ವಿಹಾನ ಗಾಯನ – ಎಂಜಿನಿಯರ್‌ ಹುಡುಗನ ಗಾನ ಬಜಾನ

ಮಂಡ್ಯ ಹುಡುಗನ ಮನಸ್ಸೆಲ್ಲಾ ಹಾಡು-ಪಾಡು

ಈ ಸಿನಿಮಾ ಸೆಳೆತವೇ ಹಾಗೆ. ಒಮ್ಮೆ ಇತ್ತ ಒಲವು ಮೂಡಿದರೆ ಮುಗೀತು. ಇಲ್ಲೇ ಗಟ್ಟಿನೆಲೆ ಕಾಣಬೇಕೆಂಬ ಹಂಬಲ ಸಹಜ. ಚಿತ್ರರಂಗಕ್ಕೆ ಈಗಾಗಲೇ ಎಲ್ಲಾ ಕ್ಷೇತ್ರದಿಂದಲೂ ಎಂಟ್ರಿಯಾಗಿದ್ದಾರೆ. ಡಾಕ್ಟರ್‌, ಪೊಲೀಸ್‌, ಎಂಜಿನಿಯರ್‌ ಹೀಗೆ ಹಲವು ಕ್ಷೇತ್ರಗಳಿಂದ ಬಂದವರಿದ್ದಾರೆ. ಆ ಪೈಕಿ ಕೆಲವರು ಸಾಧಿಸಿದ್ದಾರೆ. ಇನ್ನೂ ಕೆಲವರು ಸಾಧನೆಯ ಹಾದಿಯಲ್ಲಿದ್ದಾರೆ. ಅದೇ ಸಾಧಿಸಬೇಕೆಂಬ ಛಲದಲ್ಲಿ ಇಲ್ಲೊಬ್ಬ ಯುವ ಗಾಯಕ ಚಿತ್ರರಂಗವನ್ನು ಸ್ಪರ್ಶಿಸಿದ್ದಾನೆ. ಹೆಸರು ವಿಹಾನ್‌ ಆರ್ಯ. ಹಾಗಂತ ಈ ವಿಹಾನ್‌ ಆರ್ಯ ಹೀರೋ ಆಗಬೇಕು, ನಿರ್ದೇಶಕ ಆಗಬೇಕು ಅಂತ ಬಂದಿಲ್ಲ. ತಾನೊಬ್ಬ ಒಳ್ಳೆಯ ಗಾಯಕನಾಗಿ ಗುರುತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದಾರೆ.

 ನಾನು ನೀನು ಇನ್ನು ಬೇರೆ ಏನು, ನಿನ ಎದೆಯ ಗೂಡಲ್ಲಿ ನನ ಜೀವಾ ಇದೆ.. ನೂರು ನೂರು ನನ ಆಸೆ ನೂರು, ನನ ಜೀವನ ಮುಂದಕೆ ಹೋಗದು ನೀನಿರದೆ,
ಮನಸ್ಸೆಲ್ಲಾ ನೀನೇ… ಮನಸ್ಸೆಲ್ಲಾ ನೀನೆ…” ಎಂಬ ಹಾಡಿಗೆ ಸಿಕ್ಕಾಪಟ್ಟೆ ಮೆಚ್ಚುಗೆಯೂ ಸಿಕ್ಕಿದೆ. ಲಕ್ಷಗಟ್ಟಲೆ ವೀಕ್ಷಣೆಯೂ ಪಡೆದಿದೆ

 

 

