ಕನ್ನಡದ ಗ್ಲಾಮರಸ್ ನಟಿ ಅನಿತಾಭಟ್ ಈಗ ಬಳೆಪೇಟೆಯಲ್ಲಿದ್ದಾರೆ. ಹಾಗಂತ ಬಳೆ ಖರೀದಿಗೆ ಬಳೆಪೇಟೆಯಲ್ಲಿ ನಿಂತಿಲ್ಲ. ‘ಬಳೆಪೇಟೆ’ ಅನ್ನೋದು ಅವರ ಹೊಸ ಚಿತ್ರದ ಹೆಸರು.
ದೀಪಾವಳಿ ಹಬ್ಬಕ್ಕೆ ಅವರ ‘ಬಳೆಪೇಟೆ’ ಚಿತ್ರದ ಫಸ್ಟ್ ಲುಕ್ ಹೊರಬಂದಿದೆ.
ಈ ಚಿತ್ರದ ಫಸ್ಟ್ ಲುಕ್ ನೋಡಿದರೆ, ಅದೊಂದು ಗ್ಯಾಂಗ್ ಸ್ಟೋರಿ ಇರಬಹುದಾ ಎಂಬ ಪ್ರಶ್ನೆ ಎದುರಾಗುತ್ತೆ. ಇಲ್ಲೊಂದು ಗ್ಯಾಂಗ್ ಸ್ಟೋರಿ ಇದ್ದರೂ, ಹೆಣ್ಣೊಬ್ಬಳ ಅಸಹಾಯಕತೆ, ನೋವು, ತಲ್ಲಣ ಇತ್ಯಾದಿ ವಿಷಗಳನ್ನು ಹೊಂದಿದೆ.
ಈ ಚಿತ್ರಕ್ಕೆ ರಿಷಿಕೇಶ್ ನಿರ್ದೇಶಕರು. ಇದು ಇವರ ಚೊಚ್ಚಲ ಚಿತ್ರ. ಕಥೆ, ಚಿತ್ರಕಥೆಯೊಂದಿಗೆ ನಿರ್ದೇಶನ ಮಾಡಿದ್ದು, ಜೊತೆಗೆ ಕ್ಯಾಮೆರಾ ಹಿಡಿದಿದ್ದಾರೆ. ಸಂಕಲನವನ್ನು ಮಾಡಿದ್ದಾರೆ.
ಅನಿತಾಭಟ್ ಈ ಚಿತ್ರದ ಮುಖ್ಯ ಆಕರ್ಷಣೆ. ಪ್ರಮೋದ್ ಬೋಪಣ್ಣ, ಉಮೇಶ್ ಬಣಕಾರ್, ಮಯೂರ್ ಪಟೇಲ್ ಇತರರು ನಟಿಸಿದ್ದಾರೆ.
ಶಿವರಾಮ್ ನಿರ್ಮಾಣವಿದೆ. ಇವರಿಗೂ ಇದು ಮೊದಲ ಪ್ರಯತ್ನ.
ಅನಿತಾಭಟ್ ಈ ಚಿತ್ರದಲ್ಲಿ ಮೇಕಪ್ ಮಾಡಿಲ್ಲ ಎಂಬುದು ವಿಶೇಷ. ‘ಬಳೆಪೇಟೆ’ ಚಿತ್ರ ನೈಜವಾಗಿಯೇ ಮೂಡಿಬರಬೇಕು ಎಂಬ ಉದ್ದೇಶದಿಂದ ನಿರ್ದೇಶಕರು ಚಿತ್ರೀಕರಣ ಸ್ಥಳ ಸೇರಿದಂತೆ ಕಲಾವಿದರನ್ನೂ ಹಾಗೆಯೇ ಆಯ್ಕೆ ಮಾಡಿದ್ದಾರೆ.
ಒಟ್ಟಾರೆ ‘ಬಳೆಪೇಟೆ’ ಒಂದು ಸೂಕ್ಷ್ಮತೆಯ ಸಿನಿಮಾ ಎಂಬುದು ಚಿತ್ರತಂಡದ ಹೇಳಿಕೆ.
ಅನಿತಾಭಟ್ ಅಬಿನಯದ ‘ಬೆಂಗಳೂರು 69’, ‘ಕಲಿವೀರ’,’ಕನ್ನೇರಿ’, ‘ಡಿಎನ್ಎ’, ‘ಜೂಟಾಟ’ ಮತ್ತು ‘ಪ್ರಭುತ್ವ’ ಚಿತ್ರಗಳಿವೆ. ಸದ್ಯ ರಿಲೀಸ್ ಗೆ ರೆಡಿ ಇರುವ ಸಿನಿಮಾಗಳ ಜೊತೆ ಈಗ ‘ಬಳೆಪೇಟೆ’ಯೂ ಇದೆ.
ಕನ್ನಡ ಚಿತ್ರರಂಗ ಮತ್ತೆ ಉತ್ಸಾಹದೊಂದಿಗೆ ತನ್ನ ಕಾರ್ಯಚಟುವಟಿಕೆಯಲ್ಲಿ ತೊಡಗಿದೆ. ಅದೇ ಉತ್ಸಾಹ ಮತ್ತು ಹುರುಪಿನೊಂದಿಗೆ ಚಿತ್ರಗಳು ಕೂಡ ಶುರುವಾಗುತ್ತಿವೆ. ಆ ಸಾಲಿಗೆ ಈಗ ‘ರೂಮ್ ಬಾಯ್’ ಚಿತ್ರ ಸೆಟ್ಟೇರುತ್ತಿದೆ. ಹೌದು ‘ರೂಮ್ ಬಾಯ್’ ಹೆಸರಲ್ಲೇ ಒಂದು ರೀತಿ ಮಜವಿದೆ. ಅಂತಹ ಮನರಂಜನೆಯ ಸಿನಿಮಾ ನಮನ ಎಂಬ ಉದ್ದೇಶದಿಂದ ಇಲ್ಲೊಂದು ಪ್ರತಿಭಾವಂತರ ತಂಡ ‘ರೂಮ್ ಬಾಯ್’ ಸಿನಿಮಾ ಕೈಗೆತ್ತಿಕೊಡಿದೆ. ದೀಪಾವಳಿ ಹಬ್ಬದಂದು ಚಿತ್ರತಂಡ ತನ್ನ ಫಸ್ಟ್ ಲುಕ್ ರಿಲೀಸ್ ಮಾಡಿದೆ.
ಲಿಖಿತ್ ಸೂರ್ಯ, ನಾಯಕ
ಸಿನಿಮಾದ ಶೀರ್ಷಿಕೆ ನೋಡಿದರೆ, ಇದು ಪಕ್ಕಾ ಪಡ್ಡೆ ಹುಡುಗರಿಗೆಂದೇ ಮಾಡುತ್ತಿರುವ ಸಿನಿಮಾ ಎನಿಸಿದರೂ, ಚಿತ್ರದಲ್ಲೊಂದು ವಿಶೇಷತೆ ಇದೆ. ಫೋರ್ಸ್ ಕೂಡ ಇದೆ.
ಅಂದಹಾಗೆ, ‘ರೂಮ್ ಬಾಯ್’ ಐ ಕ್ಯಾನ್ ಪ್ರೊಡಕ್ಷನ್ ಮೂಲಕ ಈ ಚಿತ್ರ ತಯಾರಾಗುತ್ತಿದೆ.
‘ರೂಮ್ ಬಾಯ್’ ಫಸ್ಟ್ ಲುಕ್ ನೋಡಿದವರಿಗೆ ಇದೊಂದು ಹೋಟೆಲ್ ವೊಂದರ ‘ರೂಮ್ ಬಾಯ್’ ಕಥೆ ಅನಿಸುತ್ತೆ. ಈ ಕಲರ್ ಫುಲ್ ಫಸ್ಟ್ ಲುಕ್ ಅನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಎಡಗೈಯಲ್ಲೊಂದು ವೈನ್ ತುಂಬಿದ ಗ್ಲಾಸ್ , ಬಲಗೈಯಲ್ಲೊಂದು ಕಬ್ಬಿಣದ ರಾಡು ಹಿಡಿದು ನಿಂತಿರುವ ಹೀರೋ ಕಾಣುತ್ತಾನೆ. ಆ ಕಬ್ಬಿಣದ ರಾಡನ್ನು ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಜಿನುಗುತ್ತಿರುವ ರಕ್ತದ ಹನಿಗಳು ಕಾಣುತ್ತವೆ. ಅಲ್ಲಿಗೆ ಅಲ್ಲೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎಂಬುದನ್ನು ಅರಿಯಬಹುದು. ಕನ್ನಡದಲ್ಲಿ ಈಗಾಗಲೇ ಸಸ್ಪೆನ್ಸ್ ಥ್ರಿಲ್ಲರ್ ಕಥೆಗಳಿಗೇನೂ ಬರವಿಲ್ಲ. ಅದೇ ಹಾದಿಯಲ್ಲಿ ಸಾಗಲಿರುವ ಈ ಚಿತ್ರದಲ್ಲಿ ಹಲವಾರು ವಿಶೇಷತೆಗಳಿವೆ ಎಂಬುದು ಚಿತ್ರತಂಡದ ಹೇಳಿಕೆ.
