀಂದ್ರ ತುಂಬರಮನೆ ನಿರ್ಮಾಣದ, ರಮೇಶ್ ಬೇಗಾರ್ ನಿರ್ದೇಶನದ ” ಜಲಪಾತ” ಚಿತ್ರಕ್ಕಾಗಿ ರಮೇಶ್ ಬೇಗಾರ್ ಅವರೆ ಬರೆದಿರುವ “ಎದೆಯ ದನಿಯ ಹಾಡು ಕೇಳು” ಎಂಬ ಪರಿಸರದ ಕುರಿತಾದ ಹಾಡು ಇತ್ತೀಚೆಗೆ ಎ2 ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿದೆ. ಗಾಯಕ ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಸಾದ್ವಿನಿ ಕೊಪ್ಪ ಸಂಗೀತ ನೀಡಿದ್ದಾರೆ. ಗಾಯಕಿಯಾಗಿ ಜನಪ್ರಿಯರಾಗಿರುವ ಸಾದ್ವಿನಿ, ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿದ್ದಾರೆ. ಖ್ಯಾತ ಗಾಯಕ ನಗರ ಶ್ರೀನಿವಾಸ ಉಡುಪ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
“ಜಲಪಾತ” ನನ್ನ ಎರಡನೇ ನಿರ್ದೇಶನದ ಚಿತ್ರ. ಪರಿಸರದ ಕುರಿತು ಜಗೃತಿ ಮೂಡಿಸುವ ಹಾಡುಗಳು ಸಾಕಷ್ಟು ಬಂದಿದೆ. ಆದರೆ ಈ ಹಾಡು ಸ್ವಲ್ಪ ವಿಭಿನ್ನ. ಮೊದಲ ನುಡಿಯಲ್ಲಿ ಪರಿಸರ ನಮಗೆ ಏನೆಲ್ಲಾ ನೀಡಿದೆ ಎಂದು ಇದೆ. ಎರಡನೇ ನುಡಿಯಲ್ಲಿ ನಮ್ಮಿಂದ ಪರಿಸರ ಏನಾಗುತ್ತಿದೆ ಎಂದಿದೆ. ವಿಜಯ್ ಪ್ರಕಾಶ್ ಅವರ ಕಂಠದಲ್ಲಿ ಈ ಹಾಡನ್ನು ಕೇಳುವುದೆ ಸೊಗಸು. ಅಷ್ಟೇ ಚೆನ್ನಾಗಿ ಸಾದ್ವಿನಿ ಸಂಗೀತ ನೀಡಿದ್ದಾರೆ. ರಜನೀಶ್, ನಾಗಶ್ರೀ ಬೇಗಾರ್ ಈ ಚಿತ್ರದ ನಾಯಕ, ನಾಯಕಿ. ಪ್ರಮೋದ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ .ಮಲೆನಾಡ ರಂಗಭೂಮಿ ಪ್ರತಿಭೆಗಳು ಹೆಚ್ಚಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ದೇಶಕ ರಮೇಶ್ ಬೇಗಾರ್ ತಿಳಿಸಿದರು.
ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಅವರು ನನ್ನ ಗುರುಗಳು ಎಂದು ಮಾತು ಪ್ರಾರಂಭಿಸಿದ ನಿರ್ಮಾಪಕ ರವೀಂದ್ರ ತುಂಬರಮನೆ, ಪರಿಸರದ ಬಗ್ಗೆ ಅರಿವು ಮೂಡಿಸುವ ಚಿತ್ರ ನಿರ್ಮಿಸಬೇಕೆಂಬ ಹಂಬಲದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಮಲೆನಾಡ ಸೊಗಡಿನ ಈ ಚಿತ್ರ ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು.
ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಕೆಲವು ಬಿಟ್ಸ್ ಗಳಿದೆ. ಈ ಹಾಡಿನ ಸಾಹಿತ್ಯ ನೋಡಿ ಈ ಹಾಡಿಗೆ ವಿಜಯ್ ಪ್ರಕಾಶ್ ಅವರ ಧ್ವನಿ ಸೂಕ್ತವೆನಿಸಿತು. ತಮ್ಮ ಕಾರ್ಯದೊತ್ತಡದ ನಡುವೆಯೂ ಈ ಹಾಡನ್ನು ಹಾಡಿದ ವಿಜಯ್ ಪ್ರಕಾಶ್ ಅವರಿಗೆ ಧನ್ಯವಾದ ಎಂದರು ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ.
ಚಿತ್ರದ ನಾಯಕ ರಜನೀಶ್ ಹಾಗೂ ನಾಯಕಿ ನಾಗಶ್ರೀ ಬೇಗಾರ್ “ಜಲಪಾತ” ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
ಅನಸೂಯ ಕೋಮಲ್ ಕುಮಾರ್ ನಿರ್ಮಾಣದ ಮತಿವಣನ್ ನಿರ್ದೇಶನದ “ಕಾಲಾಯ ನಮಃ” ಚಿತ್ರದಲ್ಲಿ ಬಹಳ ದಿನಗಳ ನಂತರ ಸಹೋದರರಾದ ಜಗ್ಗೇಶ್ ಹಾಗೂ ಕೋಮಲ್ ಅಭಿನಯಿಸುತ್ತಿದ್ದಾರೆ. ಇವರಿಬ್ಬರು ಭಾಗವಹಿಸಿರುವ ಹಾಡೊಂದರ ಚಿತ್ರೀಕರಣ ಜಾಲಿವುಡ್ ಸ್ಟುಡಿಯೋದಲ್ಲಿ ಜೋರಾಗಿ ನಡೆಯುತ್ತಿದೆ
‘ನಾನು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಕೋಮಲ್, ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನಾನು ಅವತ್ತಿನಿಂದ ಹೇಳುತ್ತಿದ್ದೇನೆ. ಕೋಮಲ್ ಅದ್ಭುತ ಕಲಾವಿದ ಎಂದು. ಇದರಲ್ಲಿ ನಾನು, ಕೋಮಲ್ ಹಾಗೂ ನನ್ನ ಮಗ ಯತಿರಾಜ್ ಮೂರು ಜನ ನಟಿಸಿದ್ದೇವೆ. ಇತ್ತೀಚೆಗೆ ಬರುತ್ತಿರುವ ಅನೇಕ ಚಿತ್ರಗಳು ಯಶಸ್ವಿಯಾಗುತ್ತಿದೆ. “ಕಾಲಾಯ ನಮಃ” ಸಹ ಪ್ರಚಂಡ ಯಶಸ್ಸು ಕಾಣಲಿ ಎಂದು ಜಗ್ಗೇಶ್ ಹಾರೈಸಿದರು.
