Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಮಮ್ಮಿ ಪ್ಲೀಸ್‌ ಮಮ್ಮಿ ಸಾಂಗ್ ಭರ್ಜರಿ ಸೌಂಡು!

ತ್ರಿವಿಕ್ರಮ ಲಿರಿಕಲ್‌ ವಿಡಿಯೋ ಸಾಂಗ್‌ ಹೊರಬಂತು

ಮಕ್ಕಳ ದಿನಾಚರಣೆಗೊಂದು ಸ್ಪೆಷಲ್‌ ಗಾನ

ಕನ್ನಡದಲ್ಲಿ ಸದ್ಯಕ್ಕೆ “ತ್ರಿವಿಕ್ರಮ” ಸಿನಿಮಾ ಜೋರು ಸುದ್ದಿ ಮಾಡುತ್ತಲೇ ಇದೆ. ಆರಂಭದಿಂದಲೂ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿರುವುದು ಗೊತ್ತೇ ಇದೆ. ಈಗಾಗಲೇ ಕ್ರೇಜಿಸ್ಟಾರ್‌ ಎರಡನೇ ಪುತ್ರ ವಿಕ್ರಮ್‌ ರವಿಚಂದ್ರನ್‌ “ತ್ರಿವಿಕ್ರಮ” ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ನಿರೀಕ್ಷೆ ಮೂಡಿಸಿರುವುದಂತೂ ನಿಜ. ಆ ನಿರೀಕ್ಷೆಗೆ ತಕ್ಕಂತೆಯೇ ಈಗಾಗಲೇ ಚಿತ್ರದ ಫಸ್ಟ್‌ ಲುಕ್‌ ಟೀಸರ್ , ಮೋಷನ್‌ ಪೋಸ್ಟರ್‌ ಎಲ್ಲವೂ ಮಾತಾಡುತ್ತಿದೆ. ಅಷ್ಟೇ ಯಾಕೆ, ಕಳೆದ ಮಹಲಾಕ್ಷ್ಮಿ ಹಬ್ಬದಂದೇ ವಿಕ್ರಮ್‌ ಅಭಿನಯದ ಈ “ತ್ರಿವಿಕ್ರಮ” ಚಿತ್ರದ ಆಡಿಯೋ ಹಕ್ಕು ದಾಖಲೆ ಮಟ್ಟಕ್ಕೆ ಮಾರಾಟ ಆಗಿದ್ದು ಎಲ್ಲರಿಗೂ ಗೊತ್ತಿದೆ. ಚಿತ್ರತಂಡ ಈಗ ಅದೇ ಖುಷಿಯಲ್ಲಿ ನವೆಂಬರ್‌ ೧೪ರಂದು ಮಕ್ಕಳ ದಿನಾಚರಣೆ ಅಂಗವಾಗಿ, ಸಖತ್‌ ಆಗಿರುವ ಹಾಡೊಂದನ್ನು ಬಿಡುಗಡೆ ಮಾಡಿದೆ.


ಹೌದು, ಮಕ್ಕಳ ದಿನಾಚರಣೆಯ ದಿನದಂದು ವಿಶೇಷವಾಗಿ ಮಕ್ಕಳಿಗೆ ಇಷ್ಟವಾಗುವ, ತಾಯಂದಿರಿಗೂ ಇಷ್ಟವಾಗುವ ಹಾಡು ಹೊರಬಂದಿದೆ. ಅರ್ಜುನ್‌ ಜನ್ಯಾ ಸಂಗೀತವಿರುವ ಈ ಹಾಡಿಗೆ ಗೀತ ಸಾಹಿತಿ ನಾಗೇಂದ್ರ ಪ್ರಸಾದ್‌ ಅವರ ಸಾಹಿತ್ಯವಿದೆ. “ಮಮ್ಮಿ ಪ್ಲೀಸ್‌ ಮಮ್ಮಿ” ಎಂಬ ಹಾಡು ಈಗ ಹೊರಬಂದಿದೆ. ಈ ಹಾಡಿಗೆ ಗಾಯಕ ವಿಜಯಪ್ರಕಾಶ್‌ ಧ್ವನಿಯಾಗಿದ್ದಾರೆ.

ಅಮ್ಮನನ್ನು ಕಾಡುವ, ಬೇಡವ ಚಿನಕುರಳಿಯಂತಿರುವ ಹಾಡು ಕೇಳುವುದಕ್ಕೆ ಒಂದು ರೀತಿ ಮಜಾ ಇದೆ. ಈಗಾಗಲೇ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ, ಚಿತ್ರದ ಹಾಡಿಗೆ ಭರಪೂರ ಮೆಚ್ಚುಗೆ ಸಿಕ್ಕಿದ್ದು, ಬಹುತೇಕ ಹುಡುಗರು ಹಾಡನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಾಕಿಕೊಂಡು ಎಂಜಾಯ್‌ ಮಾಡುತ್ತಿದ್ದಾರೆ.

ಇನ್ನು, ವಿಕ್ರಮ್‌ ಅವರನ್ನ ಹೀರೋ ಮಾಡಿದ್ದು ನಿರ್ದೇಶಕ ಸಹನಾ ಮೂರ್ತಿ. ಈ “ತ್ರಿವಿಕ್ರಮ” ಎಂಬ ಅದ್ಧೂರಿ ಬಜೆಟ್‌ ಚಿತ್ರವನ್ನು ಗೌರಿ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ನಿರ್ಮಿಸಿರೋದು ಸೋಮಣ್ಣ. ವಿಕ್ರಮ್‌ ಅವರ ಲುಕ್‌ ಮತ್ತು ಮ್ಯಾನರಿಸಂಗೆ ತಕ್ಕ ಕಥೆ ಹೆಣೆದು ಸಿನಿಮಾ ಮಾಡಿದ್ದಾರೆ.

ಆರಂಭದಿಂದಲೂ ತುಂಬಾನೇ ಸ್ಪೆಷಲ್‌ ಆಗಿಯೇ ಸಿನಿಮಾವನ್ನು ರೆಡಿ ಮಾಡಿರುವ ನಿರ್ದೇಶಕ ಸಹನಾ ಮೂರ್ತಿ, ನಿರ್ಮಾಪಕ ಸೋಮಣ್ಣ ಅವರ ಪ್ರೋತ್ಸಾಹದಿಂದ ಈಗ ಸಿನಿಮಾವನ್ನು ಇನ್ನೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಈಗಾಗಲೇ ಹೊರಬಂದಿರುವ “ತ್ರಿವಿಕ್ರಮ” ಚಿತ್ರದ ಫಸ್ಟ್ ಲುಕ್ ಟೀಸರ್ ಸಾಕ್ಷಿಯಾಗಿದೆ.

ಸೋಮಣ್ಣ, ನಿರ್ಮಾಪಕ

ನಿರ್ಮಾಪಕ, ನಿರ್ದೇಶಕರ ಕಾಳಜಿಯ ವಿಕ್ರಮ!
ಸಿನಿಮಾ ಅಂದಮೇಲೆ ಪ್ರೀತಿ ಇರಬೇಕು. ಆ ಪ್ರೀತಿ ಇದ್ದಾಗ ಮಾತ್ರ ಒಳ್ಳೆಯ ಸಿನಿಮಾಗಳು ಹೊರಬರುತ್ತವೆ. ಆ ಸಾಲಿಗೆ “ತ್ರಿವಿಕ್ರಮ” ಸಿನಿಮಾ ಕೂಡ ಸೇರುವುದರಲ್ಲಿ ಎರಡು ಮಾತಿಲ್ಲ. ಕನಸುಗಾರನ ಮಗನನ್ನು ಸಖತ್‌ ಆಗಿಯೇ ತೋರಿಸುವ ಕನಸು ಕಂಡಿದ್ದ ನಿರ್ದೇಶಕ ಸಹನಾ ಮೂರ್ತಿ ಹಾಗೂ ನಿರ್ಮಾಪಕ ಸೋಮಣ್ಣ ಎಷ್ಟೇ ರಿಸ್ಕ್‌ ಇದ್ದರೂ ಸರಿ, ಅದ್ಭುತವಾಗಿಯೇ ಸಿನಿಮಾವನ್ನು ತೋರಿಸಬೇಕು ಎಂಬ ಉದ್ದೇಶದಿಂದ ಕೋಟಿಗಟ್ಟಲೆ ಹಣ ಹಾಕಿದ್ದಾರೆ. “ತ್ರಿವಿಕ್ರಮʼ ಸಿನಿಮಾ ಮೇಲೆ ಇವರಿಬ್ಬರಿಗೂ ತೃಪ್ತಭಾವವಿದೆ. ಈಗಾಗಲೇ ಈ ಅದ್ಧೂರಿಗೆ ಸಾಕ್ಷಿಯೆಂಬಂತೆ ಚಿತ್ರದ ಚಿತ್ರೀಕರಣ ಅದ್ಧೂರಿಯಾಗಿ ಮೂಡಿಬಂದಿರೋದು.

ಸಹನಾ ಮೂರ್ತಿ, ನಿರ್ದೇಶಕ

ಈಗಾಗಲೇ, 50 ಲಕ್ಷ ಮೊತ್ತಕ್ಕೆ ಎ೨ ಮ್ಯೂಸಿಕ್‌ ಸಂಸ್ಥೆ ಆಡಿಯೋ ಹಕ್ಕು ಕೂಡ ಮಾರಾಟವಾಗಿರುವುದು ಸಿನಿಮಾದ ಮೊದಲ ಗೆಲುವು ಎನ್ನಬಹುದು. ಹೀಗಾಗಿ ತ್ರಿವಿಕ್ರಮನಿಗೆ ಡಿಮ್ಯಾಂಡ್‌ ಇರೋದಂತು ನಿಜ. ಅಂದಹಾಗೆ, ತ್ರಿವಿಕ್ರಮ‌ ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಹಾಗು ಯೋಗರಾಜ್ ಭಟ್ ಅವರ ಸಾಹಿತ್ಯವಿದೆ. ಅರ್ಜುನ್ ಜನ್ಯ ಸಂಗೀತದ ಹಾಡೊಂದು ಈಗ ಹೊರಬಂದಿದ್ದು ಭರ್ಜರಿ‌ ಸೌಂಡು ಮಾಡುತ್ತಿದೆ.

ಆಕಾಂಕ್ಷ, ನಟಿ

ಪಕ್ಕಾ ಮಾಸ್‌ ಮತ್ತುಕ್ಲಾಸ್‌ ಸಿನ್ಮಾ
ಈ ಹಿಂದೆ “ರೋಜ್‌” ಹಾಗೂ “ಲೀಡರ್‌” ಸಿನಿಮಾವನ್ನು ಕಟ್ಟಿ ಕೊಟ್ಟ ನಿರ್ದೇಶಕ ಸಹನಾಮೂರ್ತಿ ಅವರು ನಿರ್ಮಾಪಕ ಸೋಮಣ್ಣ ಅವರ ಪ್ರೋತ್ಸಾಹದಿಂದಾಗಿ ಮಾಸ್‌ ಮತ್ತು ಕ್ಲಾಸ್‌ ಸಿನಿಮಾ ಮಾಡಿದ್ದಾರೆ. ಹಾಗೆಯೇ ಹಾಡುಗಳನ್ನೂ ಅದ್ಭುತವಾಗಿ ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ಅರ್ಜುನ್‌ ಜನ್ಯಾ ಬಳಿ ಸಂಗೀತ ಮಾಡಿಸಿದ್ದು, ಹಿರಿಯ ಗೀತ ಸಾಹಿತಿಗಳ ಬಳಿ ಹಾಡನ್ನು ಬರೆಸಿ, ಹಾಡಿಸಿದ್ದಾರೆ. ವಿಜಯಪ್ರಕಾಶ್‌ ಈಗ ” ಮಮ್ಮಿ ಪ್ಲೀಸ್‌ ಮಮ್ಮಿ” ಹಾಡು ಹೊಸ ಕ್ರೇಜ್‌ ಹುಟ್ಟಿಸಿದೆ. ಸಹಜವಾಗಿಯೇ ಚಿತ್ರತಂಡಕ್ಕೂ ಖುಷಿಯಾಗಿದೆ.