ಈ ಚಿತ್ರಕ್ಕೆ ಲಿಖಿತ್ ಸೂರ್ಯ ಹೀರೋ. ಈ ಚಿತ್ರಕ್ಕೆ ರವಿ ನಾಗಡದಿನ್ನಿ ನಿರ್ದೇಶಕರು.
ಲಿಖಿತ್ ಸೂರ್ಯ ಇಲ್ಲಿ ನಟನೆ ಜೊತೆಗೆ ಇದೇ ಮೊದಲ ಸಲ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ತಮ್ಮ ಆಪ್ತ ಕೆಲ ಗೆಳೆಯರೂ ಕೂಡ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಲಿಖಿತ್ ಸೂರ್ಯ ಅವರಿಗೆ ಸಿನಿಮಾ ಹೊಸದಲ್ಲ. ಈ ಹಿಂದೆ ‘ಲೈಫು ಸೂಪರ್’ ಮತ್ತು ‘ಆಪರೇಷನ್ ನಕ್ಷತ್ರ’ ಚಿತ್ರ ಮಾಡಿದ್ದಾರೆ. ಇದರೊಂದಿಗೆ ತೆಲುಗಿಗೂ ಎಂಟ್ರಿಯಾಗಿರುವ ಲಿಖಿತ್ ಸೂರ್ಯ, ‘ರಾಮಾಪುರಂ’ ಹೆಸರಿನ ಚಿತ್ರದಲ್ಲೂ ಹೀರೋ ಆಗಿ ನಟಿಸಿದ್ದಾರೆ. ಸದ್ಯ ಎರಡನೇ ಹಂತದ ಚಿತ್ರೀಕರಣ ಮುಗಿದರೆ, ‘ರಾಮಾಪುರಂ’ ಪೂರ್ಣಗೊಳ್ಳಲಿದೆ. ಈಗ ಐ ಕ್ಯಾನ್ ಪ್ರೊಡಕ್ಷನ್ ಮೂಲಕ ‘ರೂಮ್ ಬಾಯ್’ ಮಾಡುತ್ತಿದ್ದಾರೆ.
ರವಿ ನಾಗಡದಿನ್ನಿ, ನಿರ್ದೇಶಕ
ಇನ್ನು ನಿರ್ದೇಶಕ ರವಿ ನಾಗಡದಿನ್ನಿ ಅವರಿಗೂ ಈ ‘ರೂಮ್ ಬಾಯ್’ ಮೊದಲ ಪ್ರಯತ್ನ. ಹಾಗಂತ ಇವರಿಗೆ ಸಿನಿಮಾ ರಂಗ ಹೊಸದಲ್ಲ. ನಿರ್ದೇಶಕನ ಕನಸು ಕಟ್ಟಿಕೊಂಡಿದ್ದ ರವಿ ನಾಗಡದಿನ್ನಿ ಸಾಫ್ಟ್ ವೇರ್ ಕೆಲಸವನ್ನೇ ಬಿಟ್ಟು ಈ ಕಲರ್ ಫುಲ್ ಲೋಕಕ್ಕೆ ಎಂಟ್ರಿಯಾದವರು.
ಹೌದು, ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ರವಿ, ಸಿನಿಮಾ ರಂಗದಲ್ಲಿ ಸಾಧಿಸಕೆಂಬ ಆಸೆ ಹುಟ್ಟಿದ್ದೇ ತಡ, ಕೆಲಸ ಬಿಟ್ಟು 2011 ರಲ್ಲಿ ಗಾಂಧಿನಗರ ಕಡೆ ಮುಖ ಮಾಡಿದವರು.
ಬಿಸಿಲೂರು ಎಂದೇ ಕರೆಸಿಕೊಳ್ಳುವ ರಾಯಚೂರು ಜಿಲ್ಲೆಯ ನಾಗಡದಿನ್ನಿ ಎಂಬ ಸಣ್ಣ ಹಳ್ಳಿಯಲ್ಲಿದ್ದ ರವಿ
ಸಿನಿಮಾ ಪ್ರೀತಿ ಬೆಳೆಸಿಕೊಂಡು ಇತ್ತ ಮುಖ ಮಾಡಿದ್ದಾರೆ.
ಈ ಸಿನಿಮಾಗೂ ಮುನ್ನ ರವಿ ನಾಗಡದಿನ್ನಿ ಒಂದಿಷ್ಟು ಕಿರು ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ನಂತರದ ದಿನಗಳಲ್ಲಿ ಸಂಭಾಷಣೆಗಾರ ಪ್ರಶಾಂತ ರಾಜಪ್ಪನವರ ಪರಿಚಯವಾಗಿ ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅಲ್ಲಿಂದ ‘ತಿರುಪತಿ ಎಕ್ಸಪ್ರೆಸ್ಸ್ ‘, ‘ಲೈಫು ಸೂಪರ್’ ಸಿನಿಮಾಗಳಿಗೆ ಇವರು ಮಾತುಗಳನ್ನು ಪೋಣಿಸಿದ್ದಾರೆ.
‘ವೀಲ್ ಚೇರ್ ರೋಮಿಯೋ’, ‘ಮೃಗಶಿರ’ ಸೇರಿದಂತೆ ಕೆಲವು ಸಿನಿಮಾಗಳಿಗೆ ಕೋ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದಾರೆ.
ಅವರ ಕೆಲಸ ನೋಡಿದ ಅನೇಕ ಸಿನಿಮಾ ಗೆಳೆಯರು ಬೆನ್ನೆಲಬಾಗಿ ನಿಂತಿದ್ದಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಅವರು ಸಾಫ್ಟ್ ವೇರ್ ಕೆಲಸ ಬಿಟ್ಟು ಸಿನಿಮಾ ಕಡೆ ವಾಲಿದಾಗ ಮನೆಯಲ್ಲಿ ಬೆಂಬಲಕ್ಕೆ ನಿಂತವರು ಸಹೋದರಿ ಅನ್ನಪೂರ್ಣ ಹಾಗು ಬಾವ ಬಲಬೀಮಾ. ಇವರೊಂದಿಗೆ ಗೆಳೆಯರಾದ ಸಂತೋಷ ಹೆಬ್ಬಾಳ ,ಬಂದೆ ನವಾಜ್ ಸಾಥ್ ಕೊಟ್ಟಿದ್ದನ್ನು ಸ್ಮರಿಸುತ್ತಾರೆ ನಿರ್ದೇಶಕ ರವಿ ನಾಗಡದಿನ್ನಿ.
ಮೊದಲ ಪ್ರಯತ್ನ
ರವಿ ನಾಗಡದಿನ್ನಿ ಈಗ ತಮ್ಮ ನಿರ್ದೇಶನದ ಮೊದಲ ಸಿನಿಮಾ ‘ರೂಮ್ ಬಾಯ್’ ನಿರ್ದೇಶನಕ್ಕೆ ಅಣಿಯಾಗಿದ್ದಾರೆ.
ಇನ್ನು ಅವರ ಈ ಪ್ರಯತ್ನಕ್ಕೆ ನಾಯಕ ಲಿಖಿತ್ ಸೂರ್ಯ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ನಾಯಕನ ಆಯ್ಕೆ ಮಾತ್ರ ಆಗಿದ್ದು, ಇಷ್ಟರಲ್ಲೇ ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯಲಿದೆ.
ಕಥೆ ಲಿಖಿತ್ ಸೂರ್ಯ ಬರೆದರೆ, ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ರವಿ ನಾಗಡದಿನ್ನಿ ಹೊತ್ತಿದ್ದಾರೆ. ಚಿತ್ರಕಥೆಗೆ ಇವರಿಬ್ಬರ ಶ್ರಮವೂ ಇದು.
ಇದು ಸೈಕಲಾಜಿಕಲ್ ಥ್ರಿಲ್ಲರ್
ಕಥೆ ಬಗ್ಗೆ ಹೇಳುವ ನಿರ್ದೇಶಕರು, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿದೆ. ಈಗಿನ ಟ್ರೆಂಡ್ ಜೊತೆಗೆ ವಿಭಿನ್ನ ಸಿನಿಮಾ ಕಟ್ಟಿ ಕೊಡುವ ಪ್ರಯತ್ನದಲ್ಲಿದ್ದಾರಂತೆ ನಿರ್ದೇಶಕರು.
ಅಂದಹಾಗೆ, ದೀಪಾವಳಿ ಹಬ್ಬದ ದಿನದಂದು ಗೋಧೂಳಿ ಸಮಯದಂದು ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ಡಿಸೆಂಬರ್ ತಿಂಗಳಿಂದ ಚಿತ್ರದ ಶೂಟಿಂಗ್ ಶರುವಾಗಲಿದೆ . ಸುಮಾರು 30 ದಿನಗಳ ಕಾಲ ಬೆಂಗಳೂರಲ್ಲಿ ಚಿತ್ರೀಕರಣ ನಡೆಯಲಿದೆ .
ಈ ಚಿತ್ರಕ್ಕೆ ರೋಣದ ಬಕ್ಕೇಶ್ ಸಂಗೀತ ನೀಡಿದರೆ, ಅರುಣ್ ಎಎನ್ ಆರ್ ಅವರ ಛಾಯಾಗ್ರಹಣವಿದೆ. ಕಿರಣ್ ಕುಮಾರ್ ಅವರ ಸಂಕಲನವಿದೆ. ಸದ್ಯ ‘ರೂಮ್ ಬಾಯ್ ‘ ಫಸ್ಟ್ ಲುಕ್ ಗೆ ಮೆಚ್ಚುಗೆ ಸಿಗುತ್ತಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಈಗ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಲಾಕ್ ಡೌನ್ ಬಳಿಕ ಸಂಚಾರಿ ವಿಜಯ್ ಒಂದೊಳ್ಳೆಯ ಕಥೆ ಮತ್ತು ಪಾತ್ರ ಮೆಚ್ಚಿಕೊಂಡು ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂಬುದು ಈ ಹೊತ್ತಿನ ಸುದ್ದಿ.