ಇದು ನಮ್ಮ ಸಂಸ್ಥೆಯ ಚಿತ್ರ. ನನ್ನ ಹೆಂಡತಿ ಅನಸೂಯ ಅವರು ನಿರ್ಮಾಪಕರು ಎಂದು ಮಾತು ಆರಂಭಿಸಿದ ಕೋಮಲ್ ಕುಮಾರ್, “ಕಾಲಾಯ ನಮಃ” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಈಗ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಈ ಹಾಡಿನ ಚಿತ್ರೀಕರಣದಲ್ಲಿ ನಮ್ಮ ಅಣ್ಣ ಜಗ್ಗೇಶ್, ನಾನು ಹಾಗೂ ಮುಂಬೈ ನಟಿಯೊಬ್ಬರು ಪಾಲ್ಗೊಂಡಿದ್ದೇವೆ. ಯೋಗರಾಜ್ ಭಟ್ ಈ ಹಾಡನ್ನು ಬರೆದಿದ್ದಾರೆ. ಎಮಿಲ್ ಸಂಗೀತ ನೀಡಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ನಾಯಕಿಯಾಗಿ ಆಸಿಯಾ ಫಿರ್ದೋಸ್ ನಟಿಸಿದ್ದಾರೆ. ಪ್ರಕಾಶ್ ರೈ, ಸುಚೇಂದ್ರ ಪ್ರಸಾದ್, ಶೈನ್ ಶೆಟ್ಟಿ, ಯತಿರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಂದುಕೊಂಡ ಹಾಗೆ ಆದರೆ, ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಚಿತ್ರವನ್ನು ನಿಮ್ಮ ಮುಂದೆ ತರುತ್ತೇವೆ ಎಂದರು.
ಇದೊಂದು ಸಮಯದ ಸುತ್ತ ನಡೆಯುವ ಕಥೆ. ಜಗ್ಗೇಶ್, ಕೋಮಲ್ ಅವರು ಸೇರಿದಂತೆ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಮತಿವಣನ್. ಛಾಯಾಗ್ರಹಣದ ಬಗ್ಗೆ ಛಾಯಾಗ್ರಾಹಕ ರಾಕೇಶ್ ಸಿ ತಿಲಕ್ ಮಾತನಾಡಿದರು.
ಸುಮಾರು ವರ್ಷಗಳಿಂದ ಕನ್ನಡದ ಹೆಸರಾಂತ ಚಿತ್ರಗಳಿಗೆ ಕಥೆ ಬರೆದಿರುವ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ” ಗನ್ಸ್ ಅಂಡ್ ರೋಸಸ್” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ
ನಿರ್ಮಾಪಕ ಹೆಚ್ ಆರ್ ನಟರಾಜ್ ಮಾತನಾಡಿದ್ದು ಹೀಗೆ; ನಾನು ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ. ಬಿಲ್ಡರ್ ಕೂಡ. ನಿರ್ದೇಶಕ ಶ್ರೀನಿವಾಸಮೂರ್ತಿ ನನ್ನ ಸ್ನೇಹಿತರು. ಅವರು ಈ ಚಿತ್ರದ ಬಗ್ಗೆ ನನ್ನ ಬಗ್ಗೆ ಹೇಳಿದಾಗ ನಿರ್ಮಾಣಕ್ಕೆ ಮುಂದಾದೆ. ಆದರೆ ನಾನು ಒಂದು ಕಂಡೀಶನ್ ಹಾಕಿದ್ದೇನೆ. ಚಿತ್ರ ನಿಗದಿತ ಸಮಯಕ್ಕೆ ಮುಗಿಯಬೇಕು ಎಂದು. ಅಂದುಕೊಂಡಂತೆ ಆದರೆ, ಈ ವರ್ಷದ ಕೊನೆಗೆ ಚಿತ್ರ ತೆರೆಗೆ ಬರಲು ಸಿದ್ದವಾಗಿರುತ್ತದೆ ಎಂದರು.
ನಾನು ಸಾಕಷ್ಟು ವರ್ಷಗಳಿಂದ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ಮೊದಲ ನಿರ್ದೇಶನದ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಈ ಚಿತ್ರದ ಮೂಲಕ ಕಥೆಗಾರ ಅಜಯ್ ಕುಮಾರ್ ಪುತ್ರ ಅರ್ಜುನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಯಶ್ವಿಕ ನಿಷ್ಕಲ ಈ ಚಿತ್ರದ ನಾಯಕಿ. ಶಶಿಕುಮಾರ್ ಸಂಗೀತ ನೀಡುತ್ತಿದ್ದಾರೆ. ಜನಾರ್ದನ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಶರತ್ ಬರೆದಿದ್ದಾರೆ ಎಂದರು ನಿರ್ದೇಶಕ ಶ್ರೀನಿವಾಸ್ ಕುಮಾರ್.
ಇದು ನನ್ನ ಚೊಚ್ಚಲ ಚಿತ್ರ. ಈ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದೇನೆ. ಕಥೆ ಹಾಗೂ ನನ್ನ ಪಾತ್ರ ಚೆನ್ನಾಗಿದೆ ಎಂದರು ನಾಯಕ ಅರ್ಜುನ್. ನಾಯಕಿ ಯಶ್ವಿಕ ನಿಷ್ಕಲ ತಮ್ಮ ಪಾತ್ರದ ಕುರಿತು ಮಾತನಾಡಿದರು.