Categories
ಸಿನಿ ಸುದ್ದಿ

ವಿಂಡೋಸೀಟ್ ಟೀಸರ್ ಗೆ ಸುದೀಪ್‌ ಮೆಚ್ಚುಗೆ

ವಿಂಡೋಸೀಟ್‌ ಚಿತ್ರದ ಟೀಸರ್‌ ಬಂತು

ನಟ ಸುದೀಪ್‌ ಅವರು ಹೊಸ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಈಗ ನಟಿ, ನಿರ್ದೇಶಕಿ ಶೀತಲ್‌ ಶೆಟ್ಟಿ ಅವರ ಹೊಸ ಸಿನಿಮಾಗೂ ಸಹ ಮೆಚ್ಚುಗೆ ಸೂಚಿ, ಶುಭ ಹಾರೈಸಿದ್ದಾರೆ.
ಹೌದು, ಶೀತಲ್ ಶೆಟ್ಟಿ ಇದೇ ಮೊದಲ ಸಲ ನಿರ್ದೇಶನ ಮಾಡಿರುವ ‘ವಿಂಡೋಸೀಟ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸುದೀಪ್‌ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಟ್ವೀಟ್‌ ಮಾಡುವ ಮೂಲಕ ಶುಭಹಾರೈಸಿದ್ದಾರೆ. ತಮ್ಮ ಖಾತೆಯಲ್ಲಿ, ”ವಿಂಡೋ ಸೀಟ್‌’ನ ಟೀಸರ್ ಬಹಳ ಭರವಸೆಯಿಂದ ಕಾಣುತ್ತಿದೆ. ಪ್ರತಿ ಫ್ರೇಮ್ ಸಹ ಅಚ್ಚುಕಟ್ಟಾಗಿ ಹೆಣೆದಂತೆ ಕಾಣುತ್ತದೆ. ಖಂಡಿತವಾಗಿಯೂ ಚಿತ್ರತಂಡ ಶ್ರಮಿಸಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಈ ಚಿತ್ರವನ್ನು ನೋಡಲು ಎದುರು ನೋಡುತ್ತಿದ್ದೇನೆ” ಎಂದು ಸುದೀಪ್ ಟ್ವೀಟ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ವಿಂಡೋಸೀಟ್’ ಟೀಸರ್‌ ನೋಡಿದವರಿಗೆ ಅದೊಂದು ರೊಮ್ಯಾಂಟಿಕ್ ಅನುಭವದ ಕಥಾಹಂದರ ಎಂಬ ಫೀಲ್‌ ಕೊಡಲಿದೆ. ಅದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಎಂಬುದಕ್ಕೆ ಟೀಸರ್‌ನಲ್ಲಿ ಹಲವು ಅಂಶಗಳು ಕಾಣಸಿಗುತ್ತವೆ. ಇನ್ನು, “ವಿಂಡೋ ಸೀಟ್‌”ನಲ್ಲಿ ಒಂದೊಳ್ಳೆಯ ಪ್ರೇಮಕಥೆ ಹೈಲೈಟ್‌ ಆಗಿದೆ. ಸಾಕಷ್ಟು ಕುತೂಹಲ ಕೆರಳಿಸುವ ಅಂಶಗಳಿವೆ. ಈಗಾಗಲೇ ಟೀಸರ್‌ ನೋಡಿದವರಿಂದ ಸಾಕಷ್ಟು ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಚಿತ್ರದಲ್ಲಿ’ರಂಗಿತರಂಗ’ ಖ್ಯಾತಿಯ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿರುವದ್ದಾರೆ. ಈ ಹಿಂದೆ ಚಿತ್ರದ ಫಸ್ಟ್ ಲುಕ್ ಸಾಕಷ್ಟು ಸುದ್ದಿ ಮಾಡಿತ್ತು. ಈಗ ಟೀಸರ್‌ಗೂ ಅಂತಹ ಪ್ರತಿಕ್ರಿಯೆ ಸಿಗುತ್ತಿದೆಲ ಸದ್ಯಕ್ಕೆ’ವಿಂಡೋಸೀಟ್’ ನೋಡುಗರಿಗೆ ಮಜ ಕೊಡುವ ಸಿನಿಮಾ ಎಂಬ ಬಲವಾದ ನಂಬಿಕೆ ಚಿತ್ರತಂಡದ್ದು. ಈ ಚಿತ್ರದಲ್ಲಿ ನಿರೂಪ್‌ಗೆ ನಾಯಕಿಯಾಗಿ ಅಮೃತಾ ಅಯ್ಯಂಗರ್ ಮತ್ತು ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ದುನಿಯಾ ವಿಜಯ್ ನಿರ್ದೇಶನದ 2ನೇ ಚಿತ್ರಕ್ಕೆ ನಾಯಕಿ ಫಿಕ್ಸ್

ಕಿರುತೆರೆ ಬೆಡಗಿ ಮೋಕ್ಷಿತಾ ಪೈ ನಾಯಕಿ ಎಂಟ್ರಿ

‘ಸಲಗ’ ನಂತರ ಮತ್ತೊಂದು ಸಿನಿಮಾ ನಿರ್ದೇಶಿಸುವುದಾಗಿ ಹೇಳಿದ್ದ ‘ದುನಿಯಾ’ ವಿಜಯ್, ತಮ್ಮ ಎರಡನೇ ಚಿತ್ರಕ್ಕೆ ನಾಯಕಿಯನ್ನು ಫಿಕ್ಸ್ ಮಾಡಿದ್ದಾರೆ.ಡಾ.ರಾಜ್ ಕುಟುಂಬದ ಲಕ್ಕಿ ಗೋಪಾಲ್​ ಅವರನ್ನು ನಾಯಕ ಎಂದು ಘೋಷಿಸಿದ್ದರು. ಆಗ ನಾಯಕಿಯ ಆಯ್ಕೆ ಆಗಿರಲಿಲ್ಲ. ಇದೀಗ ಚಿತ್ರಕ್ಕೆ ನಾಯಕಿಯನ್ನು ಆಯ್ಕೆ ಮಾಡಿದ್ದಾರೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಕರಾವಳಿ ಬೆಡಗಿ ಮೋಕ್ಷಿತಾ ಪೈ ಮೊದಲ ಬಾರಿಗೆ ಸಿನಿಮಾರಂಗವನ್ನು ‌ಸ್ಪರ್ಶಿಸಲಿದ್ದಾರೆ.

ದುನಿಯಾ ವಿಜಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಬಹುತೇಕರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಅದರಂತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಲಕ್ಕಿ ಗೋಪಾಲ್ ಈ ಚಿತ್ರದ ಮೂಲಕ ಎಂಟ್ರಿ ಪಡೆಯುತ್ತಿದ್ದರೆ, ‘ಪಾರು’ ಧಾರಾವಾಹಿ ಮೂಲಕ ಗಮನ ಸೆಳೆದಿರುವ ಮೋಕ್ಷಿತಾ ಪೈ ಚಂದನವನಕ್ಕೆ ಇಡುತ್ತಿದ್ದಾರೆ.

ಇನ್ನುಳಿದಂತೆ ಮಿಕ್ಕ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ತಾಂತ್ರಿಕ ವರ್ಗದ ಆಯ್ಕೆ ಅಂತಿಮವಾಗಿದೆ. ವಾಸುಕಿ ವೈಭವ್ ಮತ್ತು ಚರಣ್​ ರಾಜ್​ ಸಂಗೀತವಿದೆ. ಬಾಲು ಶಿವಮೊಗ್ಗ ಛಾಯಾಗ್ರಹಣ ಮಾಡಿದರೆ, ಮಾಸ್ತಿ ಮಂಜು ಸಂಭಾಷಣೆ ಇದೆ.

ಇನ್ನು ಶೀರ್ಷಿಕೆ ಫೈನಲ್ ಆಗಿಲ್ಲ. ಸಿನಿಮಾಕ್ಕೆ ಇನ್ನೂ ಹಲವು ಹೊಸಬರನ್ನು ಪರಿಚಯಿಸುವ ಯೋಚನೆ ನಿರ್ದೇಶಕರದ್ದು.  ಶೀಘ್ರದಲ್ಲಿಯೇ ಶೀರ್ಷಿಕೆ ಅಂತಿಮ ಮಾಡಿ, ಶೂಟಿಂಗ್​ ಮಾಡಲು ದುನಿಯಾ ವಿಜಯ್ ಯೋಚಿಸಿದ್ದಾರೆ.

Categories
ಸಿನಿ ಸುದ್ದಿ

ಒಂದು ಕೊಲೆಯ ಸುತ್ತ… ಸಖತ್‌ ಸದ್ದಾಗಿದೆ ಅರಿಷಡ್ವರ್ಗ ಟ್ರೇಲರ್‌

ನವೆಂಬರ್‌ 27ಕ್ಕೆ ಚಿತ್ರ ರಿಲೀಸ್‌

“ಬೆಂಗಳೂರಿನ ಕೊತ್ತನೂರು ಪೋಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸ್ಯಾಂಡಲ್‌ ವುಡ್‌ ನಿರ್ಮಾಪಕರು ಉದ್ಯಮಿಯೂ ಆಗಿರುವ ಮಂಜುನಾಥ ಭಟ್‌ ಎಂಬುವರನ್ನು ಹತ್ಯೆ ಮಾಡಲಾಗಿದೆ. ಮೂವರು ಶಂಕಿತರನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಮಂಜುನಾಥ್‌ ಭಟ್‌ ಅವರ ಪತ್ನಿ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಹಂತಕರು ಈ ಕೃತ್ಯ ಎಸಗಿದ್ದಾರೆ. ವಿಷಯ ತಿಳಿದ ಪತ್ನಿ ಆಘಾತಕ್ಕೊಳಗಾಗಿದ್ದು, ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ…

ಮೇಲಿನ ಸಾಲುಗಳನ್ನು ಓದಿದಾಕ್ಷಣ, ಅಚ್ಚರಿಯಾದರೆ ಅನುಮಾನವಿಲ್ಲ. ಹಾಗಂತ ಇದು ಯಾವುದೋ ಕ್ರೈಮ್‌ ಸುದ್ದಿಯಲ್ಲ. ಬದಲಿಗೆ ಚಿತ್ರವೊಂದರ ಟ್ರೇಲರ್‌ನಲ್ಲಿ ಬರುವ ಡೈಲಾಗ್.‌ ಹೌದು, ಇದಿಷ್ಟು ಕೇಳಿದ ಮೇಲೆ ಚಿತ್ರದ ಬಗ್ಗೆ ಒಂದಷ್ಟು ಕುತೂಹಲ ಮೂಡಿಸುವುದಂತೂ ಹೌದು. ಟ್ರೇಲರ್‌ ನೋಡಿದವರಿಗೆ ಸಿನಿಮಾ ನೋಡಲೇಬೇಕು ಎನಿಸುವುದೂ ಉಂಟು. ಅಂಥದ್ದೊಂದು ಹೊಸ ನಿರೀಕ್ಷೆ, ಭರವಸೆ ಹುಟ್ಟಿಸಿರುವ ಚಿತ್ರ “ಅರಿಷಡ್ವರ್ಗʼ. ಹೌದು, ಇದು ಪಕ್ಕಾ ಸಸ್ಪೆನ್ಸ್‌ ಕ್ರೈಮ್‌ ಥ್ರಿಲ್ಲರ್‌ ಸಿನಿಮಾ. ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಎಲ್ಲಾ ಕಡೆಯಿಂದಲೂ ಉತ್ತಮ ಮೆಚ್ಚುಗೆ ಸಿಕ್ಕಿದೆ.