ಆ ಚಿತ್ರಕ್ಕೆ ‘ಅವಸ್ಥಾಂತರ’ ಎಂದು ನಾಮಕರಣ ಮಾಡಲಾಗಿದೆ. ಇನ್ನು ‘ ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ’ ಎಂಬ ಅಡಿಬರಹವೂ ಇದೆ. ಸದ್ಯಕ್ಕೆ ದೀಪಾವಳಿ ದಿನದಂದು ಚಿತ್ರದ ಫಸ್ಟ್ ಲುಕ್ ಹೊರಬಂದಿದೆ.
ದೀಪಕ್ , ನಿರ್ದೇಶಕ, ನಿರ್ಮಾಪಕ
ಚಿತ್ರಕ್ಕೆ ಜಿ.ದೀಪಕ್ ಕುಮಾರ್ ನಿರ್ದೇಶಕರು. ಈ ಹಿಂದೆ ಇವರು ‘ಮಠ’ ಖ್ಯಾತಿಯ ಗುರುಪ್ರಸಾದ್ ಅವರ ಗರಡಿಯಲ್ಲಿ ಪಳಗಿದವರು. ಇದರೊಂದಿಗೆ ಮಲಯಾಳಂ ನ ಪ್ರಸಿದ್ಧ ನಟರಾದ ಮೋಹನ್ ಲಾಲ್ ಮತ್ತು ಮಮ್ಮುಟಿ ಅವರ ಕೆಲ ಚಿತ್ರಗಳಿಗೆ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದರೊಂದಿಗೆ ಸಾಕಷ್ಟು ಡಾಕ್ಯುಮೆಂಟರಿ ಮತ್ತು ಜಾಹಿರಾತು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ‘ಅವಸ್ಥಾಂತರ’ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ.
ಹದಿಹರೆಯದ ಯುವಕನೊಬ್ಬ ತನಗೆ ಅರಿವಿಲ್ಲದೆ ಹುಟ್ಟುವ ಬಯಕೆಗಳು, ಕಾಮನೆಗಳು ಹೇಗೆ ಆ ಹುಡಗನನ್ನು ಅತಂತ್ರ ಸ್ಥಿತಿಗೆ ತಳ್ಳುತ್ತದೆ ಮತ್ತು ಅದರಿಂದ ಏನೆಲ್ಲಾ ಪಜೀತಿ, ಅವಸ್ಥೆ, ಅನಾಹುತಗಳು ನಡೆಯುತ್ತವೆ ಎಂಬ ತಿಳಿ ಹಾಸ್ಯದ ಮೂಲಕ ಒಂದು ಸಂದೇಶ ಕಟ್ಟಿ ಕೊಡುವ ಪ್ರಯತ್ನ ಈ ಚಿತ್ರದ ಮೂಲಕ ಮಾಡಲಿದ್ದಾರೆ ನಿರ್ದೇಶಕರು. ಡಿಸೆಂಬರ್ ಕೊನೆಯ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಇನ್ನಷ್ಟು ಮಾಹಿತಿ ಹೊರಬೀಳಲಿದೆ.
ಕನ್ನಡದಲ್ಲಿ ಸದ್ಯಕ್ಕೆ “ತ್ರಿವಿಕ್ರಮ” ಸಿನಿಮಾ ಜೋರು ಸುದ್ದಿ ಮಾಡುತ್ತಲೇ ಇದೆ. ಆರಂಭದಿಂದಲೂ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿರುವುದು ಗೊತ್ತೇ ಇದೆ. ಈಗಾಗಲೇ ಕ್ರೇಜಿಸ್ಟಾರ್ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ “ತ್ರಿವಿಕ್ರಮ” ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ನಿರೀಕ್ಷೆ ಮೂಡಿಸಿರುವುದಂತೂ ನಿಜ. ಆ ನಿರೀಕ್ಷೆಗೆ ತಕ್ಕಂತೆಯೇ ಈಗಾಗಲೇ ಚಿತ್ರದ ಫಸ್ಟ್ ಲುಕ್ ಟೀಸರ್ , ಮೋಷನ್ ಪೋಸ್ಟರ್ ಎಲ್ಲವೂ ಮಾತಾಡುತ್ತಿದೆ. ಅಷ್ಟೇ ಯಾಕೆ, ಕಳೆದ ಮಹಲಾಕ್ಷ್ಮಿ ಹಬ್ಬದಂದೇ ವಿಕ್ರಮ್ ಅಭಿನಯದ ಈ “ತ್ರಿವಿಕ್ರಮ” ಚಿತ್ರದ ಆಡಿಯೋ ಹಕ್ಕು ದಾಖಲೆ ಮಟ್ಟಕ್ಕೆ ಮಾರಾಟ ಆಗಿದ್ದು ಎಲ್ಲರಿಗೂ ಗೊತ್ತಿದೆ. ಚಿತ್ರತಂಡ ಈಗ ಅದೇ ಖುಷಿಯಲ್ಲಿ ನವೆಂಬರ್ ೧೪ರಂದು ಮಕ್ಕಳ ದಿನಾಚರಣೆ ಅಂಗವಾಗಿ, ಸಖತ್ ಆಗಿರುವ ಹಾಡೊಂದನ್ನು ಬಿಡುಗಡೆ ಮಾಡಿದೆ.
ಹೌದು, ಮಕ್ಕಳ ದಿನಾಚರಣೆಯ ದಿನದಂದು ವಿಶೇಷವಾಗಿ ಮಕ್ಕಳಿಗೆ ಇಷ್ಟವಾಗುವ, ತಾಯಂದಿರಿಗೂ ಇಷ್ಟವಾಗುವ ಹಾಡು ಹೊರಬಂದಿದೆ. ಅರ್ಜುನ್ ಜನ್ಯಾ ಸಂಗೀತವಿರುವ ಈ ಹಾಡಿಗೆ ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. “ಮಮ್ಮಿ ಪ್ಲೀಸ್ ಮಮ್ಮಿ” ಎಂಬ ಹಾಡು ಈಗ ಹೊರಬಂದಿದೆ. ಈ ಹಾಡಿಗೆ ಗಾಯಕ ವಿಜಯಪ್ರಕಾಶ್ ಧ್ವನಿಯಾಗಿದ್ದಾರೆ.
ಅಮ್ಮನನ್ನು ಕಾಡುವ, ಬೇಡವ ಚಿನಕುರಳಿಯಂತಿರುವ ಹಾಡು ಕೇಳುವುದಕ್ಕೆ ಒಂದು ರೀತಿ ಮಜಾ ಇದೆ. ಈಗಾಗಲೇ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ, ಚಿತ್ರದ ಹಾಡಿಗೆ ಭರಪೂರ ಮೆಚ್ಚುಗೆ ಸಿಕ್ಕಿದ್ದು, ಬಹುತೇಕ ಹುಡುಗರು ಹಾಡನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.
ಇನ್ನು, ವಿಕ್ರಮ್ ಅವರನ್ನ ಹೀರೋ ಮಾಡಿದ್ದು ನಿರ್ದೇಶಕ ಸಹನಾ ಮೂರ್ತಿ. ಈ “ತ್ರಿವಿಕ್ರಮ” ಎಂಬ ಅದ್ಧೂರಿ ಬಜೆಟ್ ಚಿತ್ರವನ್ನು ಗೌರಿ ಎಂಟರ್‌ಟೈನರ್ಸ್ ಬ್ಯಾನರ್‌ನಲ್ಲಿ ನಿರ್ಮಿಸಿರೋದು ಸೋಮಣ್ಣ. ವಿಕ್ರಮ್ ಅವರ ಲುಕ್ ಮತ್ತು ಮ್ಯಾನರಿಸಂಗೆ ತಕ್ಕ ಕಥೆ ಹೆಣೆದು ಸಿನಿಮಾ ಮಾಡಿದ್ದಾರೆ.
ಆರಂಭದಿಂದಲೂ ತುಂಬಾನೇ ಸ್ಪೆಷಲ್ ಆಗಿಯೇ ಸಿನಿಮಾವನ್ನು ರೆಡಿ ಮಾಡಿರುವ ನಿರ್ದೇಶಕ ಸಹನಾ ಮೂರ್ತಿ, ನಿರ್ಮಾಪಕ ಸೋಮಣ್ಣ ಅವರ ಪ್ರೋತ್ಸಾಹದಿಂದ ಈಗ ಸಿನಿಮಾವನ್ನು ಇನ್ನೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಈಗಾಗಲೇ ಹೊರಬಂದಿರುವ “ತ್ರಿವಿಕ್ರಮ” ಚಿತ್ರದ ಫಸ್ಟ್ ಲುಕ್ ಟೀಸರ್ ಸಾಕ್ಷಿಯಾಗಿದೆ.