“ಗನ್ಸ್ ಅಂಡ್ ರೋಸಸ್” ಚಿತ್ರದಲ್ಲಿ ಅಂಡರ್ ವಲ್ಡ್ ಹಾಗೂ ಪ್ರೇಮಕಥೆ ಎರಡು ಇರುತ್ತದೆ ಎಂದರು ಕಥೆ ಬರೆದಿರುವ ಶರತ್.
ಈ ಚಿತ್ರದ ಮೂಲಕ ನನ್ನ ಮಗ ನಾಯಕನಾಗುತ್ತಿದ್ದೇನೆ. ಸಾಕಷ್ಟು ವರ್ಷಗಳಿಂದ ನನಗೆ ತಾವೆಲ್ಲರು ಪ್ರೋತ್ಸಾಹ ನೀಡಿದ್ದೀರಿ. ನನ್ನ ಮಗನಿಗೂ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ಅಜಯ್ ಕುಮಾರ್.
ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ಸಂಗೀತ ನಿರ್ದೇಶಕ ಶಶಿಕುಮಾರ್, ಛಾಯಾಗ್ರಹಕ ಜನಾರ್ದನ್ ಮಾತ್ತು ನಟರಾದ ಜೀವನ್ ರಿಚಿ ಹಾಗೂ ಹರೀಶ್ ಚಿತ್ರದ ಕುರಿತು ಮಾತನಾಡಿದರು.
ಪ್ರತಿಭೆ ಯಾರ ಸ್ವತ್ತಲ್ಲ. ಅದು ಸಾಧಕರ ಸ್ವತ್ತು. ಇಲ್ಲೊಬ್ಬ ಅಪ್ಪಟ ಕನ್ನಡದ ಹುಡುಗಿ. ವಿದೇಶಿ ನೆಲದಲ್ಲಿ ನೆಲೆಸಿದ್ದರೂ, ಕನ್ನಡ ಪದಗಳ ಮೇಲಿನ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ. ಅಂದಹಾಗೆ, ಆ ಹುಡುಗಿ ದುಬೈ ನಲ್ಲಿ ವಾಸವಿದ್ದು, ಲಾಸ್ ಏಂಜಲೀಸ್ ನಲ್ಲಿ ಒಂದಷ್ಟು ಸಂಗೀತ ಕಲಿತು ಅಲ್ಲೇ ಸುಮಾರು ಇಂಗ್ಲೀಷ್ ಆಲ್ಬಂ ಸಾಂಗ್ ಗೆ ದನಿಯಾಗಿದ್ದಾರೆ. ಅಷ್ಟೇ ಅಲ್ಲ, ಅವರ ಹಾಡಿಗೆ ಅವರದೇ ಸಾಹಿತ್ಯವೂ ಇದೆ. ಜೊತೆಗೆ ಹಾಡಿಗೆ ಜಬರ್ ದಸ್ತ್ ಹೆಜ್ಜೆಯೂ ಹಾಕಿದ್ದಾರೆ. ಆ ಹುಡುಗಿ ಹೆಸರು ಈಶಾನಿ. ಈ ಈಶಾನಿ ಹಾಡಿಗೆ ನಟರಾದ ಶಿವಣ್ಣ, ದರ್ಶನ್ ಕೂಡ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಸಾಕಷ್ಟು ಕನ್ನಡಿಗರು ವಿದೇಶದಲ್ಲಿದ್ದುಕೊಂಡೇ ಕನ್ನಡ ಭಾಷೆಯ ಘಮಲನ್ನು ಪಸರಿಸುತ್ತಿದ್ದಾರೆ. ಆ ಪೈಕಿ ಗಾಯಕಿ ಈಶಾನಿ ಕೂಡ ಒಬ್ಬರು. ಮೂಲತಃ ಮೈಸೂರಿನವರಾದ ಈಶಾನಿ ಸದ್ಯ ದುಬೈನಲ್ಲಿ ನೆಲೆಸಿದ್ದಾರೆ. ಚಿಕ್ಕಂದಿನಿಂದಲೇ ತಾಯಿ ಹಾಕಿಕೊಟ್ಟ ಗಾಯನದ ಅಡಿಪಾಯ ಮೇಲೆ ಬೆಳೆದ ಇವರು ಈಗಾಗಲೇ 17 ಇಂಗ್ಲೀಷ್ ಅಲ್ಬಮ್ ಸಾಂಗ್ ಹಾಡಿದ್ದಾರೆ. ಕನ್ನಡದಲ್ಲೂ ಮೂರು ಆಲ್ಬಂ ಗೀತೆಗಳನ್ನು ಹಾಡಿ ಅದರಲ್ಲಿ ಹೆಜ್ಜೆ ಹಾಕಿದ್ದಾರೆ ಎಂಬುದು ವಿಶೇಷ. ಆ ಪೈಕಿ ಇತ್ತೀಚೆಗೆ ಕನ್ನಡದ ಮೂರನೇ ಆಲ್ಬಂ ‘ಫ್ರೀಡಮ್’ ಹೆಸರಿನಸಾಂಗ್ ಅನ್ನು ಬಿಡುಗಡೆ ಮಾಡಲಾಗಿದೆ.. ಈಶಾನಿ ಈ ಮೊದಲು ರೈಟರ್ ಹಾಗೂ ಊರ್ಮಿಳ ಕನ್ನಡ ಆಲ್ಬಂ ನೀಡಿದ್ದಾರೆ
ಗಾಯಕಿ ಈಶಾನಿ ಅವರು ನಟ ಶಿವರಾಜ್ ಕುಮಾರ್ ಹಾಗೂ ದರ್ಶನ್ ಅವರನ್ನು ಭೇಟಿ ಮಾಡಿದಾಗ ಅವರು, ಸಾಗರದಾಚೆಗೂ ಕನ್ನಡನಾಡಿನ ಪ್ರತಿಭೆಯಾಗಿ ಬೆಳಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರೋತ್ಸಾಹದ ಮಾತುಗಳನ್ನಾಡಿದ್ದು ಈಶಾನಿಗೆ ಉತ್ತೇಜನ ನೀಡಿದೆ.