ಕನ್ನಡದಲ್ಲಿ ಈಗಾಗಲೇ ವಿಭಿನ್ನ ರೀತಿಯಲ್ಲಿರುವ ಶೀರ್ಷಿಕೆಯ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಈಗ “ಅರಿಷಡ್ವರ್ಗ” ಕೂಡ ಸೇರಿದೆ ಎಂಬುದು ವಿಶೇಷ. ಈಗಾಗಲೇ ಚಿತ್ರ ನವೆಂಬರ್‌ 27ರಂದು ಬಿಡುಗಡೆಗೆ ರೆಡಿಯಾಗಿದ್ದು, ಅದಕ್ಕೂ ಮುನ್ನ ಚಿತ್ರದ ಟ್ರೇಲರ್‌ ಬಿಡುಗಡೆಗೊಂಡಿದ್ದಲ್ಲದೆ, ನಟ ಸುದೀಪ್‌ ಕೂಡ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ “ಅರಿಷಡ್ವರ್ಗ” ಚಿತ್ರದ ಪೋಸ್ಟರ್‌ ಹಂಚಿಕೊಂಡಿರುವ ಸುದೀಪ್‌, ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ದಾರೆ.


ಅರವಿಂದ್‌ ಕಾಮತ್‌ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ, ಸಂಕಲನವನ್ನೂ ನಿರ್ವಹಿಸಿರುವ ಅರವಿಂದ್‌ ಕಾಮತ್‌, “ಅರಿಷಡ್ವರ್ಗ” ಚಿತ್ರದ ಮೂಲಕ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ, ಒಂದು ಸಂಬಂಧಗಳ ಚಾಲಿತ, ನಿಗೂಢತೆ ಇರುವ ಥ್ರಿಲ್ಲರ್‌ ಅಂಶಗಳನ್ನು ಹೊಂದಿರುವ ಸಿನಿಮಾದಲ್ಲಿ ಹೀರೋ ಕೆಲಸ ಅರಸಿ ಒಂದು ಮನೆಗೆ ಹೋದಾಗ, ಅಚ್ಚರಿಯೆಂಬಂತೆ ಕೊಲೆಯ ಕೇಸಿನಲ್ಲಿ ಸಿಲುಕುತ್ತಾನೆ. ಅವನೊಂದಿಗೆ ಸಿನಿಮಾದ ಹುಚ್ಚು ಹಿಡಿಸಿಕೊಂಡ ಒಬ್ಬ ಹುಡುಗಿ ಮತ್ತು ಆ ಮನೆಯಲ್ಲಿ ಕಳವು ಮಾಡಲು ಬರುವ ಒಬ್ಬ ಕಳ್ಳನೂ ಆ ವೇಳೆ ಎಂಟ್ರಿಯಾಗುತ್ತಾರೆ. ಅವರೆಲ್ಲರೂ ಅ ಕೊಲೆಯ ಪೇಚಿಗೆ ಸಿಲುಕುತ್ತಾರೆ. ಇವುಗಳ ಜೊತೆ ಉದ್ಯಮಿ ದಂಪತಿ ಸುತ್ತವೇ ಕಥೆ ಸುತ್ತುತ್ತದೆ. ಈ ನಡುವೆ ಕೊಲೆ ಹಾಗೂ ಅಲ್ಲಿ ಸಿಗುವ ಮೂವರಿಗೂ ಇರುವ ಸಂಬಂಧದ ಕುರಿತು ನಡೆಯುವ ತನಿಖೆ ಸಿನಿಮಾದ ಹೈಲೈಟ್.‌
ಅಂದಹಾಗೆ, ಇದು ಕಾಮ, ಕ್ರೋಧ, ಪ್ರೀತಿ, ದುರಾಸೆ, ಅಧಿಕಾರ ಮತ್ತು ಅಹಂಕಾರ ಎಲ್ಲವನ್ನೂ ತಪ್ಪಾಗಿ ಅರ್ಥೈಸಿಕೊಳ್ಳುವುದೇ ಇಲ್ಲಿನ ಪಾತ್ರಗಳ ಕಥೆ ವ್ಯಥೆ. ತಮ್ಮ ಸಂಕಷ್ಟಗಳಿಂದ ಹೊರಬರಲು ಪ್ರತೀ ಪಾತ್ರಗಳ ಹೋರಾಟ, ಅಸಹಾಯಕತೆ ಚಿತ್ರದಲ್ಲಿದೆ.

ಚಿತ್ರದಲ್ಲಿ ಅವಿನಾಶ್‌ ಯಳಂದೂರ್‌, ಮಹೇಶ್‌ ಬಂಗ್‌, ಸಂಯುಕ್ತಾ ಹೊರನಾಡು, ಅಂಜು ಆಳ್ವಾ ನಾಯಕ್‌, ನಂದಗೋಪಾಲ್‌, ಗೋಪಾಲಕೃಷ್ಣ ದೇಶಪಾಂಡೆ, ಶ್ರೀಪತಿ ಮಂಜನ ಬಯಲು, ಅರವಿಂದ್‌ ಕುಪ್ಳಿಕರ್‌ ಇತರರು ಇದ್ದಾರೆ. ಬಾಲಾಜಿ ಮನೋಹರ್‌ ಛಾಯಾಗ್ರಹಣವಿದೆ. ಉದಿತ್‌ ಹರಿತಸ್‌ ಸಂಗೀತ ಮತ್ತು ಪವನ್‌ ಕುಮಾರ್‌ ಸಾಹಿತ್ಯವಿದೆ.
ಕನಸು ಟಾಕೀಸ್‌ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಾಣಗೊಂಡಿದೆ. ಅಂದಹಾಗೆ, ಕಳೆದ 2019ರ ಲಂಡನ್ ವರ್ಲ್ಡ್ ಪ್ರೀಮಿಯರ್ ಮತ್ತು ಸಿಂಗಾಪಪುರದಲ್ಲಿ ನಡೆದ ಸೌತ್ ಏಷ್ಯನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿರುವ “ಅರಿಷಡ್ವರ್ಗ” ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿದೆ.

Categories
ಸಿನಿ ಸುದ್ದಿ

ಇನ್ಸ್‌ಪೆಕ್ಟರ್‌ ಪ್ರಿಯಾಂಕ!‌ ಮಹಿಳಾ ಪರ ಫೀಲ್ಡ್‌ಗೆ ಎಂಟ್ರಿ

ಉಗ್ರಾವತಾರ ಮೋಷನ್‌ ಪೋಸ್ಟರ್ ಬಂತು

ಪ್ರಿಯಾಂಕ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಒಂದಷ್ಟು ವಿಶೇಷತೆಗಳು ನಡೆದಿವೆ. ಕಳೆದ ವರ್ಷದ ಹುಟ್ಟುಹಬ್ಬ ಆಚರಣೆ ವೇಳೆ, “ಉಗ್ರಾವತಾರ” ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಗೊಂಡಿತ್ತು. ಈ ಹುಟ್ಟುಹಬ್ಬಕ್ಕೆ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಅಷ್ಟಕ್ಕೂ “ಉಗ್ರಾವತಾರ” ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದು ನಟ ಉಪೇಂದ್ರ. ಮೋಷನ್‌ ಪೋಸ್ಟರ್‌ ವೀಕ್ಷಿಸಿದ ಉಪೇಂದ್ರ, ಚಿತ್ರದ ಕೆಲ ತುಣುಕು ನೋಡಿದರೆ, ಮಾಲಾಶ್ರೀ ಅವರ ಚಿತ್ರಗಳು ನೆನಪಾಗುತ್ತವೆ ಎಂದು ಹೇಳುವುದರ ಜೊತೆಗೆ, ಪ್ರಿಯಾಂಕ ಉಪೇಂದ್ರ ಅವರು ಇನ್ಸ್‌ಪೆಕ್ಟರ್‌ ಆಗಿ ಕಾಣಿಸಿಕೊಂಡಿದ್ದು, ಚಿತ್ರ ಎಲ್ಲರಿಗೂ ಗೆಲುವು ಕೊಡಲಿ ಎಂದು ಶುಭಹಾರೈಸಿದ್ದಾರೆ.


ಪ್ರಿಯಾಂಕ ಉಪೇಂದ್ರ ಅವರು ಈ ಹಿಂದೆ “ಸೆಕೆಂಡ್‌ ಹಾಫ್”‌ ಚಿತ್ರದಲ್ಲಿ ಪೊಲೀಸ್‌ ಆಗಿ ಕಾಣಿಸಿಕೊಂಡಿದ್ದರು. ಈಗ “ಉಗ್ರಾವತಾರ” ಚಿತ್ರದಲ್ಲಿ ಇನ್ಸ್‌ಪೆಕ್ಟರ್‌ ಆಗಿ ಮಿಂಚಲಿದ್ದಾರೆ. ಅವರು ತಮ್ಮ ಪಾತ್ರದ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. “ಆರಂಭದಲ್ಲಿ ನಿರ್ದೇಶಕರು ಕಥೆ ಮತ್ತು ಪಾತ್ರದ ಕುರಿತು ವಿವರಿಸಿದಾಗ, ನಾನು ಈ ಪಾತ್ರವನ್ನು ನಿರ್ವಹಿಸಬಹುದಾ ಎಂಬ ಪ್ರಶ್ನೆ ಕಾಡಿದ್ದು ನಿಜ. ಆದರೆ, ಚಿತ್ರದ ನಿರ್ಮಾಪಕರು, ನಿರ್ದೇಶಕರು ಮತ್ತು ಛಾಯಾಗ್ರಾಹಕರು ಧೈರ್ಯ ತುಂಬಿ ಎಲ್ಲರೂ ಪ್ರೋತ್ಸಾಹಿಸಿ ಸಾಥ್ ಕೊಟ್ಟಿದ್ದರಿಂದ ಪಾತ್ರದಲ್ಲಿ ಜೀವಿಸಲು ಸಾಧ್ಯವಾಯಿತು. ಇನ್ನು, ಈ ಚಿತ್ರದಲ್ಲಿ ವಾಸ್ತವ ಅಂಶಗಳಿವೆ. ಮಹಿಳೆಯರ ಮೇಲಿನ ಶೋಷಣೆ, ಅಪರಾಧ ಇದರ ಜೊತೆಗೆ ಒಂದಷ್ಟು ಗಂಭೀರ ವಿಷಯಗಳನ್ನು ಇಟ್ಟುಕೊಂಡೇ ನಿರ್ದೇಶಕರು ಕಮರ್ಷಿಯಲ್ ಅಂಶಗಳೊಂದಿಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು, ನಾನಿಲ್ಲಿ ಸ್ಟಂಟ್‌ ಮಾಡಿದ್ದೇನೆ. ಎಲ್ಲವೂ ನೈಜವಾಗಿರಬೇಕೆಂಬ ಕಾರಣಕ್ಕೆ ಡ್ಯೂಪ್‌ ಇಲ್ಲದೆಯೇ ಒಂದಷ್ಟು ತರಬೇತಿ ಪಡೆದುಕೊಂಡೇ ಕ್ಯಾಮೆರಾ ಮುಂದೆ ಫೈಟ್‌ ಮಾಡಿದ್ದೇನೆ. ಇನ್ನು, ಐಪಿಎಸ್‌ ಅಧಿಕಾರಿ ರೂಪ ಮೇಡಮ್‌ ನನಗೆ ಪ್ರೇರಣೆ ಎಂಬುದು ಪ್ರಿಯಾಂಕ ಉಪೇಂದ್ರ ಅವರ ಮಾತು.