ಸೋಮಣ್ಣ, ನಿರ್ಮಾಪಕ
ನಿರ್ಮಾಪಕ, ನಿರ್ದೇಶಕರ ಕಾಳಜಿಯ ವಿಕ್ರಮ!
ಸಿನಿಮಾ ಅಂದಮೇಲೆ ಪ್ರೀತಿ ಇರಬೇಕು. ಆ ಪ್ರೀತಿ ಇದ್ದಾಗ ಮಾತ್ರ ಒಳ್ಳೆಯ ಸಿನಿಮಾಗಳು ಹೊರಬರುತ್ತವೆ. ಆ ಸಾಲಿಗೆ “ತ್ರಿವಿಕ್ರಮ” ಸಿನಿಮಾ ಕೂಡ ಸೇರುವುದರಲ್ಲಿ ಎರಡು ಮಾತಿಲ್ಲ. ಕನಸುಗಾರನ ಮಗನನ್ನು ಸಖತ್ ಆಗಿಯೇ ತೋರಿಸುವ ಕನಸು ಕಂಡಿದ್ದ ನಿರ್ದೇಶಕ ಸಹನಾ ಮೂರ್ತಿ ಹಾಗೂ ನಿರ್ಮಾಪಕ ಸೋಮಣ್ಣ ಎಷ್ಟೇ ರಿಸ್ಕ್ ಇದ್ದರೂ ಸರಿ, ಅದ್ಭುತವಾಗಿಯೇ ಸಿನಿಮಾವನ್ನು ತೋರಿಸಬೇಕು ಎಂಬ ಉದ್ದೇಶದಿಂದ ಕೋಟಿಗಟ್ಟಲೆ ಹಣ ಹಾಕಿದ್ದಾರೆ. “ತ್ರಿವಿಕ್ರಮʼ ಸಿನಿಮಾ ಮೇಲೆ ಇವರಿಬ್ಬರಿಗೂ ತೃಪ್ತಭಾವವಿದೆ. ಈಗಾಗಲೇ ಈ ಅದ್ಧೂರಿಗೆ ಸಾಕ್ಷಿಯೆಂಬಂತೆ ಚಿತ್ರದ ಚಿತ್ರೀಕರಣ ಅದ್ಧೂರಿಯಾಗಿ ಮೂಡಿಬಂದಿರೋದು.
ಸಹನಾ ಮೂರ್ತಿ, ನಿರ್ದೇಶಕ
ಈಗಾಗಲೇ, 50 ಲಕ್ಷ ಮೊತ್ತಕ್ಕೆ ಎ೨ ಮ್ಯೂಸಿಕ್ ಸಂಸ್ಥೆ ಆಡಿಯೋ ಹಕ್ಕು ಕೂಡ ಮಾರಾಟವಾಗಿರುವುದು ಸಿನಿಮಾದ ಮೊದಲ ಗೆಲುವು ಎನ್ನಬಹುದು. ಹೀಗಾಗಿ ತ್ರಿವಿಕ್ರಮನಿಗೆ ಡಿಮ್ಯಾಂಡ್ ಇರೋದಂತು ನಿಜ. ಅಂದಹಾಗೆ, ತ್ರಿವಿಕ್ರಮ ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಹಾಗು ಯೋಗರಾಜ್ ಭಟ್ ಅವರ ಸಾಹಿತ್ಯವಿದೆ. ಅರ್ಜುನ್ ಜನ್ಯ ಸಂಗೀತದ ಹಾಡೊಂದು ಈಗ ಹೊರಬಂದಿದ್ದು ಭರ್ಜರಿ ಸೌಂಡು ಮಾಡುತ್ತಿದೆ.
ಆಕಾಂಕ್ಷ, ನಟಿ
ಪಕ್ಕಾ ಮಾಸ್ ಮತ್ತುಕ್ಲಾಸ್ ಸಿನ್ಮಾ
ಈ ಹಿಂದೆ “ರೋಜ್” ಹಾಗೂ “ಲೀಡರ್” ಸಿನಿಮಾವನ್ನು ಕಟ್ಟಿ ಕೊಟ್ಟ ನಿರ್ದೇಶಕ ಸಹನಾಮೂರ್ತಿ ಅವರು ನಿರ್ಮಾಪಕ ಸೋಮಣ್ಣ ಅವರ ಪ್ರೋತ್ಸಾಹದಿಂದಾಗಿ ಮಾಸ್ ಮತ್ತು ಕ್ಲಾಸ್ ಸಿನಿಮಾ ಮಾಡಿದ್ದಾರೆ. ಹಾಗೆಯೇ ಹಾಡುಗಳನ್ನೂ ಅದ್ಭುತವಾಗಿ ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ಅರ್ಜುನ್ ಜನ್ಯಾ ಬಳಿ ಸಂಗೀತ ಮಾಡಿಸಿದ್ದು, ಹಿರಿಯ ಗೀತ ಸಾಹಿತಿಗಳ ಬಳಿ ಹಾಡನ್ನು ಬರೆಸಿ, ಹಾಡಿಸಿದ್ದಾರೆ. ವಿಜಯಪ್ರಕಾಶ್ ಈಗ ” ಮಮ್ಮಿ ಪ್ಲೀಸ್ ಮಮ್ಮಿ” ಹಾಡು ಹೊಸ ಕ್ರೇಜ್ ಹುಟ್ಟಿಸಿದೆ. ಸಹಜವಾಗಿಯೇ ಚಿತ್ರತಂಡಕ್ಕೂ ಖುಷಿಯಾಗಿದೆ.
ನಟ ಸುದೀಪ್ ಅವರು ಹೊಸ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಈಗ ನಟಿ, ನಿರ್ದೇಶಕಿ ಶೀತಲ್ ಶೆಟ್ಟಿ ಅವರ ಹೊಸ ಸಿನಿಮಾಗೂ ಸಹ ಮೆಚ್ಚುಗೆ ಸೂಚಿ, ಶುಭ ಹಾರೈಸಿದ್ದಾರೆ.
ಹೌದು, ಶೀತಲ್ ಶೆಟ್ಟಿ ಇದೇ ಮೊದಲ ಸಲ ನಿರ್ದೇಶನ ಮಾಡಿರುವ ‘ವಿಂಡೋಸೀಟ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸುದೀಪ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಶುಭಹಾರೈಸಿದ್ದಾರೆ. ತಮ್ಮ ಖಾತೆಯಲ್ಲಿ, ”ವಿಂಡೋ ಸೀಟ್’ನ ಟೀಸರ್ ಬಹಳ ಭರವಸೆಯಿಂದ ಕಾಣುತ್ತಿದೆ. ಪ್ರತಿ ಫ್ರೇಮ್ ಸಹ ಅಚ್ಚುಕಟ್ಟಾಗಿ ಹೆಣೆದಂತೆ ಕಾಣುತ್ತದೆ. ಖಂಡಿತವಾಗಿಯೂ ಚಿತ್ರತಂಡ ಶ್ರಮಿಸಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಈ ಚಿತ್ರವನ್ನು ನೋಡಲು ಎದುರು ನೋಡುತ್ತಿದ್ದೇನೆ” ಎಂದು ಸುದೀಪ್ ಟ್ವೀಟ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ವಿಂಡೋಸೀಟ್’ ಟೀಸರ್ ನೋಡಿದವರಿಗೆ ಅದೊಂದು ರೊಮ್ಯಾಂಟಿಕ್ ಅನುಭವದ ಕಥಾಹಂದರ ಎಂಬ ಫೀಲ್ ಕೊಡಲಿದೆ. ಅದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಎಂಬುದಕ್ಕೆ ಟೀಸರ್‌ನಲ್ಲಿ ಹಲವು ಅಂಶಗಳು ಕಾಣಸಿಗುತ್ತವೆ. ಇನ್ನು, “ವಿಂಡೋ ಸೀಟ್”ನಲ್ಲಿ ಒಂದೊಳ್ಳೆಯ ಪ್ರೇಮಕಥೆ ಹೈಲೈಟ್ ಆಗಿದೆ. ಸಾಕಷ್ಟು ಕುತೂಹಲ ಕೆರಳಿಸುವ ಅಂಶಗಳಿವೆ. ಈಗಾಗಲೇ ಟೀಸರ್ ನೋಡಿದವರಿಂದ ಸಾಕಷ್ಟು ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಚಿತ್ರದಲ್ಲಿ’ರಂಗಿತರಂಗ’ ಖ್ಯಾತಿಯ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿರುವದ್ದಾರೆ. ಈ ಹಿಂದೆ ಚಿತ್ರದ ಫಸ್ಟ್ ಲುಕ್ ಸಾಕಷ್ಟು ಸುದ್ದಿ ಮಾಡಿತ್ತು. ಈಗ ಟೀಸರ್‌ಗೂ ಅಂತಹ ಪ್ರತಿಕ್ರಿಯೆ ಸಿಗುತ್ತಿದೆಲ ಸದ್ಯಕ್ಕೆ’ವಿಂಡೋಸೀಟ್’ ನೋಡುಗರಿಗೆ ಮಜ ಕೊಡುವ ಸಿನಿಮಾ ಎಂಬ ಬಲವಾದ ನಂಬಿಕೆ ಚಿತ್ರತಂಡದ್ದು. ಈ ಚಿತ್ರದಲ್ಲಿ ನಿರೂಪ್‌ಗೆ ನಾಯಕಿಯಾಗಿ ಅಮೃತಾ ಅಯ್ಯಂಗರ್ ಮತ್ತು ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ.