ಅಂದಹಾಗೆ, ವಿಹಾನ್‌ ಆರ್ಯ ಮೂಲತಃ ಎಂಜಿನಿಯರ್‌ ಅನ್ನೋದು ವಿಶೇಷ. ಅರೇ, ಎಂಜಿನಿಯರ್‌ ಗಾಯಕರಾಗಿದ್ದಾರಾ? ಈ ಪ್ರಶ್ನೆ ಎದುರಾಗೋದು ಸಹಜವೇ. ಆದರೆ, ವಿಹಾನ್‌ ಆರ್ಯ ಈಗಾಗಲೇ ಸಾಕಷ್ಟು ಹಾಡುಗಳನ್ನು ಹಾಡುವ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ ಅನ್ನೋದ್ದನ್ನೂ ಗಮನಿಸಬೇಕು. ತಮ್ಮ ಈ ಗಾಯನದ ಪಯಣ ಕುರಿತು ವಿಹಾನ್‌ ಆರ್ಯ, “ಸಿನಿ ಲಹರಿ” ಜೊತೆ ಮಾತನಾಡಿದ್ದಿಷ್ಟು.  “ನಾನು ಮಂಡ್ಯ ಜಿಲ್ಲೆಯ ಮಳವಳ್ಳಿ ಸಮೀಪವಿರುವ ಹಾಡ್ಲಿ ಎಂಬ ಊರಿನವನು. ನಾನೊಬ್ಬ ಮೆಕಾನಿಕಲ್‌ ಎಂಜಿನಿಯರ್.‌ ಬಿಇ ಓದು ಮುಗಿಸಿದ ಕೂಡಲೇ ನನಗೆ ಕೆಲಸಕ್ಕೆ ಹೋಗುವ ಆಸಕ್ತಿ ಇರಲಿಲ್ಲ. ಆದರೆ, ಹಾಡಬೇಕೆಂಬ ಆಸಕ್ತಿ ಹೆಚ್ಚಾಗಿತ್ತು. ಗಾಯನದ ಮೇಲೆ ಎಲ್ಲಿಲ್ಲದ ಪ್ರೀತಿ ಇತ್ತು. ಆ ಕಾರಣಕ್ಕೆ ನಾನು ನನ್ನ ಎಜುಕೇಷನ್‌ ಪೂರೈಸಿ, ಹಂಸಲೇಖರ ಬಳಿ ದೇಸಿ ಶಾಲೆಯಲ್ಲಿ ಸಂಗೀತ ಕಲಿತೆ. ಅವರ ಶಿಷ್ಯ ಎನಿಸಿಕೊಂಡೆ. ಈಗ ಶಿವಾನಂದ್‌ ಸಾಲಿಮಠ್‌ ಅವರ ಬಳಿ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದೇನೆ.

ಕಾಲೇಜು ದಿನಗಳಲ್ಲೇ ನನಗೆ ಹಾಡುವ ಹುಚ್ಚಿತ್ತು. ಆಗ ಅಭ್ಯಾಸ ಮಾಡುತ್ತಿದ್ದೆ. ಹಾಗೆ ಹಾಡುತ್ತಲೇ ವಾಯ್ಸ್‌ ಆಫ್‌ ಬೆಂಗಳೂರು ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗಮನಸೆಳೆದೆ. ಅಲ್ಲಿಂದ ಹಾಡುವ ಅವಕಾಶ ಸಿಕ್ತು. ನಾನು “ವಂದನಾʼ ಚಿತ್ರಕ್ಕೆ ಹಾಡುವ ಮೂಲಕ ಗಾಯಕನಾದೆ. ಇಂಡಸ್ಟ್ರಿಗೆ ಬಂದು ಆರು ವರ್ಷಗಳಾಗಿವೆ. ಈವರೆಗೆ ಸುಮಾರು ೩೫ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದೇನೆ. ಸುಮಾರು ೩೦೦ ಚಿತ್ರಗಳಿಗೆ ಕೋರಸ್‌ ಆಗಿಯೂ ಹಾಡಿದ್ದೇನೆ. ನಾಯಕಿ, ಸರ್ವ ಮಂಗಳ ಮಾಂಗಲ್ಯ, ಮನಸ್ಸೆಲ್ಲಾ ನೀನೇ ಧಾರಾವಾಹಿಗಳಿಗೂ ಹಾಡಿದ್ದೇನೆ. ಸದ್ಯ “ಮನಸ್ಸೆಲ್ಲಾ ನೀನೇ” ಧಾರಾವಾಹಿಯ ಶೀರ್ಷಿಕೆ ಗೀತೆ ” ನಾನು ನೀನು ಇನ್ನು ಬೇರೆ ಏನು, ನಿನ ಎದೆಯ ಗೂಡಲ್ಲಿ ನನ ಜೀವಾ ಇದೆ.. ನೂರು ನೂರು ನನ ಆಸೆ ನೂರು, ನನ ಜೀವನ ಮುಂದಕೆ ಹೋಗದು ನೀನಿರದೆ,
ಮನಸ್ಸೆಲ್ಲಾ ನೀನೇ… ಮನಸ್ಸೆಲ್ಲಾ ನೀನೆ…” ಎಂಬ ಹಾಡಿಗೆ ಸಿಕ್ಕಾಪಟ್ಟೆ ಮೆಚ್ಚುಗೆಯೂ ಸಿಕ್ಕಿದೆ. ಲಕ್ಷಗಟ್ಟಲೆ ವೀಕ್ಷಣೆಯೂ ಪಡೆದಿದೆ” ಎಂಬುದು ಅವರ ಮಾತು.