ಪ್ರೀಡಮ್ ಸಾಂಗ್ ಬಗ್ಗೆ ಹೇಳುವ ಈಶಾನಿ, ‘ನಾನು ಮೈಸೂರಿನವಳು. ದುಬೈನಲ್ಲಿ ವಾಸವಿದ್ದು, ಆಲ್ಬಂ ಸಾಂಗ್ ಮಾಡುತ್ತ ಬಂದಿದ್ದೇನೆ. ಈಗಾಗಲೇ ಇಂಗ್ಲೀಷ್‌ನಲ್ಲಿ 17 ಅಲ್ಬಮ್ ಗೀತೆಗಳನ್ನು ಮಾಡಿದ್ದೇನೆ. ನನ್ನ ತಂದೆ-ತಾಯಿ ಕರ್ನಾಟಕದಲ್ಲೇ ಇದ್ದು, ಅವರಿಗೆ ನಾನು ಕನ್ನಡ ಭಾಷೆಯಲ್ಲಿ ಸಾಂಗ್ ಮಾಡಬೇಕು ಎಂಬ ಆಸೆ ಇತ್ತು. ನನಗೂ ಸಹ ಕನ್ನಡದಲ್ಲಿ ಹಾಡುವ ಬಯಕೆ ಇತ್ತು. ಹಾಗಾಗಿ ಈ ಪ್ರಯತ್ನವಾಗಿದೆ. ಕನ್ನಡ ಸಾಂಗ್‌ಗಳಿಗೂ ಎಲ್ಲಾ ಕಡೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ. ನಾನು 13 ವರ್ಷದವಳಿದ್ದಾಗಿಂದಲೂ ಹಾಡುತ್ತಾ ಬಂದಿದ್ದೇನೆ. 2016ರಲ್ಲಿ ಮೊದಲು ಹಾಡನ್ನು ಬರೆದು ನಾನೇ ಹಾಡಿದೆ.
ಈ ಅಲ್ಬಮ್ ಸಾಂಗ್‌ಗಳಿಗಾಗಿ ನಿರ್ದೇಶಕರನ್ನು ಭೇಟಿಯಾದೆ. ಈಗ ಸಿನಿಮಾದಲ್ಲಿ ನಟಿಸುವ ಆಸೆ ಇದೆ. ಸಿನಿಮಾ ಸಾಂಗ್ ಹಾಡುವ ಆಸೆಯೂ ಇದೆ. ದುಬೈನಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಡಿಗ್ರಿ ಮುಗಿಸಿ, ಈಗ ಸಂಪೂರ್ಣ ಸಮಯವನ್ನು ಸಂಗೀತಕ್ಕಾಗಿಯೇ ಮಿಸಲಿಟ್ಟಿದ್ದೇನೆ. ಲಾಸ್ ಎಂಜಲೀಸ್‌ನ ದೊಡ್ಡ ವೇದಿಕೆಯಲ್ಲಿ ಹಾಡಿದ್ದೇನೆ. ಕನ್ನಡದ ಹುಡುಗಿಯಾಗಿ ಇನ್ನಷ್ಟು ಕನ್ನಡ ಹಾಡುಗಳನ್ನು ಮಾಡಬೇಕು ಎಂಬ ಆಸೆಯಿದೆ’ ಎಂದರು.
ಫ್ರೀಡಮ್ ಗೀತೆಯನ್ನು ಈಶಾನಿ ಅವರ ತಂದೆ ಶೇಖರ್, ತಾಯಿ ಇಂದ್ರಾಣಿ ಬಿಡುಗಡೆ ಮಾಡಿದರು. ‘ಮಗಳ ಈ ಸಾಂಗ್ ಲಾಂಚ್ ಮಾಡಲು ತುಂಬಾ ಖುಷಿಯಾಗುತ್ತಿದೆ. ಇದರಲ್ಲಿ ಮಗಳು ಕನ್ನಡ ಕಲಿತು ಹಾಡಿದ್ದಾರೆ’ ಎಂದು ಇಂದ್ರಾಣಿ ತಿಳಿಸಿದರು. ಇದೇ ಸಂದರ್ಭದಲ್ಲಿ ಈ ಗೀತೆಯ ನಿರ್ದೇಶಕ ಗಿರಿ ಗೌಡ ಅವರು ಆ್ಯಕ್ಷನ್ ಕಟ್ ಹೇಳಲಿರುವ ‘ಥಗ್ಸ್ ಆಫ್ 1980’ ಚಿತ್ರದ ಟೈಟಲ್ ಲಾಂಚ್ ಕೂಡ ಮಾಡಲಾಯಿತು.
