ಕೊರೊನಾ ವರ್ಷಕ್ಕೆ ಸ್ಯಾಂಡಲ್‌ವುಡ್‌ ಗುಡ್‌ ಬೈ – ಈ ವರ್ಷ ರಿಲೀಸ್‌ ಆದ ಸಿನಿಮಾಗಳೆಷ್ಟು ಗೊತ್ತಾ?

ರಿಲೀಸ್‌ ಆಗಿದ್ದು 76 ಪ್ಲಸ್-‌ ಒಟಿಟಿಯಲ್ಲೂ 3 ಚಿತ್ರ ಬಿಡುಗಡೆ

ಅಂತೂ ಇಂತೂ  2020 ಮುಗಿಯೋ ಹಂತ ತಲುಪಿದೆ. ಈ ವರ್ಷ ಎಲ್ಲಾ ರಂಗಕ್ಕೂ ಬಿಸಿ ತಟ್ಟಿದೆ. ಅದರಲ್ಲೂ ಸಿನಿಮಾರಂಗದ ವಿಷಯಕ್ಕೆ ಬಂದರೆ, ಈ ವರ್ಷದ ಮನರಂಜನೆ ಪೂರ್ಣ ಪ್ರಮಾಣದಲ್ಲಿ ಕುಸಿದಿದ್ದು ನಿಜ. ಈ ವರ್ಷದ ಜನವರಿಯಿಂದ ಮಾರ್ಚ್‌ ಎರಡನೇ ವಾರದವರೆಗೆ ಮಾತ್ರ ಚಿತ್ರರಂಗ ವೇಗ ಕಂಡುಕೊಂಡಿತ್ತು. ಆಮೇಲೆ ಕೊರೊನಾ ವಕ್ಕರಿಸಿದ ಬಳಿಕ ಮನರಂಜನೆ ಅನ್ನೋದು ಮರೀಚಿಕೆಯಾಗಿದ್ದು ಸುಳ್ಳಲ್ಲ. ಹಾಗೆ ನೋಡಿದರೆ ಈ ವರ್ಷದ ಎಂಟು ತಿಂಗಳ ಕಾಲ ಮನರಂಜನೆಗೆ ಬ್ರೇಕ್‌ ಬಿದ್ದಿದ್ದರೂ, ಕನ್ನಡ ಚಿತ್ರರಂಗದಲ್ಲಿ ಸುಮಾರು 76 ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಕಂಡಿವೆ ಎಂಬುದು ಅಚ್ಚರಿ.

ಹೌದು, ಪ್ರತಿ ವರ್ಷ ಬಿಡುಗಡೆಯಲ್ಲಿ ಸುಮಾರು 120ರ ಗಡಿ ದಾಟುತ್ತಿದ್ದ ಸಿನಿಮಾಗಳು, ಈ ವರ್ಷ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದಂತೂ ಹೌದು. ಅಕ್ಟೋಬರ್‌ 15ರಿಂದ ಚಿತ್ರಮಂದಿರಗಳಿಗೆ ಅವಕಾಶ ದೊರೆತ ನಂತರ ಒಂದಷ್ಟು ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದವು. ಆದರೆ, ಪ್ರತಿ ವರ್ಷದ ದಾಖಲೆ ಈ ವರ್ಷ ಆಗಿಲ್ಲ ಅನ್ನುವುದು ಅಷ್ಟೇ ಸತ್ಯ. ಅದೆಷ್ಟೋ ವರ್ಷಗಳ ಬಳಿಕ ಅತೀ ಕಡಿಮೆ ಸಂಖ್ಯೆಯಲ್ಲಿ ಬಿಡುಗಡೆ ಕಂಡ ವರ್ಷ ಇದು ಎಂಬುದನ್ನು ಗಮನಿಸಲೇಬೇಕು. ಒಂದು ಲೆಕ್ಕದ ಪ್ರಕಾರ ಈ ವರ್ಷ ಕನ್ನಡ, ತುಳು, ಕೊಂಕಣಿ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಯ ಸಿನಿಮಾಗಳು ಸೇರಿ ಸುಮಾರು ೭೬ ಚಿತ್ರಗಳು ಬಿಡುಗಡೆ ಕಂಡಿವೆ.