ನಿರ್ದೇಶಕ ಗುರುಮೂರ್ತಿ ಅವರಿಗೆ ಪ್ರಿಯಾಂಕ ಉಪೇಂದ್ರ ಅವರ ಜೊತೆ ಕೆಲಸ ಮಾಡಿದ್ದು ತುಂಬಾನೇ ಹೆಮ್ಮೆ ಎನಿಸಿದೆಯಂತೆ. ಅವರೇ ಹೇಳುವಂತೆ, ಮೇಡಮ್‌ ಚಿತ್ರೀಕರಣ ವೇಳೆ ತಮ್ಮ ಪಾತ್ರದ ಬಗ್ಗೆ ಸಾಕಷ್ಟು ಆಸಕ್ತಿ ವಹಿಸುತ್ತಾರೆ, ಕಾಳಜಿ ತೋರುತ್ತಾರೆ. ಅವರ ಸಹಕಾರ, ಪ್ರೋತ್ಸಾಹದಿಂದಲೇ ನಾವೀಗ ಶೇ.30 ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಸದ್ಯ ಮೂರು ಫೈಟ್ಸ್ ಬಾಕಿ ಇದೆ.‌ ಚಿತ್ರದಲ್ಲಿ ಮಹಿಳೆಯರಿಗೆ ಹೇಗೆ ಗೌರವ ತೋರಬೇಕು ಎಂಬುದು ಹೈಲೆಟ್‌. ಸತ್ಯಪ್ರಕಾಶ್, ಸುಮನ್ ಸೇರಿದಂತೆ ಇತರರು ನಟಿಸಿದ್ದಾರೆ. ಇಷ್ಟು ದಿನ ಪ್ರಿಯಾಂಕ ಅವರು ಗ್ಲಾಮರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಮೊದಲ ಸಲ ಈ ಚಿತ್ರದಲ್ಲಿ ಸ್ಟಂಟ್‌ ಮಾಡುವ ಮೂಲಕ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸಂಕ್ರಾಂತಿ ಹೊತ್ತಿಗೆ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಇದೆ ಎಂಬುದು ನಿರ್ದೇಶಕರ ಮಾತು. ಈ ಚಿತ್ರವನ್ನು ಎಸ್.ಜಿ.ಸತೀಶ ನಿರ್ಮಿಸಿದ್ದಾರೆ. ಕಿನ್ನಾಳ್‌ ರಾಜ್‌ ಸಂಭಾಷಣೆ, ಸಾಹಿತ್ಯ ಬರೆದಿದ್ದಾರೆ. ವೀಣಾ ನಂದಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ದೀಪಾವಳಿಗೆ ಅಂತರಂಗದ ಹಾಡು- ಹೊಸ ಪ್ರಯೋಗದ ಜೊತೆ ಶುದ್ಧೀಕರಣ

ಒನ್‌ ನೈಟ್‌ ಸ್ಟೋರಿ ಸ್ಪೆಷಲ್‌, ಇಡೀ ರಾತ್ರಿ ಕಾರಲ್ಲೇ ಟ್ರಾವೆಲ್‌ !

 

“ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲಸಂಗಮದೇವನ ಒಲಿಸುವ ಪರಿ…

ಅರೇ, ಇದೇನಪ್ಪಾ, ಸಿನಿಮಾ ವೆಬ್ಸೈಟ್‌ನಲ್ಲಿ ಬಸವಣ್ಣನವರ ವಚನವಿದೆ ಎಂಬ ಸಣ್ಣ ಅಚ್ಚರಿಯಾಗಬಹುದು. ಅಚ್ಚರಿಯಾದರೂ, ಈ ವಚನಕ್ಕೂ ಇಲ್ಲಿ ಬರೆಯುತ್ತಿರೋ ಸಿನಿಮಾ ಸುದ್ದಿಗೂ ವಿಶೇಷವಿದೆ. ಇಲ್ಲೀಗ ಹೇಳಹೊರಟಿರುವ ವಿಷಯ “ಇದೇ ಅಂತರಂಗ ಶುದ್ಧಿ” ಚಿತ್ರದ್ದು. ಹೌದು, ಸಿನಿಮಾದ ಹೆಸರೇ ವಿಭಿನ್ನ ಎನಿಸುತ್ತೆ ಅಂದಮೇಲೆ, ಚಿತ್ರದ ಕಥೆ ಕೂಡ ಅಷ್ಟೇ ವಿಭಿನ್ನ ಎಂಬುದು ಚಿತ್ರತಂಡದ ಮಾತು. ಅಂದಹಾಗೆ, ಇದೊಂದು ಪ್ರಯೋಗಾತ್ಮಕ ಚಿತ್ರ. ಹೊಸ ಹೊಸ ಆಲೋಚನೆಗಳೊಂದಿಗೆ ಹೊಸಬರು ಹೊಸ ಪ್ರಯತ್ನ, ಪ್ರಯೋಗಕ್ಕಿಳಿದಿರುವುದು ಹೊಸದೇನಲ್ಲ. ಆ ಸಾಲಿಗೆ ಈ “ಇದೇ ಅಂತರಂಗ ಶುದ್ಧಿ” ಚಿತ್ರವೂ ಹೊಸದ್ದೊಂದು ಪ್ರಯೋಗ ಮಾಡ ಹೊರಟಿದೆ. “ಇದೇ ಅಂತರಂಗ ಶುದ್ಧಿ” ಚಿತ್ರದ ಹೆಸರಲ್ಲೊಂದು ವಿಶೇಷತೆಯೂ ಇದೆ. ಅದು ಸಿನಿಮಾ ಹೊರಬರುವವರೆಗೆ ಕಾಯಬೇಕಷ್ಟೇ. ಇದೇ ದೀಪಾವಳಿ ಹಬ್ಬದಂದು ಚಿತ್ರದ ಲಿರಿಕಲ್‌ ವಿಡಿಯೋ ಹೊರಬರುತ್ತಿದೆ. ನವೆಂಬರ್‌ ೧೫ರಂದು ನಿರ್ದೇಶಕ ಕುಮಾರ್‌ ದತ್‌ ಬರೆದಿರುವ “ನುಡಿಸು ಹೃದಯ” ಲಿರಿಕಲ್‌ ವಿಡಿಯೋ ರಿಲೀಸ್‌ ಆಗುತ್ತಿದೆ. ನಕುಲ್‌ ಅಭ್ಯಯಂಕರ್‌ ಹಾಡಿರುವ ಈ ಹಾಡನ್ನು ಡಿ. ಬೀಟ್ಸ್‌ ಆಡಿಯೋ ಕಂಪೆನಿ ಮೂಲಕ ಹೊರತರಲಾಗುತ್ತಿದೆ. ಅಂದಹಾಗೆ, ಈ ಚಿತ್ರದ ಕುರಿತು ನಿರ್ದೇಶಕ ಕುಮಾರ್‌ ದತ್ “ಸಿನಿ ಲಹರಿ” ಜೊತೆ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.

ಒಂದು ರಾತ್ರಿಯ ಕಥೆ
“ಇದು ನನ್ನ ಎರಡನೇ ನಿರ್ದೇಶನದ ಸಿನಿಮಾ. ಈ ಹಿಂದೆ “ಎರಡೊಂದ್ಲ ಮೂರು” ಸಿನಿಮಾ ಮಾಡಿದ್ದೆ. ಅದಾದ ಬಳಿಕ ಹೊಸ ಬಗೆಯ ಕಥೆ ಹೆಣೆದು ಸಿನಿಮಾಗೆ ಅಣಿಯಾದೆ. ಆಗ ಶುರುವಾಗಿದ್ದೇ “ಇದೇ ಅಂತರಂಗ ಶುದ್ಧಿ”. ಮೊದಲೇ ಹೇಳಿದಂತೆ, ಇದೊಂದು ಪ್ರಯೋಗಾತ್ಮಕ ಸಿನಿಮಾ. ಇಡೀ ಸಿನಿಮಾ ೨೦ ದಿನಗಳಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷವೆಂದರೆ, ಬಹುತೇಕ ರಾತ್ರಿ ವೇಳೆ ಚಿತ್ರೀಕರಿಸಿದ್ದೇನೆ. ಕಾರಣ, ಇದೊಂದು ಜರ್ನಿಯಲ್ಲಿ ಸಾಗುವ ಕಥೆ. ಅದರಲ್ಲೂ ರಾತ್ರಿ ಶುರುವಾಗಿ, ಬೆಳಗ್ಗೆ ಮುಗಿಯುವ ಕಥೆ. ಬೆಂಗಳೂರು ಆಚೆ ಹೋಗೋದು, ಅಲ್ಲಿಂದ ಈಚೆ ಬರುವ ದೃಶ್ಯಗಳು ಮಾತ್ರ ಇಲ್ಲಿರಲಿವೆ. ಇಲ್ಲಿ ಕಾರು, ಇನ್ನೋವ, ಟ್ಯಾಕ್ಸಿ ಇವುಗಳೂ ಹೈಲೆಟ್‌ ಆಗಿವೆ. ಒಂದು ಜರ್ನಿ ಪಾಯಿಂಟ್‌ನಲ್ಲೇ ಕಥೆ ಸಾಗಲಿದೆʼ ಎಂಬುದು ನಿರ್ದೇಶಕರ ಮಾತು.

ಕುಮಾರ್‌ ದತ್‌, ನಿರ್ದೇಶಕ

 

ಪ್ರಯೋಗಾತ್ಮಕ ಚಿತ್ರ
ಚಿತ್ರದ ಶೀರ್ಷಿಕೆಗೆ ತಕ್ಕಂತೆಯೇ ಇಲ್ಲಿ ಕಥೆ ಹೆಣೆಯಲಾಗಿದೆ. ಯಾವುದೇ ಕಾರಣಕ್ಕೂ ಶೀರ್ಷಿಕೆ ಇಲ್ಲಿ ದುರ್ಬಳಕೆಯಾಗಲ್ಲ. ಕಥೆಗೆ ಪೂರಕವಾಗಿಯೇ ಟೈಟಲ್‌ ಇಡಲಾಗಿದೆ. ಪ್ರಯೋಗಾತ್ಮಕ ಚಿತ್ರ ಅಂದಾಗ ವಿಶೇಷತೆಗಳು ಇರಲೇಬೇಕು. ಆ ಬಗ್ಗೆ ಹೇಳುವುದಾದರೆ, ಇಲ್ಲಿ ಇಡೀ ಸಿನಿಮಾದಲ್ಲಿ ಯಾವುದೇ ಸಿನಿಮಾ ಲೈಟ್‌ ಬಳಸಿಲ್ಲ. ಕಾರಿನ ಲೈಟ್ಸ್‌ಗಳು, ಬೀದಿ ದೀಪಗಳನ್ನೇ ಇಟ್ಟುಕೊಂಡು ಚಿತ್ರೀಕರಿಸಿದ್ದೇನೆ. ಎಲ್ಲವೂ ನೈಜತೆಯಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಪ್ರಯತ್ನ ಮಾಡಿದ್ದೇನೆ. ಆ ಪ್ರಯತ್ನ ಸಾರ್ಥಕವೂ ಎನಿಸಿದೆ. ಇನ್ನು, ಕಥೆ ಬಗ್ಗೆ ಹೇಳುವುದಾದರೆ, ಇಲ್ಲೂ ಲವ್‌ಟ್ರ್ಯಾಕ್‌ ಹೋಗುತ್ತೆ. ಒಂದು ಸಮಾಜಕ್ಕೊಂದು ಸಣ್ಣ ಸಂದೇಶವೂ ಇಲ್ಲಿದೆ. ಹಾಗೆಯೇ ಇಲ್ಲಿ ಉಗ್ರರ ನೆರಳೂ ಇದೆ. ಹುಡುಗಿಯೊಬ್ಬಳು ಮನೆಬಿಟ್ಟು ಹೋಗ್ತಾಳೆ, ಅವಳನ್ನು ಒಬ್ಬ ಹುಡುಗ ಭೇಟಿಯಾಗ್ತಾನೆ. ಒಬ್ಬೊಬ್ಬರು ಬಂದು ಒಂದು ಕಾರಲ್ಲಿ ಕೂರುತ್ತಾರೆ. ಅಲ್ಲಿ ಎಲ್ಲರ ಸ್ಟೋರಿಯೂ ಕನೆಕ್ಟ್‌ ಆಗ್ತಾ ಹೋಗುತ್ತದೆ ಎಂಬುದು ಅವರ ಮಾತು.