‘‘ಇದು ನನ್ನ ನಿರ್ದೇಶನದ ಎರಡನೇ ಸಿನಿಮಾ ಆಗಿದ್ದು, ಹಳ್ಳಿಯ ಬ್ಯಾಕ್ ಡ್ರಾಪ್ನಲ್ಲಿ, ನಡೆಯುವ ಸಮುದ್ರ ತೀರದ ಕಥೆ ಇದಾಗಿದೆ’ ಎಂದರು. ವಾಸುಕಿ ವೈಭವ ಅವರು ಫ್ರೀಡಮ್ ಹಾಡಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಗೀತೆಯನ್ನು ಎ.ಎಸ್ ಪ್ರೋಡಕ್ಷನ್ಸ್ ಬ್ಯಾನರ್‌ನಲ್ಲಿ ವೆಂಕಟ್ ಅವರು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಚಿತ್ರದ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ವೆಂಕಟ್ ಮಾತಾಡಿ, ‘ಈಶಾನಿ ಅವರ ಇಂಗ್ಲಿಷ್ ಸಾಂಗ್ ನೋಡಿ, ಇವರಿಂದ ಕನ್ನಡ ಸಾಂಗ್ ಮಾಡಿಸಬೇಕು ಎಂದುಕೊಂಡೆವು. ಅವರ ತಂದೆಯವರ ಸಹಕಾರದಿಂದ ಈ ಕೆಲಸ ಆಯ್ತು. ಮೊದಲ ಎರಡು ಕನ್ನಡ ಅಲ್ಬಮ್ ಗೀತೆಗಳಿಗೆ ಈಶಾನಿ ಅವರೇ ಸಾಹಿತ್ಯ ಬರೆದು ನಟಿಸಿದ್ದಾರೆ. ಈಗಾಗಲೇ ನಮ್ಮ ಬ್ಯಾನರ್ ನಲ್ಲಿ ಮೂರು ಸಾಂಗ್ ಬಂದಿದ್ದು, ಮುಂದೆ ‘ಅಷ್ಟೇ ವಿಷ್ಯ’ ಅಲ್ಬಮ್ ಸಾಂಗ್ ಕೂಡ ಬರಲಿದೆ. ಈಗಾಗಲೇ ರಿಲೀಸಾಗಿರುವ ಈಶಾನಿ ಅವರ ಎರಡು ಕನ್ನಡ ಸಾಂಗ್‌ಗಳಿಗೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ಕನ್ನಡದ ಹುಡುಗಿ ಈಶಾನಿ ಇಂಟರ್‌ನ್ಯಾಶನಲ್ ಸಿಂಗರ್ ಆಗಿ ಹೆಸರು ಮಾಡಿರುವುದು ವಿಶೇಷ’ ಎಂದರು.
ಇನ್ನು ನಟ ವರ್ಧನ್ ಮಾತನಾಡಿ ‘ನಾನು ಥಗ್ಸ್ ಆಫ್ 1980 ಸಿನಿಮಾದಲ್ಲಿ ನಟಿಸುತ್ತಿದ್ದು, ಇದರಲ್ಲಿ ಒಳ್ಳೆಯ ಕಥೆ ಇದೆ’ ಎಂದು ಹೇಳಿದರು.
ಮೇಘನರಾಜ್ ಸರ್ಜಾ ಹಲವು ವರ್ಷಗಳ ನಂತರ ನಟಿಸಿರುವ “ತತ್ಸಮ ತದ್ಭವ” ಚಿತ್ರದ ಟ್ರೇಲರ್ ಬಿಡುಗೆಡಯಾಗಿದೆ. ಧ್ರುವ ಸರ್ಜಾ ಹಾಗೂ ಡಾಲಿ ಧನಂಜಯ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
‘ನಾನು ಸಿನಿಮಾದಲ್ಲಿ ನಟಿಸಬಾರದು ಎಂದು ನಿರ್ಧರಿಸಿದಾಗ ಬಂದ ಸಿನಿಮಾವಿದು ಎಂದು ಮಾತು ಆರಂಭಿಸಿದ ಮೇಘನರಾಜ್ ಸರ್ಜಾ, ಈ ಚಿತ್ರ ಆರಂಭವಾಗಲು ಕಾರಣ ನನ್ನ ಪತಿ ಚಿರು. ಅವರಿಗೆ ಪ್ರಜ್ವಲ್ ಹಾಗೂ ಪನ್ನಗ ಅವರ ಜೊತೆ ಸೇರಿ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಬೇಕೆಂಬ ಆಸೆಯಿತ್ತು. ನಂತರ ಪನ್ನಗಾಭರಣ ಈ ಚಿತ್ರದ ಕಥೆಯನ್ನು ಹೇಳಲು ನಿರ್ದೇಶಕರನ್ನು ಮನೆಗೆ ಕಳುಹಿಸಿದರು. ಕಥೆ ಇಷ್ಟವಾಯಿತು. ಅಭಿನಯಿಸಿದ್ದೇನೆ.
ಪನ್ನಗಾಭರಣ, ಸ್ಪೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಪ್ರಜ್ವಲ್ ಅಭಿನಯಿಸಿದ್ದಾರೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಸೆಪ್ಟೆಂಬರ್ 15 ತೆರೆಗೆ ಬರಲಿದೆ. ನಾನು ಈ ಚಿತ್ರ ಮಾಡಲು ಸಹಕಾರ ನೀಡಿದ ನನ್ನ ಎರಡು ಕುಟುಂಬಕ್ಕೆ ಧನ್ಯವಾದ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಹಾಗೂ ಧನಂಜಯ ಅವರಿಗೆ ವಿಶೇಷ ಧನ್ಯವಾದ ಎಂದರು ಮೇಘನಾರಾಜ್.
ನಾನು ಈವರೆಗೂ ಮಾಡದ ಪಾತ್ರ ಈ ಚಿತ್ರದಲ್ಲಿ ಮಾಡಿದ್ದೇನೆ. ಬಹಳ ಇಷ್ಟಪಟ್ಟು ಮಾಡಿರುವ ಸಿನಿಮಾವಿದು. ಟ್ರೇಲರ್ ಗೆ ನಮ್ಮ ತಂದೆ ದೇವರಾಜ್ ಅವರು ಧ್ವನಿ ನೀಡಿದ್ದಾರೆ ಎಂದು ಪ್ರಜ್ವಲ್ ದೇವರಾಜ್ ತಿಳಿಸಿದರು.
“ತತ್ಸಮ ತದ್ಭವ” ಒಂದು ಕ್ರೈಮ್ ಥ್ರಿಲ್ಲರ್ ಚಿತ್ರ. ಆದರೆ ಮಾಮೂಲಿ ಕ್ರೈಮ್ ಥ್ರಿಲ್ಲರ್ ಗಳಿಗಿಂತ ವಿಭಿನ್ನ. ನನ್ನ ಕಥೆ ಮೆಚ್ಚಿ ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ, ಚಿತ್ರದಲ್ಲಿ ನಟಿಸಿರುವ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ನಾನು ಆಭಾರಿ ಎನ್ನುತ್ತಾರೆ ನಿರ್ದೇಶಕ ವಿಶಾಲ್ ಆತ್ರೇಯ.
