ಸಂಚಾರಿಯ ಹೊಸ ಸಂಚಾರ… ಇದು ಅವಸ್ಥಾಂತರ ವಿಷಯ

ಹೊಸ ಚಿತ್ರ ಒಪ್ಪಿದ ಸಂಚಾರಿ ವಿಜಯ್ 

 

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಈಗ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಲಾಕ್ ಡೌನ್ ಬಳಿಕ ಸಂಚಾರಿ ವಿಜಯ್ ಒಂದೊಳ್ಳೆಯ ಕಥೆ ಮತ್ತು ಪಾತ್ರ ಮೆಚ್ಚಿಕೊಂಡು ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂಬುದು ಈ ಹೊತ್ತಿನ ಸುದ್ದಿ.

ಆ ಚಿತ್ರಕ್ಕೆ ‘ಅವಸ್ಥಾಂತರ’ ಎಂದು ನಾಮಕರಣ ಮಾಡಲಾಗಿದೆ. ಇನ್ನು ‘ ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ’ ಎಂಬ ಅಡಿಬರಹವೂ ಇದೆ. ಸದ್ಯಕ್ಕೆ ದೀಪಾವಳಿ ದಿನದಂದು ಚಿತ್ರದ ಫಸ್ಟ್ ಲುಕ್ ಹೊರಬಂದಿದೆ.

ದೀಪಕ್ , ನಿರ್ದೇಶಕ, ‌ನಿರ್ಮಾಪಕ

ಚಿತ್ರಕ್ಕೆ ಜಿ.ದೀಪಕ್ ಕುಮಾರ್ ನಿರ್ದೇಶಕರು. ಈ ಹಿಂದೆ ಇವರು ‘ಮಠ’ ಖ್ಯಾತಿಯ ಗುರುಪ್ರಸಾದ್ ಅವರ ಗರಡಿಯಲ್ಲಿ ಪಳಗಿದವರು. ಇದರೊಂದಿಗೆ ಮಲಯಾಳಂ ನ ಪ್ರಸಿದ್ಧ ನಟರಾದ ಮೋಹನ್ ಲಾಲ್ ಮತ್ತು ಮಮ್ಮುಟಿ ಅವರ ಕೆಲ ಚಿತ್ರಗಳಿಗೆ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದರೊಂದಿಗೆ ಸಾಕಷ್ಟು ಡಾಕ್ಯುಮೆಂಟರಿ ಮತ್ತು ಜಾಹಿರಾತು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ‘ಅವಸ್ಥಾಂತರ’ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ.

ಹದಿಹರೆಯದ ಯುವಕನೊಬ್ಬ ತನಗೆ ಅರಿವಿಲ್ಲದೆ ಹುಟ್ಟುವ ಬಯಕೆಗಳು, ಕಾಮನೆಗಳು ಹೇಗೆ ಆ ಹುಡಗನನ್ನು ಅತಂತ್ರ ಸ್ಥಿತಿಗೆ ತಳ್ಳುತ್ತದೆ ಮತ್ತು ಅದರಿಂದ ಏನೆಲ್ಲಾ ಪಜೀತಿ, ಅವಸ್ಥೆ, ಅನಾಹುತಗಳು ನಡೆಯುತ್ತವೆ ಎಂಬ ತಿಳಿ ಹಾಸ್ಯದ ಮೂಲಕ ಒಂದು ಸಂದೇಶ ಕಟ್ಟಿ ಕೊಡುವ ಪ್ರಯತ್ನ ಈ ಚಿತ್ರದ ಮೂಲಕ ಮಾಡಲಿದ್ದಾರೆ ನಿರ್ದೇಶಕರು. ಡಿಸೆಂಬರ್ ಕೊನೆಯ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಇನ್ನಷ್ಟು ಮಾಹಿತಿ ಹೊರಬೀಳಲಿದೆ.

Related Posts

error: Content is protected !!