ಅಭಿಲಾಶ್‌ ಚಾಕ್ಲ , ವಜೀತ್‌ ಬುಲ್ಲರ್ ನಿರ್ಮಾಪಕರು

ಸಾಫ್ಟ್‌ವೇರ್‌ ಮಂದಿಯ ಕಲರ್‌ಫುಲ್‌ ಸಿನ್ಮಾ
ಈ ಚಿತ್ರ ಅಭಿನವ್‌ ಬ್ಯಾನರ್‌ನಲ್ಲಿ ತಯಾರಾಗಿದೆ. ಅಭಿಲಾಶ್‌ ಚಾಕ್ಲ ಮತ್ತು ವಜೀತ್‌ ಬುಲ್ಲರ್ ಈ ಚಿತ್ರದ ನಿರ್ಮಾಪಕರು. ಇವರಿಗೆ ಇದು ಮೊದಲ ಚಿತ್ರ. ಒಂದೊಳ್ಳೆಯ ಸಿನಿಮಾ ಮಾಡುವ ಆಸೆ ಇದ್ದುದರಿಂದಲೇ ಇವರು, ಕುಮಾರ್‌ ದತ್‌ ಹೇಳಿದ ಕಥೆ ಕೇಳಿ, ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಪಕರಿಗೆ ಒಳ್ಳೆಯ ಸಿನಿಮಾ ಮಾಡಿರುವ ತೃಪ್ತಿ ಇದೆ. ಇನ್ನು, ಚಿತ್ರಕ್ಕೆ ಆರ್ಯವರ್ಧನ್‌ ಹೀರೋ. ಅವರಿಗೆ ಪ್ರತಿಭಾ ಹಾಗೂ ಶ್ವೇತಾ ನಾಯಕಿಯರು. ಉಳಿದಂತೆ ಚಿತ್ರದಲ್ಲಿ ಶ್ರೀಧರ್‌, ಮಂಜುಳಾರೆಡ್ಡಿ, “ಕಾಮಿಡಿ ಕಿಲಾಡಿ” ಖ್ಯಾತಿಯ ಸೂರಜ್‌, ರೂಪೇಶ್‌ ಇತರರು ನಟಿಸಿದ್ದಾರೆ. ಲವ್‌ ಪ್ರಾಣ್‌ ಮೆಹ್ತಾ ಅವರ ಸಂಗೀತವಿದೆ. ವಿನಯ್‌ ಛಾಯಾಗ್ರಹಣ ಮಾಡಿದ್ದಾರೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್‌ ಆಗಿದ್ದು, ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್‌ ಅಥವಾ ಜನವರಿಯಲ್ಲಿ ಚಿತ್ರ ತೆರೆಗೆ ಬರಲಿದೆ. ಸದ್ಯ ದೀಪಾವಳಿಗೆ “ನುಡಿಸು ಹೃದಯ” ಲಿರಿಕಲ್‌ ವಿಡಿಯೋ ಹೊರಬರುತ್ತಿದೆ. ಚಿತ್ರದಲ್ಲಿ ಒಂದು ಕ್ಲಾಸಿಕಲ್‌ ಗೀತೆ, ಮೆಲೋಡಿ ಹಾಗು ಕಥೆಗೆ ಪೂರಕವಾಗಿ ಸಾಗುವ ಹಾಡೊಂದು ಇದೆ. ಅದೇನೆ ಇರಲಿ, ಚಿತ್ರದ ಶೀರ್ಷಿಕೆಯೇ ಆಕರ್ಷಣೆ ಎನಿರುವುದರಿಂದ ಸಣ್ಣ ಕುತೂಹಲವಂತೂ ಚಿತ್ರದ ಮೇಲಿದೆ. ಇನ್ನು, ನ.೧೫ಕ್ಕೆ ಹೊರಬರುವ ಹಾಡು ಕೂಡ ಕೇಳುಗರಿಗೆ ಖಂಡಿತ ಇಷ್ಟವಾಗುತ್ತೆ ಎಂಬ ನಂಬಿಕೆ ಕೂಡ ಚಿತ್ರತಂಡಕ್ಕಿದೆ.

 

Categories
ಸಿನಿ ಸುದ್ದಿ

ಅಂಧರ ಕಥಾಹಂದರ ಮನಸಾರೆ ನೋಡಿ

ನವೆಂಬರ್14ಕ್ಕೆ ಕಣ್ತೆರೆದು ನೋಡು ಫಸ್ಟ್ ಲುಕ್

ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದಲೂ ನೃತ್ಯ ನಿರ್ದೇಶಕರಾಗಿರುವ ಎಂ.ಆರ್. ಕಪಿಲ್ ಅವರು ಈಗಾಗಲೇ ನಿರ್ದೇಶಕರಾಗಿ ಗುರುತಿಸಿಕೊಂಡಿರುವುದು ಗೊತ್ತೇ ಇದೆ. ಈಗ ಮತ್ತೊಂದು ಸಿನಿಮಾ ನಿರ್ದೇಶನ ಮಾಡಿದ್ದು, ಅದೀಗ ಬಿಡುಗಡೆಗೆ ಸಿದ್ಧವಾಗುತ್ತಿದೆ.
ಅಂದಹಾಗೆ, ಆ ಚಿತ್ರಕ್ಕೆ ‘ಕಣ್ತೆರೆದು ನೋಡು’ ಎಂಬ ಹೆಸರಿಡಲಾಗಿದೆ.ಕುಶಿಲ ಸಿನಿ ಪ್ರೊಡಕ್ಷನ್ಸ್ ನ ಮೊದಲ ನಿರ್ಮಾಣದ ಚಿತ್ರವಿದು. ನವೆಂಬರ್ 14 ರಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.

ಶಿವಪ್ಪ ಕುಡ್ಲೂರು

ಇನ್ನು ಶಿವಪ್ಪ ಕುಡ್ಲೂರು ಈ ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಕಪಿಲ್ ಅವರು, ಕಥೆಯ ಜೊತೆಗೆ ನೃತ್ಯ ನಿರ್ದೇಶನವನ್ನೂ ಮಾಡಿದ್ದಾರೆ. ಇದು ಅಂಧನೊಬ್ಬನ ಕಥೆ ಹೊಂದಿದ್ದು, ಸಮಾಜಕ್ಕೊಂದು ಸಂದೇಶ ಸಾರುವ ಅಂಶವಿದೆ. ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು ಅಂಧ ಗಾಯಕರ ಧ್ವನಿ ಇರುವುದು ವಿಶೇಷ. ಚಿತ್ರಕ್ಕೆ ದಿನೇಶ್ ಈಶ್ವರ್ ಅವರ ಸಂಗೀತವಿದೆ.

ಕಪಿಲ್ ನಿರ್ದೇಶಕ

ಚಿತ್ರದ ಪ್ರಮುಖ ಪಾತ್ರಧಾರಿ ಶಿವಪ್ಪ ಕುಡ್ಲೂರು ಮೂಲತಃ ಚಿಕ್ಕಮಗಳೂರಿನವರು ಬಾಲ್ಯದಿಂದಲೇ ನಟನೆ ಆಸಕ್ತಿ ಇಟ್ಟುಕೊಂಡಿದ್ದ ಇವರು, ಶಾಲೆ,ಕಾಲೇಜು ದಿನಗಳಲ್ಲಿ ನಾಟಕ, ಬೀದಿನಾಟಕಗಳಲ್ಲಿ ಭಾಗವಹಿಸಿ, ನಟನೆ ಗೀಳು ಇಟ್ಟಕೊಂಡಿದ್ದರು. ಹಾಗೆ ನೋಡಿದರೆ, ಇವರು ಕಳೆದ ಎರಡು ದಶಕಗಳ ಹಿಂದೆಯೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಇವರಿಗೆ ಅವಕಾಶ ಕಲ್ಪಿಸಿದ್ದು ಎಂಬುದು ವಿಶೇಷ.

ಆದರೆ, ಹಲವು ಕಾರಣಗಳಿಂದ ಚಿತ್ರರಂಗದಿಂದ ದೂರವಿದ್ದ ಇವರು ಕೈಗಾರಿಕಾ ಉದ್ಯಮದಲ್ಲಿ ತೊಡಗಿದ್ದರು. ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಇವರೀಗ ‘ಕಣ್ತೆರೆದು ನೋಡು’ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ್ದಾರೆ.


ಚಿತ್ರಕ್ಕೆ ಪುಷ್ಪಲತಾ ಕುಡ್ಲೂರು ನಿರ್ಮಾಪಕರು. ಒಂದೊಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ನಿರ್ದೇಶಕ ಕಪಿಲ್ ಹೇಳಿದ ಅಂಧನೊಬ್ಬನ‌ ಕಥೆಗೆ ಬಂಡವಾಳ ಹಾಕಿದ್ದಾರೆ. ಇನ್ನು ಚಿತ್ರದ ನಿರ್ಮಾಣದಲ್ಲಿ
ಹರೀಶ್ ಹೆಬ್ಬಗೋಡು, ಡಾ. ಸಿ.ಬಿ.ಶಶಿಧರ್,
ಶಿವಕುಮಾರ್ ಜೇವರಗಿ, ಸಿದ್ದು ಸಾಹುಕಾರ ಕಬಾಡಗಿ ಇತರರು ಸಾಥ್ ನೀಡಿದ್ದಾರೆ.

 

 

Categories
ಸಿನಿ ಸುದ್ದಿ

ಶಶಿಕುಮಾರ್ ಪುತ್ರನಿಗೆ ಶಿವಣ್ಣ ಸಾಥ್

ಸೀತಾಯಣ ಟೀಸರ್ ರಿಲೀಸ್ ಮಾಡಿದ ಸೆಂಚುರಿ ಸ್ಟಾರ್

ಶಶಿಕುಮಾರ್ ಪುತ್ರ ಅಕ್ಷಿತ್ ಅಭಿನಯದ “ಸೀತಾಯಣ” ಬಿಡುಗಡೆಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಚಿತ್ರತಂಡ ಚಿತ್ರದ ಟ್ರೇಲರ್ ಹೊರ ತಂದಿದೆ.
ನಟ ಶಿವರಾಜಕುಮಾರ್ ಅವರು ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ.


ಕಲರ್ಸ್ ಕ್ಲೌಡ್ಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ನಡಿ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ತಯಾರಾಗಿರುವ ’ಸೀತಾಯಣ’ ಸಿನಿಮಾದ ಟೀಸರ್‌ ವೀಕ್ಷಿಸಿದ ಶಿವರಾಜ್‌ಕುಮಾರ್, ‘ಶಶಿಕುಮಾರ್ ಸಹೋದರ ಇದ್ದಂತೆ. ಅವರ ಮಗ ಮೂರು ಭಾಷೆಯಲ್ಲಿ ತಯಾರಾಗಿರುವ ಚಿತ್ರದಲ್ಲಿ ನಾಯಕನಾಗಿದ್ದಾರೆ ಅದು ಖುಷಿಯ ವಿಷಯ.
ಮೂರು ಭಾಷೆಗಳಲ್ಲಿ ಒಬ್ಬ ಕನ್ನಡದ ಹುಡುಗನನ್ನು ಹಾಕಿಕೊಂಡು ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ ಅಭಿನಂದನೆಗಳು.
ಟೀಸರ್ ನೋಡಿದರೆ, ಸಿನಿಮಾ ಗೆಲ್ಲುವ ಲಕ್ಷಣಗಳಿವೆ. ರಾಮಾಯಣದಂತೆ ಈ ಸಿನಿಮಾವು ಎಲ್ಲಾ ಭಾಷೆಯಲ್ಲಿ ಚರಿತ್ರೆ ಸೃಷ್ಟಿಸಲಿ ಎಂದು ಶುಭ ಹಾರೈಸಿದ್ದಾರೆ.