ನಾನು ಸಮಾನ್ಯವಾಗಿ ಭಾವುಕನಾಗುವುದಿಲ್ಲ. ಇಂದು ಏಕೋ ಗೊತ್ತಿಲ್ಲ ಸ್ವಲ್ಪ ಭಾವುಕನಾಗುತ್ತಿದ್ದೇನೆ ಎಂದು ಮಾತು ಪ್ರಾರಂಭಿಸಿದ ನಿರ್ಮಾಪಕ ಪನ್ನಗಾಭರಣ, ನಾನು ನಿರ್ಮಾಪಕನಾಗಬೇಕು ಅಂತ ಇರಲಿಲ್ಲ. ನಿರ್ಮಾಪಕನಾದೆ. ನನ್ನೊಟ್ಟಿಗೆ ಕೆಲವು ಸ್ನೇಹಿತರು ಕೈ ಜೋಡಿಸಿದರು. ಈಗ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸೆಪ್ಟೆಂಬರ್ 15 ಚಿತ್ರ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಹಾಗೂ ಧನಂಜಯ ಅವರಿಗೆ ಧನ್ಯವಾದ. ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಇನ್ನೊಂದು ವಿಶೇಷವೆಂದರೆ ನಮ್ಮ ಚಿತ್ರದ ಟಿಕೆಟ್ ಪಡೆದುಕೊಂಡವರು ಕೊನೆಯಲ್ಲಿ ಆ ಟಿಕೆಟ್ ನಲ್ಲಿರುವ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಬೇಕು. ಆಗ ಹಲವರಿಗೆ ಗಿಫ್ಟ್ ಕೂಪನ್ ಗಳು ದೊರೆಯಲಿದೆ ಎಂದರು.
ಸಂಗೀತ ನಿರ್ದೇಶಕ ವಾಸುಕಿ ವೈಭವ್, ಛಾಯಾಗ್ರಾಹಕ ಶ್ರೀನಿವಾಸ ರಾಮಯ್ಯ, ಕೆ.ಆರ್.ಜಿ ಸ್ಟುಡಿಯೋಸ್ ಯೋಗಿ ಜಿ ರಾಜ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
ಮರಿ ಟೈಗರ್ ವಿನೋದ್ ಪ್ರಭಾಕರ್ ನಟಿಸಿ, ನೂತನ್ ಉಮೇಶ್ ನಿರ್ದೇಶನದ ಹಾಗೂ ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಿರುವ “ಫೈಟರ್” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಿರ್ಮಾಪಕ ಸೋಮಶೇಖರ್ ಅವರ ತಂದೆ ಕೃಷ್ಣಪ್ಪ ಟೀಸರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದ್ದಾರೆ.
ನಿರ್ದೇಶಕ ನೂತನ್ ಉಮೇಶ್ ಮಾತನಾಡಿ, ಈ ಚಿತ್ರದ ಶೀರ್ಷಿಕೆಯನ್ನು ವಿನೋದ್ ಪ್ರಭಾಕರ್ ಅವರ ಅಭಿಮಾನಿಗಳೇ ಅನಾವರಣ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಹೂರ್ತಕ್ಕೆ ಆಗಮಿಸಿ ಚಿತ್ರಕ್ಕೆ ಚಾಲನೆ ನೀಡಿದ್ದರು. ಈಗ ಟೀಸರನ್ನು ನಿರ್ಮಾಪಕರ ತಂದೆ ಬಿಡುಗಡೆ ಮಾಡಿದ್ದಾರೆ. ಸದ್ಯದಲ್ಲೇ ಹಾಡುಗಳು ಹಾಗೂ ಟ್ರೇಲರ್ ಹೊರ ಬರಲಿದ್ದು, ಅಕ್ಟೋಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.
“ಫೈಟರ್” ಎಂದರೆ ಹೊಡೆದಾಡುವವನು ಎಂದು ತಿಳಿದುಕೊಳ್ಳುತ್ತಾರೆ. ಆದರೆ ನಮ್ಮ “ಫೈಟರ್” ಅನ್ಯಾಯದ ವಿರುದ್ಧ ಹಾಗೂ ತನ್ನ ಕುಟುಂಬಕ್ಕಾಗಿ ಹೋರಾಡುವವನು. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಸೋಮಶೇಖರ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಪಾವನ ಹಾಗೂ ಲೇಖ ಚಂದ್ರ ನಾಯಕಿಯರಾಗಿ ನಟಿಸಿದ್ದಾರೆ . ಸುಮಾರು ವರ್ಷಗಳ ನಂತರ ನಟಿ ನಿರೋಷ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದರು.
“ಫೈಟರ್” ನಲ್ಲಿ ಬರೀ ಹೋರಾಟ ಹಾಗೂ ಹೊಡೆದಾಟವಿಲ್ಲ. ತಂದೆ- ತಾಯಿ ಹಾಗೂ ಮಗನ ಬಾಂಧವ್ಯದ ಸನ್ನಿವೇಶಗಳು ಎಲ್ಲರ ಮನ ಮುಟ್ಟಲಿದೆ. ಜೊತೆಗೆ ಥ್ರಿಲ್ಲರ್ ಅಂಶಗಳನ್ನ ಒಳಗೊಂಡ ಕೌಟುಂಬಿಕ ಮನರಂಜನೆಯ ಚಿತ್ರ ಇದಾಗಿದೆ. ನನ್ನನ್ನು ನಿರ್ದೇಶಕರು ನನ್ನ ಹಿಂದಿನ ಚಿತ್ರಗಳಿಗಿಂತ ತುಂಬಾನೇ ಸ್ಟೈಲಿಷ್ ಆಗಿ ತೋರಿಸಿದ್ದಾರೆ. ನಿರ್ಮಾಪಕರು ಯಾವುದಕ್ಕೂ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸಮಾಜದ ವ್ಯವಸ್ಥೆಯ ವಿರುದ್ಧ ಹೋರಾಡುವ “ಫೈಟರ್” ನಾನು ಎಂದು ವಿನೋದ್ ಪ್ರಭಾಕರ್ ತಿಳಿಸಿದರು.
