‘ಗಂಟುಮೂಟೆ’, ‘ಟಾಮ್ ಆ್ಯಂಡ್ ಜೆರ್ರಿ’ ಸಿನಿಮಾ ಖ್ಯಾತಿಯ ನಾಯಕ ನಿಶ್ಚಿತ್ ಕೊರೋಡಿ ಅಭಿನಯದ ‘ಸಪ್ಲೈಯರ್ ಶಂಕರ’ ಸಿನಿಮಾದ ಮೊದಲ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ತಾಯಿ ಕಳೆದುಕೊಂಡ ಮಗನ ಆಕ್ರಂದನ, ತುಂಬಾ ಪ್ರೀತಿಸುವ ಜೀವ ದೂರವಾದಾಗ ಆಗುವ ನೋವಿನ ಗೀತೆಯಾಗಿರುವ ಅಯ್ಯೋ ದೈವವೇ ಹಾಡಿಗೆ ನಿರ್ದೇಶಕ ರಂಜಿತ್ ಸಿಂಗ್ ರಜಪೂತ್ ಸಾಹಿತ್ಯ ಬರೆದಿದ್ದು, ಸುನಿಲ್ ಕಶ್ಯಪ್ ಧ್ವನಿಯಾಗಿದ್ದು, ಆರ್ ಬಿ ಭರತ್ ಟ್ಯೂನ್ ಹಾಕಿದ್ದಾರೆ. ಕೇಳುಗರಿಗೆ ಬಹಳ ಕನೆಕ್ಟ್ ಆಗುವ ಸೆಂಟಿಮೆಂಟ್ ಹಾಡು ಇದಾಗಿದ್ದು, ಸಾಹಿತ್ಯ, ಸಂಗೀತ ಎಲ್ಲಾ ವಿಚಾರದಲ್ಲೂ ಗಮನಸೆಳೆಯುತ್ತಿದೆ.
ಇತ್ತೀಚಿಗೆ ರಿಲೀಸ್ ಆದ ಮೋಷನ್ ಪೋಸ್ಟರ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿತ್ತು. ಯುವ ಪ್ರತಿಭೆ ರಂಜಿತ್ ಸಿಂಗ್ ರಜಪೂತ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತ್ರಿನೇತ್ರ ಫಿಲ್ಮಂಸ್ ಸಂಸ್ಥೆಯಡಿ ಎಂ.ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಬಾರ್ ಸಪ್ಲೈಯರ್ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಗೋಪಾಲ ಕೃಷ್ಣ ದೇಶಪಾಂಡೆ, ಜ್ಯೋತಿ ರೈ, ನವೀನ್ ಡಿ ಪಡಿಲ್ ಸೇರಿದಂತೆ ಒಂದಷ್ಟು ಹೊಸಬರು ಚಿತ್ರದಲ್ಲಿದ್ದಾರೆ.
ಸತೀಶ್ ಕುಮಾರ್.ಎ ಛಾಯಾಗ್ರಹಣ, ಆರ್.ಬಿ.ಭರತ್ ಸಂಗೀತ, ಸತೀಶ್ ಚಂದ್ರಯ್ಯ ಸಂಕಲನ ಚಿತ್ರಕ್ಕಿದೆ. ಸದ್ದಿಲ್ಲದೇ ಶೂಟಿಂಗ್ ಮುಗಿಸಿರುವ ಸಪ್ಲೈಯರ್ ಶಂಕರ ಬಿಡುಗಡೆಗೆ ಸಜ್ಜಾಗಿದ್ದಾನೆ.