‘ಸಲಗ’ ನಂತರ ಮತ್ತೊಂದು ಸಿನಿಮಾ ನಿರ್ದೇಶಿಸುವುದಾಗಿ ಹೇಳಿದ್ದ ‘ದುನಿಯಾ’ ವಿಜಯ್, ತಮ್ಮ ಎರಡನೇ ಚಿತ್ರಕ್ಕೆ ನಾಯಕಿಯನ್ನು ಫಿಕ್ಸ್ ಮಾಡಿದ್ದಾರೆ.ಡಾ.ರಾಜ್ ಕುಟುಂಬದ ಲಕ್ಕಿ ಗೋಪಾಲ್ ಅವರನ್ನು ನಾಯಕ ಎಂದು ಘೋಷಿಸಿದ್ದರು. ಆಗ ನಾಯಕಿಯ ಆಯ್ಕೆ ಆಗಿರಲಿಲ್ಲ. ಇದೀಗ ಚಿತ್ರಕ್ಕೆ ನಾಯಕಿಯನ್ನು ಆಯ್ಕೆ ಮಾಡಿದ್ದಾರೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಕರಾವಳಿ ಬೆಡಗಿ ಮೋಕ್ಷಿತಾ ಪೈ ಮೊದಲ ಬಾರಿಗೆ ಸಿನಿಮಾರಂಗವನ್ನು ಸ್ಪರ್ಶಿಸಲಿದ್ದಾರೆ.
ದುನಿಯಾ ವಿಜಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಬಹುತೇಕರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಅದರಂತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಲಕ್ಕಿ ಗೋಪಾಲ್ ಈ ಚಿತ್ರದ ಮೂಲಕ ಎಂಟ್ರಿ ಪಡೆಯುತ್ತಿದ್ದರೆ, ‘ಪಾರು’ ಧಾರಾವಾಹಿ ಮೂಲಕ ಗಮನ ಸೆಳೆದಿರುವ ಮೋಕ್ಷಿತಾ ಪೈ ಚಂದನವನಕ್ಕೆ ಇಡುತ್ತಿದ್ದಾರೆ.
ಇನ್ನುಳಿದಂತೆ ಮಿಕ್ಕ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ತಾಂತ್ರಿಕ ವರ್ಗದ ಆಯ್ಕೆ ಅಂತಿಮವಾಗಿದೆ. ವಾಸುಕಿ ವೈಭವ್ ಮತ್ತು ಚರಣ್ ರಾಜ್ ಸಂಗೀತವಿದೆ. ಬಾಲು ಶಿವಮೊಗ್ಗ ಛಾಯಾಗ್ರಹಣ ಮಾಡಿದರೆ, ಮಾಸ್ತಿ ಮಂಜು ಸಂಭಾಷಣೆ ಇದೆ.
ಇನ್ನು ಶೀರ್ಷಿಕೆ ಫೈನಲ್ ಆಗಿಲ್ಲ. ಸಿನಿಮಾಕ್ಕೆ ಇನ್ನೂ ಹಲವು ಹೊಸಬರನ್ನು ಪರಿಚಯಿಸುವ ಯೋಚನೆ ನಿರ್ದೇಶಕರದ್ದು. ಶೀಘ್ರದಲ್ಲಿಯೇ ಶೀರ್ಷಿಕೆ ಅಂತಿಮ ಮಾಡಿ, ಶೂಟಿಂಗ್ ಮಾಡಲು ದುನಿಯಾ ವಿಜಯ್ ಯೋಚಿಸಿದ್ದಾರೆ.
“ಬೆಂಗಳೂರಿನ ಕೊತ್ತನೂರು ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಯಾಂಡಲ್ ವುಡ್ ನಿರ್ಮಾಪಕರು ಉದ್ಯಮಿಯೂ ಆಗಿರುವ ಮಂಜುನಾಥ ಭಟ್ ಎಂಬುವರನ್ನು ಹತ್ಯೆ ಮಾಡಲಾಗಿದೆ. ಮೂವರು ಶಂಕಿತರನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಮಂಜುನಾಥ್ ಭಟ್ ಅವರ ಪತ್ನಿ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಹಂತಕರು ಈ ಕೃತ್ಯ ಎಸಗಿದ್ದಾರೆ. ವಿಷಯ ತಿಳಿದ ಪತ್ನಿ ಆಘಾತಕ್ಕೊಳಗಾಗಿದ್ದು, ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ…
ಮೇಲಿನ ಸಾಲುಗಳನ್ನು ಓದಿದಾಕ್ಷಣ, ಅಚ್ಚರಿಯಾದರೆ ಅನುಮಾನವಿಲ್ಲ. ಹಾಗಂತ ಇದು ಯಾವುದೋ ಕ್ರೈಮ್ ಸುದ್ದಿಯಲ್ಲ. ಬದಲಿಗೆ ಚಿತ್ರವೊಂದರ ಟ್ರೇಲರ್‌ನಲ್ಲಿ ಬರುವ ಡೈಲಾಗ್. ಹೌದು, ಇದಿಷ್ಟು ಕೇಳಿದ ಮೇಲೆ ಚಿತ್ರದ ಬಗ್ಗೆ ಒಂದಷ್ಟು ಕುತೂಹಲ ಮೂಡಿಸುವುದಂತೂ ಹೌದು. ಟ್ರೇಲರ್ ನೋಡಿದವರಿಗೆ ಸಿನಿಮಾ ನೋಡಲೇಬೇಕು ಎನಿಸುವುದೂ ಉಂಟು. ಅಂಥದ್ದೊಂದು ಹೊಸ ನಿರೀಕ್ಷೆ, ಭರವಸೆ ಹುಟ್ಟಿಸಿರುವ ಚಿತ್ರ “ಅರಿಷಡ್ವರ್ಗʼ. ಹೌದು, ಇದು ಪಕ್ಕಾ ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಸಿನಿಮಾ. ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲಾ ಕಡೆಯಿಂದಲೂ ಉತ್ತಮ ಮೆಚ್ಚುಗೆ ಸಿಕ್ಕಿದೆ.
ಕನ್ನಡದಲ್ಲಿ ಈಗಾಗಲೇ ವಿಭಿನ್ನ ರೀತಿಯಲ್ಲಿರುವ ಶೀರ್ಷಿಕೆಯ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಈಗ “ಅರಿಷಡ್ವರ್ಗ” ಕೂಡ ಸೇರಿದೆ ಎಂಬುದು ವಿಶೇಷ. ಈಗಾಗಲೇ ಚಿತ್ರ ನವೆಂಬರ್ 27ರಂದು ಬಿಡುಗಡೆಗೆ ರೆಡಿಯಾಗಿದ್ದು, ಅದಕ್ಕೂ ಮುನ್ನ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದಲ್ಲದೆ, ನಟ ಸುದೀಪ್ ಕೂಡ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ಅರಿಷಡ್ವರ್ಗ” ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಸುದೀಪ್, ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ದಾರೆ.
ಅರವಿಂದ್ ಕಾಮತ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ, ಸಂಕಲನವನ್ನೂ ನಿರ್ವಹಿಸಿರುವ ಅರವಿಂದ್ ಕಾಮತ್, “ಅರಿಷಡ್ವರ್ಗ” ಚಿತ್ರದ ಮೂಲಕ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ, ಒಂದು ಸಂಬಂಧಗಳ ಚಾಲಿತ, ನಿಗೂಢತೆ ಇರುವ ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಸಿನಿಮಾದಲ್ಲಿ ಹೀರೋ ಕೆಲಸ ಅರಸಿ ಒಂದು ಮನೆಗೆ ಹೋದಾಗ, ಅಚ್ಚರಿಯೆಂಬಂತೆ ಕೊಲೆಯ ಕೇಸಿನಲ್ಲಿ ಸಿಲುಕುತ್ತಾನೆ. ಅವನೊಂದಿಗೆ ಸಿನಿಮಾದ ಹುಚ್ಚು ಹಿಡಿಸಿಕೊಂಡ ಒಬ್ಬ ಹುಡುಗಿ ಮತ್ತು ಆ ಮನೆಯಲ್ಲಿ ಕಳವು ಮಾಡಲು ಬರುವ ಒಬ್ಬ ಕಳ್ಳನೂ ಆ ವೇಳೆ ಎಂಟ್ರಿಯಾಗುತ್ತಾರೆ. ಅವರೆಲ್ಲರೂ ಅ ಕೊಲೆಯ ಪೇಚಿಗೆ ಸಿಲುಕುತ್ತಾರೆ. ಇವುಗಳ ಜೊತೆ ಉದ್ಯಮಿ ದಂಪತಿ ಸುತ್ತವೇ ಕಥೆ ಸುತ್ತುತ್ತದೆ. ಈ ನಡುವೆ ಕೊಲೆ ಹಾಗೂ ಅಲ್ಲಿ ಸಿಗುವ ಮೂವರಿಗೂ ಇರುವ ಸಂಬಂಧದ ಕುರಿತು ನಡೆಯುವ ತನಿಖೆ ಸಿನಿಮಾದ ಹೈಲೈಟ್.