ನಾಯಕಿಯರಾದ ಲೇಖಾ ಚಂದ್ರ ಹಾಗೂ ಪಾವನ ತಮ್ಮ ಪಾತ್ರದ ಕುರಿತು ಮಾತನಾಡಿದರು. ಬಹಳ ದಿನಗಳ ನಂತರ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ನಿರೋಷ ಸಂತಸಪಟ್ಟರು. ಚಿತ್ರದಲ್ಲಿ ಹಾಡುಗಳಿದ್ದು ಎರಡೂ ವಿಭಿನ್ನವಾಗಿವೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು “ಫೈಟರ್” ಚಿತ್ರದ ಸಾಹಸ ದೃಶ್ಯಗಳ ಕುರಿತು ಮಾಹಿತಿ ನೀಡಿದರು.
ರಾಘವ ಲಾರೆನ್ಸ್ ಹಾಗೂ ಕಂಗನಾ ರಣಾವತ್ ನಟನೆಯ ‘ಚಂದ್ರಮುಖಿ-2’ ಸಿನಿಮಾ ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿದೆ. ಗಣೇಶ್ ಚತುರ್ಥಿಗೆ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿರುವ ಈ ಚಿತ್ರದ ಟ್ರೇಲರ್, ಟೀಸರ್ ಭಾರೀ ಸದ್ದು ಮಾಡುತ್ತಿದೆ. ಪಿ.ವಾಸು ನಿರ್ದೇಶನದಲ್ಲಿ ಮೂಡಿಬಂದಿರುವ ಚಂದ್ರಮುಖಿ-2 ಸಿನಿಮಾದ ಆಡಿಯೋ ಲಾಂಚ್ ಇವೆಂಟ್ ಚೆನ್ನೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿ ತಮ್ಮ ಅನುಭವ ಹಂಚಿಕೊಂಡಿದೆ.
ನಾಯಕ ರಾಘವ್ ಲಾರೆನ್ಸ್, ಹಲವು ಕುತೂಹಲಕಾರಿ ಅಂಶಗಳನ್ನು ಹಂಚಿಕೊಂಡರು. “ದೊಡ್ಡ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುವ ಸುಭಾಸ್ಕ್ ಕರಣ್ ನನ್ನ ಜೊತೆ ಸಿನಿಮಾ ಮಾಡ್ತಾರಾ ಅಂತ ಆಶ್ಚರ್ಯ ಪಡ್ತಿದ್ದೆ? ಆದರೆ, ‘ಚಂದ್ರಮುಖಿ 2’ ಅಂತ ದೊಡ್ಡ ಸಿನಿಮಾ ಮಾಡಿದ್ರು. ಅವರ ಬ್ಯಾನರ್‌ನ ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತೇವೆ. ನಮ್ಮ ನಿರ್ದೇಶಕ ವಾಸು ಸರ್ ಗೆ ನಾಲ್ಕು ದಶಕಗಳ ಅನುಭವವಿದೆ.ನಾನು ಸೈಡ್ ಡ್ಯಾನ್ಸರ್ ಆಗಿ ಕೆಲಸ ಮಾಡಿದ ಕಾಲದಿಂದಲೂ ಅವರು ನಿರ್ದೇಶಕರಾಗಿ ಉತ್ತಮ ಚಿತ್ರಗಳನ್ನು ಮಾಡಿದ್ದಾರೆ.
ಕಂಗನಾ ರಣಾವತ್ ಅವರು ಈ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದಾಗ ನನಗೆ ಆಶ್ಚರ್ಯವಾಯಿತು. ಕೀರವಾಣಿ ಬಗ್ಗೆ ಮಾತನಾಡಲು ಪದಗಳು ಸಾಕಾಗುವುದಿಲ್ಲ, ಅವರು ಎಂದಿಗೂ ಕೆಲಸದ ಬಗ್ಗೆ ಟೆನ್ಷನ್ ಆಗುವುದಿಲ್ಲ. ಅದಕ್ಕಾಗಿಯೇ ಅವರು ನಮ್ಮ ಚಿತ್ರಕ್ಕೆ ಉತ್ತಮ ಸಂಗೀತವನ್ನು ನೀಡಿದ್ದಾರೆ. ಛಾಯಾಗ್ರಾಹಕ ರಾಜಶೇಖರ್, ಕಲಾ ನಿರ್ದೇಶಕ ತೊಟ್ಟ ಥರಣಿ ಗಾರು, ಸಂಕಲನಕಾರ ಆಂಟನಿ ಅವರು ಇಡೀ ಚಿತ್ರತಂಡದೊಂದಿಗೆ ‘ಚಂದ್ರಮುಖಿ 2′ ನಂತಹ ಅದ್ಭುತ ಚಿತ್ರವನ್ನು ಮಾಡಿದ್ದಾರೆ. ಖಂಡಿತ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ’ ಎಂದರು.
ಬಾಲಿವುಡ್ ಕ್ವೀನ್ ಕಂಗನಾ ರಣಾವತ್, “ನನ್ನ ನಟನಾ ವೃತ್ತಿ ಜೀವನದಲ್ಲಿ ನಾನು ‘ಚಂದ್ರಮುಖಿ 2’ ಚಿತ್ರ ಮಾಡಿಲ್ಲ. ಅಸಲಿ ವಿಷಯವೆಂದರೆ, ನಾನು ಯಾರನ್ನೂ ಆಫರ್ ಕೇಳಿಲ್ಲ. ಮೊದಲ ಬಾರಿಗೆ ನಾನು ನಿರ್ದೇಶಕ ಪಿ. ವಾಸು ಅವರನ್ನು ಕೇಳಿದೆ. ಈ ಚಿತ್ರದಲ್ಲಿ ವಾಸು ಅವರು ನನ್ನ ಪಾತ್ರದ ಜೊತೆಗೆ ಪ್ರತಿ ಪಾತ್ರಕ್ಕೂ ಸಮಾನ ಪ್ರಾಮುಖ್ಯತೆ ನೀಡಿದ್ದಾರೆ.ಇಡೀ ಕ್ರೆಡಿಟ್ ಅವರಿಗೆ ಸಲ್ಲುತ್ತದೆ.ಲಾರೆನ್ಸ್ ಮಾಸ್ಟರ್ ಅನೇಕರಿಗೆ ಸ್ಫೂರ್ತಿ ಎಂದರು.
ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ.ಕೀರವಾಣಿ ಮಾತನಾಡಿ, “ಚಂದ್ರಮುಖಿ 2′ ಆಸ್ಕರ್ ಪ್ರಶಸ್ತಿ ಪಡೆದ ನಂತರ ನಾನು ಸಂಗೀತ ಸಂಯೋಜನೆ ಮಾಡಿರುವ ಚಿತ್ರ. ಇಂತಹ ಒಳ್ಳೆಯ ಅವಕಾಶ ನೀಡಿದ ನಿರ್ದೇಶಕ ಪಿ.ವಾಸು ಅವರಿಗೆ ಧನ್ಯವಾದಗಳು. ವಾಸು ಅವರು ಉತ್ತಮ ನಿರ್ದೇಶಕ ಮಾತ್ರವಲ್ಲದೆ. ಒಬ್ಬ ಒಳ್ಳೆಯ ಗಾಯಕ. ನನ್ನ ಮುಂದಿನ ಚಿತ್ರಕ್ಕೆ ಅವರು ಗಾಯಕನಾಗಲು ನಾನು ಬಯಸುತ್ತೇನೆ. ರಾಘವ ಲಾರೆನ್ಸ್ ಅವರ ಬೆಂಬಲದಿಂದ ಹಾಡುಗಳು ಚೆನ್ನಾಗಿ ಬಂದಿವೆ ಎಂದರು.
ಲೈಕಾ ಸಂಸ್ಥೆಯ ಒಡೆಯ ಸುಭಾಸ್ಕರಣ್ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, ‘RRR’ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್ ಪಡೆದ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ, ಆರ್ ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ. ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ತಾರಾಬಳಗದಲ್ಲಿದ್ದಾರೆ. ರಾಧಾ ಕೃಷ್ಣ ಎಂಟರ್ಟೈನ್ಮೆಂಟ್ ತೆಲುಗಿನಲ್ಲಿ ಚಂದ್ರಮುಖಿ-2 ಸಿನಿಮಾವನ್ನು ರಿಲೀಸ್ ಮಾಡಲಾಗಿದೆ.
‘ಗಂಟುಮೂಟೆ’, ‘ಟಾಮ್ ಆ್ಯಂಡ್ ಜೆರ್ರಿ’ ಸಿನಿಮಾ ಖ್ಯಾತಿಯ ನಾಯಕ ನಿಶ್ಚಿತ್ ಕೊರೋಡಿ ಅಭಿನಯದ ‘ಸಪ್ಲೈಯರ್ ಶಂಕರ’ ಸಿನಿಮಾದ ಮೊದಲ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ತಾಯಿ ಕಳೆದುಕೊಂಡ ಮಗನ ಆಕ್ರಂದನ, ತುಂಬಾ ಪ್ರೀತಿಸುವ ಜೀವ ದೂರವಾದಾಗ ಆಗುವ ನೋವಿನ ಗೀತೆಯಾಗಿರುವ ಅಯ್ಯೋ ದೈವವೇ ಹಾಡಿಗೆ ನಿರ್ದೇಶಕ ರಂಜಿತ್ ಸಿಂಗ್ ರಜಪೂತ್ ಸಾಹಿತ್ಯ ಬರೆದಿದ್ದು, ಸುನಿಲ್ ಕಶ್ಯಪ್ ಧ್ವನಿಯಾಗಿದ್ದು, ಆರ್ ಬಿ ಭರತ್ ಟ್ಯೂನ್ ಹಾಕಿದ್ದಾರೆ. ಕೇಳುಗರಿಗೆ ಬಹಳ ಕನೆಕ್ಟ್ ಆಗುವ ಸೆಂಟಿಮೆಂಟ್ ಹಾಡು ಇದಾಗಿದ್ದು, ಸಾಹಿತ್ಯ, ಸಂಗೀತ ಎಲ್ಲಾ ವಿಚಾರದಲ್ಲೂ ಗಮನಸೆಳೆಯುತ್ತಿದೆ.
ಇತ್ತೀಚಿಗೆ ರಿಲೀಸ್ ಆದ ಮೋಷನ್ ಪೋಸ್ಟರ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿತ್ತು. ಯುವ ಪ್ರತಿಭೆ ರಂಜಿತ್ ಸಿಂಗ್ ರಜಪೂತ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತ್ರಿನೇತ್ರ ಫಿಲ್ಮಂಸ್ ಸಂಸ್ಥೆಯಡಿ ಎಂ.ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಬಾರ್ ಸಪ್ಲೈಯರ್ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಗೋಪಾಲ ಕೃಷ್ಣ ದೇಶಪಾಂಡೆ, ಜ್ಯೋತಿ ರೈ, ನವೀನ್ ಡಿ ಪಡಿಲ್ ಸೇರಿದಂತೆ ಒಂದಷ್ಟು ಹೊಸಬರು ಚಿತ್ರದಲ್ಲಿದ್ದಾರೆ.
ಸತೀಶ್ ಕುಮಾರ್.ಎ ಛಾಯಾಗ್ರಹಣ, ಆರ್.ಬಿ.ಭರತ್ ಸಂಗೀತ, ಸತೀಶ್ ಚಂದ್ರಯ್ಯ ಸಂಕಲನ ಚಿತ್ರಕ್ಕಿದೆ. ಸದ್ದಿಲ್ಲದೇ ಶೂಟಿಂಗ್ ಮುಗಿಸಿರುವ ಸಪ್ಲೈಯರ್ ಶಂಕರ ಬಿಡುಗಡೆಗೆ ಸಜ್ಜಾಗಿದ್ದಾನೆ.