ನಿರ್ಮಾಪಕಿ ಲಲಿತಾ ರಾಜಲಕ್ಷೀ ಅವರಿಗೆ ‘ಸೀತಾಯಣ’ ಎಂಬ ಒಳ್ಳೆಯ ಸಿನಿಮಾ ಮಾಡಿದ ಹೆಮ್ಮೆ. ಚಿತ್ರದಲ್ಲಿ ಮಹಿಳೆಯರಿಗೆ ಗೌರವ ಕೊಡಬೇಕು ಎಂಬ ವಿಷಯ ಹೈಲೈಟ್ ಆಗಿದೆ ಎನ್ನುತ್ತಾರೆ ಅವರು.
ಚಿತ್ರದಲ್ಲಿ ಅಕ್ಷಿತ್‌ ಶಶಿಕುಮಾರ್‌ಗೆ ಜೋಡಿಯಾಗಿ ಅನಹಿತಾ ಭೂಷಣ್ ಇದ್ದಾರೆ. ಉಳಿದಂತೆ ಅಜಯ್‌ ಘೋಷ್, ‘ಕಾಮಿಡಿ ಕಿಲಾಡಿ’ ಖ್ಯಾತಿಯ ಹಿತೇಶ್, ಮಧುಸುಧನ್, ವಿಕ್ರಂಶರ್ಮ, ಮೇಘನಾಗೌಡ, ಬೇಬಿ ತ್ರಿಯುಕ್ತ, ವಿದ್ಯಲೇಖರಾಮನ್ ಇತರರು ನಟಿಸಿದ್ದಾರೆ.
ಪ್ರಭಾಕರ್‌ ಆರಿಪ್ಕಾ ನಿರ್ದೇಶನವಿದೆ. ಪದ್ಮನಾಭ ಭಾರದ್ವಾಜ್ ಸಂಗೀತವಿದೆ. ದುರ್ಗಾಪ್ರಸಾದ್‌ ಕೊಲ್ಲಿ ಛಾಯಾಗ್ರಹಣವಿದೆ. ಪ್ರವೀಣ್‌ಪುಡಿ ಸಂಕಲನ ಹಾಗೂ ಕವಿರಾಜ್, ಗೌಸ್‌ಪೀರ್ ಸಾಹಿತ್ಯವಿದೆ. ರಿಯಲ್ ಸತೀಶ್ ಸ್ಟಂಟ್ ಮಾಡಿದ್ದಾರೆ.

Categories
ಸಿನಿ ಸುದ್ದಿ

ರಿಯಲ್‌ನಲ್ಲಿ ಮೃದು ಪೋಲೀಸ್‌, ರೀಲ್‌ನಲ್ಲಿ ಖಡಕ್‌ ಅಧಿಕಾರಿ!

ಮಧು ತುಂಬಿದ ಬದುಕು…
ಇದು ಮಂದಗೆರೆ ಹುಡುಗನ ಸಿನ್ಮಾ ಪ್ರೀತಿ

ಅವರೊಬ್ಬ ಖಡಕ್‌ ಪೊಲೀಸ್‌ ಅಧಿಕಾರಿ. ದುಷ್ಟರನ್ನು ಬಗ್ಗು ಬಡಿಯೋ ಖದರ್‌ ವ್ಯಕ್ತಿ. ಇಲ್ಲಿಯವರೆಗೆ ಮಾಡಿರುವ ಎನ್‌ಕೌಂಟರ್‌ಗಳ ಒಟ್ಟು ಸಂಖ್ಯೆ 114!
ಅಬ್ಬಾ…! ಬರೋಬ್ಬರಿ 114 ಎನ್‌ಕೌಂಟರ್‌ ಮಾಡಿದ್ದಾರೆಂದರೆ, ಅದು ಸುಲಭದ ಮಾತಂತೂ ಅಲ್ಲ ಬಿಡಿ. ಹೀಗಂತ ಹಾಗೊಮ್ಮೆ ಅಚ್ಚರಿಯಾಗುವುದು ನಿಜ. ಇದು ರಿಯಲ್‌ ಪೋಲೀಸ್‌ವೊಬ್ಬರ ರೀಲ್‌ ಸ್ಟೋರಿ ಅಂದರೆ ನಂಬಲೇಬೇಕು. ಹೌದು, ಅವರು ರಿಯಲ್‌ ಲೈಫಲ್ಲಿ ರೈಲ್ವೆ ಇಲಾಖೆಯಲ್ಲಿ ಪೊಲೀಸ್‌ ಆದವರು. ರೀಲ್‌ನಲ್ಲಿ ಮಾತ್ರ ಎಸಿಪಿ, ಎಸ್‌ಪಿ ಆಗಿ ತೆರೆಯ ಮೇಲೆ ಮಿಂಚಿದವರು. ಗನ್‌ ಹಿಡಿದು ಎದುರಾಳಿಗಳನ್ನು ಮಲಗಿಸಿದವರು. ಕಳೆದ ಮೂರು ದಶಕಗಳಿಂದಲೂ ಸಿನಿರಂಗವನ್ನು ಅಪ್ಪಿಕೊಂಡಿರುವ ಅವರು ಅಪ್ಪಟ ಕನ್ನಡ ಸಿನಿಪ್ರೇಮಿ. ಅಂದಹಾಗೆ, ಅವರು ಬೇರಾರೂ ಅಲ್ಲ, ಮಧು ಮಂದಗೆರೆ. ಹೌದು, ಇದು ಮಧು ಮಂದಗೆರೆ ಟಿಪ್ಪಣಿ. ಅವರ ಇಷ್ಟು ವರ್ಷಗಳ ಜರ್ನಿ ಕುರಿತು “ಸಿನಿ ಲಹರಿ” ಜೊತೆ ಮಾತನಾಡಿದ್ದಾರೆ.

 

ಓವರ್‌ ಟು ಮಧು ಮಂದಗೆರೆ…
“ಸಿನಿಮಾ ನನ್ನ ಕನಸು. ಅದು ಈಗಿನದ್ದಲ್ಲ. ನನಗೆ ಸಿನಿಮಾ ನೋಡುವ ಆಸೆ ಹುಟ್ಟಿದ್ದಾಗಿನಿಂದಲೂ ಹುಟ್ಟಿದ ಕನಸದು. ನಾನು ಮೂಲತಃ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಊರಿನವನು. ಸಾಧಾರಣ ಗ್ರಾಮದಿಂದ ಬಂದವನು. ಕಳೆದ 30 ವರ್ಷಗಳಿಂದಲೂ ನನಗೆ ಸಿನಿಮಾ ಅಂದರೆ ಎಲ್ಲಿಲ್ಲದ ಪ್ರೀತಿ. ಅಂದಿನಿಂದ ಇಂದಿನವರೆಗೂ ಸಿನಿಮಾ ಜಪಿಸದ ದಿನವಿಲ್ಲ. ಕೆ.ವಿ.ರಾಜು ಅವರ “ಅಭಿಜಿತ್”‌ ಚಿತ್ರದ ಮೂಲಕ ನಾನು ಸಿನಿಮಾ ರಂಗ ಪ್ರವೇಶಿಸಿದೆ. ದೇವರಾಜ್‌ ಹಾಗೂ ಖುಷ್ಬು ಅವರ ಚಿತ್ರವದು. ಅಲ್ಲಿಂದ ಶುರುವಾದ ನನ್ನ ಸಿನಿಮಾ ಪಯಣ ಇಲ್ಲಿಯವರೆಗೂ ಮುಂದುವರೆದಿದೆ. ಈವರೆಗೆ ನಾನು ಸುಮಾರು 55ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಸದ್ಯಕ್ಕೆ ಬಿಡುಗಡೆಗೆ 11ಕ್ಕೂ ಹೆಚ್ಚು ಚಿತ್ರಗಳು ಸಾಲುಗಟ್ಟಿವೆ. ಇನ್ನು, ನಾನು ಇದುವರೆಗೆ ವಿಷ್ಣುವರ್ಧನ್‌, ಅಂಬರೀಶ್‌, ಶಿವರಾಜಕುಮಾರ್‌, ಪುನೀತ್‌ ರಾಜಕುಮಾರ್‌, ದರ್ಶನ್‌, ಸುದೀಪ್‌ ಸೇರಿದಂತೆ ಹಲವು ಸ್ಟಾರ್‌ ನಟರು ಹಾಗೂ ಈಗಿನ ಯುವ ನಟರ ಜೊತೆಗೂ ನಟಿಸಿದ್ದೇನೆ ಎಂಬ ಖುಷಿ ಇದೆʼ ಎಂಬುದು ಮಂದು ಮಂದಗೆರೆ ಮಾತು.

ಪೊಲೀಸ್‌ನಿಂದ ಎಸ್‌ಪಿವರೆಗೆ…
ನಾನು ಸಿನಿಮಾ ಕನಸು ಕಂಡಿದ್ದನ್ನು ನನಸು ಮಾಡಿಕೊಂಡಿದ್ದೇನೆ. ಸಿನಿಮಾ ನಂಟು ಬೆಳೆಸಿಕೊಂಡಿದ್ದವನಿಗೆ ಸರ್ಕಾರಿ ಕೆಲಸವೂ ಸಿಕ್ಕಿದ್ದು ಮತ್ತೊಂದು ವಿಶೇಷ. ರೈಲ್ವೆ ಇಲಾಖೆಯಲ್ಲಿ ಪೊಲೀಸ್‌ ಆಗಿ ಕೆಲಸ ಪಡೆದವನಿಗೆ. ಸಿನಿಮಾ ಇನ್ನೇನು ಮರೆತುಬಿಡಬೇಕು ಅನ್ನುವ ಹೊತ್ತಲ್ಲಿ, ನನ್ನೊಳಗಿನ ಪ್ರತಿಭೆ ಮತ್ತು ಅದಮ್ಯ ಉತ್ಸಾಹ ಕಂಡ ಕಚೇರಿಯ ಅಧಿಕಾರಿಗಳು ಸಾಥ್‌ ಕೊಟ್ಟರು. ಹಾಗಾಗಿಯೇ ನಾನು ಒಂದಷ್ಟು ಸಿನಿಮಾಗಳಲ್ಲಿ ನಟಿಸೋಕೆ ಸಾಧ್ಯವಾಯ್ತು. ನಾನೊಬ್ಬ ರೈಲ್ವೆ ಪೊಲೀಸ್‌ ಆಗಿಯೂ ಸಿನಿಮಾದಲ್ಲಿ ಅವಕಾಶ ಪಡೆದು ನಟಿಸಿದೆ. ರಿಯಲ್‌ನಲ್ಲಿ ಪೊಲೀಸ್‌ ಆಗಿದ್ದರೆ, ರೀಲ್‌ನಲ್ಲಿ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದೇನೆ ಎಂಬ ಹೆಮ್ಮೆ ಇದೆ. ಇಲಾಖೆಯಲ್ಲಿದ್ದುಕೊಂಡು ಅಧಿಕಾರಿಗಳ ಸಲಹೆ, ಸೂಚನೆಯೊಂದಿಗೆ ನನ್ನೊಳಗಿನ ಬಣ್ಣದ ಕನಸನ್ನು ನನಸಾಗಿಸಿಕೊಂಡು ಬಂದಿದ್ದೇನೆ. ಈಗ ಇನ್ನೊಂದು ವಿಷಯ ಹೇಳಲೇಬೇಕು. ನಾನು ರೈಲ್ವೆ ಪೊಲೀಸ್‌ ಆಗಿದ್ದೆ. ಈಗ ಪೊಲೀಸ್‌ ಕೆಲಸದಿಂದ ಹೊರಬಂದು, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಪೊಲೀಸ್‌ ಆಗಿ ಭಾರತದ ಹಲವು ರಾಜ್ಯಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಈಗ ಕಚೇರಿ ಕೆಲಸ ಪಡೆದಿದ್ದು, ಬೆಳಗ್ಗೆ ಹೋಗಿ, ಸಂಜೆ ಹಿಂದಿರುಗುತ್ತಿದ್ದೇನೆ. ಸಿನಿಮಾ ವಿಷಯಕ್ಕೆ ಬಂದರೆ, ಅವಕಾಶ ಸಿಕ್ಕಾಗೆಲ್ಲಾ ಪಾತ್ರಗಳನ್ನು ಒಪ್ಪಿ, ಅಪ್ಪಿ ನಿರ್ವಹಿಸುತ್ತಿದ್ದೇನೆ.