ಅಂದಹಾಗೆ, ಇದು ಕಾಮ, ಕ್ರೋಧ, ಪ್ರೀತಿ, ದುರಾಸೆ, ಅಧಿಕಾರ ಮತ್ತು ಅಹಂಕಾರ ಎಲ್ಲವನ್ನೂ ತಪ್ಪಾಗಿ ಅರ್ಥೈಸಿಕೊಳ್ಳುವುದೇ ಇಲ್ಲಿನ ಪಾತ್ರಗಳ ಕಥೆ ವ್ಯಥೆ. ತಮ್ಮ ಸಂಕಷ್ಟಗಳಿಂದ ಹೊರಬರಲು ಪ್ರತೀ ಪಾತ್ರಗಳ ಹೋರಾಟ, ಅಸಹಾಯಕತೆ ಚಿತ್ರದಲ್ಲಿದೆ.
ಚಿತ್ರದಲ್ಲಿ ಅವಿನಾಶ್ ಯಳಂದೂರ್, ಮಹೇಶ್ ಬಂಗ್, ಸಂಯುಕ್ತಾ ಹೊರನಾಡು, ಅಂಜು ಆಳ್ವಾ ನಾಯಕ್, ನಂದಗೋಪಾಲ್, ಗೋಪಾಲಕೃಷ್ಣ ದೇಶಪಾಂಡೆ, ಶ್ರೀಪತಿ ಮಂಜನ ಬಯಲು, ಅರವಿಂದ್ ಕುಪ್ಳಿಕರ್ ಇತರರು ಇದ್ದಾರೆ. ಬಾಲಾಜಿ ಮನೋಹರ್ ಛಾಯಾಗ್ರಹಣವಿದೆ. ಉದಿತ್ ಹರಿತಸ್ ಸಂಗೀತ ಮತ್ತು ಪವನ್ ಕುಮಾರ್ ಸಾಹಿತ್ಯವಿದೆ.
ಕನಸು ಟಾಕೀಸ್ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಾಣಗೊಂಡಿದೆ. ಅಂದಹಾಗೆ, ಕಳೆದ 2019ರ ಲಂಡನ್ ವರ್ಲ್ಡ್ ಪ್ರೀಮಿಯರ್ ಮತ್ತು ಸಿಂಗಾಪಪುರದಲ್ಲಿ ನಡೆದ ಸೌತ್ ಏಷ್ಯನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿರುವ “ಅರಿಷಡ್ವರ್ಗ” ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿದೆ.
ಪ್ರಿಯಾಂಕ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಒಂದಷ್ಟು ವಿಶೇಷತೆಗಳು ನಡೆದಿವೆ. ಕಳೆದ ವರ್ಷದ ಹುಟ್ಟುಹಬ್ಬ ಆಚರಣೆ ವೇಳೆ, “ಉಗ್ರಾವತಾರ” ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು. ಈ ಹುಟ್ಟುಹಬ್ಬಕ್ಕೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಅಷ್ಟಕ್ಕೂ “ಉಗ್ರಾವತಾರ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು ನಟ ಉಪೇಂದ್ರ. ಮೋಷನ್ ಪೋಸ್ಟರ್ ವೀಕ್ಷಿಸಿದ ಉಪೇಂದ್ರ, ಚಿತ್ರದ ಕೆಲ ತುಣುಕು ನೋಡಿದರೆ, ಮಾಲಾಶ್ರೀ ಅವರ ಚಿತ್ರಗಳು ನೆನಪಾಗುತ್ತವೆ ಎಂದು ಹೇಳುವುದರ ಜೊತೆಗೆ, ಪ್ರಿಯಾಂಕ ಉಪೇಂದ್ರ ಅವರು ಇನ್ಸ್‌ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದು, ಚಿತ್ರ ಎಲ್ಲರಿಗೂ ಗೆಲುವು ಕೊಡಲಿ ಎಂದು ಶುಭಹಾರೈಸಿದ್ದಾರೆ.
ಪ್ರಿಯಾಂಕ ಉಪೇಂದ್ರ ಅವರು ಈ ಹಿಂದೆ “ಸೆಕೆಂಡ್ ಹಾಫ್” ಚಿತ್ರದಲ್ಲಿ ಪೊಲೀಸ್ ಆಗಿ ಕಾಣಿಸಿಕೊಂಡಿದ್ದರು. ಈಗ “ಉಗ್ರಾವತಾರ” ಚಿತ್ರದಲ್ಲಿ ಇನ್ಸ್‌ಪೆಕ್ಟರ್ ಆಗಿ ಮಿಂಚಲಿದ್ದಾರೆ. ಅವರು ತಮ್ಮ ಪಾತ್ರದ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. “ಆರಂಭದಲ್ಲಿ ನಿರ್ದೇಶಕರು ಕಥೆ ಮತ್ತು ಪಾತ್ರದ ಕುರಿತು ವಿವರಿಸಿದಾಗ, ನಾನು ಈ ಪಾತ್ರವನ್ನು ನಿರ್ವಹಿಸಬಹುದಾ ಎಂಬ ಪ್ರಶ್ನೆ ಕಾಡಿದ್ದು ನಿಜ. ಆದರೆ, ಚಿತ್ರದ ನಿರ್ಮಾಪಕರು, ನಿರ್ದೇಶಕರು ಮತ್ತು ಛಾಯಾಗ್ರಾಹಕರು ಧೈರ್ಯ ತುಂಬಿ ಎಲ್ಲರೂ ಪ್ರೋತ್ಸಾಹಿಸಿ ಸಾಥ್ ಕೊಟ್ಟಿದ್ದರಿಂದ ಪಾತ್ರದಲ್ಲಿ ಜೀವಿಸಲು ಸಾಧ್ಯವಾಯಿತು. ಇನ್ನು, ಈ ಚಿತ್ರದಲ್ಲಿ ವಾಸ್ತವ ಅಂಶಗಳಿವೆ. ಮಹಿಳೆಯರ ಮೇಲಿನ ಶೋಷಣೆ, ಅಪರಾಧ ಇದರ ಜೊತೆಗೆ ಒಂದಷ್ಟು ಗಂಭೀರ ವಿಷಯಗಳನ್ನು ಇಟ್ಟುಕೊಂಡೇ ನಿರ್ದೇಶಕರು ಕಮರ್ಷಿಯಲ್ ಅಂಶಗಳೊಂದಿಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು, ನಾನಿಲ್ಲಿ ಸ್ಟಂಟ್ ಮಾಡಿದ್ದೇನೆ. ಎಲ್ಲವೂ ನೈಜವಾಗಿರಬೇಕೆಂಬ ಕಾರಣಕ್ಕೆ ಡ್ಯೂಪ್ ಇಲ್ಲದೆಯೇ ಒಂದಷ್ಟು ತರಬೇತಿ ಪಡೆದುಕೊಂಡೇ ಕ್ಯಾಮೆರಾ ಮುಂದೆ ಫೈಟ್ ಮಾಡಿದ್ದೇನೆ. ಇನ್ನು, ಐಪಿಎಸ್ ಅಧಿಕಾರಿ ರೂಪ ಮೇಡಮ್ ನನಗೆ ಪ್ರೇರಣೆ ಎಂಬುದು ಪ್ರಿಯಾಂಕ ಉಪೇಂದ್ರ ಅವರ ಮಾತು.
ನಿರ್ದೇಶಕ ಗುರುಮೂರ್ತಿ ಅವರಿಗೆ ಪ್ರಿಯಾಂಕ ಉಪೇಂದ್ರ ಅವರ ಜೊತೆ ಕೆಲಸ ಮಾಡಿದ್ದು ತುಂಬಾನೇ ಹೆಮ್ಮೆ ಎನಿಸಿದೆಯಂತೆ. ಅವರೇ ಹೇಳುವಂತೆ, ಮೇಡಮ್ ಚಿತ್ರೀಕರಣ ವೇಳೆ ತಮ್ಮ ಪಾತ್ರದ ಬಗ್ಗೆ ಸಾಕಷ್ಟು ಆಸಕ್ತಿ ವಹಿಸುತ್ತಾರೆ, ಕಾಳಜಿ ತೋರುತ್ತಾರೆ. ಅವರ ಸಹಕಾರ, ಪ್ರೋತ್ಸಾಹದಿಂದಲೇ ನಾವೀಗ ಶೇ.30 ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಸದ್ಯ ಮೂರು ಫೈಟ್ಸ್ ಬಾಕಿ ಇದೆ. ಚಿತ್ರದಲ್ಲಿ ಮಹಿಳೆಯರಿಗೆ ಹೇಗೆ ಗೌರವ ತೋರಬೇಕು ಎಂಬುದು ಹೈಲೆಟ್. ಸತ್ಯಪ್ರಕಾಶ್, ಸುಮನ್ ಸೇರಿದಂತೆ ಇತರರು ನಟಿಸಿದ್ದಾರೆ. ಇಷ್ಟು ದಿನ ಪ್ರಿಯಾಂಕ ಅವರು ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಮೊದಲ ಸಲ ಈ ಚಿತ್ರದಲ್ಲಿ ಸ್ಟಂಟ್ ಮಾಡುವ ಮೂಲಕ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸಂಕ್ರಾಂತಿ ಹೊತ್ತಿಗೆ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಇದೆ ಎಂಬುದು ನಿರ್ದೇಶಕರ ಮಾತು. ಈ ಚಿತ್ರವನ್ನು ಎಸ್.ಜಿ.ಸತೀಶ ನಿರ್ಮಿಸಿದ್ದಾರೆ. ಕಿನ್ನಾಳ್ ರಾಜ್ ಸಂಭಾಷಣೆ, ಸಾಹಿತ್ಯ ಬರೆದಿದ್ದಾರೆ. ವೀಣಾ ನಂದಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.
