ನವೆಂಬರ್14ಕ್ಕೆ ಕಣ್ತೆರೆದು ನೋಡು ಫಸ್ಟ್ ಲುಕ್
ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದಲೂ ನೃತ್ಯ ನಿರ್ದೇಶಕರಾಗಿರುವ ಎಂ.ಆರ್. ಕಪಿಲ್ ಅವರು ಈಗಾಗಲೇ ನಿರ್ದೇಶಕರಾಗಿ ಗುರುತಿಸಿಕೊಂಡಿರುವುದು ಗೊತ್ತೇ ಇದೆ. ಈಗ ಮತ್ತೊಂದು ಸಿನಿಮಾ ನಿರ್ದೇಶನ ಮಾಡಿದ್ದು, ಅದೀಗ ಬಿಡುಗಡೆಗೆ ಸಿದ್ಧವಾಗುತ್ತಿದೆ.
ಅಂದಹಾಗೆ, ಆ ಚಿತ್ರಕ್ಕೆ ‘ಕಣ್ತೆರೆದು ನೋಡು’ ಎಂಬ ಹೆಸರಿಡಲಾಗಿದೆ.ಕುಶಿಲ ಸಿನಿ ಪ್ರೊಡಕ್ಷನ್ಸ್ ನ ಮೊದಲ ನಿರ್ಮಾಣದ ಚಿತ್ರವಿದು. ನವೆಂಬರ್ 14 ರಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.
ಇನ್ನು ಶಿವಪ್ಪ ಕುಡ್ಲೂರು ಈ ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಕಪಿಲ್ ಅವರು, ಕಥೆಯ ಜೊತೆಗೆ ನೃತ್ಯ ನಿರ್ದೇಶನವನ್ನೂ ಮಾಡಿದ್ದಾರೆ. ಇದು ಅಂಧನೊಬ್ಬನ ಕಥೆ ಹೊಂದಿದ್ದು, ಸಮಾಜಕ್ಕೊಂದು ಸಂದೇಶ ಸಾರುವ ಅಂಶವಿದೆ. ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು ಅಂಧ ಗಾಯಕರ ಧ್ವನಿ ಇರುವುದು ವಿಶೇಷ. ಚಿತ್ರಕ್ಕೆ ದಿನೇಶ್ ಈಶ್ವರ್ ಅವರ ಸಂಗೀತವಿದೆ.
ಚಿತ್ರದ ಪ್ರಮುಖ ಪಾತ್ರಧಾರಿ ಶಿವಪ್ಪ ಕುಡ್ಲೂರು ಮೂಲತಃ ಚಿಕ್ಕಮಗಳೂರಿನವರು ಬಾಲ್ಯದಿಂದಲೇ ನಟನೆ ಆಸಕ್ತಿ ಇಟ್ಟುಕೊಂಡಿದ್ದ ಇವರು, ಶಾಲೆ,ಕಾಲೇಜು ದಿನಗಳಲ್ಲಿ ನಾಟಕ, ಬೀದಿನಾಟಕಗಳಲ್ಲಿ ಭಾಗವಹಿಸಿ, ನಟನೆ ಗೀಳು ಇಟ್ಟಕೊಂಡಿದ್ದರು. ಹಾಗೆ ನೋಡಿದರೆ, ಇವರು ಕಳೆದ ಎರಡು ದಶಕಗಳ ಹಿಂದೆಯೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಇವರಿಗೆ ಅವಕಾಶ ಕಲ್ಪಿಸಿದ್ದು ಎಂಬುದು ವಿಶೇಷ.
ಆದರೆ, ಹಲವು ಕಾರಣಗಳಿಂದ ಚಿತ್ರರಂಗದಿಂದ ದೂರವಿದ್ದ ಇವರು ಕೈಗಾರಿಕಾ ಉದ್ಯಮದಲ್ಲಿ ತೊಡಗಿದ್ದರು. ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಇವರೀಗ ‘ಕಣ್ತೆರೆದು ನೋಡು’ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ್ದಾರೆ.
ಚಿತ್ರಕ್ಕೆ ಪುಷ್ಪಲತಾ ಕುಡ್ಲೂರು ನಿರ್ಮಾಪಕರು. ಒಂದೊಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ನಿರ್ದೇಶಕ ಕಪಿಲ್ ಹೇಳಿದ ಅಂಧನೊಬ್ಬನ ಕಥೆಗೆ ಬಂಡವಾಳ ಹಾಕಿದ್ದಾರೆ. ಇನ್ನು ಚಿತ್ರದ ನಿರ್ಮಾಣದಲ್ಲಿ
ಹರೀಶ್ ಹೆಬ್ಬಗೋಡು, ಡಾ. ಸಿ.ಬಿ.ಶಶಿಧರ್,
ಶಿವಕುಮಾರ್ ಜೇವರಗಿ, ಸಿದ್ದು ಸಾಹುಕಾರ ಕಬಾಡಗಿ ಇತರರು ಸಾಥ್ ನೀಡಿದ್ದಾರೆ.