ಇನ್ನು ಕನ್ನಡ ಚಿತ್ರರಂಗದ ಬಹುತೇಕ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. “ಕೃಷ್ಣ ಟಾಕೀಸ್‌”, “ಪ್ರೇಮಂ ಪೂಜ್ಯಂ”, “ಡಿಯರ್‌ ಸತ್ಯ” ಸಿನಿಮಾಗಳಿಗೆ ಹಾಡಿದ್ದುಂಟು. ನಾನು ಹಾಡಿರುವ ಸುಮಾರು ೨೦ಕ್ಕೂ ಹೆಚ್ಚು ಚಿತ್ರಗಳು ರಿಲೀಸ್‌ ಆಗಬೇಕಿದೆ. ಗಾಯನ ಕ್ಷೇತ್ರದಲ್ಲಿ ಸ್ಪರ್ಧೆ ಇದೆ. ನಾನು ಮೆಲೋಡಿ ಹೆಚ್ಚು ಹಾಡಿದ್ದೇನೆ. ನನ್ನ ವಾಯ್ಸ್‌ಗೆ ಮೆಲೋಡಿ ಹಾಡುಗಳು ಬರುತ್ತಿವೆ. ಮೊದ ಮೊದಲು ಮನೆಯಲ್ಲಿ ಅಷ್ಟೊಂದು ಉತ್ಸಾಹ ಇರಲಿಲ್ಲ. ಈಗ ಗುರುತಿಸಿಕೊಳ್ಳುತ್ತಿರುವುದರಿಂದ ಎಲ್ಲವೂ ಸುಗಮವಾಗುತ್ತಿದೆ. ನನಗೆ‌ ಸಂಗೀತ ನಿರ್ದೇಶಕ ವಿ. ಸಂಭ್ರಮ್‌ ಶ್ರೀಧರ್ ಅವರು ಗುರುವಿದ್ದಂತೆ. ಅವರ ಮಾರ್ಗದರ್ಶನದಲ್ಲೇ ಈಗ ಕೆಲಸ ಮಾಡುತ್ತಿದ್ದೇನೆ. ನನಗೆ ಸಿನಿಮಾದಲ್ಲೇ ಗುರುತಿಸಿಕೊಳ್ಳುವ ಆಸೆ ಇದೆ. ಮುಂದಿನ ದಿನಗಳಲ್ಲಿ ದೊಡ್ಡ ಸ್ಟಾರ್‌ಗಳಿಗೆ ಹಾಡಬೇಕು ಎಂಬುದು ನನ್ನ ಮಹಾದಾಸೆ” ಎನ್ನುತ್ತಾರೆ ವಿಹಾನ್‌ ಆರ್ಯ.

Related Posts

error: Content is protected !!