ಒನ್ ನೈಟ್ ಸ್ಟೋರಿ ಸ್ಪೆಷಲ್, ಇಡೀ ರಾತ್ರಿ ಕಾರಲ್ಲೇ ಟ್ರಾವೆಲ್ !
“ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ ಇದೇ ನಮ್ಮ ಕೂಡಲಸಂಗಮದೇವನ ಒಲಿಸುವ ಪರಿ…
ಅರೇ, ಇದೇನಪ್ಪಾ, ಸಿನಿಮಾ ವೆಬ್ಸೈಟ್‌ನಲ್ಲಿ ಬಸವಣ್ಣನವರ ವಚನವಿದೆ ಎಂಬ ಸಣ್ಣ ಅಚ್ಚರಿಯಾಗಬಹುದು. ಅಚ್ಚರಿಯಾದರೂ, ಈ ವಚನಕ್ಕೂ ಇಲ್ಲಿ ಬರೆಯುತ್ತಿರೋ ಸಿನಿಮಾ ಸುದ್ದಿಗೂ ವಿಶೇಷವಿದೆ. ಇಲ್ಲೀಗ ಹೇಳಹೊರಟಿರುವ ವಿಷಯ “ಇದೇ ಅಂತರಂಗ ಶುದ್ಧಿ” ಚಿತ್ರದ್ದು. ಹೌದು, ಸಿನಿಮಾದ ಹೆಸರೇ ವಿಭಿನ್ನ ಎನಿಸುತ್ತೆ ಅಂದಮೇಲೆ, ಚಿತ್ರದ ಕಥೆ ಕೂಡ ಅಷ್ಟೇ ವಿಭಿನ್ನ ಎಂಬುದು ಚಿತ್ರತಂಡದ ಮಾತು. ಅಂದಹಾಗೆ, ಇದೊಂದು ಪ್ರಯೋಗಾತ್ಮಕ ಚಿತ್ರ. ಹೊಸ ಹೊಸ ಆಲೋಚನೆಗಳೊಂದಿಗೆ ಹೊಸಬರು ಹೊಸ ಪ್ರಯತ್ನ, ಪ್ರಯೋಗಕ್ಕಿಳಿದಿರುವುದು ಹೊಸದೇನಲ್ಲ. ಆ ಸಾಲಿಗೆ ಈ “ಇದೇ ಅಂತರಂಗ ಶುದ್ಧಿ” ಚಿತ್ರವೂ ಹೊಸದ್ದೊಂದು ಪ್ರಯೋಗ ಮಾಡ ಹೊರಟಿದೆ. “ಇದೇ ಅಂತರಂಗ ಶುದ್ಧಿ” ಚಿತ್ರದ ಹೆಸರಲ್ಲೊಂದು ವಿಶೇಷತೆಯೂ ಇದೆ. ಅದು ಸಿನಿಮಾ ಹೊರಬರುವವರೆಗೆ ಕಾಯಬೇಕಷ್ಟೇ. ಇದೇ ದೀಪಾವಳಿ ಹಬ್ಬದಂದು ಚಿತ್ರದ ಲಿರಿಕಲ್ ವಿಡಿಯೋ ಹೊರಬರುತ್ತಿದೆ. ನವೆಂಬರ್ ೧೫ರಂದು ನಿರ್ದೇಶಕ ಕುಮಾರ್ ದತ್ ಬರೆದಿರುವ “ನುಡಿಸು ಹೃದಯ” ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ. ನಕುಲ್ ಅಭ್ಯಯಂಕರ್ ಹಾಡಿರುವ ಈ ಹಾಡನ್ನು ಡಿ. ಬೀಟ್ಸ್ ಆಡಿಯೋ ಕಂಪೆನಿ ಮೂಲಕ ಹೊರತರಲಾಗುತ್ತಿದೆ. ಅಂದಹಾಗೆ, ಈ ಚಿತ್ರದ ಕುರಿತು ನಿರ್ದೇಶಕ ಕುಮಾರ್ ದತ್ “ಸಿನಿ ಲಹರಿ” ಜೊತೆ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.
ಒಂದು ರಾತ್ರಿಯ ಕಥೆ
“ಇದು ನನ್ನ ಎರಡನೇ ನಿರ್ದೇಶನದ ಸಿನಿಮಾ. ಈ ಹಿಂದೆ “ಎರಡೊಂದ್ಲ ಮೂರು” ಸಿನಿಮಾ ಮಾಡಿದ್ದೆ. ಅದಾದ ಬಳಿಕ ಹೊಸ ಬಗೆಯ ಕಥೆ ಹೆಣೆದು ಸಿನಿಮಾಗೆ ಅಣಿಯಾದೆ. ಆಗ ಶುರುವಾಗಿದ್ದೇ “ಇದೇ ಅಂತರಂಗ ಶುದ್ಧಿ”. ಮೊದಲೇ ಹೇಳಿದಂತೆ, ಇದೊಂದು ಪ್ರಯೋಗಾತ್ಮಕ ಸಿನಿಮಾ. ಇಡೀ ಸಿನಿಮಾ ೨೦ ದಿನಗಳಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷವೆಂದರೆ, ಬಹುತೇಕ ರಾತ್ರಿ ವೇಳೆ ಚಿತ್ರೀಕರಿಸಿದ್ದೇನೆ. ಕಾರಣ, ಇದೊಂದು ಜರ್ನಿಯಲ್ಲಿ ಸಾಗುವ ಕಥೆ. ಅದರಲ್ಲೂ ರಾತ್ರಿ ಶುರುವಾಗಿ, ಬೆಳಗ್ಗೆ ಮುಗಿಯುವ ಕಥೆ. ಬೆಂಗಳೂರು ಆಚೆ ಹೋಗೋದು, ಅಲ್ಲಿಂದ ಈಚೆ ಬರುವ ದೃಶ್ಯಗಳು ಮಾತ್ರ ಇಲ್ಲಿರಲಿವೆ. ಇಲ್ಲಿ ಕಾರು, ಇನ್ನೋವ, ಟ್ಯಾಕ್ಸಿ ಇವುಗಳೂ ಹೈಲೆಟ್ ಆಗಿವೆ. ಒಂದು ಜರ್ನಿ ಪಾಯಿಂಟ್‌ನಲ್ಲೇ ಕಥೆ ಸಾಗಲಿದೆʼ ಎಂಬುದು ನಿರ್ದೇಶಕರ ಮಾತು.
ಕುಮಾರ್ ದತ್, ನಿರ್ದೇಶಕ
ಪ್ರಯೋಗಾತ್ಮಕ ಚಿತ್ರ
ಚಿತ್ರದ ಶೀರ್ಷಿಕೆಗೆ ತಕ್ಕಂತೆಯೇ ಇಲ್ಲಿ ಕಥೆ ಹೆಣೆಯಲಾಗಿದೆ. ಯಾವುದೇ ಕಾರಣಕ್ಕೂ ಶೀರ್ಷಿಕೆ ಇಲ್ಲಿ ದುರ್ಬಳಕೆಯಾಗಲ್ಲ. ಕಥೆಗೆ ಪೂರಕವಾಗಿಯೇ ಟೈಟಲ್ ಇಡಲಾಗಿದೆ. ಪ್ರಯೋಗಾತ್ಮಕ ಚಿತ್ರ ಅಂದಾಗ ವಿಶೇಷತೆಗಳು ಇರಲೇಬೇಕು. ಆ ಬಗ್ಗೆ ಹೇಳುವುದಾದರೆ, ಇಲ್ಲಿ ಇಡೀ ಸಿನಿಮಾದಲ್ಲಿ ಯಾವುದೇ ಸಿನಿಮಾ ಲೈಟ್ ಬಳಸಿಲ್ಲ. ಕಾರಿನ ಲೈಟ್ಸ್‌ಗಳು, ಬೀದಿ ದೀಪಗಳನ್ನೇ ಇಟ್ಟುಕೊಂಡು ಚಿತ್ರೀಕರಿಸಿದ್ದೇನೆ. ಎಲ್ಲವೂ ನೈಜತೆಯಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಪ್ರಯತ್ನ ಮಾಡಿದ್ದೇನೆ. ಆ ಪ್ರಯತ್ನ ಸಾರ್ಥಕವೂ ಎನಿಸಿದೆ. ಇನ್ನು, ಕಥೆ ಬಗ್ಗೆ ಹೇಳುವುದಾದರೆ, ಇಲ್ಲೂ ಲವ್‌ಟ್ರ್ಯಾಕ್ ಹೋಗುತ್ತೆ. ಒಂದು ಸಮಾಜಕ್ಕೊಂದು ಸಣ್ಣ ಸಂದೇಶವೂ ಇಲ್ಲಿದೆ. ಹಾಗೆಯೇ ಇಲ್ಲಿ ಉಗ್ರರ ನೆರಳೂ ಇದೆ. ಹುಡುಗಿಯೊಬ್ಬಳು ಮನೆಬಿಟ್ಟು ಹೋಗ್ತಾಳೆ, ಅವಳನ್ನು ಒಬ್ಬ ಹುಡುಗ ಭೇಟಿಯಾಗ್ತಾನೆ. ಒಬ್ಬೊಬ್ಬರು ಬಂದು ಒಂದು ಕಾರಲ್ಲಿ ಕೂರುತ್ತಾರೆ. ಅಲ್ಲಿ ಎಲ್ಲರ ಸ್ಟೋರಿಯೂ ಕನೆಕ್ಟ್ ಆಗ್ತಾ ಹೋಗುತ್ತದೆ ಎಂಬುದು ಅವರ ಮಾತು.