ಈ 2020 ವರ್ಷವನ್ನು ಸ್ಯಾಂಡಲ್‌ವುಡ್‌ ಬರಮಾಡಿಕೊಂಡಿದ್ದು, ಮಯೂರ್‌ ಪಟೇಲ್‌ ಅಭಿನಯದ “ರಾಜೀವ ಐಎಎಸ್‌” ಚಿತ್ರ. ಹಾಗೆಯೇ ಅಂತ್ಯಗೊಳಿಸಿದ್ದು, ಇಂದ್ರಜಿತ್‌ ಲಂಕೇಶ್‌ ಅವರ “ಶಕೀಲಾʼ ಸಿನಿಮಾ. ೨೦೨೦ರ ಜನವರಿಯಲ್ಲಿ ಮೂರು ಕನ್ನಡ ಸಿನಿಮಾಗಳು ಪ್ರೇಕ್ಷಕರ ಎದುರು ಬಂದಿದ್ದವು. “ರಾಜೀವ ಐಎಎಸ್”, ಹೊಸಬರ “ವೇಷಧಾರಿ”, “ಗುಡಮನ ಅವಾಂತರ” ಚಿತ್ರಗಳು ಬಿಡುಗಡೆಯಾಗಿದ್ದವು.  ತದನಂತರದಲ್ಲಿ ಬಿಡುಗಡೆಯ ಪರ್ವ ಶುರುವಾಯಿತು.

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ “ಇಂಡಿಯಾ ವರ್ಸಸ್‌ ಇಂಗ್ಲೆಂಡ್”, ಚಿರಂಜೀವಿ ಸರ್ಜಾ ಅಭಿನಯದ “ಖಾಕಿ”, “ಕಾಣದಂತೆ ಮಾಯವಾದನು”, ವಿಜಯರಾಘವೇಂದ್ರ ಅಭಿನಯದ “ಮಾಲ್ಗುಡಿ ಡೇಸ್”, ಮದರಂಗಿ ಕೃಷ್ಣ ಅವರ “ಲವ್ ಮಾಕ್ಟಲ್”, ಪ್ರಜ್ವಲ್‌ ದೇವರಾಜ್‌ ಅವರ “ಜಂಟಲ್‌ ಮನ್‌”, “ದಿಯಾ”, “ಮಾಯಾ ಬಜಾರ್”, “ಪಾಪ್‌ಕಾರ್ನ್ ಮಂಕಿ ಟೈಗರ್”, “ಶಿವಾಜಿ ಸುರತ್ಕಲ್”, “ಫ್ರೆಂಚ್ ಬಿರಿಯಾನಿ”, “ಆಕ್ಟ್ 1978”, “ಅರಿಷಡ್ವರ್ಗ” ಸೇರಿದಂತೆ ಒಂದಷ್ಟು ಸಿನಿಮಾಗಳು ಬಂದವು. ಈ ಪೈಕಿ ಕೊರೊನಾ ಸಮಸ್ಯೆಯಿಂದಾಗಿ ಒಟಿಟಿಯಲ್ಲಿ ಕನ್ನಡದ ಮೂರು ಸಿನಿಮಾಗಳು ಬಿಡುಗಡೆಯಾದದ್ದು ವಿಶೇಷ. ಪುನೀತ್‌ ರಾಜಕುಮಾರ್‌ ಬ್ಯಾನರ್‌ನಲ್ಲಿ ತಯಾರಾದ “ಲಾ”. “ಫ್ರೆಂಚ್ ಬಿರಿಯಾನಿ” ಹಾಗು “ಭೀಮಸೇನ ನಳ ಮಹಾರಾಜ” ಚಿತ್ರಗಳು ಒಟಿಟಿಯಲ್ಲಿ ರಿಲೀಸ್‌ ಆಗಿದ್ದವು.

 

Related Posts

error: Content is protected !!