ಎರಡು ಸಿನ್ಮಾದಲ್ಲಿ ಲೀಡ್‌ ರೋಲ್
ನನ್ನ ಇಷ್ಟು ವರ್ಷಗಳ ಪಯಣದಲ್ಲಿ ಬಹುತೇಕ ಪೊಲೀಸ್‌ ಅಧಿಕಾರಿ ಪಾತ್ರಗಳನ್ನೇ ನಿರ್ವಹಿಸಿದ್ದೇನೆ ಎಂದು ಹೇಳೋಕೆ ಖುಷಿ ಆಗುತ್ತಿದೆ. ಅದೊಂದು ಅದೃಷ್ಟ ಎನ್ನಬಹುದು. ನನ್ನ ಹೈಟು, ಪರ್ಸನಾಲಿಟಿ ನೋಡಿದವರು ಅದೇ ಪಾತ್ರ ಹುಡುಕಿ ಕೊಡುತ್ತಾರೆ. ನಾನೂ ಕೂಡ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ. ಹಾಗಾಗಿ, ಪೊಲೀಸ್‌ ಅಧಿಕಾರಿ ಪಾತ್ರಕ್ಕೆ ಸಾಕಷ್ಟು ಅವಕಾಶಗಳು ಬಂದಿವೆ. ಬರುತ್ತಲೂ ಇವೆ. ಸದ್ಯಕ್ಕೆ ನಾನು ಎರಡು ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ್ದೇನೆ. ಅಲ್ಲಿ ಹೀರೋ ಎನ್ನುವುದಕ್ಕಿಂತ ಪ್ರಮುಖ ಪಾತ್ರ ಎನ್ನಬಹುದು. ಖ್ಯಾತ ಸಾಹಿತಿ ಬಿ.ಎಲ್.ವೇಣು ಅವರ ಕಾದಂಬರಿ ಆಧಾರಿತ “ದನಗಳು” ಮತ್ತು ಹೊಸಬರ “ಪವನ್‌ ಸ್ಟಾರ್”‌ ಎಂಬ ಚಿತ್ರಗಳಲ್ಲಿ ಪ್ರಮುಖ ಪಾತ್ರವಿದೆ. “ಪವನ್‌ ಸ್ಟಾರ್‌” ಚಿತ್ರಕ್ಕೆ ಸತೀಶ್‌ ಚಂದ್ರ ಎಂಬುವವರು ನಿರ್ಮಾಪಕರು. ಆ ಚಿತ್ರದಲ್ಲಿ ನಾನು ಆರ್ಮಿ ಪಾತ್ರ ಮಾಡುತ್ತಿದ್ದೇನೆ. ಎರಡು ಹಾಡು, ಫೈಟ್ಸ್‌ ಕೂಡ ಇದೆ. ಇನ್ನು, “ದನಗಳು” ಸಿನಿಮಾ “ಸಂಕ್ರಾಂತಿʼ ಹಬ್ಬಕ್ಕೆ ತೆರೆ ಕಾಣಲಿದೆ. ಸದ್ಯ “ಭಜರಂಗಿ-2”, “ಯುವರತ್ನ”, “ಅರ್ಜುನ್‌ ಗೌಡ”, :”ಜಾಸ್ತಿ ಪ್ರೀತಿ”,” ಪಂಟ್ರು”, “ಪ್ರಾರಂಭ”,”ಫೈಟರ್‌”,” ಅಲ್ಲೇ ಡ್ರಾ, ಅಲ್ಲೇ ಬಹುಮಾನ”,”ಜಿಪಿಎಸ್‌”,” ವಾಸಂತಿ ನಲಿದಾಗ”, “ದೃತಿ” ಸೇರಿದಂತೆ ಇನ್ನಷ್ಟು ಸಿನಿಮಾಗಳಿವೆ.

ಸಿನ್ಮಾ ಬದುಕು ತೃಪ್ತ
ನಾನು ಈವರೆಗೆ ಸಿನಿಮಾರಂಗದಲ್ಲಿ ಕೆಲಸ ಮಾಡಿದ್ದು ನನಗೆ ನಿಜಕ್ಕೂ ತೃಪ್ತಿ ಎನಿಸಿದೆ. ಇಲ್ಲಿ ನಿರ್ವಹಿಸಿದ ಪ್ರತಿ ಪಾತ್ರವೂ ಪ್ರಮಖ ಎನಿಸಿವೆ. ದೊಡ್ಡದು, ಸಣ್ಣದು ಎಂಬ ಲೆಕ್ಕ ಇಟ್ಟುಕೊಳ್ಳದ ನಾನು, ಯಾವುದೇ ಪಾತ್ರ ಸಿಕ್ಕರೂ ಪ್ರೀತಿಯಿಂದಲೇ ನಿರ್ವಹಿಸಿದ್ದೇನೆ ಎಂಬ ತೃಪ್ತಭಾವವಿದೆ. ಎಲ್ಲದ್ದಕ್ಕೂ ಹೆಚ್ಚಾಗಿ, ನಾನು ಇಂದು ಏನೇ ಮಾಡಿದ್ದರೂ, ಹೇಗೆ ಇದ್ದರೂ, ಅದಕ್ಕೆ ಕಾರಣ, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು. ಆ ರಾಯರ ಅನುಗ್ರಹದಿಂದ ಇಂದು ಸಿನ್ಮಾದಲ್ಲಿ ಒಂದಷ್ಟು ಗುರುತಿಸಿಕೊಂಡಿದ್ದೇನೆ. ಕನ್ನಡದ ಜೊತೆಯಲ್ಲಿ ನಾನು ಮೂರು ತಮಿಳು ಸಿನಿಮಾಗಳಲ್ಲೂ ನಟಿಸಿದ್ದೇನೆ. ಕನ್ನಡದಲ್ಲೇ ಹೆಚ್ಚು ಕೆಲಸ ಮಾಡಿ, ಇಲ್ಲೇ ಗುರುತಿಸಿಕೊಂಡು, ನೆಲೆಕಂಡುಕೊಳ್ಳುವ ಮಹಾದಾಸೆಯಂತು ಇದೆ ಎಂಬುದು ಮಧು ಮಾತು.

ಸಿನಿಮಾ ನಿರ್ದೇಶಿಸೋ ಆಸೆ
ಕಳೆದ ಮೂರು ದಶಕಗಳಿಂದಲೂ ಸಿನಿಮಾರಂಗವನ್ನು ನೋಡಿಕೊಂಡು ಬಂದವನು. ಇಲ್ಲಿ ಸೋಲು-ಗೆಲುವು ಎಲ್ಲವೂ ಇದೆ. ಹಾಗಂತ ನಾನು ಆರಂಭದ ದಿನಗಳಲ್ಲಿ ಅವಕಾಶಕ್ಕಾಗಿ ಅಲೆದಾಡಿ, ಸಿಗದಿದ್ದಾಗ, ಸಿನಿಮಾರಂಗದ ಸಹವಾಸ ಬೇಡ ಎಂದು ಯಾವತ್ತೂ ಅಂದುಕೊಂಡಿಲ್ಲ. ತಾಳ್ಮೆಯಿಂದ ಕಾದಿದ್ದರಿಂದಲೇ ಇಂದು ನಾನು ಸಿನಿಮಾದವರಿಗೆ ಬೇಕಾಗಿದ್ದೇನೆ. ಬಹುತೇಕ ನಿರ್ದೇಶಕ, ನಿರ್ಮಾಪಕರು ಕರೆದು ಅವಕಾಶ ಕೊಡುತ್ತಿದ್ದಾರೆ. ಇದಕ್ಕಿಂತ ಬೇರೇನೂ ಬೇಡ. ಇಷ್ಟು ವರ್ಷದ ಅನುಭವ ಪಡೆದಿದ್ದೇನೆ. ನನಗೂ ನಿರ್ದೇಶಿಸುವ ಆಸೆ ಇದೆ. ಅದಕ್ಕಾಗಿ ಒಂದು ಕಥೆಯನ್ನೂ ರೆಡಿ ಮಾಡಿಕೊಂಡಿದ್ದೇನೆ. ನಾನು ಇತ್ತೀಚೆಗೆ ಬಿಹಾರದ ಅಲಹಾಬಾದ್‌ಗೆ ಚುನಾವಣೆ ಕೆಲಸಕ್ಕೆಂದು ಹೋದಾಗ, ಅಲ್ಲಿನ “ರಂಡಿ ಬಜಾರ್”‌ (ವೇಶ್ಯೆಯರ ನಗರ)ಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಸಿಕ್ಕ ಕೆಲವರ ಜೊತೆ ಆಪ್ತವಾಗಿ ಮಾತನಾಡಿದಾಗ, ಒಂದೊಳ್ಳೆಯ ಲೈನ್‌ ಸಿಕ್ಕವು. ಅದನ್ನೇ ಇಟ್ಟುಕೊಂಡು ಒಂದು ಕಥೆ ಮಾಡಿದ್ದೇನೆ. “18 ದಿನಗಳು” ಎಂಬ ಹೆಸರಲ್ಲಿ ಚಿತ್ರ ಮಾಡುವ ಆಸೆ ಇದೆ. “ನಾನು ಮತ್ತು ಅವಳು” ಎಂಬ ಟ್ಯಾಗ್‌ಲೈನ್‌ ಕೂಡ ಇಟ್ಟಿದ್ದೇನೆ. ಅದೊಂದು ನೈಜ ಘಟನೆಯ ಕಥೆ. ಅಷ್ಟೇ ನೈಜವಾಗಿ ಮಾಡುವ ಆಸೆ ಇದೆ. ಇಷ್ಟೆಲ್ಲಾ ಮಾಡುತ್ತಿರುವುದರ ಹಿಂದೆ ನನ್ನ ಫ್ಯಾಮಿಲಿಯ ಸಹಕಾರವೂ ಇದೆ. ಹೆಂಡತಿ, ಮಗಳ ಸಹಕಾರ ಇರದಿದ್ದರೆ ಇದೆಲ್ಲಾ ಆಗುತ್ತಿರಲಿಲ್ಲ. ಜೊತೆಗೆ ನಿರ್ದೇಶಕರು, ನಿರ್ಮಾಪಕರು, ಗೆಳೆಯರು ಕೊಟ್ಟ ಉತ್ಸಾಹದಿಂದ ನಟನಾಗಿದ್ದೇನೆ. ನಾನಿನ್ನೂ ಸಾಧಿಸಿಲ್ಲ. ಸಾಧಿಸುವ ಉತ್ಸಾಹವಿದೆ.

 

ಅಪ್ಪು ಸ್ಫೂರ್ತಿ
ನಾನು ಡಾ.ರಾಜಕುಮಾರ್‌ ಅವರ ಅಪ್ಪಟ ಅಭಿಮಾನಿ. ಅದರಲ್ಲೂ ಪುನೀತ್‌ ರಾಜಕುಮಾರ್‌ ಅವರ ಪಕ್ಕಾ ಫ್ಯಾನು. ಅಪ್ಪು ಸರ್‌ ನನಗೆ ಸ್ಫೂರ್ತಿ. ಅವರಿಂದಲೇ ಸಿನಿಮಾ ಆಸೆ ಹೆಚ್ಚಾಯ್ತು. ಇದುವರೆಗೆ ನಾನು ಒಬ್ಬ ರೈಲ್ವೆ ಪೊಲೀಸ್‌ ಆಗಿ, ಇಂಡಿಯಾ ಸುತ್ತಿ ಬಂದಿದ್ದೇನೆ. ಈಗ ಪೊಲೀಸ್‌ ವೃತ್ತಿಯಿಂದ ಆಚೆ ಬಂದು ಕಚೇರಿಯೊಳಗಿನ ಕೆಲಸ ಮಾಡುತ್ತಿದ್ದೇನೆ. ಮೊದ ಮೊದಲು ಅವಕಾಶ ಹುಡುಕಿ ಹೋಗುತ್ತಿದ್ದೆ. ಸಣ್ಣ ಪಾತ್ರವಾದರೂ ಸಿಗುತ್ತಿತ್ತು. ಈಗ ಅವಕಾಶ ಹುಡುಕಿ ಬರುತ್ತಿದೆ. ಸಣ್ಣದಿರಲಿ, ದೊಡ್ಡದಿರಲಿ ಕಣ್ಣಿಗೊತ್ತಿ ಮಾಡುತ್ತಿದ್ದೇನೆ ಎನ್ನುವ ಮಧು, ಸಿನಿಮಾಗಿಂತ ಖುಷಿಯ ಜಾಗ ಬೇರೊಂದಿಲ್ಲ ಎನ್ನುತ್ತಾರೆ ಅವರು.

ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆ
ಮಧು ಮಂದಗೆರೆ ಮಂಡ್ಯದವರು. ಗೌಡ್ರು ಸದಾ ಸದ್ದು ಮಾಡುತ್ತಿರಬೇಕು ಸರ್‌ ಎನ್ನುವ ಅವರು, ಸಿನಿಮಾದ ಜೊತೆ ಜೊತೆಗೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅವರ ಮಂದಗೆರೆ ಗ್ರಾಮದಲ್ಲಿ ಸುಮಾರು 40 ಹುಡುಗರ ಬಳಗ ಕಟ್ಟಿಕೊಂಡು, ಅವರಿಗೆ ಒಂದು ಕಚೇರಿ ಮಾಡಿಕೊಟ್ಟು, ನಿತ್ಯ ಆಟವಾಡಲು ಕ್ರೀಡೆ ಸಾಮಾಗ್ರಿ ಕೊಡಿಸಿದ್ದಾರೆ. ಅಷ್ಟೇ ಅಲ್ಲ, ಕಚೇರಿಯಲ್ಲಿ ಅಂಬೇಡ್ಕರ್‌, ಬುದ್ಧ, ಬಸವ ಹೀಗೆ ಮಹನೀಯರ ಕುರಿತಾದ ಪುಸ್ತಕಗಳನ್ನಿಟ್ಟು, ಓದುವಂತೆ ಪ್ರೇರೇಪಿಸುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮಧು ಮಂದಗೆರೆ ಅವರು, ತನ್ನೂರಲ್ಲಿ ಅಂಬೇಡ್ಕರ್‌ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದಾರೆ.

ಇದೇ ಡಿಸೆಂಬರ್‌ 6 ರಂದು ಮಂದಗೆರೆಯಲ್ಲಿ ಪಂಚಾಯ್ತಿ ಸೂಚಿಸಿರುವ ಜಾಗದಲ್ಲಿ ಮಧು ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆ ಮಾಡುತ್ತಿದ್ದಾರೆ. ಈ ಬಗ್ಗೆ ಹೇಳುವ ಮಧು, ನಾನು ಇವತ್ತಿಗೂ ಜಾತಿ ಬಗ್ಗೆ ಮಾತಾಡಲ್ಲ. ಅದರ ಬಗ್ಗೆ ಗೊತ್ತೂ ಇಲ್ಲ. ನಾನು ಬುದ್ಧ, ಬಸವ, ಅಂಬೇಡ್ಕರ್‌ ಸಿದ್ಧಾಂತಗಳನ್ನು ಒಪ್ಪಿಕೊಂಡವನು. ಹಾಗಾಗಿ ಮೊದಲಿಗೆ ಅಂಬೇಡ್ಕರ್‌ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದೇನೆ. ನನ್ನೂರ ಜನರ ಬೆಂಬಲಿವೆ. ಡಿ.6ರಂದು ದೊಡ್ಡ ಕಾರ್ಯಕ್ರಮ ಮೂಲಕ ಅಂದು ಅಂಬೇಡ್ಕರ್‌ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಲಿದೆ. ಇದು ನನ್ನ ಬಾಲ್ಯದ ಕನಸು ಕೂಡ. ಅಂದು ಅನೇಕ ಗಣ್ಯರು ಭಾಗಿಯಾಗಲಿದ್ದಾರೆ ಎನ್ನುತ್ತಾರೆ ಅವರು.

Categories
ಸಿನಿ ಸುದ್ದಿ

ಗಮನ ಸೆಳೆದ ಗಮನಂ… ಎಲ್ಲರೂ ಇತ್ತ ಒಮ್ಮೆ ಗಮನಿಸಿ!

ಶಿವಣ್ಣ ಮೆಚ್ಚಿದ ಟ್ರೇಲರ್‌

ಆಕೆ ಹೇಳುತ್ತಾಳೆ- “ಆ ಮೋಡಗಳನ್ನು ನೋಡು ಎಷ್ಟು ಚೆನ್ನಾಗಿವೆ.

ಅವನು ಹೀಗನ್ನುತ್ತಾನೆ- “ಎಲ್ಲಿಗೆ ಹೋಗುತ್ತವೆʼ
ಅವನ ಪ್ರಶ್ನೆಗೆ ಆಕೆಯ ಉತ್ತರ- “ಎಲ್ಲಿಯವರೆಗೆ ಹೋಗುತ್ತವೋ ಅವುಗಳಿಗೇ ಗೊತ್ತಿಲ್ಲ. ಹಾಗೆ ಹೋಗ್ತಾ ಹೋಗ್ತಾ ಕರಗಿ ಮಳೆಯಾಗುತ್ತೆ. ಒಂದು ಮಳೆಯಾದರೆ, ಇನ್ನೊಂದು ಒಂಟಿಯಾಗ್‌ ಬಿಡುತ್ತೆ…”

 

ಇದು ಕೇಳುವುದಕ್ಕಷ್ಟೇ ಅಲ್ಲ, ನೋಡುವುದಕ್ಕೂ ಅಷ್ಟೇ ಅದ್ಭುತವಾಗಿದೆ. ಇಷ್ಟಕ್ಕೂ ಇಲ್ಲಿ ಹೇಳಹೊರಟಿರುವ ವಿಷಯ “ಗಮನಂ” ಚಿತ್ರದ್ದು. ಹೌದು, ಇದೇ ಮೊದಲ ಬಾರಿಗೆ ನಿರ್ದೇಶಕಿಯಾಗಿರುವ ಸುಜನಾರಾವ್‌ ಅವರ ಚೊಚ್ಚಲ ಚಿತ್ರವಿದು. ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಿರುವ ನಟ ಶಿವರಾಜಕುಮಾರ್‌, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಅಷ್ಟೇ ಅಲ್ಲ, “ಗಮನಂ” ಟ್ರೇಲರ್‌ ನೋಡಿದ ಶಿವರಾಜಕುಮಾರ್‌, ” ಈ ಚಿತ್ರ ಗಮನಸೆಳೆಯಿತು ಎಂದಿದ್ದಾರೆ. ಅಂದಹಾಗೆ, ಇದು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಚಿತ್ರ. ಕನ್ನಡ ಟ್ರೇಲರ್​ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಆಲ್​ದಿ ಬೆಸ್ಟ್ ಹೇಳಿರು ಶಿವರಾಜಕುಮಾರ್‌, ಚಿತ್ರತಂಡಕ್ಕೆ ಗೆಲುವು ಸಿಗಲಿʼ ಎಂದು ಹಾರೈಸಿದ್ದಾರೆ.


ಅಂದಹಾಗೆ, ಕ್ರಿಯಾ ಫಿಲಂ ಕಾರ್ಪ್​ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್​ ಸಾಕಷ್ಟು “ಗಮನ”ಸೆಳೆದಿದೆ. ಈ ಹಿಂದೆ ಫ್ಯಾಷನ್ ಡಿಸೈನಿಂಗ್ ಕಲಿತು, ಎಡಿಟಿಂಗ್ ಕೋರ್ಸ್ ಮುಗಿಸಿ, ದೆಹಲಿಯ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸಿ, ಜತೆಗೆ ಸಾಕಷ್ಟು ಜಾಹೀರಾತುಗಳನ್ನು ನಿರ್ದೇಶಿಸಿದ್ದ ಸುಜನಾ ರಾವ್, ಈಗ “ಗಮನಂ” ಮೂಲಕ ನಿರ್ದೇಶಕಿಯಾಗಿ ಸಿನಿಮಾರಂಗದ ಗಮನಸೆಳೆಯುತ್ತಿದ್ದಾರೆ. ಈ ಚಿತ್ರವನ್ನು ರಮೇಶ್ ಕರುತೂರಿ. ವೆಂಕಿ ಪುಶದಾಪು ಮತ್ತು ಜ್ಞಾನಶೇಖರ್ ವಿ.ಎಸ್. ಸೇರಿ ಕ್ರಿಯಾ ಫಿಲ್ಮ್ಸ್ ಕಾರ್ಪ್ ಮೂಲಕ ನಿರ್ಮಾಣ ಮಾಡಿದ್ದಾರೆ. ಈನ್ನು, ಈ ಚಿತ್ರದ ಟ್ರೇಲರ್‌ ಅನ್ನು, ಕನ್ನಡದಲ್ಲಿ ಶಿವರಾಜಕುಮಾರ್‌ ಬಿಡುಗಡೆ ಮಾಡಿದರೆ, ತೆಲುಗಿನಲ್ಲಿ ಪವನ್​ ಕಲ್ಯಾಣ್ ಬಿಡುಗಡೆ ಮಾಡಿದ್ದಾರೆ. ಅತ್ತ, ತಮಿಳಿನಲ್ಲಿ ಜಯಂರವಿ, ಮಲಯಾಳಂನಲ್ಲಿ ಫಹಾದ್ ಫಾಸಿಲ್​ ಟ್ರೇಲರ್​ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಬಹುತಾರಾಗಣದ ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರಿದ್ದಾರೆ ಎಂಬುದು ವಿಶೇಷ. ಹಿರಿಯ ನಟ ಚಾರು ಹಾಸನ್, ಶ್ರಿಯಾ ಸರಣ್, ಪ್ರಿಯಾಂಕಾ ಜವಾಲ್ಕರ್, ಶಿವ ಕಂದುಕುರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ಸ್ವರೂಪ್, ಇಂದೂ ಆನಂದ್, ಪ್ರಿಯಾ, ಸುಹಾಸ್, ಮಾಸ್ಟರ್ ನೇಹಾಂತ್, ಬಿತಿರಿ ಸತ್ತಿ, ರವಿಪ್ರಕಾಶ್ ಮುಂತಾದ ಕಲಾವಿದರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಗಾಯಕಿಯಾಗಿ ನಿತ್ಯಾ ಮೆನನ್ ಕಾಣಿಸಿಕೊಂಡಿರುವುದು ಮತ್ತೊಂದು ವಿಶೇಷ.

ಗಮನಂ ವಿಶೇಷ
ಬದುಕಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಹಂಬಲಿಕೆ, ಹುಡುಕಾಟ, ಪರದಾಟಗಳು ಇದ್ದೇ ಇರುತ್ತವೆ. ಅವುಗಳ ನಡುವೆ ಒಂಚೂರು ವಿಷಾದ, ನೋವು, ನಲಿವು ಎಲ್ಲವೂ ಇರುತ್ತವೆ. ಕನಸುಗಳನ್ನೆಲ್ಲಾ ಹರವಿಕೊಂಡು, ಮತ್ತೆ ಜೋಡಿಸಲು ಆಗಬಹುದಾ ಎಂಬ ಆಸೆ ಪಡುವವರು, ಅವರೆದುರು ಕೂತು ʻಇದು ಕಷ್ಟ ಸಾಧ್ಯʼ ಎನ್ನುವರಿಗೇನೂ ಕಮ್ಮಿ ಇಲ್ಲ. ಯಾರಿಗೂ ಕೆಟ್ಟದ್ದನ್ನು ಬಯಸದ ಒಂದಷ್ಟು ಜೀವಗಳು, ನಗರದಲ್ಲಿ ಕಾಣಸಿಗುವ ಒಂದಷ್ಟು ವಿಚಾರಗಳು ಚಿತ್ರದ ಹೈಲೈಟ್.‌ ಹಿರಿಯ ಸಂಗೀತ ನಿರ್ದೇಶಕ, ಇಳಯರಾಜಾ ʻಗಮನಂʼಗೆ ಸಂಗೀತ ನೀಡಿದ್ದಾರೆ. ಹಿಂದಿಯ ಮಣಿ ಕರ್ಣಿಕಾ, ತೆಲುಗಿನ ಗೌತಮೀಪುತ್ರ ಶಾತಕರ್ಣಿ, ವೇದಂ ಮೊದಲಾದ ಸಿನಿಮಾಗಳಿಗೆ ಕ್ಯಾಮರಾ ಕೆಲಸ ನಿರ್ವಹಿಸಿದ್ದ ಜ್ಞಾನಶೇಖರ್ ವಿ.ಎಸ್. ಛಾಯಾಗ್ರಹಣವಿದೆ. ಸಾಯಿ ಮಾಧವ ಬುರಾ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ.

error: Content is protected !!