ಅಭಿಲಾಶ್ ಚಾಕ್ಲ , ವಜೀತ್ ಬುಲ್ಲರ್ ನಿರ್ಮಾಪಕರು
ಸಾಫ್ಟ್‌ವೇರ್ ಮಂದಿಯ ಕಲರ್‌ಫುಲ್ ಸಿನ್ಮಾ
ಈ ಚಿತ್ರ ಅಭಿನವ್ ಬ್ಯಾನರ್‌ನಲ್ಲಿ ತಯಾರಾಗಿದೆ. ಅಭಿಲಾಶ್ ಚಾಕ್ಲ ಮತ್ತು ವಜೀತ್ ಬುಲ್ಲರ್ ಈ ಚಿತ್ರದ ನಿರ್ಮಾಪಕರು. ಇವರಿಗೆ ಇದು ಮೊದಲ ಚಿತ್ರ. ಒಂದೊಳ್ಳೆಯ ಸಿನಿಮಾ ಮಾಡುವ ಆಸೆ ಇದ್ದುದರಿಂದಲೇ ಇವರು, ಕುಮಾರ್ ದತ್ ಹೇಳಿದ ಕಥೆ ಕೇಳಿ, ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಪಕರಿಗೆ ಒಳ್ಳೆಯ ಸಿನಿಮಾ ಮಾಡಿರುವ ತೃಪ್ತಿ ಇದೆ. ಇನ್ನು, ಚಿತ್ರಕ್ಕೆ ಆರ್ಯವರ್ಧನ್ ಹೀರೋ. ಅವರಿಗೆ ಪ್ರತಿಭಾ ಹಾಗೂ ಶ್ವೇತಾ ನಾಯಕಿಯರು. ಉಳಿದಂತೆ ಚಿತ್ರದಲ್ಲಿ ಶ್ರೀಧರ್, ಮಂಜುಳಾರೆಡ್ಡಿ, “ಕಾಮಿಡಿ ಕಿಲಾಡಿ” ಖ್ಯಾತಿಯ ಸೂರಜ್, ರೂಪೇಶ್ ಇತರರು ನಟಿಸಿದ್ದಾರೆ. ಲವ್ ಪ್ರಾಣ್ ಮೆಹ್ತಾ ಅವರ ಸಂಗೀತವಿದೆ. ವಿನಯ್ ಛಾಯಾಗ್ರಹಣ ಮಾಡಿದ್ದಾರೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಆಗಿದ್ದು, ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಅಥವಾ ಜನವರಿಯಲ್ಲಿ ಚಿತ್ರ ತೆರೆಗೆ ಬರಲಿದೆ. ಸದ್ಯ ದೀಪಾವಳಿಗೆ “ನುಡಿಸು ಹೃದಯ” ಲಿರಿಕಲ್ ವಿಡಿಯೋ ಹೊರಬರುತ್ತಿದೆ. ಚಿತ್ರದಲ್ಲಿ ಒಂದು ಕ್ಲಾಸಿಕಲ್ ಗೀತೆ, ಮೆಲೋಡಿ ಹಾಗು ಕಥೆಗೆ ಪೂರಕವಾಗಿ ಸಾಗುವ ಹಾಡೊಂದು ಇದೆ. ಅದೇನೆ ಇರಲಿ, ಚಿತ್ರದ ಶೀರ್ಷಿಕೆಯೇ ಆಕರ್ಷಣೆ ಎನಿರುವುದರಿಂದ ಸಣ್ಣ ಕುತೂಹಲವಂತೂ ಚಿತ್ರದ ಮೇಲಿದೆ. ಇನ್ನು, ನ.೧೫ಕ್ಕೆ ಹೊರಬರುವ ಹಾಡು ಕೂಡ ಕೇಳುಗರಿಗೆ ಖಂಡಿತ ಇಷ್ಟವಾಗುತ್ತೆ ಎಂಬ ನಂಬಿಕೆ ಕೂಡ ಚಿತ್ರತಂಡಕ್ಕಿದೆ.
ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದಲೂ ನೃತ್ಯ ನಿರ್ದೇಶಕರಾಗಿರುವ ಎಂ.ಆರ್. ಕಪಿಲ್ ಅವರು ಈಗಾಗಲೇ ನಿರ್ದೇಶಕರಾಗಿ ಗುರುತಿಸಿಕೊಂಡಿರುವುದು ಗೊತ್ತೇ ಇದೆ. ಈಗ ಮತ್ತೊಂದು ಸಿನಿಮಾ ನಿರ್ದೇಶನ ಮಾಡಿದ್ದು, ಅದೀಗ ಬಿಡುಗಡೆಗೆ ಸಿದ್ಧವಾಗುತ್ತಿದೆ.
ಅಂದಹಾಗೆ, ಆ ಚಿತ್ರಕ್ಕೆ ‘ಕಣ್ತೆರೆದು ನೋಡು’ ಎಂಬ ಹೆಸರಿಡಲಾಗಿದೆ.ಕುಶಿಲ ಸಿನಿ ಪ್ರೊಡಕ್ಷನ್ಸ್ ನ ಮೊದಲ ನಿರ್ಮಾಣದ ಚಿತ್ರವಿದು. ನವೆಂಬರ್ 14 ರಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.
ಶಿವಪ್ಪ ಕುಡ್ಲೂರು
ಇನ್ನು ಶಿವಪ್ಪ ಕುಡ್ಲೂರು ಈ ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಕಪಿಲ್ ಅವರು, ಕಥೆಯ ಜೊತೆಗೆ ನೃತ್ಯ ನಿರ್ದೇಶನವನ್ನೂ ಮಾಡಿದ್ದಾರೆ. ಇದು ಅಂಧನೊಬ್ಬನ ಕಥೆ ಹೊಂದಿದ್ದು, ಸಮಾಜಕ್ಕೊಂದು ಸಂದೇಶ ಸಾರುವ ಅಂಶವಿದೆ. ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು ಅಂಧ ಗಾಯಕರ ಧ್ವನಿ ಇರುವುದು ವಿಶೇಷ. ಚಿತ್ರಕ್ಕೆ ದಿನೇಶ್ ಈಶ್ವರ್ ಅವರ ಸಂಗೀತವಿದೆ.
ಕಪಿಲ್ ನಿರ್ದೇಶಕ
ಚಿತ್ರದ ಪ್ರಮುಖ ಪಾತ್ರಧಾರಿ ಶಿವಪ್ಪ ಕುಡ್ಲೂರು ಮೂಲತಃ ಚಿಕ್ಕಮಗಳೂರಿನವರು ಬಾಲ್ಯದಿಂದಲೇ ನಟನೆ ಆಸಕ್ತಿ ಇಟ್ಟುಕೊಂಡಿದ್ದ ಇವರು, ಶಾಲೆ,ಕಾಲೇಜು ದಿನಗಳಲ್ಲಿ ನಾಟಕ, ಬೀದಿನಾಟಕಗಳಲ್ಲಿ ಭಾಗವಹಿಸಿ, ನಟನೆ ಗೀಳು ಇಟ್ಟಕೊಂಡಿದ್ದರು. ಹಾಗೆ ನೋಡಿದರೆ, ಇವರು ಕಳೆದ ಎರಡು ದಶಕಗಳ ಹಿಂದೆಯೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಇವರಿಗೆ ಅವಕಾಶ ಕಲ್ಪಿಸಿದ್ದು ಎಂಬುದು ವಿಶೇಷ.
ಆದರೆ, ಹಲವು ಕಾರಣಗಳಿಂದ ಚಿತ್ರರಂಗದಿಂದ ದೂರವಿದ್ದ ಇವರು ಕೈಗಾರಿಕಾ ಉದ್ಯಮದಲ್ಲಿ ತೊಡಗಿದ್ದರು. ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಇವರೀಗ ‘ಕಣ್ತೆರೆದು ನೋಡು’ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ್ದಾರೆ.
ಚಿತ್ರಕ್ಕೆ ಪುಷ್ಪಲತಾ ಕುಡ್ಲೂರು ನಿರ್ಮಾಪಕರು. ಒಂದೊಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ನಿರ್ದೇಶಕ ಕಪಿಲ್ ಹೇಳಿದ ಅಂಧನೊಬ್ಬನ ಕಥೆಗೆ ಬಂಡವಾಳ ಹಾಕಿದ್ದಾರೆ. ಇನ್ನು ಚಿತ್ರದ ನಿರ್ಮಾಣದಲ್ಲಿ
ಹರೀಶ್ ಹೆಬ್ಬಗೋಡು, ಡಾ. ಸಿ.ಬಿ.ಶಶಿಧರ್,
ಶಿವಕುಮಾರ್ ಜೇವರಗಿ, ಸಿದ್ದು ಸಾಹುಕಾರ ಕಬಾಡಗಿ ಇತರರು ಸಾಥ್ ನೀಡಿದ್ದಾರೆ.