ಫೈಟ್ ಗೆ ರೆಡಿಯಾದ ಫೈಟರ್: ವಿನೋದ್ ಪ್ರಭಾಕರ್ ಸಿನಿಮಾ ಟೀಸರ್ ರಿಲೀಸ್

ಮರಿ ಟೈಗರ್ ವಿನೋದ್ ಪ್ರಭಾಕರ್ ನಟಿಸಿ, ನೂತನ್ ಉಮೇಶ್ ನಿರ್ದೇಶನದ ಹಾಗೂ ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಿರುವ “ಫೈಟರ್” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಿರ್ಮಾಪಕ ಸೋಮಶೇಖರ್ ಅವರ ತಂದೆ ಕೃಷ್ಣಪ್ಪ ಟೀಸರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದ್ದಾರೆ.

ನಿರ್ದೇಶಕ ನೂತನ್ ಉಮೇಶ್ ಮಾತನಾಡಿ, ಈ ಚಿತ್ರದ ಶೀರ್ಷಿಕೆಯನ್ನು ವಿನೋದ್ ಪ್ರಭಾಕರ್ ಅವರ ಅಭಿಮಾನಿಗಳೇ ಅನಾವರಣ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಹೂರ್ತಕ್ಕೆ ಆಗಮಿಸಿ ಚಿತ್ರಕ್ಕೆ ಚಾಲನೆ ನೀಡಿದ್ದರು. ಈಗ ಟೀಸರನ್ನು ನಿರ್ಮಾಪಕರ ತಂದೆ ಬಿಡುಗಡೆ ಮಾಡಿದ್ದಾರೆ. ಸದ್ಯದಲ್ಲೇ ಹಾಡುಗಳು ಹಾಗೂ ಟ್ರೇಲರ್ ಹೊರ ಬರಲಿದ್ದು, ಅಕ್ಟೋಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.

“ಫೈಟರ್” ಎಂದರೆ ಹೊಡೆದಾಡುವವನು ಎಂದು ತಿಳಿದುಕೊಳ್ಳುತ್ತಾರೆ. ಆದರೆ ನಮ್ಮ “ಫೈಟರ್” ಅನ್ಯಾಯದ ವಿರುದ್ಧ ಹಾಗೂ ತನ್ನ ಕುಟುಂಬಕ್ಕಾಗಿ ಹೋರಾಡುವವನು.‌ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಸೋಮಶೇಖರ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ‌. ಪಾವನ ಹಾಗೂ ಲೇಖ ಚಂದ್ರ ನಾಯಕಿಯರಾಗಿ ನಟಿಸಿದ್ದಾರೆ . ಸುಮಾರು ವರ್ಷಗಳ ನಂತರ ನಟಿ ನಿರೋಷ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದರು.

“ಫೈಟರ್” ನಲ್ಲಿ ಬರೀ ಹೋರಾಟ ಹಾಗೂ ಹೊಡೆದಾಟವಿಲ್ಲ. ತಂದೆ- ತಾಯಿ ಹಾಗೂ ಮಗನ ಬಾಂಧವ್ಯದ ಸನ್ನಿವೇಶಗಳು ಎಲ್ಲರ ಮನ ಮುಟ್ಟಲಿದೆ. ಜೊತೆಗೆ ಥ್ರಿಲ್ಲರ್ ಅಂಶಗಳನ್ನ ಒಳಗೊಂಡ ಕೌಟುಂಬಿಕ ಮನರಂಜನೆಯ ಚಿತ್ರ ಇದಾಗಿದೆ. ನನ್ನನ್ನು ನಿರ್ದೇಶಕರು ನನ್ನ ಹಿಂದಿನ ಚಿತ್ರಗಳಿಗಿಂತ ತುಂಬಾನೇ ಸ್ಟೈಲಿಷ್ ಆಗಿ ತೋರಿಸಿದ್ದಾರೆ. ನಿರ್ಮಾಪಕರು ಯಾವುದಕ್ಕೂ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸಮಾಜದ ವ್ಯವಸ್ಥೆಯ ವಿರುದ್ಧ ಹೋರಾಡುವ “ಫೈಟರ್” ನಾನು ಎಂದು ವಿನೋದ್ ಪ್ರಭಾಕರ್ ತಿಳಿಸಿದರು.

ನಾಯಕಿಯರಾದ ಲೇಖಾ ಚಂದ್ರ ಹಾಗೂ ಪಾವನ ತಮ್ಮ ಪಾತ್ರದ ಕುರಿತು ಮಾತನಾಡಿದರು. ಬಹಳ ದಿನಗಳ ನಂತರ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ನಿರೋಷ ಸಂತಸಪಟ್ಟರು. ಚಿತ್ರದಲ್ಲಿ ಹಾಡುಗಳಿದ್ದು ಎರಡೂ ವಿಭಿನ್ನವಾಗಿವೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು “ಫೈಟರ್” ಚಿತ್ರದ ಸಾಹಸ ದೃಶ್ಯಗಳ ಕುರಿತು ಮಾಹಿತಿ ನೀಡಿದರು.

Related Posts

error: Content is protected !!